ಇಂಗ್ಲಿಷ್ ಕಲಿಕೆ ದಾರಿ ಯಾವುದು ಮೋಕ್ಷಕೆ?

Update: 2016-10-19 06:17 GMT

ಇಂಗ್ಲಿಷ್‌ನ ಪದ ಸಂಪತ್ತು ಅಗಾಧವಾದುದು. ಬಹುಶಃ ಇಂಗ್ಲಿಷ್‌ನಲ್ಲಿ ಇರುವಷ್ಟು ಪದಗಳು ಲೋಕದ ಇನ್ಯಾವುದೇ ಜೀವಂತ ಭಾಷೆಯಲ್ಲಿ ಇಲ್ಲ. ಮೂಲ ಆಂಗ್ಲೋ-ಸ್ಯಾಕ್ಸನ್ ಅಲ್ಲದೆ, ಕೆಲ್ಟಿಕ್, ಸ್ಕಾಂಡಿನೇವಿಯನ್, ಗ್ರೀಕ್, ಲ್ಯಾಟಿನ್, ಫ್ರೆಂಚ್, ಅರಬಿಕ್, ಪರ್ಶಿಯನ್, ಹಿಂದಿ ಪದಗಳು ಇಂಗ್ಲಿಷನ್ನು ಸೇರಿಕೊಂಡು ‘ಇಂಗ್ಲಿಷೇ’ ಆಗಿಬಿಟ್ಟಿವೆ. ಇಂಗ್ಲಿಷ್‌ನ ಸೈಪರ್ ಮತ್ತು ಝೀರೋ ಎರಡೂ ಅರಬಿಕ್ ಮೂಲದವು! ಮೂಲದ ಪದಗಳು ಇಂಗ್ಲಿಷ್‌ನಲ್ಲಿ ಬದಲಾಗಿವೆ. 

ನಾವು ನಮ್ಮ ಮಕ್ಕಳಿಗೆ ಒಳ್ಳೆಯ ಇಂಗ್ಲಿಷ್ ಕಲಿಸಲು ಬಯಸುತ್ತೇವೆ. ಇಂಗ್ಲಿಷ್ ಈವತ್ತು ಬದುಕು ಕಟ್ಟಿಕೊಡಲಿರುವ ಭಾಷೆ ಎನ್ನುತ್ತೇವೆ. ಈ ಭಾಷೆ ಪ್ರತಿಷ್ಠೆಯ ಒಂದು ಸಂಕೇತವೂ ಹೌದು. ‘ನನಗೆ ಇಂಗ್ಲಿಷ್ ಬರುವುದಿಲ್ಲ’ ಎಂದರೆ ಅಂಥಾ ವ್ಯಕ್ತಿಯ ಕುರಿತು ಕೂಡಲೇ ನಮಗೆ ಹಲವಾರು ಪೂರ್ವಾಗ್ರಹಗಳು ಶುರುವಾಗುತ್ತವೆ. ಆ ವ್ಯಕ್ತಿಯ ಸಾಮಾಜಿಕ, ವ್ಯಾವಹಾರಿಕ ಬದುಕಿಗೆ ಅದು ಅಗತ್ಯವಿಲ್ಲದೆ ಇದ್ದರೂ ಸರಿ, ನಮಗೆ ಇಂಗ್ಲಿಷ್ ಬೇಕು ಎಂದಿಟ್ಟುಕೊಳ್ಳೋಣ. ಆದರೆ ಇಂಗ್ಲಿಷ್ ಭಾಷೆಯನ್ನು ಸರಿಯಾಗಿ ಕಲಿಸುವ ಅಧ್ಯಾಪಕರು ಎಷ್ಟು ಜನ ಇದ್ದಾರೆ? ಕೆಲವು ವರ್ಷಗಳ ಹಿಂದೆ, ನಾನು ಅಧ್ಯಾಪಕನಾಗಿದ್ದ ಸಂಸ್ಥೆಯಲ್ಲಿ, ಇಂಗ್ಲಿಷ್ ಅಧ್ಯಾಪಕರ ತರಬೇತಿ ಕೋರ್ಸ್‌ನ ಅನುಭವವೊಂದನ್ನು ಹೇಳುತ್ತೇನೆ. ಕೋರ್ಸ್‌ನಲ್ಲಿ ಐವತ್ತೋ ಅರುವತ್ತೋ ಮಂದಿ ಅಭ್ಯರ್ಥಿಗಳು (ಶಿಕ್ಷಾರ್ಥಿಗಳು) ಇದ್ದರು. ಇವರೆಲ್ಲರೂ ಒಂದೋ ಇಂಗ್ಲಿಷ್ ಅಧ್ಯಾಪಕರು, ಕೆಲವರು ಸಾಕಷ್ಟು ವರ್ಷ ಸೇವೆಯಲ್ಲಿ ಇದ್ದವರು, ಇಲ್ಲವೇ ಎಂ.ಎ. ಮುಗಿಸಿಕೊಂಡು ಮುಂದೆ ಇಂಗ್ಲಿಷ್ ಅಧ್ಯಾಪಕರಾಗುವ ಉದ್ದೇಶ ಇಟ್ಟುಕೊಂಡವರು. ಈ ತರಬೇತಿಯ ಅಂಗವಾಗಿ ಅವರು ವಿದ್ಯಾರ್ಥಿಗಳಿಗೆ ಸ್ವತಃ ಪಾಠಮಾಡುವ ಪ್ರಾಯೋಗಿಕದಲ್ಲಿ ಭಾಗವಹಿಸಬೇಕಿತ್ತು. ನಿಜವಾದ ವಿದ್ಯಾರ್ಥಿಗಳನ್ನು ಒದಗಿಸುವುದಕ್ಕಾಗಿ ನಾವು ಅಲ್ಪಾವಯ ಪರಿಣತಿ (Proficiency)  ಕೋರ್ಸನ್ನು ಕೂಡ ನಡೆಸುತ್ತಿದ್ದೆವು. ಈ ವಿದ್ಯಾರ್ಥಿಗಳು ಸುತ್ತುಮುತ್ತಲ ಪ್ರದೇಶದಿಂದ ಬರುತ್ತಿದ್ದರು. (ಅವರು ನಾಮಕಾವಾಸ್ತೇ ಫೀಸು ಕೊಡಬೇಕಿತ್ತು.) ಈ ಪ್ರಾಯೋಗಿಕವನ್ನು ನೋಡಿಕೊಳ್ಳುವ ತಂಡದಲ್ಲಿ ನಾನೂ ಒಬ್ಬನಾಗಿದ್ದೆ. ಅಭ್ಯರ್ಥಿಯೊಬ್ಬನ ಕ್ಲಾಸ್ ನಡೆಯುತ್ತಿತ್ತು. ನಮ್ಮ ಸಂಸ್ಥೆ ಇಂಟರ್ಯಾಕ್ಟಿವ್ ವಿಧಾನವನ್ನು ಪ್ರೋತ್ಸಾಹಿಸುತ್ತಿತ್ತು, ಎಂದರೆ ವಿದ್ಯಾರ್ಥಿಗಳ ಜತೆ ಸಂವಾದದ ಮೂಲಕ ಕಲಿಸುವ ಕ್ರಮ. ನಮ್ಮೀ ಅಭ್ಯರ್ಥಿ(ಅವನನ್ನು ವೆಂಕೋಬ ರಾವ್ ಎಂದು ಕರೆಯೋಣ) ಕ್ರಮದಂತೆ ಪಾಠ ಮಾಡುತ್ತಿದ್ದ. ಅವನು ತುಂಬಾ ಉತ್ಸುಕನಾಗಿದ್ದ ಎನ್ನುವುದು ಅವನ ಮಾತಿನಿಂದ, ಓಡಾಟದಿಂದ, ದೇಹಭಂಗಿಯಿಂದ, ಒಟ್ಟಾರೆ ಪ್ರಸನ್ನತೆಯಿಂದ ಗೊತ್ತಾಗುತ್ತಿತ್ತು. ನೋಡುವ ಜನ ಇದ್ದ ಕಾರಣ ಸ್ವಲ್ಪ ಅತಿಯಾಗಿಯೇ ಮಾಡುತ್ತಿದ್ದ. ಇದು ಸಹಜ. ಆದರೆ ಒಂದೆಡೆ, ವಿದ್ಯಾರ್ಥಿಗಳಿಗೆ ಸಮಸ್ಯೆಯೊಂದನ್ನು ಕೊಟ್ಟು, What is the salvation? ಎಂದು ಕೇಳತೊಡಗಿದ. ನನಗೆ ದಿಗ್ಭ†  ಮೆಯಾಯಿತು; ಕಸಿವಿಸಿಯೂ ಆಯಿತು. ಯಾಕೆಂದರೆ ಅವನು ಆ ಪ್ರಶ್ನೆಯನ್ನು ಬಹಳ ಗಟ್ಟಿಯಾಗಿ ಪದೇ ಪದೇ ಕೇಳುತ್ತಿದ್ದ. ವಿದ್ಯಾರ್ಥಿಗಳಿಂದ ಯಾವ ಪ್ರತಿಕ್ರಿಯೆಯೂ ಇಲ್ಲ. ನಂತರ ವೆಂಕೋಬ ರಾವ್ ಸ್ವತಃ ‘salvation’ ನೀಡಿದ. ಅವನು ಉದ್ದೇಶಿಸಿದ್ದು ‘solution’, ಉಚ್ಚರಿಸಿದ್ದು ‘solution!  ನಾನವನನ್ನು ತಿದ್ದುವುದಕ್ಕೆ ಹೋಗಲಿಲ್ಲ, ಅವನಿಗೆ ಅವಮರ್ಯಾದೆಯಾಗುತ್ತದೆ ಎನ್ನುವ ಕಾರಣಕ್ಕೆ. ಹಲವು ವರ್ಷಗಳ ಸರ್ವಿಸ್ ಇದ್ದ ಅಧ್ಯಾಪಕನಾಗಿದ್ದ ಈ ರಾವ್. ಅವನ ಉಚ್ಚಾರಣೆ, ಪದಪ್ರಯೋಗ, ವ್ಯಾಕರಣ ಯಾವುದೂ ಸಮರ್ಪಕವಾಗಿರಲಿಲ್ಲ.

ನಮ್ಮ ತರಬೇತಿ ಕೋರ್ಸ್‌ನ ಉದ್ದೇಶ ಇಂಗ್ಲಿಷ್ ಕಲಿಸುವುದಾಗಿರಲಿಲ್ಲ, ಬದಲು ಇಂಗ್ಲಿಷ್ ಕಲಿಸುವುದು ಹೇಗೆ ಎನ್ನುವುದನ್ನು ಕಲಿಸುವುದಾಗಿತ್ತು. ಆದರೆ ನಾನು ನನ್ನ ಹಲವಾರು ವರ್ಷಗಳ ಅನುಭವದಲ್ಲಿ ಕಂಡುಕೊಂಡ ಸತ್ಯವೆಂದರೆ, ನಮ್ಮಲ್ಲಿಗೆ ಬರುವ ಹೆಚ್ಚಿನ ಅಭ್ಯರ್ಥಿಗಳಿಗೂ ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ ಎನ್ನುವುದು. ಎಲ್ಲರೂ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದವರೇ. ಇದು ನಮ್ಮ ಇಂಗ್ಲಿಷ್ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಆದರೆ ನಾವಿದನ್ನು ಒಪ್ಪಲಿಕ್ಕೆ ತಯಾರಿಲ್ಲ. ಎಂ.ಎ. ಆದೊಡನೆಯೇ ಇಂಗ್ಲಿಷ್ ಬಂತು ಎಂದುಕೊಳ್ಳುತ್ತೇವೆ. ಅದು ಅಷ್ಟು ಸುಲಭವಾಗಿ ಬರುವುದಿಲ್ಲ. ನಿರಂತರ ಅಭ್ಯಾಸ ಬೇಕಾಗುತ್ತದೆ. ಡಿಗ್ರಿ ಗಳಿಸಿದೊಡನೆ ಮುಗಿಯಿತು ಎನ್ನುವ ಭಾವನೆ ಇರಬಾರದು. ಸೇವಾವಯ ಕೊನೆಯಲ್ಲಿ ನಾನು ಡೀನ್ ಆಗಿದ್ದಾಗ ನಮ್ಮ ಸಂಸ್ಥೆಯ ಪ್ರಾಸ್ಪೆಕ್ಟಸ್ ಪರೀಕ್ಷಿಸುವ ಸಂದರ್ಭ ಒದಗಿ ಬಂತು. ನೋಡಿದರೆ, ಶಾಸಿ ಎಂಬ ನನ್ನ ಗುರುಗಳೊಬ್ಬರು ಹೇಳಿದ ತಮಾಷೆಯೊಂದು ನೆನಪಾಯಿತು. ಈ ಗುರುಗಳು ಪಿಎಚ್.ಡಿ. ಮಾಡಲು ಕೆನಡಾಕ್ಕೆ ಹೋಗಿದ್ದರು. ಅಲ್ಲಿ ಅವರು ಪ್ರಬಂಧವೊಂದನ್ನು ಬರೆದು ತಮ್ಮ ಗೈಡ್‌ನ ಪರಿಶೀಲನೆಗೆ ಕೊಟ್ಟಿದ್ದ ಸಂದರ್ಭ ಗೈಡ್‌ನ ಉತ್ತರಕ್ಕಾಗಿ ಅವರು ಹೋಗಿ, ‘ಏನಾದರೂ ತಪ್ಪುಗಳಿವೆಯೇ?’’ ಎಂದು ವಿಚಾರಿಸಿದರು. ‘‘ಇಲ್ಲ ಇಲ್ಲ, ಹೆಚ್ಚಿಲ್ಲ, ಬರೇ ಐದಾರು’’ ಎಂಬ ಉತ್ತರ ಬಂತು. ಶಾಸ್ತ್ರಿಯವರಿಗೆ ಸಂತೋಷವಾಯಿತು. ಆದರೆ ಅಷ್ಟರಲ್ಲೇ ಗೈಡ್, ಪ್ರತಿ ಪ್ಯಾರಾದಲ್ಲಿ ಎಂದು ಸೇರಿಸಿದರಂತೆ! ನಮ್ಮ ಪ್ರಾಸ್ಪೆಕ್ಟಸ್ ಹಾಗಿತ್ತು. ನಮ್ಮದು ಅಂತಾರಾಷ್ಟ್ರೀಯ ಹೆಸರು ಗಳಿಸಿದ ಸಂಸ್ಥೆ. ಪ್ರಾಸ್ಪೆಕ್ಟಸ್‌ನಲ್ಲಿದ್ದ ಇಂಗ್ಲಿಷ್ ನೋಡಿ ನನಗೆ ತಲೆ ತಗ್ಗಿಸುವಂತಾಯಿತು. ನಂತರ ನಾನೇ ಕಂಪ್ಯೂಟರ್ ಮುಂದೆ ಕುಳಿತು ನನ್ನ ಕೈಲಾದ ಮಟ್ಟಿಗೆ ತಪ್ಪುಗಳನ್ನು ಸರಿಪಡಿಸಿದೆ. ಇಂಗ್ಲಿಷ್ ಭಾಷೆಗೂ ನಮ್ಮ ದೇಸೀ ಭಾಷೆಗಳಿಗೂ ಬಹಳಷ್ಟು ವ್ಯತ್ಯಾಸಗಳಿವೆ-ಉಚ್ಚಾರಣೆಯಲ್ಲಿ, ಪದರಚನೆಯಲ್ಲಿ, ವಾಕ್ಯರಚನೆಯಲ್ಲಿ. ನಮ್ಮದು ಲಘು-ಗುರುಗಳ (ಅರ್ಥಾತ್ ಹ್ರಸ್ವ-ದೀರ್ಘಗಳ) ಮೇಲಿಂದ ಸಾಗುವ ಭಾಷೆ. ಇಂಗ್ಲಿಷ್ ಘಾತ-ಲಾಘವಗಳ ಮೇಲಿಂದ ಸಾಗುವಂಥದು. ಘಾತ (stress) ಎಂದರೆ ಅಕ್ಷರವೊಂದನ್ನು ಹೆಚ್ಚಿನ ಶಕ್ತಿಯಿಂದ ಉಚ್ಚರಿಸುವುದು; ಲಾಘವ (unstressed) ಇದಕ್ಕೆ ವಿರುದ್ಧ, ಅರ್ಥಾತ್ ಕಡಿಮೆ ಶಕ್ತಿಯಿಂದ ಉಚ್ಚರಿಸುವುದು. ಘಾತ ಮತ್ತು ಲಾಘವ ತೌಲನಿಕ ಕಲ್ಪನೆಗಳು. ಆದ್ದರಿಂದ ಇಂಗ್ಲಿಷ್ ಭಾಷಿಕರಿಗೆ ಕನ್ನಡ ಉಚ್ಚರಿಸುವುದೂ, ಕನ್ನಡಿಗರಿಗೆ ಇಂಗ್ಲಿಷ್ ಉಚ್ಚರಿಸುವುದೂ ಶ್ರಮ ವಹಿಸಿ ಬರುವ ಸಂಗತಿಗಳಲ್ಲದೆ ಸಹಜವಾಗಿ ಬರುವಂಥದಲ್ಲ. The sun rises in the east ಎಂಬ ಇಂಗ್ಲಿಷ್ ವಾಕ್ಯದಲ್ಲಿ ಮೂರು ಘಾತಗಳಿವೆ, ಎರಡನೆ, ಮೂರನೆ ಮತ್ತು ಆರನೆ ಪದಗಳಲ್ಲಿ. ಈ ಘಾತಗಳನ್ನು ತೊರೆದು ಎಲ್ಲಾ ಅಕ್ಷರಗಳನ್ನೂ ಒಂದೇ ರೀತಿ ಉಚ್ಚರಿಸಿದರೆ ಅದು ಇಂಗ್ಲಿಷ್‌ನಂತೆ ಕೇಳಿಸದು. ಈಗ ಟೀವಿ, ರೇಡಿಯೊ, ಮೊಬೈಲ್ ಸೌಲಭ್ಯಗಳಿರುವುದರಿಂದ ಇಂಗ್ಲಿಷ್ ಉಚ್ಚಾರಣೆಯ ಮಾದರಿಗಳು ಸುಲಭವಾಗಿ ಲಭ್ಯ. ಆದರೆ ಘಾತವೆನ್ನುವ ವಿಷಯವೊಂದಿದೆ ಎನ್ನುವುದು ಗೊತ್ತಿರಬೇಕಾಗುತ್ತದೆ.

ನಮಗೆ ಇಂಗ್ಲಿಷ್ ಕಲಿಸಿದ ಮೇಷ್ಟರುಗಳಿಗೂ ಹಲವು ಸಂಗತಿಗಳು ಗೊತ್ತಿರಲಿಲ್ಲ, ಅವರ ಮೇಷ್ಟರುಗಳಿಗೂ ಬಹುಶಃ ಗೊತ್ತಿರಲಿಕ್ಕಿಲ್ಲ. ಅವರೆಲ್ಲ ತಮಗೆ ಗೊತ್ತಿರುವುದನ್ನು ಗೊತ್ತಿರುವ ರೀತಿಯಲ್ಲಿ ಕಲಿಸುತ್ತಿದ್ದರು. ಹೀಗೆ ಇಂಗ್ಲಿಷ್ ಶಿಕ್ಷಣದಲ್ಲಿ ಸೀಮಿತ ಜ್ಞಾನದ ಪರಂಪರೆಯೊಂದು ಸಾಗಿ ಬಂದಿದೆ. ನನಗೆ ಕಲಿಸಿದ ಯಾವ ಅಧ್ಯಾಪಕರೂ ಘಾತದ ಕುರಿತು ತಿಳಿಸಿಲ್ಲ. ಲೆಕ್ಚರರ್ ಆದ ಕೆಲವು ವರ್ಷಗಳ ನಂತರವಷ್ಟೇ ನಾನೇ ಸ್ವತಃ ಈ ಬಗ್ಗೆ ತಿಳಿದುಕೊಂಡದ್ದು. ಕನ್ನಡ ಮತ್ತು ಇಂಗ್ಲಿಷ್ ಮಧ್ಯೆ ಕಲಿಕೆಯ ದೃಷ್ಟಿಯಿಂದ ಮುಖ್ಯವಾದ ಇನ್ನಿತರ ಹಲವಾರು ವ್ಯತ್ಯಾಸಗಳೂ ಇವೆ. ಕನ್ನಡವೂ ಸೇರಿದಂತೆ ದೇಶಭಾಷೆಗಳಲ್ಲಿ ಬರಹದಲ್ಲಿ ಇರುವುದನ್ನು ಮಾತಿನಲ್ಲೂ ಉಚ್ಚರಿಸುತ್ತೇವೆ. ನಾವಿದನ್ನು ಇಂಗ್ಲ್ಲಿಷ್‌ನಲ್ಲೂ ಬಯಸುತ್ತೇವೆ. ಆದರೆ ಇಂಗ್ಲಿಷ್‌ನ ಅಕ್ಷರ ವ್ಯವಸ್ಥೆಯೇ ಬೇರೆ. ಇಂಗ್ಲಿಷ್‌ನಲ್ಲಿ ಕೆಲವು ಅಕ್ಷರಗಳು ಕೆಲವೆಡೆ ಉಚ್ಚಾರಣೆಗೆ ಬರುವುದಿಲ್ಲ. ಇವು ಸಂದರ್ಭಕ್ಕನುಸಾರ ವೌನಾಕ್ಷರಗಳು (silent letters). ಉದಾಹರಣೆಗೆ, palm ಎಂಬಲ್ಲಿ ‘ಎಲ್’ ಅಕ್ಷರಕ್ಕೆ ಉಚ್ಚಾರಣೆಯಿಲ್ಲ. ಪದಗಳ ಕೊನೆಯಲ್ಲಿ ಬರುವ ‘ಆರ್’ ಅಕ್ಷರಕ್ಕೂ ಇಲ್ಲ; ಆದರೆ ನಂತರದ ಪದ ಸ್ವರದಿಂದ ಆರಂಭವಾದರೆ ಆರ್ ಉಚ್ಚಾರಣೆಗೆ ಬರುತ್ತದೆ (ಉದಾ: mother-in-law). Sing, ring, bring  ಮುಂತಾದ ಕಡೆ ಕೊನೆಯ ವ್ಯಂಜನ ‘ಗ’ಕಾರ ಅಲ್ಲ, ‘’ಕಾರ. ಅದೇ ರೀತಿ, bomb, comb, thumb ಮುಂತಾದ ಕಡೆ ಕೊನೆಯ ಅಕ್ಷರಕ್ಕೆ ಉಚ್ಚಾರವಿಲ್ಲ.

ಇನ್ನು ಇಂಗ್ಲಿಷ್ ಉಚ್ಚರಿಸುವಾಗ ನಾವು ಕನ್ನಡದಲ್ಲಿ ಇರುವಂತೆ ಇಮ್ಮಡಿ ಅಕ್ಷರಗಳಿರುವ ಕಡೆ ದ್ವಿತ್ವವನ್ನು ಕಲ್ಪಿಸಿ ಉಚ್ಚರಿಸುತ್ತೇವೆ. ಇದು ಇಂಗ್ಲಿಷ್‌ಗೆ ಸೇರಿದ್ದಲ್ಲ. ಉದಾಹರಣೆಗೆ,irrelevant ಎನ್ನುವುದು ‘ಇರ್ರೆಲವೆಂಟ್’ ಅಲ್ಲ, ಬರೇ ಇರೆಲವೆಂಟ್; ‘ಇ’ ಅಕ್ಷರದ ಮೇಲೆ ಘಾತ ಬರುತ್ತದೆ. ಗ್ರೀಕ್ ಮೂಲದ ಹಲವಾರು ಪದಗಳು ಇಂಗ್ಲಿಷ್‌ಗೆ ಬಂದಿವೆ; ಅವುಗಳ ಮೊದಲ ಅಕ್ಷರ ಉಚ್ಚಾರಣೆಗೆ ಬರುವುದಿಲ್ಲ: psychology, pneumonia, gnostic, mnemonic  ಇತ್ಯಾದಿ. ಮೂಲ ಇಂಗ್ಲಿಷ್‌ಗೇ ಸೇರಿದ know, knight, knee, knead ಮೊದಲಾದ ಪದಗಳ ‘ಕೆ’ ಉಚ್ಚಾರಣೆಗೆ ಬರುವುದಿಲ್ಲ. ಇಂಗ್ಲಿಷ್ ಸ್ಪೆಲ್ಲಿಂಗ್ (ವಾಸ್ತವದಲ್ಲಿ ಸ್ಪೆಲಿಂಙ್) ಪದ್ಧತಿ ಸುಲಭವಲ್ಲ ಆದರೆ ಕಲಿಯುತ್ತ ಹೋದಂತೆ ಅದರ ಸ್ವಾರಸ್ಯ ತನ್ನಷ್ಟಕ್ಕೇ ಅರ್ಥವಾಗುತ್ತದೆ. ಇಂಗ್ಲಿಷ್ ಕಲಿಸುವವರೂ, ಕಲಿಯುವವರೂ ಇಂಗ್ಲಿಷ್‌ನ ಇಂಥ ವಿಶಿಷ್ಟ ಗುಣಗಳನ್ನು ಹಳಿಯದೆ, ಅವುಗಳನ್ನು ಮೆಚ್ಚಲು ಕಲಿಯಬೇಕು.

ಇಂಗ್ಲಿಷ್‌ನ ಹಲವು ಅಕ್ಷರಗಳು (ಧ್ವನಿಗಳು) ನಮ್ಮ ಭಾಷೆಯಲ್ಲಿಲ್ಲ. ನಮ್ಮ ಭಾಷೆಯ ಕೆಲವು ಅಕ್ಷರಗಳು (ಧ್ವನಿಗಳು) ಇಂಗ್ಲಿಷ್‌ನಲ್ಲಿ ಇಲ್ಲ. ಆಗ ಉಂಟಾಗುವ ತಪ್ಪುಗಳೆಂದರೆ ನಮಗೆ ಪರಿಚಿತವಿರುವ ನಮ್ಮ ಭಾಷಾದ್ವನಿಗೆ ಇಂಗ್ಲಿಷನ್ನು ಬಗ್ಗಿಸಿಕೊಳ್ಳುವುದು. ಉದಾಹರಣೆಗೆ: ಇಂಗ್ಲಿಷ್‌ನ ಟೆನ್, ಡೆನ್ ಪದಗಳಲ್ಲಿರುವ ‘ಟ’ ಮತ್ತು ‘ಡ’ಕಾರದ ಉಚ್ಚಾರ ಕನ್ನಡಕ್ಕೆ ಹತ್ತಿರ ಇದ್ದರೂ ಅವು ಪೂರ್ತಿ ಹಾಗಿಲ್ಲ. ಇಂಗ್ಲಿಷ್‌ನ ‘ಚಿನ್’ನಲ್ಲಿ ಬರುವ ಚಕಾರ ಕನ್ನಡಕ್ಕೆ ಹತ್ತಿರವಿದ್ದೂ ಕನ್ನಡದ್ದಲ್ಲ. ಆದರೆ ನಾವು ಹಾಗೆಂದೇ ತಿಳಿದುಕೊಂಡಿದ್ದೇವೆ. ಇಂಗ್ಲಿಷ್‌ನ ಥಿಂಕ್‌ನಲ್ಲಿ ಬರುವ ಮೊದಲ ಅಕ್ಷರಧ್ವನಿ ಕನ್ನಡದಲ್ಲಿ ಇಲ್ಲವೇ ಇಲ್ಲ. ಇಂಗ್ಲಿಷ್‌ನ boat, toast, most, host ಎಂಬ ಪದಗಳಲ್ಲಿ ಬರುವ ಸ್ವರಾಕ್ಷರ ಕನ್ನಡದಲ್ಲಿ ಇಲ್ಲ. ನಾವದನ್ನು ಕನ್ನಡದಲ್ಲಿರುವ ‘ಓ’ಕಾರದಂತೆಯೇ ಉಚ್ಚರಿಸುತ್ತೇವೆ (ಬೋಟ್, ಟೋಸ್ಟ್, ಮೋಸ್ಟ್, ಹೋಸ್ಟ್ ಮುಂತಾಗಿ). ಇಂಗ್ಲಿಷ್‌ನ ಪದ ಸಂಪತ್ತು ಅಗಾಧವಾದುದು. ಬಹುಶಃ ಇಂಗ್ಲಿಷ್‌ನಲ್ಲಿ ಇರುವಷ್ಟು ಪದಗಳು ಲೋಕದ ಇನ್ಯಾವುದೇ ಜೀವಂತ ಭಾಷೆಯಲ್ಲಿ ಇಲ್ಲ. ಮೂಲ ಆಂಗ್ಲೋ-ಸ್ಯಾಕ್ಸನ್ ಅಲ್ಲದೆ, ಕೆಲ್ಟಿಕ್, ಸ್ಕಾಂಡಿನೇವಿಯನ್, ಗ್ರೀಕ್, ಲ್ಯಾಟಿನ್, ಫ್ರೆಂಚ್, ಅರಬಿಕ್, ಪರ್ಶಿಯನ್, ಹಿಂದಿ ಪದಗಳು ಇಂಗ್ಲಿಷನ್ನು ಸೇರಿಕೊಂಡು ‘ಇಂಗ್ಲೀಷೇ’ ಆಗಿಬಿಟ್ಟಿವೆ. ಇಂಗ್ಲಿಷ್‌ನ ಸೈಪರ್ ಮತ್ತು ಝೀರೋ ಎರಡೂ ಅರಬಿಕ್ ಮೂಲದವು! ಮೂಲದ ಪದಗಳು ಇಂಗ್ಲಿಷ್‌ನಲ್ಲಿ ಬದಲಾಗಿವೆ.

ಅರ್ಥ ವ್ಯಾಪ್ತಿಯನ್ನು ಪಡೆದಿವೆ. ಇಂಗ್ಲಿಷ್ ಭಾಷೆ ಬೆಳೆದು ಬಂದ ಬಗೆಯನ್ನು ಅರಿತರೆ ಪದಗಳ ಮೇಲೆ ಹೆಚ್ಚು ಹಿಡಿತ ಸಾಸಬಹುದು. ಹಾಗಾದರೆ ನಾವು ಗ್ರೀಕ್ ಮತ್ತು ಲ್ಯಾಟಿನ್ ಕೂಡ ಕಲಿಯಬೇಕೇ ಎಂದರೆ, ಅಲ್ಲಿಯ ತನಕ ಹೋಗುವುದು ಬೇಕಿಲ್ಲ. ಆದರೆ ತುಸುವಾದರೂ ಗೊತ್ತಿದ್ದರೆ ಸಹಾಯಕವಾಗುತ್ತದೆ ಎನ್ನಬಹುದು. ಇಂಗ್ಲಿಷ್ ಎಂ.ಎ. ಕೋರ್ಸ್ ನಲ್ಲಿ ಸಾಧಾರಣವಾಗಿ ಹಿಸ್ಟರಿ ಆ್ ಇಂಗ್ಲಿಷ್ ಒಂದು ಪೇಪರ್ ಆಗಿರುತ್ತದೆ. ಇಂಗ್ಲಿಷ್‌ನ ವಾಕ್ಯರಚನೆ ಕೂಡ ಕನ್ನಡದಂತೆ ಇರುವುದಿಲ್ಲ. ಭೂತಕಾಲ ರೂಪಗಳಲ್ಲಿ ಕೆಲವು ಕ್ರಮಾತೀತ ರೂಪಗಳಿವೆ. ಇವನ್ನು ಸ್ಟ್ರಾಂಗ್ ವರ್ಬ್ಸ್ (ಅಥವಾ ರೆಗ್ಯುಲರ್ ವರ್ಬ್ಸ್) ಎಂದು ಕರೆಯುವುದು ವಾಡಿಕೆ. ಉದಾಹರಣೆಗೆ: ಕಮ್-ಕೇಮ್-ಕಮ್, ಗೋ-ವೆಂಟ್-ಗಾನ್, ಸೀ-ಸಾ-ಸೀನ್, ಬೀಟ್-ಬೀಟ್-ಬೀಟನ್, ಬಿಗಿನ್-ಬಿಗ್ಯಾನ್-ಬಿಗನ್ ಮುಂತಾಗಿ; ಪುಟ್, ಕಟ್ ಎನ್ನುವ ಕ್ರಿಯಾಪದಗಳು ಮೂರೂ ರೂಪಗಳಲ್ಲಿ ಒಂದೇ ರೀತಿ ಇರುತ್ತವೆ. ಆರಂಭದಲ್ಲಿ ಇವನ್ನೆಲ್ಲ ಯೋಚಿಸಿದರೆ ಕಲಿಯುವವರು ಅೀರರಾಗಬಹುದು. ಆದರೆ, ಇವೆಲ್ಲ ಕ್ರಮಾಗತವಾಗಿ ಮತ್ತು ಸಂದರ್ಭಸಹಿತವಾಗಿ ಕಲಿತುಕೊಳ್ಳಬೇಕಾದ ಸಂಗತಿಗಳು, ಹಾಗೂ ಇಂಥ ಕ್ರಿಯಾಪದಗಳು ಅಸಾಧ್ಯವೆನಿಸುವಷ್ಟು ಹೆಚ್ಚೇನೂ ಇಲ್ಲ. ಇವೆಲ್ಲವೂ ಇಂಗ್ಲಿಷ್‌ನ ಆಂಗ್ಲೋ-ಸ್ಯಾಕ್ಸನ್ ಬುನಾದಿ ಪದಗಳು. ಉಳಿದುವೆಲ್ಲ ವಾಕ್-ವಾಕ್ಡ್-ವಾಕ್ಡ್ ಎಂಬ ಕ್ರಮದಲ್ಲಿ ಇವೆ. Did you see the movie?  ಎನ್ನುವುದು ಇಂಗ್ಲಿಷ್‌ನ ಒಂದು ಪ್ರಶ್ನಾರೂಪ. ಆದರೆ ನಮ್ಮಲ್ಲಿ ಹಲವರು ಅದನ್ನುYou saw the movie?  ಎಂದು ಮೊಟಕುಗೊಳಿಸುತ್ತಾರೆ.You saw the movie?  ಎಂಬ ರೂಪ ಇಂಗ್ಲಿಷ್‌ನಲ್ಲಿ ಇಲ್ಲದಿಲ್ಲ. ಆದರೆ ಅದರ ಉಪಯೋಗ ಬೇರೆ. ಅದೇ ರೀತಿ, Will you come with me?  ಎಂಬಲ್ಲಿYou will come with me? ಎನ್ನುವುದೂ ಸಾಧುವಲ್ಲ.  My head is paining ಎನ್ನುವುದು ಸರಿಯಲ್ಲ; My head is achingಎನ್ನಬೇಕು.  I have been living here since four years ತಪ್ಪು;I have been living here since 2014 ಅಥವಾfor four years ಎನ್ನಬೇಕು. ಇಂಥ ನೂರಾರು ವಿಚಾರಗಳಿವೆ. ಇಂಗ್ಲಿಷ್ ಕಲಿಯುವ ವಿದ್ಯಾರ್ಥಿ ಇವುಗಳನ್ನೆಲ್ಲ ಕಲಿಯಬೇಕಾಗುತ್ತದೆ. Isn’t it? ಎಂಬ ಸಮ್ಮತಿ ಸೂಚಿ ಪ್ರಶ್ನೆಯನ್ನು ನಾವು ಎಲ್ಲೆಂದರಲ್ಲಿ ಬಳಸುತ್ತೇವೆ. ಇದೊಂದು ರೀತಿಯ ಸರಳ ಬಳಕೆ, ಆದರೆ ವಿದ್ಯಾವಂತ ಇಂಗ್ಲಿಷ್‌ನಲ್ಲಿ ಇದರ ಬಳಕೆಗೆ ಕೆಲವು ನಿಯಮಗಳಿವೆ.

ಇಂಗ್ಲಿಷ್ ಕಲಿಯಲು ಗ್ರೀಕ್, ಲ್ಯಾಟಿನ್ ಭಾಷೆಗಳು ಸಹಕಾರಿ ಎಂದೆವು. ವಾಸ್ತವದಲ್ಲಿ ಇವು ವೈಜ್ಞಾನಿಕ, ನ್ಯಾಯಾಂಗ, ವೈಚಾರಿಕ ಶೈಲಿಗಳಲ್ಲಿ ಬಹಳವಾಗಿ ಕಾಣಿಸಿಕೊಳ್ಳುತ್ತವೆ. ಈ ವಿಶಿಷ್ಟ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆದವರಿಗೆ ಅವು ಗೊತ್ತಿರುತ್ತವೆ. ಆದರೆ ಕೆಲವೊಮ್ಮೆ ದಿನಪತ್ರಿಕೆಗಳಲ್ಲಿ ಅಥವಾ ಇನ್ನೆಲ್ಲೋ ಇವು ಕಾಣಿಸಿಕೊಳ್ಳಬಹುದು. ಉದಾಹರಣೆಗೆ,rule nisi ಎಂಬ ಪದಪುಂಜವೊಂದು ಇದೆ;nisi ಎಂದರೆ ಲ್ಯಾಟಿನ್‌ನಲ್ಲಿunless ಎಂಬ ಅರ್ಥ. ಒಟ್ಟಾರೆಯಾಗಿ rule nisi   ಎಂದರೆ ಶರತ್ತುಬದ್ಧ ಎಂದು ಅರ್ಥ. ಇದು ಕೋರ್ಟ್‌ನ ಆದೇಶಕ್ಕೆ ಸಂಬಂಸಿದ ಪದ. ಅಷ್ಟು ದೂರ ಯಾಕೆ? ನಾವು ಕೆಲವೆಡೆ ಓಃ ಎಂದು ಅಡಿಟಿಪ್ಪಣಿಯನ್ನು ನೋಡುತ್ತೇವೆ. ಇದು ಲ್ಯಾಟಿನ್‌ನ  Nota Bene ನ ಮೊದಲಕ್ಷರಗಳು:note well ಎಂದರೆ ಚೆನ್ನಾಗಿ ಗಮನಿಸಿ ಎಂದು ಅರ್ಥ. ಇಂಥ ಹಲವಾರು ಹೃಸ್ವ ಪದಗಳು ಇಂಗ್ಲಿಷ್‌ನಲ್ಲಿ ಇವೆ. ಎಲ್ಲವನ್ನೂ ಕಲಿಯುವುದು ಸಾಧ್ಯವೇ ಎಂದರೆ ಉತ್ತರವಿಲ್ಲ, ಯಾಕೆಂದರೆ ಎಲ್ಲವನ್ನೂ ಎನ್ನುವುದೊಂದು ಮಹತ್ವಾಕಾಂಕ್ಷೆಯ ಕಲ್ಪನೆ. ಒಂದು ಭಾಷೆಯನ್ನು ಕಲಿಯುವುದೆಂದರೆ, ಒಂದು ಸಂಸ್ಕೃತಿಯನ್ನು ಕರಗತ ಮಾಡಿಕೊಳ್ಳುವುದು.

ಇಂಗ್ಲಿಷ್ ನಮಗೆ ಬೇಕಾದರೂ, ಕೆಲವರಿಗೆ ಅದರ ಕುರಿತು ವಿರೋ ಮನೋಭಾವವಿದೆ. ಅದು ‘ವಸಾಹತುಶಾಹಿ ಭಾಷೆ’ ಎನ್ನುವ ಕಾರಣಕ್ಕೆ. ಭಾಷೆಯೊಂದಿಗೆ ಜಗಳ ತೆಗೆಯುವುದು ಸರಿಯಲ್ಲ. ಹಾಗೆ ಮಾಡಿದರೆ ಅದು ಎಂದೂ ನಮ್ಮದಾಗುವುದಿಲ್ಲ. ಇಂಗ್ಲಿಷ್ ಕನ್ನಡಕ್ಕೆ ಮಾರಕವೆನ್ನುವುದೂ ಸರಿಯಲ್ಲ. ಕನ್ನಡ ಮತ್ತು ಇಂಗ್ಲ್ಲಿಷ್ ನಮ್ಮಲ್ಲಿ ಜತೆ ಜತೆಯಾಗಿಯೇ ಬೆಳೆಯಬೇಕಾಗಿದೆ. ನಮ್ಮ ಸಮಸ್ಯೆಯೆಂದರೆ ನಮ್ಮ ಕನ್ನಡವೂ ಅಸಮರ್ಪಕ, ಇಂಗ್ಲಿಷ್ ಅಸಮಾಧಾನಕರ. ಭಾಷೆಯೊಂದು ಕಲಿಯುವುದಕ್ಕೆ ಅರ್ಹವಾಗಿದ್ದರೆ, ಅದನ್ನು ಚೆನ್ನಾಗಿ ಕಲಿಯುವುದು ಉತ್ತಮ. ಇಂದು ಇಂಗ್ಲಿಷ್ ಕಲಿಕೆಗೆ ಹಲವಾರು ಸೌಲಭ್ಯಗಳಿವೆ; ನಿಘಂಟುಗಳು, ಕೋಶಗಳು, ಪಠ್ಯ ಪುಸ್ತಕಗಳು, ಸುದ್ದಿ ಪತ್ರಿಕೆಗಳು, ಆಡಿಯೋ ವೀಡಿಯೊ ಮಾಧ್ಯಮಗಳು, ಕತೆ- ಕಾದಂಬರಿಗಳು ಎಲ್ಲವೂ ಲಭ್ಯ. ವ್ಯಾಕರಣ ಪುಸ್ತಕಗಳನ್ನು ಮತ್ತು ನಿಘಂಟುಗಳನ್ನು ಓದುವುದರಿಂದ ಮಾತ್ರವೇ ಭಾಷೆ ಕಲಿಯಲು ಸಾಧ್ಯ ಎನ್ನುವ ತಪ್ಪು ಕಲ್ಪನೆಯನ್ನು ತೊಡೆದು ಹಾಕಬೇಕು. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವ ಹೊಣೆಗಾರಿಕೆ ಅಧ್ಯಾಪಕರ ಮೇಲಿದೆ. ಈ ಹೊಣೆಗಾರಿಕೆಯನ್ನು ನಿರ್ವಹಿಸಲು ಅಧ್ಯಾಪಕರು ಸ್ವತಃ ನಿರಂತರ ಅಧ್ಯಯನದಲ್ಲಿ ತೊಡಗಿರುವುದು ಅಗತ್ಯ. ಎಂ.ಎ. ಮಾಡಿದರೆ ಅಲ್ಲಿಗೆ ಮುಗಿಯಿತು ಎನ್ನುವ ಭಾವನೆ ಹಲವರಿಗೆ ಇದೆ. ವಾಸ್ತವವೆಂದರೆ, ಅಲ್ಲಿಂದಲೇ ಶುರುವಾಗುವುದು ನಿಜವಾದ ವಿದ್ಯಾಭ್ಯಾಸ. ಜೀವನವನ್ನೇ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡವರು ಮಾತ್ರವೇ ಅಧ್ಯಾಪಕರಾಗಲು ಯೋಗ್ಯರು. ಅಂಥ ಇಂಗ್ಲಿಷ್ ಅಧ್ಯಾಪಕರನ್ನು ನಮ್ಮ ದೇಶ ತಯಾರಿಸುತ್ತಿದೆಯೇ?.

Writer - ಕೆ.ವಿ. ತಿರುಮಲೇಶ್

contributor

Editor - ಕೆ.ವಿ. ತಿರುಮಲೇಶ್

contributor

Similar News