ನರೇಂದ್ರ ಮೋದಿ ತನ್ನದೇ ಗೋರಿಯನ್ನು ತೋಡುತ್ತಿದ್ದಾರೆ

Update: 2017-01-05 18:18 GMT

ಮೋದಿ ಮತ್ತು ಅವರ ಸಲಹೆಗಾರರು ಹಣದ ಬೇಡಿಕೆಯ ಸಿದ್ಧಾಂತವನ್ನು ಅರ್ಥ ಮಾಡಿಕೊಂಡಿಲ್ಲ. ಹಣದ ಬೇಡಿಕೆಯೆಂದರೆ ಜನರು ನಗದಿನ ರೂಪದಲ್ಲಿ ತಮ್ಮ ಕೈಯಲ್ಲಿ ಇರಿಸಿಕೊಳ್ಳಲು ಬಯಸುವ ಆಸ್ತಿ ಅಥವಾ ಸಂಪತ್ತಿನ ಮೊತ್ತ. ಇದರಲ್ಲಿ ಮೂರನೆಯ ಆಯಾಮವೂ ಇದೆ, ಅದು ಮುನ್ನೆಚ್ಚರಿಕಾ ಹಣದ ಬೇಡಿಕೆ. ಹಣದ ವ್ಯವಹಾರ ಮತ್ತು ಊಹಾತ್ಮಕ ಬೇಡಿಕೆ ಒಂದೇ ರೀತಿ ಸ್ಥಿರವಾಗಿರಬಹುದು ಆದರೆ ಕಳೆದ ಎರಡು ತಿಂಗಳಿನಿಂದ ಉಂಟಾಗಿರುವ ನಗದಿನ ಕೊರತೆಯಿಂದ ಮುನ್ನೆಚ್ಚರಿಕಾ ಹಣದ ಬೇಡಿಕೆಯಲ್ಲಿ ಹೆಚ್ಚಳವಾಗುತ್ತದೆ.

ಇದು ಕೇವಲ ಗುರಿಯನ್ನು ಬದಲಾಯಿಸುವ ಮಾತ್ರವಲ್ಲ ಇಡೀ ಮೈದಾನವನ್ನೇ ಇನ್ನಿಲ್ಲದಂತೆ ಮಾಡುವ ಭಾಷಣವಾಗಿತ್ತು ಆದರೂ ಮೋದಿಗೆ ಕಪ್ಪುಹಣದ ಬಗ್ಗೆ ಮಾತನಾಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಮತ್ತಿದು 2019 ಸಮೀಪಿಸುವ ಹೊತ್ತಿಗೆ ಅವರಿಗೆ ದುಬಾರಿಯಾಗಿ ಪರಿಣಮಿಸಬಹುದು.
‘‘ನಾನು ಕೆಲವು ಮಾಹಿತಿಗಳನ್ನು ನಿಮ್ಮಂದಿಗೆ ಹಂಚಲು ಬಯಸುತ್ತೇನೆ, ಒಂದೋ ಅದು ನೀವು ನಗುವಂತೆ ಮಾಡುತ್ತದೆ ಅಥವಾ ಕೋಪಗೊಳ್ಳುವಂತೆ ಮಾಡುತ್ತದೆ’’ ಎಂದು ತಮ್ಮ ಭಾಷಣದ ಮಧ್ಯದಲ್ಲಿ ಅವರು ಹೇಳಿದ್ದರು. ಆ ವೇಳೆಗೆ ನೋಟು ಅಮಾನ್ಯಗೊಳಿಸಿದ ಪರಿಣಾಮ ಎಷ್ಟು ರೂ. 500 ಮತ್ತು 1000ದ ನೋಟುಗಳು ನಿರುಪಯೋಗಿ ಕಾಗದಗಳಾಗಿ ಬದಲಾಗಿವೆ ಎಂಬುದರ ಲೆಕ್ಕವನ್ನು ನೀಡಲಿದ್ದಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಮೋದಿ ಬಳಿ ನೀಡಲು ಇನ್ನೊಂದು ಲೆಕ್ಕವಿತ್ತು. ‘‘ಸರಕಾರಕ್ಕೆ ಸಿಕ್ಕ ಮಾಹಿತಿ ಪ್ರಕಾರ ಭಾರತದಲ್ಲಿ ಕೇವಲ 24 ಲಕ್ಷ ಮಂದಿ ತಮಗೆ ವಾರ್ಷಿಕ ರೂ. ಹತ್ತು ಲಕ್ಷಕ್ಕಿಂತ ಮೇಲಿನ ಆದಾಯವಿದೆಯೆಂದು ಒಪ್ಪಿಕೊಂಡಿದ್ದಾರೆ. ಇದನ್ನು ನಮ್ಮಿಂದ ಜೀರ್ಣಿಸಿಕೊಳ್ಳಲು ಸಾಧ್ಯವೇ? ನಿಮ್ಮ ಸುತ್ತ ಇರುವ ದೊಡ್ಡದೊಡ್ಡ ಬಂಗಲೆಗಳು ಮತ್ತು ಕಾರುಗಳತ್ತ ಒಮ್ಮೆ ನೋಡಿ...ಒಂದು ದೊಡ್ಡ ನಗರದ ಸುತ್ತ ನಾವು ಕಣ್ಣು ಹಾಯಿಸಿದರೆ ಸಾಕು ಅದರಲ್ಲಿ ಲಕ್ಷ್ಷಾನುಗಟ್ಟಲೆ ಜನರು ವಾರ್ಷಿಕ ರೂ. ಹತ್ತು ಲಕ್ಷಕ್ಕಿಂತ ಹೆಚ್ಚು ಆದಾಯವಿರುವವರನ್ನು ಕಾಣಬಹುದು.’’

 ಇಲ್ಲಿಯವರೆಗೆ ಪ್ರಧಾನಿ ತಮ್ಮ ನೋಟು ಅಮಾನ್ಯ ತೀರ್ಮಾನದ ಪರಿಣಾಮದ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಕಾತರವನ್ನು ರಾಷ್ಟ್ರೀಯತೆಯೆಂಬ ಸವೆದ ಜಮಖಾನೆಯ ಅಡಿ ಗುಡಿಸಲು ನೋಡಿದರು. ಆದರೆ ತಾನು ಮಿಲಿಯನ್‌ಗಟ್ಟಲೆ ಜನರ ಜೀವನದಲ್ಲಿ ಉಂಟು ಮಾಡಿರುವ ತೊಂದರೆಯನ್ನು ಸಮರ್ಥಿಸುವ ಪ್ರಯತ್ನವಾಗಿ ಅಂಕಿಅಂಶಗಳ ಲೆಕ್ಕಾಚಾರದತ್ತ ಗಮನವನ್ನು ಸೆಳೆಯುವ ಮೂಲಕ ಮೋದಿ ಕಪ್ಪುಹಣದ ವಿರುದ್ಧ ತಮ್ಮ ಅಭಿಯಾನದ ಯಶಸ್ಸು ಅಥವಾ ವೈಫಲ್ಯವನ್ನು ಅಳೆಯಲು ಅವರಿಗರಿವಿಲ್ಲದಂತೆ ಮಾನದಂಡವೊಂದನ್ನು ನೀಡಿದ್ದಾರೆ: ವಾರ್ಷಿಕ ಹತ್ತು ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಈ ‘ಲಕ್ಷಾನುಗಟ್ಟಲೆ ಜನ’ರನ್ನು ಮೋದಿಗೆ ಆದಾಯ ತೆರಿಗೆ ಪಾವತಿಸುವವರ ಪಟ್ಟಿಗೆ ತರಲು ಸಾಧ್ಯವಾದೀತೇ? ಅದು ಸಾಧ್ಯವಿಲ್ಲವಾದರೆ ಇಡೀ ದೇಶವನ್ನು ಈ ರೀತಿಯ ತೊಂದರೆ ಮತ್ತು ನೋವಿಗೆ ಸಿಲುಕಿಸುವ ಅಗತ್ಯವಾದರೂ ಏನಿತ್ತು?.

ವಿತ್ತ ಸಚಿವ ಅರುಣ್ ಜೇಟ್ಲಿ ಆರಂಭದಲ್ಲಿ ‘‘ಅಮಾನ್ಯಗೊಂಡ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿಯಲಿದ್ದು ನಾಶವಾಗಲಿವೆ ಇದರಿಂದ ಕಪ್ಪು ಆರ್ಥಿಕತೆಗೆ ಪೆಟ್ಟುಬೀಳುವ ಜೊತೆಗೆ ಸರಕಾರಕ್ಕೆ ಆರ್ಥಿಕ ಉತ್ತೇಜನ ಸಿಗುತ್ತದೆ’’ ಎಂದು ಹೇಳಿಕೊಂಡಿದ್ದರು.

ಆದರೆ ಹೆಚ್ಚಿನ ನೋಟುಗಳು ನಾಶಗೊಂಡಿಲ್ಲ ಮತ್ತು ಅವುಗಳಲ್ಲಿ ಚಲಾವಣೆಯಲ್ಲಿರುವ ಬಹುತೇಕ ದೊಡ್ಡ ಮೊತ್ತದ ನೋಟುಗಳು ಬ್ಯಾಂಕ್‌ಗಳಲ್ಲಿ ಜಮೆಯಾಗಲಿವೆ ಎಂಬುದನ್ನು ಅರಿತಾಗ ಮೋದಿ ಮತ್ತು ಜೇಟ್ಲಿ, ‘‘ಸದ್ಯ ಈ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಿರುವುದರಿಂದ ಕಪ್ಪುಹಣ ಹೊಂದಿರುವವರನ್ನು ಆದಾಯ ತೆರಿಗೆ ಇಲಾಖೆ ಪತ್ತೆಹಚ್ಚಲಿದೆ’’ ಎಂಬ ಹೇಳಿಕೆ ನೀಡಿದರು.

ನಗದಿನ ಬಗ್ಗೆ ಆಶ್ಚರ್ಯಗೊಳಿಸುವ ಹೇಳಿಕೆಗಳು

ಆದಾಯ ತೆರಿಗೆ ಇಲಾಖೆಯಿಂದ ಇಷ್ಟೊಂದು ಬೃಹತ್ ಪ್ರಮಾಣದ ಕಾರ್ಯಾಚರಣೆ ನಡೆಸುವುದು ಅಸಾಧ್ಯ ಎಂದರಿತ ಮೋದಿ (ಆದಾಯ ತೆರಿಗೆಯ ಅಸಾಮರ್ಥ್ಯದಿಂದಲೇ ವಾರ್ಷಿಕ ರೂ. ಹತ್ತು ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರ ಪಟ್ಟಿಯಲ್ಲಿ ಕೇವಲ 24 ಲಕ್ಷ ಜನರು ಮಾತ್ರ ಇದ್ದಾರೆ ಮತ್ತು ಇನ್ನು ಹೆಚ್ಚಾಗುವುದು ಕೂಡಾ ಅನುಮಾನವೇ) ನಗದುರಹಿತ ಈ ತೊಂದರೆಯನ್ನು ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ಜನರ ಮೇಲೆ ಹೇರಲಾಗಿದೆ ಎಂಬ ವಿಚಿತ್ರ ಹೇಳಿಕೆಯನ್ನು ನೀಡಿದರು. ‘‘ಕಳೆದ ಹತ್ತರಿಂದ ಹನ್ನೆರಡು ವರ್ಷಗಳಲ್ಲಿ ರೂ 500 ಮತ್ತು 1000 ನೋಟುಗಳನ್ನು ಸಮಾನಾಂತರ ಆರ್ಥಿಕತೆಗಾಗಿ ಹೆಚ್ಚಾಗಿ ಬಳಸಲಾಗುತ್ತಿತ್ತೇ ಹೊರತು ನ್ಯಾಯಬದ್ಧವಾಗಿ ಬಳಸಲಾಗುತ್ತಿರಲಿಲ್ಲ’’ ಎಂದು ಡಿಸೆಂಬರ್ 31ರಂದು ಮಾಡಿದ ಭಾಷಣದಲ್ಲಿ ಮೋದಿ ಹೇಳಿದರು. ‘‘ಹೆಚ್ಚಿನ ನಗದು ಹಣದುಬ್ಬರಕ್ಕೆ ಮತ್ತು ಕಪ್ಪು ಮಾರುಕಟ್ಟೆಗೆ ಎಡೆಮಾಡಿತ್ತು. ನಗದಿನ ಕೊರತೆಯಿಂದ ಕಷ್ಟವಾಗುತ್ತದೆ ಆದರೆ ಹೆಚ್ಚಿನ ಹಣ ಹೆಚ್ಚು ಸಮಸ್ಯೆಯನ್ನು ತಂದೊಡ್ಡುತ್ತದೆ’’ ಎಂದವರು ಹೇಳಿದ್ದರು.

ಈ ಆಶ್ಚರ್ಯಕರ ಹೇಳಿಕೆಗಳನ್ನು ಒಂದೊಂದಾಗಿ ತೆಗೆದುಕೊಳ್ಳುವ. ಮೋದಿ ಪ್ರಕಾರ ಬಹುತೇಕ ರೂ. 500 ಮತ್ತು 1000ದ ನೋಟುಗಳನ್ನು ನ್ಯಾಯಬದ್ಧ ಉದ್ದೇಶಕ್ಕಿಂತ ಹೆಚ್ಚಾಗಿ ಕಪ್ಪುಆರ್ಥಿಕತೆಗೆ ಬಳಸಲಾಗುತ್ತಿತ್ತು.

ಮೊದಲಿಗೆ, ಈ ವಾದವನ್ನು ಬೆಂಬಲಿಸುವಂತಹ ಕೆಲವು ಪುರಾವೆಗಳನ್ನು ಮೋದಿ ಒದಗಿಸಬೇಕು. ಎರಡನೆಯದಾಗಿ 1978ರಲ್ಲಿ ಶೇ. 25 ದೊಡ್ಡ ಮೌಲ್ಯದ ನೋಟುಗಳು ನಾಶವಾಗಿದ್ದವು ಎಂದು ಹೇಳಿಕೊಂಡಿರುವ ಜೇಟ್ಲಿ ಕೂಡಾ 2016 ಕಾರ್ಯಾಚರಣೆಯಲ್ಲಿ ಈ ಅಂಕಿಅಂಶವು ಕಡಿಮೆಯಾಗಬಹುದು ಎಂದು ಸಂಶಯಿಸಿದ್ದರು. ಹಾಗಾಗಿ ಯಾವ ಆಧಾರದಲ್ಲಿ ಮೋದಿ ದೂರದರ್ಶನದಲ್ಲಿ ನೇರಸಂಪರ್ಕದಲ್ಲಿ ಜನರನ್ನು ಉದ್ದೇಶಿಸುತ್ತಾ ಬಹುತೇಕ ಅಮಾನ್ಯಗೊಂಡ ನೋಟುಗಳನ್ನು ನ್ಯಾಯಬದ್ಧ ಉದ್ದೇಶಗಳಿಗೆ ಬಳಸಲಾಗುತ್ತಿರಲಿಲ್ಲ ಎಂದು ಹೇಳುತ್ತಾರೆ? ಮೋದಿಯ ಎರಡನೆ ಹೇಳಿಕೆ-‘‘ಹೆಚ್ಚು ಹಣವು ಹಣದುಬ್ಬರವನ್ನು ಉಂಟು ಮಾಡುತ್ತದೆ’’ ಎಂಬುದು ಅವರಿಗೆ ಮೂಲ ಅರ್ಥಶಾಸ್ತ್ರದ ಬಗ್ಗೆಯಿರುವ ಅತ್ಯಲ್ಪ ಜ್ಞಾನವನ್ನು ತೋರಿಸುತ್ತದೆ. ನಿಜವಾಗಿ, ಪ್ರಧಾನ ಮಂತ್ರಿ ಕಚೇರಿ ಅಥವಾ ವಿತ್ತ ಸಚಿವಾಲಯದ ಯಾವೊಬ್ಬನಿಗೂ ಆರ್ಥಿಕ ಜ್ಞಾನ ಇಲ್ಲದಿರುವುದು ಅಥವಾ ಅದರ ವಿರುದ್ಧವಾದುದೇ ಸರಿ ಅಂದರೆ ಸಾರ್ವಜನಿಕರು ಹಣವನ್ನು ಹೊಂದಿರುವುದಕ್ಕಿಂತ ಬ್ಯಾಂಕ್‌ಗಳಲ್ಲಿ ಜಮೆ ಮಾಡುವುದು ಹೆಚ್ಚು ಹಣದುಬ್ಬರ ಉಂಟುಮಾಡುತ್ತದೆ ಎಂದು ತಿಳಿಸುವಷ್ಟು ನೈತಿಕ ಧೈರ್ಯವನ್ನು ಹೊಂದದಿರುವುದು ಆಶ್ಚರ್ಯಕರ. ಸಾರ್ವಜನಿಕರು ಬ್ಯಾಂಕ್‌ಗಳಲ್ಲಿ ಹಣವನ್ನು ಠೇವಣಿಯಿಟ್ಟಾಗ ಬ್ಯಾಂಕ್ ಆ ಹಣದ ಕೇವಲ ಒಂದು ಭಾಗವನ್ನಷ್ಟೇ (ಕ್ಯಾಶ್ ರಿಸರ್ವ್ ರೇಶ್ಯೋ ಆಧರಿಸಿ) ರಿಸರ್ವ್ ಬ್ಯಾಂಕ್‌ನಲ್ಲಿ ಇಡುತ್ತದೆ ಮತ್ತು ಉಳಿದ ಭಾಗವನ್ನು ಸಾಲ ರೂಪದಲ್ಲಿ ನೀಡುತ್ತದೆ. ಉದಾಹರಣೆಗೆ ಸಿಆರ್‌ಆರ್ ಶೇ. 10 ಇದ್ದು ಒಬ್ಬ ವ್ಯಕ್ತಿ ರೂ. ಒಂದು ಲಕ್ಷ ಬ್ಯಾಂಕ್‌ನಲ್ಲಿ ಠೇವಣಿಯಿಟ್ಟರೆ ಇದು 9ರ ಅಪವರ್ತನದಂತೆ ಬ್ಯಾಂಕ್ ಠೇವಣಿಯನ್ನು ವಿಸ್ತರಿಸುತ್ತದೆ. ಈ ಹೆಚ್ಚಿನ ಹಣದ ಹರಿವು ವ್ಯಕ್ತಿಯೊಬ್ಬ ತನ್ನ ಕೈಯಲ್ಲಿ ಹಣವನ್ನು ಇಟ್ಟುಕೊಳ್ಳುವುದಕ್ಕಿಂತ ಹೆಚ್ಚಿನ ಹಣದುಬ್ಬರವನ್ನು ಸೃಷ್ಟಿ ಮಾಡುತ್ತದೆ. ಹಣದ ವಿಷಯದಲ್ಲಿ ನನ್ನ ಜ್ಞಾನ ಸ್ವಲ್ಪ ಕಡಿಮೆ ಹಾಗಾಗಿ ನಾನು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಂಡಳಿಯ ಮಾಜಿ ಸದಸ್ಯರೊಬ್ಬರಲ್ಲಿ ವಿಚಾರಿಸಿದಾಗ ಈ ಬಗ್ಗೆ ನನ್ನ ಊಹೆ ಸರಿಯಾಗಿತ್ತು. ಇನ್ನು ಮೋದಿ ಮಾಡಿದ ಮೂರನೇ ವಾದ ಹಣ ಹೆಚ್ಚಿದ್ದರೆ ಹೆಚ್ಚು ಸಮಸ್ಯೆಯ ಬಗ್ಗೆ ಹೇಳುವುದಾದರೆ, ಜಗತ್ತಿನ ಅಂಕಿಅಶಗಳು ತೋರಿಸುವ ಪ್ರಕಾರ ಚಲಾವಣೆಯಲ್ಲಿರುವ ಹಣ ಮತ್ತು ಭ್ರಷ್ಟಾಚಾರದ ಮಧ್ಯೆ ಯಾವುದೇ ಸಂಬಂಧವಿಲ್ಲ.

ಬ್ಯಾಂಕ್ ಠೇವಣಿಗಳನ್ನು ಆಧರಿಸುವುದು

ಮೋದಿ ಬ್ಯಾಂಕ್ ಠೇವಣಿಗಳಲ್ಲಿ ದೊಡ್ಡ ಮಟ್ಟದ ಏರಿಕೆ ಮಾಡಿದ ಕಾರಣಕ್ಕೆ ತನ್ನನ್ನು ತಾನೇ ಹೊಗಳಿ ಹೇಳಿದ ಮಾತುಗಳು ಮುಗ್ಧತೆ ಮತ್ತು ಅಪ್ರಾಮಾಣಿಕವಾಗಿತ್ತು: ‘‘ಇಷ್ಟೊಂದು ಅತ್ಯಲ್ಪ ಸಮಯದಲ್ಲಿ ಇಷ್ಟೊಂದು ಬೃಹತ್ ಮೊತ್ತವು ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂದೆಂದೂ ಹರಿದುಬಂದಿಲ್ಲ ಎಂಬುದಕ್ಕೆ ಇತಿಹಾಸವೇ ಸಾಕ್ಷಿ’’ ಎಂದು ಬಡವರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ಸುಲಭ ಸಾಲದ ಭರವಸೆ ನೀಡುವ ಮೊದಲ ಮೋದಿ ಹೇಳಿಕೊಂಡಿದ್ದರು.

ಈ ಹೇಳಿಕೆಯು ಅಪ್ರಾಮಾಣಿಕವಾದುದು ಯಾಕೆಂದರೆ ಈ ಠೇವಣಿಗಳನ್ನು ಒತ್ತಾಯಪೂರ್ವಕವಾಗಿ ಇರಿಸಲಾಗಿದೆ ಮತ್ತು ಒಮ್ಮೆ ತಾವು ಕಷ್ಟಪಟ್ಟು ದುಡಿದ ಹಣವನ್ನು ಬ್ಯಾಂಕ್‌ನಿಂದ ತೆಗೆಯಲು ಸಾಧ್ಯವಾದಾಗ ಜನರು ಈ ಹಣವನ್ನು ತೆಗೆದು ಬಿಡುತ್ತಾರೆ. ಆದರೆ ಇದು ಮುಗ್ಧತೆಯಿಂದ ಕೂಡಿದೆ ಕೂಡಾ. ಯಾಕೆಂದರೆ ಮೋದಿ ಮತ್ತು ಅವರ ಸಲಹೆಗಾರರು ಹಣದ ಬೇಡಿಕೆಯ ಸಿದ್ಧಾಂತವನ್ನು ಅರ್ಥ ಮಾಡಿಕೊಂಡಿಲ್ಲ. ಹಣದ ಬೇಡಿಕೆಯೆಂದರೆ ಜನರು ನಗದಿನ ರೂಪದಲ್ಲಿ ತಮ್ಮ ಕೈಯಲ್ಲಿ ಇರಿಸಿಕೊಳ್ಳಲು ಬಯಸುವ ಆಸ್ತಿ ಅಥವಾ ಸಂಪತ್ತಿನ ಮೊತ್ತ. ಇದರಲ್ಲಿ ಮೂರನೆಯ ಆಯಾಮವೂ ಇದೆ, ಅದು ಮುನ್ನೆಚ್ಚರಿಕಾ ಹಣದ ಬೇಡಿಕೆ. ಹಣದ ವ್ಯವಹಾರ ಮತ್ತು ಊಹಾತ್ಮಕ ಬೇಡಿಕೆ ಒಂದೇ ರೀತಿ ಸ್ಥಿರವಾಗಿರಬಹುದು ಆದರೆ ಕಳೆದ ಎರಡು ತಿಂಗಳಿನಿಂದ ಉಂಟಾಗಿರುವ ನಗದಿನ ಕೊರತೆಯಿಂದ ಮುನ್ನೆಚ್ಚರಿಕಾ ಹಣದ ಬೇಡಿಕೆಯಲ್ಲಿ ಹೆಚ್ಚಳವಾಗುತ್ತದೆ. ವಾಸ್ತವದಲ್ಲಿ ಆರ್ಥಿಕತೆಯು ಎಷ್ಟು ದೀರ್ಘ ಕಾಲ ನಗದು ವಂಚಿತವಾಗಿರುತ್ತದೆಯೋ ಮುನ್ನೆಚ್ಚರಿಕಾ ಬೇಡಿಕೆಯೂ ಹೆಚ್ಚಾಗುತ್ತಾ ಸಾಗುತ್ತದೆ. ಹಾಗಾಗಿ ಒಂದೊಮ್ಮೆ ಮೋದಿ ಭರವಸೆ ನೀಡಿರುವಂತೆ ಬ್ಯಾಂಕಿಂಗ್ ವ್ಯವಸ್ಥೆ ಸರಿಹೋದರೂ ಬ್ಯಾಂಕ್ ಠೇವಣಿಗಳಲ್ಲಿ ನವಂಬರ್ 8, 2016ರಂದು ನೋಟು ಅಮಾನ್ಯ ಹುಚ್ಚು ಆರಂಭವಾಗುವುದಕ್ಕೂ ಮುನ್ನ ಇದ್ದ ಪ್ರಮಾಣಕ್ಕಿಂತ ಕಡಿಮೆಯಾಗಲಿದೆ.

ಅನೌಪಚಾರಿಕ ಆರ್ಥಿಕತೆ ಯಾವಾಗಲೂ ಕಪ್ಪಲ್ಲ ಮತ್ತು ಔಪಚಾರಿಕ ಆರ್ಥಿಕತೆ ಯಾವಾಗಲೂ ಬಿಳಿಯಲ್ಲ

ಅನೌಪಚಾರಿಕ ಆರ್ಥಿಕತೆಯನ್ನು ಸಮಾನಾಂತರ ಆರ್ಥಿಕತೆಗೆ ಹೋಲಿಸುವ ಮೂಲಕ ಮೋದಿ ತಪ್ಪೆಸಗಿದ್ದಾರೆ. ಅವರು ಹೇಳಿದಂತೆ, ಔಪಚಾರಿಕ ಆರ್ಥಿಕತೆಯಿಂದ ನಗದು ಹೊರಗುಳಿದಾಗ ಅದು ಚಿಂತೆಗೆ ಕಾರಣವಾಗುತ್ತದೆ ಎಂಬುದನ್ನು ಅರ್ಥಶಾಸ್ತ್ರಜ್ಞರೂ ಒಪ್ಪುತ್ತಾರೆ. ಅದು ಮುಖ್ಯವಾಹಿನಿಗೆ ಸೇರಿದಾಗ ಅಭಿವೃದ್ಧಿಗೆ ಪೂರಕವಾಗುತ್ತದೆ. ವಾಸ್ತವದಲ್ಲಿ, ಭಾರತದ ಅನೌಪಚಾರಿಕ ಆರ್ಥಿಕತೆಯು ಮುಖ್ಯವಾಹಿನಿಯ ಯಾವುದೇ ತಾರ್ಕಿಕ ವ್ಯಾಖ್ಯಾನದ ಭಾಗವೇ ಆಗಿದೆ. ನಗದು ಭಾರತದ ಅನೌಪಚಾರಿಕ ಆರ್ಥಿಕತೆಯ ಆಯ್ಕೆಯ ವಿನಿಮಯ ಮಾಧ್ಯಮವಾಗಿರಬಹುದು ಆದರೆ ಅನೌಪಚಾರಿಕ ಆರ್ಥಿಕತೆಯ ಕೇವಲ ಸಣ್ಣ ಭಾಗವಷ್ಟೇ ಅನಧಿಕೃತ ವ್ಯವಹಾರವನ್ನು ಹೊಂದಿದೆ. ಹಾಗೆಯೇ, ಅಧಿಕೃತ ಆರ್ಥಿಕತೆಯ ಒಂದು ಸಣ್ಣ ಭಾಗ ಕೂಡಾ ಕಪ್ಪುಆದಾಯದ ಅನೇಕ ಸಾಧ್ಯತೆಗಳನ್ನು ಸೃಷ್ಟಿಸುತ್ತದೆ (ಇನ್‌ವಾಯ್ಸಿ ಮೂಲಕ ಉದಾ: 2ಜಿ ಹಗರಣದಲ್ಲಿ ಬಳಸಲಾದ ವಿವಿಧ ಅಪ್ರಾಮಾಣಿಕ ವಿಧಾನಗಳು). ಕಪ್ಪುಹಣದ ವ್ಯವಹಾರವನ್ನು ನಿಲ್ಲಿಸುವ ಅಗತ್ಯವಿದೆ ಆದರೆ ಮೋದಿ ಮಾಡಿದ ತಪ್ಪೆಂದರೆ ನೋಟು ಅಮಾನ್ಯಗೊಳಿಸುವುದೇ ಇದಕ್ಕೆ ಏಕಮಾತ್ರ ಪರಿಹಾರ ಎಂದು ಭಾವಿಸಿದ್ದು. ಅದು ಹಾಗಲ್ಲ ಎಂಬುದು ಅವರಿಗೆ ಈಗ ಅರಿವಾಗಿದೆ. ಹಾಗಾಗಿಯೇ ಬಡವರ ಉಪಯೋಗಕ್ಕಾಗಿ ಸರಕಾರ ತೆಗೆದುಕೊಂಡಿರುವ ಅಥವಾ ತೆಗೆದುಕೊಳ್ಳಲಿರುವ ಕ್ರಮಗಳನ್ನು ಪಟ್ಟಿ ಮಾಡಲೆಂದೇ ಅವರು ನೋಟು ಅಮಾನ್ಯದ 50 ದಿನಗಳ ಭಾಷಣವನ್ನು ಶನಿವಾರ ರಾತ್ರಿಗೆ ಕಾದಿರಿಸಿದ್ದರು. ಒಂದು ಹಂತದಲ್ಲಿ ಅದು ಹೇಗಿತ್ತೆಂದರೆ ಮೋದಿ, ಜೇಟ್ಲಿಯ ಭಾಷಣವನ್ನು ಕದ್ದಿದ್ದು ರಾಷ್ಟ್ರೀಯ ಬಜೆಟ್‌ನ ಭಾಗವನ್ನು ಓದುತ್ತಿರುವಂತೆ ಭಾಸವಾಗಿತ್ತು. ಅವರು ಘೋಷಿಸಿರುವ ಯೋಜನೆಗಳ ಬಗ್ಗೆ ನನಗಿಂತ ಹೆಚ್ಚು ತಿಳಿದಿರುವವರು ವಿಶ್ಲೇಷಣೆಯನ್ನು ಮಾಡುತ್ತಾರೆ. ಆದರೆ ಅವರು ಗರ್ಭಿಣಿಯರಿಗೆ ಮತ್ತು ರೈತರಿಗೆಂದು ಘೋಷಿಸಿರುವ ಕನಿಷ್ಠ ಎರಡು ಯೋಜನೆಗಳನ್ನು ಅತಿಯಾಗಿ ಉಬ್ಬಿಸಿ ಹೇಳಲಾಗಿದೆ ಎಂಬುದು ಬಹಿರಂಗವಾಗಿದೆ.

ಅವರ ಭಾಷಣದ ಅತ್ಯಂತ ಕಳಪೆ ಅಂಶವೆಂದರೆ ಮೋದಿ ರಾಜಕೀಯದಲ್ಲಿ ಕಪ್ಪುಹಣದ ಪಾತ್ರದ ಬಗ್ಗೆ ತಾನು ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆಯಿರುವ ಸಾರ್ವಜನಿಕ ಕಾಳಜಿಯ ಬಗ್ಗೆ ಮಾತನಾಡಿದ್ದಾಗಿತ್ತು. ಇಲ್ಲಿ ಯಾವುದೇ ಬದಲಾವಣೆಯ ಭರವಸೆ ಅಥವಾ ಯೋಜನೆಯ ಘೋಷಣೆಯಿರಲಿಲ್ಲ. ‘‘ ‘ಅವನಿಗಿಂತ ನಾನು ಪವಿತ್ರ’ ಎಂಬ ದೃಷ್ಟಿಕೋನದಿಂದ ದೂರವಾಗಿ ಎಲ್ಲಾ ರಾಜಕೀಯ ಮುಖಂಡರು ಮತ್ತು ಪಕ್ಷಗಳು ಜೊತೆಯಾಗಿ ಪಾರದರ್ಶಕತೆಗೆ ಪ್ರಾಮುಖ್ಯತೆ ನೀಡಿ ಮತ್ತು ರಾಜಕೀಯವನ್ನು ಕಪ್ಪುಹಣ ಮತ್ತು ಭ್ರಷ್ಟಾಚಾರದಿಂದ ಮುಕ್ತವಾಗಿಸಲು ದೃಢ ಹೆಜ್ಜೆಯನ್ನಿಡಬೇಕು.’’

ಪ್ರಧಾನ ಮಂತ್ರಿಯವರು ರಾಜಕೀಯದಲ್ಲಿ ಹೆಚ್ಚುತ್ತಿರುವ ಹಣಬಲದ ಬಗ್ಗೆ ಇರುವ ಆತಂಕವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಿಕೊಂಡು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ ನಡೆಯಬೇಕು ಎಂಬ ತಮ್ಮ ನಿಲುವನ್ನು ಸಮರ್ಥಿಸಲು ಬಳಸಿಕೊಂಡರು. ಚುನಾವಣಾ ಪ್ರಜಾಪ್ರಭುತ್ವದಲ್ಲಿ ಅದರ ಲಾಭ ನಷ್ಟಗಳು ಏನೇ ಇರಲಿ, ಭ್ರಷ್ಟಾಚಾರ ವಿರೋಧಿ ಪ್ರತಿಪಾದನೆಯಲ್ಲಿ ಅದು ನೈತಿಕವಾಗಿ ಸಂಶಯಾಸ್ಪದವಾಗಿದೆ: ‘‘ನಾವು ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಕಪ್ಪುಹಣ ಅತ್ಯಗತ್ಯವಾಗಿದೆ’’ ಎಂದು ಮೋದಿ ಹೇಳಿದಂತಿದೆ. ಕಡಿಮೆ ಕಪ್ಪುಹಣ ಹೊಂದಲಿರುವ ಏಕೈಕ ದಾರಿಯೆಂದರೆ ಕಡಿಮೆ ಚುನಾವಣೆಗಳನ್ನು ನಡೆಸುವುದು.

ಕೃಪೆ: thewire

Writer - ಸಿದ್ಧಾರ್ಥ್ ವರದರಾಜನ್

contributor

Editor - ಸಿದ್ಧಾರ್ಥ್ ವರದರಾಜನ್

contributor

Similar News

ಜಗದಗಲ
ಜಗ ದಗಲ