ದಾದ್ರಿ ಘಟನೆಗೆ ಒಂದು ವರ್ಷವಾದರೂ ಉತ್ತರಗಳು ಇನ್ನೂ ಸಿಕ್ಕಿಲ್ಲ

Update: 2016-10-03 08:31 GMT

‘ನನಗೆ ಭಾರತದ ಸಂವಿಧಾನದ ಮೇಲೆ ನಂಬಿಕೆಯಿದೆ’-ಬಿಸಾಡ ಗ್ರಾಮದಲ್ಲಿ ತನ್ನ ನೆರೆಮನೆಯ ವ್ಯಕ್ತಿ ತನ್ನ ಕುಟುಂಬದ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿರುವುದರಿಂದ ನಿನಗೆ ಭಯವಾಗಿದೆಯೇ ಎಂದು ನಾನು ಕೇಳಿದಾಗ ಮುಹಮ್ಮದ್ ಅಖ್ಲಾಕ್‌ನ ಮಗ ಸರ್ತಾಝ್ ಹೇಳಿದ ಮಾತಿದು. ಕರುವೊಂದನ್ನು ಕಡಿದು ಗೋಮಾಂಸವನ್ನು ಭಕ್ಷಿಸಿದ್ದಾನೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ ಸೆಪ್ಟಂಬರ್ 2015ರಲ್ಲಿ ನೂರಕ್ಕೂ ಹೆಚ್ಚು ಜನರಿದ್ದ ಗುಂಪೊಂದು ಅಖ್ಲಾಕ್‌ನನ್ನು ಹೊಡೆದು ಸಾಯಿಸಿತ್ತು. ಉತ್ತರ ಪ್ರದೇಶ ಪೊಲೀಸ್ ಅಖ್ಲಾಕ್ ಕುಟುಂಬ ಕರುವನ್ನು ಕಡಿದಿರುವುದಕ್ಕೆ ಯಾವುದೇ ಸಾಕ್ಷಿಯಿಲ್ಲ ಎಂದು ಹೇಳಿದ್ದರೂ ಆ ಕುಟುಂಬವನ್ನು ಈಗಲೂ, ಸೇವಿಸಿದ್ದು ಗೋಮಾಂಸವೇ, ಅಲ್ಲವೇ ಎಂಬ ಪ್ರಶ್ನೆ ಕಾಡುತ್ತಲೇ ಇದೆ.

ಉತ್ತರ ಪ್ರದೇಶದ ಖುರೇಷಿಗಳನ್ನು ಗೋರಕ್ಷಕ ಪಡೆ ಯಾವ ರೀತಿ ಕಾಡುತ್ತಿದೆ ಎಂಬುದನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸರಿಯಾದ ದಾಖಲೆಗಳನ್ನು ಹೊಂದಿ ಪಶುಗಳನ್ನು ಸಾಗಿಸುವ ವೇಳೆಯೂ ಗೋರಕ್ಷಕ ಗುಂಪು ಯಾವ ರೀತಿ ದೌರ್ಜನ್ಯ ಎಸಗುತ್ತದೆ ಮತ್ತು ಹಣಕ್ಕಾಗಿ ಪೀಡಿಸುತ್ತದೆ ಎಂಬುದರ ಬಗ್ಗೆ ದಾಖಲಿಸಲ್ಪಟ್ಟ ಪುರಾವೆಯ ಸಹಿತ ಆರ್‌ಟಿಐ ಕಾರ್ಯಕರ್ತ ಸಲೀಮ್ ಬೇಗ್ ನನಗೆ ತಿಳಿಸಿದರು.

‘ಸಾಗಿಸಲ್ಪಟ್ಟ ಪಶುಗಳನ್ನು ತಡೆದು ಎಲ್ಲಾ ಗೋವುಗಳನ್ನು ಗೋಶಾಲೆಯಲ್ಲಿಟ್ಟ ಅನೇಕ ಪ್ರಕರಣಗಳನ್ನು ನಾನೇ ಖುದ್ದಾಗಿ ಪರಿಶೀಲಿಸಿದ್ದು ಪೊಲೀಸರು ಈ ಪಶುಗಳ ಬಿಡುಗಡೆಯ ಆದೇಶವನ್ನು ಮಾಡಿದಾಗ ಅನೇಕ ಪಶುಗಳು ಸತ್ತಿವೆ ಅಥವಾ ನಾಪತ್ತೆಯಾಗಿವೆ ಎಂದು ಹೇಳಲಾಗುತ್ತಿತ್ತು ಮತ್ತು ಉಳಿದಿರುವ ಪಶುಗಳನ್ನು ವಾಪಸ್ ನೀಡಲಾಗುತ್ತಿತ್ತು. ಒಂದು ಸಾಮಾನ್ಯ ಮುಸ್ಲಿಂ ಪಶು ವ್ಯಾಪಾರಿಗೆ ಈ ಗುಂಪಿನ ಜೊತೆ ಹೋರಾಡುವ ಸಾಮರ್ಥ್ಯವಿರುವುದಿಲ್ಲ ಹಾಗಾಗಿ ಅವರು ಏನು ನೀಡುತ್ತಾರೋ ಅದನ್ನು ಪಡೆದುಕೊಂಡು ಸುಮ್ಮನಾಗುತ್ತಾರೆ. ಇನ್ನು ಸತ್ತ ಅಥವಾ ನಾಪತ್ತೆಯಾದ ಪಶುಗಳು ಎಲ್ಲಿಗೆ ಹೋಗುತ್ತವೆ ಎಂಬುದು ರಹಸ್ಯವೇನೂ ಅಲ್ಲ’. ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಅವರು, ಸಾಧಾರಣ ಆರ್ಥಿಕ ಹಿನ್ನೆಲೆಯಿಂದ ಬಂದಂಥಾ ಒಂದು ಮುಸ್ಲಿಂ ಯುವತಿಯ ವಿವಾಹವು ಆಕೆಯ ಮದುವೆಯಲ್ಲಿ ಅತಿಥಿಗಳಿಗೆ ಬಡಿಸುವ ಸಲುವಾಗಿ ಆಕೆಯ ಸಹೋದರ ಬೀಫ್ ಸಾಗಾಟ ಮಾಡುತ್ತಿದ್ದಾನೆ ಎಂಬ ಕಾರಣಕ್ಕೆ ಪೊಲೀಸರು ಆತನನ್ನು ಬಂಧಿಸಿದ ಕಾರಣದಿಂದ ಮದುವೆ ಮುಂದೂಡಲ್ಪಟ್ಟಿತು ಎಂದು ವಿವರಿಸಿದರು. ಗೋಪಹರೆ ಮತ್ತು ಗೋವು ಮತ್ತು ಅದರ ಸಂತತಿಯ ರಕ್ಷಣೆಯ ಹೆಸರಲ್ಲಿ ಹೆಚ್ಚುತ್ತಿರುವ ಹಿಂಸಾ ಕೃತ್ಯ ಮತ್ತು ಅಖ್ಲಾಕ್‌ನ ಸಾಮೂಹಿಕ ಹತ್ಯೆಗಳು, ಬೇಗ್ ಮಾಹಿತಿ ಹಕ್ಕಿಗೆ ಅರ್ಜಿ ಸಲ್ಲಿಸುವಂತೆ ಮಾಡಿತು. ಸೀಮಿತಗೊಳಿಸಲ್ಪಟ್ಟವರ ಹಕ್ಕುಗಳ ರಕ್ಷಣೆಗಾಗಿ ರಚಿಸಲ್ಪಟ್ಟಿರುವ ಮಾನವ ಹಕ್ಕು ಆಯೋಗದ ಪಾತ್ರವನ್ನು ತನಿಖೆ ನಡೆಸುವುದು ಅವರ ಉದ್ದೇಶವಾಗಿತ್ತು. ಬಹಳ ಮುಖ್ಯವಾಗಿ ಇಂಥಾ ಘಟನೆಗಳು ಮರುಕಳಿಸದಂತೆ ಮಾಡುವಲ್ಲಿ ಇವುಗಳು ನಿಭಾಯಿಸುತ್ತಿರುವ ಪಾತ್ರವನ್ನು ತನಿಖೆ ಮಾಡಲು ಅವರು ಬಯಸಿದ್ದರು.

ಮಾಹಿತಿ ಹಕ್ಕು ಅಡಿಯಲ್ಲಿ ಅವರು ದಾದ್ರಿ ಹತ್ಯೆಯ ಕುರಿತು ವಿವಿಧ ಕಚೇರಿಗಳು ಪಡೆದಿರುವ ದೂರುಪತ್ರಗಳು ಮತ್ತು ಅವುಗಳ ಬಗ್ಗೆ ತೆಗೆದುಕೊಂಡ ಕ್ರಮ ಇತ್ಯಾದಿಗಳ ಕುರಿತು ಒಂಬತ್ತು ಪ್ರಶ್ನೆಗಳನ್ನು ಹೊಂದಿದ್ದ ಅರ್ಜಿಯನ್ನು ಕಳುಹಿಸಿದರು. ಘಟನೆ ನಡೆದ ಸ್ಥಳಕ್ಕೆ ಕಳುಹಿಸಿದ ತನಿಖಾ ತಂಡಗಳ ವರದಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಇತರ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ನೀಡಿದ ಪರಿಹಾರ ಹಾಗೂ ಶಾಂತಿಪಾಲನೆಗಾಗಿ ಮಾಡಿದ ಪ್ರಯತ್ನಗಳು ಜೊತೆಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಗುಪ್ತಚರ ಸಂಸ್ಥೆಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ವಿವರಗಳನ್ನು ಬೇಗ್ ಕೇಳಿದ್ದರು.

2015ರ ಅಕ್ಟೋಬರ್‌ನಲ್ಲಿ ಈ ಅರ್ಜಿಯನ್ನು ಗುಜರಾಯಿಸಿದ್ದು ಅವುಗಳಲ್ಲಿ ಕೇಳಲಾದ ಮುಖ್ಯ ಪ್ರಶ್ನೆಗಳಿಗೆ ವಿವಿಧ ಇಲಾಖೆಗಳು ಮತ್ತು ಆಯೋಗಗಳು ನೀಡಿದ ಉತ್ತರ ಅತ್ಯಂತ ನಿರಾಶಾದಾಯಕವಾಗಿತ್ತು. ಉತ್ತರ ಪ್ರದೇಶ ಮಾನವಹಕ್ಕುಗಳ ಆಯೋಗವು ದಾದ್ರಿ ಪ್ರಕರಣದ ನಂತರ ಯಾವುದೇ ದೂರುಗಳು ಬಂದಿಲ್ಲ ಮತ್ತು ಘಟನಾಸ್ಥಳಕ್ಕೆ ಕಳುಹಿಸಲಾದ ತನಿಖಾ ತಂಡಗಳ ಬಗ್ಗೆ ಮಾಹಿತಿ ‘ಶೂನ್ಯ’ ಎಂದು ತಿಳಿಸಿದ್ದರೆ, ಇತರ ಏಳು ಪ್ರಶ್ನೆಗಳನ್ನು ಅದು ‘ನಿಮ್ಮ ಉಳಿದ ಪ್ರಶ್ನೆಗಳಿಗೆ ಉತ್ತರ ಮೇಲೆ ನೀಡಲಾದ ಮಾಹಿತಿಯಲಿ್ಲ ಲಭ್ಯವಿದೆ’ಯೆಂದಷ್ಟೇ ಉತ್ತರಿಸಿತ್ತು.

ರಾಷ್ಟ್ರೀಯ ಮಾನವಹಕ್ಕು ಆಯೋಗದ ಕಾನೂನು ವಿಭಾಗ ನೀಡಿದ ಒಂದು ಪುಟದ ಉತ್ತರ ಕೂಡಾ ಅಷ್ಟೊಂದು ತೃಪ್ತಿಕರವಾಗಿರಲಿಲ್ಲ. ಇನ್ನು ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ (ಎನ್‌ಎಂಸಿ) ಉತ್ತರವನ್ನು ಗಮನಿಸಿದಾಗ ದಾದ್ರಿಯಿಂದ ಕೇವಲ ಒಂದೂವರೆ ಗಂಟೆ ದೂರದಲ್ಲಿರುವ ಇಂಥಾ ಒಂದು ಸಂಸ್ಥೆಗೆ ಘಟನಾಸ್ಥಳಕ್ಕೆ ತನ್ನ ಪ್ರಥಮ ತಂಡವನ್ನು ಕಳುಹಿಸಿ ಅಂತಾರಾಷ್ಟ್ರೀಯವಾಗಿ ಚರ್ಚಿಸಲ್ಪಡುತ್ತಿರುವ ಘಟನೆಯ ಬಗ್ಗೆ ಕೇವಲ ಐದೂವರೆ ಪುಟಗಳ ವರದಿಯನ್ನು ಸಿದ್ಧಪಡಿಸಲು ಅರ್ಧ ತಿಂಗಳಿಗೂ ಅಧಿಕ ಸಮಯ ಬೇಕಾಗಿದ್ದಾದರೂ ಯಾಕೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ.

ನನ್ನ ಗಮನವನ್ನು ಸೆಳೆದದ್ದು ಮುಖ್ಯಮಂತ್ರಿಗಳ ಕಚೇರಿಯಿಂದ (ಅದು ಬಂದಿದ್ದು ಮಾತ್ರ ಮೊದಲ ದಾವೆ ಹೂಡಿದ ಬಳಿಕ) ಬಂದಂಥಾ ಉತ್ತರ, ಅದರಲ್ಲಿ, 2015ರ ಡಿಸೆಂಬರ್ 3ರಂದು ಅಂಗೀಕಾರವಾದ ಮಾಹಿತಿಹಕ್ಕು ಕಾಯಿದೆಯ ಸೆಕ್ಷನ್ 4(2)ರ ಹೊಸ ನಿಯಮದಂತೆ ಕೇಳಲಾಗುವ ಮಾಹಿತಿಯು ‘ಸಂಬಂಧಪಟ್ಟ ಸಾರ್ವಜನಿಕ ಇಲಾಖೆಯ ಸಾಮರ್ಥ್ಯವನ್ನು ಬಾಧಿಸುವ ಅಸಮಾನ ಸಂಪನ್ಮೂಲ ಶೇಖರಣೆಯನ್ನು ಹೊಂದಿರುವಷ್ಟು ವಿಸ್ತಾರವಾಗಿರಬಾರದು’ ಎಂಬ ಹೇಳಿಕೆ ನೀಡಲಾಗಿ, ಹಾಗಾಗಿ ಉತ್ತರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು. ಖೇದಕರವೆಂದರೆ ಅವರು ಈ ನಿಯಮವನ್ನು ಆರಂಭದಿಂದ ಓದಲು ಮರೆತಿದ್ದರು, ಅದರ ಪ್ರಕಾರ ಈ ದಿನಾಂಕಕ್ಕಿಂತ ಮೊದಲು ಕೇಳಲಾದ ಮಾಹಿತಿಗೆ ಹಿಂದಿನ ರೀತಿಯಲ್ಲೇ ಉತ್ತರ ನೀಡಬೇಕು ಮತ್ತು ಯಾವುದೇ ಕಾರಣಕ್ಕೂ ರದ್ದು ಮಾಡುವುದು ಅಥವಾ ತಿರಸ್ಕರಿಸಕೂಡದು ಎಂದು ಉಲ್ಲೇಖಿಸಲಾಗಿದೆ. ಕಚೇರಿಯು ತನ್ನ ತಪ್ಪು ಮತ್ತು ಸಿಂಧುವಲ್ಲದ ವಾದವನ್ನು ಮುಂದಿಡುತ್ತಾ ಅಖ್ಲಾಕ್ ಸಮೂಹಹತ್ಯೆ, ಕೋಮು ವಾತಾವರಣ ಮತ್ತು ಪರಿಹಾರ ಹಾಗೂ ಶಿಕ್ಷೆಯ ಕುರಿತಾದ ಒಂಬತ್ತು ಪ್ರಶ್ನೆಗಳಲ್ಲಿ ಯಾವೊಂದಕ್ಕೂ ಉತ್ತರ ನೀಡಲು ತಿರಸ್ಕರಿಸಿತು.

ಈ ಉತ್ತರಗಳು ಮಾಹಿತಿ ಹಕ್ಕು ಅಡಿಯಲ್ಲಿ ಕೇಳಲಾದ ಮಾಹಿತಿಯನ್ನು ಜಿಲ್ಲಾಧಿಕಾರಿಯಿಂದ ಹಿಡಿದು ಮುಖ್ಯಮಂತ್ರಿಗಳವರೆಗೆ ವಿವಿಧ ಆಯೋಗಗಳು ಮತ್ತು ಕಚೇರಿಗಳು ಕ್ಷುಲ್ಲಕ ಎಂದು ಭಾವಿಸಿದ್ದರೇ ಅಥವಾ ಆಯೋಗಗಳು ಈ ಬಗ್ಗೆ ತಿಳಿದುಕೊಳ್ಳುವಷ್ಟು ಈ ಘಟನೆ ಪ್ರಮುಖವಾಗಿರಲಿಲ್ಲ ಎಂಬ ಭಾವನೆಯೇ ಎಂದು ನಾವು ಯೋಚಿಸಬೇಕಾಗುತ್ತದೆ. ಸಂವಿಧಾನದ 48ನೇ ವಿಧಿಯ, ರಾಜ್ಯನೀತಿಯ ನಿರ್ದೇಶಿತ ತತ್ವಗಳ ಭಾಗದಲ್ಲಿ ಹೀಗೆ ಉಲ್ಲೇಖಿಸಲಾಗಿದೆ: ‘ಕೃಷಿ ಮತ್ತು ಪಶುಸಂಗೋಪನಾ ಸಂಸ್ಥೆ: ಸರಕಾರವು ಕೃಷಿ ಮತ್ತು ಪಶುಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕವಾಗಿ ನಡೆಸಲು ಪ್ರಯತ್ನಿಸಬೇಕು ಮತ್ತು ಮುಖ್ಯವಾಗಿ ತಳಿಗಳನ್ನು ರಕ್ಷಿಸಲು ಮತ್ತು ವೃದ್ಧಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಗೋವು, ಕರು ಹಾಗೂ ಇತರ ಹಾಲಿಗಾಗಿ ಸಾಕುವ ಪಶುಗಳನ್ನು ಮಾಂಸಕ್ಕಾಗಿ ಹತ್ಯೆ ಮಾಡುವುದನ್ನು ನಿಷೇಧಿಸಬೇಕು’.

  ಭಾರತದಲ್ಲಿ ಗೋಹತ್ಯೆಯ ಸುತ್ತ ನಡೆಯುವ ಬಹುತೇಕ ರಾಜಕೀಯ-ಕಾನೂನು ಹೇಳಿಕೆಗಳು ಕೃಷಿಕಾರ್ಯಗಳಲ್ಲಿ ಹಸುಗಳ ಕಾಣಿಕೆಯನ್ನು, ಮೇಲೆ ತಿಳಿಸಿದ ಹೇಳಿಕೆಯಲ್ಲಿ ಹಸುಗಳು ಪಡೆಯುವ ಸ್ಥಾನವನ್ನಾಧರಿಸಿಯೇ ನುಡಿಯಲಾಗುತ್ತದೆ ಎಂಬುದು ರಹಸ್ಯವಾಗೇನೂ ಉಳಿದಿಲ್ಲ. ಆದರೆ ಪದೇಪದೇ ‘ಮಾತೆ’ಯನ್ನು ರಕ್ಷಿಸಲು ಅದರಲ್ಲೂ ಮುಖ್ಯವಾಗಿ ಚುನಾವಣೆಗಳು ಸಮೀಪಿಸುವಾಗ ಸಾರ್ವಜನಿಕ ಮನೋಭಾವವನ್ನು ಕೆರಳಿಸಲು ಧಾರ್ಮಿಕ ಭಾವನೆಗಳನ್ನು ಬಳಸಲಾಗುತ್ತದೆ. ಮಾಧ್ಯಮಗಳಲ್ಲಿ ವರದಿಯಾಗುವ ‘ಬಿರಿಯಾನಿ’ ಪರಿಶೀಲನೆಗಳು ಮತ್ತು ಬೀಫ್ ಸೇವನೆ ಅಥವಾ ಅದನ್ನು ಸಾಗಾಟ ಮಾಡಿದ ಕಾರಣಕ್ಕೆ ಮಹಿಳೆಯರು ಪುರುಷರು ಎಂದು ಲೆಕ್ಕಿಸದೆ ಸಾರ್ವಜನಿಕವಾಗಿ ನಡೆಸುವ ಹಲ್ಲೆಗಳು ಚಿಂತಿಸುವಂತೆ ಮಾಡುತ್ತವೆ. ಉನಾದಲ್ಲಿ ನಡೆದ ಘಟನೆ ಮತ್ತು ಅದರ ಪರಿಣಾಮವಾಗಿ ಉಂಟಾದ ದಂಗೆ ಕ್ರಾಂತಿಕಾರಿಯಾಗಿದೆ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಆಧರಿಸಿದ ಬೇಡಿಕೆ ಮತ್ತು ಚರ್ಚೆಗೆ ಆಸ್ಪದವಿಲ್ಲದ ಮೂಲಭೂತ ಸ್ವಾತಂತ್ರ್ಯಗಳಿಗಾಗಿ ಅಂಥಾ ಅಹಿಂಸಾತ್ಮಕ ಪ್ರತಿಭಟನೆಯ ಪ್ರತಿಕೃತಿ ಇಂಥಾ ಪಹರೆ ಗುಂಪುಗಳು ಮತ್ತು ತಂಡಗಳ ಹಿಂಸಾತ್ಮಕ ಕೃತ್ಯಗಳಿಂದ ಬಾಧಿಸಲ್ಪಟ್ಟಿರುವ ಸೀಮಿತವರ್ಗಗಳಿಗೆ ಮುಂದಿನ ದಾರಿಯನ್ನು ತೋರಿಸಿದೆ.

ಈ ವಾರ ಅಖ್ಲಾಕ್‌ನ ಸಮೂಹಹತ್ಯೆ ನಡೆದು ಒಂದು ವರ್ಷ ಕಳೆಯುತ್ತದೆ, ಅದರ ನಂತರ ‘ಕಾನೂನು ಮುರಿಯುವವರ ಮತ್ತು ಗೋವನ್ನು ಅಗೌರವದಿಂದ ಕಾಣುವವರ’ ಮೇಲೆ ಇನ್ನೂ ಹಲವಾರು ಹಿಂಸಾತ್ಮಕ ದಾಳಿಗಳು ನಡೆದವು. ಅಧಿಕಾರದ ಚುಕ್ಕಾಣಿ ಹಿಡಿದಿರುವವರು ಆಗೊಮ್ಮೆ ಈಗೊಮ್ಮೆ ಗೋಪಹರೆದಾರರ ವಿರುದ್ಧ ಹೇಳಿಕೆಯನ್ನು ನೀಡಿದರೆ ಸಾಕೇ ಅಥವಾ ಇನ್ನೂ ಹಲವು ಜನರ ಪ್ರಾಣ ಹೋಗುವುದಕ್ಕೆ ಮೊದಲು ವಿವಿಧ ಮಟ್ಟದಲ್ಲಿ ಅಧಿಕಾರವನ್ನು ಸವಿಯುತ್ತಿರುವವರನ್ನು ಈ ಘಟನೆಗಳಿಗೆ ಜವಾಬ್ದಾರರನ್ನಾಗಿ ಮಾಡಲು ಇದು ಸೂಕ್ತ ಸಮಯವೇ ಎಂಬ ಗೊಂದಲ ಉಂಟಾಗುತ್ತದೆ.

-ವಿಸ್ಮಯ

ರಾಷ್ಟ್ರೀಯ ಮಾನವಹಕ್ಕು ಆಯೋಗದ ಕಾನೂನು ವಿಭಾಗ ನೀಡಿದ ಒಂದು ಪುಟದ ಉತ್ತರ ಕೂಡಾ ಅಷ್ಟೊಂದು ತೃಪ್ತಿಕರವಾಗಿರಲಿಲ್ಲ. ಇನ್ನು ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ (ಎನ್‌ಎಂಸಿ) ಉತ್ತರವನ್ನು ಗಮನಿಸಿದಾಗ ದಾದ್ರಿಯಿಂದ ಕೇವಲ ಒಂದೂವರೆ ಗಂಟೆ ದೂರದಲ್ಲಿರುವ ಇಂಥಾ ಒಂದು ಸಂಸ್ಥೆಗೆ ಘಟನಾಸ್ಥಳಕ್ಕೆ ತನ್ನ ಪ್ರಥಮ ತಂಡವನ್ನು ಕಳುಹಿಸಿ ಅಂತಾರಾಷ್ಟ್ರೀಯವಾಗಿ ಚರ್ಚಿಸಲ್ಪಡುತ್ತಿರುವ ಘಟನೆಯ ಬಗ್ಗೆ ಕೇವಲ ಐದೂವರೆ ಪುಟಗಳ ವರದಿಯನ್ನು ಸಿದ್ಧಪಡಿಸಲು ಅರ್ಧ ತಿಂಗಳಿಗೂ ಅಧಿಕ ಸಮಯ ಬೇಕಾಗಿದ್ದಾದರೂ ಯಾಕೆ ಎಂಬ ಪ್ರ್ನೆ ನಮ್ಮಲ್ಲಿ ಮೂಡುತ್ತದೆ.

Writer - ವಿಸ್ಮಯ

contributor

Editor - ವಿಸ್ಮಯ

contributor

Similar News