ಕರ್ನಾಟಕ ಮೌಲ್ಯ ಶಿಕ್ಷಣ-ಕೆಲವು ಪ್ರಶ್ನೆಗಳು
ಕರ್ನಾಟಕದ ಶಾಲೆಗಳಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ವಾರಕ್ಕೊಮ್ಮೆ ಪ್ರತ್ಯೇಕ ಮೌಲ್ಯ ಶಿಕ್ಷಣ ತರಗತಿಗಳನ್ನು ನಡೆಸಲಾಗುವುದೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪನವರು ಹೇಳಿದ್ದಾರೆ. ಇಂದು ನಾವು ಈ ಹಿಂದೆಂದಿಗಿಂತಲೂ ಹೆಚ್ಚಿಗೆ ಭಿನ್ನ ಮೌಲ್ಯಗಳ ಧ್ರುವೀಕರಣವನ್ನು ಹಾಗೂ ಸಂಘರ್ಷವನ್ನು ಪ್ರತಿಯೊಂದು ಕಡೆ ನೋಡುತ್ತಿದ್ದೇವೆ. ಇಂತಹ ಸಮಯದಲ್ಲಿ ಮಕ್ಕಳನ್ನು ಮೌಲ್ಯಗಳಲ್ಲಿ ಸಂವೇದನಾಶೀಲರನ್ನಾಗಿಸುವ ಉದ್ದೇಶ ಹೊಂದಿದ ಕರ್ನಾಟಕ ಮೌಲ್ಯ ಶಿಕ್ಷಣಕ್ಕೆ ಹೆಚ್ಚು ಮಹತ್ವ ಬಂದಿದೆ. ಶಾಲೆಗಳ ಹಂತದಲ್ಲಿ ಸಾಮಾಜೀಕರಣದ ಪ್ರಭಾವದಿಂದ ನಂಬಿಕೆಗಳು ಕಟ್ಟಲ್ಪಡುತ್ತಿರುವ ಕಾಲ. ಮಣ್ಣಿನಂತಿರುವ ಮಕ್ಕಳ ಮನಸ್ಸನ್ನು ಹದ ಮಾಡಿ ಅಲ್ಲಿ ಶಿಕ್ಷಕ/ಕಿ ಒತ್ತುವ ಅಚ್ಚು ಯಾವುದಾಗಿರುತ್ತದೆ, ಯಾವ ಮೌಲ್ಯಗಳಿಗೆ ಮಕ್ಕಳನ್ನು ಸಂವೇದನಾಶೀಲರನ್ನಾಗಿಸಲು ಹೊರಟಿದ್ದೇವೆ ಮತ್ತು ಅದಕ್ಕಾಗಿ ಯಾವ ರೀತಿ ವಿಧಾನಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ.
ಮೌಲ್ಯಗಳು ಯಾವುವು ಎಂಬ ಪ್ರಶ್ನೆ ನಮ್ಮೆದುರು ಬರುತ್ತದೆ. ಉದಾಹರಣೆಗೆ ಅವು ಸಂವಿಧಾನದ ಮೌಲ್ಯಗಳು ಎಂದುಕೊಳ್ಳೋಣ. ವ್ಯಕ್ತಿಗೌರವ, ಸಮತೆ, ಭ್ರಾತೃತ್ವ, ಜಾತ್ಯತೀತತೆ, ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ಪ್ರಜಾಪ್ರಭುತ್ವ ಮೊದಲಾದ ಮೌಲ್ಯಗಳಿಗೆ ಮಕ್ಕಳನ್ನು ಸಂವೇದನಾಶೀಲರನ್ನಾಗಿಸುವ ಉದ್ದೇಶ ಇದರಲ್ಲಿ ಇದ್ದ ಹಾಗಿದೆ ಎಂದುಕೊಳ್ಳೋಣ. ಇಂತಹ ಮೌಲ್ಯಗಳು ಈಗಾಗಲೇ ಇವೆ. ಸಂವಿಧಾನ ಓದು, ಶರಣರ ವಚನಗಳು, ಅಂಬೇಡ್ಕರ್ ವ್ಯಕ್ತಿ ಪರಿಚಯ ಮುಂತಾದ ಭಾಷೆಯಲ್ಲಿ ಬರುವ ಪಠ್ಯಗಳಲ್ಲಿ ಇವೆಲ್ಲಾ ಇವೆ. ಅವುಗಳಿಗಿಂತ ಮೌಲ್ಯ ಶಿಕ್ಷಣ ಹೇಗೆ ಭಿನ್ನವಾಗಲಿದೆ? ಈಗ ಇರುವ ಮೌಲ್ಯ ಕುರಿತ ಪಠ್ಯಗಳು ಸರಿಯಾಗಿ ಅನುಷ್ಠಾನವಾಗದೆ ಇರಲು ಕಾರಣಗಳೇನು? ಅವುಗಳನ್ನು ಅನುಷ್ಠಾನ ಮಾಡಲು ಮೌಲ್ಯ ಶಿಕ್ಷಣ ಯಾವ ಅಗತ್ಯ ಹೊಸ ವಿಧಾನಗಳನ್ನು ಹುಡುಕಿಕೊಂಡಿದೆ ಎಂಬುದು ನಮ್ಮ ಮುಂದಿರುವ ಪ್ರಶ್ನೆಗಳು.
ಇದನ್ನು ಒಂದು ಉದಾಹರಣೆಯಿಂದ ನೋಡೋಣ. ನನ್ನ ಮಗಳು ಫುಡ್ ಪಿರಮಿಡ್ ಚಿತ್ರ ಬರೆದು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಳು. ಈ ಫುಡ್ ಪಿರಮಿಡ್‌ನಲ್ಲಿ ಕೆಳಗಿನ ಭಾಗ ಅತೀ ಹೆಚ್ಚು ಆರೋಗ್ಯಕರ ಆಹಾರಗಳಿರಬೇಕು. ಅಂದರೆ ಮುದ್ದೆ, ಮಾಂಸ, ಅನ್ನ, ಕಾಳು, ಹಣ್ಣು, ಹಾಲು, ತುಪ್ಪ, ಗೆಡ್ಡೆ ಗೆಣಸು, ತರಕಾರಿ ಇವು ಅತೀ ಹೆಚ್ಚು ತುಂಬಿರಬೇಕು. ಪಿರಮಿಡ್‌ನ ಮೇಲ್ಭಾಗದಲ್ಲಿ ಕಡಿಮೆ ಪ್ರಮಾಣದ ಜಂಕ್ ಫುಡ್ ಇರಬೇಕು. ಅಂದರೆ, ಐಸ್‌ಕ್ರೀಂ, ಫಿಜ್ಜಾ, ಬರ್ಗರ್, ಕೇಕ್, ಚಿಪ್ಸ್ ಮುಂತಾದ ಆಹಾರ ಅತೀ ಕಡಿಮೆ ಪ್ರಮಾಣದಲ್ಲಿರಬೇಕು ಎಂಬುದು ಹೇಳುತ್ತದೆ. ರಜೆ ಬಂದಾಗ ಅಜ್ಜಿಯ ಮನೆಗೆ ಹೋದಾಗ ಅವಳಿಗೆ ಬರೀ ಜಂಕ್ ಫುಡ್ ಕೊಟ್ಟಿದ್ದರು. ಅವಳು ಚೆನ್ನಾಗಿ ತಿಂದು ಮಜಾ ಮಾಡಿ ಬಂದು ಲೈಫ್ ಇಸ್ ಗುಡ್ ಎಂದಳು. ಫುಡ್ ಪಿರಮಿಡ್ ಪರಿಕಲ್ಪನೆಯೂ ಚೆನ್ನಾಗಿದೆ. ಅದನ್ನು ಶಾಲೆಯಲ್ಲಿ ಬೋಧಿಸಿದ್ದಾರೆ. ಅವಳೂ ನೆನಪಿನಲ್ಲಿಟ್ಟುಕೊಂಡು ಪರೀಕ್ಷೆಯಲ್ಲಿ ಬರೆದಿದ್ದಾಳೆ ಅಂಕ ಪಡೆದಿದ್ದಾಳೆ. ಆದರೆ ಅವಳಿಗೆ ಸ್ವಾತಂತ್ರ್ಯ ಸಿಕ್ಕಾಗ ಅವಳು ಆ ಮೌಲ್ಯವನ್ನು ತನ್ನ ಒಳಗೆ ಇಟ್ಟುಕೊಂಡಿದ್ದಾಳೆಯೆ? ಅಥವಾ ಇಲ್ಲವೇ ಎಂಬುದು ಮುಖ್ಯವಾಗುತ್ತದೆ. ಅದಕ್ಕಾಗಿ ಮೌಲ್ಯಗಳ ಬೋಧನಾ ಪ್ರಕ್ರಿಯೆ ಮುಖ್ಯವಾಗುತ್ತದೆ.
ಜ್ಞಾನವನ್ನು ನೀವು ಬೋಧಿಸಿದರೆ ಸಾಕು. ಈ ಮೌಲ್ಯಗಳು ಬೋಧನೆಯಿಂದ ಬರುವುದಿಲ್ಲ. ಫುಡ್ ಪಿರಮಿಡ್ ಬೋಧಿಸುವ ಶಾಲೆಯಲ್ಲಿ ಊಟಕ್ಕೆ ಮಕ್ಕಳು ತರುವುದು ಅದೇ ನ್ಯೂಡಲ್, ಸ್ಯಾಂಡ್‌ವಿಚ್ ತರದ ಜಂಕ್ ಫುಡ್‌ಗಳು. ಅವರ ಶಾಲೆಯಲ್ಲಿ ಕಾರ್ಯಕ್ರಮಗಳಿದ್ದಾಗ ಮಕ್ಕಳ ಕೈಗೆ ಕೊಡುವುದೂ ಇಂತಹ ಆಹಾರ ಮತ್ತು ಸಾಫ್ಟ್ ಡ್ರಿಂಕ್‌ಗಳನ್ನು. ಇದೆಲ್ಲವನ್ನೂ ಮಗು ನೋಡುತ್ತಿರುತ್ತದೆ. ಪರೀಕ್ಷೆಗೆ ಬೇಕಾದುದನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ. ಇತರರು ಮಾಡುವುದನ್ನು ನೋಡಿ ಕಲಿಯುತ್ತದೆ.
ಶಾಲೆಯೊಂದರಲ್ಲಿ ಶಿಕ್ಷಕರು ಶಾಲೆಗೆ ಬಂದೊಡನೆ ಮಕ್ಕಳೆಲ್ಲಾ ಅವರನ್ನು ಸುತ್ತುವರಿದು ‘ಗುಡ್ ಮಾರ್ನಿಂಗ್’ ಎಂದರು. ಆ ಶಿಕ್ಷಕರು ಅವರಿಗೆ ತಿರುಗಿ ಗುಡ್ ಮಾರ್ನಿಂಗ್ ಹೇಳದೆ ನಾನು ಶಿಕ್ಷಕ ಎಂಬ ಗತ್ತಿನಿಂದ ನಡೆದರು. ಇಂತಹ ಶಿಕ್ಷಕರು ಶಾಲೆಯೊಳಗೆ ಎಷ್ಟು ವ್ಯಕ್ತಿ ಗೌರವ ಬೋಧಿಸಿದರೂ ಅದನ್ನು ಮಗು ಕಲಿತು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುತ್ತದೆಯೇ ವಿನಃ ವ್ಯಕ್ತಿಗಳಿಗೆ ಗೌರವ ಕೊಡುವುದನ್ನು ಕಲಿಯುವುದಿಲ್ಲ. ಇಲ್ಲಿ ಶಿಕ್ಷಕ/ಕಿಯರು ಹೇಳುವ ಮೌಲ್ಯಗಳನ್ನು ಮೊದಲು ತಾವು ಅಳವಡಿಸಿಕೊಂಡಿರುವುದು ಮುಖ್ಯವಾಗುತ್ತದೆ. ಮೌಲ್ಯಗಳಲ್ಲಿ ಸಂವೇದನೆಗೊಳಿಸಲು ಮೌಲ್ಯಗಳಲ್ಲಿ ಸಂವೇದನೆ ಇರುವ ವ್ಯಕ್ತಿಯಿಂದ ಮಾತ್ರ ಸಾಧ್ಯ. ನಮ್ಮ ಬಳಿ ಹಣ ಇದ್ದರೆ ದಾನ ನೀಡಬಹುದು ಆ ರೀತಿ. ಇಲ್ಲದೆ ಇದ್ದರೆ ಕೊಡಲು ಹೇಗೆ ಸಾಧ್ಯ?
ಶಾಲಾ ಕೊಠಡಿ ಮತ್ತು ಶಾಲೆಯ ಆವರಣದಲ್ಲಿ ಮೊದಲು ಮೌಲ್ಯಗಳ ಅನುಷ್ಠಾನವಾಗಬೇಕು. ಆಟ ಆಡುವಾಗ ಕಾಲಿಲ್ಲದ ಮಗುವೊಂದು ಕುಳಿತಿರುತ್ತದೆ. ಆ ಮಗುವನ್ನು ಒಳಗೊಳಿಸಿಕೊಳ್ಳದೆ ಆಟವಾಡಿದರೆ, ಮಕ್ಕಳಿಗೆಲ್ಲಾ ‘ಒಳಗೊಳಿಸಿಕೊಳ್ಳುವ’ (inclusiveness) ಮತ್ತು ಸಮತೆಯ ಮೌಲ್ಯಗಳಲ್ಲಿ ಸಂವೇದನೆಗೊಳಿಸಲು ಸಾಧ್ಯವೇ ಇಲ್ಲ. ಅದೇ ರೀತಿ ದಲಿತ ಕುಟುಂಬದ ಮಗು, ಒಂಟಿ ಪೋಷಕರನ್ನು ಹೊಂದಿರುವ ಮಗು, ವಿಶೇಷ ಚೇತನ ಮಕ್ಕಳು ಹೀಗೆ ಭಿನ್ನ ಭಿನ್ನ ಸಾಮಾಜಿಕ ನೆಲೆಯ ಮಕ್ಕಳನ್ನು ಮೌಲ್ಯಗಳಲ್ಲಿ ಸಂವೇದನಾಶೀಲರನ್ನಾಗಿಸಲು ಶಾಲಾ ವಾತಾವರಣ ಮತ್ತು ಕೊಠಡಿಯಲ್ಲಿ ನಡೆಯುವ ಪಾಠ ಮತ್ತು ಆಟಗಳಲ್ಲಿ ಮೌಲ್ಯಗಳ ಅನುಷ್ಠಾನವಾಗಬೇಕು.
ಮೌಲ್ಯ ಶಿಕ್ಷಣದಲ್ಲಿ ನಮ್ಮ ಮುಂದಿರುವ ಎರಡನೇ ಸವಾಲು ಎಂದರೆ ಮೌಲ್ಯಗಳನ್ನು ಕಲಿಸುವ ಪಠ್ಯಕ್ರಮ ಮತ್ತು ಸಂವೇದನಾಶೀಲರನ್ನಾಗಿಸುವ ಪ್ರಕ್ರಿಯೆ ತುಂಬಾ ಮುಖ್ಯವಾದುದು. ಮೌಲ್ಯಗಳನ್ನು ಬೋಧಿಸುವುದರಿಂದ ಏನೇನೂ ಪ್ರಯೋಜನವಿಲ್ಲ. ಮೌಲ್ಯಗಳನ್ನು ಸಂವಾದಿಸುವುದರಿಂದ ಮಾತ್ರ ಮಕ್ಕಳನ್ನು ಸಂವೇದನಾಶೀಲರನ್ನಾಗಿಸಬಹುದು. ಮೌಲ್ಯ ಶಿಕ್ಷಣ ಪಠ್ಯಕ್ರಮವೇ ಸಂವಾದಿಸುವ ಪಠ್ಯಕ್ರಮವಾಗಿರಬೇಕು. ಉದಾಹರಣೆಗೆ, ಬಸವಣ್ಣನವರ ಒಂದು ವಚನ ತೆಗೆದುಕೊಳ್ಳೋಣ ‘‘ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ’’ ನೀವು ನಿಮ್ಮನ್ನು ಬಣ್ಣಿಸಿಕೊಂಡಿದ್ದ ಸಂದರ್ಭ ಯಾವುದು? ಆ ಸಂದರ್ಭದಲ್ಲಿ ಏನು ಭಾವನೆ ಬಂದಿತ್ತು? ಆ ಸಮಯದಲ್ಲಿ ನಿಮ್ಮೊಂದಿಗೆ ಇತರರ ವರ್ತನೆ ಹೇಗಿತ್ತು? ಬಣ್ಣಿಸಿಕೊಳ್ಳುವುದರಿಂದ ಏನೆಲ್ಲಾ ಅನುಕೂಲವಾದವು? ಯಾರಿಗಾದರೂ ಯಾವಾಗಲಾದರೂ ನಕಾರಾತ್ಮಕವಾಗಿ ಅನಿಸಿತೆ? ಇತರರು ನಿಮ್ಮೆದುರು ಬಣ್ಣಿಸಿಕೊಳ್ಳುವಾಗ ನಿಮಗೇ ಏನು ಭಾವನೆ ಬರುತ್ತದೆ? ಅವರೊಂದಿಗೆ ಸಂಬಂಧ ಹತ್ತಿರವೆನಿಸುತ್ತದೆಯೋ, ದೂರವೆನಿಸುತ್ತದೆಯೋ? ಹೀಗೆ ಸಂವಾದ ಸಾಗಲು ಅನುಕೂಲಕರ ಪಠ್ಯವಿರಬೇಕು.
‘ಇದಿರ ಹಳಿಯಲು ಬೇಡ’ ಎಂದಾಗ ಮಗುವು ಸುಲಭವಾಗಿ ಇತರರನ್ನು ನಾನು ಹೀಯಾಳಿಸಿದ್ದೆ ಎಂದು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಮಗುವಿನ ಒಳಗೆ ನಾನೇನು ತಪ್ಪು ಮಾಡಿಲ್ಲ ಎಂಬ ಭಾವನೆಯೊಂದಿರುತ್ತದೆ. ಆಗ ಸಂವಾದದ ಪ್ರಶ್ನೆಗಳನ್ನು ತಿರುಗಿಸಿರಿ. ನಿಮ್ಮನ್ನು ಯಾರಾದರೂ ಹೀಯಾಳಿಸಿದ್ದರೆ? ಆಗ ನಿಮಗೆ ಏನನಿಸಿತ್ತು? ಯಾವುದಾದರೂ ಒಂದು ಸಂದರ್ಭವನ್ನು ನೆನಪು ಮಾಡಿಕೊಳ್ಳಿರಿ. ಈಗ ನಿಮ್ಮ ಗೆಳೆಯರೊಡನೆ ಅದನ್ನು ಹಂಚಿಕೊಳ್ಳಿರಿ. ನಿಮ್ಮನ್ನು ಹೀಯಾಳಿಸಿ ದ್ದರಿಂದ ಹೀಯಾಳಿಸಿದವರ ಬಗ್ಗೆ ಯಾವ ಭಾವನೆ ಬಂತು? ಅವರ ಜೊತೆಗೆ ಸಂಬಂಧ ಹತ್ತಿರವೆನಿಸಿತೆ? ದೂರವೆನಿಸಿತೆ? ಇತರರು ನಮ್ಮನ್ನು ಹೀಯಾಳಿಸುವಾಗ ನಮ್ಮನ್ನು ನಾವು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹೇಗೆ?
ಹೋಂ ವರ್ಕ್ ಕೂಡ ಸಂವಾದಿಸುವುದೇ ಆಗಿರಬೇಕು. ‘‘ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ಇಂದು ಮಾತನಾಡಿ ನಿಮ್ಮ ಮನೆಯೊಳಗೆ ಕುಟುಂಬ ಸದಸ್ಯರ ಮಧ್ಯೆ ಬಣ್ಣಿಸುವ ಮತ್ತು ಹಳಿಯುವ ಅಭ್ಯಾಸ ಇದೆಯೇ? ಇದ್ದರೆ ಅದರಿಂದ ನಿಮ್ಮ ಕುಟುಂಬದ ಒಳಗೆ ಅದರಿಂದ ಆಗುತ್ತಿರುವ ಅನುಕೂಲ ಮತ್ತು ಅನನುಕೂಲಗಳೇನೆಂದು ಚರ್ಚಿಸಿ ಪಟ್ಟಿ ಮಾಡಿ ಬನ್ನಿ’’ ಎಂದರೆ ಪಟ್ಟಿ ಮಾಡಿಕೊಂಡು ಬಂದ ವಿಷಯಗಳನ್ನು ಪುನಃ ಶಾಲೆಯಲ್ಲಿ ಮಗುವು ತನ್ನ ಜೊತೆಗಾರರೊಂದಿಗೆ ಪರಸ್ಪರ ಹಂಚಿಕೊಳ್ಳುತ್ತದೆೆ ಹಾಗೂ ಚರ್ಚಿಸುತ್ತದೆ. ಹೀಗೆ ಒಂದು ಮೌಲ್ಯವನ್ನು ಹಿಡಿದು ಅದು ಎಲ್ಲೆಲ್ಲಾ ಇದೆ, ಕುಟುಂಬ ವ್ಯವಸ್ಥೆಯೊಳಗೆ, ಸಮಾಜದೊಳಗೆ ಯಾವ ರೀತಿ ಇದೆ ಎಂಬುದನ್ನು ಮಗು ಸಂವಾದಿಸುತ್ತಾ ಹುಡುಕಾಟ ನಡೆಸುತ್ತಾ ತನ್ನ ಮೌಲ್ಯಗಳನ್ನು, ನಂಬಿಕೆಗಳನ್ನು ಒರೆಗೆ ಹಚ್ಚಿ ಸಂವೇದನಾಶೀಲವಾಗುತ್ತದೆ.
ಮೌಲ್ಯಶಿಕ್ಷಣವು ಈ ಪ್ರಕ್ರಿಯೆಯನ್ನು ಮತ್ತು ಪಠ್ಯಕ್ರಮಗಳನ್ನು ಹೊಂದಿಲ್ಲವೆಂದಾದರೆ ಅದು ಶಿಕ್ಷಕರಿಗೆ ನೀಡುವ ಮತ್ತಷ್ಟು ಹೊರೆಯೇ ಆಗಿರುತ್ತದೆ. ಅದರಿಂದ ಹೊಸದೇನೂ ಆಗುವುದೇ ಇಲ್ಲ. ಹೊಸದಾಗಿ ಮೌಲ್ಯಶಿಕ್ಷಣವನ್ನು ವಿನ್ಯಾಸಗೊಳಿಸಿ ಹೇರುವ ಬದಲು ಈಗಾಗಲೇ ಭಾಷಾ ಪಠ್ಯಗಳಲ್ಲಿ ಇರುವ ಮೌಲ್ಯದ ಪಾಠಗಳ ಬೋಧನಾ ವಿಧಾನವನ್ನು ಬದಲಿಸಿ ಶಿಕ್ಷಕರನ್ನು ತರಬೇತಿಗೊಳಿಸುವುದು ಅತೀ ಮುಖ್ಯವಾದುದು. ಶಿಕ್ಷಕರ ಒಳಗೆ ಪರಿವರ್ತನೆ ತರಬಲ್ಲ ಪ್ರಕ್ರಿಯೆ ಆಧಾರಿತ ತರಬೇತಿಗಳಿಂದ ಮಾತ್ರ ಇಂತಹ ಸುಸ್ಥಿರ ಬದಲಾವಣೆ ತರಲು ಸಾಧ್ಯ ಇದೆ. ಶಿಕ್ಷಕರಿಗೆ ಆದೇಶಿಸಿ ಮಕ್ಕಳಲ್ಲಿ ಪರಿವರ್ತನೆ ರೂಪಿಸಲು ಸಾಧ್ಯವೇ ಇಲ್ಲ. ಶಿಕ್ಷಕರ ಎದೆಯೊಳಗೆ ಪ್ರೇಮದೀವಿಗೆ ಹಚ್ಚುವ ಪ್ರಕ್ರಿಯೆ ಬೇಕಾಗಿದೆ.
ದಿಲ್ಲಿ ಸರಕಾರವು ಅಲ್ಲಿನ ಸರಕಾರಿ ಶಾಲೆಗಳಲ್ಲಿ ಅನುಷ್ಠಾನ ಮಾಡಿರುವ ‘ಹ್ಯಾಪಿನೆಸ್ ಕರ್ರಿಕ್ಯುಲಮ್’ ನಮ್ಮ ಮುಂದೆ ಮಾದರಿಯಾಗಿ ಇದೆ. ಅಲ್ಲಿನ ಸರಕಾರವು ಶಿಕ್ಷಕರನ್ನು ಈ ವಿಧಾನದಲ್ಲಿ ತರಬೇತಿಗೊಳಿಸಿದೆ. ಅದು ಹೆಚ್ಚು ಕೌಶಲ್ಯ ಆಧಾರಿತವಾದ ತರಬೇತಿಯಾಗಿದ್ದು ಮೌಲ್ಯಗಳ ಬಗ್ಗೆ ಅಷ್ಟೊಂದು ವಿವರವಾಗಿ ಚರ್ಚಿಸುವುದಿಲ್ಲ. ಆದರೆ ಕರ್ನಾಟಕ ಮಾದರಿ ಮೌಲ್ಯಶಿಕ್ಷಣದಲ್ಲಿ ಕೌಶಲ್ಯಗಳನ್ನೂ ಒಳಗೊಂಡರೆ ಅದು ಇಡೀ ಜಗತ್ತಿಗೆ ಒಂದು ಮಾದರಿ ಪಠ್ಯಕ್ರಮವಾಗುವುದರಲ್ಲಿ ಸಂಶಯವಿಲ್ಲ. ಏಕೆಂದರೆ, ಮೌಲ್ಯಗಳನ್ನು ಬೋಧಿಸಲು ನಮ್ಮ ನೆಲದಲ್ಲಿ ಪಂಪ, ಶರಣರು, ಬುದ್ಧ, ದಾಸರು, ಕುವೆಂಪು, ಅಕ್ಕ ಮುಂತಾದವರ ಸಿದ್ಧ ಪಠ್ಯಗಳಿವೆ. ಅವುಗಳನ್ನು ಇಂದಿನ ಸಾಮಾಜಿಕ ಪರಿಸರದ ಸ್ಥಿತಿಗತಿಗಳಿಗೆ ಮುಖಾಮುಖಿಯಾಗಿಸಿ ಸಂವಾದಿಸುವ ಪಠ್ಯಕ್ರಮಗಳಾಗಿ ಬದಲಾಯಿಸಬೇಕು.