ಆಪಲ್‌ನ ಹೊಸ ಉತ್ಪನ್ನ ಬಂದಿದೆ : ಇದು ಫೋನ್, ಲ್ಯಾಪ್‌ಟಾಪ್ ಡೆಸ್ಕ್‌ಟಾಪ್, ಟ್ಯಾಬ್ ಯಾವುದೂ ಅಲ್ಲ!
ಆಪಲ್ ಸಂಸ್ಥೆಯ ಹೊಸ ಉತ್ಪನ್ನ ಹೊಸ ಐಫೋನ್ ಅಥವಾ ಲ್ಯಾಪ್‌ಟಾಪ್ ಅಲ್ಲ. ಅದು ಒಂದು ಕಂಪ್ಯೂಟರ್ ಕೂಡ ಅಲ್ಲ. ಇದು ಡಿಸೈನ್ಡ್ ಬೈ ಆಪಲ್ ಇನ್ ಕ್ಯಾಲಿಫೋರ್ನಿಯಎನ್ನುವ ಪುಸ್ತಕ. ಆಕರ್ಷಕ ಚಿತ್ರವನ್ನು ಹೊಂದಿರುವ ಪುಸ್ತಕದಲ್ಲಿ ಆಪಲ್‌ನ ಕೆಲವು ಅತ್ಯುತ್ತಮ ವಿನ್ಯಾಸಗಳನ್ನು ಚರ್ಚಿಸಲಾಗಿದೆ. ಮೂಲ ಐಫೋನ್ ಅಥವಾ ಮೊದಲ ಆಪಲ್ ವಾಚ್‌ನಂತಹ ವಿವರಗಳು ಇದರಲ್ಲಿವೆ.
“ಮಾನವತೆಗೆ ಕೊಡುಗೆ ನೀಡಬಹುದಾದ ಒಂದು ಶ್ರೇಷ್ಠವಾದುದನ್ನು ತಯಾರಿಸುವ ಕಲ್ಪನೆಯೇ ಸ್ಟೀವ್ ಜಾಬ್ಸ್ ಅವರ ಪ್ರೇರಣೆಯಾಗಿತ್ತು. ಆಪಲ್ ಈಗ ಭವಿಷ್ಯದ ಕಡೆಗೆ ದೃಷ್ಟಿ ಹರಿಸುವಾಗ ಅದೇ ನಮ್ಮ ಆದರ್ಶ ಮತ್ತು ಗುರಿ ಎರಡೂ ಆಗಿದೆ” ಎಂದು ಆಪಲ್‌ನ ಮುಖ್ಯ ವಿನ್ಯಾಸ ಅಧಿಕಾರಿ ಜಾನಿ ಐವ್ ಹೇಳಿದ್ದಾರೆ. “ಈ ಸಂಗ್ರಹವು ತಂಡವು ವರ್ಷಗಳಿಂದ ವಿನ್ಯಾಸಗೊಳಿಸಿದ ವಿವಿಧ ಉತ್ಪನ್ನಗಳನ್ನು ಒಂದೆಡೆ ಇಡುವ ಪ್ರಯತ್ನ ಮಾಡಿದೆ. ಈ ಉತ್ಪನ್ನಗಳು ಹೇಗೆ ಮತ್ತು ಏಕೆ ಇವೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಇದು ನೆರವಾಗಲಿದೆ. ಅಲ್ಲದೆ ಎಲ್ಲಾ ವಿನ್ಯಾಸ ಕ್ಷೇತ್ರದ ವಿದ್ಯಾರ್ಥಿಗಳಿಗೆ ಇದು ಸಂಪನ್ಮೂಲವಾಗಲಿದೆ” ಎಂದು ಆಶಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಪುಸ್ತಕದ ಮುನ್ನುಡಿಯನ್ನೂ ಐವ್ ಬರೆದಿದ್ದಾರೆ. “ಇದೊಂದು ವಿನ್ಯಾಸ ಪುಸ್ತಕವಾಗಿದ್ದರೂ, ವಿನ್ಯಾಸ ತಂಡದ ಬಗ್ಗೆ, ಸೃಜನಶೀಲ ಪ್ರಕ್ರಿಯೆ ಅಥವಾ ಉತ್ಪನ್ನದ ಅಭಿವೃದ್ಧಿಯ ಬಗ್ಗೆಯಿಲ್ಲ. ನಮ್ಮ ಕೆಲಸವನ್ನು ಮುಂದಿಡುವ ಮತ್ತು ನಾವು ಏನು ಎನ್ನುವುದನ್ನು ವಿವರಿಸುವ ಉದ್ದೇಶವಿದು. ನಾವು ಹೇಗೆ ಕೆಲಸ ಮಾಡುತ್ತೇವೆ, ನಮ್ಮ ಮೌಲ್ಯಗಳು, ನಮ್ಮ ಮುಂದಾಲೋಚನೆಗಳು ಮತ್ತು ನಮ್ಮ ಗುರಿಗಳನ್ನು ಇದು ವಿವರಿಸುತ್ತದೆ. ನಾವು ಏನು ಹೇಳುತ್ತೇವೆ ಎನ್ನುವುದಕ್ಕಿಂತ ನಾವು ಏನು ಮಾಡುತ್ತೇವೆ ಎನ್ನುವುದೇ ನಮ್ಮನ್ನು ವ್ಯಾಖ್ಯಾನಿಸಬೇಕು ಎನ್ನುವುದು ನಮ್ಮ ಆಶಯವಾಗಿದೆ. ಸರಳವಾಗಿದೆ ಎಂದೆನಿಸುವ ವಸ್ತುಗಳನ್ನು ವ್ಯಾಖ್ಯಾನಿಸಲು ನಾವು ವಿಭಿನ್ನ ಯಶಸ್ಸಿನ ಹಂತಗಳಲ್ಲಿ ಪ್ರಯತ್ನಿಸುತ್ತೇವೆ. ನಾವು ಸರಳ, ಸೂಕ್ತ ಮತ್ತು ಅನಿವಾರ್ಯ ಎನಿಸುವ ವಸ್ತುಗಳನ್ನು ಪರ್ಯಾಯ ಸಿದ್ಧಾಂತವೇ ಇಲ್ಲದಂತೆ ರೂಪಿಸುತ್ತೇವೆ” ಎಂದು ಅವರು ಬರೆದಿದ್ದಾರೆ.
ಇದು ಒಂದು ಸುಂದರ ಪುಸ್ತಕವಾಗಿದೆ. ಇದರ ಪುಟಗಳಲ್ಲಿ ತೆಳುವಾದ ಬೆಳ್ಳಿ ರೇಖೆಯಿದೆ. ಲಿನನ್‌ನಿಂದ ಮುಚ್ಚಲಾಗಿದೆ. ಆಪಲ್ ಇದನ್ನು ಮುದ್ರಿಸಿದೆ. ಎರಡು ಗಾತ್ರಗಳಲ್ಲಿ ಇದು ಬರುತ್ತದೆ. ಸಣ್ಣದು ಎ4 ಪುಟಗಳ ಗಾತ್ರದಲ್ಲಿದ್ದು 199 ಡಾಲರ್ ಮೌಲ್ಯ ಹೊಂದಿದೆ. ದೊಡ್ಡದು 13 ಇಂಚುಗಳಲ್ಲಿ 16.25 ಇಂಚುಗಳಷ್ಟಿದ್ದು, 299 ಡಾಲರ್ ಮೌಲ್ಯದ್ದಾಗಿದೆ.
ಈ ಪುಸ್ತಕವನ್ನು ಎಂಟು ವರ್ಷಗಳ ಅವಧಿಯಲ್ಲಿ ಸಿದ್ಧಪಡಿಸಲಾಗಿದೆ ಮತ್ತು ಮಾಜಿ ಸಿಇಒ ಸ್ಟೀವ್ ಜಾಬ್ಸ್‌ರಿಗೆ ಅರ್ಪಿಸಲಾಗಿದೆ ಎಂದು ಆಪಲ್ ಹೇಳಿದೆ. ಬುಧವಾರ ಆಪಲ್ ಸ್ಟೋರ್‌ನಲ್ಲಿ ಇದು ಮಾರಾಟಕ್ಕಿದೆ. ಆಪಲ್ ವೆಬ್‌ತಾಣದಲ್ಲಿ ಇದು ಎಲ್ಲಿ ಸಿಗುತ್ತದೆ ಎನ್ನುವ ವಿವರವಿದೆ.
ಕೃಪೆ : businessinsider.in