ಕಪ್ಪು ಅಕ್ಕಿ ಎಂಬ ಆರೋಗ್ಯದ ಕಣಜ

Update: 2016-10-23 11:18 GMT

ಭಾರತದ ಗ್ರಾಮೀಣ ಹಾಗೂ ಗುಡ್ಡ ಗಾಡು ಪ್ರದೇಶಗಳಲ್ಲಿ ವಿಶೇಷವಾಗಿ ಆದಿವಾಸಿಗಳು ಬೆಳೆಯುತ್ತಿರುವ ಸಿರಿಧಾನ್ಯ ಮತ್ತು ತರಕಾರಿಗಳು, ಅರಣ್ಯದಲ್ಲಿ ಸಿಗುವ ಹಣ್ಣುಗಳು ಹಾಗೂ ಶತ ಶತಮಾನಗಳ ಕಾಲದಿಂದಲೂ ಅವರು ಕಾಪಾಡಿಕೊಂಡು ಬಂದಿರುವ ರಾಗಿ, ಜೋಳ, ಭತ್ತ, ಗೋಧಿ ಮುಂತಾದ ದೇಶಿ ಬಿತ್ತನೆ ಬೀಜಗಳು ಅವರ ಪಾಲಿಗೆ ಕೇವಲ ಆಹಾರದ ಕಣಜ ಮಾತ್ರ ಆಗಿರದೆ, ಆರೋಗ್ಯದ ಕಣಜವೂ ಆಗಿದೆ. *

ಕಪ್ಪು ಭತ್ತವನ್ನು ಚೀನಾ ದೇಶದಲ್ಲಿ ಬೆಳೆಯುತ್ತಿದ್ದ ಸಂಗತಿ ಚರಿತ್ರೆಯಲ್ಲಿ ದಾಖಲಾಗಿದೆ. ಅಲ್ಲಿನ ದೊರೆಗಳಿಗಾಗಿ ರೈತರು ಈ ಭತ್ತವನ್ನು ಬೆಳೆಯುತ್ತಿದ್ದರು ಎನ್ನಲಾಗಿದೆ. ಆದರೆ ರೈತರು ಕಪ್ಪು ಭತ್ತದ ಅನ್ನವನ್ನು ಸೇವಿಸದಂತೆ ಅಲ್ಲಿನ ದೊರೆಗಳು ತಾಕೀತು ಮಾಡಿದ್ದರು ಎಂಬುದು ಸಹ ದಾಖಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಭಾರತದಲ್ಲಿ ಜನಿಸಿದ ಬುದ್ಧನ ಬೌದ್ಧ ಧರ್ಮವು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಪ್ರಸಾರವಾದ ಕಡೆಯೆಲ್ಲಾ ಕಪ್ಪು ಭತ್ತದ ಬೆಳೆಯು ಅಸ್ತಿತ್ವದಲ್ಲಿ ಇರುವುದು ಕಂಡು ಬಂದಿದೆ.

ಭಾರತವೆಂಬುದು ಕೇವಲ ಬಹು ಸಂಸ್ಕೃತಿಯ ನೆಲವಲ್ಲ, ಬಹುರೂಪಿ ದೇಶಿ ಆಹಾರ ಬೆಳೆಗಳ ನೆಲವೂ ಹೌದು. ಆಧುನಿಕತೆಯ ಬೆನ್ನತ್ತಿ, ಕಣ್ಣು ಕೋರೈಸುವ ಬೆಳಕಿನ ಮಾಲ್‌ಗಳಲ್ಲಿ ಬಿ.ಟಿ. ರೈಸ್, ಬಾಸ್ಮತಿ ರೈಸ್ ಎಂಬ ಶುದ್ಧ ಬಿಳುಪಾದ ಹಾಗೂ ಕೃತಕ ಸುವಾಸನೆಯನ್ನು ಸಿಂಪಡಿಸಿದ ತೆಳ್ಳನೆಯ ಹಾಗೂ ಉದ್ದದ ಅಕ್ಕಿಯನ್ನು ಕಂಡು ಸಂಭ್ರಮಿಸುವ ನಮಗೆ ರಾಜಮುಡಿ, ಕೆಂಪಕ್ಕಿ ಮತ್ತು ಕಪ್ಪು ಅಕ್ಕಿಯ ರುಚಿಯಾಗಲಿ, ಅವುಗಳ ಗುಣವಾಗಲಿ ಈವರೆಗೂ ತಿಳಿದಿಲ್ಲ.
 ಅಕ್ಕಿಯ ಮಿಲ್‌ಗಳಲ್ಲಿ ಎರಡು-ಮೂರು ಬಾರಿ ಪಾಲಿಶ್ ಮಾಡಿದ ಮಲ್ಲಿಗೆ ಹೂವು ಅಥವಾ ತುಂಬೆ ಹೂವಿನಷ್ಟು ಬಿಳುಪಾದ ಅಕ್ಕಿಗೆ ಮನಸೋಲುವ ನಾವು ಅದರಲ್ಲಿ ನಾರಿನ ಪದಾರ್ಥ, (ಫೈಬರ್ ಕಂಟೆಂಟ್) ಮತ್ತು ವಿಟಮಿನ್ ಹಾಗೂ ಖನಿಜದಂತಹ ಪೌಷ್ಟಿಕ ಅಂಶಗಳು ನಾಶವಾಗಿರುತ್ತವೆ ಎಂಬುದರ ಬಗ್ಗೆ ಯೋಚಿಸುವುದಿಲ್ಲ. ಗೊಬ್ಬರವನ್ನು ತಿಂದು ಗೊಬ್ಬರವನ್ನು ವಿಸರ್ಜಿಸುತ್ತಿರುವ ಈ ಕಾಲಘಟ್ಟದಲ್ಲಿ ಕೆಂಪು ಮಣ್ಣಿನ ಉಂಡೆಯನ್ನು ಮಿಣಿ ಮಿಣಿ ಮಿಂಚುವ ಕಾಗದದಲ್ಲಿ ಸುತ್ತಿಟ್ಟು ಮಾರಾಟಕ್ಕಿಟ್ಟರೂ ತೆಗೆದುಕೊಳ್ಳುವ ವಿಸ್ಮತಿಗೆ ನಾವೆಲ್ಲಾ ದೂಡಲ್ಪಟ್ಟಿದ್ದೇವೆ. ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಂಡು ನಡೆದಾಡುವ ರೋಗದ ಮುದ್ದೆಯಾಗಿದ್ದೀವಿ.. ನಾವು ಸೇವಿಸುತ್ತಿರುವ ಹಣ್ಣು, ತರಕಾರಿ, ಸೊಪ್ಪು, ಬೇಳೆಕಾಳು, ಅಕ್ಕಿ, ಗೋಧಿ ಇವೆಲ್ಲವೂ ಹೈಬ್ರಿಡ್ ತಳಿಗಳಾಗಿದ್ದು, ತಮ್ಮ ಮೂಲ ಸ್ವರೂಪವನ್ನು ಮತ್ತು ಗುಣವನ್ನು ಕಳೆದುಕೊಂಡು, ಹಸಿವು ಇಂಗಿಸುವ ಆಹಾರ ಪದಾರ್ಥಗಳಾಗಿ ಮಾತ್ರ ಉಳಿದಿವೆ.
 ಭಾರತದ ಗ್ರಾಮೀಣ ಹಾಗೂ ಗುಡ್ಡ ಗಾಡು ಪ್ರದೇಶಗಳಲ್ಲಿ ವಿಶೇಷ ವಾಗಿ ಆದಿವಾಸಿಗಳು ಬೆಳೆಯುತ್ತಿರುವ ಸಿರಿಧಾನ್ಯ ಮತ್ತು ತರಕಾರಿಗಳು, ಅರಣ್ಯದಲ್ಲಿ ಸಿಗುವ ಹಣ್ಣುಗಳು ಹಾಗೂ ಶತ ಶತಮಾನಗಳ ಕಾಲದಿಂದಲೂ ಅವರು ಕಾಪಾಡಿಕೊಂಡು ಬಂದಿರುವ ರಾಗಿ, ಜೋಳ, ಭತ್ತ, ಗೋಧಿ ಮುಂತಾದ ದೇಶಿ ಬಿತ್ತನೆ ಬೀಜಗಳು ಅವರ ಪಾಲಿಗೆ ಕೇವಲ ಆಹಾರದ ಕಣಜ ಮಾತ್ರ ಆಗಿರದೆ, ಆರೋಗ್ಯದ ಕಣಜವೂ ಆಗಿದೆ. ಇಂತಹವುಗಳಲ್ಲಿ ಅತ್ಯಧಿಕ ಮಟ್ಟದ ನಾರಿನ ಅಂಶ ಒಳಗೊಂಡಂತೆ ವಿಟಮಿನ್ ಬಿ.ಮತ್ತು ಇ ಅಂಶಗಳಲ್ಲಿರುವ ಐರನ್, ಕ್ಯಾಲ್ಸಿಯಂ, ಮೆಗ್ನೀಶಿಯಂ, ಜಿಂಕ್ ಸತ್ವಾಂಶಗಳು ದೇಶಿ ಆಹಾರ ಪದಾರ್ಥಗಳಲ್ಲಿ ಅಡಕವಾಗಿವೆ. ಇಂತಹುಗಳಲ್ಲಿ ಭಾರತದ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ ಹಾಗೂ ದಕ್ಷಿಣ ಭಾರತದ ತಮಿಳುನಾಡು, ಕೇರಳದಲ್ಲಿ ಬೆಳೆಯುವ ಕಪ್ಪು ಭತ್ತ ಪ್ರಮುಖವಾಗಿದೆ. ಭಾರತದಲ್ಲಿ ಈಶಾನ್ಯ ರಾಜ್ಯವಾದ ಮಣಿಪುರ ಮತ್ತು ಪಶ್ಚಿಮ ಬಂಗಾಳದಲ್ಲಿ ಮೂರು ಬಗೆಯ ತಳಿಗಳು, ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿ ಎರಡು ಮತ್ತು ದಕ್ಷಿಣ ಭಾರತದಲ್ಲಿ ಎರಡು ಬಗೆಯ ತಳಿಗಳಿರುವ ಕಪ್ಪು ಭತ್ತಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ.
ಕಪ್ಪು ಭತ್ತವನ್ನು ಚೀನಾ ದೇಶದಲ್ಲಿ ಬೆಳೆಯುತ್ತಿದ್ದ ಸಂಗತಿ ಚರಿತ್ರೆಯಲ್ಲಿ ದಾಖಲಾಗಿದೆ. ಅಲ್ಲಿನ ದೊರೆಗಳಿಗಾಗಿ ರೈತರು ಈ ಭತ್ತವನ್ನು ಬೆಳೆಯುತ್ತಿದ್ದರು ಎನ್ನಲಾಗಿದೆ. ಆದರೆ ರೈತರು ಕಪ್ಪು ಭತ್ತದ ಅನ್ನವನ್ನು ಸೇವಿಸದಂತೆ ಅಲ್ಲಿನ ದೊರೆಗಳು ತಾಕೀತು ಮಾಡಿದ್ದರು ಎಂಬುದು ಸಹ ದಾಖಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಭಾರತದಲ್ಲಿ ಜನಿಸಿದ ಬುದ್ಧನ ಬೌದ್ಧ ಧರ್ಮವು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಪ್ರಸಾರವಾದ ಕಡೆಯೆಲ್ಲಾ ಕಪ್ಪು ಭತ್ತದ ಬೆಳೆಯು ಅಸ್ತಿತ್ವದಲ್ಲಿ ಇರುವುದು ಕಂಡು ಬಂದಿದೆ. ಜಪಾನ್, ಶ್ರೀಲಂಕಾ, ಇಂಡೋನೇಷಿಯಾ, ಕಾಂಬೋಡಿಯಾ, ವಿಯಟ್ನಾಂ, ಬರ್ಮಾ, ಚೀನಾ ಗಳಲ್ಲಿ ಈ ದೇಶಿ ಬೆಳೆ ಇಂದಿಗೂ ಅಸ್ತಿತ್ವದಲ್ಲಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕವಾಗಿದ್ದು, ಹಲವೆಡೆ ಇದನ್ನು ಬರ್ಮಾ ಭತ್ತ ಎಂದೂ ಸಹ ಕರೆಯಲಾಗುತ್ತಿದೆ. ಭಾರತದ ಈಶಾನ್ಯ ರಾಜ್ಯಗಳಿಂದ ಬೌದ್ಧ ಧರ್ಮದ ಜೊತೆ ಈ ಕಪ್ಪು ಭತ್ತದ ತಳಿಯೂ ಹೋಗಿರಬಹುದೇ? ಈ ಕುರಿತು ಅಧ್ಯಯನ ನಡೆಸಿದರೆ ಒಂದಿಷ್ಟು ಸತ್ಯ ಹೊರಬರಬಹುದು.
ಕರ್ನಾಟಕ ರಾಜ್ಯದಲ್ಲಿಯೂ ಸಹ ರಾಜರುಗಳಿಗಾಗಿ ವಿಶೇಷ ಭತ್ತದ ಬೆಳೆಯನ್ನು ರೈತರು ಬೆಳೆಯುತ್ತಿದ್ದರು. ಮೈಸೂರು ಸಂಸ್ಥಾನದ ದೊರೆಗಳಿಗಾಗಿ ಮಂಡ್ಯ, ಮೈಸೂರು ಸುತ್ತ ಮುತ್ತ ಬೆಳೆಯುವ ‘‘ ರಾಜಮುಡಿ’’ ಎಂಬ ಭತ್ತದಿಂದ ತಯಾರಿಸಿದ ಅಕ್ಕಿ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ವಿಶೇಷವಾಗಿ ಮಾಂಸದ ಅಡುಗೆ ಮಾಡುವಾಗ ರಾಜಮುಡಿ ಭತ್ತದ ತಳಿಯ ಅನ್ನವನ್ನು ದಕ್ಷಿಣ ಕರ್ನಾಟಕದ ಜನತೆ ಇಂದಿಗೂ ಇಷ್ಟಪಡುತ್ತಾರೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಪ್ಪು ಭತ್ತವನ್ನು ರೈತರು ಬೆಳೆಯುತ್ತಿದ್ದು ಸಾಮಾನ್ಯವಾಗಿ ಒಂದು ಹೆಕ್ಟೇರ್ ಭೂಮಿಯಲ್ಲಿ (ಎರಡೂವರೆ ಎಕರೆ, ಅಥವಾ ನೂರು ಗುಂಟೆ) 30 ರಿಂದ 40 ಕ್ವಿಂಟಾಲ್ ಇಳುವರಿಯನ್ನು ಅಲ್ಲಿನ ರೈತರು ಪಡೆಯುತ್ತಿದ್ದಾರೆ. ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳದಲ್ಲಿ ಬೆಳೆಯುವ ಕಪ್ಪು ಭತ್ತದ ತಳಿಯನ್ನು ಕರುಪ್ಪು ಕವುನಿ ಎಂದು ಕರೆಯಲಾಗುತ್ತಿದ್ದು, ಇದು ಮಲೇಷಿಯಾದಿಂದ ಬಂದಿರುವ ತಳಿ ಎಂದು ಹೇಳಲಾಗಿದೆ. ಸಾಮ್ಯಾನ್ಯ ಗಾತ್ರದ ಈ ತಳಿಯ ಅಕ್ಕಿಯ ಕಾಳುಗಳು ಕಪ್ಪು ಮಿಶ್ರಿತ ಕೆಂಪು ಬಣ್ಣದಿಂದ ಕೂಡಿವೆ. ತಮಿಳುನಾಡಿನಲ್ಲಿ ಮತ್ತು ಕೇರಳದಲ್ಲಿ ಕಪ್ಪು ಅಕ್ಕಿಯಿಂದ ಮಾಡುವ ಪಾಯಸ ಮತ್ತು ಸಿಹಿ ಪೊಂಗಲ್ ಮಾದರಿಯಲ್ಲಿ ತಯಾರಿಸುವ ಬೆಲ್ಲದ ಅನ್ನ ಜನಪ್ರಿಯವಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಕಪ್ಪು ಭತ್ತದ ತಳಿಯನ್ನು ಬೆಳೆಯುವ ಪ್ರಯೋಗಗಳು ನಡೆಯುತ್ತಿವೆ. ಈಗಾಗಲೇ ಕರ್ನಾಟಕದಲ್ಲಿ ಕೆಂಪು ಭತ್ತದ ಕೆಂಪಕ್ಕಿ ಜನಪ್ರಿಯವಾಗಿರುವ ಕಡೆ ಇಂತಹ ಪ್ರಯೋಗಗಳು ನಡೆಯುತ್ತಿವೆ.
 ಭಾರತದ ಮಾರುಕಟ್ಟೆಯಲ್ಲಿ ಕಪ್ಪು ಅಕ್ಕಿಗೆ ಮತ್ತು ಕೆಂಪು ಅಕ್ಕಿಗೆ ಅಧಿಕ ಬೇಡಿಕೆಯಿಲ್ಲದ ಕಾರಣ ಕಡಿಮೆ ಪ್ರಮಾಣದಲ್ಲಿ ಇವುಗಳನ್ನು ಬೆಳೆಯಲಾಗುತ್ತದೆ. ಇತರೆ ಭತ್ತದ ಬೆಳೆಗಳ ಅಕ್ಕಿಗೆ ಹೋಲಿಸಿದರೆ, ಅತ್ಯಂತ ಗಟ್ಟಿಯಾಗಿರುವ ಈ ತಳಿಗಳ ಅಕ್ಕಿಕಾಳುಗಳನ್ನು ಕುಕ್ಕರ್‌ನಲ್ಲಿ ಮೂರು ಸಿಳ್ಳೆಯ ಬದಲಾಗಿ ಐದರಿಂದ ಆರು ಕೂಗಿನ ಶಬ್ದ ಬರುವವರೆಗೂ ಬೇಯಿಸಬೇಕು. ಇನ್ನೊಂದು ವಿಶೇಷವೆಂದರೆ, ಇದರ ಅನ್ನವು 24 ರಿಂದ 36 ಗಂಟೆಯವರೆಗೂ ಸಾಮಾನ್ಯ ಉಷ್ಣಾಂಶದಲ್ಲಿ ಕೆಡುವುದಿಲ್ಲ. ಇಂದು ನಾವು ಬಳಸುತ್ತಿರುವ ಬಿ.ಟಿ. ರೈಸ್ ಎಂಬ ಅನ್ನವನ್ನು ಪ್ರಿಜ್‌ನಲ್ಲಿ ಇಟ್ಟುಕೊಂಡು ಕಾಪಾಡಿದರೂ ಎಂಟು ಗಂಟೆಗಳ ಅವಧಿಯ ನಂತರ ಅದನ್ನು ಕಾಪಾಡಿಕೊಳ್ಳುವುದು ಕಷ್ಟ. ಈ ಕಾರಣಕ್ಕಾಗಿ ಗುಡ್ಡ ಗಾಡಿನ ಆದಿವಾಸಿಗಳು, ಮತ್ತು ಗ್ರಾಮ ಭಾರತದ ರೈತ ಸಮುದಾಯಕ್ಕೆ ಇಂತಹ ದೇಸಿ ತಳಿಗಳ ಆಹಾರ ಅಚ್ಚು ಮೆಚ್ಚಿನ ಆಹಾರವಾಗಿದೆ. ಆರೋಗ್ಯದ ದೃಷ್ಟಿಯಿಂದ ನಗರದ ಜನತೆಗೆ ಕಿರು ಧಾನ್ಯಗಳು, ಸಾವಯವ ಕೃಷಿಯಲ್ಲಿ ಬೆಳೆಯುವ ತರಕಾರಿ, ಸೊಪ್ಪು, ಮತ್ತು ಹಣ್ಣು ಹಾಗೂ ದೇಶಿ ತಳಿಗಳ ಭತ್ತ, ರಾಗಿ, ಜೋಳ, ಗೋಧಿ ಇವುಗಳನ್ನು ಪರಿಚಯಿಸುವ ಅಗತ್ಯವಿದೆ. ಆದರೆ ಈಗಾಗಲೇ ಸಾವಯವ ಆಹಾರ ಪದಾರ್ಥಗಳು ಎಂಬ ಹೆಸರಿನಲ್ಲಿ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಬೆಲೆಯನ್ನು ನಿಗದಿ ಪಡಿಸಿ, ಗ್ರಾಹಕರನ್ನು ಶೋಷಿಸುತ್ತಿರುವ ಕೆಲವು ಸಂಘ ಸಂಸ್ಥೆಗಳು ಹಲವು ನಗರಗಳಲ್ಲಿ ತಲೆಯೆತ್ತಿವೆ. ಇದಕ್ಕೆ ಪರ್ಯಾಯವಾಗಿ ಅಂದರೆ, ನೇರವಾಗಿ ಗ್ರಾಹಕ ಮತ್ತು ಉತ್ಪಾದಕನ (ರೈತರ) ನಡುವೆ ನೇರ ಸಂಪರ್ಕ ಏರ್ಪಡಿಸುವ ವ್ಯವಸ್ಥೆ ಜಾರಿಗೆ ಬಂದರೆ ಇಬ್ಬರಿಗೂ ಅನುಕೂಲವಾಗುತ್ತದೆ.
(ಮಾಹಿತಿ ಸೌಜನ್ಯ& “Paddy” ಭತ್ತದ ತಳಿಗಳ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಮೀಸಲಾಗಿರುವ ಇಂಗ್ಲಿಷ್ ತ್ರೈಮಾಸಿಕ ಪತ್ರಿಕೆ. ತಿರುವನಂತಪುರ, ಕೇರಳ)

Writer - ಜಗದೀಶ್ ಕೊಪ್ಪ

contributor

Editor - ಜಗದೀಶ್ ಕೊಪ್ಪ

contributor

Similar News