ಹರಿಪ್ರಸಾದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಖಂಡನಾರ್ಹ

Update: 2024-11-02 06:13 GMT

ಮಾನ್ಯರೇ,

ಸಾಮಾಜಿಕ ನ್ಯಾಯದ ಪರವಾದ ಗಟ್ಟಿ ಧ್ವನಿ, ಹಿರಿಯ ರಾಜಕಾರಣಿ, ಹಿಂದುಳಿದ ಸಮುದಾಯಗಳ ಪ್ರಬಲ ನಾಯಕ ಬಿ. ಕೆ. ಹರಿಪ್ರಸಾದ್ ಅವರನ್ನು ಗುರಿಯಾಗಿಸಿ ಅಖಿಲ ಭಾರತ ಬ್ರಾಹ್ಮಣ ಮಹಾ ಸಭಾವು ಗಾಯತ್ರಿ ಮಂತ್ರದ ಸಮಾರೋಪ ಕಾರ್ಯಕ್ರಮದಲ್ಲಿ ಮಾನಹಾನಿಕರ, ದ್ವೇಷಪೂರಿತ ಹೇಳಿಕೆ ನೀಡಿರುವುದು, ಬಿ.ಕೆ. ಹರಿಪ್ರಸಾದ್ ರ ವಿರುದ್ಧ ಅಕ್ಷೇಪಾರ್ಹ ಪದಗಳನ್ನು ಬಳಸಿ ಖಂಡನಾ ನಿರ್ಣಯ ಅಂಗೀಕರಿಸಿ ಪೇಜಾವರ ಮಠದ ಸ್ವಾಮಿಗಳಲ್ಲಿ ಕ್ಷಮಾಪಣೆಗೆ ಆಗ್ರಹಿಸಿರುವುದು, ಅವರನ್ನು ಇಡೀ ಹಿಂದೂ ಸಮಾಜದ ವಿರೋಧಿ ಎಂಬಂತೆ ಚಿತ್ರಿಸುತ್ತಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದಲ್ಲದೆ, ಬಿಜೆಪಿ ಶಾಸಕ ಹರೀಶ್ ಪೂಂಜಾ ಅಸಭ್ಯ ಭಾಷೆಯನ್ನು ಬಳಸಿ ಹೇಳಿಕೆ ನೀಡಿದ್ದಾರೆ. ಹರಿಪ್ರಸಾದ್ ಅವರ ಡಿಎನ್‌ಎ ಕುರಿತು ನೀಡಿದ ಹೇಳಿಕೆ ಹುಟ್ಟಿನ ಮೂಲವನ್ನು ಪ್ರಶ್ನಿಸುವ ತೀರಾ ಅಸಭ್ಯ ಧಾಟಿಯಿಂದ ಕೂಡಿದೆ. ಹರೀಶ್ ಪೂಂಜಾ ತನ್ನ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.

ಬಿ.ಕೆ. ಹರಿಪ್ರಸಾದ್‌ರವರು ಜಾತಿ ಗಣತಿ ಕುರಿತು ಪೇಜಾವರ ಶ್ರೀಗಳ ಹೇಳಿಕೆಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅಂತಹ ಯಾವ ತಪ್ಪೂ ಇರಲಿಲ್ಲ. ಪೇಜಾವರ ಶ್ರೀಗಳಿಗೆ ದಲಿತ, ಹಿಂದುಳಿದ ಜಾತಿಗಳ ಕುರಿತಾಗಿ ಇರುವ ಪೂರ್ವಾಗ್ರಹ, ಅಸಹನೆ ಅವರ ಹೇಳಿಕೆಯಲ್ಲಿ ಸ್ಪಷ್ಟವಾಗಿ ಧ್ವನಿಸಿತ್ತು. ಶತಮಾನಗಳಿಂದ ಅಸಮಾನತೆಗೆ ಗುರಿಯಾದ ಸಮುದಾಯಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕನಿಷ್ಠ ನ್ಯಾಯ ದೊರಕಲು ಜಾತಿ ಗಣತಿಯ ಅಗತ್ಯ ಇದೆ. ಹಿಂದೂಗಳು ಎಲ್ಲಾ ಒಂದು, ದಲಿತರ ಕೇರಿಗೆ ಹೋಗಿ ಹಿಂದು ಧರ್ಮದ ಪರ ಪ್ರಚಾರ ಮಾಡುತ್ತೇನೆ ಎಂದು ತನ್ನ ಬೆನನ್ನು ತಾನೆ ತಟ್ಟಿಕೊಳ್ಳುವ ಪೇಜಾವರ ಶ್ರೀಗಳು ಹಿಂದೂ ಧರ್ಮದಲ್ಲಿರುವ ಕೆಳ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದ ಜಾತಿ ಗಣತಿಯನ್ನು ವಿರೋಧಿಸುವುದು ಯಾಕೆ? ಪೇಜಾವರ ಶ್ರೀಗಳ ಈ ಅಸಹನೆ, ವಿರೋಧವನ್ನು ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇರಿಸಿರುವ ಕಾಂಗ್ರೆಸ್ ಪಕ್ಷದ ಜವಾಬ್ದಾರಿಯುತ ನಾಯಕರು ಆಗಿರುವ ಬಿ ಕೆ ಹರಿಪ್ರಸಾದ್ ಖಂಡಿಸಿ ಮಾತಾಡಿದ್ದರಲ್ಲಿ ತಪ್ಪೇನಿದೆ? ಪೇಜಾವರ ಶ್ರೀ ಗಳಿಗೆ ವಿರೋಧಿಸುವ ಸ್ವಾತಂತ್ರ್ಯ ಇರುವಂತೆ, ಅವರ ವಿರೋಧವನ್ನು ಖಂಡಿಸುವ ಸ್ವಾತಂತ್ರ್ಯ, ಹಕ್ಕು ಹಿಂದುಳಿದ ಸಮುದಾಯಗಳ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೂ ಇದೆ. ಇದೇ ಖಂಡನಾ ಸಭೆಯಲ್ಲಿ ಪೇಜಾವರ ಸ್ವಾಮಿಗಳು ಸ್ವತಹ ಭಾಗವಹಿಸಿ ಬಿ.ಕೆ. ಹರಿಪ್ರಸಾದ್ ಅವರ ಘನತೆ ಕುಗ್ಗಿಸುವ ರೀತಿಯ ಮಾತುಗಳನ್ನು ಸುಳ್ಳುಗಳನ್ನು ಪೋಣಿಸಿ ಹೇಳಿದ್ದಾರೆ. ಇದು ಕಾವಿ ತೊಟ್ಟವರಿಗೆ ಹೇಳಿಸಿದ ನಡೆಯಲ್ಲ. ರಾಜಕಾರಣಿಗಳಿಗೆ ಇರುವಂತೆ ವಾಕ್ ಸ್ವಾತಂತ್ರ್ಯ ತನಗೂ ಇದೆ ಎಂದು ಸ್ವಾಮಿಗಳು ಹೇಳಿದ್ದಾರೆ. ವಾಕ್ ಸ್ವಾತಂತ್ರ್ಯದ ಕುರಿತು ಹರಿಪ್ರಸಾರದರನ್ನು ಪ್ರಶ್ನಿಸುವ ಸ್ವಾಮಿಗಳು ತನ್ನ ಮಠದ ಒಳಗಡೆ ವಾಕ್ ಸ್ವಾತಂತ್ರ್ಯಕ್ಕೆ, ಪ್ರಶ್ನಿಸುವ ಹಕ್ಕಿಗೆ ಎಷ್ಟು ಅವಕಾಶ ನೀಡಿದ್ದಾರೆ ಎಂದು ಮೊದಲು ಸ್ಪಷ್ಟ ಪಡಿಸಲಿ.

ಉಡುಪಿ ಮಠದಲ್ಲಿ ಬ್ರಾಹ್ಮಣೇತರ ಜಾತಿಗಳಿಗೆ ಸಹಪಂಕ್ತಿ ಭೋಜನ ಇಲ್ಲದಿರುವುದು ಇಡೀ ನಾಡಿಗೆ ತಿಳಿದಿರುವ ಸತ್ಯ. ಶೂದ್ರ ಜಾತಿಗಳನ್ನಂತೂ ಹತ್ತಿರಕ್ಕೂ ಸುಳಿಯಲು ಬಿಡದೆ ಅಡಿಗಳ ಅಂತರದಲ್ಲಿ ನಿಲ್ಲಿಸಲಾಗುತ್ತದೆ. ಅವರಿಗೆ ಪ್ರಸಾದ ರೂಪದ ಹಣ್ಣು ಹಂಪಲುಗಳನ್ನು ಕೈ ಸೋಕದಂತೆ ಇದೇ ಸ್ವಾಮಿಗಳು ಎಸೆದು ನೀಡುತ್ತಾರೆ. ಹಿಂದುಳಿದ ಜಾತಿಗಳು ಬಿಡಿ, ಉಡುಪಿ ಮಠದಲ್ಲಿ ಮಾಧ್ವೇತರ ಬ್ರಾಹ್ಮಣ ಪಂಗಡಗಳಿಗೆ ಸಹಪಂಕ್ತಿ ಭೋಜನ ಯಾಕಿಲ್ಲ? ಸ್ವತಹ ಪೇಜಾವರ ಶ್ರೀಗಳು ಯಾವತ್ತಾದರು ಮಾಧ್ವರಲ್ಲದ ಬ್ರಾಹ್ಮಣರ ಜೊತೆ ಮಠದಲ್ಲಿ ಸಹ ಭೋಜನ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಲಿ. ಹಿಂದುಳಿದ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿರುವ ಜಾತಿ ಗಣತಿಯನ್ನು ವಿರೋಧಿಸಲು, ಜಾತ್ಯತೀತತೆ, ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳನ್ನು ಉಲ್ಲೇಖಿಸುವ ಪೇಜಾವರ ಶ್ರೀಗಳಿಗೆ ನೆಲದ ಕಾನೂನು, ಸಮಾನತೆ, ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಕನಿಷ್ಠ ಗೌರವಗಳಾದರೂ ಇರುವುದು ಅನುಮಾನ. ತನ್ನ ಸುತ್ತಲ ಸಮಾಜದಲ್ಲಿ ನಡೆಯುವ ಜಾತಿ, ಧರ್ಮಾಧಾರಿತ ಹಿಂಸೆಗೆ ಕುರುಡಾಗಿರುವ, ಇಂತಹ ಅಸಮಾನತೆಯ ಪ್ರಾಯೋಜಕ ಶಕ್ತಿಗಳ ಪೋಷಕರಾಗಿರುವ ಇವರಿಗೆ ವಾಕ್ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಕುರಿತು ಉಲ್ಲೇಖಿಸಲು ಯಾವ ನೈತಿಕತೆಯೂ ಇಲ್ಲ.

ಬಿ.ಕೆ. ಹರಿಪ್ರಸಾದ್ ಅವರ ಸ್ಪಷ್ಟ ಸೈದ್ದಾಂತಿಕ ನಿಲುವು, ಪ್ರಖರ ಮಾತುಗಳು, ಸಮಾಜದಲ್ಲಿ ಅವರು ಉಂಟು ಮಾಡುತ್ತಿರುವ ರಾಜಕೀ

ಯ ಜಾಗೃತಿಯಿಂದ ವಿಚಲಿತಗೊಂಡಿರುವ ಸಂಘ ಪರಿವಾರ ಬಿ.ಕೆ. ಹರಿಪ್ರಸಾದ್ ಹೇಳಿಕೆಯನ್ನು ತಿರುಚಿ ಹಿಂದೂ ವಿರೋಧಿ ಎಂದು ಹಣೆಪಟ್ಟಿ ಕಟ್ಟಲು ಯತ್ನಿಸುತ್ತಿದೆ. ಇದು ತಮ್ಮ ಶ್ರೇಣೀಕೃತ ವ್ಯವಸ್ಥೆಗೆ ಸಣ್ಣ ವಿರೋಧ ಧ್ವನಿಯೂ ಏಳದಂತೆ ಹತ್ತಿಕ್ಕುವ ಯತ್ನವಲ್ಲದೆ ಮತ್ತೇನಲ್ಲ. ಅದಕ್ಕಾಗಿ ಹರೀಶ್ ಪೂಂಜಾರಂತಹ ಹೊಡಿ ಬಡಿ ಸಂಸ್ಕೃತಿಯ, ಹಸಿ ಕೋಮುವಾದಿ ರಾಜಕಾರಣಿಯನ್ನು ಹಾಗೂ ಕರ್ಮಠ ಜಾತಿವಾದಿಗಳನ್ನು ಬಿ.ಕೆ. ಹರಿಪ್ರಸಾದ್ ವಿರುದ್ಧ ಚೂ ಬಿಟ್ಟಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ನಾವೆಲ್ಲಾ ಬಿ.ಕೆ. ಹರಿಪ್ರಸಾದ್ ಜೊತೆಗಿದ್ದೇವೆ. ಹಿಂದುಳಿದ, ದಲಿತ, ಸಮಾನತೆ ಪರವಾದ ಚಳವಳಿಗಳೂ ಹರಿಪ್ರಸಾದ್ ಜೊತೆ ನಿಲ್ಲಲಿದೆ. ಹರಿಪ್ರಸಾದ್ ವಿರುದ್ಧದ ಅಪಪ್ರಚಾರದ ಅಭಿಯಾನ ನಿಲ್ಲಿಸದಿದ್ದಲ್ಲಿ ಅದಕ್ಕೆ ತಕ್ಕ ಪ್ರತ್ಯುತ್ತರ ನಾವು ಸಂಘಟಿತವಾಗಿ ನೀಡಲಿದ್ದೇವೆ. ಹರೀಶ್ ಪೂಂಜಾ ಹಾಗೂ ಬ್ರಾಹ್ಮಣ ಮಹಾ ಸಭಾ ಹಿಂದುಳಿದ ಸಮುದಾಯಗಳ ಹಿರಿಯ ನಾಯಕನ ವಿರುದ್ಧದ ತನ್ನ ಕೊಳಕು ಮಾತುಗಳನ್ನು ಹಿಂಪಡೆಯಬೇಕು ಆಗ್ರಹಿಸುತ್ತಿದ್ದೇವೆ. ಶ್ರೀಗಳು ಹಾಗೂ ಅವರ ಬೆಂಬಲಿಗರ ನಡೆ ಹೀಗೆಯೆ ಮುಂದುವರಿದರೆ ಪೇಜಾವರ ಶ್ರೀಗಳು ಹಾಗೂ ಪೇಜಾವರ ಮಠದ ಸಂವಿಧಾನ ವಿರೋಧಿ, ಜಾತಿ ತಾರತಮ್ಯ, ಕೆಳ ಜಾತಿಗಳ ಕುರಿತಾದ ಅಸಹನೆಯ ಎದುರಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಲಿದ್ದೇವೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ.

ಮಂಗಳೂರಿನಲ್ಲಿ ನಡೆದ ಗಾಯತ್ರಿ ಮಂತ್ರದ ಸಮಾರೋಪ ಕಾರ್ಯಕ್ರಮ ಎಂಬ ತೀರಾ ಧಾರ್ಮಿಕ ವಿಧಿ ವಿಧಾನಗಳ ವೇದಿಕೆಯಲ್ಲಿ ಅಖಿಲ ಭಾರತ ಬ್ರಾಹ್ಮಣ ಪರಿಷತ್ತಿನ ನಾಯಕತ್ವ ಬಿ.ಕೆ.ಹರಿ ಪ್ರಸಾದ್‌ರವರ ಮೇಲೆ ದಾಳಿ ನಡೆಸಿದ್ದು ಮಾತ್ರ ಅಲ್ಲದೇ, ಶತಮಾನಗಳ ಕಾಲ ಅಬಾಧಿತವಾಗಿ ದಲಿತರನ್ನು, ಆದಿವಾಸಿಗಳನ್ನು ಮತ್ತು ಶೂದ್ರ ಸಮುದಾಯದ ಮೇಲೆ ನಡೆಸಿದ ದಬ್ಬಾಳಿಕೆ ,

ಶೋಷಣೆ ಮತ್ತು ಕ್ರೌರ್ಯವನ್ನು ನಿರ್ಲಜ್ಜವಾಗಿ ಸಮರ್ಥಿಸಿ ಅದನ್ನು ಮತ್ತೆ ಮುಂದುವರಿಸುವುದನ್ನು ಬಹಿರಂಗವಾಗಿ ಘೋಷಿಸಿದ ಕಾರ್ಯ ಕ್ರಮವಾಗಿದೆ. ಹಿಂದೂ ಐಕ್ಯತೆಯ ಕುರಿತು ಬೊಗಳೆ ಬಿಡುವ ಸನಾತನ ಸಿದ್ಧಾಂತಿಗಳು ಗಾಯತ್ರಿ ಮಂತ್ರ ಕಾರ್ಯಕ್ರಮದಲ್ಲಿ ಹಿಂದು ಸಮುದಾಯದ ಇತರ ಜಾತಿಗಳನ್ನು ಬಿಡಿ, ಬ್ರಾಹ್ಮಣರಲ್ಲಿನ ಒಳಪಂಗಡಗಳ ಐಕ್ಯತೆ ಸಾಧಿಸಲೂ ಸೋತಿದ್ದಾರೆ. ತಮ್ಮೊಳಗಿನ

ಭಿನ್ನತೆಯನ್ನು ತೋರ್ಪಡಿಸಿಕೊಂಡಿದ್ದಾರೆ. ಗಾಯತ್ರಿ ಮಂತ್ರ ಕಾರ್ಯಕ್ರಮದಲ್ಲಿ ಸನಾತನ ಧರ್ಮದ ಪ್ರಸ್ತಾಪ ರಕ್ತಸಿಕ್ತ ಅಧ್ಯಾಯದ ಮರು ಸೃಷ್ಟಿಯಾಗಿ ಶೋಷಿತ ವರ್ಗಕ್ಕೆ ಗಂಡಾಂತರದ ಮುನ್ಸೂಚನೆ ಯಾಗಿದೆ.ಈ ಅಪಾಯದ ವಿರುದ್ಧ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗುತ್ತದೆ ಎಂದು ಈ ಮೂಲಕ ತಿಳಿಯಪಡಿಸುತ್ತೇವೆ

-ಡಾ. ಗಣನಾಥ ಶೆಟ್ಟಿ ಎಕ್ಕಾರು (ನಿವೃತ್ತ ಪ್ರಾಂಶುಪಾಲರು, ಜನಪದ ತಜ್ಞರು)

-ಡಾ. ಶ್ರೀನಿವಾಸ ಕಕ್ಕಿಲ್ಲಾಯ (ವೈದ್ಯರು, ಬರಹಗಾರರು)

-ಡಾ. ಶಿವರಾಮ ಶೆಟ್ಟಿ (ನಿವೃತ್ತ ಪ್ರಾಧ್ಯಾಪಕರು, ಚಿಂತಕರು)

-ಡಾ. ಉದಯ ಇರ್ವತ್ತೂರು (ನಿವೃತ್ತ ಪ್ರಾಂಶುಪಾಲರು, ಬರಹಗಾರರು)

-ಗುಲಾಬಿ ಬಿಳಿಮಲೆ (ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಮಂಗಳೂರು)

-ಭಾರತಿ ಬೋಳಾರ (ಅಧ್ಯಕ್ಷರು, ಜನವಾದಿ ಮಹಿಳಾ ಸಂಘಟನೆ, ಮಂಗಳೂರು)

-ಶ್ರೀನಿವಾಸ ಕಾರ್ಕಳ (ಬರಹಗಾರರು, ಮಂಗಳೂರು)

ಮತ್ತು ಇತರರು.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News