‘ತಿರಸ್ಕೃತ’ ವಿದ್ಯಾರ್ಥಿ, ಅತ್ಯದ್ಭುತ ನಟ,ಅವಮಾನಿತ ಕಲಾವಿದ ಓಂ ಪುರಿ

Update: 2017-01-06 18:34 GMT

ಎಫ್‌ಟಿಐಐ ಕುರಿತು ನನಗೆ ಅತೀವ ಗೌರವವಿದೆ ಮತ್ತು ಒಮ್ಮೆ ಯಾವ ವ್ಯಕ್ತಿಗೆ ಪ್ರವೇಶ ನೀಡಲು ಮೀನಮೇಷ ಎಣಿಸುತ್ತಿತ್ತೋ ಇಂದು ಅದೇ ವ್ಯಕ್ತಿಯನ್ನು ‘ಓಂ ಪುರಿ ಸಾಹೇಬ್’ ಎಂದು ಸಂಬೋಧಿಸಿರುವುದಕ್ಕಾಗಿ ಹಳೆಯ ವಿದ್ಯಾರ್ಥಿಯಾಗಿ ನಾನು ಸಂಸ್ಥೆಗೆ ಕೃತಜ್ಞನಾಗಿದ್ದೇನೆ. ಇದು ಓಂ ಪುರಿ ಅವರು ಎಷ್ಟೊಂದು ಸಮರ್ಥ ನಟನಾ ಪ್ರತಿಭೆಯಾಗಿದ್ದರು ಎನ್ನುವುದನ್ನು ತೋರಿಸುತ್ತಿದೆ. ಒಂದು ಸಂಸ್ಥೆ ತನ್ನ ಚಿಂತನೆಯನ್ನೇ ಪರಿಷ್ಕರಿಸುವಂತೆ ಮಾಡಿದ್ದ ಅದ್ಭುತ ನಟ ಓಂ ಪುರಿ.

ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ತನ್ನ ಆತ್ಮಕಥೆ ‘ಆಡಾಡತ ಆಯುಷ್ಯ’ದಲ್ಲಿ ತಾನು ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ(ಎಫ್‌ಟಿಐಐ)ಯ ನಿರ್ದೇಶಕನಾಗಿದ್ದ ಆರಂಭದ ದಿನಗಳಲ್ಲಿಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

ಸಂಸ್ಥೆಗೆ ಹೊಸ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಸಂದರ್ಶನಗಳು ನಡೆಯುತ್ತಿದ್ದವು. ಬೋಧಕ ವೃಂದವು ಉತ್ತಮ ನಟನಾ ಪ್ರತಿಭೆಯನ್ನು ಹೊಂದಿದ್ದ, ಆದರೆ ನೋಡಲು ಚೆನ್ನಾಗಿರದಿದ್ದ ಓರ್ವ ನಿರ್ದಿಷ್ಟ ಅಭ್ಯರ್ಥಿಯ ಬಗ್ಗೆ ಚರ್ಚಿಸುತ್ತಿತ್ತು. ‘‘ಆತ ಕುರೂಪಿ, ಸಿನೆಮಾಗಳಲ್ಲಿ ನಾಯಕನಾಗುವುದು ಸಾಧ್ಯವೇ ಇಲ್ಲ’’ ಎಂದು ಪ್ರತಿಯೊಬ್ಬರೂ ವಾದಿಸುತ್ತಿದ್ದರು. ಅವರ ಚರ್ಚೆಯಲ್ಲಿ ಮಧ್ಯೆ ಪ್ರವೇಶಿಸಿದ ಕಾರ್ನಾಡ್,‘‘ಅಭ್ಯರ್ಥಿ ಅರ್ಹನಾಗಿದ್ದರೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದರೆ ಆತನನ್ನು ಆಯ್ಕೆ ಮಾಡಿ ನಟನಾಗಿ ರೂಪಿಸುವುದು ನಮ್ಮ ಕರ್ತವ್ಯ. ಆತ ಸಿನೆಮಾಗಳಲ್ಲಿ ನಾಯಕ ಪಾತ್ರಕ್ಕೆ ಸರಿ ಹೊಂದುತ್ತಾನೋ ಇಲ್ಲವೋ ಎನ್ನುವ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಿಲ್ಲ. ನಾವು ಮುಂಬೈನ ಸಿನೆಮಾ ಇಂಡಸ್ಟ್ರಿಗಾಗಿ ಹೀರೋಗಳನ್ನು ತಯಾರು ಮಾಡುವ ಫ್ಯಾಕ್ಟರಿಯಲ್ಲ’’ ಎಂದು ಹೇಳಿದ್ದರು.

ಆ ಯುವಕ ಅಂತಿಮವಾಗಿ ಎಫ್‌ಟಿಐಐಗೆ ಆಯ್ಕೆಯಾಗಿದ್ದ

ಅಂದ ಹಾಗೆ ಆ ಯುವಕನ ಹೆಸರು ಓಂ ಪುರಿ.

ಇಂದು ಬೆಳಗ್ಗೆ ಓಂ ಪುರಿ ಅವರ ನಿಧನದ ಸುದ್ದಿ ಕೇಳಿದಾಗ ನನ್ನ ಹೃದಯಕ್ಕೆ ತುಂಬ ನೋವಾಗಿತ್ತು. ಕೆಲ ಹೊತ್ತಿನ ಬಳಿಕ ಎಫ್‌ಟಿಐಐನಲ್ಲಿರುವ ನನ್ನ ಸ್ನೇಹಿತ ರಿತ್ವಿಕ್ ಸಂಸ್ಥೆಯ ಮೇನ್ ಥಿಯೇಟರ್‌ನ ಹೊರಗಿರುವ ಫಲಕವೊಂದರ ಫೋಟೊವನ್ನು ಶೇರ್ ಮಾಡಿಕೊಂಡಿದ್ದ. ಈ ಫಲಕದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನೂ ಪ್ರಕಟಿಸಲಾಗುತ್ತದೆ ಮತ್ತು ಅವರನ್ನು ಅಭಿನಂದಿಸಲಾಗುತ್ತದೆ. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ನಿಧನ ವಾರ್ತೆಯನ್ನೂ ಇದೇ ಫಲಕದಲ್ಲಿ ಪ್ರಕಟಿಸಲಾಗುತ್ತದೆ.

 ‘6/01/2017. ರೆಸ್ಟ್ ಇನ್ ಪೀಸ್ ಓಂ ಪುರಿ ಸಾಹೇಬ್’ ಇದು ಇಂದು ಈ ಫಲಕದಲ್ಲಿದ್ದ ಬರಹ

ಎಫ್‌ಟಿಐಐ ಕುರಿತು ನನಗೆ ಅತೀವ ಗೌರವವಿದೆ ಮತ್ತು ಒಮ್ಮೆ ಯಾವ ವ್ಯಕ್ತಿಗೆ ಪ್ರವೇಶ ನೀಡಲು ಮೀನಮೇಷ ಎಣಿಸುತ್ತಿತ್ತೋ ಇಂದು ಅದೇ ವ್ಯಕ್ತಿಯನ್ನು ‘ಓಂ ಪುರಿ ಸಾಹೇಬ್’ ಎಂದು ಸಂಬೋಧಿಸಿರುವುದಕ್ಕಾಗಿ ಹಳೆಯ ವಿದ್ಯಾರ್ಥಿಯಾಗಿ ನಾನು ಸಂಸ್ಥೆಗೆ ಕೃತಜ್ಞನಾಗಿದ್ದೇನೆ. ಇದು ಓಂ ಪುರಿ ಅವರು ಎಷ್ಟೊಂದು ಸಮರ್ಥ ನಟನಾ ಪ್ರತಿಭೆಯಾಗಿದ್ದರು ಎನ್ನುವುದನ್ನು ತೋರಿಸುತ್ತಿದೆ. ಒಂದು ಸಂಸ್ಥೆ ತನ್ನ ಚಿಂತನೆಯನ್ನೇ ಪರಿಷ್ಕರಿಸುವಂತೆ ಮಾಡಿದ್ದ ಅದ್ಭುತ ನಟ ಓಂ ಪುರಿ.

 ಎಫ್‌ಟಿಐಐಯಲ್ಲಿ ನಾನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ‘ಆಕ್ರೋಶ್’ ಚಿತ್ರದಲ್ಲಿ ಓಂ ಪುರಿಯವರ ಮಾತುಗಳಿಲ್ಲದ ಅದ್ಭುತ ನಟನೆಯನ್ನು ಕಂಡು ಮೂಕನಾಗಿದ್ದನ್ನು ನಾನು ಮರೆತಿಲ್ಲ. ನನ್ನ ಅಭಿಪ್ರಾಯದಲ್ಲಿ ಅದು ಓಂ ಪುರಿಯವರ ಈವರೆಗಿನ ಅತ್ಯುತ್ತಮ ಪಾತ್ರ ನಿರ್ವಹಣೆಯಾಗಿದೆ. ಓಂ ಪುರಿ ಮತ್ತು ನಾಸೀರುದ್ದೀನ್ ಶಾ ಅವರಿಗೆ ಸವಾಲೆಸೆಯಬಲ್ಲ ಪಾತ್ರವನ್ನು ಸೃಷ್ಟಿಸುವುದು ಯಾವುದೇ ಚಿತ್ರ ನಿರ್ದೇಶಕ ಅಥವಾ ಚಿತ್ರ ಸಾಹಿತಿಗೆ ಸಾಧ್ಯವೇ ಇಲ್ಲ. ಅಂದು ರಾತ್ರಿ ಮೆಸ್‌ನಲ್ಲಿ ನನ್ನ ರೂಮ್‌ಮೇಟ್ ಲೋಹಿತ್‌ಗೆ ಹೇಳಿದ್ದೆ. ಇಂದಿಗೂ ಅದೇ ನನ್ನ ನಿಲುವು ಆಗಿದೆ.

‘ಆಕ್ರೋಶ್’ ಸಿನೆಮಾದಲ್ಲಿ ನಿರಪರಾಧಿಯಾದ ಓಂ ಪುರಿಯ ಮೇಲೆ ಕೊಲೆಯ ಸುಳ್ಳು ಆರೋಪವನ್ನು ಹೊರಿಸಲಾಗಿರುತ್ತದೆ. ಅವರ ಪರ ನ್ಯಾಯವಾದಿ (ನಾಸೀರುದ್ದೀನ್ ಶಾ) ಮಾತಿನ ಆರಂಭದಲ್ಲಿಯೇ ‘‘ನೀನೇಕೆ ಕೊಲೆ ಮಾಡಿದ್ದು’’ ಎಂದು ಪ್ರಶ್ನಿಸುತ್ತಾನೆ. ಅಂದರೆ ವಾಸ್ತವದಲ್ಲಿ ಓಂ ಪುರಿಯನ್ನು ಆರೋಪದಿಂದ ಪಾರು ಮಾಡಬೇಕಾಗಿದ್ದ ವಕೀಲನ ತಲೆಯಲ್ಲಿ ಈ ಕೊಲೆಯನ್ನು ಮಾಡಿದ್ದು ಈತನೇ ಎಂಬ ತೀರ್ಪು ಗಟ್ಟಿಯಾಗಿರುತ್ತದೆ. ಇದೇ ನ್ಯಾಯವಾದಿ ಓಂ ಪುರಿ ಮತ್ತು ಪ್ರಕರಣದ ಕುರಿತು ತನ್ನ ಅಭಿಪ್ರಾಯವನ್ನು ಬದಲಿಸಿಕೊಳ್ಳುವ ಕಥೆಯನ್ನು ಸಿನೆಮಾ ಹೊಂದಿದೆ. ಇದೇ ರೀತಿ ಓಂ ಪುರಿ ತಪ್ಪು ಮಾಡಿದ್ದಾರೆ ಎಂದು ನಾವೂ ಮೊದಲು ಭಾವಿಸಿದ್ದೆವು. ನಿಧಾನವಾಗಿ ಸತ್ಯವು ತೆರೆದುಕೊಳ್ಳುತ್ತಾ ಹೋದಂತೆ ನಮ್ಮ ಮೊದಲಿನ ತೀರ್ಪಿನ ಬಗ್ಗೆ ನಮಗೆ ನಾಚಿಕೆಯಾಗುತ್ತದೆ ಮತ್ತು ನಮ್ಮ ಅಭಿಪ್ರಾಯವೂ ಬದಲಾಗುತ್ತದೆ.

ವರ್ಷಗಳ ನಂತರ ರಾಷ್ಟ್ರೀಯ ವಾಹಿನಿಯೊಂದರಲ್ಲಿ ಓಂ ಪುರಿಯವರ ಸಂದರ್ಶನವನ್ನು ವೀಕ್ಷಿಸುತ್ತಿದ್ದೆ. ಪತ್ರಿಕೋದ್ಯಮಕ್ಕೇ ಅವಮಾನದಂತಿರುವ ವ್ಯಕ್ತಿಯೋರ್ವ ತುಂಬ ಕುಟಿಲತೆಯಿಂದ ಹೆಣೆಯಲಾಗಿದ್ದ ಸ್ಕ್ರಿಪ್ಟ್‌ನ್ನು ಇಟ್ಟುಕೊಂಡು ಓಂ ಪುರಿಯವರ ‘ವಿಚಾರಣೆ’ಯನ್ನು ನಡೆಸುತ್ತಿದ್ದ. ‘ಆಕ್ರೋಶ್’ನಲ್ಲಿ ಮಾಡಿದ್ದಂತೆ ಓಂ ಪುರಿಯವರು ಈಗಲೂ ವೌನವಾಗಿರಲಿ ಎಂದು ನಾನು ಮನಸ್ಸಿನಲ್ಲಿಯೇ ಹಾರೈಸುತ್ತಿದ್ದೆ. ಆದರೆ ದುರದೃಷ್ಟವಶಾತ್ ಓಂ ಪುರಿಯವರು ಸ್ವಘೋಷಿತ ರಾಷ್ಟ್ರವಾದಿಗಳ ಬಲೆಯಲ್ಲಿ ಸಿಕ್ಕಿಬಿದ್ದಿದ್ದರು ಮತ್ತು ಈ ರಾಷ್ಟ್ರವಾದಿಗಳು ಯಾವುದೇ ಸಕಾರಣವಿಲ್ಲದೆ, ಒಂದಿನಿತೂ ಗೌರವ-ಕರುಣೆಯನ್ನು ತೋರಿಸದೆ ಅವರ ಮೇಲೆ ಮುಗಿಬಿದ್ದಿದ್ದರು. ಅಂತಿಮವಾಗಿ ಓಂ ತಾನೆಂದೂ ಮಾಡದೇ ಇದ್ದ ಅಪರಾಧಕ್ಕಾಗಿ ಕ್ಷಮೆಯನ್ನು ಯಾಚಿಸುವಂತಾಗಿತ್ತು. ಆ ಕಾರ್ಯಕ್ರಮ ವೀಕ್ಷಿಸುವುದೇ ಯಾತನಾದಾಯಕವಾಗಿತ್ತು.

ಈಗ ಈ ನೋವಿನ ಘಳಿಗೆಯಲ್ಲಿ, ಓಂ ಪುರಿಯವರಿಗೆ ಅವರ ಕೊನೆಯ ದಿನಗಳಲ್ಲಿ ತುಂಬ ಕಿರುಕುಳ ನೀಡಿದ್ದ ಈ ವಿಕೃತ ಸಂತೋಷಿಗಳು ಈಗಲಾದರೂ ತಮ್ಮ ಚಿಂತನೆಯನ್ನು ಬದಲಾಯಿಸಿಕೊಳ್ಳುತ್ತಾರೆ ಎಂದು ನಾನು ಅತ್ಯಂತ ಪ್ರಾಮಾಣಿಕತೆಯಿಂದ ಆಶಿಸುತ್ತಿದ್ದೇನೆ.

 ಓಂ ಪುರಿಯವರಿಗೆ ನನ್ನ ಅಂತಿಮ ವಂದನೆಗಳು.

Writer - ಸಂವರ್ತ ಸಾಹಿಲ್

contributor

Editor - ಸಂವರ್ತ ಸಾಹಿಲ್

contributor

Similar News

ಜಗದಗಲ
ಜಗ ದಗಲ