ನಿಮ್ಮ ಎಟಿಎಂ ವ್ಯವಹಾರದ ಸುರಕ್ಷತೆಗಾಗಿ ಇಲ್ಲಿವೆ ಟಿಪ್ಸ್

Update: 2016-10-22 09:10 GMT

ಹ್ಯಾಕರ್‌ಗಳ ದಾಳಿಯಿಂದ ಸುಮಾರು 30 ಲಕ್ಷ ಡೆಬಿಟ್ ಕಾರ್ಡ್‌ಗಳ ಮಾಹಿತಿ ಸೋರಿಕೆಯಾಗಿರುವುದು ಬ್ಯಾಂಕ್ ಗ್ರಾಹಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ವಿವಿಧ ಬ್ಯಾಂಕುಗಳ ಎಟಿಎಂಗಳಲ್ಲಿ ಮಾಲ್‌ವೇರ್ ಸೇರಿಕೊಂಡಿದೆ. ಯಾವುದೇ ದೊಡ್ಡ ಪ್ರಮಾಣದ ವಂಚನೆಯಾಗದಂತೆ ಬ್ಯಾಂಕುಗಳು ಹಲವಾರು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿವೆ.

19 ಬ್ಯಾಂಕುಗಳ 641 ಗ್ರಾಹಕರ ಡೆಬಿಟ್ ಕಾರ್ಡ್‌ಗಳ ಮಾಹಿತಿಗಳನ್ನು ಬಳಸಿ ಕೊಂಡು 1.3 ಕೋ.ರೂ.ಗಳನ್ನು ವಂಚಿಸಲಾಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಹೇಳಿದೆ.

ಗ್ರಾಹಕರು ಕೆಲವು ಮುಂಜಾಗ್ರತೆಗಳನ್ನು ವಹಿಸಿದರೆ ತಮ್ಮ ಡೆಬಿಟ್ ಕಾರ್ಡ್ ದುರ್ಬಳಕೆಯಾಗದಂತೆ ತಡೆಗಟ್ಟಬಹುದಾಗಿದೆ. ಅದಕ್ಕಾಗಿ ಇಲ್ಲಿವೆ ಸರಳ ಟಿಪ್ಸ್‌ಗಳು.

ನಿಮ್ಮ ಮೊಬೈಲ್ ನಂ. ಮತ್ತು ಇ-ಮೇಲ್ ವಿಳಾಸವನ್ನು ನಿಮ್ಮ ಬ್ಯಾಂಕ್‌ನಲ್ಲಿ ನೋಂದಾಯಿಸಿಕೊಳ್ಳಿ. ಆರ್‌ಬಿಐ ನಿಯಮಾವಳಿಗಳಂತೆ ನಿಮ್ಮ ಖಾತೆಯಲ್ಲಿ ನಡೆಯುವ ಪ್ರತಿಯೊಂದು ವಹಿವಾಟಿಗೂ ಬ್ಯಾಂಕು ನಿಮಗೆ ಎಸ್‌ಎಂಎಸ್ ಮತ್ತು ಇ-ಮೇಲ್ ಮೂಲಕ ಮಾಹಿತಿ ಸಂದೇಶವನ್ನು ರವಾನಿಸಬೇಕು.

ಬ್ಯಾಂಕ್ ನೀಡುವ ಯಾವುದೇ ಎಚ್ಚರಿಕೆಯ ಮಾಹಿತಿಯನ್ನು ಕಡೆಗಣಿಸಬೇಡಿ. ಎಲ್ಲ ಟೆಕ್ಸ್ಟ್ ಮೆಸೇಜ್‌ಗಳು ಮತ್ತು ಮೇಲ್‌ಗಳನ್ನು ಗಮನವಿಟ್ಟು ಓದಿ. ಅದು ಈಗಾಗಲೇ ನಡೆದಿರುವ ಅಥವಾ ನಡೆಯುತ್ತಿರುವ ವಹಿವಾಟಿನ ಕುರಿತಾಗಿರಬಹುದು. ಗ್ರಾಹಕರು ಈ ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಏನೋ ನಡೆಯುತ್ತಿದೆ ಎಂಬ ಶಂಕೆ ಬಂದರೆ ತಕ್ಷಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

ನಿಮ್ಮ ಯಾವುದೇ ಖಾಸಗಿ ಮಾಹಿತಿಗಳನ್ನು ಯಾರೊಂದಿಗೂ....ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲೇಬೇಡಿ.

ಆಗಾಗ್ಗೆ ನಿಮ್ಮ ಡೆಬಿಟ್ ಕಾರ್ಡ್‌ನ ಪಿನ್ ಬದಲಿಸುತ್ತಿರಿ. ಇದು ನಿಮ್ಮ ಹಣವನ್ನು ಬೇರೆಯವರು ದೋಚುವುದನ್ನು ತಡೆಯುವಲ್ಲಿ ಪ್ರಮುಖ ಕ್ರಮವಾಗಿದೆ.

ಎಟಿಎಂಗಳಲ್ಲಿ ನಿಮಗೆ ದೊರೆಯುವ ರಸೀದಿಯನ್ನು ಕಸದ ಬುಟ್ಟಿಗೆ ಎಸೆಯಬೇಡಿ. ನೆನಪಿರಲಿ....ಅದು ನಿಮ್ಮ ಖಾತೆಯ ಮಹತ್ವದ ಮಾಹಿತಿಗಳನ್ನೊಳಗೊಂಡಿರುತ್ತದೆ.

ಇದಕ್ಕಿಂತಲೂ ಒಳ್ಳೆಯ ಕೆಲಸವೆಂದರೆ ಎಟಿಎಂ ರಸೀದಿಯನ್ನು ಕೇಳಲೇಬೇಡಿ. ನಿಮ್ಮ ಖಾತೆಯಲ್ಲಿ ನಡೆಯುವ ವಹಿವಾಟಿನ ಬಗ್ಗೆ ನಿಮಗೆ ಬ್ಯಾಂಕಿನಿಂದ ಸಂದೇಶ ಬರುವಾಗ ಈ ರಸೀದಿಯ ಅಗತ್ಯವಾದರೂ ಏನಿದೆ? ರಸೀದಿಯನ್ನು ಪಡೆದುಕೊಳ್ಳದಿರುವುದು ಒಳ್ಳೆಯ ಸುರಕ್ಷತಾ ಕ್ರಮವಾಗಿರುವ ಜೊತೆಗೆ ಕಾಗದದ ಬಳಕೆಯನ್ನೂ ತಗ್ಗಿಸುತ್ತದೆ.

ಪೇಮೆಂಟ್ ಕೌಂಟರ್‌ಗಳಲ್ಲಿ ನಿಮ್ಮ ಪಿನ್ ಒತ್ತುವಾಗ ಸದಾ ಇನ್ನೊಂದು ಕೈಯಿಂದ ಮರೆ ಮಾಡಿಕೊಳ್ಳಿ. ಇದು ನಿಮ್ಮ ಪಿನ್ ಅನ್ನು ಅಪರಿಚಿತರ ಕಣ್ಣುಗಳಿಂದ ಮತ್ತು ಕ್ಯಾಮರಾಗಳಿಂದ ರಕ್ಷಿಸುತ್ತದೆ.

 ನಿಮ್ಮ ಪರವಾಗಿ ವ್ಯವಹರಿಸಲು ಇತರರಿಗೆ,ಹೋಟೆಲ್‌ಗಳಲ್ಲಿ ಅಥವಾ ಪೆಟ್ರೋಲ್ ಬಂಕ್‌ಗಳಲ್ಲಿ ಡೆಬಿಟ್ ಕಾರ್ಡ್‌ನ್ನು ನೀಡಲೇಬೇಡಿ. ಹೀಗೆ ಮಾಡುವುದರಿಂದ ನಿಮ್ಮನ್ನು ನೀವೇ ಅಪಾಯಕ್ಕೆ ಒಡ್ಡಿಕೊಂಡಂತಾಗುತ್ತದೆ ಎನ್ನುವುದನ್ನು ಮರೆಯಬೇಡಿ. ಏಕೆಂದರೆ ಇದು ನಿಮ್ಮ ಕಾರ್ಡ್‌ನಲ್ಲಿಯ ಮಾಹಿತಿಗಳನ್ನು ಕದಿಯಲು ವಂಚಕರಿಗೆ ಸುವರ್ಣಾ ವಕಾಶವನ್ನು ಕಲ್ಪಿಸುತ್ತದೆ ಮತ್ತು ಅವರು ನಿಮ್ಮ ‘ನಕಲಿ ಕಾರ್ಡ್ ’ನ್ನು ಸ್ವೈಪ್ ಮಾಡಿ ನಿಮ್ಮ ಖಾತೆಯಲ್ಲಿನ ಅಷ್ಟೂ ಹಣವನ್ನು ಕ್ಷಣಮಾತ್ರದಲ್ಲಿ ಬರಿದು ಮಾಡಬಹುದು. ವಂಚಕರು ಹಲವಾರು ಬ್ಯಾಂಕುಗಳ ಡೆಬಿಟ್ ಕಾರ್ಡ್‌ಗಳನ್ನು ಮೊದಲೇ ಮಾಡಿ ಕೊಂಡಿರುತ್ತಾರೆ. ಹೆಚ್ಚಿನ ಬ್ಯಾಂಕುಗಳು ಕಾರ್ಡ್ ಮೇಲೆ ಗ್ರಾಹಕನ ಹೆಸರನ್ನು ಮುದ್ರಿಸುವುದಿಲ್ಲವಾದ್ದರಿಂದ ಇತ್ತೀಚಿನ ದಿನಗಳಲ್ಲಿ ಇಂತಹ ವಂಚನೆ ಅತ್ಯಂತ ಸುಲಭವಾಗಿದೆ.

ಪೇಮೆಂಟ್ ಕೌಂಟರ್‌ನಿಂದ ನೀವು ವಾಪಸ್ ಪಡೆಯುವ ಕಾರ್ಡ್ ನಿಮ್ಮದೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ. ಹಾಗೆ ಮಾಡುವದು ಸುಲಭವಾಗುವಂತೆ ನಿಮ್ಮ ಕಾರ್ಡ್ ಸಂಖ್ಯೆಯ ಕೊನೆಯ 4-8 ಅಂಕಿಗಳನ್ನು ನೆನಪಿಟ್ಟುಕೊಳ್ಳಿ.

ಎಟಿಎಂನಿಂದ ಹಣವನ್ನು ಹಿಂಪಡೆಯುತ್ತಿರುವಾಗ ಅಸಹಜವಾದುದೇನಾದರೂ ನಿಮ್ಮ ಗಮನಕ್ಕೆ ಬಂದರೆ ತಕ್ಷಣ ಬ್ಯಾಂಕಿಗೆ ಕರೆ ಮಾಡಿ. ವಹಿವಾಟು ರದ್ದುಗೊಂಡ ಸಂದೇಶ ಬರುವವರೆಗೂ ಅಲ್ಲಿಯೇ ಇರಿ. ಇತ್ತೀಚಿನ ದಿನಗಳಲ್ಲಿ ವಂಚಕರು ಎಟಿಎಂನ ಕೀ ಪ್ಯಾಡ್‌ನ್ನು ಜಾಮ್ ಮಾಡಿರುತ್ತಾರೆ ಮತ್ತು ಇದರಿಂದಾಗಿ ಗ್ರಾಹಕರು ವಹಿವಾಟನ್ನು ಪೂರ್ಣಗೊಳಿಸದೇ ತೆರಳುತ್ತಾರೆ. ತಕ್ಷಣ ಎಟಿಎಂ ಕೇಂದ್ರವನ್ನು ಪ್ರವೇಶಿಸುವ ವಂಚಕರು ಹಣವನ್ನು ಹಿಂತೆಗೆದುಕೊಳ್ಳುವವರೆಗೆ ವಹಿವಾಟನ್ನು ಸಕ್ರಿಯವಾಗಿರಿಸುತ್ತಾರೆ. ಇದನ್ನು ತಪ್ಪಿಸಲು ಎಟಿಎಂ ಕೇಂದ್ರದಿಂದಲೇ ಬ್ಯಾಂಕ್‌ನೊಂದಿಗೆ ಮಾತನಾಡಿ ಮತ್ತು ವಹಿವಾಟು ರದ್ದುಗೊಂಡ ಸಂದೇಶ ಸ್ಕ್ರೀನ್‌ನಲ್ಲಿ ಮೂಡುವವರೆಗೆ ಕಾಯುತ್ತಿರಿ.

ಸ್ಕಿಮಿಂಗ್ ಇನ್ನೊಂದು ಬಗೆಯ ವಂಚನೆ. ನಿಮ್ಮ ಕಾರ್ಡ್‌ನಲ್ಲಿಯ ಮಾಹಿತಿಗಳನ್ನು ಕದಿಯಲು ಸಾಧನವೊಂದನ್ನು ಬಳಸುವ ವಂಚಕರು ತದ್ರೂಪಿ ಕಾರ್ಡ್‌ನ್ನು ಸೃಷ್ಟಿಸುತ್ತಾರೆ. ಎಟಿಎಂನಲ್ಲಿ ಅಳವಡಿಸಿರುವ ಕ್ಯಾಮರಾವೊಂದು ನಿಮ್ಮ ಪಿನ್ ತಿಳಿದುಕೊಳ್ಳಲು ವಂಚಕರಿಗೆ ನೆರವಾಗುತ್ತದೆ ಮತ್ತು ನಿಮ್ಮ ಅರಿವಿಗೆ ಬಾರದಂತೆ ನಿಮ್ಮ ಖಾತೆಯಲ್ಲಿ ವಂಚನೆ ನಡೆದುಹೋಗುತ್ತದೆ.

ಡಿಜಿಟೈಸೇಷನ್ ಹೆಚ್ಚಿದಂತೆ ವಂಚನೆಗಳ ಸಾಧ್ಯತೆಗಳೂ ಹೆಚ್ಚುತ್ತವೆ,ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ....ಇದೊಂದು ಜಾಗತಿಕ ವಿದ್ಯಮಾನ ಎನ್ನುವುದು ತಜ್ಞರ ಒಕ್ಕೊರಳ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News