ಒಳಮೀಸಲಾತಿಗೆ ಹೊಸ ಆಯೋಗ ನೇಮಕ ಇದು ಮಾದಿಗರ ಬೇಡಿಕೆಯಾಗಿತ್ತೇ?

ಹೊಸದಾಗಿ ನೇಮಕ ಮಾಡಲಿರುವ ಆಯೋಗ ಯಾವ ದತ್ತಾಂಶವನ್ನು ಆಧರಿಸುತ್ತದೆ? ಒಂದು ವೇಳೆ ಅದು ಸದಾಶಿವ ಆಯೋಗದ ದತ್ತಾಂಶವನ್ನು ಕೇಂದ್ರೀಕರಿಸುವುದಾದರೆ, ಅಮಾನ್ಯಗೊಳಿಸಿರುವುದು ಹೇಗೆ ಮಾನ್ಯವಾಗುತ್ತದೆ? - ಇಂತಹ ವಿಪರ್ಯಾಸಗಳು ಒಂದೆಡೆಯಾದರೆ, ಮಾದಿಗ ಮುತ್ಸದ್ದಿ ರಾಜಕಾರಣಿಗಳ ವರಸೆಯೇ ಬೇರೆಯಾಗಿದೆ. ವಿವೇಕವನ್ನು ಕಳೆದುಕೊಂಡವರಂತೆ ವರ್ತಿಸುತ್ತಿರುವ ಇವರಿಗೆ ಏನೆನ್ನಬೇಕು! ಒಳಮೀಸಲಾತಿ ಜಾರಿಯೇ ಆಗಿ ಹೋಗಿರುವಂತೆ ಬಡಬಡಿಸುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಹಾರ ತುರಾಯಿಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ. ಮಹಾಮಹಾ ಬಿರುದಾಂಕಿತಗಳನ್ನು ಸಲ್ಲಿಸುತ್ತಿದ್ದಾರೆ. ಮಾದಿಗರು ಕೇಳಿದ್ದು ಒಳಮೀಸಲಾತಿ ಜಾರಿಯನ್ನು, ಸರಕಾರ ಹೇಳುತ್ತಿರುವುದು ಹೊಸ ಆಯೋಗದ ನೇಮಕವನ್ನು - ಎಂಬ ಪ್ರಜ್ಞೆ ಕೂಡ ಇವರಿಗೆ ಇಲ್ಲದಾಗಿದೆ.

Update: 2024-11-02 05:03 GMT

 ಆಗಸ್ಟ್-01ರ ಸುಪ್ರೀಂಕೋರ್ಟ್‌ನ ತೀರ್ಪಿನ ನಂತರದಲ್ಲಿ, ಕರ್ನಾಟಕದಲ್ಲಿ ಮಾದಿಗ ಸಂಘಟನೆಗಳು ಮತ್ತಷ್ಟು ಜಾಗೃತಗೊಂಡು, ಒಳಮೀಸಲಾತಿ ಜಾರಿಯ ಕೂಗು ಬಿರುಸುಗೊಂಡಿದೆ. ಕಾಂಗ್ರೆಸ್‌ನ ಮಾದಿಗ ನಾಯಕರಾಗಲಿ, ಬಿಜೆಪಿ ಮಾದಿಗ ನಾಯಕರಾಗಲಿ ಇದಕ್ಕೆ ಹೊರತಲ್ಲ. ಈ ಮಧ್ಯೆ ಮುಖ್ಯಮಂತ್ರಿಗಳು ಹೋದೆಡೆಯಲ್ಲೆಲ್ಲಾ ಮಾದಿಗ ಸಂಘಟನೆಗಳು ಘೇರಾವ್ ಹಾಕುತ್ತಿವೆ. ಅದರರ್ಥ, ಸಿದ್ದರಾಮಯ್ಯರೇ ಒಳಮೀಸಲಾತಿ ಜಾರಿಮಾಡುವ ಶಕ್ತಿ ನಿಮಗಿದೆ. ಆದರೆ ತಾವು ಯಾವುದೋ ಮೀನಾಮೇಷಕ್ಕೆ ಸಿಲುಕಿದಂತಿದೆಯಲ್ಲ ಎಂದು ಎಚ್ಚರಿಸುವುದೇ ಆಗಿದೆ. ಆದರೂ ಅಕ್ಟೋಬರ್ 28- 2024 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ಸರಕಾರ ಸಿದ್ಧವಿದೆ. ಒಳಮೀಸಲಾತಿ ಜಾರಿಯಾಗುವ ತನಕವೂ ಸರಕಾರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುವುದಿಲ್ಲ. ಜೊತೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಏಕಸದಸ್ಯ ಪೀಠವನ್ನು ಸ್ಥಾಪಿಸಿ, ವರದಿ ಸಿದ್ಧಪಡಿಸಲಿಕ್ಕೆ ಮೂರು ತಿಂಗಳ ಅವಧಿ ನೀಡಲಾಗುವುದು ಎಂದೂ ತೀರ್ಮಾನಿಸಲಾಗಿದೆ. ಆದರೆ ಈ ಬೆಳವಣಿಗೆಯಲ್ಲಿ ಕಾಡುವ ಮುಖ್ಯ ಪ್ರಶ್ನೆಗಳೆಂದರೆ :

< 30 ವರ್ಷಗಳಿಂದ ಮಾದಿಗ ಸಂಘಟನೆ ಒಳಮೀಸಲಾತಿಯನ್ನು ಕೇಳುತ್ತಲೇ ಬರುತ್ತಿದೆ. ಆದರೆ ಸರಕಾರಗಳು ಒಂದಿಲ್ಲೊಂದು ಬಗೆಯಲ್ಲಿ ಮಾದಿಗರನ್ನು ಯಾಮಾರಿಸುತ್ತಲೇ ಬಂದಿವೆ. ಸುಪ್ರೀಂ ಕೋರ್ಟ್ ನ ತೀರ್ಪಿನ ನಂತರ ಒಳ ಮೀಸಲಾತಿಯನ್ನು ಜಾರಿ ಮಾಡಿ, ಅದಕ್ಕೆ ಪೂರಕವಾದ ದತ್ತಾಂಶವೆಲ್ಲವೂ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಲ್ಲಿದೆ ಎಂಬ ಬೇಡಿಕೆಯನ್ನು ಮಾದಿಗ ಜನಾಂಗ ಸರಕಾರದ ಮುಂದಿಟ್ಟಿತ್ತು. ಆದರೆ ಸರಕಾರ ಹೊಸ ಆಯೋಗದ ನೇಮಕಕ್ಕೆ ಸನ್ನದ್ಧಗೊಂಡಿದೆ. ಮಾದಿಗ ಜನಾಂಗ ಕೇಳಿದ್ದು ಒಳಮೀಸಲಾತಿಯನ್ನು ಜಾರಿ ಮಾಡಿ ಎಂದು. ಆದರೆ ಸರಕಾರ ಹೇಳಿರುವುದು ಆಯೋಗವನ್ನು ನೇಮಿಸುತ್ತೇವೆಂದು. ಹಾಗಾದರೆ ಆಯೋಗ ರಚನೆಗೆ ಸಿದ್ದರಾಮಯ್ಯನವರ ಮೇಲಿದ್ದ ಒತ್ತಡ ಯಾರದ್ದು? ಸಿದ್ದರಾಮಯ್ಯನವರ ಸರಕಾರ ಯಾರ ಒತ್ತಡದ ಆಣತಿಯ ಮೇರೆಗೆ ಕಾರ್ಯ ನಿರ್ವಹಿಸುತ್ತಿದೆ? ಎಂಫಾರಿಕಲ್ ಡೇಟಾ ಇಲ್ಲ? ಎಂದು ಹೇಳಿದವರ ಪರವಾಗಿಯೇ ತಾನೇ? ಹಾಗಾದರೆ ಸಚಿವ ಸಂಪುಟ ಸಭೆ ಯಾರ ಒತ್ತಾಯಕ್ಕೆ ಮಣಿದು ಆಯೋಗವನ್ನು ರಚಿಸಿದೆ ಎಂಬುದು ನಮಗಿಲ್ಲಿ ಖಾತ್ರಿಯಾಗುತ್ತದೆ. ಕಡೆಗೂ 30 ವರ್ಷಗಳ ಕಾಲ ಹೋರಾಟ ಮಾಡಿದ ಮಾದಿಗರ ಬೇಡಿಕೆಗೆ ಕಿಂಚಿತ್ತೂ ಬೆಲೆ ಇಲ್ಲದ ಹಾಗೆ ಬಹುಸಂಖ್ಯಾತ ಮಾದಿಗರನ್ನು ಸರಕಾರ ಅವಮಾನಿಸಿದೆ. ಅಷ್ಟು ಮಾತ್ರವಲ್ಲ, ಮಾದಿಗರನ್ನು ಗಣನೆಗೂ ಕೂಡ ತೆಗೆದುಕೊಳ್ಳದಷ್ಟು ದಾರ್ಷ್ಟ್ಯವನ್ನೂ ಅದು ಪ್ರದರ್ಶಿಸುತ್ತಿದೆ. ಈಗಲಾದರೂ ಅರ್ಥವಾಗಬೇಕಾದ ಸಂಗತಿಯೆಂದರೆ, ಕಾಂಗ್ರೆಸ್ ಸರಕಾರದಲ್ಲಿ ಮಾದಿಗ ನಾಯಕರ ಸ್ಥಿತಿ ಎಷ್ಟು ಚಿಂತಾ ಜನಕವಾಗಿದೆ ಎಂದು

ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರದಲ್ಲಿಯೂ ನ್ಯಾಯ ಕೊಡಲಾರದ ಸರಕಾರ, ಅದನ್ನು ಗಟ್ಟಿಯಾಗಿ ಕೇಳಲಾರದ ಕಾಂಗ್ರೆಸ್ ಮಾದಿಗರು!- ಒಂದು ರೀತಿ ನ್ಯಾಯಾಂಗ ನಿಂದನೆಗೆ ಒಳಗಾಗಿದ್ದಾರೆ. ಮಾದಿಗರ ಬೇಡಿಕೆಯನ್ನು ಸರಕಾರ ಈಡೇರಿಸುವುದೇ ಆಗಿದ್ದರೆ, ಒಳಮೀಸಲಾತಿಯನ್ನು ಜಾರಿಗೊಳಿಸಿ, ನಂತರದಲ್ಲಿ ನ್ಯೂನತೆಗಳಿದ್ದಲ್ಲಿ ಅದಕ್ಕೊಂದು ಸಮಿತಿಯನ್ನು ರಚಿಸಬಹುದಿತ್ತೇನೋ! ಅದಕ್ಕೆ ಮುಂದಾಗದೆ

ಮತ್ತೆ ಮೂಗಿಗೆ ತುಪ್ಪಸವರುವ ಕೆಲಸಕ್ಕೆ ಮುಂದಾಗಿದೆ. ಬಲಗೈ ಸಮಾಜದವರ ‘ದತ್ತಾಂಶ ಸರಿಯಿಲ್ಲ’

ಎಂಬ ಕೂಗಿಗೆ, ಗಟ್ಟಿ ಕಿವಿಯಾಗುವ ಸರಕಾರ, ದತ್ತಾಂಶವಿದೆ ಸ್ವಾಮಿ, ಜಾರಿ ಮಾಡಿ ಎಂಬ ಮಾದಿಗರ ಕೂಗಿಗೆ ಏಕೆ ಕಿವುಡಾಗಿದೆ? ಈವರೆಗೂ ಸರಕಾರ ಜಾರಿಮಾಡಿರುವ ಯಾವ ಆಯೋಗದ ವರದಿಗಳು ಕೂಡ ನೂರಕ್ಕೆ ನೂರರಷ್ಟು ನಿಖರತೆಯಿಂದ ಕೂಡಿಲ್ಲ. ಆದರೆ ಸತ್ಯಕ್ಕೆ ಹತ್ತಿರವಾದ ಅಂಕಿ ಅಂಶಗಳ ಆಧಾರದ ಮೇಲೆ ಅವು ಜಾರಿಗೊಂಡಿವೆ. ಅಂತಹದ್ದೇ ನಡೆಯನ್ನು ಸದಾಶಿವ ಆಯೋಗದ ಜಾರಿಯಲ್ಲಿ ಸರಕಾರ ವಹಿಸಬಹುದಿತ್ತು. ಅದಕ್ಕೆ ಮುಂದಾಗದೆ ಹೋದದ್ದು ಶೋಚನೀಯ!

< ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಸಿದ್ಧಪಡಿಸಿದ ಸನ್ಮಾನ್ಯರು ತಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿ ಮಾಡುತ್ತದ್ದೆಂಬ ಭರವಸೆ ನೀಡಿದ್ದರು. ಆಗ ಅವರಿಗೆ ದತ್ತಾಂಶದ ಕೊರತೆ ತಿಳಿದಿರಲಿಲ್ಲವೇ? ಜಾರಿಯಾಗುವ ಸಂದರ್ಭದಲ್ಲಿ ದತ್ತಾಂಶ! ದತ್ತಾಂಶ! ಎಂಬ ಕೂಗು ಎಲ್ಲೆಡೆಯಿಂದಲೂ ಹತ್ತಿಕ್ಕುತ್ತಿರುವುದೇಕೆ?

<ಒಂದು ವೇಳೆ ಮಾದಿಗರ ಜನಸಂಖ್ಯೆಯ ಬಗ್ಗೆ, ನೇಮಕಗೊಳ್ಳುವ ಹೊಸ ಆಯೋಗ ತಕರಾರು ಸೃಷ್ಟಿಸಿದರೆ, ಅದಕ್ಕೇನು ಮುಂದಿನ ಪರಿಹಾರ? ಆಗ ಮಾದಿಗರೇ ಆ ವರದಿಯನ್ನು ತಿರಸ್ಕರಿಸುವ ಮಟ್ಟಕ್ಕೆ ಹೋಗಬೇಕಾಗುತ್ತದೆ. ಅಂತಹ ದುಸ್ಥಿತಿಗೆ ಸರಕಾರ ದೂಡುವುದರಲ್ಲಿ ಅನುಮಾನವಿಲ್ಲ. ಆದರೆ ಕನ್ನಡ ಸಾಹಿತ್ಯದ ಮೇರು ಘಟ್ಟವಾದ 12ನೇ ಶತಮಾನವೇ ಸಾಕ್ಷೀಕರಿಸುತ್ತದೆ, ಈ ನೆಲದ ಹೆಚ್ಚಿನವರು ಮಾದಿಗರೇ ಎಂದು. ಇಲ್ಲದೇ ಹೋದರೆ ಮಾದಿಗ ಸಮಾಜದ ಚೆನ್ನಯ್ಯ, ಕಕ್ಕಯ್ಯ, ಹರಳಯ್ಯ, ಕಲ್ಯಾಣಮ್ಮ, ಸತ್ಯಕ್ಕ, ಕಾಳವ್ವೆ-ಅವರುಗಳು ಆ ಹೊತ್ತಿನ ಸಾಮಾಜಿಕ ಕ್ರಾಂತಿಯ ಮುನ್ನೆಲೆ ಹೇಗಾಗುತ್ತಿದ್ದರು?

<ಸ್ಪಷ್ಟನೆ ಸಿಗದ ಮತ್ತೊಂದು ವಿಚಾರವೆಂದರೆ; ಹೊಸ ಆಯೋಗದ ನೇಮಕ, ಈ ಹಿಂದಿನ ಎಲ್ಲಾ ಆಯೋಗವನ್ನೂ ತಿರಸ್ಕರಿಸಿ ಹೊಸದಾಗಿ ಗಣತಿಗೆ ಮುಂದಾಗುತ್ತದೆಯೋ ಅಥವಾ ಇರುವ

ವರದಿಗಳನ್ನು ಕ್ರೋಡೀಕರಿಸಿ ಎ.ಡಿ., ಎ.ಕೆ. ಗಳ ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತದೆಯೋ? ಏಕೆಂದರೆ ಸಚಿವ ಸಂಪುಟ ಸಭೆಯಲ್ಲಿ, ಸದಾಶಿವ ವರದಿಯನ್ನು ಮಾನ್ಯ ಮಾಡುವ ಬಗ್ಗೆಯಾಗಲಿ, ತಿರಸ್ಕರಿಸುವ ಬಗ್ಗೆಯಾಗಲಿ ಚರ್ಚೆಯೇ ಬಂದಿಲ್ಲ. ಬಸವರಾಜ ಬೊಮ್ಮಾಯಿ ಅವರು ಮಧುಸ್ವಾಮಿ ಸಮಿತಿಯ ವರದಿಯನ್ನು ಸಲ್ಲಿಸುವಾಗ, ಸದಾಶಿವ ಆಯೋಗ ಮುಗಿದ ಅಧ್ಯಾಯ ಎಂದು ಹೇಳಿದ್ದರು. ಅದನ್ನು ಕಾಂಗ್ರೆಸ್ ಪಕ್ಷ ಮತ್ತೆ ಮಾನ್ಯ ಮಾಡುತ್ತದೆಯೋ ಇಲ್ಲವೋ ಎಂಬ ಗೊಂದಲಕ್ಕೆ ಪರಿಹಾರವನ್ನು ನೀಡಬಹುದಿತ್ತು. ಆ ಕೆಲಸವೂ ನೆರವೇರಿಲ್ಲ. ಹೊಸದಾಗಿ ನೇಮಕ ಮಾಡಲಿರುವ ಆಯೋಗ ಯಾವ ದತ್ತಾಂಶವನ್ನು ಆಧರಿಸುತ್ತದೆ? ಒಂದು ವೇಳೆ ಅದು ಸದಾಶಿವ ಆಯೋಗದ ದತ್ತಾಂಶವನ್ನು ಕೇಂದ್ರೀಕರಿಸುವುದಾದರೆ, ಅಮಾನ್ಯಗೊಳಿಸಿರುವುದು ಹೇಗೆ ಮಾನ್ಯವಾಗುತ್ತದೆ? - ಇಂತಹ ವಿಪರ್ಯಾಸಗಳು ಒಂದೆಡೆಯಾದರೆ, ಮಾದಿಗ ಮುತ್ಸದ್ದಿ ರಾಜಕಾರಣಿಗಳ ವರಸೆಯೇ ಬೇರೆಯಾಗಿದೆ. ವಿವೇಕವನ್ನು ಕಳೆದುಕೊಂಡವರಂತೆ ವರ್ತಿಸುತ್ತಿರುವ ಇವರಿಗೆ ಏನೆನ್ನಬೇಕು! ಒಳಮೀಸಲಾತಿ ಜಾರಿಯೇ ಆಗಿ ಹೋಗಿರುವಂತೆ ಬಡಬಡಿಸುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಹಾರ ತುರಾಯಿಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ. ಮಹಾಮಹಾ ಬಿರುದಾಂಕಿತಗಳನ್ನು ಸಲ್ಲಿಸುತ್ತಿದ್ದಾರೆ. ಮಾದಿಗರು ಕೇಳಿದ್ದು ಒಳಮೀಸಲಾತಿ ಜಾರಿಯನ್ನು, ಸರಕಾರ ಹೇಳುತ್ತಿರುವುದು ಹೊಸ ಆಯೋಗದ ನೇಮಕವನ್ನು - ಎಂಬ ಪ್ರಜ್ಞೆ ಕೂಡ ಇವರಿಗೆ ಇಲ್ಲದಾಗಿದೆ. ಇಂತಹ ಸ್ಥಿತಿಯಲ್ಲಿ ಜನಾಂಗವಿದೆ. ಈ ಹೊತ್ತಲ್ಲಿ ಹೊಸ ತಲೆಮಾರಿನ ಯುವಕರು ಹಿರಿಯರ ಅನುಭವ ಗ್ರಾಹಿಗಳಾಗಿ ಹೋರಾಟಕ್ಕೆ ಧುಮುಕದೆ ಹೋದರೆ, ಬಹುಷಃ ಒಳಮೀಸಲಾತಿ ಮರೀಚಿಕೆ ಆಗಬಹುದೇನೋ!?

Writer - ವಾರ್ತಾಭಾರತಿ

contributor

Editor - Mushaveer

contributor

Byline - ಡಾ.ಎಚ್.ಲಕ್ಷ್ಮೀನಾರಾಯಣಸ್ವಾಮಿ

contributor

Similar News