ಕನ್ನಡ ಸಾಹಿತ್ಯ ಸಮ್ಮೇಳನ: ಆಡದೆ ಹೋದ ಮಾತುಗಳು

Update: 2024-12-26 07:27 GMT

ಈ ಯುಗದಲ್ಲಿ ಅಧಿಕಾರದ ರಾಜಕಾರಣಕ್ಕಾಗಿ ಬೌದ್ಧಿಕ ಸ್ವಾತಂತ್ರ್ಯ, ವ್ಯಕ್ತಿಗತ ಸ್ವಾತಂತ್ರ್ಯ ಹಾಗೂ ನೈತಿಕ ಮೌಲ್ಯಗಳನ್ನು ಬಲಿಕೊಡುವ ಪ್ರವೃತ್ತಿಯು ದುರದೃಷ್ಟಕರ ಸಂಗತಿ. ನೈತಿಕ ಮಟ್ಟವು ಅತ್ಯಂತ ಕೆಳ ಮಟ್ಟದಲ್ಲಿದೆ ಮತ್ತು ಇಂತಹವುಗಳನ್ನು ಮತ್ತೆ ಮತ್ತೆ ಸಮರ್ಥಿಸಿಕೊಳ್ಳಲಾಗುತ್ತಿದೆ. ಈ ಸಮರ್ಥನೆಯ ಮೂಲಕ ಸಂಘಟನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಇಂತಹ ದಾಳಿಗಳು ನಡೆದಾಗಲೆಲ್ಲ ಚಳವಳಿಗಳು ಸೃಜನಾತ್ಮಕತೆಯನ್ನು ಕಳೆದುಕೊಳ್ಳುತ್ತಿವೆ. ಊರಿಂದೂರಿಗೆ ಕನ್ನಡದ ಬಾವುಟಗಳು, ಅರಿಶಿಣ-ಕುಂಕುಮ ಬಣ್ಣದ ಶಾಲುಗಳನ್ನು ಧರಿಸಿ ಕನ್ನಡದ ರಕ್ಷಣೆಯ ಹೆಸರಿನಲ್ಲಿರುವ ರಕ್ಷಕರಿಗೆ ಕನ್ನಡ, ಕನ್ನಡಿಗ, ಕರ್ಣಾಟಕ ಎಂಬ ಮಾನಸ ಪ್ರದೇಶವನ್ನು ಇನ್ನೂ ಪರಿಚಯಿಸಬೇಕಿದೆ. ಕನ್ನಡವನ್ನು ಉಳಿಸಿ ಬೆಳೆಸುವುದು ಎಂದರೆ, ಕಾರ್ಯಾಲಯಗಳ ಮುಂದೆ ಜನರನ್ನು ನಿಲ್ಲಿಸಿ ಅಹವಾಲು ಸ್ವೀಕರಿಸುವುದಷ್ಟೇ ಅಲ್ಲ, ಕನ್ನಡ ಸಾಹಿತ್ಯ ಜಾಗತಿಕವಾಗಿಯೂ ಸರ್ವಧರ್ಮಗಳ ಜನರನ್ನು ಒಂದಾಗಿಸುವ ಸಾಮರ್ಥ್ಯವಿರುವ ಭಾಷೆ.

ಸಾಹಿತ್ಯ ಸಮ್ಮೇಳನಗಳು ನಾಡು, ನುಡಿ, ಸಂಸ್ಕೃತಿ, ಆಹಾರ ಮತ್ತು ಜನಜೀವನ, ರಾಜಕೀಯ, ಸಾಮಾಜಿಕ, ಭೌಗೋಳಿಕತೆಗಳ ಮೇಲೂ ಅರ್ಥಪೂರ್ಣ ಚರ್ಚೆಗಳಾಗಬೇಕು. ದುರಂತವೆಂದರೆ ಎರಡು ಸಾವಿರ ವರ್ಷಗಳ ಕನ್ನಡದ ಪರಂಪರೆಯನ್ನು ಅರಿಯದೆ ಇರುವವರೇ ಕನ್ನಡ ಸಾಹಿತ್ಯ ಪರಿಷತ್ತುಗಳಲ್ಲಿ ಇರುವ ಕಾರಣ, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ವಿವಿಧ ಧರ್ಮ, ಜಾತಿ ಮತಗಳ ಆಚರಣೆಗಳು, ವಚನ ಪರಂಪರೆ, ದಾಸಪರಂಪರೆ, ಸೂಫಿಗಳ, ತತ್ವಪದಕಾರರ, ನವ್ಯ, ಪ್ರಗತಿಶೀಲ, ದಲಿತ-ಬಂಡಾಯ ಸಾಹಿತ್ಯದವರೆಗೂ ಟಿಸಿಲುಗಳು ಹರಡಿಕೊಂಡಿರುವುದನ್ನು ಕಾಣಲಾರರು. ಬ್ರಿಟಿಷ್ ಅಧಿಕಾರಿಗಳಿಂದ ಹಿಡಿದು, ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನ ಧರ್ಮೀಯರಿಂದಲೂ ಕನ್ನಡವು ಬೆಳೆಯುತ್ತಲೇ ಬಂದಿದೆ. ಅಂತಹ ಕೆಲವು ಸಂಗತಿಗಳನ್ನು ಮೆಲುಕು ಹಾಕಬಹುದಾಗಿದೆ.

1. ಕನ್ನಡ ಶಾಲೆ ತೆರೆದ ವಾಲ್ಟರ್ ಎಲಿಯಟ್

ಕಿತ್ತೂರು ರಾಣಿ ಚೆನ್ನಮ್ಮ ಮೊದಲ ಬಾರಿ ಯುದ್ಧದಲ್ಲಿ ಗೆದ್ದಾಗ ಸೆರೆಯಾಳಾಗಿದ್ದ ವಾಲ್ಟರ್ ಎಲಿಯಟ್ ಎಂಬ ಬ್ರಿಟಿಷ್ ಅಧಿಕಾರಿ, ಸೆರೆವಾಸದಿಂದ ಹೊರಬಂದ ಮೇಲೆ ಮಾಡಿದ ಮೊತ್ತಮೊದಲ ಕೆಲಸವೆಂದರೆ ತನ್ನ ಸಂಬಳದಲ್ಲಿಯೇ ಕನ್ನಡ ಶಾಲೆಯನ್ನು ನಡೆಸಿದ್ದು. ಈ ಪ್ರಾಂತದ ಭಾಷೆ ಕನ್ನಡವೇ ಆಗಿದ್ದರಿಂದ ಕನ್ನಡವೇ ಶಿಕ್ಷಣ ಮಾಧ್ಯಮವಾಗಿರಬೇಕೆಂದು ಅಧಿಕಾರಿಗಳನ್ನು ಆತ ಒತ್ತಾಯಿಸಿದ.

2. ವಿಲಿಯಂ ಆಲನ್ ರಸೆಲ್ ಸಾಹೇಬರು

1865ರಷ್ಟೊತ್ತಿಗೆ ಧಾರವಾಡ ಭಾಗದ(ಮುಂಬೈ ಪ್ರಾಂತದ)ಶಿಕ್ಷಣಾಧಿಕಾರಿಯಾಗಿ ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಎಂ.ಎ.ಪದವಿ ಪಡೆದಿದ್ದ ವಿಲಿಯಂ ಆಲನ್ ರಸೆಲ್ ಎಂಬ ವ್ಯಕ್ತಿ ನೇಮಕವಾಗುತ್ತಾನೆ. ಧಾರವಾಡದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರ್ನಾಕ್ಯುಲರ್ ಶಾಲೆಗಳಲ್ಲಿ ಕನ್ನಡಬಲ್ಲ ಶಿಕ್ಷಕರಿಲ್ಲದ್ದನ್ನು ನೋಡಿ ಕನ್ನಡಿಗರ ನಿರಾಸಕ್ತಿಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾನೆ.ಆ ನಂತರ ವ್ರತ ಹಿಡಿದವನಂತೆ ಆತ ಕನ್ನಡ ಪುಸ್ತಕಗಳು,ಕನ್ನಡ ಶಿಕ್ಷಕರ ತರಬೇತಿ ಕೇಂದ್ರಗಳು ಮಾತ್ರವಲ್ಲ, ಕನ್ನಡ ಮುದ್ರಣದ ಅಕ್ಷರಗಳ ಮೊಳೆಗಳನ್ನು ತಯಾರು ಮಾಡುವ, ಮಾಡಿಸುವ ಕೆಲಸದಲ್ಲಿ ತೊಡಗುತ್ತಾನೆ.

3. ಸಕ್ರಿ ಭಾಳಾಚಾರ್ಯರು

ಶಾಂತಕವಿಯೆಂದು ಹೆಸರು ಮಾಡಿದ್ದ ಸಕ್ರಿ ಭಾಳಾಚಾರ್ಯರು ಕನ್ನಡ ನಾಟಕ ಬರೆದು ತಾಲೀಮು ಮಾಡಿಸುವುದನ್ನು ತಪ್ಪಿಸಲು ಅವರನ್ನು ಕೆಲ ಹಿತಾಸಕ್ತಿಗಳು ಒಂಭತ್ತು ಮೈಲಿ ದೂರದ ಶಾಲೆಗೆ ವರ್ಗ ಮಾಡಲಾಗುತ್ತದೆ. ಆದರೆ ಅವರು ಎಮ್ಮೆಯ ಮೇಲೆ ಕುಳಿತು ದಿನಾ ಸವಾರಿ ಮಾಡಿಕೊಂಡು ಬಂದು ಕನ್ನಡ ನಾಟಕದ ತಾಲೀಮನ್ನು ಮುಂದುವರಿಸುತ್ತಾರೆ. ಇದನ್ನು ತಿಳಿದ ಶಿಶುನಾಳ ಶರೀಫಜ್ಜ ‘‘ಇದು ಸಕ್ರಿಯಪ್ಪ...ನಿಜವಾದ ಸಕ್ರಿ’’ ಎಂದು ಶಬಾಸ್ ಗಿರಿ ಹೇಳುತ್ತಾರೆ.

4. ಬುಟ್ಟಿಯಲ್ಲಿ ಹೊತ್ತು ಪುಸ್ತಕ ಮಾರಿದ ಗಳಗನಾಥರು

ಸಾಮಾನ್ಯ ಶಾಲಾ ಮಾಸ್ತರರಾಗಿದ್ದ ವೆಂಕಟೇಶ್ ತಿರಕೋ ಕುಲಕರ್ಣಿ, ಹಾವೇರಿ ಜಿಲ್ಲೆಯ ತುಂಗಭದ್ರೆಯ ತಟದಲ್ಲಿರುವ ಗಳಗನಾಥ ಎಂಬ ಊರಿನವರು. ಕನ್ನಡ ಸೇವೆಗೆಂದೇ ಮಾಸ್ತರ ನೌಕರಿಯನ್ನೂ ತ್ಯಜಿಸಿ, ಪೂರ್ಣ ಪ್ರಮಾಣದ ಕನ್ನಡದ ಪರಿಚಾರಿಕೆಗಾಗಿ ಟೊಂಕಕಟ್ಟಿ ನಿಂತ ಮಹಾನುಭಾವರು.

1898ರಲ್ಲಿ, ‘ಪ್ರಬುದ್ಧ ಪದ್ಮನಯನೆ’ ಎಂಬ ತಮ್ಮ ಚೊಚ್ಚಲ ಕಾದಂಬರಿಯನ್ನು ಪ್ರಕಟಿಸಿದ ವೆಂಕಟೇಶ್ ತಿರಕೋ ಕುಲಕರ್ಣಿಯವರು ಮುಂದೆ ತಮ್ಮದೇ ಊರಿನ ಹೆಸರಾದ ಗಳಗನಾಥ ಎಂಬ ಹೆಸರಿನಿಂದಲೇ ಬರೆದು ಪ್ರಸಿದ್ಧರಾದವರು.

1907ರಲ್ಲಿ, ಹಾವೇರಿಯ ಅಗಡಿಯಲ್ಲಿ ‘ಸದ್ಬೋಧ ಚಂದ್ರಿಕೆ’ ಎಂಬ ಮಾಸ ಪತ್ರಿಕೆಯನ್ನು ತೆರೆದ ಗಳಗನಾಥರು, ಅದುವರೆಗೂ ಸಮೂಹ ಸಂವಹನ ಮಾಧ್ಯಮಗಳ ವೈಜ್ಞಾನಿಕ ಕಲ್ಪನೆ ಕೂಡ ಇಲ್ಲದ ಆ ಕಾಲದಲ್ಲಿ ಜನರಲ್ಲಿ ವಾಚನಾಭಿರುಚಿಯನ್ನು ಮೂಡಿಸಿದರು.

ಕರ್ನಾಟಕವು ಗಳಗನಾಥರನ್ನು ಕೇವಲ ಕಾದಂಬರಿ ಪಿತಾಮಹ ಎಂದರೆ ಸಾಲದು. ತಮ್ಮ ಇಳಿವಯಸ್ಸಿನಲ್ಲೂ ಕಾಲ್ನಡಿಗೆಯಲ್ಲಿ ಪುಸ್ತಕಗಳನ್ನು ಹೊತ್ತು ಮನೆ ಮನೆಗೆ ತಲುಪಿಸಿದ ಗಳಗನಾಥರು ನಿಜವಾದ ಕನ್ನಡ ಪರಿಚಾರಕರಾಗಿದ್ದಾರೆ ಎಂಬುದನ್ನು ಯಾರೂ ಮರೆಯುವಂತಿಲ್ಲ.

5. ಕುವೆಂಪು ಬಂದರು ತಳುಕಿಗೆ

ಎಪ್ಪತ್ತರ ದಶಕದಲ್ಲಿ ಎಸ್. ನಿಜಲಿಂಗಪ್ಪನವರದು ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಬಹುದೊಡ್ಡ ಹೆಸರಾಗಿತ್ತು. ಅಂತಹ ಘನ ವ್ಯಕ್ತಿಯನ್ನು ವಿಧಾನಸಭೆಗೆ ಅವಿರೋಧ ಆಯ್ಕೆ ಮಾಡಿ ಕಳುಹಿಸಬೇಕೆಂದು ಇಡೀ ರಾಷ್ಟ್ರದ ಕಾಂಗ್ರೆಸ್‌ನ ಬಹುತೇಕರು ತೀರ್ಮಾನಿಸಿದ್ದರು. ಅದರಂತೆ ಅವರನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಅವಿರೋಧ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಲು ತೀರ್ಮಾನಿಸಲಾಯಿತು.

ಈ ಮಾಹಿತಿಯನ್ನು ಅರಿತ ಕುವೆಂಪು, ಇದು ಪ್ರಜಾಪ್ರಭುತ್ವಕ್ಕೆ ಶೋಭೆಯ ವಿಚಾರವಲ್ಲ ಎಂದು ಸಮಾಜವಾದಿ ವಿಚಾರಗಳ ಒಲವಿದ್ದ, ಮಾನಸ ಗಂಗೋತ್ರಿಯಲ್ಲಿ ಓದುತ್ತಿದ್ದ ತನ್ನ ಶಿಷ್ಯ ಮೊಳಕಾಲ್ಮೂರಿನ ಅಂಜಿನಪ್ಪ ಎಂಬ ವಿದ್ಯಾರ್ಥಿಯನ್ನು ಕರೆದು, ನಿಜಲಿಂಗಪ್ಪನವರ ವಿರುದ್ಧ ಮೊಳಕಾಲ್ಮೂರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಹೇಳುತ್ತಾರೆ. ಅದರಂತೆ ಅಂಜಿನಪ್ಪ ನಿಜಲಿಂಗಪ್ಪನವರ ವಿರುದ್ಧ ಸ್ಪರ್ಧಿಸುತ್ತಾರೆ.

ತನ್ನ ಸಮಾಜವಾದಿ ವಿದ್ಯಾರ್ಥಿಯ ಪರ ಚುನಾವಣಾ ಪ್ರಚಾರದ ನೆಪದಲ್ಲಿ, ತನ್ನ ಗುರುಗಳಾದ ತ.ಸು. ವೆಂಕಣ್ಣಯ್ಯರ ತಳುಕು ಎಂಬ ಊರನ್ನು ಈ ನೆಪದಲ್ಲಾದರೂ ಕಣ್ತುಂಬಿಕೊಳ್ಳಬಹುದು ಎಂಬ ದೂರದ ಆಸೆ ಕುವೆಂಪು ಅವರದಾಗಿತ್ತು.

ಮಾನಸ ಗಂಗೋತ್ರಿಯಲ್ಲಿ ಪ್ರೊಫೆಸರ್, ಕುಲಪತಿಗಳೂ ಆಗಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ಕುವೆಂಪು ಎಂದಿಗೂ ಸರಕಾರದ, ರಾಜಕಾರಣಿಗಳ ಮರ್ಜಿಗೆ ಒಳಗಾಗಲಿಲ್ಲ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯು ಸರ್ವಾಧಿಕಾರದತ್ತ ವಾಲಬಾರದು ಎಂದು ನಿರ್ಧರಿಸಿದ ಕುವೆಂಪು ಅವರ ನಡೆ ಇಂದಿಗೂ ಅನುಕರಣೀಯ.

ಗುರಿಯ ಶುದ್ಧತೆ ಎಷ್ಟು ಮುಖ್ಯವೋ, ದಾರಿಯ ಶುದ್ಧತೆಯೂ ಅಷ್ಟೇ ಮುಖ್ಯ. ಅನಿಷ್ಟ ದಾರಿ ಎಂದಿಗೂ ನಮ್ಮನ್ನು ಒಳ್ಳೆಯ ಗುರಿಗೆ ಕೊಂಡೊಯ್ಯಲಾರದು. ನಮ್ಮ ಗುರಿಯನ್ನು ಸಾಧಿಸಲು ನಾವು ಹಲವು ಮಾನವೀಯ ಮೌಲ್ಯಗಳಿಗೆ, ನಡತೆಯ ಹಲವು ಗುಣಮಟ್ಟಗಳಿಗೆ ಕಟ್ಟುಬೀಳುವುದು ಅವಶ್ಯಕ ಎನ್ನುವುದನ್ನು ಮೇಲಿನ ಹಿರಿಯರು ತೋರಿಸಿಕೊಟ್ಟಿದ್ದಾರೆ.

*

ಕೆಲ ದಿನಗಳ ಹಿಂದೆ ಹಾವೇರಿಯ ಸಾಹಿತ್ಯಿಕ ಸಮಾರಂಭವೊಂದರಲ್ಲಿ ರಾಜಕಾರಣಿಯೊಬ್ಬರು ಮಾತನಾಡುತ್ತಾ ‘‘.... ನಾವಂತೂ ಹಾಳಾಗಿ ಹೋಗಿದ್ದೇವೆ, ನೀವೂ ಹಂಗಾಗಾದು ಬೇಡ’’ ಎಂದೇನೋ ಹೇಳಿದರೆಂದು ಸುದ್ದಿಯಾಗಿತ್ತು.

ಸಾಮಾಜಿಕ ಮತ್ತು ಸಾಹಿತ್ಯ-ಸಾಂಸ್ಕೃತಿಕ ಸಮಸ್ಯೆಗಳು ಇಂದಿನ ಅಧಿಕಾರ ರಾಜಕಾರಣದೊಂದಿಗೆ ಬೆಸೆದುಕೊಂಡಿರುವುದು ಗೊತ್ತಿರುವ ಸಂಗತಿಯಾಗಿದೆ.

ನಾವು ರಾಜಕಾರಣದಿಂದ ದೂರವಿದ್ದು, ಸುಮ್ಮನೆ ನಿರ್ಲಿಪ್ತರಾಗಿ ಇರುವುದಕ್ಕೆ ಸಾಧ್ಯವಿಲ್ಲ. ಯಾವ ಚಿಂತಕನೇ ಆಗಲಿ,ಯಾವುದೇ ಸಾಹಿತ್ಯವೇ ಆಗಲಿ ರಾಜಕಾರಣದಿಂದ ಪ್ರಭಾವಕ್ಕೊಳಗಾಗದೆ ಉಳಿಯಲು ಸಾಧ್ಯವಿಲ್ಲ.

*

ಮಾಂಸಾಹಾರವನ್ನು ಸಾಹಿತ್ಯ ಸಮ್ಮೇಳನದಲ್ಲಿ ನಿಷೇಧಿಸಬೇಕು ಎಂಬುದು ಅಧ್ಯಕ್ಷರ ತಲೆಯಲ್ಲಿ ಹೊಳೆದಾಗಲೇ, ಇದೊಂದು ಬಹುಜನ ಸಮುದಾಯಗಳ ನಂಬಿಕೆಗಳ ಮೇಲಿನ ದಾಳಿಯಂತೆಯೇ ಕಂಡುಬಂದಿತು. ಒಂದು ಸಮುದಾಯದ ನಂಬಿಕೆಗಳನ್ನು, ಆ ಸಮುದಾಯಗಳ ಮಹತ್ವವನ್ನು ಹಾಳುಮಾಡುವ ಮೂಲಕ ಯಾವುದೇ ಸಮುದಾಯ ಬೆಳೆಯಲಿಕ್ಕೆ ಸಾಧ್ಯವಿಲ್ಲ. ರಾಮ, ಕೃಷ್ಣ, ಬುದ್ಧ, ಬಸವಣ್ಣ, ಪ್ಲೇಟೋ, ಗಾಂಧಿ, ಅಂಬೇಡ್ಕರ್, ನ್ಯೂಟನ್, ಐನ್‌ಸ್ಟೀನ್, ವಿವೇಕಾನಂದ ಅವರಂತೆಯೇ ಈ ದೇಶದ ಶ್ರಮಿಕರಾದ ರೈತರು, ಮಹಿಳೆಯರು, ಕೂಲಿಗಳು, ಕಾರ್ಮಿಕರು ಎಲ್ಲರನ್ನೂ ದೂರ ಸರಿಸುವ, ನಿರ್ನಾಮ ಮಾಡುವ ಮೂಲಕ ಸಮಾಜವು ಬೆಳೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಸಮಾಜದ ಬೆಳವಣಿಗೆಗೆ ಅತ್ಯಗತ್ಯ. ಹಲವರು ದೈಹಿಕವಾಗಿ ಮತ್ತೆ ಕೆಲವರು ಬೌದ್ಧಿಕವಾಗಿ ಪ್ರಬಲರಾಗಿದ್ದಿರಬಹುದು. ಈ ಎರಡೂ ಶಕ್ತಿಸಂಯೋಜನೆಗಳಿಂದ ಆರೋಗ್ಯಕಾರಿ ಸಮಾಜ ನಿರ್ಮಾಣ ಸಾಧ್ಯ. ಆ ಪರಿಸರವನ್ನು ನಿರ್ಮಾಣ ಮಾಡುವ ಶಕ್ತಿ ಸಾಹಿತ್ಯಕ್ಕಿದೆ.

ಮನುಷ್ಯನಲ್ಲಿ ವಿಭಿನ್ನ ಚಿಂತನೆಗಳ ತಾಕಲಾಟವಿದ್ದಾಗ ಮಾತ್ರ ಹೊಸ ಚಿಂತನೆ ಅರಳಲು ಸಾಧ್ಯ. ಆಗ ಮಾತ್ರ ಸತ್ಯವನ್ನು ಹುಡುಕಲು ಸಾಧ್ಯ. ಆದರೆ ಈ ತಾಕಲಾಟಗಳ, ಚಿಂತನೆಗಳುಳ್ಳ ಮನುಷ್ಯರು ಕನ್ನಡ ಸಾಹಿತ್ಯ ಪರಿಷತ್ತಿನ ಸುತ್ತಮುತ್ತ ಅಷ್ಟಾಗಿ ಇಲ್ಲ ಎನ್ನುವುದೇ ಈ ಸಂಸ್ಥೆಯ ಬಹುದೊಡ್ಡ ದೌರ್ಬಲ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಿ. ಶ್ರೀನಿವಾಸ, ದಾವಣಗೆರೆ

contributor

Similar News