ಇಡೀ ಬದುಕನ್ನು ತಾನು ನಂಬಿದ ಸಿದ್ಧಾಂತಕ್ಕೆ ಮುಡಿಪಾಗಿಟ್ಟ ವಿ.ಟಿ.ಆರ್.

Update: 2024-11-22 05:39 GMT

ಚಳವಳಿಯ ಹಿನ್ನೆಲೆ ಇರುವ, ವಿ.ಟಿ. ರಾಜಶೇಖರ್ ಅವರನ್ನು ಬಲ್ಲಂತವರು ಸಾಮಾನ್ಯವಾಗಿ ಅವರನ್ನು ಕರೆಯುವುದೇ ವಿ.ಟಿ.ಆರ್. ಎಂದು. ವಿ.ಟಿ.ಆರ್. ಅಂದರೆ ಓಂತಿಬೆಟ್ಟು ತೆಂಕಬೈಲು ತಿಮ್ಮಪ್ಪ ರಾಜಶೇಖರ್.

ನಮ್ಮ ದೇಶ ಕಂಡಂತಹ, ಯಾರ ದಾಕ್ಷಿಣ್ಯಕ್ಕೂ ಒಳಗಾಗದ ಯಾವ ಕಾರಣಕ್ಕೂ ತಾನು ಪಾಲಿಸಿಕೊಂಡ ಸಿದ್ಧಾಂತಕ್ಕೆ ವಿರೋಧವಾಗಿ ನಡೆದುಕೊಳ್ಳದೆ ತನ್ನತನಕ್ಕೆ ಕಪ್ಪು ಚುಕ್ಕೆ ಇಟ್ಟುಕೊಳ್ಳದ ಪತ್ರಿಕಾ ಧರ್ಮವನ್ನು ಬಿಟ್ಟುಕೊಡದ ಅಪ್ರತಿಮ ಪತ್ರಕರ್ತ, ಲೇಖಕ, ವಿಚಾರವಾದಿ, ರಾಜಕೀಯ ವಿಶ್ಲೇಷಕ, ಮಹಾನ್ ಅಂಬೇಡ್ಕರ್‌ವಾದಿ, ಬಹುದೊಡ್ಡ ಬುದ್ಧ ಉಪಾಸಕ.

17.7.1932ರಲ್ಲಿ ಉಡುಪಿ ಜಿಲ್ಲೆಯ ಹಿರಿಯಡ್ಕ ಎಂಬ ಊರಿನ ಪಕ್ಕದ ಹಳ್ಳಿಯ ಪ್ರತಿಷ್ಠಿತ ಓಂತಿಬೆಟ್ಟು ಅರಮನೆಯಲ್ಲಿ ಹುಟ್ಟುತ್ತಾರೆ. ತಂದೆ ತಿಮ್ಮಪ್ಪ ಶೆಟ್ಟಿ, ತಾಯಿ ವನಜಾಕ್ಷಿ ಹೆಗ್ಡೆ. ತಂದೆ ತಿಮ್ಮಪ್ಪ ಶೆಟ್ಟರು ಆಗಿನ ಕಾಲದ ಉನ್ನತ ಸರಕಾರಿ ಹುದ್ದೆಯಾದಂತಹ ಅಮಲ್ದಾರ/ಶೇಖದಾರರಾಗಿದ್ದರು.

ಬಾಲ್ಯವನ್ನು ಶಿರ್ವ ನಡಿಬೆಟ್ಟುವಿನಲ್ಲಿ ತಂದೆಯ ಮನೆಯಲ್ಲಿ ಕಳೆದ ವಿ.ಟಿ.ಆರ್. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ ಪಡೆಯುತ್ತಾರೆ.

ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮೊದಲ ಬ್ಯಾಚ್ ವಿದ್ಯಾರ್ಥಿಯಾಗಿ ಇಂಟರ್ ಮೀಡಿಯಟ್ ಓದಿ, ಬಿ.ಎಲ್. ಓದುವ ಕನಸಿನ ಜೊತೆ ಮುಂಬೈಗೆ ಪ್ರಯಾಣಿಸಿ ಅಲ್ಲಿ ಆದ ಅಡಚಣೆಗಳಿಂದ ಓದಲಾಗದೆ ಕಾಟನ್ ಮಿಲ್ಲಿನಲ್ಲಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿ ಕಾರ್ಖಾನೆಯ ಒಳಗೆ ಕೂಲಿ ಕಾರ್ಮಿಕರ ಮೇಲಿನ ದೌರ್ಜನ್ಯ ಸಹಿಸಲಾಗದೆ ವಿರೋಧಿಸಿ ಕೆಲಸ ಬಿಟ್ಟು ಮಾರ್ಕ್ಸ್‌ವಾದವನ್ನು ತುಂಬಿಕೊಂಡು ಮರಳಿ ಊರಿಗೆ ಬಂದು ಮಂಗಳೂರಿನಲ್ಲಿ ಬಿಎ ಮತ್ತು ಮೈಸೂರಿನಲ್ಲಿ ಎಲ್‌ಎಲ್‌ಬಿ ಪದವಿಯನ್ನು ಪಡೆದು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ಸೇರಿ ಸುಮಾರು ಹತ್ತು ವರ್ಷಗಳಷ್ಟು ಕಾಲ ಬೆಂಗಳೂರು ಮತ್ತು ದಿಲ್ಲಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.

ಮನಸ್ಸಿಗೆ ಇಷ್ಟವಾದ ಕೆಲಸವಾದರೂ ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಎಳ್ಳಷ್ಟೂ ಸಹಿಸಿಕೊಳ್ಳದ ವಿ.ಟಿ.ಆರ್. ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯನ್ನು ಬಿಟ್ಟು ಹೊರಗೆ ಬರುತ್ತಾರೆ.

ತನ್ನ ಅಂತರಂಗದಲ್ಲಿ ಹುಟ್ಟುವ ಪ್ರಖರವಾದ ವಿಚಾರಗಳನ್ನು ಬರಹ ರೂಪದಲ್ಲಿ ಪ್ರಕಟಿಸಲು ಬೇರೆಯವರನ್ನು ಅವಲಂಬಿಸಲು ಮನಸ್ಸು ಒಪ್ಪದೆ 1981ರಲ್ಲಿ ‘ದಲಿತ್ ವಾಯ್ಸ್’ ಎಂಬ ಇಂಗ್ಲಿಷ್ ಪಾಕ್ಷಿಕವನ್ನು ಪ್ರಾರಂಭಿಸುತ್ತಾರೆ. ಅಲ್ಲಿಂದ ನಂತರದಲ್ಲಿ ವಿ.ಟಿ.ಆರ್. ಅವರ ಮಾತುಗಳನ್ನು ತಡೆದವರು ಯಾರೂ ಇಲ್ಲ. ಒಳಗೆ ಉರಿಯುತ್ತಿದ್ದ ಸಮಾನತೆಯ ಕಿಚ್ಚು: ಈ ದೇಶದ ಅಸಮಾನತೆಯ ಪರಮಾವಧಿಯ ನೋವು ಎಲ್ಲ್ಲವೂ ‘ದಲಿತ್ ವಾಯ್ಸ್’ ಪತ್ರಿಕೆಯ ಬರಹಗಳ ಮೂಲಕ ಹೊರಗೆ ಬರುವಂತಾಯಿತು. ಮತ್ತೆ ನಡೆದುದು ಎಲ್ಲವೂ ಒಂದು ಚರಿತ್ರೆ -ಒಂದು ದಾಖಲೆ. ಅವರ ಬದುಕೆಲ್ಲವೂ ‘ದಲಿತ್ ವಾಯ್ಸ್’ ಎಂಬ ಪತ್ರಿಕೆಯೇ ಆಗಿತ್ತು. ವೈಯಕ್ತಿಕ ಎಂಬುದು ಏನೆಂಬುದೇ ವಿ.ಟಿ.ಆರ್.ಗೆ ಕೊನೆಯ ತನಕವೂ ಗೊತ್ತಿರಲಿಲ್ಲ.

ಪತ್ರಿಕೆ ಪ್ರಾರಂಭ ಆದಂದಿನಿಂದ ಕೊನೆಯ ಪ್ರತಿ ಮುದ್ರಣ ಆಗುವ ತನಕವೂ ಈ ದೇಶದ ಹಿಂದುಳಿದ, ದಲಿತ, ಮುಸ್ಲಿಮ್, ಕ್ರೈಸ್ತ ಜನಾಂಗದ ಜನರನ್ನು ಒಟ್ಟಾರೆಯಾಗಿ ಬಹುಜನ ಸಮಾಜವನ್ನು ಒಟ್ಟುಗೂಡಿಸಿ ಅವರಿಗೆ ಸಿಗಬೇಕಾದ ಸಾಮಾಜಿಕ ನ್ಯಾಯವನ್ನು ಕೊಡಿಸುವುದೇ ಅವರ ಬರಹಗಳ ಮೂಲ ಉದ್ದೇಶವಾಗಿತ್ತು. ಈ ಕಾರಣಕ್ಕಾಗಿ ಬಹಳಷ್ಟು ಅಪವಾದಗಳನ್ನೂ ವಿ.ಟಿ.ಆರ್. ಎದುರಿಸಬೇಕಾಯಿತು. ಹಾಗಿದ್ದರೂ ಅವರು ಅವರ ಸಿದ್ಧಾಂತಕ್ಕೆ ಕೊನೆಯ ಕ್ಷಣದವರೆಗೂ ಬದ್ಧರಾಗಿಯೇ ಇದ್ದರು.

ದಲಿತ್ ವಾಯ್ಸ್ ಪತ್ರಿಕೆಯಲ್ಲಿ ಬರುವ ವಿಷಯ ಬರೀ ಕರ್ನಾಟಕಕ್ಕೆ ಸೀಮಿತವಾಗಿರಲಿಲ್ಲ. ಇಡೀ ದೇಶದ, ಅಂತರ್‌ರಾಷ್ಟ್ರೀಯ ಸಮಸ್ಯೆಗಳ ಮೇಲೂ ಬರೆಯುತ್ತಿದ್ದರು. ಹಾಗಾಗಿ ಅವರು ತಮ್ಮ ವಿಚಾರಗಳ ಮೂಲಕ ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಬಳಗವನ್ನು ಸೃಷ್ಟಿಸಿಕೊಂಡಿದ್ದರು.

ವಿದೇಶದ ಹಲವಾರು ವಿಶ್ವವಿದ್ಯಾನಿಲಯಗಳು ವಿ.ಟಿ.ಆರ್. ಅವರನ್ನು ಭಾಷಣಕ್ಕಾಗಿ ಕರೆಸಿಕೊಳ್ಳುತ್ತಿತ್ತು. ಯಾವುದೇ ದೇಶೀಯ, ಅಂತರ್‌ದೇಶೀಯ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಮಾತನಾಡುವ ಜ್ಞಾನ ಭಂಡಾರ ಅವರಲ್ಲಿತ್ತು.

ವಿ.ಟಿ.ಆರ್. ಅವರು ದಲಿತ್ ವಾಯ್ಸ್ ಪತ್ರಿಕೆಯನ್ನು ನಡೆಸಿದ ರೀತಿಯೂ ಬಹಳ ಅನನ್ಯವಾದುದು. ಅವರು ಯಾರ ಬಳಿಯೂ ಚಂದಾದಾರರನ್ನು ಮಾಡಿಕೊಡಿ ಎಂದು ಕೇಳಿಕೊಂಡಿದ್ದಿಲ್ಲ. ತನ್ನ ಪತ್ರಿಕೆಯ ಪ್ರಸಾರಕ್ಕಾಗಿ ಜಾಹೀರಾತುಗಳನ್ನೂ ಕೊಡಲಿಲ್ಲ. ಯಾವುದೇ ಪತ್ರಿಕೆಯ ಅಂಗಡಿಗಳಲ್ಲಿ ‘ದಲಿತ್‌ವಾಯ್ಸ್’ ಮಾರಾಟಕ್ಕೂ ಇರಲಿಲ್ಲ. ತನ್ನ ಓದುಗ ಬಳಗವನ್ನು ಪತ್ರಿಕೆಯೇ ಸ್ವತಃ ತನ್ನೊಳಗಿದ್ದ ವಿಚಾರಗಳಿಂದಾಗಿ ಬೆಳೆಸಿಕೊಂಡಿತು. ಅವರ ಪ್ರತೀ ಸಂಪಾದಕೀಯವೂ ಚೈನೀಸ್ ಭಾಷೆಯಲ್ಲಿ ಪ್ರಕಟವಾಗಿತ್ತು. ಒಟ್ಟಿಗೆ ಒಂದು ಕಾಲಕ್ಕೆ ಕನ್ನಡವೂ ಸೇರಿದಂತೆ ಹದಿನಾಲ್ಕು ಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು ಅಂದರೆ ನಾವು ವಿ.ಟಿ.ಆರ್. ಅವರ ಜ್ಞಾನದ ಅಗಾಧತೆಯನ್ನು ಅಳತೆ ಮಾಡಬಹುದಾಗಿದೆ.

ವಿ.ಟಿ.ಆರ್. ಅವರ ಸ್ನೇಹಿತ ಬಳಗವೂ ಅಷ್ಟೇ ಬೌದ್ಧಿಕವಾಗಿ ಶ್ರೀಮಂತವಾಗಿತ್ತು. ದೇವರಾಜ ಅರಸು, ಬಸವಲಿಂಗಪ್ಪ, ಅಂಬೇಡ್ಕರ್ ಬರಹಗಳನ್ನು ಅನುವಾದಿಸುತ್ತಿದ್ದ ಅಂಬೇಡ್ಕರ್ ಸಹಚರರಾಗಿದ್ದ ಮಹಾರಾಷ್ಟ್ರದ ವಸಂತಮೂನ್, ಬಂಗಾರಪ್ಪ, ಅಪ್ಪಟ ಪೆರಿಯಾರ್‌ವಾದಿ ಶ್ರೀಧರ್ ಮೂರ್ತಿ, ಇಕ್ಬಾಲ್ ಅಹ್ಮದ್ ಶರೀಫ್...ಇಂತಹ ಹಲವಾರು ಉನ್ನತ ವ್ಯಕ್ತಿಗಳು ಅವರ ಬಳಗದಲ್ಲಿದ್ದರು.

ತನ್ನ ವಿಚಾರವಂತಿಕೆಯಿಂದಾಗಿ ಇಡೀ ವಿಶ್ವದಾದ್ಯಂತ ವಿ.ಟಿ.ಆರ್. ಪ್ರಸಿದ್ಧರಾಗಿದ್ದರು. ಇಲ್ಲಿನ ಆಡಳಿತವೂ ಅವರ ಪ್ರತೀ ನಡೆಯನ್ನೂ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಯಾವುದೇ ವಶೀಲಿಬಾಜಿಗೆ ಬಗ್ಗದ ವಿ.ಟಿ.ಆರ್. ಅವರನ್ನು ಮಣಿಸಲು ಕಾರಣ ಹುಡುಕುತ್ತಲೇ ಇತ್ತು. ಇದೆಲ್ಲಾ ತಿಳಿದಿದ್ದರೂ ಅವರು ತಮ್ಮ ನಿಲುವನ್ನು ಬದಲಾಯಿಸುತ್ತಿರಲಿಲ್ಲ. ವಿದೇಶದಲ್ಲಿ ಒಂದು ಕಡೆ ‘‘ಅಸ್ಪಶ್ಯತೆ ಇನ್ನೂ ಭಾರತದಲ್ಲಿ ಜೀವಂತವಾಗಿದೆ’’ ಎಂದು ಭಾಷಣ ಮಾಡಿದ್ದಕ್ಕೆ ವಿ.ಟಿ.ಆರ್. ಅವರು inflamatory speech ಮಾಡಿದರು ಎಂದು ‘ಪೊಟಾ’ ಕಾಯ್ದೆಯಡಿ ಬಂಧಿಸಿ ಚಂಡಿಗಡದ ಜೈಲಲ್ಲಿ ಇಡುತ್ತಾರೆ. ಏನೇ ಆದರೂ ಒಂದಿನಿತೂ ಕುಗ್ಗದೆ ಅಂಬೇಡ್ಕರ್ ವಿಚಾರಧಾರೆಯನ್ನು; ಬ್ರಾಹ್ಮಣ್ಯದ ಬಾಹುಗಳು ಬಹುಜನ ಸಮಾಜವನ್ನು ಒಡೆಯುವುದನ್ನು ಖಡಾಖಂಡಿತವಾಗಿ ವಿರೋಧಿಸುವುದನ್ನು ಸಾವಿನ ತನಕವೂ ಬಿಡಲಿಲ್ಲ. ಹಾಗಾಗಿ ‘‘ಆತ ಬ್ರಾಹ್ಮಣ ವಿರೋಧಿ, ಅಲ್ಪಸಂಖ್ಯಾತರ ಪರ’’ ಎಂಬ ಅಪವಾದಗಳು ಬಂದರೂ ಎಂದೂ ಯಾರಲ್ಲೂ ವಾಗ್ವಾದ ಮಾಡದೆ ತನ್ನ ಬರಹಗಳ ಮೂಲಕವೇ ಉತ್ತರವನ್ನು ಕೊಟ್ಟಂತಹ ಧೀಮಂತ ಪತ್ರಕರ್ತ.

ಅವರು ಬರೆದ ಪುಸ್ತಕಗಳೆಲ್ಲವೂ ನಮ್ಮ ದೇಶದ ಸಮಸ್ಯೆಗಳಿಗೆ ಕನ್ನಡಿ ಹಿಡಿದಂತಿದೆ. 'Merrit my foot', 'Caste; a nation within the nation'; 'Dailouge Of Bhoodevatas', 'Indian intellectual desert'; 'Aggression on Indian culture'... ಇಂತಹ ಬಹಳಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಪುಸ್ತಕಗಳ ಹೆಸರೇ ಈ ದೇಶದ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ.

ತನ್ನ ಇಡೀ ಜೀವನವನ್ನು ತಾನು ನಂಬಿದ ಸಿದ್ಧಾಂತಕ್ಕೆ ಮುಡಿಪಾಗಿಟ್ಟ ವಿ.ಟಿ.ಆರ್. ಎಂಬ ಓಂತಿಬೆಟ್ಟು ತೆಂಕಬೈಲು ರಾಜಶೇಖರ್ ದಲಿತರು, ಅಲ್ಪ ಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳನ್ನು ತನ್ನ ವಿಶಾಲವಾದ ರೆಂಬೆಗಳ ಅಡಿಯ ನೆರಳಿನಲ್ಲಿ ಕಾದಂತಹ ಅರಳೀಮರ ಮೊನ್ನೆ ವಿಶ್ರಾಂತಿ ಅಥವಾ ನಿಬ್ಬಾಣದ ದೀರ್ಘ ಧ್ಯಾನಸ್ಥ ಸ್ಥಿತಿಗೆ ಹೊರಳಿಕೊಂಡಿದೆ.ಅವರಿಗೊಂದು ನಮ್ಮೆಲ್ಲರ ವಿದಾಯದ ಜೈ ಭೀಮ್ ವಂದನೆಗಳು. ತನ್ನ ಇಡೀ ಜೀವನವನ್ನು ತಾನು ನಂಬಿದ ಸಿದ್ಧಾಂತಕ್ಕೆ ಮುಡಿಪಾಗಿಟ್ಟ ವಿ.ಟಿ.ಆರ್. ಎಂಬ ಓಂತಿಬೆಟ್ಟು ತೆಂಕಬೈಲು ರಾಜಶೇಖರ್ ದಲಿತರು, ಅಲ್ಪ ಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳನ್ನು ತನ್ನ ವಿಶಾಲವಾದ ರೆಂಬೆಗಳ ಅಡಿಯ ನೆರಳಿನಲ್ಲಿ ಕಾದಂತಹ ಅರಳೀಮರ ಮೊನ್ನೆ ವಿಶ್ರಾಂತಿ ಅಥವಾ ನಿಬ್ಬಾಣದ ದೀರ್ಘ ಧ್ಯಾನಸ್ಥ ಸ್ಥಿತಿಗೆ ಹೊರಳಿಕೊಂಡಿದೆ.ಅವರಿಗೊಂದು ನಮ್ಮೆಲ್ಲರ ವಿದಾಯದ ಜೈ ಭೀಮ್ ವಂದನೆಗಳು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆತ್ರಾಡಿ ಅಮೃತಾ ಶೆಟ್ಟಿ

contributor

Similar News