ಪುರೋಹಿತಶಾಹಿಗಳ ಪಾಲಿನ ದುಸ್ವಪ್ನವಾಗಿದ್ದ ‘ವಿಟಿಆರ್’

Update: 2024-11-21 06:28 GMT

1984ರಲ್ಲಿ ಒಂದು ದಿನ ಅನಿರೀಕ್ಷಿತವಾದ ಸುದ್ದಿಯೊಂದು ಕೆಲವೇ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು: ‘ಪಂಜಾಬಿನ ಪೊಲೀಸರು ಬೆಂಗಳೂರಿನ ಇಂಗ್ಲಿಷ್ ಪಾಕ್ಷಿಕವೊಂದರ ಸಂಪಾದಕರನ್ನು ಬಂಧಿಸಿ ಚಂಡಿಗಡಕ್ಕೆ ಒಯ್ದರು’. ಸಂಜೆಯ ವೇಳೆಗೆ, ಆ ಸುದ್ದಿಯು ಬೆಂಗಳೂರಿನ ಪ್ರೆಸ್‌ಕ್ಲಬಿನಲ್ಲಿ ಅತ್ಯಂತ hot news ಆಗಿತ್ತು.

ಕೆಲವರು ಆ ಸಂಪಾದಕರು ಬರೆದಂತಹ ಲೇಖನವಾದರೂ ಯಾವುದು ಎಂದು ಕುತೂಹಲದಿಂದ ವಿಚಾರಿಸುತ್ತಿದ್ದರೆ, ಬಹಳಷ್ಟು ಮಂದಿ ಪರಿಹಾಸ್ಯ ಮಾಡಿಕೊಂಡು ನಗುತ್ತಿದ್ದರು; ‘ಶೆಟ್ಟಿಗೆ

ತಕ್ಕ ಶಿಕ್ಷೆಯಾಯಿತು. ಇನ್ನೆಂದಿಗೂ ಅವನು ಹೊರಬರಲಾರ. ನಮ್ಮ ನೆಮ್ಮದಿ ಕೆಡಿಸುತ್ತಿದ್ದ ಪೀಡೆಯೊಂದು ತೊಲಗಿತು’ ಎಂದು ಸಂಭ್ರಮಿಸುತ್ತಾ ಮತ್ತೆರಡು ಪೆಗ್ ಏರಿಸುತ್ತಿದ್ದರು. ಮರುದಿನದ ಒಂದೆರಡು ಪತ್ರಿಕೆಗಳಲ್ಲಿ, ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಪಂಜಾಬಿನ ಪೊಲೀಸರ ನಡುವೆ ಕೈಕೋಳದೊಂದಿಗೆ ಉದ್ದದ ಸರಪಳಿಯಿಂದ ರೈಲಿನಲ್ಲಿ ಕಿಟಕಿಯ ಸರಳಿಗೆ ಕಟ್ಟಲ್ಪಟ್ಟಿದ್ದ ಆ ಸಂಪಾದಕರ ಭಾವಚಿತ್ರ ಪ್ರಕಟವಾಗಿತ್ತು. ಆ ವಿವಾದಾಸ್ಪದ ವ್ಯಕ್ತಿಯೇ ವಿಟಿಆರ್ ಎಂದು ಜನಪ್ರಿಯರಾಗಿದ್ದ ವಿ.ಟಿ.ರಾಜಶೇಖರ್. ಬಿಂದ್ರನ್ ವಾಲೆ ನೇತೃತ್ವದ ಖಾಲಿಸ್ತಾನ್ ಚಳವಳಿಯನ್ನು ಬೆಂಬಲಿಸಿ ತಮ್ಮ ದಲಿತ್ ವಾಯ್ಸ್ ಪತ್ರಿಕೆಯಲ್ಲಿ ಸಂಪಾದಕೀಯ ಬರೆದ ‘ಅಪರಾಧ’ ಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಕೆಲವೇ ದಿನಗಳಲ್ಲಿ, ಕೇಂದ್ರ ಗೃಹಮಂತ್ರಿ ಬೂಟಾಸಿಂಗ್ ರವರೇ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದರು ಮತ್ತು ಅವರನ್ನು ಕರೆಸಿ ಖುದ್ದಾಗಿ ಕ್ಷಮೆ ಕೇಳಿ ಬೆಂಗಳೂರಿಗೆ ವಾಪಸ್‌ಕಳಿಸಿಕೊಟ್ಟರು.

ಉಡುಪಿ ಜಿಲ್ಲೆಯ ವೊಂತಿಬೆಟ್ಟು ಗ್ರಾಮದಲ್ಲಿ, ಬಂಟರ ಸಮುದಾಯಕ್ಕೆ ಸೇರಿದ ತಿಮ್ಮಪ್ಪ ಶೆಟ್ಟಿ ಮತ್ತು ವನಜಾಕ್ಷಿ ಹೆಗಡೆಯವರಿಗೆ ಜುಲೈ 17, 1932ರಂದು ಹುಟ್ಟಿದ ಮೊದಲ ಮಗುವೇ ರಾಜಶೇಖರ್ ಶೆಟ್ಟಿ. ಆಗಿನ ಕಾಲದಲ್ಲಿ, ವಿದ್ಯೆ ಕಲಿತವರೆಲ್ಲರೂ ಸರಕಾರಿ ನೌಕರಿಗಳಿಗೆ ಸೇರುವುದೇ ಪ್ರತಿಷ್ಠೆಯ ವಿಷಯವಾಗಿದ್ದಾಗ, ವಿಟಿಆರ್ ರವರು ವಿಚಿತ್ರ ಎಂಬಂತೆ ಪತ್ರಿಕೋದ್ಯಮವನ್ನು ಆಯ್ಕೆಮಾಡಿಕೊಂಡು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ವಾರದಿಗಾರರಾಗಿ ಸೇರಿಕೊಂಡರು. ಬ್ರಾಹ್ಮಣರೇ ತುಂಬಿದ್ದ ಈ ಕ್ಷೇತ್ರದಲ್ಲಿ, ಅವರ ಪ್ರವೇಶವು ಅವರೆಲ್ಲರಿಗೂ ಬಹಳ ಇರಿಸುಮುರಿಸು ಉಂಟುಮಾಡುತ್ತಿತ್ತು. ಏಕೆಂದರೆ, ಅವರುಗಳ ವರದಿ ಮತ್ತು ಲೇಖನಗಳಲ್ಲಿ ಸೂಕ್ಷ್ಮ್ಮವಾಗಿ ಪೋಣಿಸಿರುತ್ತಿದ್ದ ಬ್ರಾಹ್ಮಣ್ಯದ ಎಳೆಯನ್ನು ವಿಟಿಆರ್‌ರವರು ಅಷ್ಟೇ ನವಿರಾಗಿ ಬಯಲುಮಾಡಿ ಅವರ ಜಾತ್ಯತೀತತೆಯ ಮುಖವಾಡವನ್ನು ಕಳಚಿಬಿಡುತ್ತಿದ್ದರು. ಕಮ್ಯುನಿಸಮ್ ಮತ್ತು ವರ್ಗ ಹೋರಾಟದ ಬಗ್ಗೆ ಪುಂಖಾನುಪುಂಖ ಮಾತಾಡುತ್ತಿದ್ದ ಎಲ್ಲಾ ಬ್ರಾಹ್ಮಣರೂ ಪಕ್ಕಾ ಜಾತಿವಾದಿಗಳಾಗಿರುವುದನ್ನು ಕಂಡು, ‘ಈ ಸೋಶಿಯಲಿಸ್ಟ್ /ಕಮ್ಯುನಿಸ್ಟ್ ಬ್ರಾಹ್ಮಣರಿಗೆ ಎದೆಯ ಮೇಲೆ ಜನಿವಾರವಿಲ್ಲ, ಆದರೆ ಎದೆಯ ಒಳಗೆ ಗಟ್ಟಿಯಾಗಿ ಬಿಗಿದುಕೊಂಡಿದೆ’ ಎನ್ನುತ್ತಿದ್ದರು.

ಭಾರತದ ಕಮ್ಯುನಿಷ್ಟರ ಸೋಗಲಾಡಿತನ ಕಂಡು ಹೇಸಿಗೆಪಟ್ಟುಕೊಂಡ ವಿಟಿಆರ್ ಅವರು ಮುಂದೆ How Karl Marx Failed in India ಎಂಬ ಪುಸ್ತಕವನ್ನು ಬರೆದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಪ್ರಕಟಿಸಿದ ವರದಿಯೊಂದು ಭೀಕರ ವಿವಾದದ ಸ್ವರೂಪ ಪಡೆದ ಪರಿಣಾಮ ಅವರನ್ನು ಕೆಲಸದಿಂದ ವಜಾ ಮಾಡಲಾಯಿತು. ಈ ಘಟನೆಯು ಅವರ ಬೆಳವಣಿಗೆಗೆ ಬಲು ದೊಡ್ಡ ಅವಕಾಶವನ್ನೇ ಒದಗಿಸಿತು. ಹಿಂದುಳಿದ ಜಾತಿಯ ಮಾನ್ಯ ದೇವರಾಜ ಅರಸರು ಮುಖ್ಯಮಂತ್ರಿಗಳಾಗಿದ್ದ ಆ ಸಂದರ್ಭದಲ್ಲಿ, ವಡ್ಡಸೆರ್

ರಘುರಾಮ ಶೆಟ್ಟರು ಮತ್ತು ವಿಟಿಆರ್ ಅರಸರ ಸಾಧನೆಗಳ ಬಗ್ಗೆ ಪ್ರಶಂಸಿಸಿ ಬರೆಯುತ್ತಿದ್ದರು. ಈ ಕಾಲಘಟ್ಟದಲ್ಲಿ ಅವರು ಹಿಂದುಳಿದ ವರ್ಗಗಳ ಮತ್ತು ದಲಿತ ಚಳವಳಿಯಲ್ಲಿ ತೀವ್ರವಾಗಿ ತೊಡಗಿಸಿಕೊಂಡರು. ಮಾರ್ಕ್ಸ್‌ವಾದವನ್ನು ತೊರೆದು ಪೆರಿಯಾರ್ ಮತ್ತು ಡಾ. ಅಂಬೇಡ್ಕರರ ಅನುಯಾಯಿದರು. 1984ರಲ್ಲಿ ಅವರು ಆರಂಭಿಸಿದ ದಲಿತ್ ವಾಯ್ಸ್ ಪಾಕ್ಷಿಕವು ದಲಿತರ ಮೊಟ್ಟಮೊದಲ ಇಂಗ್ಲಿಷ್ ಪತ್ರಿಕೆಯಾಯಿತು. ಇದರಿಂದಾಗಿ, ಇಡೀ ಭಾರತ ಮತ್ತು ವಿಶ್ವದ ದಲಿತ ಚಿಂತಕರು, ನಾಯಕರು ಮಾತ್ರವಲ್ಲದೆ ಜಪಾನಿನ ಬುರ‌್ರಕಮೀನ್ ಸಂಘಟನೆಗಳು, ಅಮೆರಿಕದ ಕಪ್ಪು ಜನರ ಸಂಘಟನೆಗಳು, ಕ್ರೈಸ್ತ ಸಂಘಟನೆಗಳು ಹಾಗೂ ಮುಸ್ಲಿಮ್ ದೇಶದ ನಾಯಕರೂ ಸಹ ಇವರ ಸಂಪರ್ಕಕ್ಕೆ ಬಂದರು. ಲಿಬಿಯಾ ದೇಶದ ಅಧ್ಯಕ್ಷ ಮುಹಮ್ಮದ್ ಗದ್ದಾಫಿ ಕರ್ನಲ್ ಯವರ ಆಹ್ವಾನದ ಮೇರೆಗೆ, ಇವರ ಪರವಾಗಿ ಎರಡು ಬಾರಿ ದಿ. ಎಂ.ಡಿ. ತಿಮ್ಮರಾಯಪ್ಪ ಮತ್ತು ಡಾ.ಎಸ್. ತಿಮ್ಮಪ್ಪ ನವರು ಆ ದೇಶಕ್ಕೆ ಭೇಟಿ ನೀಡಿದ್ದರು. ಕಪ್ಪು ಇತಿಹಾಸಕಾರ ರೂನುಕೊ ರಶೀದಿ ಇವರ ಬಲುದೊಡ್ಡ ಅಭಿಮಾನಿಯಾಗಿದ್ದರು. ದಿ. ಬಿ. ಬಸವಲಿಂಗಪ್ಪನವರ ಕಟ್ಟಾ ಬೆಂಬಲಿಗರಾಗಿದ್ದ ವಿಟಿಆರ್ ರವರು, ಅವರು ಹೇಳಿದ ‘ಕನ್ನಡ ಸಾಹಿತ್ಯವು ಬೂಸ ಸಾಹಿತ್ಯವಾಗಿದೆ’ ಎಂಬ ಹೇಳಿಕೆಯನ್ನು ಎಲ್ಲರ ವಿರೋಧದ ನಡುವೆ ಬಹಿರಂಗವಾಗಿ ಸಮರ್ಥಿಸಿಕೊಂಡರು. ಒಂದು ಸಭೆಯಲ್ಲಿ, ದ್ರಾವಿಡ ಕಳಗಮ್ ನಾಯಕ ಕೆ. ವೀರಮಣಿಯವರು, ‘ಶೆಟ್ಟಿ ಎಂಬುದು ಜಾತಿ ಸೂಚಕ ಪದವಾಗಿದೆ. ಜಾತಿವಿನಾಶದ ಬಗ್ಗೆ ಮಾತಾಡುವ ನೀವು ಶೆಟ್ಟಿಯನ್ನು ಏಕೆ ಬಿಟ್ಟಿಲ್ಲ?’ ಎಂದು ಕೇಳಿದರು. ಮರುದಿನವೇ ವಿಟಿಆರ್ ರವರು ಆ ಪದವನ್ನು ಬಿಟ್ಟು ತಮ್ಮ ಹೆಸರನ್ನು ಕೇವಲ ವಿ. ಟಿ. ರಾಜಶೇಖರ್ ಎಂದು ಬದಲಾಯಿಸಿ ಅಫಿಡವಿಟ್ ಮಾಡಿಸಿಕೊಂಡರು. ಆದರೆ ಬಂಟ ಸಮುದಾಯವು ಇವರನ್ನು ತಮ್ಮ ಜಾತಿಯಿಂದ ಹೊರಹಾಕಿತು!

ಭಾರತದ ಜಾತಿ ವ್ಯವಸ್ಥೆಗೆ, ಕೇವಲ ದಲಿತರು ಮಾತ್ರವಲ್ಲ, ಇಲ್ಲಿನ ಆದಿವಾಸಿಗಳು, ಒಬಿಸಿಗಳು, ಮುಸ್ಲಿಮರು ಮತ್ತು ಕ್ರೈಸ್ತರೆಲ್ಲರೂ ಬಲಿಪಶುಗಳೇ ಆಗಿದ್ದಾರೆ ಎಂಬ ಸತ್ಯವನ್ನು ಅವರು ಬಲುಬೇಗ ಅರಿತುಕೊಂಡರು. ವಿಧಾನ ಸೌಧದ ಮುಂದೆ ಡಾ. ಅಂಬೇಡ್ಕರ್‌ರ ಪ್ರತಿಮೆಯ ಸ್ಥಾಪನೆ ಮತ್ತು ಅಲ್ಲಿನ ರಸ್ತೆಗೆ ಡಾ. ಅಂಬೇಡ್ಕರ್ ವೀದಿ ಎಂಬ ಹೆಸರು ಬರುವುದಕ್ಕೆ ವಿಟಿಆರ್ ಮತ್ತು ಸಂಗಾತಿಗಳಾಗಿದ್ದ ದಲಿತ ಕ್ರಿಯಾ ಸಮಿತಿಯ ನಾಯಕರಾಗಿದ್ದ ಎಂ.ಡಿ. ತಿಮ್ಮರಾಯಪ್ಪ, ಕೆ. ಚಂದ್ರಶೇಖರ್ ಮುಂತಾದವರ ಕೊಡುಗೆಯು ಅಪಾರವಾಗಿದೆ. ಅದೇ ರೀತಿ 1987ರಲ್ಲಿ ಹೈದರಾಬಾದಿನಲ್ಲಿ ನಡೆದ ಮೊಟ್ಟ ಮೊದಲ ರಾಷ್ಟ್ರೀಯ ದಲಿತ ಸಾಹಿತ್ಯ ಸಮ್ಮೇಳನದಲ್ಲೂ ಇವರ ಪಾತ್ರ ಅಪಾರವಾಗಿದೆ. ಆದರೆ ದುರಂತವೇನೆಂದರೆ, ಅಂದಿನ ಪ್ರಮುಖ ಸಂಘಟನೆಯಾಗಿದ್ದ ದಲಿತ ಸಂಘರ್ಷ ಸಮಿತಿಯ ನಾಯಕರೆಲ್ಲರೂ ಅವರನ್ನು ಕಟುವಾಗಿ ಟೀಕಿಸುತ್ತಿದ್ದರು. ‘ವಿಟಿಆರ್‌ರು ಅರಬ್ ಮತ್ತು ಕ್ರೈಸ್ತ ದೇಶಗಳ ಏಜೆಂಟ್. ನಮ್ಮ ಹೆಸರು ಹೇಳಿಕೊಂಡು ಲಕ್ಷಾಂತರ ರೂಪಾಯಿ ಗಳಿಸಿದ್ದಾರೆ. ಅಕ್ರಮ ಆಸ್ತಿ ಮಾಡಿದ್ದಾರೆ’ ಎಂಬ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದರು. ಈ ಆರೋಪಗಳ ಬಗ್ಗೆ ಒಮ್ಮೆ ಪೂರ್ಣಚಂದ್ರ ತೇಜಸ್ವಿಯವರು, ‘ಏನ್ ಶೆಟ್ಟರೆ, ನಿಮ್ಮಲ್ಲಿ ಸಿಕ್ಕಾಪಟ್ಟೆ ಡಾಲರ್‌ಗಳು, ದಿನಾರ್‌ಗಳು ಇವೆಯಂತಲ್ಲ’ ಎಂದಾಗ, ವಿಟಿಆರ್ ರು ಅಷ್ಟೇ ತಮಾಷೆೆಯಾಗಿ, ‘ಹೌದು, ನಿಮಗೇನಾದರೂ ಸಾಲಬೇಕೆ’ ಎನ್ನುತ್ತಾ, ‘ಈ ದೇಶವನ್ನು ಕಾಡುತ್ತಿರುವ ಬ್ರಾಹ್ಮಣವಾದವನ್ನು ಖತಂ ಮಾಡಲು, ಸೈತಾನನಿಗೂ ನಾವು ಏಜೆಂಟರಾಗುತ್ತೇವೆ’ ಎಂದು ಖಾರವಾಗಿ ಹೇಳಿದ್ದರು. ದಲಿತರು ಎಷ್ಟೇ ವಿರೋಧ ಮಾಡಿದರೂ, ಬಾಬಾಸಾಹೇಬ ಅಂಬೇಡ್ಕರರ ವಿಚಾರಧಾರೆಯನ್ನು ವಿಶ್ವದಾದ್ಯಂತ ಪ್ರಖ್ಯಾತಗೊಳಿಸಿದ ಕೀರ್ತಿಯು ಮಾತ್ರ ಅವರಿಗೆ ಸಲ್ಲುತ್ತದೆ. ಮಾನ್ಯವಾರ್ ಕಾನ್ಷೀ ರಾಮ್ ಸಾಹೇಬರ ಬಹುಜನ ಸಮಾಜ ಸಿದ್ಧಾಂತಕ್ಕೆ ಬಲು ದೊಡ್ಡ ಪ್ರಚಾರ ನೀಡಿದ ಕೀರ್ತಿಯೂ ಸಹ ಅವರಿಗೇ ಸಲ್ಲುತ್ತದೆ. ಅವರು ಬರೆದ ಹಲವಾರು ಪುಸ್ತಕಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. Merit My Foot, Know the Hindu Mind, Dialogue of the Boodevatas, Caste: A Nation Within the Nation, Dalit-Muslim: Why? And How?, Who is the Mother of Hitler? Ambedkar and His Conversion, ಮುಂತಾದ ಪುಸ್ತಕಗಳು ಇಂದಿಗೂ ಜನಪ್ರಿಯವಾಗಿವೆ.

ಪಕ್ಕಾ ಅಂಬೇಡ್ಕರ್‌ವಾದಿಯಾದ ವಿಟಿಆರ್‌ರು, ತಾವು ನಂಬಿದ್ದ ಸಿದ್ಧಾಂತಕ್ಕೆ ತಕ್ಕಂತೆ ಬೌದ್ಧ ದಮ್ಮ ದೀಕ್ಷೆ ಪಡೆದರು (ಇಂದಿಗೂ ಅನೇಕ ಅಂಬೇಡ್ಕರವಾದಿ ಎಂದುಕೊಳ್ಳುವ ಅನೇಕ ದಲಿತರು ಹಿಂದೂಗಳಾಗಿಯೇ ಉಳಿದಿದ್ದಾರೆ!) ಅವರು ಒಬ್ಬರೇ ಆಗಿದ್ದರೂ, ಅವರ ಸಾಹಿತ್ಯವೇ ‘ವಿಟಿಆರ್ ಇಸಮ್’ ಎಂಬ ಚಳವಳಿಯ ರೂಪ ಪಡೆದಿದೆ. ಈ ಚಳವಳಿಯು ಹೊಸ ಪರಿಭಾಷೆಯನ್ನು ಹುಟ್ಟು ಹಾಕಿದೆ. ಇಲ್ಲಿನ ಜಾತಿ ಆಧಾರಿತ ಸಾಮಾಜಿಕ ವ್ಯವಸ್ಥೆಯನ್ನು Brahminical Social Order ಎಂದೂ, ಬ್ರಾಹ್ಮಣವಾದಿಗಳನ್ನು Hindu Nazi ಗಳೆಂದೂ, ಇಲ್ಲಿನ ಜಾತಿವಾದಿ ಪತ್ರಿಕೆಗಳನ್ನು National Toilet Papers ಎಂದೂ ಜನಪ್ರಿಯಗೊಳಿಸಿದ ದಲಿತ್ ವಾಯ್ಸ್ ಭಾಷೆಯು ಇಂದಿಗೂ ಬಳಕೆಯಲ್ಲಿದೆ.

ಪುರೋಹಿತಶಾಹಿಯ ವಿರುದ್ಧ ಸುಮಾರು 60 ವರ್ಷ ಕಾಲ ತಮ್ಮ ಲೇಖನಿಯ ಮೂಲಕ ದೊಡ್ಡ ಸಮರವನ್ನೇ ಸಾರಿದ ವಿಟಿಆರ್ ಮುಂದಿನ ಐದಾರು ಪೀಳಿಗೆಯ ತನಕ ಜೀವಂತವಾಗಿ ಇರುತ್ತಾರೆ. ಈ ಧೀಮಂತ ಚೇತನವು ಇಂದು (20-11-2024) ಮುಂಜಾನೆ 5:30ಕ್ಕೆ ತನ್ನ 93ನೇ ವಯಸ್ಸಿನ ದೇಹವನ್ನು ತ್ಯಜಿಸಿದೆ, ಅಂಬೇಡ್ಕಯುಗದ ಒಂದು ಪ್ರಕಾಶಮಾನವಾದ ಹಣತೆಯು ನಂದಿದೆ. ಆ ಮಹಾನ್ ಚೇತನಕ್ಕೆ ಬಹುಜನವು ಎಂದೆಂದಿಗೂ ಋಣಿಯಾಗಿರುತ್ತದೆ! Long live VTRism! ಪುರೋಹಿತಶಾಹಿಯ ವಿರುದ್ಧ ಸುಮಾರು 60 ವರ್ಷ ಕಾಲ ತಮ್ಮ ಲೇಖನಿಯ ಮೂಲಕ ದೊಡ್ಡ ಸಮರವನ್ನೇ ಸಾರಿದ ವಿಟಿಆರ್ ಮುಂದಿನ ಐದಾರು ಪೀಳಿಗೆಯ ತನಕ ಜೀವಂತವಾಗಿ ಇರುತ್ತಾರೆ. ಈ ಧೀಮಂತ ಚೇತನವು ಇಂದು (20-11-2024) ಮುಂಜಾನೆ 5:30ಕ್ಕೆ ತನ್ನ 93ನೇ ವಯಸ್ಸಿನ ದೇಹವನ್ನು ತ್ಯಜಿಸಿದೆ, ಅಂಬೇಡ್ಕಯುಗದ ಒಂದು ಪ್ರಕಾಶಮಾನವಾದ ಹಣತೆಯು ನಂದಿದೆ. ಆ ಮಹಾನ್ ಚೇತನಕ್ಕೆ ಬಹುಜನವು ಎಂದೆಂದಿಗೂ ಋಣಿಯಾಗಿರುತ್ತದೆ! Long live VTRism!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಂ.ಗೋಪಿನಾಥ್

contributor

ಎಂ.ಗೋಪಿನಾಥ್ ಅಂಬೇಡ್ಕರ್ ವಾದಿ ಕನ್ನಡ ದಲಿತ್ ವಾಯ್ಸ್‌ನ ಸಹಸಂಪಾದಕ

Similar News