ದೇಶಕ್ಕೆ ಅನ್ನ, ಅಂತರ್ಜಲಕ್ಕೆ ಕನ್ನ

Update: 2016-12-10 15:26 GMT

ಕೇಂದ್ರ ಅಂತರ್ಜಲ ಮಂಡಳಿ ಕೂಡಾ ಪಂಜಾಬ್ ರಾಜ್ಯದ ನೀರಿನ ಸಮಸ್ಯೆ ಹಾಗೂ ಕೃಷಿ ಸಂಕಷ್ಟದ ಬಗ್ಗೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಶೇ.172ರಷ್ಟು ಅಂತರ್ಜಲವನ್ನು ಪ್ರತಿ ವರ್ಷ ಬಳಕೆ ಮಾಡಲಾಗುತ್ತದೆ. ಅಂದರೆ ಜಲಪೂರಣಕ್ಕಿಂತ ಅತ್ಯಧಿಕ ಪ್ರಮಾಣದಲ್ಲಿ ಅಂತರ್ಜಲ ಬಳಕೆಯಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರಿದರೆ ಮುಂದಿನ ದಶಕದಲ್ಲಿ ಪಂಜಾಬ್‌ನ 14 ಜಿಲ್ಲೆಗಳ 50 ತಾಲೂಕುಗಳಲ್ಲಿ ಅಂತರ್ಜಲ ಬರಿದಾಗಲಿದೆ.

ಅತ್ಯಧಿಕ ಭತ್ತ ಉತ್ಪಾದನೆಯ ದಾಖಲೆ ನಿರ್ಮಿಸಲು ಪಂಜಾಬ್ ಸಜ್ಜಾಗಿದೆ. 2016-17ನೆ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 186 ಲಕ್ಷ ಮೆಟ್ರಿಕ್ ಟನ್ ಭತ್ತ ಉತ್ಪಾದನೆಯಾಗುವ ನಿರೀಕ್ಷೆ ಇದೆ ಎಂದು ರಾಜ್ಯದ ಕೃಷಿ ಇಲಾಖೆ ಪ್ರಕಟಿಸಿದೆ. ಇದು ಕಳೆದ ವರ್ಷದ ಇಳುವರಿಗಿಂತ ಸುಮಾರು 10 ಲಕ್ಷ ಟನ್ ಅಧಿಕ. ಈ ಸಾರ್ವಕಾಲಿಕ ದಾಖಲೆಯ ಖುಷಿಯಲ್ಲಿ ರಾಜ್ಯದ ಅಧಿಕಾರಿಗಳು ಇದ್ದಾರೆ.

ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆ ಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಅವರು, ತಕ್ಷಣ ಈ ಭತ್ತದ ಬೆಳೆಯನ್ನು ರೈತರಿಂದ ಪಡೆದು, ಖರೀದಿ ಬಗ್ಗೆ ದೈನಂದಿನ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 1970ರ ದಶಕದ ಹಸಿರು ಕ್ರಾಂತಿಯಿಂದ ಆರಂಭವಾದ ಉತ್ಪಾದನೆ ಉಬ್ಬರ ಏರುಗತಿಯಲ್ಲೇ ಮುಂದುವರಿದಿದೆ.

ಆದರೆ ಈ ಸಾಧನಾ ಪಥ ಇನ್ನೊಂದು ಕಳವಳಕಾರಿ ಮುಖವನ್ನೂ ಹೊಂದಿದೆ. ಅದೆಂದರೆ ರಾಜ್ಯದ ಅಂತರ್ಜಲದ ಅತಿಯಾದ ಬಳಕೆ. ‘‘ಪಂಜಾಬ್‌ನಲ್ಲಿ ಭತ್ತ ಬೆಳೆಯುವ ಪ್ರದೇಶದ ಪೈಕಿ ಶೇ.97ಕ್ಕಿಂತಲೂ ಹೆಚ್ಚು ನೀರಾವರಿ ಭೂಮಿ. ಇದು ದೇಶದಲ್ಲೇ ಅತ್ಯಧಿಕ’’ ಎಂದು ಲೂಧಿಯಾನದಲ್ಲಿರುವ ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯದ ಮಣ್ಣು ಮತ್ತು ನೀರು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ರಾಜನ್ ಅಗರ್‌ವಾಲ್ ಹೇಳುತ್ತಾರೆ. ‘‘ಆದರೆ ಶೇ.75ರಷ್ಟು ಪ್ರಮಾಣದಲ್ಲಿ ಅಂತರ್ಜಲ ಬಳಕೆ ಮಾಡಿಕೊಳ್ಳುತ್ತಿದ್ದರೆ, ಶೇ.25ರಷ್ಟು ಪ್ರದೇಶ ಮಾತ್ರ ಕಾಲುವೆ ನೀರಾವರಿ ಸೌಲಭ್ಯ ಹೊಂದಿದೆ’’.

ರಾಜ್ಯದಲ್ಲಿ ಕುಸಿಯುತ್ತಿರುವ ಅಂತರ್ಜಲದಿಂದಾಗಿ ಪಂಜಾಬ್ ಒಂದು ದಶಕದಲ್ಲಿ ಮರಭೂಮಿಯಾಗಲಿದೆ ಎಂಬ ಆತಂಕವನ್ನು ಇತ್ತೀಚೆಗೆ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ವ್ಯಕ್ತಪಡಿಸಿದ್ದರು. ಪಂಜಾಬ್‌ನಲ್ಲಿ ಜಲಸಂಪನ್ಮೂಲ ಕುರಿತ ಉನ್ನತ ಮಟ್ಟದ ಸಮಿತಿಯ 2013ರ ವರದಿಯ ಪ್ರಕಾರ ರಾಜ್ಯದಲ್ಲಿ ಪ್ರತಿ ವರ್ಷ ಅಂತರ್ಜಲ ಮಟ್ಟ ಒಂದು ಮೀಟರ್‌ನಷ್ಟು ಕುಸಿಯುತ್ತಿದೆ.

ಕೇಂದ್ರ ಅಂತರ್ಜಲ ಮಂಡಳಿ ಕೂಡಾ ರಾಜ್ಯದ ನೀರಿನ ಸಮಸ್ಯೆ ಹಾಗೂ ಕೃಷಿ ಸಂಕಷ್ಟದ ಬಗ್ಗೆ ಎಚ್ಚರಿಕೆ ನೀಡಿದೆ. ಮಂಡಳಿಯ ಚಂಡಿಗಡ ಕಚೇರಿಯ ಪ್ರಾದೇಶಿಕ ನಿರ್ದೇಶಕ ಡಾ.ಎಸ್.ಕೆ.ಜೈನ್ ಅವರ ಪ್ರಕಾರ, ರಾಜ್ಯದಲ್ಲಿ ಶೇ.172ರಷ್ಟು ಅಂತರ್ಜಲವನ್ನು ಪ್ರತಿ ವರ್ಷ ಬಳಕೆ ಮಾಡಲಾಗುತ್ತದೆ. ಅಂದರೆ ಜಲಪೂರಣಕ್ಕಿಂತ ಅತ್ಯಧಿಕ ಪ್ರಮಾಣದಲ್ಲಿ ಅಂತರ್ಜಲ ಬಳಕೆಯಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರಿದರೆ ಮುಂದಿನ ದಶಕದಲ್ಲಿ ಪಂಜಾಬ್‌ನ 14 ಜಿಲ್ಲೆಗಳ 50 ತಾಲೂಕುಗಳಲ್ಲಿ ಅಂತರ್ಜಲ ಬರಿದಾಗಲಿದೆ.

ದೇಶಕ್ಕೆ ಅನ್ನ

ಪಂಜಾಬ್ ದೇಶದ ಕಣಜ ಎನಿಸಿಕೊಂಡಿದೆ. ದೇಶದ ಒಟ್ಟು ಭೂ ಭಾಗದಲ್ಲಿ ಶೇ.1.5 ಪಾಲು ಹೊಂದಿರುವ ಈ ರಾಜ್ಯ ದೇಶದ ಆಹಾರ ಉತ್ಪಾದನೆಗೆ ಗರಿಷ್ಠ ಕೊಡುಗೆ ನೀಡುತ್ತಿದೆ. ದೇಶದ ಪಡಿತರ ವ್ಯವಸ್ಥೆಯಡಿ ಸರಬರಾಜು ಆಗುವ ಬಹುತೇಕ ಆಹಾರಧಾನ್ಯಗಳು ಈ ರಾಜ್ಯದ ಕೊಡುಗೆ.

ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಪಂಜಾಬ್ ರಾಜ್ಯ ಕುರಿತಾದ 2015-16ನೆ ಸಾಲಿನ ವರದಿಯಲ್ಲಿ ಹೇಳಿರುವಂತೆ ದೇಶದ ಒಟ್ಟು ಗೋಧಿ ಉತ್ಪಾದನೆಯ ಶೇ.43ರಷ್ಟನ್ನು ಹಾಗೂ ಅಕ್ಕಿಯ ಶೇ.29ರಷ್ಟನ್ನು ಪಂಜಾಬ್ ಉತ್ಪಾದಿಸುತ್ತದೆ. ಕೆಲ ವರ್ಷಗಳ ಹಿಂದೆ ಈ ಪ್ರಮಾಣ ಇನ್ನೂ ಅಧಿಕ ಅಂದರೆ ಅನುಕ್ರಮವಾಗಿ ಶೇ.55 ಹಾಗೂ 42ರಷ್ಟಿತ್ತು.

ಗೋಧಿ ಹಾಗೂ ಅಕ್ಕಿ ಪಂಜಾಬ್‌ನ ಪ್ರಮುಖ ಬೆಳೆಗಳು. ರಾಜ್ಯದ ಒಟ್ಟು ಭೂಭಾಗ 50 ಲಕ್ಷ ಹೆಕ್ಟೇರ್ ಆಗಿದ್ದರೆ, 41 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಇದೆ. 35 ಲಕ್ಷ ಹೆಕ್ಟೇರ್‌ನಲ್ಲಿ ಗೋಧಿ ಹಾಗೂ 30 ಲಕ್ಷ ಹೆಕ್ಟೇರ್‌ನಲ್ಲಿ ಅಕ್ಕಿ ಬೆಳೆಯಲಾಗುತ್ತಿದೆ. ಗೋಧಿ ಚಳಿಗಾಲದ ಬೆಳೆ ಹಾಗೂ ಅಕ್ಕಿ ಮುಂಗಾರು ಬೆಳೆ. ಒಂದೇ ಹೊಲದಲ್ಲಿ ರೈತರು ಈ ಎರಡೂ ಬೆಳೆಗಳನ್ನು ಬೆಳೆ ಯುತ್ತಾರೆ. ಈ ಎರಡು ಬೆಳೆಗಳನ್ನು ಬೆಳೆಯಲು ಸಾಕಷ್ಟು ಅಂತರ ಇರುವು ದರಿಂದ ಹಾಗೂ ಯಾಂತ್ರಿಕ ಕೊಯ್ಲು ಕ್ರಮದಿಂದಾಗಿ ಇದು ಸಾಧ್ಯವಾ ಗಿದೆ. ಗೋಧಿ ರಾಜ್ಯದ ಜನಪ್ರಿಯ ಆಹಾರಧಾನ್ಯವಾಗಿದ್ದರೆ, ಅಕ್ಕಿ ಮುಖ್ಯವಾಗಿ ಕೇಂದ್ರೀಯ ದಾಸ್ತಾನಿಗೆ ಸರಬರಾಜು ಆಗುತ್ತದೆ.

‘‘ರೈತರು ಅಕ್ಕಿ ಹಾಗೂ ಗೋಧಿ ಎರಡನ್ನೂ ಬೆಳೆಯಲು ಮುಖ್ಯ ಕಾರಣವೆಂದರೆ, ಬಹುತೇಕ ಬೆಳೆಯನ್ನು ಕನಿಷ್ಠ ಬೆಂಬಲಬೆಲೆಯಡಿ ಸರಕಾರವೇ ಖರೀದಿ ಮಾಡುವುದು’’ ಎಂದು ಅಗರ್‌ವಾಲ್ ಅಭಿಪ್ರಾಯಪಡುತ್ತಾರೆ.

ಅಕ್ಕಿ ಆಗಮನಕ್ಕೆ ಮುನ್ನ ಪಂಜಾಬ್‌ನ ಪ್ರಮುಖ ಬೆಳೆ ಜೋಳ, ಹತ್ತಿ ಹಾಗೂ ಬೇಳೆಕಾಳು ಆಗಿತ್ತು. 1960ರ ದಶಕದಲ್ಲಿ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಅಕ್ಕಿ ಬೆಳೆಯಲಾಗುತ್ತಿತ್ತು. ಆದರೆ ಇದೀಗ ಹತ್ತು ಪಟ್ಟು ಹೆಚ್ಚಿ 30 ಲಕ್ಷ ಹೆಕ್ಟೇರ್ ಆಗಿದೆ. 1970-71ರಲ್ಲಿ ಒಟ್ಟು ಕೃಷಿ ಪ್ರದೇಶದ 9.7ರಷ್ಟು ಪ್ರದೇಶದಲ್ಲಿ ಜೋಳ ಬೆಳೆಯುತ್ತಿದ್ದರೆ, 2010-11ರ ವೇಳೆಗೆ ಈ ಪ್ರಮಾಣ 1.7 ಶೇಕಡಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಬೇಳೆಕಾಳು ಹಾಗೂ ಎಣ್ಣೆಕಾಳು ಬೆಳೆ ಪ್ರದೇಶ ಅನುಕ್ರಮವಾಗಿ ಶೇ.7.2ರಿಂದ ಶೇ.0.2ಕ್ಕೆ ಹಾಗೂ 5.2 ರಿಂದ 0.7ಕ್ಕೆ ಇಳಿದಿದೆ.

ಅಂತರ್ಜಲ ಕುಸಿತ

ಪಂಜಾಬ್‌ನ ಶೇ.75ರಷ್ಟು ಕೃಷಿಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತದೆ. ಇದು ಜಲಸಾಂದ್ರ ಬೆಳೆ. ಒಂದು ಕೆ.ಜಿ. ಅಕ್ಕಿ ಬೆಳೆಯಲು ರಾಜ್ಯದಲ್ಲಿ ರೈತರು 5,337 ಲೀಟರ್ ನೀರು ಬಳಸುತ್ತಾರೆ. 2015-16ರ ಬೆಳೆ ಹಂಗಾಮಿನಲ್ಲಿ, ಪಂಜಾಬ್ ರಾಜ್ಯ ಸಾರ್ವಜನಿಕ ಪಡಿತರ ವ್ಯವಸ್ಥೆಗೆ 95.3 ಲಕ್ಷ ಟನ್ ಅಕ್ಕಿ ಕೊಡುಗೆ ನೀಡಿದೆ. ನೀರಿನ ಬಳಕೆಯ ಲೆಕ್ಕಾಚಾರದಲ್ಲಿ ಹೇಳಬೇಕಾದರೆ ಇದು ಬಾಕ್ರಾ ಅಣೆಕಟ್ಟು ಅಥವಾ ಗೋವಿಂದಸಾಗರ ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯದ ಐದು ಪಟ್ಟು ಅಧಿಕ. ಈ ಅಣೆಕಟ್ಟು ಪಂಜಾಬ್‌ನ ಶೇ.40ರಷ್ಟು ನೀರಾವರಿ ಭೂಮಿಗೆ ನೀರು ಉಣಿಸುತ್ತದೆ.

ಭತ್ತಕ್ಕೆ ಕನಿಷ್ಠ ಸರಾಸರಿ ಮಳೆಬೀಳುವ ಪ್ರಮಾಣ 1,150 ಮಿಲಿಮೀಟರ್ ಅಗತ್ಯ. ಆದರೆ ಸಮರ್ಪಕವಾಗಿ ಭತ್ತ ಬೆಳೆ ಬರಬೇಕಾದರೆ 1,750 ಮಿಲಿಮೀಟರ್‌ನಿಂದ 3,000 ಮಿಲಿಮೀಟರ್‌ವರೆಗೆ ಮಳೆ ಬೀಳುವುದು ಅಗತ್ಯವಾಗುತ್ತದೆ. ತದ್ವಿರುದ್ಧವಾಗಿ ಪಂಜಾಬ್‌ನಲ್ಲಿ ವಾರ್ಷಿಕ ಮಳೆ ಪ್ರಮಾಣ 650ರಿಂದ 700 ಮಿಲಿಮೀಟರ್. ಇದು ಕೂಡಾ ಕಳೆದ ಎರಡು ದಶಕಗಳಲ್ಲಿ 400-500 ಮಿಲಿಮೀಟರ್‌ಗೆ ಇಳಿದಿದ್ದು, ಅಂತರ್ಜಲದ ಮೇಲಿನ ಹೊರೆಯನ್ನು ಹೆಚ್ಚಿಸಿದೆ. ಭತ್ತದ ಗದ್ದೆಗೆ ನೀರು ಹಾಯಿಸುವ ಸಲುವಾಗಿ ರೈತರು ಆಳದ ಕೊಳವೆಬಾವಿಗಳನ್ನು ಕೊರೆಯುತ್ತಿದ್ದಾರೆ ಎಂದು ಡಾ.ಎಸ್.ಕೆ.ಜೈನ್ ಹೇಳುತ್ತಾರೆ.

ರಾಜ್ಯದಲ್ಲಿ ಭತ್ತದ ಬೆಳೆ ವಿಸ್ತರಣೆಯ ಜತೆಜತೆಗೆ ಕೊಳವೆಬಾವಿಗಳ ಸಂಖ್ಯೆ ಕೂಡಾ ಹೆಚ್ಚಿದೆ. 1970ರ ದಶಕದಲ್ಲಿ ಇಡೀ ರಾಜ್ಯದಲ್ಲಿ 2 ಲಕ್ಷ ಕೊಳವೆಬಾವಿಗಳಿದ್ದರೆ, ಈಗ 40 ಲಕ್ಷಕ್ಕೆ ಹೆಚ್ಚಿದೆ. ಈ ಪೈಕಿ 14 ಲಕ್ಷ ಕೊಳವೆಬಾವಿಗಳು ವಿದ್ಯುತ್ ಪಂಪ್‌ನಿಂದ ಚಾಲನೆಯಾಗುತ್ತಿದ್ದು, ಸರಕಾರ ಹೊಸದಾಗಿ 1.5 ಲಕ್ಷ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಮುಂದಾಗಿದೆ. ಸಹಜವಾಗಿಯೇ ಭತ್ತ ಬೆಳೆಗೆ ಅತ್ಯಧಿಕ ನೀರು ಬಳಸುವುದೇ ಇಲ್ಲಿನ ಅಂತರ್ಜಲ ಮಟ್ಟ ಕುಸಿತಕ್ಕೆ ಮೂಲ ಕಾರಣ. ರಾಜ್ಯದ 138 ತಾಲೂಕುಗಳ ಪೈಕಿ 110 ತಾಲೂಕುಗಳಲ್ಲಿ ಜಲಪೂರಣಕ್ಕಿಂತ ಅಧಿಕ ಪ್ರಮಾಣದಲ್ಲಿ ನೀರು ಬಳಕೆ ಮಾಡಲಾಗುತ್ತಿದೆ. ಈ ಪೈಕಿ ನಾಲ್ಕು ತಾಲೂಕುಗಳ ಸ್ಥಿತಿ ಚಿಂತಾಜನಕವಾಗಿದ್ದರೆ, ಎರಡು ತಾಲೂಕುಗಳ ಸ್ಥಿತಿ ಮತ್ತೂ ಕೆಟ್ಟಿದೆ. 22 ತಾಲೂಕುಗಳು ಸುರಕ್ಷಿತ ವಲಯದಲ್ಲಿದ್ದರೂ, ವಿಷಕಾರಿ ಅಂಶ, ಫ್ಲೋರೈಡ್, ಯುರೇನಿಯಂ ಮಿಶ್ರಣ ಮತ್ತಿತರ ಸಮಸ್ಯೆಗಳನ್ನು ಹೊಂದಿದೆ.

ಅಬಾಧಿತ

ಪಂಜಾಬ್ ಸರಕಾರ 1999ರಲ್ಲಿ ರೈತರ ಕೃಷಿ ವಿದ್ಯುತ್ ಬಳಕೆಗೆ ಶುಲ್ಕ ವಿಧಿಸುವುದು ಸ್ಥಗಿತಗೊಳಿಸಿದೆ. ಈ ಉಚಿತ ವಿದ್ಯುತ್‌ನ ಹೊರೆ 2016-17ರಲ್ಲಿ 6,364.4 ಕೋಟಿಗೆ ಹೆಚ್ಚಿದ್ದು, ಇದನ್ನು ಸರಕಾರವೇ ಭರಿಸಬೇಕಾಗುತ್ತದೆ. ಇದೇ ರೀತಿ ಸರಕಾರ ಅಂತರ್ಜಲ ಬಳಕೆ ನಿರ್ಬಂಧಿಸಲೂ ನಿರಾಕರಿಸಿದೆ. 2010ರಲ್ಲಿ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಅಂತರ್ಜಲ ನಿರ್ವಹಣೆ ಕುರಿತ ಮಾದರಿ ಮಸೂದೆಯನ್ನೂ ಈ ರಾಜ್ಯ ತಿರಸ್ಕರಿಸಿದೆ. ಪಂಜಾಬ್‌ನಲ್ಲಿ ಕೊಳವೆಬಾವಿ ಕೊರೆಯಲು ಯಾವ ಅನುಮತಿಯೂ ಬೇಕಿಲ್ಲ. ಕೊಳವೆಬಾವಿಗಳ ಆಳಕ್ಕೂ ಯಾವುದೇ ನಿರ್ಬಂಧ ಇಲ್ಲದಿರುವುದರಿಂದ ವರ್ಷದಿಂದ ವರ್ಷಕ್ಕೆ ಕೊಳವೆಬಾವಿಗಳು ಪಾತಾಳಮುಖಿಯಾಗುತ್ತಿವೆ.

‘‘ಅಂತರ್ಜಲ ಶೇ.75ರಷ್ಟು ಕೃಷಿಭೂಮಿಗೆ ನೀರುಣಿಸುವ ಜೀವಜಲವಾಗಿದ್ದರೂ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದರ ಸಂರಕ್ಷಣೆಗೆ, ನಿಯಂತ್ರಣಕ್ಕೆ ಹಾಗೂ ನಿರ್ವಹಣೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ’’ ಎಂದು ಅಣೆಕಟ್ಟು, ನದಿ ಹಾಗೂ ಜನರ ದಕ್ಷಿಣ ಏಷ್ಯಾ ಜಾಲ ಸಂಘಟನೆಯ ಸಂಚಾಲಕ ಹಿಮಾಂಶು ಠಾಕೂರ್ ಹೇಳುತ್ತಾರೆ.

ಹನಿ ನೀರಾವರಿ ಮೂಲಕ ಅಂತರ್ಜಲ ಕಾಪಾಡುವ ಕೆಲಸ ನಡೆದಿದೆ ಎನ್ನುವುದು ರಾಜ್ಯ ಸರಕಾರದ ಸಮರ್ಥನೆ. ಹನಿನೀರಾವರಿಯಲ್ಲಿ ನೀರು ನೇರವಾಗಿ ಬೇರು ತಲುಪುವುದರಿಂದ ನೀರು ಭಾರೀ ಪ್ರಮಾಣದಲ್ಲಿ ಉಳಿಯುತ್ತದೆ. ರಾಜ್ಯದ ಒಟ್ಟು ಕೃಷಿಭೂಮಿಯಲ್ಲಿ ಶೇ.ಒಂದರಷ್ಟು ಭೂಮಿಯಲ್ಲಿ ಈಗಾಗಲೇ ಹನಿ ನೀರಾವರಿ ಬಳಕೆ ಇದೆ ಎಂದು ಹೇಳಿಕೊಳ್ಳುತ್ತದೆ.

ರಾಜ್ಯದಲ್ಲಿ ಭತ್ತದ ಸಸಿಗಳನ್ನು ನರ್ಸರಿಯಿಂದ ಜೂನ್ 10ರವರೆಗೆ ಹೊಲಕ್ಕೆ ವರ್ಗಾವಣೆ ಮಾಡುವುದನ್ನು ನಿಷೇಧಿಸುವ ಪಂಜಾಬ್ ಪ್ರಿಸರ್ವೇಶನ್ ಆಫ್ ಸಬ್‌ಸಾಯಿಲ್ ವಾಟರ್ ಕಾಯ್ದೆ-2009ನ್ನೂ ಸರಕಾರ ಜಾರಿಗೆ ತಂದಿದೆ. ಹೀಗೆ ತ್ವರಿತವಾಗಿ ಹೊಲಕ್ಕೆ ಭತ್ತದ ಸಸಿ ವರ್ಗಾವಣೆ ಮಾಡುವುದರಿಂದ ಅಂತರ್ಜಲ ಬಳಕೆಯೂ ಹೆಚ್ಚುತ್ತದೆ. ಅಧಿಕ ಉಷ್ಣಾಂಶ ಇರುವ ಹಿನ್ನೆಲೆಯಲ್ಲಿ ಹೊಲದಲ್ಲಿರುವ ನೀರು ತಕ್ಷಣಕ್ಕೆ ಆವಿಯಾಗುತ್ತದೆ ಎಂಬ ಕಾರಣಕ್ಕೆ ಕಳೆದ ವರ್ಷ ಈ ಗಡುವನ್ನು ಜೂನ್ 15ಕ್ಕೆ ವಿಸ್ತರಿಸಲಾಗಿದೆ. ಆದರೆ ರಾಜ್ಯ ಎದುರಿಸುತ್ತಿರುವ ತೀವ್ರತೆ ಹಿನ್ನೆಲೆಯಲ್ಲಿ ಈ ಕ್ರಮಗಳು ಖಂಡಿತವಾಗಿಯೂ ಸಾಲದು.

ಪಂಜಾಬ್ ಉಳಿಸಿ

ಕೇಂದ್ರ ಸರಕಾರದ ಅಂತರ್ಜಲ ನಿರ್ವಹಣೆ ಕುರಿತ ರಾಷ್ಟ್ರೀಯ ಯೋಜನೆಯ ಅಂಗವಾಗಿ, ಪಂಜಾಬ್‌ನ ಜಲಮೂಲಗಳ ಮ್ಯಾಪಿಂಗ್ ನಡೆದಿದ್ದು, ಮುಂದಿನ ವರ್ಷದ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದು ರಾಜ್ಯದ ಜಲಮೂಲಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಿದೆ ಎಂದು ಪುಣೆ ಮೂಲದ ಅಡ್ವಾನ್ಸ್ ಡ್ ಸೆಂಟರ್ ಫಾರ್ ವಾಟರ್ ರಿಸೋರ್ಸಸ್ ಡೆವಲಪ್‌ಮೆಂಟ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಆಡಳಿತ ನಿರ್ದೇಶಕ ಡಾ.ಹಿಮಾಂಶು ಕುಲಕರ್ಣಿ ಅಭಿಪ್ರಾಯಪಡುತ್ತಾರೆ.

ಜಲಮೂಲಗಳ ಮ್ಯಾಪಿಂಗ್ ಹೊರತಾಗಿ, ಕೇಂದ್ರ ಸರಕಾರ ಭೂಗತ ನೀರಾವರಿ ಪೈಪ್‌ಲೈನ್ ಅಳವಡಿಕೆಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 100 ಕೋಟಿ ರೂ. ಸಬ್ಸಿಡಿ ನೀಡಿದೆ. ‘‘ಪ್ರಸ್ತುತ ಇರುವ ನೀರು ಹರಿಸುವ ವ್ಯವಸ್ಥೆಯಲ್ಲಿ, ನೀರು ಬಹಳಷ್ಟು ಪ್ರಮಾಣದಲ್ಲಿ ಆವಿಯಾಗಿ ಹೋಗುತ್ತದೆ. ಈ ಸಮಸ್ಯೆಗೆ ಭೂಗತ ಪೈಪ್‌ಗಳು ಪರಿಹಾರವಾಗಲಿವೆ’’ ಎನ್ನುವುದು ಜೈನ್ ಅಭಿಮತ. ರಾಜ್ಯ ಸರಕಾರ ಈ ಉದ್ದೇಶಕ್ಕಾಗಿ ರೈತರಿಗೆ ಸಬ್ಸಿಡಿ ನೀಡುತ್ತಿದೆ.

ಆದರೆ ಈ ಬಂಡವಾಳ ಸಾಂದ್ರ ಕ್ರಮದ ಬಗ್ಗೆ ಠಾಕೂರ್ ವಿರೋಧ ವ್ಯಕ್ತಪಡಿಸುತ್ತಾರೆ. ‘‘ಈ ಅರೆಬೆಂದ ಪರಿಹಾರಗಳು ಭತ್ತದ ಬೆಳೆಯ ವಾಸ್ತವ ಸಮಸ್ಯೆಯಾದ ಸುಸ್ಥಿರವಲ್ಲದ ಅಂತರ್ಜಲ ಬಳಕೆ ಸಮಸ್ಯೆಯನ್ನು ಬಗೆಹರಿಸಲಾರವು’’ ಎನ್ನುವುದು ಅವರ ಸ್ಪಷ್ಟನುಡಿ. ಬಾಕ್ರಾ ಅಣೆಕಟ್ಟಿನ ಬಹುತೇಕ ನಾಲೆಗಳು ತೆರೆದ ನಾಲೆಗಳಾಗಿದ್ದು, ಪರಿಣಾಮವಾಗಿ ನೀರು ಆವಿಯಾಗುತ್ತದೆ. ‘‘ರೈತರು ಹೊಲಗಳಲ್ಲಿ ಭೂಗತ ಪೈಪ್‌ಗಳನ್ನು ಅಳವಡಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗಲು ಹೇಗೆ ಸಾಧ್ಯ’’ ಎನ್ನುವುದು ಅವರ ಪ್ರಶ್ನೆ.

ರಾಜ್ಯದಲ್ಲಿ ಕನಿಷ್ಠ 12 ಲಕ್ಷ ಹೆಕ್ಟೇರ್ ಭತ್ತದ ಬೆಳೆ ಕಡಿಮೆ ಮಾಡಬೇಕು ಎಂದು ಕೃಷಿ ವಿವಿ ಸಲಹೆ ನೀಡುತ್ತಲೇ ಬಂದಿದೆ. ಈ ಪ್ರದೇಶದಲ್ಲಿ ಕಡಿಮೆ ಜಲಸಾಂದ್ರ ಬೆಳೆಗಳಾದ ಜೋಳ, ಬೇಳೆಕಾಳು, ಸೋಯಾಬಿನ್ ಮತ್ತು ಪರ್ಯಾಯ ಬೆಳೆಗಳನ್ನು ಬೆಳೆಯಬಹುದು. ಈ ಬೆಳೆಗಳಿಗೆ ಭತ್ತಕ್ಕೆ ಬೇಕಾಗುವ ನೀರಿನ ಆರನೆ ಒಂದಂಶದಷ್ಟು ನೀರು ಸಾಕು ಎನ್ನುವುದು ಅವರ ವಾದ.

ಆದರೆ ಪ್ರತಿ ವರ್ಷ 2,000 ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಈ ರಾಜ್ಯದಲ್ಲಿ ಇದರ ಜಾರಿ ಹೇಳಿದಷ್ಟು ಸುಲಭವಲ್ಲ. ಖಾತ್ರಿಯಾದ ಮಾರುಕಟ್ಟೆ ವ್ಯವಸ್ಥೆ ಹಾಗೂ ಕನಿಷ್ಠ ಬೆಂಬಲ ಬೆಲೆಯನ್ನು ನೀಡುವ ಭರವಸೆ ನೀಡಿದಿದ್ದರೆ ರೈತರು ಬೆಳೆ ಬದಲಾಯಿಸಲಾರರು.

ಕೇಂದ್ರ ದಾಸ್ತಾನು ವ್ಯವಸ್ಥೆಯಲ್ಲಿ ಪಂಜಾಬ್ ಅಗ್ರಗಣ್ಯ ಕೊಡುಗೆ ನೀಡುವ ರಾಜ್ಯವಾಗಿದ್ದರೂ, ಪಾಲು ಕಡಿಮೆಯಾಗುತ್ತಲೇ ಇದೆ. 2007-08ರಿಂದ 2010-11ರ ಅವಧಿಯಲ್ಲಿ, ಗೋಧಿ ಹಾಗೂ ಅಕ್ಕಿಯ ಪಾಲು ಶೇ.60.9 ಹಾಗೂ 45.4ರಿಂದ 27.8 ಹಾಗೂ 25.3 ಶೇ.ಪ್ರಮಾಣಕ್ಕೆ ಇಳಿದಿದೆ. ಹಾಲಿ ಪಾಲು ಕ್ರಮವಾಗಿ ಶೇ.43 ಹಾಗೂ 29ರಷ್ಟಿದೆ. ರಾಜ್ಯ ಅಗ್ರಸ್ಥಾನಿಯಾಗಿಯೇ ಮುಂದುವರಿಯಬೇಕಾದರೆ, ರಾಜ್ಯ ತನ್ನ ಬೆಳೆಯನ್ನು ವೈವಿಧ್ಯಗೊಳಿಸಬೇಕು ಹಾಗೂ ಜಲಮೂಲವನ್ನು ಮತ್ತಷ್ಟು ಶೋಷಿಸದಂತೆ ತಡೆಯಬೇಕು.

Writer - ನಿಧಿ ಜಮ್ವಾಲ್

contributor

Editor - ನಿಧಿ ಜಮ್ವಾಲ್

contributor

Similar News