ಇದು ವಿಕೇಂದ್ರೀಕೃತ ತುರ್ತು ಪರಿಸ್ಥಿತಿ: ಮೋದಿ ಸರಕಾರದ ವಿರುದ್ಧ ಅರುಣ್ ಶೌರಿ ಕಿಡಿ

Update: 2017-01-12 18:07 GMT

ನನ್ನ "ಐ ಆಮ್ ಎ ಟ್ರೋಲ್" ಕೃತಿಗೆ ನಡೆಸುತ್ತಿರುವ ಸಂಶೋಧನೆ ಅಂಗವಾಗಿ ಬಿಜೆಪಿ ಹಿರಿಯ ಮುಖಂಡ ಅರುಣ್ ಶೌರಿ ಅವರನ್ನು ನಾನು ಸಂದರ್ಶಿಸಿದೆ. ಶೌರಿ ಕೂಡಾ ಕರಣ್ ಥಾಪರ್ ಷೋ ದಲ್ಲಿ ಮೊಟ್ಟಮೊದಲ ಬಾರಿಗೆ ಮೋದಿ ಸರಕಾರದ ವಿರುದ್ಧ ಗುಡುಗಿದಾಗ ಮೋದಿ ಭಕ್ತರಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಎನಿಸಿಕೊಂಡಿದ್ದವರು. ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ 1999-2004ರವರೆಗೆ ಸಚಿವರಾಗಿದ್ದ ಅವರನ್ನು 2016ರ ಬೇಸಿಗೆಯಲ್ಲಿ ಸಂದರ್ಶಿಸಿದ್ದು, ಇದನ್ನು ಮೊದಲ ಬಾರಿಗೆ ವೈರ್‌ನಲ್ಲಿ ಪ್ರಕಟಿಸಲಾಗಿದೆ.

ಸ್ವಾತಿ: ವಿಶ್ವದ ನಾಯಕರಲ್ಲಿ ಮೋದಿ ಮಾತ್ರ ನಿಂದನಾತ್ಮಕ ಹ್ಯಾಂಡಲ್ ಫಾಲೊ ಮಾಡುತ್ತಾರೆ. ಕರಣ್ ಥಾಪರ್ ಷೋದಲ್ಲಿ ಮೋದಿ ಸರಕಾರವನ್ನು ನೀವು ಟೀಕಿಸಿದಾಗ ನೀವು ಮತ್ತು ಅಸ್ವಸ್ಥರಾಗಿರುವ ನಿಮ್ಮ ಮಗನ ವಿರುದ್ಧ ಜಾಲತಾಣದಲ್ಲಿ ದಾಳಿ ಮಾಡಿ ನಿಂದಿಸಲಾಗಿತ್ತು. ಮೋದಿಯನ್ನು ಟೀಕಿಸುತ್ತಿರುವುದಕ್ಕೆ ನಿಮ್ಮ ಮಗನ ಕಾಯಿಲೆ ರೂಪದಲ್ಲಿ ಆ ಕರ್ಮದ ಫಲ ಅನುಭವಿಸುತ್ತಿದ್ದೀರಿ ಎಂದೂ ನಿಂದಿಸಲಾಯಿತು...

ಶೌರಿ: ಹೌದು; ಅವರನ್ನು ಅನುಸರಿಸುವ ಮೂಲಕ ಮೋದಿ ಒಂದು ಸಂದೇಶವನ್ನು ನೀಡುತ್ತಿದ್ದಾರೆ: ನಾನು ಅದನ್ನು ಅನುಸರಿಸುತ್ತಿದ್ದೇನೆ. ನೀವು ಅದನ್ನು ಅನುಸರಿಸುತ್ತಿದ್ದೀರಿ ಎಂದರೆ, ಅದನ್ನು ಉತ್ತೇಜಿಸುತ್ತಿದ್ದೀರಿ ಎಂಬ ಅರ್ಥ. (ಹುಡುಗರೇ, ನೀವು ಎಷ್ಟು ನಿಂದನಾತ್ಮಕ ಪದ ಬಳಸುತ್ತಿದ್ದೀರಿ ಎಂದು ನಾನು ಗಮನಿಸುತ್ತಿದ್ದೇನೆ ಎಂಬ ಅರ್ಥ). ಅವರನ್ನು ಮೋದಿ ಸ್ವಾಗತಿಸುತ್ತಾರೆ ಎಂದೂ ನಾನು ಕೇಳಿದ್ದೇನೆ. ಪ್ರಧಾನಿಯವರ ಅಧಿಕೃತ ಕಚೇರಿಯನ್ನೂ ಅವರನ್ನು ಸ್ವಾಗತಿಸುತ್ತೀರಿ. ಇದರಿಂದ ಉತ್ತೇಜಿತರಾದ ಇಂಥ ವ್ಯಕ್ತಿಗಳು ಮೋದಿ ಜತೆಗಿನ ಫೋಟೊ ಹಾಕುತ್ತಾರೆ.

ಅವರನ್ನು ಬಿಜೆಪಿಯ ಐಟಿ ಕೋಶದ ಮುಖ್ಯಸ್ಥರಾಗಿ ಮಾಡಲಾಗಿದೆ ಎಂದೂ ನಾನು ಕೇಳಿದ್ದೇನೆ. ಆದ್ದರಿಂದ ಇದು ಸಹಜವಾಗಿಯೇ ಸರಕಾರಿ ಕಾರ್ಯಾಚರಣೆ; ಪಕ್ಷದ ಕಾರ್ಯಾಚರಣೆ. ಇಡೀ ದೇಶದಲ್ಲಿ ಟೀಕಾಕಾರರ ಸದ್ದಡಗಿಸಲು ಬಳಸುವ ಅಸ್ತ್ರಗಳಲ್ಲಿ ಇದು ಒಂದು. ನಿಂದನೆ ಒಂದು; ನಿರಾಕರಣೆ ಇನ್ನೊಂದು. ರಾಜಸ್ಥಾನದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಕೇಂದ್ರ ಸರಕಾರದ ವಿರುದ್ಧ ಬರೆದಿದೆ ಎಂಬ ಕಾರಣಕ್ಕೆ ರಾಜಸ್ಥಾನ್ ಪತ್ರಿಕಾ ಗೆ ರಾಜ್ಯ ಸರಕಾರ ಜಾಹೀರಾತನ್ನೇ ನಿಲ್ಲಿಸಿದೆ.

ಸ್ವಾತಿ: ನೀವು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದಾಗ ನಾನಿನ್ನೂ ಹುಟ್ಟಿರಲೂ ಇಲ್ಲ. ಆ ಯುಗದಂತೆ ಈಗಲೂ ಭಾಸವಾಗುತ್ತಿದೆಯೇ?
ಶೌರಿ: ಇದು ವಿಕೇಂದ್ರೀಕೃತ ತುರ್ತು ಪರಿಸ್ಥಿತಿ. ನಾವು ವಿಕೇಂದ್ರೀಕೃತ ಮಾಫಿಯಾ ಸರಕಾರದತ್ತ ನಾವು ಹೋಗುತ್ತಿದ್ದೇವೆ. ಇಲ್ಲಿ ಸ್ಥಳೀಯ ಗೂಂಡಾಗಳು, ತಪ್ಪು ಮಾಡುತ್ತಿದ್ದಾರೆ ಎನಿಸಿದ ವ್ಯಕ್ತಿಗಳನ್ನು ಹೇಗೆ ಬೇಕಾದರೂ, ಥಳಿಸಬಹುದು.

ಕೇಂದ್ರದ ಜನ ಬೇರೆ ಮಾರ್ಗ ನೋಡುತ್ತಾರೆ. ಇವರು ಸ್ಥಳೀಯ ಗೂಂಡಾಗಳಿಗೆ ಕುಮ್ಮಕ್ಕು ನೀಡುತ್ತಾರೆ. ಗೋರಕ್ಷಕರು, ಲವ್ ಜಿಹಾದ್‌ನಂಥ ಅಸ್ತ್ರಗಳು ಯಾರಿಗೆ ಬೇಕಾದರೂ ಹೊಡೆಯಲು ಇರುವ ತಾರ್ಕಿಕ ಅಂಶಗಳು. ಗೋವಿನ ಬಗ್ಗೆ ಅದು ಪ್ರೀತಿಯಲ್ಲ; ಕೇವಲ ಪ್ರಾಬಲ್ಯ ಸ್ಥಾಪಿಸುವ ಸಾಧನ.
ಆ ಕಾಲದಲ್ಲಿ ಇದ್ದ ಒಂದು ದೊಡ್ಡ ವ್ಯತ್ಯಾಸವೆಂದರೆ ಇಂದಿರಾಗಾಂಧಿ ಅಷ್ಟಾಗಿಯೂ ಕಾನೂನು ಬಳಸುತ್ತಿದ್ದರು. ಆದರೆ ಈಗ ಯಾವ ಕಾನೂನೂ ಇಲ್ಲ. ಕಾನೂನು ಚೌಕಟ್ಟು ಮೀರಿ ಇವರು ವರ್ತಿಸುತ್ತಿದ್ದಾರೆ. ಇದು ನೈಜ ಫ್ಯಾಶಿಸಂ.

ಏಕೆಂದರೆ ಕಾನೂನು ಎಂದರೇನು ಎಂದು ನೀವು ಕೇಳುತ್ತೀರಿ. ನಾನೇ ಕಾನೂನು. ಎಲ್ಲ ಕ್ರಿಯೆಗಳನ್ನೂ ಸರಕಾರದ ಹೊರಗೆ ಮಾಡಲಾಗುತ್ತದೆ. ಕೆಟ್ಟಕೆಲಸವನ್ನು ಮಾತ್ರ ಸರಕಾರದೊಳಗೆ ನಿರ್ವಹಿಸಲಾಗುತ್ತದೆ. ಅದೆಂದರೆ ಇರುವ ಕಾನೂನುಗಳನ್ನು ಹೊಸಕಿ ಹಾಕುವುದು. ಉದಾಹರಣೆಗೆ ಮಾಹಿತಿ ಹಕ್ಕು ಕಾಯ್ದೆಯನ್ನು ಹೊಸಕಿ ಹಾಕಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ನಿಮ್ಮ ಪರವಾಗಿ ಇಲ್ಲದಿದ್ದರೆ ಅದನ್ನೂ ಕಳಂಕಿತಗೊಳಿಸಲಾಗುತ್ತದೆ. ನ್ಯಾಯಾಂಗಕ್ಕೆ ಮಸಿ ಬಳಿಯಲಾಗುತ್ತಿದೆ. ಆದ್ದರಿಂದ ಖಾಲಿ ಹುದ್ದೆಗಳು ಬೆಳೆಯುತ್ತಲೇ ಹೋಗುತ್ತಿವೆ. ಬಹುಶಃ ನೂರಕ್ಕೂ ಹೆಚ್ಚು ಖಾಲಿ ಹುದ್ದೆಗಳು. ಒಂದಲ್ಲ ಒಂದು ಕಾರಣಕ್ಕೆ ನಿರಾಕರಿಸಲಾಗುತ್ತಿದೆ ಎಂದು ನ್ಯಾಯಾಂಗ ಹೇಳುತ್ತಿದೆ. ಬವಣೆ ಪಡುವುದು ಜನ.

ಸ್ವಾತಿ: ಆಶೀಶ್ ನಂದಿ, ಮೋದಿಯನ್ನು ಸಂದರ್ಶಿಸಿದ ಬಳಿಕ ಒಂದು ಬರಹದಲ್ಲಿ, ಪಠ್ಯದ ಫ್ಯಾಶಿಸ್ಟ್‌ನ್ನು ಭೇಟಿ ಮಾಡಿದಂತಾಯಿತು ಎಂದು ಬರೆದಿದ್ದರು. ನೀವು ಮೋದಿಯನ್ನು ಚೆನ್ನಾಗಿ ಬಲ್ಲಿರಿ. ಅವರು ಪಿಎಂ ಆಗಲು ಪ್ರಚಾರವನ್ನೂ ಮಾಡಿದ್ದೀರಿ. ಇದನ್ನು ಒಪ್ಪುತ್ತೀರಾ?

ಹೌದು; ನಾನೂ ಹಾಗೆ ಹೇಳಿದ್ದೆ. ನಾನು ಇನ್ನೂ ಮುಂದಕ್ಕೆ ಹೋಗುತ್ತೇನೆ. ಮೋದಿ ಡಾರ್ಕ್ ಟ್ರಿಯಾಡ್ ( ಆತ್ಮರತಿ, ಮೋಸ ರಾಜಕೀಯ, ಮನೋವೈಕಲ್ಯ ಗುಣ) ಮನೋಸ್ಥಿತಿ ಹೊಂದಿದವರು. ಸುಲಭವಾಗಿ ಅವರನ್ನು ಭಯಪಡಿಸಬಹುದು. ದಿಲ್ಲಿ ಹಾಗೂ ಬಿಹಾರ ಚುನಾವಣೆ ಬಳಿಕ ಏನಾಯಿತು ನೋಡಿ. ಮೋದಿ ತಕ್ಷಣ ವಿಕಾಸ ಮಂತ್ರ ಪಠಣ ನಿಲ್ಲಿಸಿದರು. ಜನಪ್ರಿಯ ಯೋಜನೆ ಅಪ್ಪಿಕೊಂಡರು.

ಒಂದು ಚುನಾವಣೆ ಸೋಲಿನ ನಂತರ ಅವರು ಎಷ್ಟು ಭೀತಿ ಎದುರಿಸಿದರು ಎನ್ನುವುದನ್ನು ಇದು ತೋರಿಸುತ್ತದೆ. ಎರಡನೆಯದು ಒಂದೇ ಉದ್ದೇಶ ಎಂದರೆ ಚುನಾವಣೆ ಗೆಲ್ಲುವುದು. ಅದಕ್ಕೆ ಯಾವ ಮಾರ್ಗ ಹಿಡಿದರೂ ಸರಿ. ಈ ದಾಳಿ ಹಾಗೂ ನಿಂದನೆ ಆ ಸಾಧನಗಳು. ಮೋದಿಯನ್ನು ಟೀಕಿಸುವ ಯಾರ ವಿರುದ್ಧವಾದರೂ ಪ್ರಕರಣ ಹೆಣೆಯಲಾಗುತ್ತದೆ.

ಗುಜರಾತ್‌ನ ಐಪಿಎಸ್ ಅಧಿಕಾರಿ ಪ್ರದೀಪ್ ಶರ್ಮಾ, ತೀಸ್ತಾ ಸೇಟಲ್ವಾಡ್ ಹೀಗೆ. ಅವರು ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳುವುದು ಹೇಗೆ ಎಂದರೆ, "ಎಲ್ಲರೂ ನನಗೆ ಇದನ್ನೇ ಮಾಡಿದ್ದಾರೆ. ಆದ್ದರಿಂದ ನಾನೂ ಇದನ್ನು ಮಾಡುತ್ತೇನೆ" ಇದು ಅವರ ಸಮರ್ಥನೆ.

ಸ್ವಾತಿ: ನೀವು ಮೋದಿಯನ್ನು ಬಲ್ಲಿರಿ. ಅವರಿಗಾಗಿ ಪ್ರಚಾರ ಮಾಡಿದ್ದೀರಿ
ಶೌರಿ: ಹೌದು. ನಾನು ಅವರನ್ನು ಚೆನ್ನಾಗಿ ಬಲ್ಲೆ. ನನ್ನ ಲವಾಸ ನಿವಾಸಕ್ಕೆ ಅವರು ಬಂದ ಮೇಲೆ ಅವರಿಗೆ ಪ್ರಚಾರದಲ್ಲಿ ನಾನು ಸಹಕರಿಸಿದೆ. ಏಕೆಂದರೆ ಮನಮೋಹನ ಸಿಂಗ್ ಸರಕಾರದ ನಿಷ್ಕ್ರಿಯತೆ ವಿರುದ್ಧ ನಾವು ರೋಸಿ ಹೋಗಿದ್ದೆವು. ಆದರೆ ಇದು ನನಗೆ ದೊಡ್ಡ ಪಾಠ.

ನನ್ನ ಜೀವನದಲ್ಲಿ ಎರಡನೇ ಬಾರಿಗೆ ಪಾಠ ಕಲಿತಿದ್ದೇನೆ. ಮೋದಿಯನ್ನು ಬೆಂಬಲಿಸಿದ್ದು ನಾನು ಜೀವನದಲ್ಲಿ ಮಾಡಿದ ದೊಡ್ಡ ತಪ್ಪು. ಹಾಲಿ ಸರ್ಕಾರದ ಬಗ್ಗೆ ರೋಸಿ ಹೋದ ನೀವು ಯಾರನ್ನೂ ಬೆಂಬಲಿಸಬಹುದು. ರಾಜೀವ್‌ಗಾಂಧಿ ಕಾಲದಲ್ಲಿ ನಾವು ವಿ.ಪಿ.ಸಿಂಗ್ ಅವರನ್ನು ಬೆಂಬಲಿಸಿದಾಗಲೂ ಇದೇ ಆಯಿತು. ಇದೀಗ ಮೋದಿ ಬೆಂಬಲಿಸಿದ್ದೂ ಹಾಗೆಯೇ ಆಗಿದೆ. ಚಂದ್ರಶೇಖರ್ ಅವರ ಎಚ್ಚರಿಕೆಯ ಹೊರತಾಗಿಯೂ ನಾನು ವಿ.ಪಿ.ಸಿಂಗ್ ಅವರನ್ನು ಬೆಂಬಲಿಸಿದೆ.

ಅವರು ಚೋ ರಾಮಸ್ವಾಮಿಯವರಲ್ಲಿ, "ನಿಮ್ಮ ಸ್ನೇಹಿತನಿಗೆ ಹೇಳಿ; ಅವರು ವಿ.ಪಿ.ಸಿಂಗ್ ಅವರನ್ನು ಬೆಂಬಲಿಸುತ್ತಿದ್ದಾರೆ. ಅವರು ಅಪಾಯಕಾರಿ ವ್ಯಕ್ತಿ" ಎಂದಿದ್ದರು. ಆಗ ನಮ್ಮ ಎಕ್ಸ್‌ಪ್ರೆಸ್ ಪತ್ರಿಕೆ ಮೇಲೆ ಬಹಳಷ್ಟು ಪ್ರಕರಣಗಳು ಇದ್ದವು. ಆಗ ನಾನು ರಾಮಸ್ವಾಮಿಯವರಿಗೆ ಒಂದು ಗಾದೆ ಹೇಳಿದ್ದೆ.

"ಮನೆಗೆ ಬೆಂಕಿ ಬಿದ್ದು ಉರಿಯುತ್ತಿರುವಾಗ ಗಂಗೆಯ ನೀರಿಗೆ ಕಾಯಲಾಗದು" ಅದು ಪೆಟೋಲ್ ಅಲ್ಲ ಎಂಬ ಖಾತ್ರಿ ಇದೆಯೇ ನಿಮಗೆ ಎಂದು ಚೋ ಕೇಳಿದರು. ಪ್ರಕರಣದಲ್ಲಿ ಕೊನೆಗೆ ಅದೇ ಆಯಿತು.

ಎರಡನೆ ಬಾರಿ ಅದೇ ಮರುಕಳಿಸಿತು. ಆದರೆ ಈ ಕಥೆಗೆ ಇನ್ನೊಂದು ಮುಖವೂ ಇದೆ. ನಾನು ಹಾಗೆಯೇ ಇದ್ದೇನೆ. ಆದರೆ ನಾನು ಮೋದಿಯನ್ನು ಬೆಂಬಲಿಸುವಾಗ, ಅವರು ನನ್ನನ್ನು ಪೂಜಿಸಿದರು. ಆದರೆ ಅವರ ಕ್ರಿಯೆಗಳ ಬಗ್ಗೆ ಮಾತನಾಡಿದಾಗ, ಅವರು ಸೃಷ್ಟಿಸುತ್ತಿದ್ದಾರೆ.

ನನಗೆ ಭ್ರಮನಿರಸನವಾಯಿತು. ಆದರೆ ವಾಸ್ತವ ಏನು? ಈ ನಿಂದನೆ ನಿಜವಲ್ಲವೇ? ಸಂಸ್ಥೆಗಳ ಮಾನ ಕಳೆದಿದ್ದಾರೆಯೇ ಇಲ್ಲವೇ? ಮೌಲ್ಯಗಳನ್ನು ಗಾಳಿಗೆ ತೂರಿಲ್ಲವೇ? ದಾಳಿಯನ್ನು ಒಂದು ರೂಢಿಯಾಗಿ ಮಾಡಿಕೊಂಡಿಲ್ಲವೇ? ಇವೆಲ್ಲದರ ಬಗ್ಗೆ ಮೋದಿಗೆ ತಿಳಿದಿಲ್ಲ ಎಂದು ಹೇಳಲು ಸಾಧ್ಯವೇ?

ಸ್ವಾತಿ: ಈ ಬಗ್ಗೆ ಮೋದಿಗೆ ತಿಳಿದಿಲ್ಲ ಎನಿಸುತ್ತದೆಯೇ?
ಶೌರಿ: ಇಲ್ಲ. ಅದನ್ನು ಯಾರಾದರೂ ಹೇಗೆ ನಂಬಲು ಸಾಧ್ಯ? ಮೋದಿಗೆ ಎಲ್ಲವೂ ಗೊತ್ತಿದೆ. ಅವರ ವಿಚಕ್ಷಣಾ ಸೇವೆ ಅದ್ಭುತವಾಗಿದೆ. ಪತ್ರಿಕೆಗಳಲ್ಲಿ ಏನು ಬರುತ್ತಿದೆ ಎನ್ನುವುದು ಅವರಿಗೆ ಗೊತ್ತಿಲ್ಲವೇ? ಸಚಿವರು ಏನು ಹೇಳುತ್ತಿದ್ದಾರೆ ಎನ್ನುವ ಅರಿವಿಲ್ಲವೇ? ಮಹೇಶ್ ಶರ್ಮಾ ಅಥವಾ ಅವರ ಪಕ್ಷದವರು ಏನು ಹೇಳುತ್ತಿದ್ದಾರೆ? ಇವರು ಪಕ್ಷದ ಗಣ್ಯರು. ಇವೆಲ್ಲವನ್ನೂ ತಿಳಿದ ಮೋದಿ ಏನೂ ತಿಳಿಯದಿರಲು ಹೇಗೆ ಸಾಧ್ಯ? ಅವರು ಅಷ್ಟು ಸಮರ್ಥರಾಗಿದ್ದರೆ ಇಂಥ ಸಣ್ಣವರನ್ನು ನಿಯಂತ್ರಿಸಲು ಆಗುತ್ತಿಲ್ಲವೇ? ಮೂರನೆಯದಾಗಿ ಒಂದು ಸ್ಪಷ್ಟ ರೀತಿ ಇದೆ: ಒಂದು ಹೇಳಿಕೆ ನೀಡಲಾಗುತ್ತದೆ, ಒಂದು ಘಟನೆ ಸೃಷ್ಟಿಸಲಾಗುತ್ತದೆ.

ಒಂದು ಆಂದೋಲನಕ್ಕೆ ಚಾಲನೆ ನೀಡಲಾಗುತ್ತದೆ. ಅವರು ಮೌನವಾಗಿರುತ್ತಾರೆ. ಪ್ರತಿಯೊಬ್ಬರೂ, ಪ್ರಧಾನಿ ಮಾತನಾಡಲಿ ಎಂದು ಹೇಳುತ್ತಾರೆ. ಇಲ್ಲ. ಇಂಥ ಪ್ರಚಾರಕ್ಕೆ ಆಹಾರ ನೀಡಲಾಗಿದೆಯೇ ಅಥವಾ ನಿಂದನೆಗೆ ಆಹಾರ ನೀಡಲಾಗಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೋರುತ್ತಾರೆ. ಕೊನೆಗೆ ಮೂರು ತಿಂಗಳ ಬಳಿಕ ಅವರು ಗೊಂದಲಕಾರಿ ಹೇಳಿಕೆ ನೀಡುತ್ತಾರೆ. "ಮಾತೃತ್ವ ಒಳ್ಳೆಯದು. ನಾವೆಲ್ಲ ನಮ್ಮ ತಾಯಿಯನ್ನು ಗೌರವಿಸಬೇಕು"

ಸ್ವಾತಿ: ಮಾತೃತ್ವ ಹಾಗೂ ಆಪಲ್ ಪೀ?
ಶೌರಿ: ಹೌದು; ಆ ವ್ಯಕ್ತಿ ತಾನು ಗೋಮಾತೆ ಬಗ್ಗೆ ಮಾತನಾಡುತ್ತಿದ್ದೇನೆ ಎನ್ನುತ್ತಾರೆ. ಅಂಥದ್ದು ನಿಮಗೆ ಗೊತ್ತು. ಯಾವ ವಿಧದಲ್ಲಿ ಇದು ನಡೆಯುತ್ತದೆ ಎಂದು ಯಾವ ಮೂರ್ಖನಿಗಾದರೂ ಗೊತ್ತಾಗಬಹುದು. ಇದು ಮತ್ತೆ ಮತ್ತೆ ಆಗುತ್ತಿದೆ.

ಉತ್ತರ ಪ್ರದೇಶದಲ್ಲಿ ಕೊನೆಯ ಮತ ಚಲಾವಣೆಯಾಗುವಾಗ ಲವ್ ಜಿಹಾದ್ ನಿಲ್ಲುತ್ತದೆಯೇ? ಮುಸ್ಲಿಂ ಹುಡುಗರು ಹಿಂದೂ ಹುಡುಗಿಯನ್ನು ಬಿಟ್ಟುಬಿಡುತ್ತಾರೆ. ಎಲ್ಲ ಉದ್ದೇಶವೂ ಚುನಾವಣೆ ಗೆಲ್ಲುವುದು ಎನ್ನುವುದು ಸ್ಪಷ್ಟ. ಅದಕ್ಕಾಗಿ ಅವರು ಏನನ್ನೂ ಮಾಡಬಲ್ಲರು.

ಸ್ವಾತಿ: ಹೆಚ್ಚು ಆತಂಕಕಾರಿ ಯಾವುದು?

ಶೌರಿ: ಅದು ಮುಜಾಫರ್‌ನಗರ ಹತ್ಯೆಯಲ್ಲಿ ನಡೆಯಿತು. ಈಗ ಕಾಶ್ಮೀರದಲ್ಲಿ ನಡೆಯುತ್ತಿದೆ. ಹಲವು ಮಂದಿ ಅಂಧರಾದರು. 61 ಮಂದಿ ಮೃತಪಟ್ಟರು. ಈ ಮಂದಿ ಎಷ್ಟು ಮೂರ್ಖರು ಎಂದರೆ ಯಾರನ್ನಾದರೂ ಕೊಲ್ಲಬಹುದು ಎಂದುಕೊಂಡಿದ್ದಾರೆ. ಜಮ್ಮು ಪ್ರದೇಶದಲ್ಲಿ ಗೋಮಾಂಸ ವಿಚಾರಕ್ಕೆ ಒಬ್ಬ ಟ್ರಕ್ ಚಾಲಕನನ್ನು ಹತ್ಯೆ ಮಾಡಿದರೆ, ಕಾಶ್ಮೀರ ಹೊತ್ತಿ ಉರಿಯುತ್ತದೆ ಎಂಬ ಕಲ್ಪನೆ ಇಲ್ಲ.

ಕೇರಳ, ಬಿಹಾರ ಅಥವಾ ಉತ್ತರ ಪ್ರದೇಶದಲ್ಲಿ ಏನು ನಡೆದರೂ, ಕಾಶ್ಮೀರದಲ್ಲಿ ದಾಖಲಾಗುತ್ತದೆ. ಒಂದು ವಿಧಾನ ರೂಪುಗೊಂಡರೆ, ಮುಸ್ಲಿಮರಿಗೆ 1940ರ ದಶಕ ನೆನಪಿಗೆ ಬರುತ್ತದೆ. ನಮಗೆ ಇಲ್ಲಿ ಸ್ಥಳ ಇಲ್ಲ ಎನ್ನುವುದು.

ಸ್ವಾತಿ: ಬಿಜೆಪಿ ಐಟಿ ಕೋಶದ ಸದಸ್ಯರು ಕೋಮು ಸುಳ್ಳುಗಳನ್ನು ಸೃಷ್ಟಿಸುತ್ತಿದ್ದಾರೆ. ಉದಾಹರಣೆಗೆ ದಾದ್ರಿ ಘಟನೆ ಬಳಿಕ ಬಿಜೆಪಿ ಐಟಿ ಕೋಶದ ಸದಸ್ಯರೊಬ್ಬರು, ದನ ಮಾರುವವರು ಪೊಲೀಸರನ್ನು ಅಟ್ಟಾಡಿಸುವ ಚಿತ್ರ ಟ್ವೀಟ್ ಮಾಡಿದರು. ಇದು ಗೊತ್ತಾದ ಬಳಿಕ ಬಿಜೆಪಿ ಅರವಿಂದ್ ಗುಪ್ತಾ ಅವರ ಮೂಲಕ ಇದಕ್ಕೂ ನಮಗೂ ಸಂಬಧವಿಲ್ಲ ಎಂದರು.

ಇದಾದ ಒಂದು ಗಂಟೆಯಲ್ಲೇ, ಆ ವ್ಯಕ್ತಿ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಪ್ರಕರಣ ದಾಖಲಿಸಿದೆ. ಆತನ ಬೆಂಬಲಕ್ಕೆ ನಾವಿದ್ದೇವೆ ಎಂದು ಟ್ರೆಂಡ್ ಮಾಡಿದರು. ಈ ದ್ವಿಮುಖ ಧೋರಣೆ ಇದೆ. ಈ ಬಗ್ಗೆ ಏನು ಹೇಳುತ್ತೀರಿ?

ಶೌರಿ: ಇದು ಗಲಭೆ ಎಬ್ಬಿಸುವ ನಿರ್ದಿಷ್ಟ ಪ್ರಯತ್ನ. ಜನರನ್ನು ಒಡೆಯುವುದು ಉದ್ದೇಶ. ಬೇರೆಯವರನ್ನು ಅವರು ದೇಶದ್ರೋಹಿಗಳು ಎಂದು ಬಿಂಬಿಸುತ್ತಾರೆ. ಅದರೆ ಅವರು ಒಬ್ಬ ವ್ಯಕ್ತಿಯನ್ನು ಥಳಿಸುವುದು ಅವರ ಪ್ರಕಾರ ಸರಿ.

ಸ್ವಾತಿ: ನೀವು ಪ್ರಸ್ತಾವಿಸಿದ ದೇಶದ್ರೋಹದ ವಿಚಾರ ಮಹತ್ವದ್ದು. ನಮ್ಮ ಸಹಪ್ರಜೆಯನ್ನು ದೇಶದ್ರೋಹಿ ಎಂದು ಕರೆದದ್ದು ನನಗೆ ಗೊತ್ತಿಲ್ಲ. ಈ ಹಂತದಲ್ಲಿ ಇಂಥ ಪದ ಎಲ್ಲಿಂದ ಬಂತು?

ಶೌರಿ: ಇಂದಿರಾಗಾಂಧಿ ವಿದೇಶಿ ಕೈವಾಡದ ಬಗ್ಗೆ ಮಾತನಾಡುತ್ತಿದ್ದರು. ಇದು ವಿದೇಶಿ ಕೈ ಅಲ್ಲ. ಆದರೆ ನಾನು ವಿದೇಶಿ. ನಾನು ವಿದೇಶಿಯರ ಸಾಧನ ಮಾತ್ರವಲ್ಲ. ನಾನು ಹೊರಹಾಕಲೇಬೇಕಾದವನು,
ಅವರ ವಿರುದ್ಧ ನಾವು ಎಂಬ ಸ್ಥಿತಿಯನ್ನು ಸೃಷ್ಟಿಸುತ್ತೀರಿ. ಎಲ್ಲವೂ ಹಾಗೆಯೇ. ಹಾಗಾದರೆ ಅವರು ದುಷ್ಟರೇ? ಅವರು ದೇಶದ್ರೋಹಿಗಳು. ನಮ್ಮ ಸಂಸ್ಕೃತಿಗೆ ವಿರುದ್ಧ ಇರುವವರು. ಮೋದಿ ಹಾಗೂ ಶಾ ಬಿಜೆಪಿಯನ್ನು ಇಂದಿರೀಕರಣ ಮಾಡುತ್ತಿದ್ದಾರೆ. ಏಕೆಂದರೆ ನೀವು ಮೋದಿ ವರ್ಸಸ್ ಸಂಪುಟವನ್ನು ನೊಡಿದರೆ, ಅಲ್ಲಿ ಯಾರೂ ಇಲ್ಲ. ಮೋದಿ ಮತ್ತು ಪಕ್ಷ. ಅಲ್ಲಿ ಪಕ್ಷವೂ ಇಲ್ಲ.

ಕೇವಲ ಮೋದಿ ಮತ್ತು ಶಾ. ಸಿಎಂ ಆಯ್ಕೆಯನ್ನು ನೋಡಿ. ರೂಪಾನಿ, ಫಡ್ನವೀಸ್, ಖಟ್ಟರ್- ಎಲ್ಲರೂ ಭದ್ರ ನೆಲೆ ಇಲ್ಲದವರು. ಬಳಿಕ ಅವರನ್ನು ಸಂಪೂರ್ಣವಾಗಿ ಹಿಡಿತದಲ್ಲಿಟ್ಟುಕೊಳ್ಳಲಾಗುತ್ತದೆ. ಇದೀಗ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅಧಿಕಾರ ಅಮಿತ್ ಶಾ ಅವರಿಗೆ ನೀಡುವ ಸಂಸದೀಯ ಪಕ್ಷದ ನಿರ್ಣಯ. ಈಗ ಶಾಸಕರ ಕಥೆ ಏನು?

ಸ್ವಾತಿ: ಇವೆಲ್ಲವನ್ನೂ ನೀವು ನೋಡುತ್ತಿದ್ದು, ನೀವು ಇನ್ನೂ ಬಿಜೆಪಿ ಭಾಗವಾಗಿದ್ದೀರಾ? ಏಕೆಂದರೆ ನೀವು ಸದಸ್ಯರೇ ಅಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.

ಶೌರಿ: ಖಂಡಿತವಾಗಿಯೂ ನಾನು ಬಿಜೆಪಿ ಸದಸ್ಯನಾಗಿರಲಾರೆ. ಅದು ಮೋದಿಯವರ ಮುಂದಾಲೋಚನೆಯನ್ನು ತೋರಿಸುತ್ತದೆ. ನಾನು ಆ ಪಕ್ಷದ ಭಾಗವಾಗಿರಲಾರೆ.


ಸ್ವಾತಿ: ಬಿಜೆಪಿ ಹೇಳುವಂತೆ, ನೀವು ಹಣಕಾಸು ಸಚಿವರಾಗಬಯಸಿದ್ದಿರಿ. ಅದು ಸಿಗದಿದ್ದಾಗ ಮೋದಿ ಮೇಲೆ ದಾಳಿ ಮಾಡುತ್ತಿದ್ದೀರಿ.
ಶೌರಿ: ಅದು ಸತ್ಯವೆಂದೇ ಭಾವಿಸಿಕೊಳ್ಳೋಣ. ಆದರೆ ವಾಸ್ತವ ಏನು? ಪಾಕಿಸ್ತಾನದ ಎದುರು ನೀವು ಕತ್ತೆಯಾಗಲಿಲ್ಲವೇ? ಎನ್‌ಎಸ್‌ಜಿ ಅಥವಾ ಚೀನಾಗೆ ಸಂಬಂಧಿಸಿದ ವಿಷಯದಲ್ಲಿ ದೇಶದ ಮಾನ ಕಳೆಯಲಿಲ್ಲವೇ? ಈ ವಾಸ್ತವಗಳ ಬಗ್ಗೆ ಏನು ಹೇಳುತ್ತೀರಿ? ಸದಾ ಇರುವ ಬ್ಯಾಂಕ್ ಸಾಲದ ಸಮಸ್ಯೆ ಬಗ್ಗೆ ಏನು ಹೇಳುತ್ತೀರಿ? 2013ರಲ್ಲಿ ಇವೆಲ್ಲ ನಿಮಗೆ ಗೊತ್ತಿರಲಿಲ್ಲವೇ? ಇದು ಹೀಗಾಗುತ್ತದೆ ಎಂದು ನಾನು ಎಣಿಸಿರಿಲ್ಲ.

ಮೋದಿ ಖಂಡಿತವಾಗಿಯೂ ಏನು ಮಾಡಬೇಕು ಎಂಬ ಬಗ್ಗೆ ಆರೇಳು ಗಂಟೆಗಳ ಪ್ರಸ್ತುತಿ ವೀಕ್ಷಿಸಿರುತ್ತಾರೆ. ಆದರೆ ಅದು ಖಂಡಿತವಾಗಿಯೂ ನಟನೆ.

ಸ್ವಾತಿ: ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ವಿಚಾರವನ್ನು ತೆಗೆದುಕೊಳ್ಳೋಣ. ಅವರನ್ನು "ಮಾನಸಿಕವಾಗಿ ಅವರು ಪೂರ್ಣ ಭಾರತೀಯರಲ್ಲ""ಎಂದು ಸುಬ್ರಹ್ಮಣ್ಯ ಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ದಾಳಿ ಮಾಡುವ ಮೂಲಕ ಏಕೆ ಓಡಿಸಲಾಯಿತು?

ಶೌರಿ: ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ನಿಸ್ಸಂದೇಹವಾಗಿ ಕಾರ್ಪೊರೇಟ್ ಹಿತಾಸಕ್ತಿಯಿಂದ. ರಾಜನ್ ಬ್ಯಾಂಕುಗಳ ಮೇಲೆ ವಿಧಿಸಿದ್ದ ಶಿಸ್ತಿನ ಕಾರಣದಿಂದ. ರಾಜನ್ ಒಂದಲ್ಲ ಒಂದು ಬಗೆಯಿಂದ ಅವರ ಮೇಲೆ ಒತ್ತಡ ತರುತ್ತಿದ್ದರು. ಇವರು ನೀಡಲೇಬೇಕಾಗಿತ್ತು. ಅವರ ಹೆಸರು ಬಹಿರಂಗವಾಗುತ್ತಿದೆ. ಆದ್ದರಿಂದ ಅವರೂ ಭಯಾನಕ ವ್ಯಕ್ತಿಯಾದರು. ಅವರು ಭಾರತೀಯರಲ್ಲ ಎಂದಾದರು. ಮತ್ತೆ ಅದೇ ವಿಧಾನ.

ಸ್ವಾತಿ: ಮೋದಿ ಮೌನ ಮುರಿದರು. ಆದರೆ ಅದು ತೀರಾ ದುರ್ಬಲ ಸಮರ್ಥನೆ?

ಶೌರಿ: ಅದು ಘಲಿಬ್ ಕವಿತೆಯಂತೆ. ನನ್ನ ತಲೆಕಡಿದು, ಆಕೆ ಕ್ರೌರ್ಯ ಬಿಟ್ಟಳು. ಅದನ್ನು ನಾನು ಇನ್ನೆಂದೂ ಮಾಡುವುದಿಲ್ಲ. ನೀವು ಪ್ರಾಮಾಣಿಕವಾಗಿ ಪಶ್ಚಾತ್ತಾಪಪಡುತ್ತೀರಿ. ಆದರೆ ನನ್ನ ತಲೆ ಕಡಿದದ್ದಾಗಿದೆ. ಆರ್‌ಬಿಐ ಗವರ್ನರ್ ಅವರನ್ನು ಕಿತ್ತೆಸೆದ ಬಳಿಕ, ಇದು ಪ್ರಮುಖ ಸಂಕೇತ ರವಾನಿಸುತ್ತಿದೆ. ಮೊದಲನೆಯದಾಗಿ ಇದು ಕಾರ್ಪೊರೇಟ್ ಹೌಸ್‌ಗಳಿಗೆ ಮಾಡಿದ ಉಪಕಾರ.

ನಮಗೆ ಬೇಕಾದ್ದನ್ನು ಮಾಡದಿದ್ದರೆ, ನಿಮ್ಮನ್ನು ಕಿತ್ತೆಸೆಯಲಾಗುತ್ತದೆ ಎಂಬ ಸಂದೇಶವನ್ನೂ ಇದು ಕೊಟ್ಟಿದೆ. ವೃತ್ತಿಪರರಿಗೆ ಇಲ್ಲಿ ಸ್ಥಾನವಿಲ್ಲ ಎನ್ನುವುದೂ ದೃಢಪಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಯಾವ ಸಂಸ್ಥೆಯೂ ಸ್ವಾಯತ್ತ ಅಲ್ಲ ಎನ್ನುವುದು.

ಇದು ಖಚಿತವಾಗಿ ಗುಜರಾತ್ ಮಾದರಿ. ಏಕ ವ್ಯಕ್ತಿ. ಬೇರೆ ಯಾರೂ ಇಲ್ಲ. ಒಬ್ಬ ವ್ಯಕ್ತಿ ಯಾವ ವಿಪರೀತಕ್ಕಾದರೂ ಹೋಗಬಹುದು. ನಾಟಕ ಸಾಧನೆಯಲ್ಲ ಎನ್ನುವುದು ಆ ಮನುಷ್ಯನಿಗೆ ಇನ್ನೂ ಅರ್ಥವಾಗುತ್ತಿಲ್ಲ. ಆಡ್ವಾಣಿ ಹೇಳಿದಂತೆ ಮೋದಿ ಒಳ್ಳೆಯ ಈವೆಂಟ್ ಮ್ಯಾನೇಜರ್. ಅದನ್ನು ಮತ್ತೆ ಮತ್ತೆ ಹೇಳುತ್ತಿದ್ದರು. ಆದರೆ ಮೋದಿ ಈಗ ಈವೆಂಟ್ ಮ್ಯಾನೇಜರ್ ಆಗಿದ್ದಾರೆಯೇ ವಿನಃ ಒಳ್ಳೆಯ ಈವೆಂಟ್ ಮ್ಯಾನೇಜರ್ ಆಗಿ ಉಳಿದಿಲ್ಲ.

ಸ್ವಾತಿ: ಆರೆಸ್ಸೆಸ್ ಕೂಡಾ ಮೋದಿ ಹಾಗೂ ಶಾ ವಿಚಾರದಲ್ಲಿ ರಾಜಿ ಮಾಡಿಕೊಂಡಿದೆ ಎನಿಸುತ್ತದೆಯೇ?
ಶೌರಿ: ಇಲ್ಲ. ಅವರು ಪ್ರತ್ಯೇಕ ಎಂದು ನೀವ್ಯಾಕೆ ನಂಬುತ್ತೀರಿ? ಮೋದಿ ಹಾಗೂ ಶಾ ಪ್ರತಿದಿನವೂ ಆರ್‌ಎಸ್‌ಎಸ್ ಮೌಲ್ಯವನ್ನು ಪಾಲಿಸುತ್ತಿದ್ದಾರೆ. ಇವು ಅವರ ಮೌಲ್ಯಗಳು. ಅಧಿಕಾರದಲ್ಲಿರುವುದು ಆರ್‌ಎಸ್‌ಎಸ್. ಅವರನ್ನು ಪೀಠದಲ್ಲಿಡುವುದು ಮೂರ್ಖತನ. ಸಂಸ್ಥೆಗಳ ಮುಖ್ಯಸ್ಥರಾಗಿರುವವರನ್ನು ನೋಡಿ. ಅದು ಧೀರ್ಘಾವಧಿ ಅನುಕ್ರಮಣಿಕೆ. ಐಸಿಎಚ್‌ಆರ್ ನೋಡಿ.

ಸ್ವಾತಿ: ಮೋದಿ ನನ್ನನ್ನು ಅಥವಾ ನಮ್ಮ ಶಾಸಕರನ್ನು ಕೊಲ್ಲಿಸುತ್ತಾರೆ ಎಂಬ ಭೀತಿ ಉಂಟಾಗಿದೆ ಎಂಬ ವಿಡಿಯೊವನ್ನು ದಿಲ್ಲಿ ಸಿಎಂ ಕೇಜ್ರಿವಾಲ್ ಜಾಲತಾಣದಲ್ಲಿ ಹರಿಯಬಿಟ್ಟರು. ಹಲವು ಮಂದಿ ಬಿಜೆಪಿ ಬೆಂಬಲಿಗರು ಅವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಅವರ ಬೆಂಬಲಿಗರೊಬ್ಬರು, ಮೋದಿ ಅನುಸರಿಸುವ ಹ್ಯಾಂಡಲ್ ಒಂದರಿಂದ ನಾವು ಅವರನ್ನು ಕೊಲ್ಲಬಯಸಿದ್ದಾಗಿ ಹೇಳುವ ಟ್ವೀಟ್‌ನ ಸ್ಕ್ರೀನ್ ಶಾಟ್ ಪ್ರದರ್ಶಿಸಿದರು. ಈ ಬಗ್ಗೆ ಏನು ಹೇಳುತ್ತೀರಿ?

ಶೌರಿ: ಇಲ್ಲ. ಮುಖ್ಯ ವಿಚಾರವೆಂದರೆ ಕೇಜ್ರಿವಾಲ್ ಆ ನಿರ್ಧಾರಕ್ಕೆ ಬರಬೇಕಾಗಿರಲಿಲ್ಲ. ಮುಖ್ಯ ಅಂಶ ಎಂದರೆ ಜನ ಅವರ ಹತ್ಯೆಗೆ ಆಗ್ರಹಿಸುತ್ತಿದ್ದಾರೆ. ಆ ವ್ಯಕ್ತಿಗಳು ಮೋದಿಯವರೇ ಕುಮ್ಮಕ್ಕು ನೀಡಿದ ಅಂದರೆ ಮೋದಿ ಅನುಸರಿಸುವವರು. ನಿಮ್ಮ ನೆರೆಯವರಿಗೆ ನೀವು ಕಚ್ಚಬೇಕಾಗಿಲ್ಲ. ಅವರಿಗೆ ಕಚ್ಚಲು ನಾಯಿ ಇದೆ. ಅದನ್ನು ಮಾಡಲಾಗುತ್ತಿದೆ.

ಸ್ವಾತಿ: ಬಿಜೆಪಿ ಕೇಜ್ರಿವಾಲ್ ಅವರ ಮೇಲೆ ವಾಗ್ದಾಳಿ ಮಾಡುತ್ತಿದೆ. ತೆಗಳುತ್ತಿದೆ. ಇದರಿಂದ ಏನಾಗುತ್ತದೆ? ರಾಷ್ಟ್ರೀಯವಾದಿ ಎಂದು ಹೇಳಿಕೊಳ್ಳುವ ಒಂದು ಮಾಧ್ಯಮವರ್ಗ, ತಿದ್ದಿದ ವಿಡಿಯೊವನ್ನು ಕೂಡಾ ಜೆಎನ್‌ಯು ಪ್ರಕರಣದಲ್ಲಿ ಪ್ರಸಾರ ಮಾಡಿದೆ?

ಶೌರಿ: ನಾನು ಒಂದು ವಿಷಯ ಹೇಳುತ್ತೇನೆ. ಆ ವೇಳೆಗೆ ಮೋದಿ ಇನ್ನೂ ಮುಖಭಂಗಕ್ಕೀಡಾಗಿದ್ದರು. ನಾವು ಅಹ್ಮದಾಬಾದ್‌ನಲ್ಲಿದ್ದೆವು. ಕೇಜ್ರೀವಾಲ್ ಬಗೆಗಿನ ಪ್ರಸ್ತುತಿ ಇನ್ನೂ ನನಗೆ ನೆನಪಿದೆ. ಆಪ್ ಹೇಗೆ ಪ್ರಚಾರ ನಿರ್ವಹಿಸುತ್ತಿದೆ ಎನ್ನುವುದನ್ನು ಬಿಂಬಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮನ್ನು ಹಿಂದಿಕ್ಕಿದ್ದಾರೆ ಎಂದೂ ಕೆಲವರು ಹೇಳಿದರು

Writer - ಸ್ವಾತಿ ಚತುರ್ವೇದಿ

contributor

Editor - ಸ್ವಾತಿ ಚತುರ್ವೇದಿ

contributor

Similar News

ಜಗದಗಲ
ಜಗ ದಗಲ