ಹೇಳಿದ್ದನ್ನು ಮಾಡಿಯೂ ತೋರಿಸಬಹುದಿತ್ತಲ್ಲವೇ?

Update: 2016-11-23 18:51 GMT

ಬಿಜೆಪಿಯವರೇ ನೇಮಿಸಿದ್ದ ಈ ಸಮಿತಿಯು ತನ್ನ ವರದಿ ನೀಡಿ 5 ವರ್ಷಗಳಾಗಿವೆ, ಮೋದಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲವಾಗಿದೆ. ಭಾರತೀಯ ಕಪ್ಪುಹಣದ ಖದೀಮರು ವಿದೇಶಗಳಲ್ಲಿ ಇಟ್ಟಿರುವ ಕಪ್ಪುಹಣವನ್ನು ಮರಳಿ ಭಾರತಕ್ಕೆ ತರಲು ಮೋದಿ ಸರಕಾರ ಇದುವರೆಗೂ ಏನು ಕ್ರಮ ತೆಗೆದುಕೊಂಡಿದೆ ಎಂದು ನಾವೀಗ ಕೇಳಬೇಕಲ್ಲವೆ?

ಇಲ್ಲಿ ನಾನು ಬರೆಯುವ ಮಾತುಗಳು ನನ್ನವಲ್ಲ, ಈಗ್ಗೆ 4 ವರ್ಷಗಳ ಹಿಂದೆ ಬಿಜೆಪಿಯ ಸಮಿತಿಯೊಂದು ನೀಡಿರುವ ವರದಿ ಇದು..ಸಮಿತಿಯಲ್ಲಿ ಹಿಂದೂ ದೇಶಭಕ್ತರಾದ ಸ್ವದೇಶಿ ಜಾಗರಣ್ ಮಂಚ್‌ನ ಗುರುಮೂರ್ತಿ, ಈಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಬಾಲ್, ಬೆಂಗಳೂರು ಐಐಎಂನ ವ್ಯೆದ್ಯನಾಥನ್ ಹಾಗೂ ವಕೀಲ ಮಹೇಶ್ ಜೇಠ್ಮಲಾನಿ ಇದ್ದರು. ಮೊದಲು ಇದರಲ್ಲಿ ಏನಿದೆ ಎಂದು ನೋಡೋಣ.

‘‘ಜಗತ್ತಿನ ಬಹುತೇಕ ದೇಶಗಳು ಇಂದು ಕಪ್ಪುಹಣದ ಸಮಸ್ಯೆ ಎದುರಿಸುತ್ತಿದ್ದು ಭಾರತವೂ ಸಹ ಇದರಿಂದ ಬಾಧಿತವಾಗುತ್ತಿದೆ. ಈಗ ಅಧಿಕಾರದಲ್ಲಿರುವ ಯುಪಿಎ- ಅಂದರೆ ಕಾಂಗ್ರೆಸ್ ಸರಕಾರವು ವಿದೇಶಗಳಲ್ಲಿರುವ ಕಪ್ಪುಹಣವನ್ನು ಮರಳಿ ದೇಶಕ್ಕೆ ತರಲು ಯಾವುದೇ ಕ್ರಮ ವಹಿಸುತ್ತಿಲ್ಲ, ಆದರೆ ಬಿಜೆಪಿಯು ಅಧಿಕಾರಕ್ಕೆ ಬಂದರೆ ಈ ಕೆಲಸವನ್ನು ಮಾಡಬಹುದಾಗಿದೆ. ಅದಕ್ಕಾಗಿ ತೆಗೆದುಕೊಳ್ಳಬಹುದಾದ 2 ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ.
[Broad National consensus], 1. ಜನ ನಮ್ಮನ್ನು ಅಧಿಕಾರಕ್ಕೆ ತಂದರೆ ಮೊದಲು ವಿದೇಶಿ ಕಪ್ಪುಹಣ ವಶಪಡಿಸಿಕೊಳ್ಳುವ ಕುರಿತಂತೆ ವ್ಯಾಪಕ ಜನಾಭಿಪ್ರಾಯ ರೂಪಿಸಿಬೇಕು, ವಿರೋಧ ಪಕ್ಷಗಳು ವಿರೋಧಿಸದಂತೆ ಈಗಿರುವ ಕಾನೂನನ್ನೇ ಪರಿಣಾಮಕಾರಿಯಾಗಿ ಬಳಸುತ್ತಾ ನಮ್ಮ ದೇಶದ ಸಂಪತ್ತನ್ನು ದರೋಡೆ ಮಾಡಿ ವಿದೇಶಗಳಲ್ಲಿ ಅಕ್ರಮವಾಗಿ ಇಟ್ಟಿರುವವರನ್ನು ಹಿಡಿದು ಶಿಕ್ಷಿಸಬೇಕು.
ಇದನ್ನು ಸಾಧಿಸಲು ನಮಗೊಂದು ಜಾಗತಿಕ ಕಾರ್ಯತಂತ್ರ ಬೇಕು, ಭಾರತಕ್ಕಿರುವ ರಾಜಕೀಯ- ಭೌಗೋಳಿಕ ಪ್ರಭಾವವನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಒತ್ತಡ ರೂಪಿಸಬೇಕು ಭಾರತವು ವಿಶ್ವಸಂಸ್ಥೆ, ವಿಶ್ವಶಂಸ್ಥೆಯ ಭದ್ರತಾ ಸಮಿತಿ ಹಾಗೂ ಜಿ-20 ಸಂಸ್ಥೆಗಳ ಸದಸ್ಯ ದೇಶವಾಗಿರುವುದರಿಂದ ವಿದೇಶಗಳಲ್ಲಿರುವ ಭಾರತೀಯರ ಕಪ್ಪುಹಣದ ವಿರುದ್ಧ ಕ್ರಮ ತೆಗೆದುಕೊಳ್ಳಲು ಇವರೆಲ್ಲರಿಂದ ಸಹಕಾರವನ್ನು ಬಯಸಬಹುದು, ಸಹಕರಿಸಲು ಸಮ್ಮತಿ ನೀಡದಿರುವವರನ್ನು ಒಪ್ಪಿಸಲು ಒತ್ತಡವನ್ನೂ ತರಬಹುದು.
International Monetary Fundನ ಒಂದು ವರದಿಯ ಪ್ರಕಾರ ಜರ್ಮನಿ, ಸ್ವಿಡ್ಜರ್ಲ್ಯಾಂಡ್, ಜಮೈಕಾ, ಬಹಾಮಸ್ ಮತ್ತಿತರ ದೇಶಗಳೇ ಈ ಕಪ್ಪುಹಣದ ಜಾಗತಿಕ ಸ್ವರ್ಗ ತಾಣಗಳಾಗಿವೆ ಇಲ್ಲಿ ಒಟ್ಟು 18 ಟ್ರಿಲಿಯನ್ ಡಾಲರ್ ಗಳಷ್ಟು ಕಪ್ಪುಹಣ ಜಮೆಯಾಗಿದೆ. ಇದು ವಿಶ್ವ ಹಣಕಾಸು ವ್ಯವಹಾರದ ಮೂರನೇ ಒಂದರಷ್ಟಿದೆ. ಒಂದು ಟ್ರಿಲಿಯನ್ ಅಂದರೆ ಸಾವಿರ ಬಿಲಿಯನ್, ಒಂದು ಬಿಲಿಯನ್ ಅಂದರೆ ನೂರು ಕೋಟಿ ಡಾಲರ್, ಒಂದು ಬಿಲಿಯನ್ ಡಾಲರ್ ಅಂದರೆ ರೂಪಾಯಿ ಲೆಕ್ಕದಲ್ಲಿ ಹತ್ತಿರತ್ತಿರ 6 ಸಾವಿರ ಚಿಲ್ಲರೆ ಕೋಟಿ ರೂ.ತಾಳ್ಮೆ ಇರುವವರು ಉಳಿದ ಲೆಕ್ಕ ಮಾಡಿಕೊಳ್ಳಿ
ಬಿಜೆಪಿಯನ್ನು ಜನರು ಅಧಿಕಾರಕ್ಕೆ ತಂದರೆ ಜರ್ಮನಿಗೆ ಒಂದು ವಿಶೇಷ ನಿಯೋಗ ಕಳುಹಿಸಬೇಕು, ತೆರಿಗೆ ಪದ್ದತಿ, ವಿದೇಶಿ ಹಣಕಾಸು ವ್ಯವಹಾರಗಳನ್ನು ತಿಳಿದಿರುವ ತಜ್ಞರನ್ನು ಈ ಕೆಲಸಕ್ಕೆ ನಿಯೋಜಿಸಬೇಕು.
ಪದೇ ಪದೇ ಸ್ವಿಡ್ಜರ್ಲ್ಯಾಂಡ್‌ಗೆ ಹೋಗುವ ಭಾರತೀಯರ ಬಗ್ಗೆ ನಿಗಾ ಇಡಬೇಕು.
ಜಾಗತಿಕ ಕಪ್ಪುಹಣ ಸಾಗಣೆ ತಡೆಯಲು ಪತ್ತೆ ಹಚ್ಚಲು ರಚಿಸಲಾಗಿರುವ ಆರ್ಥಿಕ ಕಾರ್ಯಪಡೆಗೆ ಭಾರತವೂ ಸದಸ್ಯನಾಗಬೇಕು.
ನಮ್ಮಲ್ಲಿ ಅನೇಕ ಉದ್ಯಮಿಗಳು ಖಾಸಗಿ ವಿಮಾನಗಳನ್ನು ಹೊಂದಿದ್ದು ಅನೇಕ ಬಾರಿ ಅವುಗಳ ಮೂಲಕವೇ ಅಕ್ರಮವಾಗಿ ವಿದೇಶಗಳಿಗೆ ಹಣ ಸಾಗಿಸಲಾಗುತ್ತಿದೆ, ನಾವದರ ಬಗ್ಗೆ ನಿಗಾ ಇಡಬೇಕು.
Finance Ministry, National Inteligence Agency, Ministry Of Law, RBI, SEBI, Economic Inteligence Units, Central Vigilance Commission, CBI ಜೊತೆಗೆ ನಾವು ಭಾರತದಲ್ಲೂ ಆಂತರಿಕವಾಗಿ ಒಂದು ಕಾರ್ಯಪಡೆ ರಚಿಸಬೇಕು, ಅದರಲ್ಲಿ ಮುಂತಾದ ಸಂಸ್ಥೆಗಳ ಸಹಯೋಗದೊಂದಿಗೆ ಕೆಲಸ ಮಾಡಬೇಕು.
2009ರ ಎಪ್ರಿಲ್ 27ರಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್‌ಸಿಂಗ್ ಮಂಗಳೂರಿನಲ್ಲಿ ಭಾಷಣ ಮಾಡುತ್ತಾ ‘‘ನಾವು ವಿದೇಶದಲ್ಲಿರುವ ಕಪ್ಪುಹಣ ವಾಪಸ್ ತರುತ್ತೇವೆ’’ ಎಂದಿದ್ದರು, ಆದರೆ ಅವರು ಇದುವರೆಗೂ ಆ ಕೆಲಸ ಮಾಡಿಲ್ಲ, ಈಗ ಭಾರತೀಯರಲ್ಲಿ ಭ್ರಷ್ಟಾಚಾರದ ಬಗ್ಗೆ ಅಸಹನೆ ಹೆಚ್ಚುತ್ತಿದೆ, ಹಾಗಾಗಿ ನಾವು ವಿದೇಶದಲ್ಲಿರುವ ಕಪ್ಪುಹಣದ ಬಗ್ಗೆ ಕ್ರಮ ತೆಗೆದುಕೊಳ್ಳಬಲ್ಲೆವಾದರೆ ದೇಶದ ಜನರ ಮೆಚ್ಚುಗೆ ಪಡೆಯಬಹುದು. ಸರಕಾರದ್ದು ಬರೀ ಬಾಯಿ ಮಾತು ಅಷ್ಟೇ ಆಗಿದೆ. ಆದರೆ ನಾವು ಇದನ್ನು ಸಾಧಿಸಬಹುದಾಗಿದೆ.
Internl Revenue Service[IRS] ಕಪ್ಪುಹಣದ ಬಗ್ಗೆ ಜಗತ್ತಿನ ಬೇರೆ ಬೇರೆ ದೇಶಗಳು ಪರಿಣಾಮಕಾರಿಯಾಗಿ ಕ್ರಮ ವಹಿಸಿವೆ ಆದರೆ ಭಾರತವು ಮಾತ್ರ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಅಮೆರಿಕವು ತನ್ನ ದೇಶದವರು ಜರ್ಮನಿ ಹಾಗೂ ಸ್ವಿಸ್ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಕಪ್ಪುಹಣದ ಬಗ್ಗೆ ಮೂಲಕ ತನಿಖೆ ಮಾಡಿಸಿ ಅಂತವರ ಹೆಸರುಗಳ ಪಟ್ಟಿ ಪಡೆಯುವಲ್ಲಿ ಯಶಸ್ವಿಯಾಯಿತು, ಅದಕ್ಕಾಗಿ ಅಮೆರಿಕ ತನ್ನ ರಾಜಕೀಯ ಪ್ರಭಾವ, ಒತ್ತಡ, ದಂಡ ಹಾಕುವ ಬೆದರಿಕೆ ಕೊನೆಗೆ ಲಂಚವನ್ನೂ ನೀಡಿ ತೆರಿಗೆ ಕದ್ದವರ ವಿವರಗಳನ್ನು ಪಡೆಯಿತು..ಇದಕ್ಕೆ ಮಣಿದ ಯುಬಿಎಸ್ ಬ್ಯಾಂಕ್ ತನ್ನಲ್ಲಿ ವ್ಯವಹರಿಸುತ್ತಿದ್ದ 16 ಸಾವಿರ ಅಕೌಂಟ್‌ಗಳ ವಿವರವನ್ನು ನೀಡಬೇಕಾಯಿತು. ಜೊತೆಗೆ ಇನ್ನು ಮುಂದೆ ಅಮೆರಿಕನ್ನರ ಕಪ್ಪುಹಣವನ್ನು ತಾನು ನಿರ್ವಹಿಸುವುದಿಲ್ಲ ಎಂದು ವಾಗ್ದಾನ ನೀಡಬೇಕಾಯಿತು.
ಫಿಲಿಫೈನ್ಸ್ ದೇಶವು ಸತತ 18 ವರ್ಷಗಳ ಕಾಲ ಈ ಬ್ಯಾಂಕ್‌ಗಳ ಜೊತೆ ಸೆಣಸಾಡಿ ಕೊನೆಗೆ ತನ್ನ ದೇಶದ ಸರ್ವಾಧಿಕಾರಿಯಾಗಿದ್ದ ಫರ್ಡಿನೊಂಡ್ ಮಾರ್ಕೋಸ್ ಅಕ್ರಮವಾಗಿ ವಿದೇಶದಲ್ಲಿ ಇರಿಸಿದ್ದ 624 ಬಿಲಿಯನ್ ಡಾಲರ್ ಹಣವನ್ನು ಮರಳಿ ಪಡೆದಿದೆ.
ಪೆರು ದೇಶವು ಉದ್ಯಮಿ ವ್ಲಾದಿಮಿರೋ ಮಾಟೆಸಿಸೊಸದ್ ನ 180 ಮಿಲಿಯನ್ ಡಾಲರ್ ಅಕ್ರಮ ಸಂಪಾದನೆಯನ್ನ್ಲು ವಶಪಡಿಸಿಕೊಂಡಿದೆ.
ನೈಜೀರಿಯಾ ದೇಶವು ಸರ್ವಾಧಿಕಾರಿಯಾಗಿದ್ದ ಸ್ಯಾನಿ ಅಬಾಚನ 505 ಮಿಲಿಯನ್ ಡಾಲರ್ ಅಕ್ರಮ ಸಂಪತ್ತನ್ನು ಮರಳಿ ತನ್ನ ದೇಶಕ್ಕೆ ಪಡೆಯುವಲ್ಲಿ ಯಶ ಸಾಧಿಸಿದೆ. ಟುನೀಶಿಯಾ ದೇಶವು ಮಿಲಿಟರಿ ಸರ್ವಾಧಿಕಾರಿಯಾಗಿದ್ದ ಬೆನ್ ಅಲಿಯ 620 ಮಿಲಿಯನ್ ಡಾಲರ್ ಹಣವನ್ನು ಈ ವಿದೇಶಿ ಬ್ಯಾಂಕ್‌ಗಳಿಂದ ಮರಳಿ ಪಡೆದಿದೆ. ಇವೆಲ್ಲ ಸಾಧ್ಯವಾಗಿರುವುದು ಆಯಾ ದೇಶಗಳ ಸರಕಾರಗಳ ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ. ಈಗಿನ ಕಾಂಗ್ರೆಸ್ ಸರಕಾರಕ್ಕೆ ಆ ಶಕ್ತಿ ಇಲ್ಲ, ನಾವು ಅಧಿಕಾರಕ್ಕೆ ಬಂದರೆ ಈ ಕೆಲಸ ಮಾಡಬೇಕಿದೆ.
ಭಾರತವು ಸ್ವಿಡ್ಜರ್ಲ್ಯಾಂಡ್‌ನೊಂದಿಗೆ ಭ್ರಷ್ಟಾಚಾರದ ವಿರುದ್ಧದ ವಿಶ್ವಸಂಸ್ಥೆಯ ಸನದಿಗೆ ಸಹಿ ಹಾಕಿದೆ, ಆದರೆ ಈ ಕಾಂಗ್ರೆಸ್ ಸರಕಾರ ಆ ಸನದನ್ನು ಇನ್ನೂ ಅನುಮೋದನೆ ಮಾಡಿಲ್ಲ, ನಾವು ಆಧಿಕಾರಕ್ಕೆ ಬಂದಾಗ ಇದನ್ನು ಮಾಡೋಣ, ಆಗ ನಾವು ಸ್ವಿಸ್ ಸರಕಾರವನ್ನು ಮಣಿಸಬಹುದು, ಈಗಿನ ನಿಯಮದಂತೆ ಸ್ವಿಸ್ ಸರಕಾರಕ್ಕೆ ಅಲ್ಲಿನ ಖಾಸಗಿ ಬ್ಯಾಂಕ್‌ಗಳ ವ್ಯವಹಾರಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ, ಆದರೆ ನಾವು ಅಧಿಕಾರಕ್ಕೆ ಬಂದಾಗ ಸ್ವಿಸ್ ಸರಕಾರ ನಮ್ಮ ಮಾತು ಕೇಳುವ ಹಾಗೆ ಮಾಡಲು ಅವಕಾಶವಿದೆ, ಸ್ವಿಸ್ ಕಂಪೆನಿಗಳ ಸಾವಿರಾರು ಕೋಟಿ ರೂಪಾಯಿಗಳ ಬಂಡವಾಳ ಭಾರತದಲ್ಲಿದೆ, ವ್ಯವಹಾರಗಳಿವೆ. ಅದನ್ನು ಅವರು ಕಳೆದುಕೊಳ್ಳಲು ಬಯಸಲಾರರು.
ಭ್ರಷ್ಟಾಚಾರದ ವಿರುದ್ಧದ ವಿಶ್ವಸಂಸ್ಥೆಯ ಸನದಿನ ನಿಯಮದ ಅಧ್ಯಾಯ 5, ಆರ್ಟಿಕಲ್ 51 ರಿಂದ 59 ಪ್ರಕಾರ ವಿದೇಶಗಳಲ್ಲಿರುವ ಭಾರತೀಯರ ಹಣ ಹಾಗೂ ಅಕ್ರಮ ಆಸ್ತಿಗಳನ್ನು ಭಾರತ ಸರಕಾರವು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶಗಳಿವೆ, ನಾವದನ್ನು ಮಾಡಬೇಕಿದೆ.
ಅಮೆರಿಕ, ಫ್ರಾನ್ಸ್, ಜರ್ಮನಿ, ಪೆರು, ಫಿಲಿಫೈನ್ಸ್, ನ್ಯೆಜೀರಿಯ, ದೇಶಗಳು ಕಪ್ಪುಹಣದ ವಿರುದ್ಧ ಹೀಗೆ ಕಾನೂನು ಕ್ರಮ ವಹಿಸಲು ಸಾಧ್ಯವಿದೆ ಎಂದು ಸಾಬೀತು ಮಾಡಿರುವಾಗ ನಮಗೇಕೆ ಇದು ಅಸಾಧ್ಯ, ಕಾಂಗ್ರೆಸ್‌ಗೆ ಇದು ಬೇಕಾಗಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಕಪ್ಪುಹಣದ ಖದೀಮರನ್ನು ನಮ್ಮ ಸರಕಾರವು ಬೆನ್ನು ಹತ್ತಿ ಸದೆಬಡಿಯಬೇಕು, ಕಾಂಗ್ರೆಸ್ ಮಾಡಲಾಗದೆ ಹೋದದ್ದನ್ನು ನಾವು ಮಾಡಬೇಕು. ವಿದೇಶಗಳಲ್ಲಿ ಭಾರತೀಯರ ಅಪಾರ ಪ್ರಮಾಣದ ತೆರಿಗೆ ವಂಚಿಸಿರುವ ಹಣ ಶೇಖರಣೆಯಾಗಿದ್ದು, ಅದು ಅಲ್ಲಿಂದಲೇ ವಿದೇಶಿ ಬಂಡವಾಳವಾಗಿ ಪರಿರ್ವತನೆಯಾಗುತ್ತಿದೆ, ಅನೇಕ ಸಾರಿ ಅದೇ ಕಪ್ಪುಹಣವು ಭಾರತಕ್ಕೂ ವಿದೇಶಿ ಬಂಡವಾಳವಾಗಿ ನಮ್ಮ ದೇಶದೊಳಕ್ಕೂ ಹರಿದು ಬರುತ್ತಿದೆ.
ಭಾರತವು ಒಂದು ಭವ್ಯ ದೇಶವಾಗಿದೆ, ಅದು ಜಾಗತಿಕವಾಗಿ ರಾಜಕೀಯ-ಆರ್ಥಿಕತೆ ಇನ್ನಿತರ ಆಯಾಮಗಳಲ್ಲಿ ಪ್ರಭಾವಶಾಲಿ ಯಾಗಿದೆ. ಇಂದು ಬಹುತೇಕ ಭಾರತೀಯರು ವಿದೇಶಿ ಕಪ್ಪುಹಣದ ಬಗ್ಗೆ ಭ್ರಷ್ಟಾಚಾರದ ಬಗ್ಗೆ ಅಸಹನೆ ಹೊಂದಿದ್ದಾರೆ, ಬಿಜೆಪಿಯು ಅಧಿಕಾರಕ್ಕೆ ಬಂದರೆ ಇವುಗಳ ವಿರುದ್ಧ ಕ್ರಮ ತೆಗೆದುಕೊಂಡರೆ ಅದು ನಮ್ಮ ಪಕ್ಷದ ಬಗ್ಗೆ ಜನರಲ್ಲಿ ಸದಭಿಪ್ರಾಯ ಮೂಡಿಸಲು ಸಹಕಾರಿಯಾಗಲಿದೆ...........’’
ಇದು ಆ ವರದಿಯ ಮುಖ್ಯಾಂಶಗಳು ಮಾತ್ರ..

ಮಿತ್ರರೆ, ಬಿಜೆಪಿಯವರೇ ನೇಮಿಸಿದ್ದ ಈ ಸಮಿತಿಯು ತನ್ನ ವರದಿ ನೀಡಿ 5 ವರ್ಷಗಳಾಗಿವೆ, ಮೋದಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಗಳಿಗೂ ಹೆಚ್ಚು ಕಾಲವಾಗಿದೆ. ಭಾರತೀಯ ಕಪ್ಪುಹಣದ ಖದೀಮರು ವಿದೇಶಗಳಲ್ಲಿ ಇಟ್ಟಿರುವ ಕಪ್ಪುಹಣ (ಅದರ ಮೊತ್ತ ಅಂದಾಜು 30 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಎಂದು ಒಂದು ಅಧ್ಯಯನವು ಹೇಳಿದೆ)ವನ್ನು ಮರಳಿ ಭಾರತಕ್ಕೆ ತರಲು ಮೋದಿ ಸರಕಾರ ಇದುವರೆಗೂ ಏನು ಕ್ರಮ ತೆಗೆದುಕೊಂಡಿದೆ ಎಂದು ನಾವೀಗ ಕೇಳಬೇಕಲ್ಲವೆ?

1111111111111111111

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News