ಸ್ವಾತಂತ್ರ್ಯ ಹೋರಾಟದಲ್ಲಿ ಏಕತೆ, ಸೌಹಾರ್ದದ ನಿಲುವು ಗಟ್ಟಿಗೊಳಿಸಿದ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನ
ಭಾರತವೆಂದರೆ ಬಾಪೂ, ಬಾಪೂ ಎಂದರೆ ಗಾಂಧೀಜಿ..ಇದು ಗಾಂಧಿ ಭಾರತ. ಸ್ವಾತಂತ್ರ್ಯ, ಸತ್ಯ, ಅಹಿಂಸೆ, ಸೌಹಾರ್ದ, ಸಮಾನತೆ ಇವೆಲ್ಲ ಒಂದ ಕ್ಕೊಂದು ಬೆರೆತು, ಒಂದನ್ನು ಹೊರತು ಪಡಿಸಿ ಮತ್ತೊಂದಿಲ್ಲ ಎಂಬಂತೆ ಜನಮಾನಸವನ್ನು ಬೃಹತ್ ಪ್ರಮಾಣದಲ್ಲಿ ಅಣಿಗೊಳಿಸಿ, ಅವರನ್ನು ಕ್ರಿಯೆಗೆ ತೊಡಗಿಸಿ ಜಗತ್ತಿಗೆ ಮಾದರಿಯಾಗುವ ರೀತಿಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಶ್ರೇಯಸ್ಸು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರಿಗೆ ಸಲ್ಲುತ್ತದೆ. ಅವರು ತೋರಿದ ಸತ್ಯ, ಅಹಿಂಸೆ, ಸತ್ಯಾಗ್ರಹದ ಹಾದಿ ಬ್ರಿಟಿಷ್ ವಸಾಹತುಶಾಹಿ ಸಾಮ್ರಾಜ್ಯಕ್ಕೊಳಪಟ್ಟಿದ್ದ ಅನೇಕ ರಾಷ್ಟ್ರಗಳ ಪಾಲಿನ ಹೋರಾಟಕ್ಕೆ ಕೈಮರವಾಗಿ ಹಾದಿ ಬೆಳಕಾಯಿತು.
ಖಾದಿ, ಅಹಿಂಸೆ, ಸ್ವದೇಶಿ, ಸ್ವಾವಲಂಬನೆ ಎಂಬ ಮೂಲಮಂತ್ರಗಳಿಗೆ ಗಟ್ಟಿಯಾಗಿ ಅಂಟಿಕೊಂಡು ಬಲಾಢ್ಯ ಬ್ರಿಟಿಷರನ್ನು ಭಾರತದಿಂದ ಕಾಲ್ದೆಗೆಯುವಂತೆ ಮಾಡಲು ಗುಜರಾತಿನ ಕಡಲತೀರದ ಪೋರಬಂದರಿನ ಮೋಹನದಾಸ್ ಕರಮಚಂದ್ ಗಾಂಧಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯಾಗುವ ಎತ್ತರಕ್ಕೆ ಬೆಳೆದ ದಾರಿ ಸುಗಮವಾದುದಲ್ಲ. ಅದು ಹಣತೆಯೊಂದು ತನ್ನನ್ನು ಸುಟ್ಟುಕೊಂಡು ಬೆಳಕು ನೀಡಿದಂತಹ ಶಕ್ತಿ, ಚಂದನದ ಕೊರಡೊಂದು ತನ್ನನ್ನು ತಾನು ತೇಯ್ದುಕೊಂಡು ಪರಿಮಳ ಹರಡುವಂತಹ ಚುಂಬಕ ವ್ಯಕ್ತಿತ್ವ. ತಾನು ಬಿಸಿಲನುಂಡು ನೆರಳನೀಯುವ ಮಹಾನ್ ವೃಕ್ಷದಂತಹ ಘನ ಚೇತನ ಮಹಾತ್ಮಾಜಿಯವರದ್ದು.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟವನ್ನು ಎಲ್ಲ ಜನಸಾಮಾನ್ಯರ ಬಳಿಗೆ ಒಯ್ದು ಯಶಸ್ವಿಯಾಗಿ ಮುನ್ನಡೆಸಿದ ಶ್ರೇಯಸ್ಸು ಮಹಾತ್ಮಾ ಗಾಂಧೀಜಿಯವರಿಗೆ ಸಲ್ಲುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾಂತೀಯ ಶಾಸನ ಸಭೆಗಳಿಗೆ ಪ್ರವೇಶಿಸದೆ ಹೊರಗಿನಿಂದಲೇ ಗಾಂಧೀಜಿ ನೇತೃತ್ವದಲ್ಲಿ ಕಾಂಗ್ರೆಸಿಗರು ಹೋರಾಡುತ್ತಿದ್ದರು. ಸ್ವಾತಂತ್ರ್ಯ ಹೋರಾಟವೆಂದರೆ ಕಾಂಗ್ರೆಸ್, ಕಾಂಗ್ರೆಸಿಗರು ಎಂದರೆ ಚಳವಳಿಗಾರರು ಎಂಬಷ್ಟು ಗಾಢವಾಗಿ ಅವು ಒಂದರೊಳಗೊಂದು ಬೆರೆತಿದ್ದವು, ಪರಸ್ಪರ ಪರ್ಯಾಯ ಪದಗಳೆನಿಸಿದ್ದವು.
ಸ್ವಾತಂತ್ರ್ಯ ಪೂರ್ವ ಕಾಲಘಟ್ಟದಲ್ಲಿ ನಡೆದ ಚಳವಳಿಯ ಭಾಗವಾಗಿ ನಡೆದ ಕಾಂಗ್ರೆಸ್ ಅಧಿವೇಶನಗಳು ಪ್ರತಿವರ್ಷ ನಡೆಯುತ್ತಿದ್ದವು. ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ 39ನೇ ಕಾಂಗ್ರೆಸ್ ಅಧಿವೇಶನವು ಅವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನ ಎಂಬ ಹಿರಿಮೆಗೆ ಪಾತ್ರವಾಗಿದೆ. ಇತಿಹಾಸದ ಈ ಹೆಮ್ಮೆಯ ಘಟನೆಗೆ ಈಗ ನೂರು ವರ್ಷಗಳು ಪೂರ್ಣಗೊಂಡಿವೆ. ಶತಮಾನೋತ್ಸವದ ಈ ಸಂಭ್ರಮವನ್ನು ‘ಗಾಂಧಿ ಭಾರತ’ ಹೆಸರಿನಡಿ ವರ್ಷವಿಡೀ ರಾಜ್ಯದಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ. ಈ ಮೂಲಕ ಗಾಂಧೀಜಿಯವರ ವಿಚಾರಧಾರೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಚಿಂತನೆಗಳನ್ನು ಹೊಸಪೀಳಿಗೆಗೆ ದಾಟಿಸುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಲು ಮುಂದಾಗಿದೆ.
ಹಲವು ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾದ 1924ರ ಅಧಿವೇಶನ
1924ರ ಡಿಸೆಂಬರ್ 26 ಹಾಗೂ 27ರಂದು ಬೆಳಗಾವಿಯ ಟಿಳಕವಾಡಿಯ ಈಗಿನ ವೀರಸೌಧ ಇರುವ ಪ್ರದೇಶದಲ್ಲಿ ಆಗ ಸುಮಾರು 80 ಎಕರೆಯಷ್ಟು ವಿಶಾಲವಾದ ಮೈದಾನವನ್ನು ಅಧಿವೇಶನಕ್ಕೆ ಅಣಿಗೊಳಿಸಲಾಗಿತ್ತು. ಆವರಣಕ್ಕೆ ‘ವಿಜಯನಗರ’ ಎಂಬ ಹೆಸರನ್ನು ಇರಿಸಿ, ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಗೋಪುರದ ಮಾದರಿಯಲ್ಲಿ 70 ಅಡಿ ಎತ್ತರದ ಬೃಹತ್ ದ್ವಾರವನ್ನು ಮುಂಬೈನಲ್ಲಿ ನೆಲೆಸಿದ್ದ ಕನ್ನಡದ ಪ್ರತಿಭಾವಂತ ಕಲಾವಿದರಿಂದ ಕೂಡಿದ್ದ ಶ್ರೀನಿವಾಸ್ ಆ್ಯಂಡ್ ಕಂಪೆನಿ ಆಕರ್ಷಕವಾಗಿ ನಿರ್ಮಿಸಿ, ವಿದ್ಯುದ್ದೀಪಾಲಂಕಾರ ಮಾಡಿತ್ತು. ಎಂ ಆ್ಯಂಡ್ ಎಸ್‌ಎಂ (ಮದ್ರಾಸ್ ಆ್ಯಂಡ್ ಸದರ್ನ್ ಮರಾಠಾ) ರೈಲ್ವೆಯು ಅಧಿವೇಶನ ಆವರಣದ ಸಮೀಪ ತಾತ್ಕಾಲಿಕ ನಿಲ್ದಾಣ ವ್ಯವಸ್ಥೆ ಕಲ್ಪಿಸಿತ್ತು. ಅಧಿವೇಶನಕ್ಕೆ ಬಂದ ಜನರಿಗೆ ನೀರಿನ ಸೌಕರ್ಯಕ್ಕಾಗಿ ತೋಡಿದ್ದ ಬಾವಿಗೆ ಆಗ ಪಂಪಾ ಸರೋವರ ಎಂಬ ಹೆಸರು ನೀಡಲಾಗಿತ್ತು ಈಗ ಆ ಬಾವಿ ಮಾತ್ರ ಉಳಿದಿದ್ದು ‘ಕಾಂಗ್ರೆಸ್ ಬಾವಿ’ ಎಂದೇ ಸ್ಥಳೀಯರಿಂದ ಕರೆಯಲ್ಪಡುತ್ತಿದೆ.
ಸರಕಾರವು 1924ರ ಕಾಂಗ್ರೆಸ್ ಅಧಿವೇಶನದ ನೆನಪಿಗಾಗಿ ಆಯೋಜಿಸುತ್ತಿರುವ ಗಾಂಧಿ ಭಾರತ ಭಾಗವಾಗಿ ವೀರಸೌಧದ ನವೀಕರಣ, ಕಾಂಗ್ರೆಸ್ ರಸ್ತೆ, ರೈಲು ಮಾರ್ಗದ ಕಾಂಪೌಂಡ್ ಉದ್ದಕ್ಕೂ ಸ್ವಾತಂತ್ರ್ಯ ಚಳವಳಿಯನ್ನು ಬಿಂಬಿಸುವ ಉಬ್ಬು ಶಿಲ್ಪಗಳನ್ನು ನಿರ್ಮಿಸುತ್ತಿದೆ. ಹಂಪಿಯ ವಿರೂಪಾಕ್ಷೇಶ್ವರ ಗೋಪುರದ ಮಾದರಿಯನ್ನು ಮತ್ತೊಮ್ಮೆ ಕೃತಕವಾಗಿ ನಿರ್ಮಿಸಿ, ಇತಿಹಾಸವನ್ನು ಪುನರ್ ಮನನ ಮಾಡುತ್ತಿದೆ.
ಬೆಳಗಾವಿಯ ಆಯ್ಕೆ-ಕನ್ನಡ ಭಾಷಿಕ ಪ್ರದೇಶಗಳಿಂದ ದೊರೆತ ಸಹಕಾರ-ಬೆಂಬಲ
1924ರ ಸಮಯದಲ್ಲಿ ಮುಂಬೈ ಪ್ರಾಂತಕ್ಕೆ ಸೇರಿದ್ದ ಬೆಳಗಾವಿಯು ಸುಮಾರು 30 ಸಾವಿರ ಜನಸಂಖ್ಯೆ ಹೊಂದಿದ್ದ ಸಣ್ಣ ಪಟ್ಟಣ. ರಾಷ್ಟ್ರೀಯ ಅಧಿವೇಶನ ಸಂಘಟನೆಗೆ ಬೇಕಾದ ಮೂಲ ಸೌಕರ್ಯಗಳು ಕೂಡ ಅಷ್ಟಾಗಿ ಇರಲಿಲ್ಲ. ಆದರೆ ಕಾಂಗ್ರೆಸ್, ಹೋಂ ರೂಲ್ ಲೀಗ್, ಕರ್ನಾಟಕ ಏಕೀಕರಣದ ಬಗ್ಗೆ ಚಿಂತನೆ ನಡೆಸುತ್ತಿದ್ದ ಗಂಗಾಧರರಾವ್ ದೇಶಪಾಂಡೆ ಸೇರಿದಂತೆ ಹಲವು ಉತ್ಸಾಹಿ ನಾಯಕರ ಪಡೆ ಇಲ್ಲಿ ಇತ್ತು. 1916ರಲ್ಲಿ ಮುಂಬೈ ಪ್ರಾಂತ ಕಾಂಗ್ರೆಸ್‌ನ 16ನೇ ಅಧಿವೇಶನ, ಬಾಲಗಂಗಾಧರ ತಿಲಕರಿಂದ ಹೋಂ ರೂಲ್ ಲೀಗ್ ಇಲ್ಲಿಯೇ ಸ್ಥಾಪನೆಯಾಗಿದ್ದ ಹಿನ್ನೆಲೆ ಈ ಪುಟ್ಟ ಪಟ್ಟಣಕ್ಕೆ ಇತ್ತು. ಈ ಮೊದಲಾದ ಅಂಶಗಳನ್ನು ಆಧರಿಸಿ ಬೆಳಗಾವಿಯಲ್ಲಿ 39ನೇ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಆಯೋಜಿಸುವ ನಿರ್ಣಯವನ್ನು ಆಗಿನ ಹೋರಾಟಗಾರರ ಉನ್ನತ ಸಮಿತಿ ಕೈಗೊಂಡಿತು. 1924 ರ ಅಧಿವೇಶನಕ್ಕೆ ಖಾದಿ ಹಾಗೂ ಸ್ವದೇಶಿ ಚಾಪೆಯ ಸುಂದರ ಸಭಾ ಮಂಟಪ ನಿರ್ಮಿಸಲಾಗಿತ್ತು.
ರಾಜಕೀಯ ಹೋರಾಟಗಾರರು ಹಾಗೂ ಕಾರ್ಯಕರ್ತರ ನ್ನೊಳಗೊಂಡ ಸುಮಾರು 16 ಉಪಸಮಿತಿಗಳನ್ನು ರಚಿಸಿ ಅಚ್ಚುಕಟ್ಟಾದ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು.
ಅಸ್ಪಶ್ಯತೆ ನಿವಾರಣೆಗೆ ಸಂಕಲ್ಪ
ಅಸ್ಪಶ್ಯತೆ ನಿವಾರಣೆಯಾಗದೆ ದೇಶದ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಕೇವಲ ರಾಜಕೀಯ ಹೋರಾಟ ಮಾಡಿದರೆ ಸಾಲದು, ಸಾಮಾಜಿಕ ಸುಧಾರಣೆಗೂ ಶ್ರಮಿಸಬೇಕು ಎಂಬ ಧ್ಯೇಯದೊಂದಿಗೆ ಹೋರಾಟ ಚುರುಕುಗೊಳಿಸಲು ಬಯಸಿದ್ದ ಮಹಾತ್ಮಾ ಗಾಂಧೀಜಿಯವರು ಬ್ರಾಹ್ಮಣ ಹಾಗೂ ಬ್ರಾಹ್ಮಣೇತರರ ನಡುವಿನ ಭೇದ ಭಾವಗಳನ್ನು ತೊಡೆದುಹಾಕುವ ಪ್ರಯತ್ನಗಳನ್ನು ಮಾಡಿದರು. ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೂ ಮುನ್ನ ಆಯೋಜಕರಲ್ಲಿ ಅವರು ನೈರ್ಮಲ್ಯ, ಶುಚಿತ್ವ, ಶೌಚಾಲಯಗಳ ನಿರ್ವಹಣೆಯು ಕೇವಲ ನಗರಪಾಲಿಕೆಯ ಭಂಗೀ ಜನರಿಗೆ (ಪೌರ ಕಾರ್ಮಿಕರು) ಜವಾಬ್ದಾರಿಯಾಗಬಾರದು. ಅವರ ಜೊತೆಗೆ ವಿಶೇಷವಾಗಿ ಮೇಲ್ವರ್ಗದ ಯುವಕರು ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದ ಹಿನ್ನೆಲೆಯಲ್ಲಿ, ಸ್ಥಳೀಯ ಸುಮಾರು ಎಪ್ಪತ್ತೈದು ಯುವಕರು ಕಕ್ಕಸು, ಚರಂಡಿ, ಬಚ್ಚಲುಗಳ ಸ್ವಚ್ಛತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇವರಲ್ಲಿ ಡಿ.ಬಿ.ಕಾಲೇಲಕರ್, ವಾಮನರಾವ್ ದೇಸಾಯಿ ಬಿದರಿ ಅವರಂತಹ ಬ್ರಾಹ್ಮಣ ಯುವಕರ ಸಂಖ್ಯೆಯೇ ಅಧಿಕವಾಗಿದ್ದುದು ವಿಶೇಷವಾಗಿತ್ತು ಎಂಬುದನ್ನು ಹಿರಿಯ ಪತ್ರಕರ್ತ ಮನೋಜ್ ಪಾಟೀಲ ಅವರು ಹೊರತಂದಿರುವ ‘ಮಹಾತ್ಮಾ ಗಾಂಧೀಜಿ ಬೆಳಗಾವಿ 1924’ ಅಮೂಲ್ಯ ಕೃತಿಯಲ್ಲಿ ದಾಖಲಿಸಿದ್ದಾರೆ.
ಹಿಂದೂಸ್ಥಾನಿ ಸೇವಾದಳದ ಸ್ವಯಂಸೇವಕರ ಸಂಘಟನೆ
1924ರ ಜನವರಿಯಲ್ಲಿ ಸ್ಥಾಪನೆಯಾಗಿದ್ದ ಹಿಂದೂಸ್ಥಾನಿ ಸೇವಾ ದಳವು ಹುಬ್ಬಳ್ಳಿಯ ಡಾ.ನಾರಾಯಣ ಸುಬ್ಬರಾವ್ ಹರ್ಡೀಕರ್ ಅವರ ನೇತೃತ್ವದಲ್ಲಿ ಹೆಚ್ಚು ಸ್ವಯಂ ಸೇವಕರನ್ನು ಸಂಘಟಿಸಿ, ತರಬೇತಿ ನೀಡಿದ್ದು ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸಮಯದಲ್ಲಿ ಎಂಬುದು ಮಹತ್ವದ ಸಂಗತಿಯಾಗಿದೆ. 141 ಸಹಾಯಕಿಯರು, 817 ಸಹಾಯಕರು ಸೇರಿ ಒಟ್ಟು 1,156 ಸ್ವಯಂ ಸೇವಕರು ಅಧಿವೇಶನದ ಯಶಸ್ವಿಗೆ ಪೂರ್ಣ ಪ್ರಮಾಣದಲ್ಲಿ ದುಡಿದಿದ್ದರು. ಖಾಕಿ ಚೊಣ್ಣ (ಹಾಫ್ ಪ್ಯಾಂಟ್) ಧರಿಸಿದ್ದ ಪುರುಷ ಹಾಗೂ ಕಲಾದಗಿಯ ಕರಿ ಬಣ್ಣದ ಸೀರೆ ಧರಿಸಿದ್ದ ಮಹಿಳೆಯರು ಉತ್ಸಾಹದಿಂದ ಸೇವೆಗೈದರು. ಮುಂದೆ ಇದೇ ಸಂಘಟನೆ ‘ಕಾಂಗ್ರೆಸ್ ಸೇವಾ ದಳ’ ಎಂದು ಹೆಸರು ಬದಲಿಸಿಕೊಂಡಿತು.
ಸರಳತೆಯ ಸಮಾವೇಶ
ಸರಳತೆಯನ್ನೇ ಜೀವನದ ಉಸಿರಾಗಿಸಿಕೊಂಡಿದ್ದ ಮಹಾತ್ಮಾ ಗಾಂಧೀಜಿಯವರು ಅಧಿವೇಶನಕ್ಕೆ ಅನಗತ್ಯ ಖರ್ಚುಗಳನ್ನು ಮಾಡಬಾರದು ಎಂಬ ಸ್ವಯಂಪ್ರೇರಿತ ನಿಯಮ ಹಾಕಿಕೊಂಡಿದ್ದರು. ಅಧಿವೇಶನಕ್ಕಾಗಿ ಸ್ವಾಗತ ಸಮಿತಿ ಸದಸ್ಯರ ಶುಲ್ಕ, ಪ್ರತಿನಿಧಿಗಳ ಶುಲ್ಕ, ಸಾರ್ವಜನಿಕ ರಿಂದ ಬಂದ ನೆರವು, ವಿವಿಧ ವಸ್ತು ಪ್ರದರ್ಶನಗಳ ಮೂಲಕ ಸಂಗ್ರಹವಾಗಿದ್ದ 2 ಲಕ್ಷ 20 ಸಾವಿರ 829 ರೂ.ಗಳಲ್ಲಿ 772 ರೂ. 1 ಆಣೆ 6 ಪೈಸೆ ಉಳಿತಾಯವಾಗಿತ್ತು. ಮಹಾತ್ಮಾ ಗಾಂಧೀಜಿಯವರು ‘‘ಇಷ್ಟು ಅಧಿಕ ಪ್ರಮಾಣದ ಖರ್ಚು ಮಾಡಬೇಕಿರಲಿಲ್ಲ. ಕನ್ನಡಿಗರ ಉದಾರ ಹೃದಯವನ್ನು ಟೀಕಿಸುವುದಿಲ್ಲ, ಮುಂಬರುವ ದಿನಗಳಲ್ಲಿ ಇದಕ್ಕಿಂತ ಕಡಿಮೆ ಖರ್ಚಿನಲ್ಲಿ ಅಧಿವೇಶನಗಳು ನಡೆಯಲಿ’’ ಎಂದು ಆಶಯ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಧ್ಯಕ್ಷರಿಗಾಗಿ ನಿರ್ಮಿಸಿದ್ದ ಖಾದಿಯ ಕುಟೀರದಲ್ಲಿ ಮಾಡಿದ ಏರ್ಪಾಟುಗಳನ್ನು ಕಂಡು ಅದನ್ನು ಗಾಂಧೀಜಿ ‘ಖಾದಿ ಅರಮನೆ’ ಎಂದು ಕರೆದಿದ್ದರು.
ಅಧಿವೇಶನಕ್ಕೆ ಬಂದ ಪ್ರತಿನಿಧಿಗಳಿಗೆ ವಿಶಾಲ ಭೋಜನಗೃಹ ನಿರ್ಮಿಸಿ, ಖರೀದಿಸಿದ ದರದಲ್ಲಿಯೇ ದವಸ, ಧಾನ್ಯಗಳನ್ನು ಪೂರೈಸುವ (ಉಚಿತವಾಗಿಯಲ್ಲ!) ವ್ಯವಸ್ಥೆ ಮಾಡಲಾಗಿತ್ತು.
ಕನ್ನಡ ಪ್ರಾಂತಕ್ಕೆ ಕಾಂಗ್ರೆಸ್ ಮನ್ನಣೆ
‘‘ಕರ್ನಾಟಕ ಅಥವಾ ಕನ್ನಡ ಭಾಷಿಕರು ಅಧಿಕ ಸಂಖ್ಯೆಯಲ್ಲಿ ಇರುವ ಕನ್ನಡ ಪ್ರದೇಶವು ಒಂದು ಪ್ರಾಂತ ಎಂಬ ಮನ್ನಣೆಯನ್ನು 192ರ ಕಾಂಗ್ರೆಸ್ ಅಧಿವೇಶನ ನೀಡಿತು’’ ಎಂದು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಗಂಗಾಧರರಾವ್ ದೇಶಪಾಂಡೆ ತಮ್ಮ ಸ್ವಾಗತ ಭಾಷಣದಲ್ಲಿ ದಾಖಲಿಸಿದ್ದಾರೆ.
1924ರ ಡಿಸೆಂಬರ್ 26 ಶುಕ್ರವಾರ ಮೊದಲ ದಿನದ ಕಾರ್ಯಕ್ರಮಗಳು ವಂದೇ ಮಾತರಂ ಗೀತೆಯಿಂದ ಪ್ರಾರಂಭ ವಾಯಿತು. ನಂತರ ಕವಿಭೂಷಣ ಬೆಟಗೇರಿ ಕೃಷ್ಣಶರ್ಮರು ಬರೆದ ಸ್ವಾಗತ ಗೀತೆ ಹಾಗೂ ಶಾಂತಕವಿ ಎಂದೇ ಹೆಸರಾಗಿರುವ ಸಕ್ಕರಿ ಬಾಳಾಚಾರ್ಯರು ಬರೆದ ಪದ್ಯ ಹೀಗೆ ಎರಡು ಕನ್ನಡ ಗೀತೆಗಳು ಆ ಭವ್ಯ ವೇದಿಕೆಯಲ್ಲಿ ಅನುರಣಿಸಿದ್ದವು. ವೀಣೆ ಶೇಷಣ್ಣನವರು ಸೇರಿದಂತೆ ಅನೇಕ ಪ್ರಸಿದ್ಧ ಗಾಯಕರು ಇಲ್ಲಿ ಹಾಡಿದ್ದರು.
ಅಧಿವೇಶನದ ಎರಡನೇ ದಿನವಾದ 1924ರ ಡಿಸೆಂಬರ್ 27ರಂದು ವಂದೇ ಮಾತರಂ ಗೀತೆಯ ನಂತರ, ಗದುಗಿನ ಹುಯಿಲಗೋಳ ನಾರಾಯಣರಾಯರು ಬರೆದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆ ಹಾಡಲ್ಪಟ್ಟಿತು. ಈಗ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಮಾತ್ರವಲ್ಲ ಕನ್ನಡಿಗರ ಏಕತೆಯ ಪ್ರಜ್ಞೆ ಎಚ್ಚರಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಗೆ ನೂರು ವರ್ಷ ತುಂಬಿದ ಗಳಿಗೆಯೂ ಹೌದು ಎಂಬುದಕ್ಕೆ ನಾವೆಲ್ಲ ಕನ್ನಡಿಗರು ಅಭಿಮಾನಪಡಬೇಕು.
ಏಕತಾ ಸಮ್ಮೇಳನ
ಬೆಳಗಾವಿಯಲ್ಲಿ 1924ರಲ್ಲಿ ನಡೆದ 39ನೇ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನಕ್ಕೆ ಅಂದು ದೇಶದ ಸ್ವಾತಂತ್ರ್ಯಕ್ಕಾಗಿ, ಸ್ವರಾಜ್ಯ ಸ್ಥಾಪನೆಗಾಗಿ, ಸರ್ವ ಜನರ ಸ್ವಾಭಿಮಾನಕ್ಕಾಗಿ ಹೋರಾಡುತ್ತಿ ದ್ದವರನ್ನು ಒಂದೇ ವಿಶಾಲ ವೇದಿಕೆಯಡಿ ಮರಳಿ ಕರೆತಂದ ಹೆಗ್ಗಳಿಕೆ ಇದೆ. ವಿವಿಧ ಅಭಿಪ್ರಾಯ, ನಿಲುವುಗಳಿಂದಾಗಿ ಕಾಂಗ್ರೆಸ್‌ನಿಂದ ದೂರ ಇದ್ದವರು, ಸ್ವಾತಂತ್ರ್ಯ ಹೋರಾಟದಿಂದ ದೂರ ಉಳಿದವರು ಈ ಅಧಿವೇಶನದ ನಂತರ ಮನಃಪರಿವರ್ತನೆಗೊಂಡು ಭಾರತ ರಾಷ್ಟ್ರೀಯ ಕಾಂಗ್ರೆಸ್‌ಗೆ ಮರಳಲಾರಂಭಿಸಿದರು. ಪ್ರಾಂತೀಯ ಶಾಸನ ಸಭೆಗಳಿಗೆ ಸ್ಪರ್ಧಿಸುವ ವಿಷಯದಲ್ಲಿ ಮುನಿಸಿಕೊಂಡಿದ್ದ ಸ್ವರಾಜ್ಯ ಪಕ್ಷದವರು ಮತ್ತು ಮುಸ್ಲಿಮರನ್ನು ಪುನಃ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಒಂದುಗೂಡಿಸುವಲ್ಲಿ ಮಹಾತ್ಮಾ ಗಾಂಧೀಜಿಯವರು ಯಶಸ್ವಿಯಾಗಿದ್ದರಿಂದ, ಈ ಅಧಿವೇಶನವು ‘ಏಕತಾ ಸಮ್ಮೇಳನ’ ಎಂದು ಇತಿಹಾಸದ ಪುಟಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಭಾರತದ ಈ ಚಾರಿತ್ರಿಕ ಘಟನೆಗೆ ನೂರರ ವಸಂತ ಪೂರೈಸಿದ ಸಂದರ್ಭದಲ್ಲಿ ಒಂದು ಶತಮಾನದ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿಚಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಗಾಂಧೀಜಿ ಎಂಬ ಹೆಸರು ಭಾರತವಷ್ಟೇ ಅಲ್ಲ ಅನೇಕ ರಾಷ್ಟ್ರಗಳ ಪಾಲಿಗೆ ಇಂದಿಗೂ ಚೈತನ್ಯ, ವಿಮೋಚನೆಯ ಬೆಳಕಾಗಿದೆ. ಮಹಾತ್ಮನ ನೆನಪಿನ ‘ಗಾಂಧಿ ಭಾರತ’ ಕಾರ್ಯಕ್ರಮ 2024ರ ಡಿಸೆಂಬರ್ 26ರಿಂದ 2025 ಅಕ್ಟೋಬರ್ 2ರವರೆಗೆ ವೈವಿಧ್ಯಮಯವಾಗಿ ರಾಜ್ಯದಾದ್ಯಂತ ನಡೆಯಲಿದೆ. ಮಕ್ಕಳು, ಯುವಜನರ ಮನಗಳಲ್ಲಿ ನೈತಿಕ ಮೌಲ್ಯ, ಸದಾಶಯಗಳನ್ನು ಬಿತ್ತುವ ಕಾರ್ಯಕ್ರಮಗಳನ್ನು ರಾಜ್ಯ ಸರಕಾರ ಆಯೋಜಿಸುತ್ತಿದೆ.
ಅಧಿವೇಶನದಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ನೇತಾರರು
ದೇಶಬಂಧು ಚಿತ್ತರಂಜನದಾಸ್, ಮೋತಿಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ, ನೇತಾಜಿ ಸುಭಾಸ್ ಚಂದ್ರ ಬೋಸ್, ಇ.ವಿ.ರಾಮಸ್ವಾಮಿ ನಾಯ್ಕರ್(ಪೆರಿಯಾರ್), ಕಾವ್ಯಕಂಠಂ ಗಣಪತಿಶಾಸ್ತ್ರಿ, ಆರ್.ಕೆ. ಷಣ್ಮುಗಂ ಚೆಟ್ಟಿ, ಟಿ.ಪ್ರಕಾಶಂ, ಶುಐಬ್ ಖುರೇಷಿ, ಬಾರ್ಜೋರಜಿ ಪ್ರೇಮಜಿ ಭರೂಚಾ, ಸೇಠ್ ರೇವಾಶಂಕರ್ ಜಗಜೀವನ್ ಝವೇರಿ, ಜಮ್ನಾಲಾಲ್ ಬಜಾಜ್, ಡಾ.ಸೈಫುದ್ದೀನ್ ಕಿಚಲೂ, ಲಾಲಾ ಲಜಪತರಾಯ್ , ಮೌಲಾನಾ ಮುಹಮ್ಮದ್ ಅಲಿ, ಮೌಲಾನಾ ಅಬುಲ್ ಕಲಾಂ ಆಝಾದ್, ಸಿ.ರಾಜಗೋಪಾಲಾಚಾರಿ(ರಾಜಾಜಿ), ಬಾಬು ರಾಜೇಂದ್ರ ಪ್ರಸಾದ್, ಪಂಡಿತ್ ಮದನ ಮೋಹನ ಮಾಳವೀಯ, ಮೌಲಾನಾ ಹಝರತ್ ಮೊಹಾನಿ, ವಿಠ್ಠಲಭಾಯಿ ಪಟೇಲ್, ಸರೋಜಿನಿ ನಾಯ್ಡು, ಎಸ್.ಎ.ಎಸ್.ತಯಬ್ಜಿ, ಬ್ಯಾಂಕರ್ ಎಸ್.ಶ್ರೀನಿವಾಸ ಅಯ್ಯಂಗಾರ್, ಮೌಲಾನಾ ಶೌಕತ್ ಅಲಿ, ಮೌಲಾನಾ ಜಾಫರ್ ಅಲಿ, ಮೌಲಾನಾ ಮುಹಮ್ಮದ್ ಅಲಿ, ಎಸ್.ವಿ. ಕೌಜಲಗಿ, ಎನ್.ಸಿ. ಕೇಳ್ಕರ್, ಕೆ.ಎಚ್. ಮುದವೀಡಕರ್, ಎಲ್.ಬಿ. ಭೋಪಟಕರ್, ಶೈಲೇಶನಾಥ್ ಬಿಷ್ಟ, ಬಿ. ಶಿವರಾವ್, ಬಾಬು ಶಿವಪ್ರಸಾದ ಗುಪ್ತಾ, ಜನಾಬ್ ಯಾಕೂಬ್ ಹುಸೇನ್, ಡಾ.ಮುಹಮ್ಮದ್ ಜಮ್ನಾದಾಸ್ ಮೆಹ್ತಾ, ಡಾ.ಯು.ರಾಮರಾವ್, ಸಿ.ಆರ್.ರೆಡ್ಡಿ, ಅಸಫ್ ಅಲಿ, ಶ್ರೀಮತಿ ಮುಹಮ್ಮದ್ ಅಲಿ, ಕುಮಾರಿ ಗುಲ್ನಾರ್ ಮುಹಮ್ಮದ್ ಅಲಿ, ಸ್ವಾಮಿ ಶ್ರದ್ಧಾನಂದ, ಜಿ. ಸರ್ದಾರ್ ಮಂಗಲ್ ಸಿಂಗ್, ಸಿ.ಬಿ.ವೆಂಕಟರಮಣ ಅಯ್ಯಂಗಾರ್ ಸೇರಿದಂತೆ ಸಮಸ್ತ ಭಾರತವನ್ನು ಪ್ರತಿನಿಧಿಸುತ್ತಿದ್ದ ಸಹಸ್ರಾರು ಸ್ವಾತಂತ್ರ್ಯ ಯೋಧರು ಬೆಳಗಾವಿಯ ವೀರಭೂಮಿಯಲ್ಲಿ ನೆರೆದಿದ್ದರು ಎಂಬುದು ಇಂದಿಗೂ ನಮ್ಮೆಲ್ಲರಲ್ಲಿ ಸಂಚಲನ ಉಂಟು ಮಾಡುವ, ರಾಷ್ಟ್ರದ ಸಮಗ್ರತೆ, ಸೌಹಾರ್ದದ ಚಿಂತನೆಗಳ ಮರು ಜಾಗೃತಿಗೆ ಪ್ರೇರಣಾದಾಯಿನಿಯಾಗಿದೆ.