ಹುಚ್ಚು ಅಭಿಮಾನಿಗಳಿಂದ ಪ್ರಜಾಪ್ರಭುತ್ವಕ್ಕೆ ಕಿಚ್ಚು

Update: 2017-01-14 12:49 GMT

ಮೇಲ್ವರ್ಗದ ಬಗ್ಗೆ, ನಕಲಿ ಉದಾರವಾದಿಗಳ ಬಗ್ಗೆ ಮತ್ತು ಮೋದಿಯನ್ನು ಅಂಧವಾಗಿ ದ್ವೇಷಿಸುವವರ ಬಗ್ಗೆ ನನಗೆ ಯಾವ ಅಭಿಮಾನವೂ ಇಲ್ಲ. ಹೆಚ್ಚೆಂದರೆ ಅವರು ಯಾರಿಗೂ ಹಾನಿ ಮಾಡದಿರಬಹುದು. ಆದರೆ ಅಂಧಾಭಿಮಾನಿಗಳು ಮಾತ್ರ ಆತಂಕಕಾರಿ. ನೀವು ವಾಸ್ತವ ರಾಷ್ಟ್ರೀಯವಾದಿಗಳಾಗಿದ್ದರೆ, ಒಬ್ಬ ವ್ಯಕ್ತಿ ನಿಮ್ಮ ನೆಚ್ಚಿನ ನಾಯಕನಾಗಿದ್ದರೂ, ವ್ಯಕ್ತಿಗಿಂತ ದೇಶ ಮೊದಲಾಗಬೇಕು. ನೀವು ನಿಮ್ಮ ನಾಯಕನನ್ನು ಎಷ್ಟಾದರೂ ಮೆಚ್ಚಿಕೊಳ್ಳಿ; ಆದರೆ ಭಾರತದಷ್ಟಲ್ಲ ಅಥವಾ ಕಠಿಣ ಪರಿಶ್ರಮದಿಂದ ಗಳಿಸಿದ ಪ್ರಜಾಪ್ರಭುತ್ವದಷ್ಟಲ್ಲ.

ನರೇಂದ್ರ ಮೋದಿ ತಮ್ಮ ಅಭಿಮಾನಿಗಳಲ್ಲಿ ಹುಚ್ಚು ಬೆಂಬಲ ಪಡೆಯುತ್ತಿದ್ದಾರೆ ಎಂಬ ಕಲ್ಪನೆ ಪರೀಕ್ಷಿಸುವ ದೃಷ್ಟಿಯಿಂದ ಕಳೆದ ವಾರ ನಾನು ಟ್ವಿಟರ್ ಮತದಾನ ಕೈಗೊಂಡೆ. ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ತೊಡೆದು ಹಾಕುವ ಸಲುವಾಗಿ ಮೋದಿ ತುರ್ತು ಪರಿಸ್ಥಿತಿ ಘೋಷಿಸಿದರೆ ನೀವು ಬೆಂಬಲಿಸುತ್ತೀರಾ? ಎನ್ನುವುದು ಪ್ರಶ್ನೆಯಾಗಿತ್ತು. ಬಂದ ಫಲಿತಾಂಶ: ಭಾಗವಹಿಸಿದ್ದ 10 ಸಾವಿರ ಟ್ವಿಟರ್ ಖಾತೆದಾರರ ಪೈಕಿ ಶೇಕಡ 57ರಷ್ಟು ಮಂದಿ ಅಂತಹ ತುರ್ತು ಪರಿಸ್ಥಿತಿಯನ್ನು ಬೆಂಬಲಿಸುವುದಾಗಿ ಹೇಳಿದರು.

ಸಾಮಾನ್ಯವಾಗಿ ಟ್ವಿಟರ್ ಮತಗಣನೆಯನ್ನು ಅನ್ವಯಿಸಲಾಗದು. ಏಕೆಂದರೆ ಅದು ತೀರಾ ತಿರುಚಿದ ಮಾದರಿ. ಇದು ವೈಜ್ಞಾನಿಕವಲ್ಲ ಎಂಬಿತ್ಯಾದಿ ವಿಶ್ಲೇಷಣೆ ಇದೆ. ಅಂಥ ಪ್ರಸ್ತಾವನೆ ಸರಕಾರದಿಂದಲೂ ಇಲ್ಲ ಅಥವಾ ಈ ಪ್ರಶ್ನೆ ತನ್ನ ಸ್ವಂತ ಅಭಿಪ್ರಾಯದ ಸೂಚಕವೂ ಅಲ್ಲ. ಆದಾಗ್ಯೂ ಮೋದಿಯ ಕಟ್ಟಾ ಬೆಂಬಲಿಗರು ಯಾವ ಅಭಿಪ್ರಾಯ ಹೊಂದಿದ್ದಾರೆ ಎನ್ನುವುದನ್ನು ಈ ಫಲಿತಾಂಶ ಸ್ಪಷ್ಟಪಡಿಸುತ್ತದೆ. ಟ್ವಿಟರ್ ಮತದಾನದಲ್ಲಿ ಪಾಲ್ಗೊಂಡ ಬಹುತೇಕ ಎಲ್ಲರೂ ಯುವಕರು, ಸುಶಿಕ್ಷಿತರು, ಡಿಜಿಟಲ್ ವ್ಯವಸ್ಥೆಗೆ ಹೊಂದಿಕೊಂಡವರು ಹಾಗೂ ಇಂಗ್ಲಿಷ್ ಬಲ್ಲವರು ಎನ್ನುವುದು ಗಮನಾರ್ಹ.

ಹೌದು; ಗಣನೀಯ ಸಂಖ್ಯೆಯ ಪ್ರಗತಿಪರ ಯುವ ಭಾರತೀಯರು ತಮ್ಮ ಪ್ರಜಾಪ್ರಭುತ್ವವನ್ನು ತೊರೆಯಲು, ತಮ್ಮನ್ನು ಮತರಹಿತರಾಗಿ ಮಾಡಿಕೊಳ್ಳುವ ಪರವಾಗಿ ಮತ ಚಲಾಯಿಸಿದ್ದಾರೆ.

ನಿಬ್ಬೆರಗಾಯಿತೇ? ಖಂಡಿತವಾಗಿಯೂ ಈ ಪ್ರಶ್ನೆ ನ್ಯಾಯಸಮ್ಮತವಲ್ಲ. ಅಂಥ ತುರ್ತು ಪರಿಸ್ಥಿತಿಯ ಸುಳಿವು ನೀಡುವ ಯಾವ ಅಂಶವೂ ಇಲ್ಲ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ತಮ್ಮ ಮುಖಂಡರನ್ನು ಬೆಂಬಲಿಸಲು ಅಥವಾ ಬೆಂಬಲಿಸದಿರಲು ಅಂತಹ ಕಠಿಣ ಆಯ್ಕೆಯನ್ನು ಮಾಡಿಕೊಳ್ಳಬೇಕಿಲ್ಲ ಎನ್ನುವುದೂ ವಾಸ್ತವ. ಆದರೂ ಈ ಸಂಖ್ಯೆ ಎರಡು ಅಂಶಗಳನ್ನು ಸ್ಪಷ್ಟಪಡಿಸುತ್ತದೆ. ಒಂದು ಮೋದಿ ತಮ್ಮ ಕಟ್ಟಾ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ; ಇನ್ನೊಂದು ತುರ್ತು ಪರಿಸ್ಥಿತಿ ಹಾಗೂ ಪ್ರಜಾಪ್ರಭುತ್ವವನ್ನು ತ್ಯಜಿಸುವುದು ಎಂದರೇನು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದಿರುವುದು. ಇದು ರಾಜಕೀಯ ವ್ಯವಸ್ಥೆಯಲ್ಲಿ ವಿಶ್ವಾಸದ ಕೊರತೆ ಇರುವುದನ್ನು ಮತ್ತು ಅದು ಯಾವ ಬಗೆಯ ಮುಖಂಡರನ್ನು ಸೃಷ್ಟಿಸುತ್ತದೆ ಎನ್ನುವುದನ್ನು ತೋರಿಸುತ್ತದೆ.

ಮೋದಿ ಇಷ್ಟೊಂದು ತಮ್ಮ ಅಭಿಮಾನಿಗಳ ಮನ ಗೆದ್ದಿರುವುದಕ್ಕೆ ಕಾರಣ ಸ್ಪಷ್ಟ. ಅವರು ಒಂದಷ್ಟು ನಿರೀಕ್ಷೆ ಹುಟ್ಟಿಸಿದ ನಾಯಕ. ಪರಸ್ಪರ ಕೊಂಡಿ ಬೆಸೆಯುವ ಭಾಷೆಯನ್ನು ಅವರು ಬಳಸುತ್ತಾರೆ. ಸಮಸ್ಯೆಗಳ ವಿಚಾರದಲ್ಲಿ ಮೋದಿ ದಿಟ್ಟ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಇದು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆಯೇ ಎನ್ನುವುದು ಬೇರೆ ವಿಚಾರ. ಆದರೆ ಆ ನಿಟ್ಟಿನಲ್ಲಿ ಮಾಡುವ ಪ್ರಯತ್ನ ಹಾಗೂ ಸದುದ್ದೇಶಗಳು ಪ್ರಮುಖವಾಗುತ್ತವೆ. ನೋಟು ರದ್ದತಿ ವಿಚಾರದಲ್ಲಿ ಇದು ಸ್ಪಷ್ಟವಾಗಿದೆ.

ಹಲವು ಮಂದಿ ತಜ್ಞರು ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ಈ ನಡೆಯ ಪ್ರಯೋಜನವನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಸಮರ್ಥನೆಯಾಗಿ ಅಂಕಿ ಅಂಶಗಳನ್ನು ನೀಡಿ, ವಾಸ್ತವವಾಗಿ ನೋಟು ರದ್ದತಿಯಿಂದ ಆಗುವ ಪ್ರಯೋಜನ ನಗಣ್ಯ ಎಂದು ನಿರೂಪಿಸಿದ್ದಾರೆ. ಖಂಡಿತವಾಗಿಯೂ ಇದು ವ್ಯರ್ಥ ಪ್ರಯತ್ನ. ಈ ಎಲ್ಲ ಆರ್ಥಿಕ ಲೆಕ್ಕಾಚಾರಗಳು ಮೋದಿ ಬೆಂಬಲಿಗರಿಗೆ ಅಪ್ರಸ್ತುತ. ತಮ್ಮ ನಾಯಕನ ಹೆಸರಲ್ಲಿ ತುರ್ತು ಪರಿಸ್ಥಿತಿಯನ್ನು ಸ್ವೀಕರಿಸಲು ಸಿದ್ಧರಿದ್ದಾರೆ ಎಂದರೆ, ಕುಸಿಯುತ್ತಿರುವ ಜಿಡಿಪಿ ಅಥವಾ ವಶಪಡಿಸಿಕೊಳ್ಳಲಾದ ಕಪ್ಪುಹಣದ ವಾಸ್ತವ ಅಂಕಿ ಅಂಶಗಳ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುತ್ತಾರೆಯೇ?

ಇಲ್ಲ; ನಾವು ಇಲ್ಲಿ ಮಾತನಾಡುತ್ತಿರುವುದು ಪ್ರೀತಿ ಮತ್ತು ಪ್ರೀತಿಸದಿರುವ ಬಗ್ಗೆ. ಇದು ಕಾರಣಗಳನ್ನು ಹುಡುಕುವ ಸಲುವಾಗಿ ಅಲ್ಲ.

ನೋಟು ರದ್ದತಿ ವಿಚಾರದಲ್ಲಿ ತಜ್ಞರ ಅಭಿಪ್ರಾಯ ತಪ್ಪಲ್ಲದಿದ್ದರೂ, ಪ್ರಮುಖ ಅಂಶ ಇಲ್ಲಿ ಕಾಣೆಯಾಗಿದೆ. ಈ ನಡೆಯಿಂದ ಆಗಿರುವ ಬೃಹತ್ ಅದೃಶ್ಯ ಪ್ರಯೋಜನವೆಂದರೆ, ವಿಭಜಿತವಾಗಿದ್ದ ದೇಶವನ್ನು ಏಕೀಕರಿಸುವ ಪರಿಣಾಮ. ಉದಾಹರಣೆಗೆ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಳ್ಳುವ ಕೂಡುಕುಟುಂಬವನ್ನು ಕಲ್ಪಿಸಿಕೊಳ್ಳಿ.

ಒಂದು ದಿನ ಮನೆ ಯಜಮಾನ ಎಲ್ಲರನ್ನೂ ಕೂಡಿಕೊಂಡು ಗಿಡನೆಡಲು ಕರೆದೊಯ್ದರು. ನೂರು ಗಿಡಗಳನ್ನು ನೆಟ್ಟರು. ಇಡೀ ದಿನ ಕುಟುಂಬವಾಗಿ ಕೆಲಸ ಮಾಡಿದರು. ಇದು ಯಜಮಾನ ಎಲ್ಲರ ಮೇಲೆ ಪ್ರಭುತ್ವ ಹೊಂದಿರುವ ಸೂಚಕವಲ್ಲವೇ? ಇವರು ನೆಟ್ಟ ಗಿಡಗಳ ಪೈಕಿ ಕಾಲಕ್ರಮೇಣ ಐದು ಮಾತ್ರ ಉಳಿದುಕೊಂಡವು ಎಂದು ಎಣಿಸಿಕೊಳ್ಳಿ. ನೀವು ಯಜಮಾನನನ್ನು ಇದಕ್ಕೆ ಹೊಣೆ ಮಾಡುತ್ತೀರಾ? ಒಳ್ಳೆಯ ಕಾರ್ಯಕ್ಕಾಗಿ ಎಲ್ಲರನ್ನೂ ಒಗ್ಗೂಡಿಸಿದ ಬಗ್ಗೆ ಅವರನ್ನು ಶ್ಲಾಘಿಸುವುದಿಲ್ಲವೇ? ಅಂಕಿ ಸಂಖ್ಯೆಗಳು ಏನು ಹೇಳಿದರೂ, ಈ ಕಾರಣಕ್ಕಾಗಿಯೇ ಬಹುತೇಕ ಭಾರತೀಯರು ನೋಟು ರದ್ದತಿ ವಿಚಾರದಲ್ಲಿ ಮೋದಿಯನ್ನು ಬೆಂಬಲಿಸುತ್ತಿರುವುದು.

ಆದರೂ ಈ ಪ್ರೀತಿ ತುಂಬಾ ಅಪಾಯಕಾರಿ; ಕಟ್ಟಾ ಮೋದಿ ಅಭಿಮಾನಿಗಳು ಒಬ್ಬ ವ್ಯಕ್ತಿಯನ್ನು, ಇಡೀ ಭಾರತವನ್ನು ರೂಪಿಸುವ ಸಂಸ್ಥೆಗಿಂತ ಮೇಲೆ ಎಂದು ಪರಿಗಣಿಸುವುದು ಯೋಚಿಸಬೇಕಾದ ವಿಚಾರ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ತಂತ್ರ- ಪ್ರತಿತಂತ್ರ, ಮುಕ್ತ ಮಾಧ್ಯಮ ಖಂಡಿತವಾಗಿಯೂ ಅನಿವಾರ್ಯ. ತುರ್ತು ಪರಿಸ್ಥಿತಿ ಎಂದರೆ ಭಾರತದ ಎಲ್ಲ ಪ್ರಮುಖ ಅಂಶಗಳಿಗೆ ತಿಲಾಂಜಲಿ ಎಂದೇ ಅರ್ಥ. ಅಧಿಕಾರದ ದುರ್ಬಳಕೆಗೆ ದೇಶವನ್ನು ತಳ್ಳುತ್ತದೆ. ಭಾರತವನ್ನು ರಕ್ಷಿಸಲು ದೇವದೂತನೇ ಬರಬೇಕು ಎಂದು ತಿಳಿಯುವುದು ತಪ್ಪುಕಲ್ಪನೆ. ವಾಸ್ತವವಾಗಿ ವ್ಯವಸ್ಥೆ ಹಾಗೂ ಸಾಮಾಜಿಕ ವೌಲ್ಯಗಳನ್ನು ನಿಧಾನವಾಗಿ ಸರಿಪಡಿಸಬೇಕು. ಪಾಕಿಸ್ತಾನ ಇಂತಹ ದೇವದೂತನ ಕಲ್ಪನೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸೇನಾ ಜನರಲ್‌ಗಳ ಮೇಲಿನ ಹುಚ್ಚುಪ್ರೀತಿ ಅದು. ಆ ಹುದ್ದೆ ಎಷ್ಟರ ಮಟ್ಟಿಗೆ ಗೊಂದಲದ ಗೂಡಾಗಿದೆ ಎನ್ನುವ ನಿದರ್ಶನ ನಮ್ಮ ಮುಂದಿದೆ. ನಿಮ್ಮ ದೃಷ್ಟಿಯಿಂದ ನಿಮ್ಮ ಮುಖಂಡ ಎಂತಹ ಅದ್ಭುತ ವ್ಯಕ್ತಿಯೇ ಆಗಿದ್ದರೂ, ಪ್ರಜಾಪ್ರಭುತ್ವ ಕೊನೆಗೊಳಿಸುವ ಆಶಯ ಬೇಡ.

ವಾಸ್ತವವಾಗಿ ಅಂಧ ನಂಬಿಕೆ ನಾಯಕ ಹಾಗೂ ದೇಶಕ್ಕೆ ಹಾನಿ ಉಂಟುಮಾಡುತ್ತದೆ. ಬಹುಶಃ ಯಾವುದೇ ಪ್ರಭಾವಿ ನಾಯಕರಿಗೆ ಇರವಂತೆ ಇಂದು ಹೌದಣ್ಣಗಳು ಹಾಗೂ ಹೊಗಳುಭಟ್ಟರು ಮೋದಿಯ ಸುತ್ತ ತುಂಬಿಕೊಂಡಿದ್ದಾರೆ. ಅವರ ಅಧೀನದಲ್ಲಿ ಕೆಲಸ ಮಾಡುವ ಯಾರಿಗೂ, ಮೋದಿ ನಡೆಯನ್ನು ತಪ್ಪು ಎಂದು ಹೇಳುವ ಧೈರ್ಯ ಇಲ್ಲ. ಬಹುಶಃ ತಾನು ಎಲ್ಲಿ ಎಡವಿದ್ದೇನೆ? ಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎಂದು ಮೋದಿಗೆ ತಿಳಿಯುತ್ತಿರುವುದು ಬಹುಶಃ ಅವರ ಟೀಕಾಕಾರರಿಂದ. ಆಗ ಮಾತ್ರ ಭಾರತಕ್ಕೆ ಒಳ್ಳೆಯ ರಾಜಕೀಯ ಸಿಕ್ಕಿದಂತಾಗುತ್ತದೆ. ನಮ್ಮ ವಿರೋಧ ಪಕ್ಷಗಳು ದಯನೀಯ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ, ಇಂಥ ವೈಯಕ್ತಿಕ ಟೀಕಾಕಾರರೇ ಇಂದು ರಚನಾತ್ಮಕ ಧ್ವನಿಯಾಗಿರುವುದು; ಮೋದಿ ಹಾಗೂ ಭಾರತಕ್ಕೆ ವೌಲ್ಯ ತರುವಂಥವರು. ತುರ್ತು ಪರಿಸ್ಥಿತಿಯನ್ನಾದರೂ ಎದುರಿಸಲು ಸಿದ್ಧರಿರುವ ಅಂಧಾಭಿಮಾನಿಗಳು, ಮೋದಿಯನ್ನು ಟೀಕಿಸುವವರನ್ನು ನಿಂದಿಸಲು ಹಾಗೂ ಮಟ್ಟಹಾಕಲು ಸಿದ್ಧರಿದ್ದಾರೆ. ನಿಜ ಹೇಳಬೇಕೆಂದರೆ ಮೋದಿ ಹಾಗೂ ರಾಷ್ಟ್ರನಿರ್ಮಾಣಕ್ಕೆ ಇವರಿಂದ ಯಾವ ಪ್ರಯೋಜನವೂ ಇಲ್ಲ.ಮೇಲ್ವರ್ಗದ ಬಗ್ಗೆ, ನಕಲಿ ಉದಾರವಾದಿಗಳ ಬಗ್ಗೆ ಮತ್ತು ಮೋದಿಯನ್ನು ಅಂಧವಾಗಿ ದ್ವೇಷಿಸುವವರ ಬಗ್ಗೆ ನನಗೆ ಯಾವ ಅಭಿಮಾನವೂ ಇಲ್ಲ. ಹೆಚ್ಚೆಂದರೆ ಅವರು ಯಾರಿಗೂ ಹಾನಿ ಮಾಡದಿರಬಹುದು. ಆದರೆ ಅಂಧಾಭಿಮಾನಿಗಳು ಮಾತ್ರ ಆತಂಕಕಾರಿ. ನೀವು ವಾಸ್ತವ ರಾಷ್ಟ್ರೀಯವಾದಿಗಳಾಗಿದ್ದರೆ, ಒಬ್ಬ ವ್ಯಕ್ತಿ ನಿಮ್ಮ ನೆಚ್ಚಿನ ನಾಯಕನಾಗಿದ್ದರೂ, ವ್ಯಕ್ತಿಗಿಂತ ದೇಶ ಮೊದಲಾಗಬೇಕು. ನೀವು ನಿಮ್ಮ ನಾಯಕನನ್ನು ಎಷ್ಟಾದರೂ ಮೆಚ್ಚಿಕೊಳ್ಳಿ; ಆದರೆ ಭಾರತದಷ್ಟಲ್ಲ ಅಥವಾ ಕಠಿಣ ಪರಿಶ್ರಮದಿಂದ ಗಳಿಸಿದ ಪ್ರಜಾಪ್ರಭುತ್ವದಷ್ಟಲ್ಲ.

Writer - ಚೇತನ್ ಭಗತ್

contributor

Editor - ಚೇತನ್ ಭಗತ್

contributor

Similar News