ಉತ್ತರ ಪ್ರದೇಶದ ಪ್ರಶ್ನೆಗಳು
ಉತ್ತರ ಪ್ರದೇಶದ ಪ್ರಶ್ನೆಗಳು ಉತ್ತರ ಸಿಗದಷ್ಟು ಕಠಿಣವಲ್ಲ, ಹಾಗೆಯೇ ಮೇಲ್ನೋಟಕ್ಕೆ ಗೋಚರಿಸುವಷ್ಟು ಸರಳವೂ ಅಲ್ಲ. ಜನರು ಜೀನಿಯಸ್‌ಗಳಲ್ಲದಿರಬಹುದು ಆದರೆ ಅಂದುಕೊಂಡಷ್ಟು ಮೂರ್ಖರೂ ಅಲ್ಲ. ಒಟ್ಟಿನಲ್ಲಿ ಉತ್ತರ ಪ್ರದೇಶದ ಪ್ರಶ್ನೆಗಳಿಗೆ ಉತ್ತರಿಸುವಷ್ಟು ಬುದ್ಧಿವಂತಿಕೆ ಖಂಡಿತ ಉತ್ತರ ಪ್ರದೇಶದ ಜನತೆಗೆ ಇದೆ ಎಂಬ ಆಶಯ ಸುಳ್ಳಾಗದಿರಲಿ.
ಫ್ರೆಂಚ್ ಚಕ್ರವರ್ತಿ ನೆಪೋಲಿಯನ್ ಬಗ್ಗೆ ಎಲ್ಲರೂ ಕೇಳಿದ್ದೇವೆ. ಈ ನೆಪೋಲಿಯನ್ ಚಕ್ರವರ್ತಿಯ ಸೋದರಳಿಯ ಲೂಯಿಸ್ ನೆಪೋಲಿಯನ್ ಬಗ್ಗೆ ಹೆಚ್ಚು ಜನರಿಗೆ ಗೊತ್ತಿರಲಿಕ್ಕಿಲ್ಲ. ಈ ಲೂಯಿಸ್ ನೆಪೋಲಿಯನ್ 1851ರಲ್ಲಿ ಫ್ರೆಂಚ್ ಕ್ರಾಂತಿಯ ನಂತರದಲ್ಲಿ ಸ್ಥಾಪಿತವಾಗಿದ್ದ ಫ್ರಾನ್ಸ್ ದೇಶದ ಶಾಸಕಾಂಗವನ್ನು ವಿಸರ್ಜಿಸಿದ ವ್ಯಕ್ತಿ. ಅಂದಿನ ಶಾಸಕಾಂಗ ವ್ಯವಸ್ಥೆಯಲ್ಲಿ ಕೆಲವೇ ಜನರಿಗೆ ಮತದಾನದ ಹಕ್ಕಿತ್ತು. ಈ ಹಕ್ಕನ್ನು ಎಲ್ಲ ಪ್ರಜೆಗಳಿಗೂ ಕೊಡಿಸಲು ತಾನು ಸರ್ವಾಧಿಕಾರ ಸ್ಥಾಪನೆಯನ್ನು ಮಾಡಿದ್ದಾಗಿ ಲೂಯಿಸ್ ನೆಪೋಲಿಯನ್ ಜನರನ್ನು ನಂಬಿಸುತ್ತಾನೆ. ನೀವು ಗಮನಿಸಿ, ಇತಿಹಾಸದುದ್ದಕ್ಕೂ ಎಲ್ಲ ಸರ್ವಾಧಿಕಾರಿಗಳೂ ತಮ್ಮ ಸರ್ವಾಧಿಕಾರವನ್ನು ಸಮರ್ಥಿಸಿಕೊಳ್ಳಲು ಯಾವುದಾದರೊಂದು ಬಲವಾದ ‘ಜನಪರ’ ಕಾರಣ ಕೊಡುತ್ತಾರೆ. ಜನ ಅದನ್ನು ನಂಬುತ್ತಾರೆ.
ವಿಶ್ವವನ್ನು ಒಂದೇ ಚಕ್ರಾಧಿಪತ್ಯದಡಿ ತಂದರೆ ವಿಶ್ವ ಬ್ರಾತೃತ್ವ ಸ್ಥಾಪನೆಯಾಗುತ್ತದೆ ಎಂದು ಎಲ್ಲ ಸರ್ವಾಧಿಕಾರಿಗಳು ಜನತೆಯನ್ನು ಮತ್ತು ಸೇನೆಯನ್ನು ನಂಬಿಸುತ್ತಿದ್ದರು. ತನ್ನ ಅಧಿಕಾರದಾಸೆಯನ್ನು ಮರೆಮಾಚಿ ಈ ರೀತಿಯ ಒಂದು ತತ್ವಜ್ಞಾನವನ್ನು ಮುಂದಿಟ್ಟರೆ ಜನ ಅದನ್ನು ನಂಬುತ್ತಾರೆ. ವಿಶ್ವವನ್ನು ಆಕ್ರಮಿಸಲು ತನ್ನ ಚಿಕ್ಕಪ್ಪ ಕೊಟ್ಟ ಕಾರಣದಷ್ಟೇ ಉದಾತ್ತ ಕಾರಣವನ್ನು ಕೊಟ್ಟು ಅಧಿಕಾರಕ್ಕೆ ಬಂದ ಸರ್ವಾಧಿಕಾರಿ ಈ ಲೂಯಿಸ್ ನೆಪೋಲಿಯನ್ ಬಗ್ಗೆ ‘The Eighteenth Brumaire of Louis Napoleon’ ಎಂಬ ಅತ್ಯಂತ ಪ್ರಬುದ್ಧ ಮತ್ತು ಆಸಕ್ತಿಕರವಾದ ಪ್ರಬಂಧವೊಂದನ್ನು ಬರೆದವರು ಕಾರ್ಲ್ ಮಾರ್ಕ್ಸ್. ಈ ಪ್ರಬಂಧದಲ್ಲಿ ಮಾರ್ಕ್ಸ್ ಒಂದು ವಿಶ್ವಪ್ರಸಿದ್ಧ ಮಾತನ್ನು ಹೇಳಿದ್ದಾರೆ.
"Hegel remarks somewhere that all great world-historic facts and personages appear, so to speak, twice. He forgot to add: the first time as tragedy, the second time as farce."
(ಹೆಗೆಲ್ ಒಂದು ಕಡೆ ಹೇಳುತ್ತಾರೆ. ವಿಶ್ವಚರಿತ್ರೆಯ ಘಟನೆಗಳು ಮತ್ತು ವ್ಯಕ್ತಿತ್ವಗಳು ಎರಡು ಬಾರಿ ಪ್ರಕಟವಾಗುತ್ತವೆಂದು. ಆದರೆ ಹೆಗೆಲ್ ಹೀಗೆ ಸೇರಿಸಲು ಮರೆತಿರಬಹುದು: ಒಂದು ಬಾರಿ ದುರಂತವಾಗಿ ಇನ್ನೊಂದು ಬಾರಿ ಪ್ರಹಸನವಾಗಿ)
ಉತ್ತರ ಪ್ರದೇಶದ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಹತ್ತು ವರ್ಷಗಳ ಹಿಂದೆ ನಮ್ಮ ಕರ್ನಾಟಕದಲ್ಲಿ ನಡೆದ ‘ದುರಂತ’ ನಾಟಕವೊಂದು ನೆನಪಿಗೆ ಬರುತ್ತದೆ. ಫೆಬ್ರವರಿ 2006ರ ಸುಮಾರಿಗೆ ಭಾಜಪದ ಸಖ್ಯದೊಂದಿಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದಾಗ ಮಾಜಿ ಪ್ರಧಾನಿ ದೇವೇಗೌಡರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ನಂತರದಲ್ಲಿ ನಡೆದ ಘಟನೆಗಳು ಎಲ್ಲರ ಮುಂದಿವೆ. ಇಂದು ಈ ದುರಂತ ಚರಿತ್ರೆ ಉತ್ತರಪ್ರದೇಶದಲ್ಲಿ ಒಂದು ನಾಟಕೀಯ ಪ್ರಹಸನವಾಗಿ ಮರುಪ್ರಕಟವಾಗಿದೆ.
ಫೆಬ್ರವರಿ 2012ರಲ್ಲಿ (ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದದ್ದು ಫೆಬ್ರವರಿ 2006ರಲ್ಲಿ ಎಂಬುದನ್ನು ಗಮನಿಸಿ) ಸಮಾಜವಾದಿ ಪಾರ್ಟಿ ಉತ್ತರ ಪ್ರದೇಶದಲ್ಲಿ ಬಹುಮತ ಪಡೆದಾಗ ಅದರ ರಾಷ್ಟ್ರೀಯ ಅಧ್ಯಕ್ಷರಾದ ಮುಲಾಯಂ ಸಿಂಗ್ ಯಾದವ್ ತಪ್ಪಿದರೆ ಅವರ ಕಿರಿಯ ಸೋದರ ಶಿವಪಾಲ್ ಸಿಂಗ್ ಯಾದವ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತ ಎಂದು ಎಲ್ಲರೂ ಭಾವಿಸಿದ್ದರು. ಎಲ್ಲ ರಾಜಕೀಯ ಪಂಡಿತರ ಲೆಕ್ಕಾಚಾರ ತಲೆಕೆಳಗೆ ಮಾಡಿದ ಮುಲಾಯಂ ತಮ್ಮ ಪುತ್ರ ಅಖಿಲೇಶರಿಗೆ ಪಟ್ಟ ಕಟ್ಟಿದರು. ಇದೇ ವೇಳೆ ಸೋದರ ಶಿವಪಾಲರಿಗೂ ನೀರಾವರಿ ಮತ್ತು ಪಿಡಬ್ಲ್ಯೂಡಿ ತರಹದ ಪ್ರಮುಖ ಖಾತೆಗಳನ್ನು ಕೊಟ್ಟು ಸಂತೈಸಿದರು.
ಎಲ್ಲ ಸರಿಯಾಗಿಯೇ ನಡೆದಿತ್ತು. ಆದರೆ ಕಳೆದ ಐದಾರು ತಿಂಗಳುಗಳಿಂದ ಸಾಕಷ್ಟು ಆಂತರಿಕ ಸಮಸ್ಯೆಗಳು ಉದ್ಭವಿಸಿದವು.
ಕೆಲವರು ಹೇಳುವಂತೆ ಈ ಎಲ್ಲ ವಿವಾದಕ್ಕೆ ಮೂಲ ಕಾರಣ ಅಮರ್ ಸಿಂಗ್ ಎನ್ನಲಾಗುತ್ತಿದೆ. ಮುಲಾಯಂರ ಎರಡನೇ ಪತ್ನಿ ಸಾಧನಾ ಗುಪ್ತಾ ಮತ್ತವರ ಮಗನನ್ನು ಮತ್ತು ಬೆಂಬಲಿಗರನ್ನು ಅಮರ್ ಸಿಂಗ್ ಅಖಿಲೇಶರ ಮೇಲೆ ಎತ್ತಿ ಕಟ್ಟುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ಪರಿವಾರದ ಆಂತರಿಕ ಕಲಹಕ್ಕೆ ಎಲ್ಲದಕ್ಕೂ ಮೂಲ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇದು ಭಾಗಶಃ ಸರಿಯಿರಬಹುದು. ಆದರೆ, ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ ಅಮರ್ ಸಿಂಗ್ ಸಮಾಜವಾದಿ ಪಾರ್ಟಿಯೊಳಗೆ ಮರುಸೇರ್ಪಡೆಯಾಗಿದ್ದು 2010ರಲ್ಲಿ. ಇದರ ನಂತರದಲ್ಲೇ ಅಖಿಲೇಶ್ ಮುಖ್ಯಮಂತ್ರಿಯಾಗಿದ್ದು. ಹಾಗಾಗಿ ಸಮಸ್ಯೆ ಇಷ್ಟು ಸರಳವಾಗಿಲ್ಲ. ಕೇವಲ ಒಂದು ಯಾದವ ಪರಿವಾರಗಳ ನಡುವಿನ ಸಮಸ್ಯೆಯಲ್ಲ. ಇಲ್ಲಿ ‘ಸಂಘ’ಟಿತವಾದ ದೊಡ್ಡ ‘ಪರಿವಾರ’ವೊಂದು ತನ್ನ ಛಾಯೆ ಬೀರಿದೆ.
ಇಂದು ನಡೆಯುತ್ತಿರುವ ಪ್ರಹಸನ ಮುಲಾಯಂ ಮತ್ತು ಅಖಿಲೇಶ್ ಜೊತೆ ಸೇರಿಕೊಂಡು ನಡೆಸುತ್ತಿರುವ ಒಂದು ಮಹಾನಾಟಕ ಎನ್ನಲಾಗುತ್ತಿದೆ.
ಒಂದು ವರದಿಯ ಪ್ರಕಾರ 2012ರಿಂದ ಪ್ರತಿ ತಿಂಗಳು ಸುಮಾರು 58 ಕೋಮು ಪ್ರಚೋದಕ ಘಟನೆಗಳು ಜರಗಿವೆ. 2013ರ ವರ್ಷ ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಕೋಮು ಗಲಭೆಗಳು ನಡೆದಿವೆ. ರಾಜ್ಯದ ಇಡೀ ಜನತೆ ಕೋಮು ಆಧಾರದ ಮೇಲೆ ಒಡೆದು ಹೋಗಿದೆ. ಮುಝಫ್ಫರ್ ನಗರದ ಗಲಭೆಗಳಿಂದ ಮೊದಲ್ಗೊಂಡು ಇಂದಿನವರೆಗೂ ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಸಣ್ಣ ದೊಡ್ಡ ಗಲಭೆಗಳು ಸರ್ವೇಸಾಮಾನ್ಯವೆನಿಸಿವೆ. ಆಡಳಿತ ಯಂತ್ರ ಪೂರ್ತಿಯಾಗಿ ವಿಫಲವಾಗಿದೆ. ರಾಜ್ಯದ ಜನತೆಗೆ ಶಾಂತಿ ಮತ್ತು ಸುಭಿಕ್ಷೆ ಬೇಕಾಗಿದೆ. ಈ ದಳ್ಳುರಿಯಿಂದ ಬೆಂದ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ನೋಟು ಅಮಾನ್ಯ ಸಹಾಯ ಮಾಡಿದರೆ ನಂತರದಲ್ಲಿ ಸಾಕಷ್ಟು ಮಟ್ಟಿಗೆ ಈ ಯಾದವೀ ಕಲಹ ಸಹಕಾರ ನೀಡಿದೆ. ದಿನವೂ ಜನತೆಗೆ ಪುಕ್ಕಟೆ ಮನೋರಂಜನೆ ದೊರೆತು, ತಮ್ಮ ಯಾವ ಪ್ರಮುಖ ಸಮಸ್ಯೆಗಳ ಕಡೆಗೂ ಗಮನಹರಿಸುವ ಯೋಚನೆಯೇ ಬರುತ್ತಿಲ್ಲ.
ಇಂತಹ ಸನ್ನಿವೇಶ ಭಾಜಪ ಮತ್ತು ಸಮಾಜವಾದಿ ಪಾರ್ಟಿಗೆ ಅತ್ಯಂತ ಸಹಾಯಕಾರಿ. ಆದ್ದರಿಂದಲೇ ಮುಲಾಯಂ ಮತ್ತು ಅಖಿಲೇಶ್ ಸೇರಿ ಭಾಜಪ ವಿರೋಧಿ ಮತಗಳನ್ನು ಒಡೆಯಲು ಸಂಚು ನಡೆಸಿ ಭಾಜಪಕ್ಕೆ ಸಹಕರಿಸುತ್ತಿದ್ದಾರೆ ಎಂದು ಅನೇಕರು ಭಾವಿಸುತ್ತಾರೆ.
ಇಂದು ಸಮಾಜವಾದಿ ಪಾರ್ಟಿಗೆ ತಾವು ಅಧಿಕಾರಕ್ಕೆ ಬರುವುದು ಅಸಾಧ್ಯವೆಂದು ಮನವರಿಕೆಯಾಗಿಬಿಟ್ಟಿದೆ. ಅಧಿಕಾರ ಕಳೆದುಕೊಂಡ ಮರುಕ್ಷಣವೇ ಸಿಬಿಐ ಬಲೆಗೆ ಬೀಳುವ ಬದಲು ಭಾಜಪದೊಂದಿಗೆ ಸಹಕರಿಸಿ ಬಹುಜನ ಸಮಾಜ ಪಾರ್ಟಿಯನ್ನು ಸೋಲಿಸಿ ಬಿಟ್ಟರೆ ಮೋದಿಯವರು ತಮ್ಮನ್ನು ಬಚಾವು ಮಾಡಬಹುದು ಎಂಬ ಲೆಕ್ಕಾಚಾರವೂ ಇದೆ. ಅಖಿಲೇಶ್ ಬಣ ಕಾಂಗ್ರೆಸ್ ಜೊತೆಗೆ ಹೋಗಲು ಮಾತುಕತೆ ನಡೆಸಿದ ನಾಟಕ ಮಾಡಿದ್ದು ಇದೇ ಕಾರಣದಿಂದ. ಅಖಿಲೇಶ್ ಕಾಂಗ್ರೆಸ್ ಜೊತೆ ಸೇರಿದರೆ ಮುಸ್ಲಿಮರಿಗೆ ಬಹುದೊಡ್ಡ ಗೊಂದಲ ಉಂಟಾಗುತ್ತದೆ. ತಾವು ಮುಲ್ಲಾ/ಮೌಲಾನಾ ಎಂದು ಗೌರವಿಸುವ ಮುಲಾಯಂ ಜೊತೆ ಸೇರಬೇಕೋ ಇಲ್ಲವೇ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಜೊತೆ ಸೇರಿರುವ ಅಖಿಲೇಶ್‌ರನ್ನು ಬೆಂಬಲಿಸಬೇಕೋ ಎಂದು ಗೊತ್ತಾಗದೇ ಮುಸ್ಲಿಮರು ಹೋಳಾಗಬೇಕು ಎಂಬುದೇ ಒಳ ಹುನ್ನಾರ. ಹಾಗೊಂದು ವೇಳೆ ಅಖಿಲೇಶ್ ಭಾಜಪದ ಜೊತೆ ನೇರ ಅಥವಾ ಪರೋಕ್ಷವಾಗಿ ಸೇರಿದರೂ ಮುಸ್ಲಿಮರು ಹೋಳಾಗುವುದು ಖಚಿತ. ಚಿನ್ಹೆಯಲ್ಲಿನ ಗೊಂದಲದಿಂದ ಇನ್ನಷ್ಟು ಗೋಜಲುಂಟಾದರೆ ಅದು ಬೋನಸ್. ಒಟ್ಟಿನಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ಹಿಂದೊಮ್ಮೆ ಹೇಳಿದಂತೆ ‘‘ಹಿಂದುತ್ವದ ರಾಜಕಾರಣವೆಂದರೆ-ಮುಸ್ಲಿಮರನ್ನು ಒಡೆಯುವುದು; ಹಿಂದುಗಳನ್ನು ಸಂಘಟಿಸುವುದು’’ ಇಷ್ಟೇ ಇದರ ಹಿಂದಿರುವ ಆಶಯ.
ಕೇವಲ ಆರೇಳು ಪ್ರತಿಶತದಷ್ಟಿರುವ ಯಾದವರು (ಅದರಲ್ಲೂ ಎಲ್ಲರೂ ಸಮಾಜವಾದಿ ಪಾರ್ಟಿಯಲ್ಲಿಲ್ಲ) ಮುಸ್ಲಿಂ ಸಮುದಾಯವನ್ನು ಕಾಪಾಡಬಲ್ಲರು ಎಂಬುದನ್ನು ಎರಡು ದಶಕಗಳ ಕಾಲ ನಂಬಿಸಿ ರಾಜಕಾರಣ ಮಾಡಿದ ಸಮಾಜವಾದಿ ಪಾರ್ಟಿಯ ಮುಖವಾಡ ಕಳಚಿ ಬಿದ್ದಾಗ, ಸ್ವಚ್ಛ ಇಮೇಜ್‌ನ ಅಖಿಲೇಶರನ್ನು ಮುಂದೆ ಮಾಡಲಾಗುತ್ತಿತ್ತು. ಇದು ಪ್ರಜ್ಞಾವಂತರಿಗೆ ಅರ್ಥವಾಗಿದೆ. ಈಗ ಅಖಿಲೇಶರ ‘ಸ್ವಚ್ಛ’ ಇಮೇಜ್ ಮುಖವಾಡ ಕೂಡ ಕಳಚಿಬಿದ್ದಿದೆ. ಇನ್ನೊಂದು ಹೊಸ ಪ್ರಹಸನಕ್ಕೆ ಸಮಾಜವಾದಿ ಪಾರ್ಟಿ ಸಜ್ಜಾಗುತ್ತಿದೆ. ಇಷ್ಟು ದಿನ ಇಲ್ಲದ ಈ ವಿವಾದ ಈಗ ಚುನಾವಣೆಗಳು ಬರುವಾಗ ಏಕಾಏಕಿ ಏಕೆ ಸ್ಫೋಟಿಸಬೇಕು? ಜನತೆ ಕೋಮು ಆಧಾರದಲ್ಲಿ ಒಡೆದುಹೋದರೆ ಅದರಿಂದ ಯಾರಿಗೆ ಲಾಭ ಎಂಬುದು ಸಾಮಾನ್ಯರಿಗೂ ಅರ್ಥವಾಗುತ್ತಿದೆ. ತಮ್ಮಲ್ಲಿ ಯಾರು ಗೆದ್ದರೂ ಯಾರು ಸೋತರೂ ಭಾಜಪಕ್ಕೆ ಲಾಭವೇ ಆಗಬೇಕು ಎಂಬ ಏಕಮುಖಿ ಸೂತ್ರವನ್ನು ಯಾದವ ಪರಿವಾರದ ಎಲ್ಲರೂ ಅಕ್ಷರಶಃ ಪಾಲಿಸುತ್ತಿದ್ದಾರೆ.
ಬಹುಜನ ಚಳವಳಿಗೆ ಯಾವ ಕಾರಣಕ್ಕೂ ಥಾಕುರ್ ಮತಗಳು ಬರದಂತೆ ನೋಡಿಕೊಳ್ಳಲು ದಯಾಶಂಕರ್ ಸಿಂಗ್‌ಎಂಬ ಬಾಯಿಹರುಕನನ್ನು ಬಳಸಿಕೊಳ್ಳಲಾಯಿತು. ಭಾಜಪಕ್ಕೆ ಸಂಪೂರ್ಣವಾಗಿ ಸಹಕರಿಸಲು ಶೀಲಾ ದೀಕ್ಷಿತ್ ಎಂಬ ಎಲ್ಲ ವಿಧದಲ್ಲಿ ಸೋತ ಅಭ್ಯರ್ಥಿಯನ್ನೇ ಕಾಂಗ್ರೆಸ್ ಆರಿಸಿದೆ.
ಇನ್ನುಳಿದಂತೆ ಸನ್ಮಾನ್ಯ ಪ್ರಧಾನ ಸೇವಕರು ಪೆಟಿಎಂ ಮೂಲಕ ಹಣ ಪಾವತಿಸಿ ಅನೇಕ ಮಹಾ ರ್ಯಾಲಿಗಳನ್ನು ಸಂಘಟಿಸುತ್ತಿದ್ದರೆ, ರೈಲ್ವೆ ಇಲಾಖೆ ಪುಕ್ಕಟೆಯಾಗಿ ರೈಲುಗಳಲ್ಲಿ ಜನರನ್ನು ತುಂಬಿಸಿತಂದು ತನ್ನ ದೇಶಸೇವೆ ಸಲ್ಲಿಸುತ್ತಿದೆ.
ತಮ್ಮ ಎಲ್ಲ ಯೋಜನೆಗಳಿಗೂ ಸರ್ವವಿಧದಲ್ಲೂ ಸಮಾಜವಾದಿ ಪಾರ್ಟಿ ತಮ್ಮದೇ ಖರ್ಚಿನಲ್ಲಿ ಭಾಜಪವನ್ನು ಆರಿಸಿತರಲು ಸಹಕರಿಸುತ್ತಿರುವಾಗ, ಕಾಂಗ್ರೆಸ್ ಪಾರ್ಟಿಯಂಥ ಮೂಕ ಪ್ರೇಕ್ಷಕರು ಚಪ್ಪಾಳೆ ತಟ್ಟಲು ಕಾತುರವಾಗಿ ಕಾದಿರುವಾಗ ಮೋದಿಯವರು ಪೆಟಿಎಂ ಹಣವನ್ನು ಸುರಿದು ರ್ಯಾಲಿಗಳನ್ನು ಏಕೆ ಸಂಘಟಿಸಬೇಕು ಎಂಬುದು ಅರ್ಥವಾಗುತ್ತಿಲ್ಲ.
ಮುಸ್ಲಿಮರು ಮಾತ್ರವಲ್ಲ, ಈ ಸಲ ಬಹುದೊಡ್ಡ ಸಂಖ್ಯೆಯಲ್ಲಿರುವ ಒಬಿಸಿ ಸಮುದಾಯದವರು (ಯಾದವರೂ ಸೇರಿಕೊಂಡಂತೆ) ಬಹುಜನ ಚಳವಳಿಯ ಬೆನ್ನಿಗೆ ನಿಂತಿದ್ದಾರೆ. ನೋಟು ನಿಷೇಧದ ಬಿಸಿ ತಟ್ಟಿರುವ ರೈತಾಪಿ ಸಮುದಾಯ ಮತ್ತು ಕಾನೂನು ಪಾಲನೆ, ಶಾಂತಿ ಸುರಕ್ಷತೆಯನ್ನು ಬಯಸುತ್ತಿರುವ ಮಹಿಳೆಯರು ಮತ್ತು ಶಾಂತಿಪ್ರಿಯ ಜನತೆಗೆ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಾರ್ಟಿಗಿಂತ ಉತ್ತಮ ಪರ್ಯಾಯ ಕಾಣಿಸುತ್ತಿಲ್ಲ.
ಉತ್ತರ ಪ್ರದೇಶದ ಪ್ರಶ್ನೆಗಳು ಉತ್ತರ ಸಿಗದಷ್ಟು ಕಠಿಣವಲ್ಲ, ಹಾಗೆಯೇ ಮೇಲ್ನೋಟಕ್ಕೆ ಗೋಚರಿಸುವಷ್ಟು ಸರಳವೂ ಅಲ್ಲ. ಜನರು ಜೀನಿಯಸ್‌ಗಳಲ್ಲದಿರಬಹುದು ಆದರೆ ಅಂದುಕೊಂಡಷ್ಟು ಮೂರ್ಖರೂ ಅಲ್ಲ. ಒಟ್ಟಿನಲ್ಲಿ ಉತ್ತರ ಪ್ರದೇಶದ ಪ್ರಶ್ನೆಗಳಿಗೆ ಉತ್ತರಿಸುವಷ್ಟು ಬುದ್ಧಿವಂತಿಕೆ ಖಂಡಿತ ಉತ್ತರ ಪ್ರದೇಶದ ಜನತೆಗೆ ಇದೆ ಎಂಬ ಆಶಯ ಸುಳ್ಳಾಗದಿರಲಿ.