ಸವಿ ಸವಿ ನೆನಪು

Update: 2016-10-16 16:56 GMT

ಬೇಕಾದ್ದು ಬೇಡವಾದ್ದು

. ಸಾಮಾನ್ಯವಾಗಿ ಬೇಕಾದ ನೆನಪುಗಳು ಮತ್ತು ಬೇಡವಾದ ನೆನಪುಗಳು ಎಂದು ಇರುತ್ತವೆ. ಸಾಮಾನ್ಯವಾಗಿ ಕೆಲವರು ಹೇಳುವ ಮಾತುಗಳು ಹೀಗಿರುತ್ತವೆ. ‘‘ಎಷ್ಟೇ ನೆನಪಿನಲ್ಲಿಟ್ಟುಕೊಳ್ಳಬೇಕೆಂದರೂ ನೆನಪೇ ಇರುವುದಿಲ್ಲ.’’

‘‘ಎಷ್ಟು ಮರೆಯಬೇಕೆಂದರೂ ಮರೆಯಲೇ ಸಾಧ್ಯವಾಗುತ್ತಿಲ್ಲ.’’ ಈ ಎರಡೂ ಮಾತುಗಳನ್ನು ಗಮನಿಸಿದರೆ ಒಂದು ಅರ್ಥವಾಗುವುದು ಏನೆಂದರೆ ನೆನಪು ಎನ್ನುವುದು ಅನೈಚ್ಛಿಕವಾಗಿರುತ್ತದೆ ಎಂದು. ತಪ್ಪು. ಅದು ಶುದ್ಧ ತಪ್ಪು. ನೆನಪು ಎನ್ನುವುದು ಐಚ್ಛಿಕವೋ ಅಥವಾ ಅನೈಚ್ಛಿಕವೋ ಅಲ್ಲ. ಬದಲಾಗಿ ತರಬೇತಿ ಹೊಂದಿದ, ತರಬೇತಿ ಹೊಂದಿರದ ನೆನಪುಗಳು. ಮರೆಯುವುದಕ್ಕಾದರೂ, ನೆನಪಿನಲ್ಲಿಟ್ಟುಕೊಳ್ಳಬೇಕಾದರೂ ಸರಿಯಾದ ತರಬೇತಿಯನ್ನು ಹೊಂದಿರಬೇಕು. ಅದನ್ನು ಪ್ರಾರಂಭದಲ್ಲಿಯೇ ಮಕ್ಕಳಿಗೆ ರೂಢಿ ಮಾಡಿಸದೇ ಹೋದರೆ, ಬೇಕಾದ ವಿಷಯಗಳನ್ನು ಮರೆಯುತ್ತಿರುತ್ತಾರೆ. ಬೇಡದ ವಿಷಯಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡಿರುತ್ತಾರೆ.

 ನೆನಪುಗಳ ನಿಯಂತ್ರಣ

ನೆನಪು ಎಂದರೇನೇ ಮನಸ್ಸಿನಲ್ಲಿರುವುದನ್ನು ಹೊರದೆಗೆಯುವುದು. ಪ್ರಜ್ಞಾಪೂರ್ವಕವಾಗಿ ಹೊರದೆಗೆಯುವುದು ಒಂದಾದರೆ, ಅಪ್ರಜ್ಞಾಪೂರ್ವಕವಾಗಿ ಹೊರದೆಗೆಯುವುದು ಇನ್ನೊಂದು ಬಗೆ. ಇದಕ್ಕೆ ಬಹಳ ಮುಖ್ಯವಾಗಿರುವುದು ಭಾವನೆಗಳ ನಿಯಂತ್ರಣ, ಎಮೋಶನ್ ಕಂಟ್ರೋಲ್. ನೆನಪೆನ್ನುವುದು ಮೆದುಳಿನ ಎಡ ಮತ್ತು ಬಲ, ಎರಡೂ ಭಾಗಗಳಲ್ಲಿ ಹಂಚಿ ಹೋಗಿರುತ್ತವೆ. ಕಲಿಕೆಯ ಸಮಯದಲ್ಲಿ ಎರಡೂ ಬದಿಯ ಸಾಮರ್ಥ್ಯಗಳನ್ನು ಉಪಯೋಗಿಸಿಕೊಂಡು ಸ್ಮರಣೆಗೆ ತಂದುಕೊಳ್ಳಬೇಕಾಗುತ್ತದೆ. ಮೆದುಳಿನಲ್ಲಿ ದಾಖಲಾಗಿರುವ ವಿಷಯಗಳನ್ನು ಸ್ಮರಣೆಗೆ ತಂದುಕೊಳ್ಳಬೇಕಾದರೆ ಮನಸ್ಸು ವಿಶ್ರಾಂತವಾಗಿರಬೇಕು. ವಿಶ್ರಾಂತವಾಗಿರುವಾಗ, ಉದ್ವೇಗವಿಲ್ಲದೇ ಇರುವಾಗ ಮತ್ತು ಯಾವುದೇ ತೀವ್ರ ಒತ್ತಡಗಳು ಇಲ್ಲದೇ ಇರುವಾಗ ಸ್ಮರಣೆಗೆ ತಂದುಕೊಳ್ಳುವ ಕೆಲಸ ಬಹಳ ಸುಲಭವಾಗುತ್ತದೆ. ಅದಕ್ಕಾಗಿಯೇ ತರಬೇತಿಯನ್ನು ನೀಡಬೇಕಾಗಿರುವುದು. ಒಂದು ಪ್ರಯೋಗವನ್ನು ಮಾಡಿ ನೋಡಿ. ಯಾರದೋ ಟೆಲಿಫೋನ್ ನಂಬರ್ ನಿತ್ಯವೂ ಬಳಸುತ್ತಿರುತ್ತೇವೆ. ಆದರೆ ಮೊಬೈಲ್ ಫೋನ್ ಹೆಸರನ್ನು ನೋಡಿ ಒತ್ತಿಬಿಡುತ್ತಿರುತ್ತೇವೆ. ಹಾಗೆ ಮಾಡುವಾಗ ನಂಬರನ್ನು ಒಂದೆರಡು ಸಲ ಗಮನಿಸಿ. ಪ್ರಜ್ಞಾಪೂರ್ವಕವಾಗಿ ನೋಡಿಕೊಳ್ಳಿ. ಇನ್ನೊಮ್ಮೆ ಕರೆ ಮಾಡುವಾಗ ಹೆಸರನ್ನು ಹುಡುಕದೇ ಬರೀ ನಂಬರ್ ಡಯಲ್ ಮಾಡುವೆನೆಂದು ನಿರ್ಧರಿಸಿಕೊಳ್ಳಿ. ನಂತರ ಒಂದು ಸಲಕ್ಕೋ, ಎರಡನೆ ಸಲಕ್ಕೋ ಯಶಸ್ವಿಯಾಗುವಿರಿ. ಏಕೆಂದರೆ, ಯಾವುದೇ ಸಾಮಾನ್ಯ ಆರೋಗ್ಯವಂತ ವ್ಯಕ್ತಿಗೆ ಸ್ಮರಣಹೀನತೆಯು ಉಂಟಾಗುವುದಿಲ್ಲ. ನೆನಪಿನಲ್ಲಿರುವುದಿಲ್ಲ ಎಂದುಕೊಳ್ಳುವುದೇ ಒಂದು ಭ್ರಮೆ. ನಾವು ನಾವಾಗಿಯೇ ನೆನಪಿನಲ್ಲಿಟ್ಟುಕೊಳ್ಳುತ್ತೇನೆಂದು ನಿರ್ಧರಿಸಬೇಕು. ಮಕ್ಕಳಿಗೆ ಇಂತಹ ಸಕಾರಾತ್ಮಕವಾದ ನಿರ್ಧಾರಗಳನ್ನು ಕಲಿಸಬೇಕು.

1.ಮಕ್ಕಳಿಗೆ ಮರೆಯಬೇಡ, ಮರೆಯಬೇಡ ಎಂದು ಹೇಳುವುದನ್ನು ನಿಲ್ಲಿಸಿ.

2.ನಿರ್ದೇಶನಗಳನ್ನು ಕೊಡುವಾಗ ಹೆದರಿಸುವಂತೆಯೋ, ಗದರಿಸುವಂತೆಯೋ ಇದ್ದರೆ ಅವರು ನಿಮ್ಮ ಗದರಿಕೆ ಮತ್ತು ಹೆದರಿಕೆಗಳನ್ನು ಮಾತ್ರವೇ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ನೀವು ಹೇಳುವ ವಿಷಯವನ್ನು ಮರೆತುಬಿಡುತ್ತಾರೆ. ಏಕೆಂದರೆ ಅದೇ ಅಲ್ಲಿ ಬಹಳ ಗಾಢವಾಗಿ ಕಾಣುವುದು.

 3.ಮಕ್ಕಳು ಒತ್ತಡವಿಲ್ಲದ ಮನಸ್ಥಿತಿಗೆ ಬರುವಂತೆ ಮಾಡಿ ನಿಧಾನವಾಗಿ ಹೇಳಬೇಕು. ನಂತರ ಅವರು ಅದನ್ನು ಪುನರಾವರ್ತಿಸುವಂತೆ ಕೇಳಬೇಕು. ಹಾಗೆ ಮಾಡಿದರೆ, ಅವರಿಗೆ ನೆನಪೂ ಇರುತ್ತದೆ. ಒಂದು ವೇಳೆ ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಸರಿ ಮಾಡಬಹುದು.

 4.ಮಕ್ಕಳಿಗೆ ಎಲ್ಲಾ ಹೇಳಿದ ಮೇಲೆ ನಿನಗೆ ಬೇಕಾದಾಗ ಇದು ನೆನಪಿಗೆ ಬರುತ್ತದೆ ಎಂಬಂತಹ ಧೋರಣೆಯಲ್ಲಿನ ಮಾತುಗಳನ್ನು ಹೇಳಿರಬೇಕು. ಅದನ್ನು ಅವರು ಆಲಿಸಬೇಕು. ಜ್ಞಾಪಕ ಇಟ್ಟಿಕೋ ಎಂಬ ತಾಕೀತೂ ಬೇಡ. ಮರೆತುಹೋಗಬೇಡ ಎಂಬ ಎಚ್ಚರಿಕೆಯೂ ಬೇಡ.

ನೆನಪಿನಲ್ಲಿಟ್ಟುಕೊಳ್ಳುವ ವಿಧಗಳು

ಎಲ್ಲಾ ಮಕ್ಕಳೂ ಒಂದೇ ಬಗೆಯಲ್ಲಿ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಅವರಿಗೆ ಹೇಗೋ ಆಗಿರುವ ರೂಢಿಯಂತೆ ಎನ್ನುವುದಕ್ಕಿಂತ, ಅವರವರ ಮೆದುಳಿನ ರಚನೆ ಮತ್ತು ಸಾಮರ್ಥ್ಯದ ರೀತಿಯಲ್ಲಿ ಅವರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಕೆಲವರು ತಾರ್ಕಿಕವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಇದನ್ನು ಲಾಜಿಕಲ್ ಮೆಮೋರಿ ಎನ್ನುವುದು. ಅವರಿಗೆ ಒಟ್ಟಾರೆ ವಿಷಯವನ್ನು ಹಲವಾರು ಭಾಗಗಳನ್ನಾಗಿ ವಿಂಗಡಿಸಲಾಗಿದ್ದು, ಒಂದೊಂದು ಭಾಗವೂ ಮತ್ತೊಂದು ಭಾಗಕ್ಕೆ ತಾರ್ಕಿಕವಾಗಿ ಸಂಬಂಧಿಸಿರುತ್ತದೆ. ಪರಸ್ಪರ ಬೆಸೆದುಕೊಂಡಿರುತ್ತದೆ. ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಸಂಬಂಧಿಸಿರುವುದರಿಂದ ಒಂದನ್ನು ನೆನಪಿನಲ್ಲಿಟ್ಟುಕೊಂಡರೆ ಅದರ ಮುಂದಿನ ಭಾಗ ಕೊಂಡಿಯಂತೆ ಹೊಂದಿರುತ್ತದೆ. ಅದೇ ರೀತಿ ಇಡೀ ವಿಷಯ ನೆನಪಿಗೆ ಬರುತ್ತದೆ. ಮತ್ತೊಂದು ಬಗೆಯ ನೆನಪಿನ ವಿಧವೆಂದರೆ ಚಿತ್ರಿಕೆಯ ನೆನಪು. ಅದಕ್ಕೆ ಪಿಕ್ಟೋರಿಯಲ್ ಮೆಮೋರಿ. ಯಾವ ಮಕ್ಕಳು ತಾರ್ಕಿಕವಾಗಿ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲವೋ ಅವರು ವಿಷಯವನ್ನು ಚಿತ್ರದಂತೆ ತಮ್ಮಲ್ಲಿ ಹೊಂದಿರುತ್ತಾರೆ. ಚಿತ್ರದ ಮೂಲಕ ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಚಿತ್ರಗಳ ಜೊತೆಗೆ ವಿಷಯಗಳನ್ನು ಹೊಂದಿಸಿಕೊಂಡಿರುತ್ತಾರೆ. ಹಾಗಾಗಿ ಸಣ್ಣ ಮಕ್ಕಳಿಗೆ ಕಲಿಕೆಯ ಪಠ್ಯದ ಜೊತೆಗೆ ಹೆಚ್ಚು ಹೆಚ್ಚು ಚಿತ್ರಗಳನ್ನು ಅಳವಡಿಸುವುದು. ಚಿತ್ರಗಳನ್ನು ಅಳವಡಿಸುವುದು ಆಕರ್ಷಣೀಯವಾಗಿ ಎಂದು ಮಾತ್ರವಲ್ಲ. ಮಕ್ಕಳ ಸೃಜನಶೀಲತೆಯು ಹೆಚ್ಚು ಕ್ರಿಯಾಶೀಲವಾಗಿರುವುದುದರಿಂದ. ನೆನಪುಗಳು ಯಾವಾಗಲೂ ಒಂದು ಅಂಶದಿಂದ ಮತ್ತೊಂದು ಅಂಶಕ್ಕೆ ಕೊಂಡಿ ಬೆಸೆದುಕೊಂಡಿರುತ್ತವೆ. ಆದ್ದರಿಂದಲೇ ಈ ಕೊಂಡಿಗಳನ್ನು ಗುರುತಿಸುವಂತಹ ಮತ್ತು ಗಮನಿಸುವಂತಹ ವಿಷಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದಾದರೆ ಮಕ್ಕಳಿಗೆ ತಮ್ಮ ಅಧ್ಯಯನದ ಕ್ರಿಯಾಶೀಲತೆಯನ್ನು ವಿಸ್ತರಿಸಿಕೊಳ್ಳಲು ಸಾಕಷ್ಟು ಅವಕಾಶಗಳನ್ನು ದೊರಕಿಸಿಕೊಟ್ಟಂತಾಗುತ್ತದೆ. ಆದ್ದರಿಂದಲೇ ತಿಳಿದಿರುವ ವಿಷಯದಿಂದ ತಿಳಿಯದೇ ಇರುವ ವಿಷಯಕ್ಕೆ ಬೆಸುಗೆ ಹಾಕುವುದು. ಈ ರೀತಿಯ ಕನೆಕ್ಷನ್ ಕೊಡಲು ಬಲ್ಲ ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ನೆನಪಿನ ಶಕ್ತಿ ಇಲ್ಲ, ಓದಿದ್ದು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದೆಲ್ಲಾ ದೂರುವುದಿಲ್ಲ. ಬದಲಾಗಿ ಮಕ್ಕಳಿಗೆ ಸಾಮಾನ್ಯವಾಗಿ ತಿಳಿದಿರುವ ವಿಷಯವನ್ನು ತಿಳಿಸಿ ಅದಕ್ಕೆ ತಿಳಿಯದೇ ಇರುವ ವಿಷಯಕ್ಕೆ ಸಂಪರ್ಕ ಕಲ್ಪಿಸುತ್ತಾರೆ. ಉದಾಹರಣೆಗೆ, ಮೈಕ್ ಮತ್ತು ಲೌಡ್ ಸ್ಪೀಕರ್ ಬಗ್ಗೆ ತಿಳಿಸಬೇಕಾಗಿದೆ. ಅದರ ರಚನೆ, ಉದ್ದೇಶ, ಬಳಕೆಯ ಕ್ರಮ ಇವುಗಳನ್ನು ತಿಳಿಸಬೇಕಾಗಿರುತ್ತದೆ. ಒಮ್ಮಿಂದೊಮ್ಮೆಲೇ ಮೈಕ್ ಕಂಡು ಹಿಡಿದವನ ಚರಿತ್ರೆಯಿಂದ, ಸಂಶೋಧನೆಯಿಂದ ಪ್ರಾರಂಭಿಸಿದರೆ ಮಕ್ಕಳಿಗೆ ಅದು ನೆನಪಿಗೆ ಬರುವುದಿಲ್ಲ. ಬದಲಾಗಿ ನಮ್ಮ ಹತ್ತಿರದಲ್ಲಿರುವವರನ್ನು ಕರೆಯುದಾದರೆ ಹೇಗೆ ಕರೆಯುತ್ತೇವೆ. ದೂರದಲ್ಲಿರುವವರ ಜೊತೆ ಮಾತಾಡುವಾಗ ಹೇಗೆ ದನಿ ಎತ್ತರಿಸುತ್ತೇವೆ. ಇಡೀ ಸಭಾಂಗಣದಲ್ಲಿ ನೆರೆದಿರುವವರನ್ನು ಉದ್ದೇಶಿಸಿ ಮಾತಾಡುವಾಗ ಹೇಗೆ ಮಾತಾಡುತ್ತೇವೆ. ಹೀಗೆ ಹೇಳುತ್ತಾ ನಂತರ ಡೇವಿಡ್ ಎಡ್ವರ್ಡ್ ಹ್ಯೂಗ್ಸ್ ಎಂಬವರು 1870ರಲ್ಲಿ ಇಂಗ್ಲೆಂಡ್‌ನಲ್ಲಿ ಮೈಕ್ರೋಫೋನ್ ಕಂಡು ಹಿಡಿದರು ಎಂದು ಹೇಳುವ ಹೊತ್ತಿಗೆ ಮಕ್ಕಳ ಮನಸ್ಸು ವಿಷಯವನ್ನು ಸ್ವೀಕರಿಸಲು ಸಿದ್ಧವಾಗಿರುತ್ತದೆ. ನಂತರ ಥಾಮಸ್ ಆಲ್ವಾ ಎಡಿಸನ್ ಅದನ್ನು ಪರಿಷ್ಕರಿಸಿದ ರೀತಿಗಳನ್ನು ಹೇಳುವಷ್ಟು ವಿಷಯವನ್ನು ಮುಂದುವರಿಸಬಹುದು. ಇಷ್ಟು ಹೊತ್ತಿಗಾಗಲೇ ಮಕ್ಕಳಿಗೆ ಗೊತ್ತಿರುವ ದೈನಂದಿನ ವಿಷಯಗಳ ಮೂಲಕ ತಿಳಿಯದೇ ಇರುವಂತಹ ವಿಷಯ ಗಳನ್ನೂ ಬೆಸೆ ಯುವಂತೆ ಮಾಡಿದರೆ ಅಲ್ಲಿ ಆಗುವ ಮ್ಯಾಜಿಕ್ ಎಂದರೆ, ಅವರಿಗೆ ಹೊಸ ವಿಷಯ ಎನ್ನಿಸುವುದೇ ಇಲ್ಲ. ಬದಲಾಗಿ, ತಿಳಿದಿರುವ ವಿಷಯವೇ ವಿಸ್ತರಣೆಯಾಗಿದೆ ಎಂದಾಗುತ್ತದೆ. ಅದೊಂದು ಮಕ್ಕಳಿಗೆ ನೆನಪಿನಲ್ಲಿ ವಿಷಯಗಳು ಉಳಿಯುವುದಕ್ಕೆ ಬಹಳ ಮಹತ್ವದ ಕಲಿಸುವ ರೀತಿ. ಹೀಗೆ ವಿಷಯಗಳು ನೆನಪಿನ ಉಗ್ರಾಣಕ್ಕೆ ಶೇಖರವಾಗುತ್ತಿದ್ದರೂ ಅವರಿಗೆ ಯಾವುದೋ ಅನ್ಯ ಅಥವಾ ಬೇಡದ ವಿಷಯಗಳು ಎನಿಸುವುದಿಲ್ಲ. ನೆನಪಿನಲ್ಲಿ ಯಾವುದೇ ಒಂದು ವಿಷಯವು ಸಹಜವಾಗಿ ಉಳಿಯಬೇಕಾದರೆ ಅದು ತಮ್ಮ ದೈನಂದಿನ ಬದುಕಿಗೆ ಹತ್ತಿರವಾಗಿ ರಬೇಕು, ಬಳಕೆಯಲ್ಲಿರಬೇಕು ಮತ್ತು ಬೇಕಾಗಿರಬೇಕು. ಹಾಗಿದ್ದರೆ ಮಾತ್ರವೇ ನೆನಪಿನಲ್ಲಿಟ್ಟುಕೊಳ್ಳಲು ಮನಸ್ಸು ಸಮ್ಮತಿಸುವುದು. ಮಕ್ಕಳ ಸಮ್ಮತಿಗಾಗಿಯೇ ಅವರಿಗೆ ತಿಳಿದಿರುವ ಮತ್ತು ಬೇಕಾಗಿರುವ ವಿಷಯದ ಮೂಲಕ ವಿಷಯ ಗಳನ್ನು ತಿಳಿಸುವುದು. ಮಕ್ಕಳು ವಿಷಯಗಳನ್ನು ಸ್ವೀಕರಿಸಲು ಸಮ್ಮತಿಸದೇ ಹೋದ ಪಕ್ಷದಲ್ಲಿ ಅಥವಾ ತೆರೆದುಕೊಳ್ಳದೇ ಹೋದ ಪಕ್ಷದಲ್ಲಿ ಶಿಕ್ಷಕರು ಮತ್ತು ಪೋಷಕರು ಅವರ ಸ್ಮತಿಪಟಲದಲ್ಲಿ ಅದೆಷ್ಟೇ ದಾಖಲು ಮಾಡಲು ಹೋದರೂ, ಮುಚ್ಚಳ ಮುಚ್ಚಿರುವ ಪಾತ್ರೆಯ ಮೇಲೆ ನೀರು ಸುರಿದಂತಾ ಗುತ್ತದೆಯೇ ಹೊರತು, ಪಾತ್ರೆಯೊಳಗೆ ನೀರು ಸಂಗ್ರಹವಾಗುವುದೇ ಇಲ್ಲ.

ನೆನಪು ಕೆಲಸ ಮಾಡುವುದು ಹೇಗೆ?

ಮನಸ್ಸಿನ ಸುಪ್ತಚೇತನವು ಎಲ್ಲಾ ನೆನಪುಗಳ ಮಹಾ ಉಗ್ರಾಣ. ಸ್ವೀಕರಿಸಿದ್ದೆಲ್ಲಾ ಅಲ್ಲಿ ದಾಖಲಾಗಿರುತ್ತದೆ. ಬರೀ ಸಾಹಿತ್ಯಕ ದಾಖಲಾತಿಯಂತಲ್ಲ. ದೃಶ್ಯ, ಶಬ್ದ, ಸ್ಪರ್ಶ, ವಾಸನೆ, ರುಚಿ ಹೀಗೆ ಎಲ್ಲವೂ ಅಲ್ಲಿ ಅಡಕವಾಗಿರುತ್ತದೆ. ಮನಸ್ಸು ಅನುದ್ವೇಗದಿಂದ ಇರುವಾಗ, ಸ್ವಯಂ ನಿರ್ದೇಶನದಂತೆ ಅವೆಲ್ಲವೂ ಮರುಕಳಿಸುವವು. ಮನಶಾಸ್ತ್ರಜ್ಞರು ಎಷ್ಟೋ ಬಾರಿ ಈ ಉಗ್ರಾಣದಿಂದಲೇ ವ್ಯಕ್ತಿಗೆ ತೊಡಕುಂಟಾಗಿರುವ ವಿಷಯಗಳ ಮೂಲಗಳನ್ನು ತೆಗೆಯುವುದು. ಈ ಸುಪ್ತ ಚೇತನವು ಕೆಲವೊಮ್ಮೆ ಶಿಕ್ಷಿಸುತ್ತದೆ. ಕೆಲವೊಮ್ಮೆ ರಕ್ಷಿಸುತ್ತದೆ. ಅದೆಲ್ಲವೂ ನಮ್ಮನ್ನು ನಾವು ಭಾವನಾತ್ಮಕವಾಗಿ, ಮಾನಸಿಕವಾಗಿ ರೂಢಿಸಿಕೊಂಡಿರುವ ಬಗೆಯಲ್ಲಿಯೇ ಇರುತ್ತದೆ. ಮಕ್ಕಳಿಗೂ ಕೂಡ ಅಷ್ಟೆಯೇ. ಅವರು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ವಿಷಯಗಳನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗದಿರುವಂತೆ ನೋಡಿಕೊಳ್ಳಬೇಕಾಗಿರುವುದು ಹಿರಿಯರ ಕೆಲಸ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News