ಅರಿಯಲು ಓದಿರಿ

Update: 2016-12-10 16:12 GMT

ಓದುವಿಕೆ ಒಂದು ನಿರಂತರವಾದಂತಹ ಚಟುವಟಿಕೆ ಎಂಬುದನ್ನು ಮಕ್ಕಳಿಗೆ ಮನಗಾಣಿಸಬೇಕಾದರೆ ಮನೆಯಲ್ಲಿ ದೊಡ್ಡವರು ಅವರಿಗೆ ಅಂತಹ ಮಾದರಿಗಳನ್ನು ಕಟ್ಟಿಕೊಡಬೇಕು. ಇದು ಸಾಧ್ಯವಾಗುವುದು ಮೂರು ಅಂಶಗಳಿಂದ. ಒಂದು, ಅವರ ಮುಂದೆ ದೊಡ್ಡವರು ಓದುವ ಮೂಲಕ ಜೀವಂತ ಉದಾಹರಣೆ ಮತ್ತು ಪ್ರೇರಣೆಯಾಗಿರಬೇಕು. ಮತ್ತೊಂದು, ಶಾಲೆಯ ಪುಸ್ತಕಗಳಲ್ಲದೇ ಅವರು ಓದುವಂತಹ ಬೇರೆ ಪುಸ್ತಕಗಳನ್ನು ಒದಗಿಸಬೇಕು. ಮಗದೊಂದು, ಮಕ್ಕಳ ಭಾಷೆಯ ಕಲಿಕೆಯ ಬಗ್ಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಗಮನ ಹರಿಸಬೇಕು.

ಎಲ್ಲವನ್ನೂ ಓದಲಿ

ಓದುವ ಸಮಯ ಎಂದು ಪೋಷಕರಿಗೆ ಅನ್ನಿಸುವುದು ಮಕ್ಕಳಿಗೆ ಪರೀಕ್ಷೆ ಬರುತ್ತಿದೆ ಎಂದಾಗಲೇ. ಹಾಗಾಗಿಯೇ ಅವರದೇ ಮಾದರಿಗಳನ್ನು ಮಕ್ಕಳೂ ಕೂಡ ಅನುಸರಿಸುವುದು. ಶಾಲೆಯಿಂದ ಬಂದ ಮೇಲೆ ಓದಿಕೋ ಅಥವಾ ಬರೆದುಕೋ ಎಂದರೆ ಏನೂ ಹೋಂ ವರ್ಕ್ ಕೊಟ್ಟಿಲ್ಲ ಎಂದು ಮಕ್ಕಳು ಹೇಳುವರು. ಅದೇ ರೀತಿ, ಅಧ್ಯಯನಕ್ಕೆ ತೊಡಗಿಸುವ ಎಂದರೆ, ಈಗ್ಯಾವ ಪರೀಕ್ಷೆ ಅಥವಾ ಘಟಕ/ಕಿರು ಪರೀಕ್ಷೆಗಳೂ ಇಲ್ಲ ಏತಕ್ಕೆ ಓದಬೇಕು ಎಂಬ ಪ್ರಶ್ನೆ ಅವರಿಂದ ಬರುತ್ತದೆ.

ಓದುವಿಕೆ ಒಂದು ನಿರಂತರವಾದಂತಹ ಚಟುವಟಿಕೆ ಎಂಬುದನ್ನು ಮಕ್ಕಳಿಗೆ ಮನಗಾಣಿಸಬೇಕಾದರೆ ಮನೆಯಲ್ಲಿ ದೊಡ್ಡವರು ಅವರಿಗೆ ಅಂತಹ ಮಾದರಿಗಳನ್ನು ಕಟ್ಟಿಕೊಡಬೇಕು. ಇದು ಸಾಧ್ಯವಾಗುವುದು ಮೂರು ಅಂಶಗಳಿಂದ. ಒಂದು, ಅವರ ಮುಂದೆ ದೊಡ್ಡವರು ಓದುವ ಮೂಲಕ ಜೀವಂತ ಉದಾಹರಣೆ ಮತ್ತು ಪ್ರೇರಣೆಯಾಗಿರಬೇಕು. ಮತ್ತೊಂದು, ಶಾಲೆಯ ಪುಸ್ತಕಗಳಲ್ಲದೇ ಅವರು ಓದುವಂತಹ ಬೇರೆ ಪುಸ್ತಕಗಳನ್ನು ಒದಗಿಸಬೇಕು. ಮಗದೊಂದು, ಮಕ್ಕಳ ಭಾಷೆಯ ಕಲಿಕೆಯ ಬಗ್ಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಗಮನ ಹರಿಸಬೇಕು.

ನಾವು ಸಣ್ಣವರಿದ್ದಾಗ ಅಂಗಡಿಯಲ್ಲಿ ವಾರ್ತಾಪತ್ರಿಕೆಗಳನ್ನು ಹರಿದು ಅದರಲ್ಲಿ ಪೊಟ್ಟಣಗಳನ್ನು ಕಟ್ಟಿಕೊಡುತ್ತಿದ್ದರು. ಆಗ ನಮ್ಮ ಮನೆಯ ಹಿರಿಯರು ಪೊಟ್ಟಣ ಬಿಡಿಸಿದ ಮೇಲೆ ಅದನ್ನು ಬಿಡದೇ ಓದಿಯೇ ತೀರುತ್ತಿದ್ದರು. ಕೆಲವೊಮ್ಮೆ ತುಂಬಾ ಸ್ವಾರಸ್ಯಕರ ಸಂಗತಿಗಳಿದ್ದಲ್ಲಿ ಜೊತೆಯಲ್ಲಿರುವವರ ಜೊತೆಗೆ ಹಂಚಿಕೊಳ್ಳುತ್ತಿದ್ದರು. ನಮಗೂ ಅದೇ ಅಭ್ಯಾಸ ಮುಂದುವರಿಯಿತು. ಬೋಂಡಾ, ವಡೆ ಪೊಟ್ಟಣ ಬಿಡಿಸಿದ ಮೇಲೆ ತಿನ್ನುತ್ತಲೇ ಪೊಟ್ಟಣದ ಕಾಗದವನ್ನು ಓದುತ್ತಿದ್ದೆವು.

ಈಗ ಆ ಅವಕಾಶವಿಲ್ಲ. ಆದರೆ ಮನೆಗೆ ಬರುವ ಪತ್ರಿಕೆಗಳ ಜೊತೆ, ಅಥವಾ ಗೇಟಿಗೆ ಸಿಕ್ಕಿಸಿ ಹೋಗುವ ಜಾಹಿರಾತುಗಳು, ಭಿತ್ತಿಪತ್ರಗಳು ಒಂದಲ್ಲಾ ಒಂದು ಕರಪತ್ರಗಳು ಕೈಗಟುಕುತ್ತಿರುತ್ತವೆ. ಅವು ಮಕ್ಕಳ ಕೈಗೂ ಎಟುಕಬೇಕು. ಅಷ್ಟೇ ಅಲ್ಲದೇ ಬಿಸ್ಕೆಟ್ ಅಥವಾ ಚಾಕೋಲೆಟ್ ಪೊಟ್ಟಣಗಳ ಮೇಲೂ ಬರವಣಿಗೆಗಳಿದ್ದು ಅವುಗಳನ್ನು ಓದಲು ಪ್ರೋತ್ಸಾಹಿಸಬೇಕು. ಬರವಣಿಗೆ ಕಂಡ ಕಡೆಗಳಲೆಲ್ಲಾ ಓದುವಂತಹ ಹವ್ಯಾಸವೇನೂ ತಮಾಷೆಯದ್ದಲ್ಲ. ಬದಲಿಗೆ ಅದು ಮಕ್ಕಳ ತಿಳುವಳಿಕೆಗೆ ಬಹು ದೊಡ್ಡದಾದಂತಹ ಕಾಣ್ಕೆಯನ್ನು ನೀಡುವುದನ್ನು ನಾವು ನೋಡುತ್ತೇವೆ. ಗಮನಿಸುವಿಕೆ, ಗ್ರಹಿಸುವಿಕೆ ಮತ್ತು ವಿಷಯ ಸಂಗ್ರಹಣೆ ಮುಖ್ಯವಾದ ಫಲಗಳು.

ಓದುವುದು ಮತ್ತು ತಿಳಿಯುವುದು


ಮಕ್ಕಳಿಗೆ ಓದುವುದು ಅದರಲ್ಲೂ ವೇಗವಾಗಿ ಓದುವುದನ್ನೂ ಮತ್ತು ಹಾಗೆಯೇ ಓದಿದ್ದನ್ನು ತಿಳಿಯುವುದನ್ನೂ ಅಭ್ಯಾಸ ಮಾಡಿಸಲು ಕೆಲವು ತಂತ್ರಗಳಿವೆ. ಅವು ಆಟಗಳ ರೀತಿಯಲ್ಲಿರುವ ಚಟುವಟಿಕೆಗಳಾಗಿಯೂ ಇದ್ದು ಓದುವಿಕೆಯನ್ನು ಚುರುಕುಗೊಳಿಸಲು ಉತ್ತಮವಾದ ತಂತ್ರಗಳಾಗಿವೆ.

1.ಪೋಸ್ಟ್ ಕಾರ್ಡ್ ಗಳ ಅಳತೆಯ ವಿವಿಧ ಬಣ್ಣಗಳ ಕೆಜಿ ಕಾರ್ಡ್ ಬೋರ್ಡ್‌ಗಳಿಂದ ಕಾರ್ಡುಗಳನ್ನು ತಯಾರು ಮಾಡಿಕೊಳ್ಳುವುದು. ಒಂದೊಂದು ಕಾರ್ಡಿನ ಮೇಲೆ ಒಂದೊಂದು ವಾಕ್ಯವನ್ನು ಬರೆಯುವುದು. ಆ ವಾಕ್ಯಗಳು ಸರಳವಾಗಿದ್ದು ಮಕ್ಕಳಿಗೆ ಉಪಯುಕ್ತವಾಗಿರುವುದಾಗಿರಲಿ. ನಂತರ ಅದೇ ರೀತಿ ವಿವಿಧ ವಾಕ್ಯಗಳನ್ನು ವಿವಿಧ ಬಣ್ಣದ ಕಾರ್ಡುಗಳ ಮೇಲೆ ಬರೆಯುವುದು. ಅವುಗಳನ್ನು ಷಫಲ್ ಮಾಡುವುದು. ನಂತರ ಮಕ್ಕಳಿಗೆ ನಿಧಾನವಾಗಿ ಎಲ್ಲವನ್ನೂ ಒಂದಾದ ಮೇಲೊಂದರಂತೆ ಓದಿಸುವುದು. ಒಮ್ಮೆಗೆ ಒಂದೇ ಕಾರ್ಡ್ ಕಾಣುವಂತೆ ಎಲ್ಲವನ್ನೂ ನೀಟಾಗಿ ಒಂದರ ಹಿಂದೊಂದರಂತೆ ಜೋಡಿಸಿಟ್ಟಿಕೊಂಡಿರಬೇಕು.

ನಂತರ ಬದಲಿಸುತ್ತಾ ಓದಿಸುತ್ತಾ ಹೋಗಬೇಕು. ಒಮ್ಮೆ ಪೂರ್ತಿ ಓದಿದ ನಂತರ ಅವುಗಳ ಕ್ರಮವು ವ್ಯತ್ಯಾಸವಾಗುವಂತೆ ಮತ್ತೆ ಷಫಲ್ ಮಾಡಬೇಕು. ಈಗ ಓದಿಸುವಾಗ ಮೊದಲಿನಷ್ಟು ನಿಧಾನವಾಗಿ ಕಾರ್ಡು ಬದಲಿಸಬಾರದು. ವೇಗವನ್ನು ಹೆಚ್ಚಿಸಬೇಕು. ಮಗುವೂ ಕೂಡ ತನ್ನ ಓದುವಿಕೆಯ ವೇಗವನ್ನು ಹೆಚ್ಚಿಸಬೇಕಾಗುತ್ತದೆ. ಹೀಗೆ ನಾಲ್ಕೈದು ವೇಗಗಳಲ್ಲಿ ಕಾರ್ಡುಗಳನ್ನು ಬದಲಾಯಿಸುತ್ತಾ ಮಕ್ಕಳ ಓದುವಿಕೆಯ ವೇಗವನ್ನು ಹೆಚ್ಚಿಸಬೇಕು. ಈ ಮಧ್ಯೆ ಬರಿದೇ ಕೇಳಿ ಓದುವುದು ಅರ್ಥವಾಗುತ್ತಿದೆಯೋ ಇಲ್ಲವೋ ಎಂದು. ಅವರನ್ನು ಕಠಿಣವಾಗಿ ಪರೀಕ್ಷಿಸುವಂತೆ ಕೇಳಬೇಡಿ. ಇದು ಬರಿಯ ಸಣ್ಣ ವಿಚಾರಣೆಯಾಗಿರಲಿ. ಅರ್ಥವಾಗಲಿಲ್ಲ ಅಂದರೆ, ಅರ್ಥ ತಿಳಿಸಿ ಮತ್ತೆ ಓದುವಿಕೆಯ ಆಟವನ್ನು ಮುಂದುವರಿಸಿ. ಈ ರೀತಿಯಲ್ಲಿ ವೇಗವನ್ನು ಹೆಚ್ಚಿಸಿ ಓದಿಸುವುದರಿಂದ ಅದು ಆಟದ ರೀತಿಯಲ್ಲಿ ತೋರುತ್ತದೆ.


2.ಪಾಠಗಳ ಕೊನೆಯಲ್ಲಿ ನೆನಪಿನಲ್ಲಿಡುವ ಅಂಶಗಳು ಇದ್ದರೆ ಅದನ್ನು ಮೊದಲು ಓದಿಸಿ. ಅಂಶಗಳ ರೀತಿಯಲ್ಲಿರುವ ವಿಷಯಗಳನ್ನು ಓದಿದ್ದೇ ಆದರೆ, ನಂತರ ಓದುವಾಗ ವಿವರಣೆಗಳೊಂದಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ವೇಳೆ ಮಗುವು ಓದುವ ಪಾಠದ ಕೊನೆಯಲ್ಲಿ ನೆನಪಿನಲ್ಲಿಡಬೇಕಾಗಿರುವ ಅಂಶಗಳು ಇಲ್ಲದೇ ಹೋದ ಪಕ್ಷದಲ್ಲಿ ಶಿಕ್ಷಕರು ಅಥವಾ ಪೋಷಕರು ತಾವೇ ಒಂದಷ್ಟು ಬರೆದರೆ ಒಳ್ಳೆಯದು. ಒಂದು ವೇಳೆ ಅಷ್ಟಕ್ಕೆ ನಿಮಗೆ ಸಮಯವು ದೊರಕದೇ ಇದ್ದ ಪಕ್ಷದಲ್ಲಿ, ಪಾಠದ ಕೊನೆಯಲ್ಲಿ ಇರುವ ಪ್ರಶ್ನೆಗಳನ್ನು ಓದಿಸಿ. ಪ್ರಶ್ನೆಗಳು ಏನನ್ನು ಕೇಳುತ್ತಿವೆ ಎಂಬುದನ್ನು ಗಮನಿಸುವಂತೆ ಪ್ರೋತ್ಸಾಹಿಸಿ. ನಂತರ ಪಾಠವನ್ನು ಓದುವಾಗ ಆ ಪ್ರಶ್ನೆಗಳು ನೆನಪಿಗೆ ಬರುತ್ತವೆ ಮತ್ತು ಉತ್ತರಗಳೂ ಕೂಡ ತಿಳಿಯುತ್ತವೆ.


 3.ಪೋಷಕರು ಅಥವಾ ಶಿಕ್ಷಕರು ಅಥವಾ ಹಿರಿಯ ಮಕ್ಕಳು ಆ ಪಾಠವನ್ನು ಓದಿದ್ದೇ ಆಗಿದ್ದರೆ ಪಾಠದಲ್ಲಿ ಏನಿದೆ ಎಂದು ಸಂಕ್ಷಿಪ್ತವಾಗಿ ಬರಿಯ ಮಾತುಗಾರಿಕೆಯಲ್ಲಿ ಹೇಳುವುದು ಕೂಡ ಒಂದು ಉತ್ತಮವಾದ ಅಭ್ಯಾಸವೇ ಆಗುತ್ತದೆ. ಏಕೆಂದರೆ ಸಂಕ್ಷಿಪ್ತವಾಗಿ ತಿಳಿದುಕೊಂಡಿರುವ ವಿಷಯಗಳನ್ನು ವಿವರಣೆಗಳ ಮೂಲಕ ಮತ್ತೆ ತಿಳಿಯುವುದು ಮಕ್ಕಳಿಗೆ ಓದುವಿಕೆಯ ಮೂಲಕ ಅರಿಯುವ ಅಭ್ಯಾಸಕ್ಕೆ ಸಹಾಯವಾಗುತ್ತದೆ.


 4.ಬರಿಯ ಒಂದು ಅಥವಾ ಎರಡು ಸಾಲುಗಳನ್ನು ಓದುವುದು ಅದನ್ನು ಗಟ್ಟಿ ಮಾಡುವುದು ಅಥವಾ ಬಾಯಿಪಾಠ ಮಾಡುವುದು ಒಳ್ಳೆಯ ಅಭ್ಯಾಸವಲ್ಲ. ಪಾಠ ಚಿಕ್ಕದಾಗಿದ್ದರೆ ಇಡೀ ಪಾಠವನ್ನೇ ಒಮ್ಮೆಲೇ ಓದಿ ಮುಗಿಸುವುದು ಒಳ್ಳೆಯದು. ಒಂದು ವೇಳೆ ಪಾಠವು ದೊಡ್ಡದಾಗಿದ್ದ ಪಕ್ಷದಲ್ಲಿ ಒಂದೊಂದು ಪುಟಗಳೋ ಅಥವಾ ಪ್ಯಾರಾಗಳನ್ನೋ ಸಂಪೂರ್ಣ ಓದಿ, ಅದರಲ್ಲಿ ಏನಿದೆ ಎಂಬುದನ್ನು ಮಕ್ಕಳಿಗೆ ಬರಿದೇ ತಿಳಿಸುವುದು. ನಂತರ ಅವರು ತಾವು ತಿಳಿದುಕೊಂಡಿರುವುದನ್ನು ಮತ್ತೆ ನಮಗೆ ಅವರದೇ ಭಾಷೆಯಲ್ಲಿ ಹೇಳುವುದು. ನಂತರ ಅದನ್ನು ಬರವಣಿಗೆಯ ರೂಪದಲ್ಲಿ ದಾಖಲಿಸುವುದನ್ನು ಹೇಳಿಕೊಡಬೇಕು.

ಗ್ರಾಂಥಿಕವಾದ ರೀತಿಯಲ್ಲಿಯೇ ಮಕ್ಕಳು ಅದನ್ನು ಹೇಳಬೇಕೆಂದು ಬಯಸುವುದು ಬಹಳ ತಪ್ಪು ಹಾಗೂ ತೀರಾ ಅವೈಜ್ಞಾನಿಕ. ಮಕ್ಕಳು ತಮ್ಮದೇ ಆದಂತಹ ಭಾಷೆಯಲ್ಲಿ ಅದೇನು ತಿಳಿದುಕೊಳ್ಳುತ್ತಾರೋ ಅದನ್ನು ಹೇಳುವುದನ್ನು ಕಲಿಯಲಿ. ನಂತರ ಅದನ್ನು ದಾಖಲಿಸಲು ಕಾಗುಣಿತ ಮತ್ತು ವ್ಯಾಕರಣದ ನೆರವನ್ನು ಪಡೆಯಲು ಯತ್ನಿಸಲಿ. ದಾಖಲಿಸಿರುವುದನ್ನು ಮರು ದಾಖಲಿಸುವುದು ಅಲ್ಲ ಓದಿನ ಗುರಿ. ಬದಲು ತಾವು ಅದನ್ನು ಅರಿಯುವುದು. ಈ ವಿಷಯವನ್ನು ಪೋಷಕರು ಮತ್ತು ಶಿಕ್ಷಕರು ಗಮನದಲ್ಲಿಟ್ಟುಕೊಂಡಿರಬೇಕು.


5.ಅದೇ ರೀತಿ ಒಮ್ಮಿಂದೊಮ್ಮೆಲೇ ದೊಡ್ಡ ದೊಡ್ಡ ಪ್ಯಾರಾಗಳನ್ನೂ ಅವರಿಗೆ ತಿಳಿಸಲು ಒತ್ತಾಯ ತರಬಾರದು. ಏನೇ ಆಗಲಿ, ಮಗುವಿನ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಈ ಅಭ್ಯಾಸಗಳನ್ನು ಮಾಡಿಸಬೇಕು. ವಿಷಯದ ಬಿಗಿತ ಅಥವಾ ಹಗುರತೆಗಳನ್ನೂ ಕೂಡ ಗಮನದಲ್ಲಿಟ್ಟುಕೊಂಡಿರಬೇಕು. ಓದುವಿಕೆಯು ಆಯಾಸಗೊಳಿಸುವಂತಾಗದೇ ಆಟದ ಚಟುವಟಿಕೆಗಳಿಂದ ಕೂಡಿರುವಂತೆ ಇರಬೇಕು. ಓದುವಿಕೆಯ ಪ್ರಮಾಣಗಳನ್ನು ಹಂತ ಹಂತವಾಗಿ ಹೆಚ್ಚಿಸಿಕೊಂಡು ಹೋಗುವುದು ಒಳಿತು.


 6.ತುಂಬಾ ವೇಗವಾಗಿ ಓದುವುದರಿಂದ ಏನನ್ನೂ ಗ್ರಹಿಸಲಾಗದೇ ಹೋಗಬಹುದು. ಹಾಗೆಯೇ ಮಂದಗತಿಯ ಓದುವಿಕೆಯಿಂದ ಚುರುಕುತನವಿಲ್ಲದೆ ಓದುವಿಕೆಯಲ್ಲಿ ಮಗುವು ಆಸಕ್ತಿಯೇ ಕಳೆದುಕೊಳ್ಳಬಹುದು. ಆದ್ದರಿಂದ ಹದವರಿತ ಓದುವಿಕೆಯ ವೇಗಕ್ಕೆ ಮಕ್ಕಳನ್ನು ರೂಢಿಗೊಳಿಸುವ ಮುನ್ನ ಮಗುವಿನ ಅಭಿರುಚಿ ಮತ್ತು ಸ್ವಭಾವ ಹಾಗೂ ಅದರ ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.


7.ಓದುವಿಕೆಯ ವೇಗವು ಮಕ್ಕಳಿಗೆ ರೂಢಿಗೆಂದೇ ಹೊರತು, ಅವರು ಓದುತ್ತಿರುವುದನ್ನು ಗ್ರಹಿಸುತ್ತಿದ್ದಾರೋ ಇಲ್ಲವೋ ಎಂಬುದು ಅಲ್ಲಿ ಮುಖ್ಯವಾಗಿರುವುದು. ಹಾಗಾಗಿ ಅವರು ಓದುವುದನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಓದಿಸುವವರು ಗಮನದಲ್ಲಿಟ್ಟುಕೊಳ್ಳಬೇಕು.
    
8.ಮಗುವು ಓದಿದ ಕೂಡಲೇ, ಯಾವುದೇ ಗತಿಯಲ್ಲಿ ಓದಿರಲಿ, ಅದಕ್ಕೆ ತನ್ನ ಓದುವಿಕೆಯಿಂದ ಏನು ತಿಳಿದಿದೆ, ಏನು ಗ್ರಹಿಸಿದೆ ಎಂಬುದನ್ನು ಕೇಳಿ ತಿಳಿಯಬೇಕು. ಒಂದು ವೇಳೆ ತಿಳಿಯುವಿಕೆಯು ಸಮರ್ಪಕವಾಗಿಲ್ಲದ ಪಕ್ಷದಲ್ಲಿ ತಿಳಿಸಿ ಹೇಳಬೇಕು. ಸಮಯದ ಅವಕಾಶವಿದ್ದರೆ ಮತ್ತೆ ಓದಿಸಬೇಕು. ಓದುವ ವೇಗಕ್ಕೆ ಅರಿಯುವ ವೇಗವೂ ಜೊತೆಯಾಗುವುದೇ ಇಲ್ಲವೇ ಎಂಬುದನ್ನು ಅತ್ಯಗತ್ಯವಾಗಿ ಗಮನಿಸಲೇ ಬೇಕು. ಮಗುವಿಗೆ ಎಲ್ಲಿಯೋ ಒಂದು ಕಡೆ ತಿಳಿಯಲಿಲ್ಲವೆಂದರೆ ನಾವೇ ತಿಳಿಸುವ ಧಾವಂತ ತೋರದೇ ಮತ್ತೆ ಓದಿಸಿ ತಿಳಿಯಿತೇ ಎಂಬುದನ್ನು ನೋಡಬೇಕು.

9.ಸಾಮಾನ್ಯವಾಗಿ ನಾನು ಗಮನಿಸುವಂತೆ ಪೋಷಕರಿಗೆ ಅಥವಾ ಶಿಕ್ಷಕರಿಗೆ ಮಗುವು ಯಥಾವತ್ತಾಗಿ ಹೇಳಿಬಿಟ್ಟರೆ ಸಾಕು ಎಂಬಂತಹ ಧೋರಣೆಯನ್ನು ಹೊಂದಿರುತ್ತಾರೆ. ಅದೇ ಓದುವಿಕೆಯ ಮೊದಲ ಶತ್ರು. ಅಕ್ಷರ ರೂಪದಲ್ಲಿ ದಾಖಲಾಗಿರುವುದು ವೌಖಿಕವಾಗಿ ಪ್ರದರ್ಶಿಸಿದರೆ ಅದು ಅರಿವು ಅಲ್ಲ. ಅದು ತಿಳುವಳಿಕೆ ಅಲ್ಲ. ಮಕ್ಕಳು ತಮ್ಮ ಶಬ್ಧ ಭಂಡಾರವನ್ನು ಆಧರಿಸಿಕೊಂಡು, ತಮಗೆ ತಿಳಿದಿರುವ ಸಂಗತಿ ಅಥವಾ ವಿಷಯಗಳನ್ನು ಉದಾಹರಣೆಯಾಗಿ ನೀಡಿ ಮತ್ತೆ ಪ್ರಸ್ತುತ ಪಡಿಸುವುದನ್ನು ನೋಡಿ ಅವರಿಗೆ ಅರಿವಾಗಿದೆಯೇ ಇಲ್ಲವೇ ಎಂಬುದನ್ನು ನಾವು ಕಂಡು ಹಿಡಿಯಬೇಕು.

10.ಒಮ್ಮೆ ಪುಸ್ತಕವನ್ನು ಅಥವಾ ಪಾಠವನ್ನು ಸಂಪೂರ್ಣ ಓದಿ ಮುಗಿಸಿದ ಮೇಲೆ, ಅದನ್ನು ಅರಿತುಕೊಂಡ ಮೇಲೆ ಅದರಲ್ಲಿರುವ ವಿವರಣೆಗಳು ಯಾವುವು ಮತ್ತು ಮುಖ್ಯವಾದ ಅಂಶಗಳು ಯಾವುವು ಎಂದು ತಿಳಿದಿರುತ್ತದೆ. ಹಾಗಾಗಿ ಮರು ಓದುವಿಕೆಯಲ್ಲಿ ತೊಡಗುವಾಗ ವಿವರಣಾತ್ಮಕ ಅಂಶಗಳನ್ನು ಎಗರಿಸಬಹುದು. ಬರಿಯ ಅಂಶಗಳನ್ನು ಮಾತ್ರ ಮನನ ಮಾಡಬಹುದು. ಉದಾಹರಣೆಗಳನ್ನು ಬಿಟ್ಟು ಬಿಡಬಹುದು. ಅಗತ್ಯವಿರುವ ವಿಷಯಗಳನ್ನು ಪುನರಾವರ್ತಿತವಾಗಿ ಮನಸ್ಸಿಗೆ ತಂದುಕೊಳ್ಳುವುದರಿಂದ ಇತರ ವಿವರಣೆಗಳು, ಉದಾಹರಣೆಗಳು ತಾವಾಗೇ ನೆನಪಿಗೆ ಬರುತ್ತವೆ. ಇಂತಹ ಜುಡಿಶಿಯಲ್ ಸ್ಕಿಪ್ಪಿಂಗ್‌ನ ಕಲೆಯನ್ನು ಮಕ್ಕಳಿಗೂ ಕೂಡ ಅಭ್ಯಾಸ ಮಾಡಿಸುವುದರಿಂದ ಸಮಯವನ್ನು ಉಳಿಸಲು ಸಾಧ್ಯವಾಗುತ್ತದೆ.
    
 11.ಪಾಠದಲ್ಲಿರುವ ಅಪರೂಪದ ಮತ್ತು ಅಗತ್ಯ ಪದಗಳನ್ನು ಮೊದಲೇ ಪರಿಚಯಿಸುವುದರಿಂದಲೂ ಮಕ್ಕಳಿಗೆ ಓದುವಿಕೆಯನ್ನು ಸರಾಗಗೊಳಿಸಲು ಸಾಧ್ಯವಾಗುತ್ತದೆ. ಕೆಲವು ಪದಗಳನ್ನು ನಿತ್ಯ ಜೀವನದಲ್ಲಿ, ಆಡು ಮಾತಿನಲ್ಲಿ ಉಪಯೋಗಿಸದ ಕಾರಣ ಅವುಗಳ ಪರಿಚಯವಿರುವುದಿಲ್ಲ. ಅಪರಿಚಿತ ಪದಗಳು ಧುತ್ತೆಂದು ಎದುರಾದಾಗ ಮಕ್ಕಳಿಗೆ ಓದುವಿಕೆಯಲ್ಲಿ ತೊಡಕುಂಟಾಗುತ್ತದೆ. ಆದ್ದರಿಂದಲೇ ಭಾಷೆಯನ್ನು ಕಲಿಸುವ ಶಿಕ್ಷಕರು ಮೊದಲು ಪದಗಳನ್ನು ಪರಿಚಯಿಸುವುದು. ಪದಗಳನ್ನು ಚೆನ್ನಾಗಿ ಉದಾಹರಣೆಗಳ ಸಮೇತ ಪರಿಚಯಿಸಿದ ಮೇಲೆ ಓದುವಿಕೆಯಲ್ಲಿ ತೊಡಕಾಗದಂತೆ ಅವುಗಳನ್ನು ಬಳಸುವ ಸಾಮರ್ಥ್ಯ ಮಕ್ಕಳಿಗಿರುತ್ತದೆ.

12.ಪದ ಸಂಪತ್ತನ್ನು ಹೆಚ್ಚಿಸುವ ಅಥವಾ ಶಬ್ಧ ಭಂಡಾರವನ್ನು ವಿಸ್ತರಿಸುವ ಅಗತ್ಯವು ಮಕ್ಕಳ ವಿಷಯದಲ್ಲಿ ಬಹಳ ಮುಖ್ಯವಾದುದು. ವಿವಿಧ ಪದಗಳನ್ನು ಅವರು ಕಲಿತಿದ್ದರೆ ಮಾತ್ರ ಉಚಿತ ಪದಗಳನ್ನು ವಾಕ್ಯಗಳಲ್ಲಿ ಪ್ರಯೋಗಿಸಲು ಸಾಧ್ಯ. ಅದೇ ಒಂದು ಪ್ರತ್ಯೇಕ ಅಧ್ಯಯನದ ವಿಷಯ ಅದನ್ನು ಮುಂದೆ ನೋಡೋಣ.


    

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News