ಅಸಲಿ ಕೃಷಿ ಪಂಡಿತ ಅರಸು- ಡಾ.ದ್ವಾರಕಿನಾಥ್ ಕೆ.

Update: 2016-11-15 18:37 GMT

ಕೋಲಾರ ಜಿಲ್ಲೆಯ ಗಂಜೂರು ಎಂಬ ಕುಗ್ರಾಮದ ಕಡು ಕಷ್ಟದ ಕುಟುಂಬದಿಂದ ಬಂದ ಡಾ.ದ್ವಾರಕಿನಾಥ್, ಪ್ರತಿಷ್ಠಿತ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO)ಯ ನಿರ್ದೇಶಕರಾಗಿ ನಿವೃತ್ತರಾದವರು. ಕಷ್ಟದಲ್ಲಿ ಬೆಳೆದು ಶಿಕ್ಷಣ ಪಡೆದ ದ್ವಾರಕಿನಾಥ್‌ರು, ಅಕ್ಕನ ಗಂಡ ಭಾವನ ಕರೆಗೆ ಓಗೊಟ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಹೋದವರು, ಎಸೆಸ್ಸೆಲ್ಸಿ ಓದುವಾಗಲೇ ‘ಇಂಗ್ಲಿಷ್ ಶಿಕ್ಷಣ ವ್ಯವಸ್ಥೆ ಬೇಡ’ ಎಂದು ಬ್ರಿಟಿಷರ ವಿರುದ್ಧ ಪ್ರತಿಭಟಿಸಿ ಜೈಲು ಸೇರಿದವರು. ಒಂದು ತಿಂಗಳ ಜೈಲುವಾಸದ ನಂತರ, ಊರಿಗೆ ಬಂದವರನ್ನು, ‘ನೀನು ಓದಲೇಬೇಕು’ ಎಂಬ ಅಮ್ಮನ ಒತ್ತಾಸೆಗೆ ಮಣಿದು ಮತ್ತೆ ಮೈಸೂರಿಗೆ ಹೋಗಿ ಇಂಟರ್ ಮೀಡಿಯಟ್ ಮುಗಿಸಿ, ನಂತರ ಬೆಂಗಳೂರಿನ ಕೃಷಿ ಕಾಲೇಜಿನಲ್ಲಿ ಬಿಎಸ್ಸಿ ಅಗ್ರಿಕಲ್ಚರ್ ಪದವಿ ಪಡೆದರು. ಪದವಿಯನ್ನು ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಮಾಡಿದ ದ್ವಾರಕಿನಾಥರಿಗೆ, ಕೆಲಸ ಮತ್ತು ಮದುವೆ ಒಟ್ಟೊಟ್ಟಿಗೆ ಹುಡುಕಿಕೊಂಡು ಬಂದವು. ಮೊದಲಿಗೆ ಸಾಯಿಲ್ ಸರ್ವೇ ಕೆಲಸ, ಲಕ್ಕುವಳ್ಳಿ ಪ್ರಾಜೆಕ್ಟ್‌ನಲ್ಲಿ. ನಂತರ ಮಳವಳ್ಳಿಯ ಪ್ರಾಜೆಕ್ಟ್‌ಗೆ ವರ್ಗ. ಅಲ್ಲಿಂದ ಮಂಡ್ಯದ ಟ್ರೈನಿಂಗ್ ಸೆಂಟರ್‌ಗೆ ಪ್ರಿನ್ಸಿಪಾಲ್ ಆಗಿ ಭಡ್ತಿ. ಅದೇ ಸಮಯದಲ್ಲಿ ಪ್ರತಿಷ್ಠಿತ ಟೆನೆಸ್ಸಿ ಯೂನಿವರ್ಸಿಟಿಯಲ್ಲಿ ಎಂಎಸ್ ಮಾಡಲು ಸ್ಕಾಲರ್‌ಶಿಪ್ ದೊರೆತು, ಎರಡು ವರ್ಷದ ಕೋರ್ಸನ್ನು ಒಂದೇ ವರ್ಷಕ್ಕೆ ಮುಗಿಸಿದರು. ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಬಂದು ಕೃಷಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ಅಲಂಕರಿಸಿದರು. ಆನಂತರ ಹೈದರಾಬಾದ್‌ನ ರೀಜಿನಲ್ ಟ್ರೈನಿಂಗ್ ಸೆಂಟರ್‌ಗೆ ಪ್ರಿನ್ಸಿಪಾಲ್ ಆಗಿ ನೇಮಕವಾದರು. 1964ರಲ್ಲಿ ಬೆಂಗಳೂರಿನ ಅಗ್ರಿಕಲ್ಚರಲ್ ಸೈನ್ಸ್ ಯೂನಿವರ್ಸಿಟಿ ಪ್ರಾರಂಭವಾಯಿತು. ಅಲ್ಲಿ ಡೈರೆಕ್ಟರ್ ಆಫ್ ಎಕ್ಸ್‌ಟೆನ್‌ಷನ್ ಆಗಿ ನೇಮಕಗೊಂಡ ದ್ವಾರಕಿನಾಥರಿಗೆ, ಆ ಹುದ್ದೆಯಲ್ಲಿರುವಾಗಲೇ ಆಕ್ಸ್ ಫರ್ಡ್‌ನಲ್ಲಿ ಫೋರ್ಡ್ ಫೌಂಡೇಷನ್ ಸ್ಕಾಲರ್‌ಶಿಪ್ ಮೇಲೆ ಪಿಎಚ್.ಡಿ. ಮಾಡುವ ಅವಕಾಶ ಒದಗಿ ಬಂತು. ಪಿಎಚ್.ಡಿ. ಮುಗಿಸಿ ಬಂದ ನಂತರ, 1973ರಲ್ಲಿ ಡೈರೆಕ್ಟರ್ ಆಫ್ ಅಗ್ರಿಕಲ್ಚರಲ್ ಹುದ್ದೆ ಅಲಂಕರಿಸಿದರು. ಈ ಹುದ್ದೆಯಲ್ಲಿ ಆರು ವರ್ಷ ಸೇವೆ ಸಲ್ಲಿಸಿ, ನಂತರ ಪ್ರತಿಷ್ಠಿತ ಕೃಷಿ ವಿವಿಗೆ ಕುಲಪತಿಗಳಾಗಿ ಮಣ್ಣು-ನೀರು-ಕೃಷಿಯೊಂದಿಗಿನ ತಮ್ಮ ಅಪಾರ ಅನುಭವವನ್ನು, ಜ್ಞಾನವನ್ನು ನಾಡಿನ ಕೃಷಿ ಕ್ಷೇತ್ರಕ್ಕಾಗಿ ವಿನಿಯೋಗಿಸಿ ನಿವೃತ್ತರಾದರು. ಆ ನಂತರ ಇಂಡೋನೇಷ್ಯಾದ ವಿಶೇಷ ಆಹ್ವಾನ ಮನ್ನಿಸಿ, ಅಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ನಿರ್ದೇಶಕರಾಗಿ 6 ವರ್ಷ ಸೇವೆ ಸಲ್ಲಿಸಿ, ಭಾರತಕ್ಕೆ ಮರಳಿದರು. ಸೇವೆಯುದ್ದಕ್ಕೂ ದಕ್ಷತೆ, ಪ್ರಾಮಾಣಿಕತೆ ಮೆರೆದ ದ್ವಾರಕಿನಾಥ್, ಕೃಷಿ ಬಗ್ಗೆ ಅಗಾಧ ಜ್ಞಾನವುಳ್ಳವರು. ಕೃಷಿ ಕ್ಷೇತ್ರಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು. ಇಂತಹ ಸೇವಾನಿಷ್ಠ ದ್ವಾರಕಿನಾಥರು ದೇವರಾಜ ಅರಸರ ಸಂಪರ್ಕಕ್ಕೆ ಬಂದಿದ್ದು ಯಾವಾಗ, ಇವರ ಕಣ್ಣಿಗೆ ಕಂಡ ಅರಸು ಎಂತವರು, ಅವರ ಆಡಳಿತ ಹೇಗಿತ್ತು, ಕೃಷಿಗಾಗಿ ಅವರು ಮಾಡಿದ್ದೇನು..ಈ ಎಲ್ಲ ಪ್ರಶ್ನೆಗಳಿಗೆ ಕೊಟ್ಟ ಉತ್ತರ ಇಲ್ಲಿದೆ...

1942ರಲ್ಲಿ ನಾನು ಮೈಸೂರಿನಲ್ಲಿ ಓದುತ್ತಿದ್ದೆ. ಆಗ ಇಂಗ್ಲಿಷ್ ಶಿಕ್ಷಣ ವ್ಯವಸ್ಥೆ ವಿರೋಧಿಸಿ, ವಿದ್ಯಾರ್ಥಿಗಳನ್ನು ಸಂಘಟಿಸಿ ಬ್ರಿಟಿಷ್ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದೆ. ಆ ಸಂದರ್ಭದಲ್ಲಿ ಜಗನ್ಮೋಹನ ಪ್ಯಾಲೆಸ್ ಕಡೆಯಿಂದ ಮತ್ತೊಂದು ವಿದ್ಯಾರ್ಥಿ ಗುಂಪಿನ ರ್ಯಾಲಿ ಬರುತ್ತಿತ್ತು. ಅದರ ನೇತೃತ್ವ ವಹಿಸಿದ್ದವರು ದೇವರಾಜ ಅರಸು. ಆಗ ಅರಸು ಯಾರು, ಏನು, ಎಂತವರು... ಏನೊಂದೂ ಗೊತ್ತಿಲ್ಲ. ತಿಳಿಯುವ ಆಸಕ್ತಿಯೂ ಇರಲಿಲ್ಲ. ಆದರೆ ರ್ಯಾಲಿಯ ನೇತೃತ್ವ ವಹಿಸಿದ್ದ ವ್ಯಕ್ತಿ ಮಾತ್ರ ಮತ್ತೆ ಮತ್ತೆ ನೋಡುವಂತಹ ವರ್ಚಸ್ಸುಳ್ಳವನಾಗಿದ್ದ. ಆಜಾನುಬಾಹು. ಅಲ್ಲಿಯೇ ಅವರನ್ನು ನಾನು ಮೊದಲು ನೋಡಿದ್ದು. ಅದಾದ ನಂತರ ನನ್ನ ವಿದ್ಯಾಭ್ಯಾಸ, ಸರಕಾರಿ ನೌಕರಿ-ಸೇವೆಯಲ್ಲಿ ಮುಳುಗಿಹೋದೆ. 1973ರಲ್ಲಿ ನಾನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಡೈರೆಕ್ಟರ್ ಆಫ್ ಅಗ್ರಿಕಲ್ಚರ್ ಆಗಿ ನೇಮಕ ಗೊಂಡಾಗ, ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ದೇವರಾಜ ಅರಸು. ಸರಿಸುಮಾರು ಮೂವತ್ತು ವರ್ಷಗಳ ನಂತರ ಅವರ ಹೆಸರು ಮತ್ತೆ ಕಿವಿ ಮೇಲೆ ಬಿದ್ದಿತ್ತು. ಅವರನ್ನೇ ಖುದ್ದು ಭೇಟಿ ಮಾಡುವ, ಅವರೊಂದಿಗೆ ಕೂತು ಚರ್ಚಿಸುವ, ಆಡಳಿತಾತ್ಮಕ ವಿಚಾರ ವಿನಿಮಯ ಮಾಡಿಕೊಳ್ಳುವ ಸುಸಂದರ್ಭ ತಾನಾಗಿಯೇ ಒದಗಿ ಬಂದಿತ್ತು. ದೇವರಾಜ ಅರಸು ಬಂದದ್ದು ಅರಸು ಮನೆತನದಿಂದಲಾದರೂ, ಆ ರಾಜಮನೆತನದ ಅಹಂ ಎಳ್ಳಷ್ಟೂ ಇರಲಿಲ್ಲ. ರಾಜನಾಗಿ ಮೆರೆಯುವುದಕ್ಕಿಂತ ಒಬ್ಬ ಕೃಷಿಕನಾಗಿ ಕಾಣಿಸಿಕೊಳ್ಳಬೇಕೆಂಬ ಸರಳ ಸಜ್ಜನ. ಆ ವಿನಯ, ಧೀಮಂತಿಕೆ, ಬುದ್ಧಿವಂತಿಕೆ ಅವರ ಪ್ರತಿ ನಡೆ-ನುಡಿಯಲ್ಲೂ ಗೋಚರಿಸುತ್ತಿತ್ತು. ದೇವರಾಜ ಅರಸರು ವಿದ್ಯಾಭ್ಯಾಸ ಮುಗಿಸಿದ ನಂತರ ಸರಕಾರಿ ಕೆಲಸಕ್ಕೆ ಹೋಗದೆ, ಹಳ್ಳಿಗೆ ಮರಳಿ, ಸ್ವತಃ ಹೊಲದಲ್ಲಿ ನೇಗಿಲಿಡಿದು ಉತ್ತವರು. ಕೆಸರಗದ್ದೆಯಲ್ಲಿ ಕಾಲಿಟ್ಟು ಕೃಷಿಯ ಕಷ್ಟ ಉಂಡವರು. ಯಾವ ಮಳೆ, ಎಂತಹ ಬೆಳೆ, ಮಣ್ಣು, ನೀರು, ಮುಂಗಾರು-ಹಿಂಗಾರು, ಕೆರೆ-ಕುಂಟೆ-ಕಾಲುವೆ, ಅಂತರ್ಜಲ, ವಾಣಿಜ್ಯ ಬೆಳೆಗಳು, ವಿದೇಶಿ ಮಾರುಕಟ್ಟೆ, ಸಾಂಪ್ರದಾಯಿಕ ಬೇಸಾಯ ಪದ್ಧತಿಯ ಏಳು-ಬೀಳುಗಳು... ಇಂಥದ್ದು ಗೊತ್ತಿಲ್ಲ ಎನ್ನುವಂತಿರಲಿಲ್ಲ. ಕೃಷಿ ಬಗ್ಗೆ ಅರೆದು ಕುಡಿದಿದ್ದರು. ಕೃಷಿ ಪಂಡಿತರು ಅವರು- ನಾವಲ್ಲ. ನಾನು 1973ರಿಂದ 1979ರವರೆಗೆ, ಆರು ವರ್ಷಗಳ ಕಾಲ ಡೈರೆಕ್ಟರ್ ಆಫ್ ಅಗ್ರಿಕಲ್ಚರಲ್ ಹುದ್ದೆಯಲ್ಲಿದ್ದೆ. ಆಗ ಅರಸರೇ ಮುಖ್ಯಮಂತ್ರಿಗಳು. ಅವರು ನನ್ನಂತಹ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ ರೀತಿಗೆ, ಅವರ ಆಡಳಿತ ವೈಖರಿಗೆ ಮೆಚ್ಚಿ ಮಾರುಹೋಗಿದ್ದೆ. ನೀರಾವರಿ ಮತ್ತು ಕೃಷಿ ಇಲಾಖೆಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಆಗಾಗ ಮೀಟಿಂಗ್‌ಗಳು ಜರಗುತ್ತಿದ್ದವು. ಆ ಮೀಟಿಂಗ್‌ಗಳಲ್ಲಿ ಮುಖ್ಯಮಂತ್ರಿಗಳು, ಕೃಷಿ-ನೀರಾವರಿ ಮಂತ್ರಿಗಳು, ಮುಖ್ಯ ಇಂಜಿನಿಯರ್‌ಗಳ ಜೊತೆಗೆ ನಾನೂ ಒಬ್ಬ ಸದಸ್ಯನಾಗಿ ಆ ಮೀಟಿಂಗ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಆ ಸಂದರ್ಭದಲ್ಲಿ ದೇಶದಲ್ಲಿ ಆಹಾರದ ಕೊರತೆ ಹೆಚ್ಚಾಗಿತ್ತು. ಕೃಷಿ ಉತ್ಪನ್ನದಲ್ಲಿ ಕರ್ನಾಟಕ ರಾಜ್ಯ 17ನೇ ಸ್ಥಾನದಲ್ಲಿತ್ತು. ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿಯಲ್ಲಿ ಅಭಿವೃದ್ಧಿ ಕಾಣುವುದು ಹೇಗೆ, ಹೆಚ್ಚಿನ ಇಳುವರಿ ತರುವ ಬೆಳೆಗಳಾವುವು, ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳೇನು... ಈ ಮುಖ್ಯ ಪ್ರಶ್ನೆಗಳತ್ತಲೇ ಹೆಚ್ಚಿನ ಚರ್ಚೆ ನಡೆಯುತ್ತಿತ್ತು. ದೇವರಾಜ ಅರಸು ನಮ್ಮ ಮಾಹಿತಿಯನ್ನು, ಸೂಚನೆಗಳನ್ನು ಸಹನೆಯಿಂದ ಕೇಳುತ್ತಿದ್ದರು. ನಮ್ಮನ್ನು ನಂಬುತ್ತಿದ್ದರು. ಅವರ ನಂಬಿಕೆಗೆ ನಾವೆಂದೂ ಮೋಸ ಮಾಡಿದವರಲ್ಲ. ನಾನು ಈ ಹಿಂದೆ ಲಕ್ಕುವಳ್ಳಿ, ಮಳವಳ್ಳಿಗಳಲ್ಲಿ ಮಣ್ಣಿನ ಸಾರ ಸತ್ವ ಪರೀಕ್ಷಿಸುವ ಸರ್ವೇಯರ್ ಕೆಲಸದಲ್ಲಿದ್ದು, ಯಾವ ಮಣ್ಣು ಯಾವ ಬೆಳೆಗೆ ಯೋಗ್ಯ ಎನ್ನುವುದನ್ನು ನಮ್ಮ ರೈತರಿಗೆ ಮನದಟ್ಟು ಮಾಡಿಸಿಕೊಡುತ್ತಿದ್ದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೃಷಿ ಬಗ್ಗೆ, ಬೆಳೆಗಳ ಬಗ್ಗೆ ಅಥೆಂಟಿಕ್ ಆದ ಅಂಕಿ-ಅಂಶಗಳನ್ನು, ಮಾಹಿತಿಯನ್ನು ಸಂಗ್ರಹಿಸಿದ್ದೆ. ಅಂಥದ್ದೇ ಒಂದು ಸಭೆ. ಆ ಸಭೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು, ಸಂಸದ ಪಾಟೀಲ್ ಮತ್ತು ಇಲಾಖಾವಾರು ಇಂಜಿನಿಯರ್‌ಗಳಿದ್ದರು. ನಾನು ಕಲೆಹಾಕಿದ್ದ ಅಂಕಿ-ಅಂಶಗಳನ್ನು ಸಭೆಯ ಮುಂದಿಟ್ಟು, ನಮ್ಮ ರಾಜ್ಯ ಈಗ ಕೃಷಿಯಲ್ಲಿ ಪ್ರಗತಿಯ ಹಾದಿಯಲ್ಲಿದೆ, ದೇಶದಲ್ಲಿ 17ನೆ ಸ್ಥಾನದಲ್ಲಿದ್ದ ರಾಜ್ಯ ಈಗ 13ನೆ ಸ್ಥಾನಕ್ಕೆ ಬಂದಿದೆ. ಬತ್ತ, ರಾಗಿ, ಜೋಳ, ಸಜ್ಜೆಯ ಇಳುವರಿಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನೀರಾವರಿ ಕಡಿಮೆ ಇದ್ದರೂ ಇಳುವರಿ ಹೆಚ್ಚಾಗಿರುವುದು ಕೃಷಿ ಕ್ಷೇತ್ರದ ಬಗೆಗಿನ ಆಶಾದಾಯಕ ಬೆಳವಣಿಗೆಯಾಗಿದೆ ಎಂದೆ. ಮುಖ್ಯಮಂತ್ರಿ ದೇವರಾಜ ಅರಸು, ನನ್ನ ಅಂಕಿ-ಅಂಶಗಳು ಮತ್ತು ಮಾಹಿತಿ ಮೆಚ್ಚಿ ಮಾತನಾಡಿದರು. ಕೃಷಿ ಕ್ಷೇತ್ರದಲ್ಲಿ ಪ್ರಗತಿಯಾದರೆ ಎಲ್ಲಾ ಕ್ಷೇತ್ರಗಳಲ್ಲೂ ಅದರ ಪ್ರತಿಫಲನ ಕಾಣುತ್ತದೆ, ಅದಕ್ಕಿಂತ ನಮ್ಮ ರೈತರು ಉದ್ಧಾರವಾಗುತ್ತಾರೆ, ಆ ದಿಕ್ಕಿನಲ್ಲಿ ನೀವೆಲ್ಲ ಕಾರ್ಯೋನ್ಮುಖರಾಗಬೇಕು ಎಂದು ಅಧಿಕಾರಿಗಳನ್ನು ಹುರಿದುಂಬಿಸಿದರು. ಅರಸರ ಮಾತಿನಿಂದ ಉತ್ತೇಜಿತರಾದ ಸಂಸದ ಪಾಟೀಲ್, ನನ್ನ ಅಂಕಿ-ಅಂಶಗಳ ಪಟ್ಟಿ ಪಡೆದು, ಅದನ್ನೇ ಲೋಕಸಭೆಯಲ್ಲಿ ಹಂಚಿಕೊಂಡರು. ದುರದೃಷ್ಟಕರ ಸಂಗತಿ ಎಂದರೆ, ಆಗ ದೇಶದಲ್ಲಿ ಆಹಾರದ ಕೊರತೆ ಇತ್ತು. ಕೇಂದ್ರದಿಂದ ಸಬ್ಸಿಡಿ ದರದಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನು ರಾಜ್ಯಕ್ಕೆ ರವಾನಿಸಲಾಗುತ್ತಿತ್ತು. ಯಾವಾಗ ಪಾಟೀಲರು ಸಂಸತ್ತಿನಲ್ಲಿ ರಾಜ್ಯ ಕೃಷಿಯಲ್ಲಿ ಪ್ರಗತಿ ಕಾಣುತ್ತಿದೆ ಎಂದರೋ, ಕೇಂದ್ರ ಆಹಾರ ಸರಬರಾಜು ಸಚಿವರು, ‘‘ಹಾಗಾದರೆ ನಿಮ್ಮ ರಾಜ್ಯಕ್ಕೆ ಸಬ್ಸಿಡಿಯಲ್ಲಿ ಆಹಾರ ಧಾನ್ಯಗಳನ್ನು ಸರಬರಾಜು ಮಾಡುವುದನ್ನು ನಿಲ್ಲಿಸುವುದು ಸೂಕ್ತ ಎನಿಸುತ್ತದೆ’’ ಎಂದುಬಿಟ್ಟರು. ಇದು ರಾಜ್ಯ ಸರಕಾರವನ್ನು ಸಂಕಷ್ಟಕ್ಕೀಡುಮಾಡಿತು. ಆಗ ಕೃಷಿ ಸಚಿವರಾಗಿದ್ದ ಹೊಸಕೋಟೆಯ ಚಿಕ್ಕೇಗೌಡರು, ಅರಸರೊಂದಿಗೆ ಮಾತನಾಡಲು ಹೋದರೆ, ‘‘ದ್ವಾರಕಿನಾಥರು ಹೇಳಿದ್ದರಲ್ಲಿ ತಪ್ಪೇನಿದೆ, ಕೃಷಿಯಲ್ಲಿ ಪ್ರಗತಿ ಕಾಣುವುದು, ರೈತರ ಅಭಿವೃದ್ಧಿಯಾಗುವುದು ರಾಜ್ಯ ಸ್ವಾವಲಂಬಿಯಾದಂತಲ್ಲವೇ, ಅಕಸ್ಮಾತ್ ಈ ಕಾರಣಕ್ಕಾಗಿಯೇ ಕೇಂದ್ರ ಸರಕಾರ ಪಡಿತರ ಧಾನ್ಯ ನಿಲ್ಲಿಸಿದರೆ, ನಿಲ್ಲಿಸಲಿ. ಇವತ್ತಲ್ಲ ನಾಳೆ ನಿಲ್ಲಿಸಲೇಬೇಕಲ್ಲ, ಸ್ವಾವಲಂಬಿಗಳಾಗುವುದರಲ್ಲ ಗಮನ ಹರಿಸೋಣ’’ ಎಂದರಂತೆ. ಎಂಥ ದೊಡ್ಡ ಮಾತು...

 ಇಷ್ಟನ್ನು ಕಾಡುತ್ತಿದ್ದ ಅಸ್ತಮಾದ ನಡುವೆಯೂ ಕಷ್ಟಪಟ್ಟು ಜ್ಞಾಪಿಸಿಕೊಂಡು ಹೇಳಿದ ಡಾ.ದ್ವಾರಕಿನಾಥರು, ‘ನನಗೀಗ 91 ವರ್ಷನಪ್ಪ, ಏನೋ ನೆನಪಾದದ್ದನ್ನು ಹೇಳಿದ್ದೇನೆ, ಸೂಕ್ತವೆನಿಸಿದರೆ ಬಳಸಿಕೊಳ್ಳಿ’ ಎಂದದ್ದು ಆ ತಲೆಮಾರಿನವರ ಸರಳತೆಯನ್ನು, ಸಭ್ಯತೆಯನ್ನು ಸಾರುತ್ತಿತ್ತು.

ಮುಖ್ಯಮಂತ್ರಿ ದೇವರಾಜ ಅರಸು, ನನ್ನ ಅಂಕಿ-ಅಂಶಗಳು ಮತ್ತು ಮಾಹಿತಿ ಮೆಚ್ಚಿ ಮಾತನಾಡಿದರು. ಕೃಷಿ ಕ್ಷೇತ್ರದಲ್ಲಿ ಪ್ರಗತಿಯಾದರೆ ಎಲ್ಲಾ ಕ್ಷೇತ್ರಗಳಲ್ಲೂ ಅದರ ಪ್ರತಿಫಲನ ಕಾಣುತ್ತದೆ, ಅದಕ್ಕಿಂತ ನಮ್ಮ ರೈತರು ಉದ್ಧಾರವಾಗುತ್ತಾರೆ, ಆ ದಿಕ್ಕಿನಲ್ಲಿ ನೀವೆಲ್ಲ ಕಾರ್ಯೋನ್ಮುಖರಾಗಬೇಕು ಎಂದು ಅಧಿಕಾರಿಗಳನ್ನು ಹುರಿದುಂಬಿಸಿದರು. ಅರಸರ ಮಾತಿನಿಂದ ಉತ್ತೇಜಿತರಾದ ಸಂಸದ ಪಾಟೀಲ್, ನನ್ನ ಅಂಕಿ-ಅಂಶಗಳ ಪಟ್ಟಿ ಪಡೆದು, ಅದನ್ನೆೀ ಲೋಕಸಭೆಯಲ್ಲಿ ಹಂಚಿಕೊಂಡರು.

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News