ನಗರಗಳೆಂಬ ನರಕಗಳು
ಸುಮಾರು 15 ಶತಕೋಟಿ ಡಾಲರ್ ವೆಚ್ಚದಲ್ಲಿ ಭಾರತದಲ್ಲಿ ನಿರ್ಮಾಣ ಮಾಡಲು ಹೊರಟಿರುವ ಸ್ಮಾರ್ಟಿ ಸಿಟಿ (ಪರಿಪೂರ್ಣ ನಗರಗಳು) ಎಂಬ ಯೋಜನೆ ಕೇವಲ ಸಿರಿವಂತ ನಾಗರಿಕರಿಗಾಗಿ ರೂಪಿಸಿದ ಯೋಜನೆಯೆಂದು ವರದಿಯಲ್ಲಿ ಟೀಕಿಸಲಾಗಿದೆ. ಬಡವರನ್ನು , ಮಧ್ಯಮ ವರ್ಗದ ಜನತೆಯನ್ನು ಯೋಜನೆಗಳಿಂದ ಹೊರಗಿಟ್ಟು ನಗರಗಳನ್ನು ರೂಪಿಸುವುದು ಜಾಗತೀಕರಣದ ಮೂಲ ಸೂತ್ರಗಳಲ್ಲಿ ಒಂದಾಗಿದೆ.
ವರ್ಲ್ಡ್ ವಾಚ್ ಇನ್‌ಸ್ಟಿಟ್ಯೂಟ್ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ 21ನೆ ಶತಮಾನದ ನಾಗರಿಕ ರಣದ ವಾಸವೆಂಬುದು ನರಕ ಸದೃಶ್ಯ ಬದುಕು ಎಂಬುದು ಮತ್ತೊಮ್ಮೆ ದೃಢಪಟ್ಟಿದೆ. ಜಗತ್ತಿನಾದ್ಯಂತ ಅತಿ ವೇಗವಾಗಿ ಬೆಳೆಯುತ್ತಿರುವ ನಗರೀಕರಣದಿಂದಾಗಿ ಬಡತನ ರೇಖೆಯ ಕೆಳಗೆ ಬದುಕುತ್ತಿರುವ ಬಡವರ ಪಾಲಿಗೆ ಆರೋಗ್ಯ, ವಸತಿ ಮತ್ತು ಕುಡಿಯುವ ನೀರು ಹೀಗೆ ಎಲ್ಲವೂ ಮರೀಚಿಕೆಯಾಗುತ್ತಿವೆ..
ನಗರಗಳಲ್ಲಿ ಮಿತಿಮೀರಿ ಬೆಳೆಯುತ್ತಿರುವ ವಾಹನಗಳ ಸಮಸ್ಯೆಯಿಂದಾಗಿ ಜನರ ದೈನಂದಿನ ಬದುಕು ಅಸಹನೀಯವಾಗಿದೆ. ಮೇಲು ಸೇತುವೆಗಳಾದವು, ರಸ್ತೆಗಳಾದವು, ಸುರಂಗ ಮಾರ್ಗದ ರೈಲುಗಳಾದವು, ಮುಂದಿನ ದಾರಿ ಯಾವುದು? ಹಿಂದೆ ಕುಟುಂಬ ಕ್ಕೊಂದು ದ್ವಿಚಕ್ರ ವಾಹನ ಅಥವಾ ಕಾರು ಇದ್ದ ಕಾಲ ಹೋಗಿ ಇದೀಗ ಪ್ರತಿ ಕುಟುಂಬದ ಸದಸ್ಯನಿಗೊಂದು ವಾಹನ ಎಂಬ ಕಾಲಘಟ್ಟದಲ್ಲಿ ನಾವೀಗ ಬದುಕುತ್ತಿದ್ದೇವೆ. ಸಿಲಿಕಾನ್ ಸಿಟಿ ಎಂಬ ಖ್ಯಾತಿ ಪಡೆದಿದ್ದ ಬೆಂಗಳೂರು ನಗರದಿಂದ ಒಂದೊಂದಾಗಿ ಮಾಹಿತಿ ತಂತ್ರಜ್ಞಾನದ ಕಂಪೆನಿಗಳು ದೇಶದ ಇತರೆ ಸಣ್ಣ ನಗರಗಳಿಗೆ ವಲಸೆ ಹೋಗಲು ಆರಂಭಿಸಿವೆ. ಕಳೆದ ಜೂನ್ ತಿಂಗಳಿನಲ್ಲಿ ಕರ್ನಾಟಕ ಸರಕಾರ ದೇವನಹಳ್ಳಿಯ ಏರ್‌ಪೋರ್ಟ್ ರಸ್ತೆಯಲ್ಲಿ ಮೇಕ್ರಿ ಸರ್ಕಲ್‌ನಿಂದ ಬ್ಯಾಟರಾಯನ ಪುರದವರೆಗೆ 6.7 ಕಿ.ಮೀ. ಉದ್ದದ ಆರು ರಸ್ತೆಗಳ (ಏಕ ಮಾರ್ಗವಾಗಿ ತಲಾ ಮೂರು ರಸ್ತೆಗಳು) ಮೇಲು ರಸ್ತೆಯನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ. 1,350 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ರಸ್ತೆಗೆ ಸುಮಾರು 55 ಸಾವಿರ ಟನ್ ಕಬ್ಬಿಣ ಬಳಕೆಯಾಗಬಹುದೆಂದು ತಜ್ಞರು ಅಂದಾಜಿಸಿದ್ದಾರೆ. ಈಗಾಗಲೇ ಈ ರಸ್ತೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇವುಗಳು ಜನಸಾಮಾನ್ಯರಿಗಿಂತ ಮಿಗಿಲಾಗಿ ಉಳ್ಳವರ ಸುಗಮ ಸಂಚಾರಕ್ಕೆ ನಿರ್ಮಾಣವಾಗುವ ರಸ್ತೆಗಳು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆಧುನಿಕ ಯುಗದ ಅಭಿವೃದ್ಧಿಯೆಂದರೆ ಕಟ್ಟುವುದು ಮತ್ತು ಕೆಡುವುದು ಎಂಬಂತಾಗಿದೆ. ಇಂದಿಗೂ ಕರ್ನಾಟಕದ ಮೂಲೆ ಮೂಲೆಗಳಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ಊರುಗಳಲ್ಲಿ ಶತಮಾನ ಕಂಡ ಸರಕಾರಿ ಶಾಲೆಗಳು ಮತ್ತು ಕಟ್ಟಡಗಳನ್ನು ನಾವು ಕಾಣಬಹುದು. ಆದರೆ ನಗರಗಳಲ್ಲಿ ಕೇವಲ ಕಾಲು ಶತಮಾನ ಕಂಡ ಸರಕಾರಿ ಕಟ್ಟಡಗಳನ್ನು ನಾವು ಕಾಣಲು ಸಾಧ್ಯವಾಗುತ್ತಿಲ್ಲ. ಇಂತಹ ವಾಸ್ತವ ಸತ್ಯವನ್ನು ಮನಗಂಡಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು 1986ರಲ್ಲಿ ಪ್ರಧಾನಿಯಾಗಿದ್ದುಕೊಂಡು ‘‘ಸಾರ್ವಜನಿಕ ಉಪಯೋಗಕ್ಕಾಗಿ ಸರಕಾರ ವಿನಿಯೋಗಿಸುತ್ತಿರುವ ಬಂಡವಾಳದಲ್ಲಿ ಕೇವಲ ಹದಿನೈದರಷ್ಟು (ಅಂದರೆ ಒಂದು ರೂಪಾಯಿಯಲ್ಲಿ ಹದಿನೈದು ಪೈಸೆ) ಮಾತ್ರ ವಿನಿಯೋಗವಾಗುತ್ತಿದ್ದು, ಉಳಿದದ್ದೆಲ್ಲಾ ದುರ್ಬಳಕೆಯಾಗುತ್ತಿದೆ’’ ಎಂದಿದ್ದರು. ಮೂರು ದಶಕಗಳ ನಂತರವೂ ಅವರ ಮಾತುಗಳು ಇಂದಿಗೂ ಅರ್ಥಪೂರ್ಣ ಎನಿಸುತ್ತಿವೆ.
ವರ್ಲ್ಡ್ ವಾಚ್ ಸಂಸ್ಥೆಯು ತನ್ನ ವರದಿಯಲ್ಲಿ ಬೆಂಗಳೂರಿನಿಂದ ಹಿಡಿದು ಚೀನಾದ ಬೀಜಿಂಗ್ ನಗರದ ವರೆಗೆ ನಗರಗಳ ಸಮಸ್ಯೆಗಳನ್ನು ವಿಶ್ಲೇಷಿಸಿ, ನಿಜಕ್ಕೂ ನಗರಗಳು ಸುಸ್ಥಿರ ಅಭಿವೃದ್ಧಿ ಕಾಣಲು ಸಾಧ್ಯವೇ? ಎಂಬ ಪ್ರಶ್ನೆಯನ್ನು ಎತ್ತಿದೆ. ನಗರದ ಅಭಿವೃದ್ಧಿಗೆ ದೂರಾಲೋಚನೆ ಇಲ್ಲದಿರುವುದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ವರದಿಯನ್ನು ವಿಶ್ಲೇಷಿಸಿರುವ ಹಿರಿಯ ಪತ್ರಕರ್ತೆ ಶಕುಂತಲಾ ನರಸಿಂಹನ್ ಜನತೆಯ ದೃಷ್ಟಿಕೋನವನ್ನು ಕಡೆಗಣಿಸಿ, ಕುರುಡು ನೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿರುವ ಪರಿಣಾಮ ಇಂದು ನಗರಗಳು ವಾಹನಗಳ ವಿಷಾನಿಲ ಮತ್ತು ಹೊಗೆಯಿಂದ ಗ್ಯಾಸ್ ಛೇಂಬರ್‌ಗಳಾಗಿವೆ ಎಂದಿದ್ದಾರೆ.
ಕಳೆದ ಎರಡು ದಶಕಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ವಲಸೆ ಹೋಗುತ್ತಿರುವವರ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ. ಜಗತ್ತಿನಾದ್ಯಂತ ನಗರದ ಕೊಳೆಗೇರಿಗಳು ವಲಸಿಗರಿಂದ ತುಂಬಿ ತುಳುಕುತ್ತಿವೆ. ಅವರ ಆಹಾರ ಸಂಸ್ಕೃತಿ ನಗರಕ್ಕೆ ಬಂದ ಮೇಲೆ ಬದಲಾಗಿದೆ. ಪ್ರತೀ ವರ್ಷ 70 ಲಕ್ಷ ಜನತೆ ಜಗತ್ತಿನ ನಗರಗಳಲ್ಲಿ ವಾಹನ ಹೊಗೆ ಮತ್ತು ವಿಷಾನಿಲಗಳ ಪ್ರಯುಕ್ತ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಜನಸಾಮಾನ್ಯರ ಬಳಕೆಗಾಗಿ ಇದ್ದ ಪಾದಚಾರಿ ರಸ್ತೆಗಳು, ಉದ್ಯಾನವನಗಳು, ಖಾಲಿ ಪ್ರದೇಶಗಳೆಲ್ಲಾ ವಾಹನಗಳ ಪಾರ್ಕಿಂಗ್ ಪ್ರದೇಶವಾಗಿ ಪರಿವರ್ತನೆಗೊಂಡಿವೆ. ಇಂತಹ ಅಸಮತೋಲನ ಹಾಗೂ ಅಸಮರ್ಪಕ ಬೆಳವಣಿಗೆಗಳಿಂದಾಗಿ ಕೊಳೆಗೇರಿಗಳು ಸೃಷ್ಟಿಯಾಗುತ್ತಿದ್ದು ಇವುಗಳ ನಿವಾರಣೆಗೆ ಜಗತ್ತಿನ ಯಾವ ಸರಕಾರದ ಕೈಯಲ್ಲೂ ಯಾವುದೇ ಮಂತ್ರದಂಡವಿಲ್ಲದಂತಾಗಿದೆ. ಪ್ರತೀ ಐದು ಅಥವಾ ಹತ್ತು ವರ್ಷಕ್ಕೊಮ್ಮೆ ಅವರನ್ನು ಒಕ್ಕಲೆಬ್ಬಿಸಿ ನಗರದ ಹೊರವಲಯಕ್ಕೆ ದಬ್ಬುವುದೊಂದೇ ಪರಿಹಾರ ಎಂಬಂತಾಗಿದೆ.
ಇರುವ ಗ್ರಾಮಗಳನ್ನು ಅಭಿವೃದ್ಧಿ ಪಡಿಸುವುದು, ಹಳ್ಳಿಗಳಿಗೆ ಮೂಲ ಭೂತ ಸೌಲಭ್ಯ ಒದಗಿಸಿಕೊಡುವುದು, ಉದ್ಯೋಗ ಸೃಷ್ಟಿಗೆ ಅವಕಾಶವಾಗುವಂತೆ ಗ್ರಾಮಾಂತರ ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹಿಸುವ ಮತ್ತು ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸುವ ದೃಷ್ಟಿಕೋನ ಯಾವುದೇ ಸರಕಾರಗಳಿಗೆ ಇಲ್ಲವಾಗಿದೆ. ಪ್ರತಿಯೊಂದು ಸರಕಾರಗಳು ಜಿ.ಡಿ.ಪಿ. ಬೆಳವಣಿಗೆಗೆ ಒತ್ತು ನೀಡುತ್ತಿರುವ ಪರಿಣಾಮ ಬಡವರ ಮತ್ತು ಶ್ರೀಮಂತರ ನಡುವಿನ ಕಂದಕ ದಿನೇ ದಿನೇ ಹಿರಿದಾಗುತ್ತಾ ಹೋಗುತ್ತಿದೆ. ಜಗತ್ತಿನ ಅತಿ ಶ್ರೀಮಂತರು ಇರುವ ರಾಷ್ಟರಗಳಲ್ಲಿ ಭಾರತಕ್ಕೆ ಏಳನೆಯ ಸ್ಥಾನ ಎಂದು ಹೆಮ್ಮೆ ಪಟ್ಟುಕೊಳ್ಳುವ ನಾವು ಅತಿ ಬಡವರು ಇರುವ ರಾಷ್ಟ್ರಗಳ ಪೈಕಿ ಯಾವ ಸ್ಥಾನದಲ್ಲಿದ್ದೀವಿ (130ನೆ ಸ್ಥಾನ) ಎಂಬುದನ್ನು ಸಹ ನೋಡಿ ಮನದಟ್ಟು ಮಾಡಿಕೊಳ್ಳಬೇಕಿದೆ.
ಸುಮಾರು 15 ಶತಕೋಟಿ ಡಾಲರ್ ವೆಚ್ಚದಲ್ಲಿ ಭಾರತದಲ್ಲಿ ನಿರ್ಮಾಣ ಮಾಡಲು ಹೊರಟಿರುವ ಸ್ಮಾರ್ಟಿ ಸಿಟಿ (ಪರಿಪೂರ್ಣ ನಗರಗಳು) ಎಂಬ ಯೋಜನೆ ಕೇವಲ ಸಿರಿವಂತ ನಾಗರೀಕರಿಗಾಗಿ ರೂಪಿಸಿದ ಯೋಜನೆಯೆಂದು ವರದಿಯಲ್ಲಿ ಟೀಕಿಸಲಾಗಿದೆ. ಬಡವರನ್ನು , ಮಧ್ಯಮ ವರ್ಗದ ಜನತೆಯನ್ನು ಯೋಜನೆಗಳಿಂದ ಹೊರಗಿಟ್ಟು ನಗರಗಳನ್ನು ರೂಪಿಸುವುದು ಜಾಗತೀಕರಣದ ಮೂಲ ಸೂತ್ರಗಳಲ್ಲಿ ಒಂದಾಗಿದೆ. ಕೊಳ್ಳು ಬಾಕ ಸಂಸ್ಕೃತಿಯ ಜಗತ್ತಿನಲ್ಲಿ ಸರಕುಗಳನ್ನು ಬಳಸಿ ಬಿಸಾಡುವ ಗ್ರಾಹಕರು ಸೃಷ್ಟಿಯಾಗುವುದು ನಗರಗಳಲ್ಲಿ ಮಾತ್ರವೇ ಹೊರತು ಹಳ್ಳಿಗಳಲ್ಲಿ ಅಲ್ಲ. ಇಂದರಿಂದಾಗಿ ಹಳ್ಳಿಗಳು ಅಭಿವೃದ್ಧಿಯಾಗದೆ, ನರಕಗಳಂತೆ, ಪಾಳು ಬಿದ್ದ ಸ್ಮಶಾನದಂತೆ ತೋರುತ್ತಿವೆ. ದಿನೆ ದಿನೇ ಅದೃಷ್ಟ ಅರಸಿಕೊಂಡು ಹೋಗುವವರ ಸಂಖ್ಯೆ ಬೆಳೆಯುತ್ತಿದೆ. ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನಗರ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಇದೊಂದು ಮದ್ದಿಲ್ಲದ ಕಾಯಿಲೆ ಎಂಬಂತಾಗಿದೆ. ನಗರಗಳಲ್ಲಿ ಹೆಚ್ಚುತ್ತಿರುವ ಅಪರಾಧ, ಅತ್ಯಾಚಾರ, ಕೋಮು ಗಲಭೆ, ಮತ್ತು ಸಂಘಟಿತ ಅಪರಾಧಗಳ ಹಿಂದೆ ನಾವು ಸೃಷ್ಟಿಸಿಕೊಂಡಿರುವ ಸಾಮಾಜಿಕ ಸಮಸ್ಯೆಗಳು ಕಾರಣ ಎಂಬುದನ್ನು ಸರಕಾರಗಳು ಈಗಲಾದರೂ ಅರಿಯಬೇಕಿದೆ. ಎಲ್ಲವಕ್ಕೂ ಖಾಸಾಗಿಕರಣವೇ ಮದ್ದು ಎಂಬ ಮನಸ್ಥಿತಿಗೆ ತಲುಪಿರುವ ಸರಕಾರಗಳು ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಮುಂತಾದ ಪ್ರಮುಖ ಬೇಡಿಕೆಗಳನ್ನು ಪೂರೈಸಲಾಗದೆ ಖಾಸಾಗಿಯವರಿಗೆ ವಹಿಸುತ್ತಿವೆ. ಇದರಿಂದಾಗಿ ಯಾವೊಂದು ಸೌಲಭ್ಯಗಳು ಬಡವರಿಗೆ ನಿಲುಕದಂತಾಗಿವೆ. ಭವಿಷ್ಯದ ದಿನಗಳಲ್ಲಿ ನಗರಗಳನ್ನು ಮುಖ್ಯವಾಗಿ ಕಾಡುವ ಸಮಸ್ಯೆಗಳೆಂದರೆ, ಕುಡಿಯುವ ನೀರು ಮತ್ತು ಅಗಾಧವಾಗಿ ಸೃಷ್ಟಿಯಾಗುತ್ತಿರುವ ಕಸದ ವಿಲೆವಾರಿ. ಇವುಗಳಲ್ಲಿ ನೈಸರ್ಗಿಕವಾಗಿ ಕರಗದೆ ಉಳಿಯುತ್ತಿರುವ ಪ್ಲಾಸ್ಟಿಕ್‌ನಂತಹ ತ್ಯಾಜ್ಯ ವಸ್ತುಗಳು ಜಲಮೂಲಗಳಿಗೆ, ಪರಿಸರಕ್ಕೆ ಮತ್ತು ಪ್ರಾಣಿ ಹಾಗೂ ಪಕ್ಷಿ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಿವೆ. ಭಾರತದ ಅತ್ಯಂತ ವಾಯುಕಲುಷಿತ ನಗರಗಳೆಂದು ಅಲಹಾಬಾದ್, ದಿಲ್ಲಿ, ಘಜಿಯಾಬಾದ್ , ಕಾನ್ಪುರ, ಛತ್ತಿಸಗಡದ ರಾಜಧಾನಿ ರಾಯ್ ಪುರ, ದಾಖಲಾಗಿದ್ದರೆ, ಅತಿ ಕಡಿಮೆ ವಾಯು ಮಾಲಿನ್ಯದ ನಗರಳೆಂದು ತಮಿಳುನಾಡಿನ ಚೆನ್ನೈ, ಕೊಯಮತ್ತೂರು ಮತ್ತು ಮಧುರೈ ನಗರಗಳು ದಾಖಲಾಗಿವೆ. ಇನ್ನು ಭಾರತದ ನಗರಗಳಿಂದ ಪ್ರತಿ ದಿನ ಹೊರಬೀಳುತ್ತಿರುವ ಒಂದು ಕೊಟಿ, ಇಪ್ಪತ್ತು ಲಕ್ಷ ಲೀಟರ್ ಕೊಳಚೆ ನೀರಿನಲ್ಲಿ ಕೇವಲ 37ರಷ್ಟು ಭಾಗ ಮಾತ್ರ ಸಂಸ್ಕೃರಣೆಗೆ ಒಳಪಡುತ್ತಿದೆ. ಉಳಿದ ನೀರನ್ನು ಹಾಗೇಯೆ ನದಿಗೆ ಬಿಡಲಾಗುತ್ತಿದೆ. ನಗರಗಳ ಅಭಿವೃದ್ಧಿಯ ಯೋಜನೆಗಳಲ್ಲಿ ಪರಿಸರ ಕುರಿತ ಕಾಳಜಿ ಮತ್ತು ಮುಂದಾಲೋಚನೆಗಳು ಇರದಿದ್ದರೆ, ನಗರಗಳು ನಗರವಾಸಿಗಳ ಪಾಲಿಗೆ ಭವಿಷ್ಯದ ನರಕಗಳಾಗುವುದು ಖಚಿತ.