ಅನಾಟಮಿ ಆಫ್ ವಾಯ್‌ಲೆನ್ಸ್... ವಾಸ್ತವಕ್ಕೆ ಹತ್ತಿರವಾಗುವ ಪ್ರಯತ್ನ..

Update: 2016-10-10 10:05 GMT

 ದಿಲ್ಲಿ ಗ್ಯಾಂಗ್‌ರೇಪ್ ಪ್ರಕರಣದ ಆರು ಮಂದಿ ಅಪರಾಧಿಗಳು ಹಾಗೂ ಅವರ ಕುಟುಂಬಗಳ ಹಿನ್ನೆಲೆಯ ಬಗ್ಗೆ ಬೆಳಕು ಚೆಲ್ಲುವ ಈ ಚಿತ್ರದ ಹಲವು ದೃಶ್ಯಗಳನ್ನು ಕಲಾವಿದರ ತರಬೇತಿ ಕಾರ್ಯಾಗಾರದಲ್ಲೇ ನೇರವಾಗಿ ಚಿತ್ರೀಕರಿಸಲಾ ಗಿದೆ. ಕಲಾವಿದರಿಗೆ ಚಿತ್ರದ ಕಥೆ ಹಾಗೂ ಸನ್ನಿವೇಶಗಳನ್ನು ವಿವರಿಸಿ, ಅವರಿಂದಲೇ ಸಹಜ ಅಭಿನಯವನ್ನು ತೆಗೆಸಿಕೊಂಡು, ಅದನ್ನು ನೇರವಾಗಿ ಕ್ಯಾಮರಾದಲ್ಲಿ ಶೂಟ್ ಮಾಡಲಾಗಿದೆ.

ದೀಪಾ ಮೆಹ್ತಾ     ನಿರ್ದೇಶನದ ನೂತನ ಚಿತ್ರ ‘ಅನಾಟಮಿ ಆಫ್ ವಾಯ್‌ಲೆನ್ಸ್’ 2012ರ ದಿಲ್ಲಿ ಗ್ಯಾಂಪ್‌ರೇಪ್ ಘಟನೆಯನ್ನು ಆಧರಿಸಿದ್ದಾಗಿದೆ. ಈ ಚಿತ್ರವು ‘ಫೈರ್’, ‘ವಾಟರ್’ ‘ಅರ್ಥ್’ ಹಾಗೂ ಮಿಡ್‌ನೈಟ್ಸ್ ಚಿಲ್ಡ್ರನ್ ಸೇರಿದಂತೆ ಅವರ ಹಿಂದಿನ ಚಿತ್ರಗಳಿಗಿಂತ ತೀರಾ ವಿಭಿನ್ನವಾಗಿದೆ. ದೀಪಾ ಅವರ ‘ಅನಾಟಮಿ ಆಫ್ ವಾಯ್‌ಲೆನ್ಸ್’ ಚಿತ್ರವನ್ನು, ದಿಲ್ಲಿ ಗ್ಯಾಂಗ್‌ರೇಪ್ ಘಟನೆಯ ಕುರಿತಾದ ಲೆಸ್ಲೆ ಉಡ್ವಿನ್ ಅವರ ‘ಇಂಡಿಯಾಸ್ ಡಾಟರ್’ನಂತಹ ಕ್ರೈಂ ಕುರಿತಾದ ಸಾಕ್ಷ ಚಿತ್ರದ ಜೊತೆ ಹೋಲಿಸಲು ಯಾವ ರೀತಿಯಿಂದಲೂ ಸಾಧ್ಯವಿಲ್ಲ. 93 ನಿಮಿಷಗಳ ಈ ಪ್ರಾಯೋಗಿಕ ಚಿತ್ರವು, ಲೈಂಗಿಕ ಅಪರಾಧ ಕೃತ್ಯಗಳಿಗೆ ಕಾರಣವಾಗುವಂತಹ ಸಾಮಾಜಿಕ ಹಾಗೂ ಲೈಂಗಿಕ ಪರಿಸರವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿದೆ. ಈ ಚಿತ್ರವು ಸಂತ್ರಸ್ತೆ ಹಾಗೂ ಆರು ಅತ್ಯಾಚಾರಿಗಳು ಮತ್ತವರ ಕುಟುಂಬಗಳ ಬದುಕನ್ನು ತೆರೆಯ ಮೇಲೆ ಮರುಸೃಷ್ಟಿಸಿದೆ. ಈ ಅಪರಾಧದ ಬರ್ಬರತೆಯ ಬಗ್ಗೆ ದೀಪಾ ಮೆಹ್ತಾಗೆ ತೀವ್ರ ಆಕ್ರೋಶವಿದ್ದರೂ, ಅದು ಅತ್ಯಾಚಾರಿಗಳನ್ನು ಹಾಗೂ ಅವರಂತಹ ಅನೇಕರ ಸೃಷ್ಟಿಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ಆಕೆಯನ್ನು ಕುರುಡಳನ್ನಾಗಿಸಲಿಲ್ಲ. ಹಲವು ವರ್ಷಗಳ ಬಡತನ,ಲೈಂಗಿಕ ಕಿರುಕುಳ, ಕೌಟುಂಬಿಕ ಹಿಂಸೆ, ಲೈಂಗಿಕ ಪ್ರತ್ಯೇಕತೆ ಹಾಗೂ ಪುರುಷ ರೋಲ್‌ಮಾಡೆಲ್‌ಗಳ ಅನುಪಸ್ಥಿತಿ ಇವುಗಳೆಲ್ಲದರ ಪರಿಣಾಮವಾಗಿ ಈ ಅಪರಾಧಿಗಳಲ್ಲಿ ಮಡುಗಟ್ಟಿದ ಬರ್ಬರತೆ ಹಾಗೂ ಅಮಾನವೀಯತೆಯನ್ನು, ಅನಾಟಮಿ ಆಫ್ ವಾಯ್‌ಲನ್ಸ್‌ನ ಪುರುಷ ಪಾತ್ರಗಳು ಅತ್ಯಂತ ಪರಿಣಾಮಕಾರಿಯಾಗಿ ತೆರೆಯ ಮೇಲೆ ಅಭಿವ್ಯಕ್ತಿಗೊಳಿಸಿವೆ.

  ಬಹುತೇಕ ಹ್ಯಾಂಡಿಕ್ಯಾಮರಾದಿಂದಲೇ ಚಿತ್ರೀಕರಿಸಲ್ಪಟ್ಟಿರುವ ಈ ಚಿತ್ರಕ್ಕೆ ವಂಶ್ ಭಾರದ್ವಾಜ್ ಹಾಗೂ ಸೀಮಾ ಬಿಸ್ವಾಸ್ ಸೇರಿದಂತೆ ವಿವಿಧ ಕಲಾವಿದರು ತಮ್ಮ ನಿರ್ಭೀತ ಅಭಿನಯದ ಮೂಲಕ ಶಕ್ತಿಯನ್ನು ತುಂಬಿದ್ದಾರೆ. ಅನಾಟಮಿ ಆಫ್ ವಾಯ್‌ಲೆನ್ಸ್ ವೀಕ್ಷಿಸುವಾಗ ಆಗಾಗ್ಗೆ ನಮ್ಮ ಮನಸ್ಸು ಜರ್ಝರಿತವಾಗುತ್ತದೆ, ಆದರೆ ಅನಿರೀಕ್ಷಿತವಾಗಿ ಹೃದಯಸ್ಪರ್ಶಿ ಅನುಭವಗಳನ್ನೂ ನೀಡುತ್ತದೆ.

ಅಕ್ಟೋಬರ್ 20ರಿಂದ 27ರವರೆಗೆ ನಡೆಯಲಿರುವ ಮುಂಬೈ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಈ ಚಿತ್ರದ ನಿರ್ಮಾಣದ ಹಿಂದೆ ಒಂದು ದೊಡ್ಡ ಕಥೆಯೇ ಇದೆ. ಅದನ್ನು ದೀಪಾ ಮೆಹ್ತಾ ಅವರ ಮಾತುಗಳಲ್ಲಿಯೇ ಓದಿ...

ಮೂರು ವರ್ಷಗಳ ಹಿಂದೆ ‘ಮಾವೆನ್ ಪಿಕ್ಚರ್ಸ್’ ಸಂಸ್ಥೆಯ ಸೆಲಿನ್ ರ್ಯಾಟ್ರೆಯ್ ಹಾಗೂ ಟ್ರೂಡಿ ಸ್ಟೈಲರ್ ನನಗೆ ಕರೆ ಮಾಡಿ, ದಿಲ್ಲಿ ಗ್ಯಾಂಗ್‌ರೇಪ್ ಘಟನೆಯ ಕುರಿತು ಚಿತ್ರವೊಂದನ್ನು ನಿರ್ದೇಶಿಸುವಿರಾ ಎಂದು ನನ್ನನ್ನು ಕೇಳಿದರು. ಪ್ರಬಲವಾದ ಸಾಮಾಜಿಕ ಆತ್ಮಸಾಕ್ಷಿಯನ್ನು ಪ್ರದರ್ಶಿಸುವ ಚಿತ್ರಗಳಿಂದ ಹೆಸರಾಗಿರುವ ಇವರಿಬ್ಬರು, ಗ್ಯಾಂಗ್‌ರೇಪ್ ಸಂತ್ರಸ್ತೆಯ ಮೇಲೆ ಕೇಂದ್ರೀಕೃತವಾದ ಕಥೆಯನ್ನು ಆಧರಿಸಿದ ಸಿನೆಮಾವನ್ನು ನಿರ್ಮಿಸಲು ಬಯಸಿದ್ದರು.

  ಚಿತ್ರದ ಬಗ್ಗೆ ನಾವು ತಾಸುಗಟ್ಟಲೆ ಮಾತನಾಡಿದೆವು ಹಾಗೂ ಚಿತ್ರದ ಫೋಕಸ್ ಅನ್ನು ಸಂತ್ರಸ್ತೆಯಿಂದ ಅತ್ಯಾಚಾರಿಗಳ ಮೇಲೆ ವರ್ಗಾಯಿಸುವ ನನ್ನ ಚಿಂತನೆಯ ಬಗ್ಗೆ ಅವರಲ್ಲಿ ತೀವ್ರ ಕುತೂಹಲ ಮೂಡಿತ್ತು.ಈ ಭಯಾನಕ ಘಟನೆ ನಡೆದ ದಿನ ನಾನು ದಿಲ್ಲಿಯಲ್ಲಿದ್ದೆ ಹಾಗೂ ಆವಾಗಿನಿಂದ ನನಗೆ ಈ ವ್ಯಕ್ತಿಗಳು (ಅತ್ಯಾಚಾರಿಗಳು),ಕ್ರೂರ ಮೃಗಗಳಾಗಿ ಪರಿವರ್ತನೆಯಾಗಲು ಇರುವ ಕಾರಣವಾದರೂ ಏನು ಎಂಬುದನ್ನು ತಿಳಿದುಕೊಳ್ಳುವ ಆದಮ್ಯ ಕುತೂಹಲವಿತ್ತು. ಕೊನೆಗೆ ಹ್ಯಾಮಿಲ್ಟನ್/ಮೆಹ್ತಾ ಹಾಗೂ ಮಾವೆನ್ ಪಿಕ್ಚರ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುವ ತೀರ್ಮಾನಕ್ಕೆ ಬಂದರು.

ಟೊರಾಂಟೊದಲ್ಲಿ ನಾವು ದಿಲ್ಲಿ ಗ್ಯಾಂಗ್‌ರೇಪ್ ಪ್ರಕರಣದ ಆರು ಮಂದಿ ಅಪರಾಧಿಗಳು ಹಾಗೂ ಅವರ ಕುಟುಂಬಗಳನ್ನು ಕೇಂದ್ರೀಕರಿಸಿ ಸಂಶೋಧನಾ ಅಧ್ಯಯನವನ್ನು ನಡೆಸಲು ಮೊಲಿ ಮ್ಯಾಕ್‌ಗ್ಲಿನ್ ಅವರನ್ನು ಗೊತ್ತುಪಡಿಸಿದೆವು. ಅಪರಾಧಿಗಳು ಯುವತಿಯನ್ನು ಬಸ್‌ನೊಳಗೆ ಬರುವಂತೆ ಮಾಡುವ ಹಂತದವರೆಗೂ ನಾನು ಚಿತ್ರಕಥೆಯನ್ನು ತಯಾರಿಸಬಯಸಿದ್ದೆ.

ಅತ್ಯಾಚಾರಿಗಳ ಪಾತ್ರವನ್ನು ನಿರ್ವಹಿಸುವ ನಟರ ಸಹಯೋಗದೊಂದಿಗೆ ಚಿತ್ರಕಥೆಯನ್ನು ತಯಾರಿಸಲು ನಾನು ನಿರ್ಧರಿಸಿದ್ದೆ.

  ಚಿತ್ರಕಥೆಯ ಮೂಲ ಅಂಶಗಳನ್ನು ನಾನು ತಾರೆಯರಿಗೆ ನೀಡಿದ್ದೆ. ಚಿತ್ರಕಥೆಯ ಆಧಾರದಲ್ಲಿ ಚಿತ್ರದ ದೃಶ್ಯಗಳನ್ನು ಹೇಗೆ ಚೆನ್ನಾಗಿ ಚಿತ್ರೀಕರಿಸಬಹುದು ಎಂಬ ಬಗ್ಗೆ ನಾನು ಅವರಿಂದ ಅಭಿಪ್ರಾಯಗಳನ್ನು ಪಡೆದುಕೊಂಡೆ.

 ಈ ಪ್ರಾಜೆಕ್ಟ್‌ಗೆ ‘ಲುಕಿಂಗ್ ಫಾರ್ ಫನ್’ ಎಂದೇ ಹೆಸರಿಟ್ಟೆ. ‘‘ನಗರದಲ್ಲಿ ಸುತ್ತಾಡಲು ನೀವು ಯಾಕೆ ಶಾಲಾ ಬಸ್‌ನ್ನು ಆಯ್ಕೆ ಮಾಡಿದಿರಿ’’ ಎಂದು ಪೊಲೀಸರು ಅತ್ಯಾಚಾರಿಗಳನ್ನು ಪ್ರಶ್ನಿಸಿದಾಗ ಅವರಲ್ಲೊಬ್ಬ ಹೀಗೆ ಉತ್ತರಿಸಿದ್ದನಂತೆ. ಅದಕ್ಕಾಗಿ ನನ್ನ ಪ್ರಾಜೆಕ್ಟ್‌ಗೂ ಇದೇ ಹೆಸರಿನಿಟ್ಟಿದ್ದೆ.

ನಾಟಕ

 ಈ ಹಂತದಲ್ಲಿ ನಾನು ಚಂಡಿಗಡದ ಪ್ರಸಿದ್ಧ ರಂಗಭೂಮಿ ನಿರ್ದೇಶಕಿ ನೀಲಂ ಮಾನ್‌ಸಿಂಗ್ ಚೌಧುರಿ ಅವರನ್ನು ಸಂಪರ್ಕಿಸಿದೆ. ನೀಲಂ ನನ್ನ ಉತ್ತಮ ಸ್ನೇಹಿತೆ ಮಾತ್ರವಲ್ಲ, ನನ್ನ ಹಿಂದಿನ ನಾಲ್ಕು ಚಿತ್ರಗಳಿಗಾಗಿ ಹಲವು ತರಬೇತಿ ಕಾರ್ಯಾಗಾರಗಳನ್ನು ನಡೆಸಲು ನೆರವಾಗಿದ್ದರು. ಈ ಕಾರ್ಯಾಗಾರಗಳು ಕಲಾವಿದರನ್ನು ತಾವು ಅಭಿನಯಿಸಲಿರುವ ಪಾತ್ರಗಳ ಅನ್ವೇಷಣೆ ಮಾಡಲು ಅವರನ್ನು ತಯಾರುಗೊಳಿಸಿದ್ದವು.

   ‘ಲುಕಿಂಗ್ ಫಾರ್ ಫನ್’ ಪ್ರಾಜೆಕ್ಟ್‌ಗಾಗಿ, ನನಗೆ ಪೂರ್ವಭಾವಿಯಾಗಿ ಪೂರ್ವಯೋಜಿತ ಕಾರ್ಯಾಗಾರಗಳಿಗಿಂತಲೂ ಹೆಚ್ಚಿನ ಸಿದ್ಧತೆಯ ಅಗತ್ಯವಿತ್ತು. ಅತ್ಯಾಚಾರಿಗಳ ಪಾತ್ರಗಳನ್ನು ನಿರ್ವಹಿಸಲಿರುವ ನಟರು ಮಾತ್ರವಲ್ಲ, ಪೋಷಕ ಪಾತ್ರಗಳಲ್ಲಿ ಅಭಿನಯಿಸಲಿರುವ ಕಲಾವಿದರನ್ನು ಗುರುತಿಸಲು ಕೂಡಾ ಸಹಯೋಗಿಯೊಬ್ಬರ ಅಗತ್ಯವಿತ್ತು. ಇದಕ್ಕೆ ನೀಲಂ ನನಗೆ ಅತ್ಯುತ್ತಮ ಪಾಲುದಾರೆಯಾಗಿದ್ದಳು. ನನ್ನ ಅದೃಷ್ಟವೆಂಬಂತೆ, ಆಕೆ ಕಮಿಟ್ ಆಗಿದ್ದ ಬಾಲಿವುಡ್ ಚಿತ್ರದ ನಿರ್ಮಾಣವು ಆರಂಭದಲ್ಲೇ ರದ್ದುಗೊಂಡಿತು ಹಾಗೂ ಆಕೆಯ ಮುಂದಿನ ನಾಟಕ ನಿರ್ಮಾಣವು ಒಂದು ತಿಂಗಳ ಮಟ್ಟಿಗೆ ಮುಂದೂಡಲ್ಪಟ್ಟಿತು.

    ನಮಗೀಗ ಬೇಕಾಗಿದ್ದುದು ಈ ಮಹತ್ವಾಕಾಂಕ್ಷಿ ಚಿತ್ರ ನಿರ್ಮಾಣ ಪ್ರಕ್ರಿಯೆಯ ಭಾಗವಾಗಲು ಇಚ್ಛಿಸುವ ಬುದ್ಧಿವಂತ, ಅಪಾರ ಕಲ್ಪನಾಶಕ್ತಿಯ, ನಿರ್ಭೀತ ಹಾಗೂ ತರಬೇತುಗೊಂಡ ತಾರೆಯರು. ತನಗೆ ದೀರ್ಘ ಸಮಯದಿಂದ ಪರಿಚಯವಿರುವ ರಂಗಭೂಮಿ ಕಲಾವಿದರು ಹಾಗೂ ವಿದ್ಯಾರ್ಥಿಗಳು ಮತ್ತು ತನ್ನ ರಂಗಭೂಮಿ ತಂಡ ‘ಕಂಪೆನಿ’ ಜೊತೆ ನಂಟು ಹೊಂದಿರುವ ವ್ಯಕ್ತಿಗಳ ಹೆಸರುಗಳನ್ನು ನೀಲಂ ನನ್ನ ಮುಂದಿಟ್ಟಳು. ನಾವು ಔಪಚಾರಿಕವಾಗಿ ಸಂಭಾವ್ಯ ಪಾತ್ರಧಾರಿಗಳ ಸಂದರ್ಶನವನ್ನು ನಡೆಸಿದೆವು ಹಾಗೂ ಅಂತಿಮವಾಗಿ ಮುಖ್ಯಪಾತ್ರಗಳಲ್ಲಿ ನಟಿಸಲಿರುವ ಆರು ಮಂದಿಯನ್ನು ಆಯ್ಕೆ ಮಾಡಿದೆವು ಮತ್ತು ಆಕೆಯ ತಂಡದ ಇತರ ಕೆಲವು ಸದಸ್ಯರು ಹಾಗೂ ವಿದ್ಯಾರ್ಥಿಗಳನ್ನು ಕೂಡಾ ಚಿತ್ರಕ್ಕೆ ತೆಗೆದುಕೊಂಡೆವು. ನೀಲಂ ಚಂಡಿಗಡದಲ್ಲಿ ನೆಲೆಸಿರುವುದರಿಂದ ಹಾಗೂ ಆಕೆಯ ಮನೆಯ ಹಿಂದೆಯೇ ಕಿರುರಂಗಭೂಮಿ ಇರುವ ಕಾರಣ, ಅಲ್ಲಿಯೇ ಚಿತ್ರಕಥೆಯನ್ನು ಅಭಿವೃದ್ಧಿಪಡಿಸುವ ಕಾರ್ಯಾಗಾರವನ್ನು ನಡೆಸುವುದು ಸಮಂಜಸವೆನಿಸಿತು.

ಕಲಾವಿದರಿಗೆ ಚಿತ್ರದ ಕಥೆ ಹಾಗೂ ಸನ್ನಿವೇಶಗಳನ್ನು ವಿವರಿಸಿ, ಅವರಿಂದಲೇ ಸಹಜ ಅಭಿನಯವನ್ನು ತೆಗೆಸಿಕೊಂಡು, ಅದನ್ನು ನೇರವಾಗಿ ಕ್ಯಾಮರಾ ಶೂಟ್ ಮಾಡುವುದೇ ನಮ್ಮ ಹೊಸ ಪ್ರಯೋಗವಾಗಿತ್ತು.

  ಟೊರಾಂಟೊದಿಂದ ನಾನು ಮೈಥಿಲಿ ಹಾಗೂ ಟಿಯಾ ಭಾಟಿಯಾ ಜೊತೆ ಚಂಡಿಗಡಕ್ಕೆ ವಿಮಾನದಲ್ಲಿ ಹಾರಿಬಂದೆ. ಟೊರಾಂಟೊದ ಫಿಲ್ಮ್‌ಸ್ಕೂಲ್‌ನಲ್ಲಿ ಪದವೀಧರೆಯಾದ ಮೈಥಿಲಿ, ಕ್ಯಾನೊನ್ ಡಿಎಸ್‌ಎಲ್‌ಆರ್ ಕ್ಯಾಮೆರಾದ ನಿರ್ವಹಣೆಯಲ್ಲಿ ಪರಿಣಿತಳಾಗಿದ್ದಳು. ಟ್ರೆಪಾಡ್‌ನಲ್ಲಿ ಅಗಲವಾದ ಕ್ಯಾಮರಾ ಲೆನ್ಸ್‌ಗಳನ್ನು ಬಳಸಿ ನಮ್ಮ ಮುಂದೆ ಅನಾವರಣಗೊಳ್ಳುವ ದೃಶ್ಯಗಳನ್ನು ದಾಖಲಿಸಿಕೊಳ್ಳುವುದು ಆಕೆಯ ಕೆಲಸವಾಗಿತ್ತು. ಕಿರಿಯ ವಯಸ್ಸಿನ ನಟಿಯಾದ ಟಿಯಾ, ಆಗಷ್ಟೇ ನ್ಯೂಯಾರ್ಕ್‌ನ ಲೀ ಸ್ಟ್ರಾಸ್‌ಬರ್ಗ್ ಇನ್ಸ್ ಟಿಟ್ಯೂಟ್‌ನಲ್ಲಿ ತನ್ನ ಅಧ್ಯಯನವನ್ನು ಮುಗಿಸಿದ್ದಳು ಹಾಗೂ ಈ ಸಹಯೋಗಿಕ ಸುಧಾರಣಾ ಪ್ರಕ್ರಿಯೆಯ ಭಾಗವಾಗಬಯಸಿದ್ದರು.

 (contextನೀಲಂ ಹಾಗೂ ನಾನು ಉಪಸ್ಥಿತರಿದ್ದ 9 ಮಂದಿ ಕಲಾವಿದರ ಜೊತೆ ವಿಚಾರವಿನಿಮಯ ನಡೆಸಿದೆವು ಹಾಗೂ ಅವರಿಗೆ ಚಿತ್ರದ ಸನ್ನಿವೇಶದ ಅರ್ಥಗ್ರಹಿಕೆ ) ಹಾಗೂ ಸನ್ನಿವೇಶಗಳನ್ನು ಅವರಿಗೆ ವಿವರಿಸಿದೆವು. ಈ ಕಲಾವಿದರಲ್ಲಿ ಆರು ಮಂದಿ ದಿಲ್ಲಿ ಗ್ಯಾಂಗ್‌ರೇಪ್ ಪ್ರಕರಣದ ನೈಜ ಅತ್ಯಾಚಾರಿಗಳ ಪಾತ್ರವನ್ನು ನಿರ್ವಹಿಸಲಿರುವವರಾಗಿದ್ದರು.

ನೀಲಂ ಎಂದಿನಂತೆ ಪ್ರತಿಯೊಂದರಲ್ಲೂ ಅಚ್ಚುಕಟ್ಟುತನ ಬಯಸುತ್ತಿದ್ದಳು. ಕಲಾವಿದರು ಅಭಿನಯಿಸಬೇಕೆಂದು ನಾವು ಬಯಸಿದಂತಹ ದೃಶ್ಯಗಳನ್ನು ನಾವು ರೂಪಿಸಿದೆವು.1. ಅವರ ಬಾಲ್ಯದ ದಿನಗಳ ಕೆಲವು ದೃಶ್ಯಗಳು 2. ಅವರ ಬದುಕಿನ ಅತ್ಯಂತ ಯಾತನಾಮಯ ಕ್ಷಣ 3. ಕುಟುಂಬದೊಂದಿಗೆ ಅವರ ಸಂಬಂಧ 4. ಅವರ ಜೀವನೋಪಾಯದ ಚಟುವಟಿಕೆಗಳು 5.ಅವರೆಲ್ಲಾ ಪ್ರಪ್ರಥಮ ಬಾರಿ ಹೇಗೆ ಪರಸ್ಪರರನ್ನು ಸಂಧಿಸಿದರು ಹಾಗೂ ಸ್ನೇಹಿತರಾದರೆಂಬುದು. ಈ ಎಲ್ಲಾ ದೃಶ್ಯಗಳನ್ನು ಈ 6 ಮಂದಿ ಕಲಾವಿದರು ಅಭಿನಯಿಸಬೇಕಾಗಿತ್ತು. ಈ ಎಲ್ಲಾ ಸನ್ನಿವೇಶಗಳು ಕಟ್ಟಕಡೆಯದಾಗಿ ಅವರನ್ನು ಆ ಘೋರ ಘಟನೆಯೆಡೆಗೆ ಕೊಂಡೊಯ್ಯುತ್ತದೆ (ಅದನ್ನು ನಾನು ಚಿತ್ರದಲ್ಲಿ ತೋರಿಸಲು ಇಚ್ಛಿಸಿರಲಿಲ್ಲ).

  ಹೀಗೆ ದೃಶ್ಯವೊಂದು ಇತರ ಕಲಾವಿದರ ಸಹಕಾರದೊಂದಿಗೆ ನಟನ ಕಲ್ಪನೆಯಿಂದಲೇ ಮೂಡಿಬಂದು, ಆತ ಅದನ್ನು ನಮ್ಮ ಮುಂದೆ ರಿಹರ್ಸಲ್ ಮಾಡಿ ತೋರಿಸುತ್ತಾನೆ. ಮೈಥಿಲಿಯು ಇದನ್ನು ಯಾವುದೇ ಕ್ಯಾಮರಾ ಚಲನೆಯಿಲ್ಲದೆ, ಅನಾವರಣಗೊಂಡ ದೃಶ್ಯವನ್ನು ರೆಕಾರ್ಡ್ ಮಾಡಿಕೊಳ್ಳುತ್ತಾಳೆ. ನೀಲಂ ಹಾಗೂ ನಾನು ಈ ಕೆಲಸದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡೆವು, ಕೆಲವೆಡೆ ಅದನ್ನು ತಿರುಚಿದೆವು ಹಾಗೂ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದೆವು. ಕಲಾವಿದರು ನಮ್ಮ ಅನಿಸಿಕೆಗಳನ್ನು ಪರಾಮರ್ಶಿಸಿ, ಮತ್ತೊಮ್ಮೆ ಅಭಿನಯಿಸಿ ತೋರಿಸಿದರು. ಹೀಗೆ ಈ ಆರು ಮಂದಿ ಕಲಾವಿದರಲ್ಲಿ ಪ್ರತಿಯೊಬ್ಬರೂ, ನಮಗೆ ತೃಪ್ತಿಯಾಗುವವರೆಗೆ ಅಭಿನಯಿಸಲು ಅವಕಾಶವನ್ನು ಪಡೆದುಕೊಂಡರು.

ಮೊದಲ ದಿನದ ಕೊನೆಯ ವೇಳೆಗೆ, ನನಗೊಂದು ಸಾಕ್ಷಾತ್ಕಾರವಾದ ಭಾವನೆಯುಂಟಾಗಿತ್ತು. ಈ ಕಲಾವಿದರ ಅಭಿನಯದಲ್ಲಿರುವ ನೈಜತೆ, ಧ್ವನಿಯ ಏರಿಳಿತ, ಅವರ ಹಾವಭಾವಗಳು ಹಾಗೂ ಭಗ್ನ ಬದುಕು ಈ ಎಲ್ಲಾ ಸನ್ನಿವೇಶಗಳಲ್ಲೂ ಅವರ ಅಭಿನಯವನ್ನು ಕಂಡು ನಾನು ಹಾಗೂ ನೀಲಂ ಮೂಕವಿಸ್ಮಿತರಾಗಿದ್ದೆವು.

ಈಗ ನನ್ನಲ್ಲಾ ಯೋಜನೆಗಳಿಗೆ ವ್ಯತಿರಿಕ್ತವಾಗಿ ನಾನಾಗಿಯೇ ಕ್ಯಾಮರಾವನ್ನು ನಿರ್ದೇಶಿಸಲಾರಂಭಿಸಿದೆ. ಈಗ ನಿರಾಳಗೊಂಡ ಮೈಥಿಲಿ ಉತ್ಸಾಹದಿಂದಲೇ ಕ್ಯಾಮರಾ ಹಿಡಿಯಲು ಸನ್ನದ್ಧಳಾದಳು. ಟ್ರೈಪಾಡ್‌ನ ಬಳಕೆಯನ್ನು ಕೈಬಿಟ್ಟ ಆಕೆ ಕ್ಯಾಮರಾಕ್ಕೆ ತಾನೇ ನಿರ್ದೇಶನ ನೀಡತೊಡಗಿದಳು. ಹೌದು. ನಾವೀಗ ನೇರವಾಗಿ ಚಿತ್ರೀಕರಣವನ್ನೇ ಆರಂಭಿಸಿಬಿಟ್ಟೆವು. ಕಲಾವಿದರಲ್ಲಿರುವ ಒರಟುತನವನ್ನು ಸೆರೆಹಿಡಿಯಲು ನಾನು ಬಯಸಿದ್ದೆ. ಇದೊಂಥರಾ ಮನೆಯಲ್ಲಿ ನಿರ್ಮಿಸಿದ ವೀಡಿಯೋ ಚಿತ್ರದ ಹಾಗಿರಬೇಕೆಂದು ನನ್ನ ಇಚ್ಛೆಯಾಗಿತ್ತು.

ಈ ಕಲಾವಿದರ ರಂಗಮಂದಿರದಿಂದ ನೇರವಾಗಿ ಚಿತ್ರಜಗತ್ತಿಗೆ ಪಾದಾರ್ಪಣೆ ಮಾಡಿದವರಾಗಿದ್ದರು. ಶೂಟಿಂಗ್‌ಗೆ ಬೇಕಾದ ಲೊಕೇಶನ್‌ಗಳನ್ನು ನಾವು ಹುಡುಕಿದೆವು. ಅಗತ್ಯವಿದ್ದಾಗಲೆಲ್ಲಾ ಬೀದಿಬದಿಯಲ್ಲಿರುವ ಜನರ ಸಹಕಾರವನ್ನು ಕೂಡಾ ಪಡೆದುಕೊಂಡೆವು.

   ಚಂಡಿಗಡದಲ್ಲಿ ನಾವು 18 ದಿನಗಳ ಕಾಲ ಅಂದರೆ ಸುಮಾರು ಚಿತ್ರೀಕರಣ ನಡೆಸಿದೆವು. ಕೆಲವು ದೃಶ್ಯಗಳು ಅಸಂಬದ್ಧ ಹಾಗೂ ವಿಲಕ್ಷಣವಾಗಿದ್ದವು. ಆದರೆ ಅವೆಲ್ಲವೂ ನಮ್ಮಲ್ಲಿ ಅದ್ಭುತವಾದ ಅನುಭವಗಳನ್ನು ಮೂಡಿಸಿದ್ದವು. ಈ ಪ್ರಾಜೆಕ್ಟ್‌ಗೆ ಡೇವಿಡ್ ಹಾಗೂ ನಾನು ಹಣ ಹಾಕಿದ್ದೆವು. ಮಾವೆನ್ ಹಾಗೂ ಹೂಡಿಕೆದಾರರೊಬ್ಬರು ಈ ಚಿತ್ರಕ್ಕೆ ಅತ್ಯಂತ ಕನಿಷ್ಠ ಮೊತ್ತವನ್ನು ಖರ್ಚು ಮಾಡಬಯಸಿದ್ದರು. ಅದು ಕೂಡಾ ಚಿತ್ರಕಥೆ ಪೂರ್ಣಗೊಂಡು, ಅನುಮೋದನೆ ಪಡೆದ ಬಳಿಕವಷ್ಟೇ ಅವರು ಹಣ ಬಿಡುಗಡೆ ಮಾಡಬಯಸಿದ್ದರು. ಅಲ್ಲಿಯವರೆಗೆ ನಾವು ನಮ್ಮದೇ ಖರ್ಚಿನಲ್ಲಿ ಕಲಾವಿದರಿಗೆ ಸಂಭಾವನೆ ನೀಡಬೇಕಾಗಿತ್ತು. ಅವರ ಪ್ರಯಾಣ, ಆಹಾರ, ವಸತಿ ವೆಚ್ಚವನ್ನು ಕೂಡಾ ಭರಿಸಬೇಕಾಗಿತ್ತು. ನೀಲಂಳ ಮನೆ ಹಾಗೂ ಆಕೆಯ ರಂಗಭೂಮಿ ತಂಡವನ್ನು ಬಳಸಿದ ವೆಚ್ಚವನ್ನು ಕೂಡಾ ನೀಡಬೇಕಾಗಿತ್ತು (ಆದರೆ ಪ್ರಾಯಶಃ ಆಕೆ ವೆಚ್ಚ ಮಾಡಿದ ಮೊತ್ತದ, ತೃಣಾಂಶ ಕೂಡಾ ಆಕೆ ಪಡೆದಿಲ್ಲವೆಂಬುದು ನನಗೆ ಖಾತರಿಯಾಗಿದೆ). ಕೆಲವು ದೃಶ್ಯಗಳನ್ನು ವಿವಿಧ ಆ್ಯಂಗಲ್‌ಗಳಲ್ಲಿ ಚಿತ್ರೀಕರಿಸಬೇಕಾಗಿದ್ದರಿಂದ ಇನ್ನೋರ್ವ ಕ್ಯಾಮರಾಮ್ಯಾನ್‌ನನ್ನು ಕೂಡಾ ನಾನು ಗೊತ್ತುಪಡಿಸಿಕೊಂಡೆ. ಛಾಯಾಗ್ರಾಹಕ ಗ್ಯಾರಿ, ಮೈಥಿಲಿ ಚಿತ್ರೀಕರಿಸಿದ ದೃಶ್ಯಗಳನ್ನು ವೃದ್ಧಿಸಲು ಗ್ಯಾರಿ ನೆರವಾದರು. ಕೆಲವು ಸನ್ನಿವೇಶಗಳನ್ನು ಆತ ಸ್ಕೂಟರ್ ಹಾಗೂ ಟ್ರೈನ್‌ಗಳಲ್ಲಿ ಮಿಂಚಿನಂತೆ ಚಿತ್ರೀಕರಿಸಿದ್ದರು.

 ಮೂರು ವಾರಗಳ ಸತತ ಚಿತ್ರೀಕರಣದ ಬಳಿಕ ಚಂಡಿಗಡಕ್ಕೆ ವಿದಾಯ ಹೇಳುವ ಕ್ಷಣ ಬಂದಾಗ, ನಿಜಕ್ಕೂ ಹೃದಯ ತುಂಬಾ ಭಾವುಕವಾಗಿತ್ತು. ಕಲಾವಿದರಿಗೆ ಹಾಗೂ ನೀಲಂಗೆ ಗುಡ್‌ಬೈ ಹೇಳುವಾಗ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು. ಇನ್ನು ನಾವು ಮುಂದಿನ ಹಂತಕ್ಕೆ ತೆರಳಬೇಕಾಗಿತ್ತು.

ದಿಲ್ಲಿಯು ಮೂಲಭೂತವಾಗಿ ಜಾನಕಿ ಹಾಗೂ ಅಂಕುರ್ ಪಾತ್ರಗಳ ಮೇಲೆ ಕೇಂದ್ರೀಕೃತವಾಗಿತ್ತು. ಚಂಡಿಗಡದಲ್ಲಿ ಈಗಾಗಲೇ ಚಿತ್ರೀಕರಿಸಲಾದ ದೃಶ್ಯಗಳ ಜೊತೆ ಜಾನಕಿಯ ಬದುಕಿನ ದೃಶ್ಯಗಳು ಹೇಗೆ ಸಂವಾದಿಯಾಗಿರಬೇಕೆಂಬ ಬಗ್ಗೆ ನನಗೀಗ ಸ್ಪಷ್ಟವಾದ ಕಲ್ಪನೆ ಮೂಡಿತ್ತು. ಜಾನಕಿಯ ಮನೆ, ಆಕೆಯ ತಾಯಿ, ಆಕೆಯ ಮಿತ್ರರು, ಆಕೆಯ ಗೆಳೆಯ, ಆಕೆಯ ಮಹತ್ವಾಕಾಂಕ್ಷಿ ಹಾಗೂ ತನಗಾಗಿ ತ್ಯಾಗ ಮಾಡಿದ ಕುಟುಂಬ ಹಾಗೂ ಸಮಾಜದ ಋಣ ತೀರಿಸುವ ಆಕೆಯ ಹಂಬಲ ಹೀಗೆ ಆಕೆಯ ಜೀವನವನ್ನು ಅತ್ಯಂತ ಸಹಜವಾಗಿ ಚಿತ್ರೀಕರಿಸಬಯಸಿದ್ದೆ. ಜಾನಕಿಯ ದೃಶ್ಯಗಳ ಚಿತ್ರೀಕರಣದ ನಡುವೆಯ ನಾನು ಈ ಚಿತ್ರವು ಎಲ್ಲಿಗೆ ಕೊನೆಗೊಳ್ಳಬಹುದೆಂದು ಯೋಚಿಸ ತೊಡಗಿದೆ.

ಅಪರಾಧಿ ಬಿಟ್ಟೂ ಜೈಲಿನಲ್ಲಿರುವ ದೃಶ್ಯ ಚಿತ್ರಕ್ಕೆ ಅಗತ್ಯವೆಂದು ನಾನು ಭಾವಿಸಿದೆ. ಜೈಲು ಸೇರಿದ ಅತ್ಯಾಚಾರಿಗಳ ಅಂತರಂಗವನ್ನು ಪ್ರೇಕ್ಷಕರ ಮುಂದಿಡಬೇಕು. ಹೀಗಾಗಿ ಜೈಲಿನಲ್ಲಿ ಬಿಟ್ಟೂ ಪಾತ್ರದ ಜೊತೆ ಸಂದರ್ಶನದ ದೃಶ್ಯವನ್ನು ಅಳವಡಿಸಲು ನಿರ್ಧರಿಸಿದೆ.

 ಈ ದೃಶ್ಯದಲ್ಲಿ ನಟಿಸಲು ಜಗ್ಗಾ(ಜಗಜಿತ್ ಸಂಧು) ಚಂಡಿಗಡದಿಂದ ಬಸ್ಸನೇರಿ ದಿಲ್ಲಿಗೆ ಬಂದ. ‘ಇಂಡಿಯಾಸ್ ಡಾಟರ್’ ಸಾಕ್ಷಚಿತ್ರದಲ್ಲಿ ಲೆಸ್ಲಿ ಉಡ್ವಿನ್, ದಿಲ್ಲಿ ಗ್ಯಾಂಗ್‌ರೇಪ್ ಪ್ರಕರಣದ ಅಪರಾಧಿಯ ಜೊತೆ ನಡೆಸಿದ ಸಂದರ್ಶನವನ್ನು ಆತನಿಗೆ ಪ್ರದರ್ಶಿಸುವುದಾಗಿ ಹೇಳಿದೆ. ಆದರೆ ಆತ ಅದಕ್ಕೆ ನಿರಾಕರಿಸಿದ.

ನನ್ನ ಜೀವಮಾನದಲ್ಲಿ ಇಂತಹ ಬೀಭತ್ಸ ಹಾಗೂ ಅದೇ ವೇಳೆ ವಿಷಾದದ ಭಾವನೆ ಎಂದೂ ಮೂಡಿರಲಿಲ್ಲ. ಬಿಟ್ಟೂ ಪಾತ್ರವು ಪ್ರದರ್ಶಿಸಿದ ನಿರ್ದಯತೆ, ತನ್ನ ಕೃತ್ಯಕ್ಕಾಗಿ ಎಳ್ಳಷ್ಟೂ ಪಶ್ಚಾತ್ತಾಪ ಪಡದಿರುವುದು ಇವೆಲ್ಲವೂ ಎದೆ ಒಡೆಯವಂತಿತ್ತು ಹಾಗೂ ಅತ್ಯಂತ ಭಯಾನಕವಾಗಿತ್ತು.

ನನ್ನ ಮುಂದಿನ ಹೆಜ್ಜೆ ಟೊರಾಂಟೊ ಆಗಿತ್ತು. ನಾವು ಚಿತ್ರೀಕರಿಸಿದ ದೃಶ್ಯಗಳನ್ನು ವೀಕ್ಷಿಸಿದಾಗ ನಾನು ಇನ್ನು ಚಿತ್ರಕಥೆಯನ್ನು ಪೂರ್ಣಗೊಳಿಸದೆ ಬೇರೆ ದಾರಿಯಿಲ್ಲವೆಂಬುದು ಸ್ಪಷ್ಟವಾಯಿತು. ಚಿತ್ರವನ್ನು ಚೊಕ್ಕವಾಗಿ 90 ನಿಮಿಷಗಳಿಗಿಳಿಸುವ ಕಾರ್ಯವು ಸುಲಭವೇನೂ ಆಗಿರಲಿಲ್ಲ.

ಮುಂದಿನ ಒಂದು ತಿಂಗಳು ಪೂರ್ತಿ ಚಿತ್ರದ ಧ್ವನಿಮುದ್ರಣ ಹಾಗೂ ವರ್ಣಸಂಯೋಜನೆ ಹಾಗೂ ಧ್ವನಿಮಿಶ್ರಣ (ಸೌಂಡ್‌ಮಿಕ್ಸಿಂಗ್)ಕ್ಕೆ ತಗಲಿತು. ನಮ್ಮ ಸಂಕಲನಕಾರರಂತೆಯೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಸೂಪರ್‌ವೈಸರ್ ಸಲಾರ್ ಕೂಡಾ ಇವೆಲ್ಲವನ್ನೂ ಸಮನ್ವಯಗೊಳಿಸಲು ಹಗಲಿರುಳು ದುಡಿದರು. ನ್ಯೂಯಾರ್ಕ್‌ನಲ್ಲಿರುವ ನಮ್ಮ ಹೂಡಿಕೆದಾರರಿಗೆ ಸಮರ್ಪಕ ಬೆಳಕು, ಮೇಕಪ್, ಕೇಶವಿನ್ಯಾಸ, ಸಂಗೀತ ಸಂಯೋಜನೆಯೊಂದಿಗೆ ಮರಳಿ ಚಿತ್ರೀಕರಿಸುವುದು ಬೇಡವೆಂಬ ನನ್ನ ಹಠಮಾರಿತನವು ಅರ್ಥವಾಗಲೇ ಇಲ್ಲ. ಹೀಗಾಗಿ ಆಕೆ ಹೊರಹೋಗಲು ನಿರ್ಧರಿಸಿದರು.

 ಆದಾಗ್ಯೂ ಎಷ್ಟೇ ನೋವಿರಲಿ, ನಾನಾಗಲಿ ಅಥವಾ ಡೇವಿಡ್ ಆಗಲಿ ಯೋಜನೆಯ ಈ ಪ್ರಾಜೆಕ್ಟ್ ಬಗ್ಗೆ ಹೊಂದಿದ್ದ ವಿಶೇಷ ಹುಮ್ಮಸ್ಸಿಗೆ ನಿಷ್ಠರಾಗಿ ಉಳಿಯುವ ನಮ್ಮ ನಿರ್ಧಾರಕ್ಕಾಗಿ ವಿಷಾದಿಸಲಿಲ್ಲ. ನಮ್ಮ ಜಗತ್ತನ್ನು ಆವರಿಸಿರುವ ಕ್ರೌರ್ಯ ಹಾಗೂ ಅಮಾನವೀಯತೆಯ ಸಮೀಪಕ್ಕೆ ಪ್ರೇಕ್ಷಕನ್ನು ಈ ಚಿತ್ರವು ತರುವುದೆಂಬ ಭರವಸೆ ನನ್ನದು. ಈ ಚಿತ್ರದ ಬಗ್ಗೆ ನಾವು ಹೊಂದಿದ್ದ ಆಶೋತ್ತರಗಳು, ಇತರರು ಆಸ್ವಾದಿಸಲು ಇಲ್ಲವೇ ಟೀಕಿಸಲು ಸುಮ್ಮನೆ ಒಂದು ಕಲಾತುಣುಕನ್ನು ಸೃಷ್ಟಿಸುವುದಕ್ಕಿಂತಲೂ ಮಿಗಿಲಾದುದಾಗಿತ್ತು. ಸಜ್ಜನಿಕೆಯ ಹಾಗೂ ಇನ್ನೂ ಹೆಚ್ಚು ಮಾನವೀಯತೆಯ ಜಗತ್ತನ್ನು ಸೃಷ್ಟಿಸುವ ಅಥವಾ ಪ್ರೋತ್ಸಾಹಿಸುವುದಕ್ಕೆ ಕಾರಣವಾಗುವಂತಹ ಸಂವಾದವನ್ನು ಏರ್ಪಡಿಸುವುದಕ್ಕೆ ಹಾಗೂ ಕ್ರಮವನ್ನು ಕೈಗೊಳ್ಳುವುದಕ್ಕೆ ಪ್ರೇರೇಪಿಸಲು ಚಿತ್ರವು ಒಂದು ಸಾಧನವಾಗಬೇಕೆಂಬುದೇ ನಮ್ಮ ಆಶಾವಾದವಾಗಿದೆ.

ಬದಲಾವಣೆಗೆ ನಾನು ಸಿದ್ಧ. ಅದರೆ ಆ ದಾರಿಯಲ್ಲಿ ಸಾಗುವುದಕ್ಕೆ ಬಹಳ ಸಮಯ ಬೇಕಾಯಿತೆಂಬ ಬೇಸರವೂ ನನಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News