ಶಾಲೆ ಬಿಡುವ ಮಕ್ಕಳು
ಮನೆಯಲ್ಲಿ ಸತತವಾಗಿ ಆಗುತ್ತಿರುವ ಜಗಳದಿಂದ ಮಕ್ಕಳು ತಾವಾಗಿಯೇ ಶಿಕ್ಷಣದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಅವರಿಗೆ ಗಮನ ಕೊಡಬೇಕಾದ ಅಂಶವೇ ಬೇರೆಯದು ಎಂಬ ಮನಸ್ಥಿತಿ ಬಾಲ್ಯದಲ್ಲಿ ಉಂಟಾಗುತ್ತದೆ. ಹಾಗಾಗಿ ಅವರ ಶಿಕ್ಷಣ ಮೊಟುಕುಗೊಳ್ಳುವುದು. ನನ್ನ ಬಳಿ ಸಹಾಯಕರಾಗಿ ಕೆಲಸ ಮಾಡಲು ಬಂದಿರುವ ಎಷ್ಟೋ ಯುವಜನರು ಶಿಕ್ಷಣದ ಯಾವುದೇ ಒಂದು ಹಂತವನ್ನು ವ್ಯವಸ್ಥಿತವಾಗಿ ಪೂರೈಸದವರೇ.
ಶಾಲೆ ಬಿಡುವ ಮಕ್ಕಳನ್ನು ತಕ್ಷಣವೇ ಗುರುತಿಸುವ ಕಾರ್ಯ ಮತ್ತು ಅವರನ್ನು ಮತ್ತೆ ಶಿಕ್ಷಣಕ್ಕೆ ತೊಡಗಿಸುವ ಕಾರ್ಯವು ಅತ್ಯಂತ ಜರೂರಾದದ್ದು. ಮಕ್ಕಳು ಶಾಲೆಯನ್ನು ಬಿಡುವುದಕ್ಕೆ ಕಾರಣವೂ ಅವರ ಪೋಷಕರೇ ಆಗಿರುತಾ್ತರೆ. ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ, ಮನೆಯಲ್ಲಿ ಸಹಾಯ ಮಾಡುವ ಕೈಗಳ ಸಮಸ್ಯೆ; ಹೀಗೆ ಅವರು ಕೊಡುವ ಕಾರಣವೂ ಹಲವಿರಬಹುದು. ಆದರೆ ಅವರು ಯಾವುದೇ ಕಾರಣಕ್ಕೆ ಶಾಲೆಯನ್ನು ಬಿಟ್ಟರೂ ಅವರು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಗುರುತರವಾದ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ.
ಸಾಮಾನ್ಯವಾಗಿ ಶಾಲೆಯನ್ನು ಬಿಡುವ ವರ್ಗಗಳು:
1.ಅಲೆಮಾರಿ ಸಮುದಾಯಕ್ಕೆ ಸೇರಿರುವವರು.
ಇವರು ಸಾಮಾನ್ಯವಾಗಿ ತಾವು ಬಾಳುತ್ತಿರುವ ಬದುಕಿನಾಚೆಗೊಂದು ಬಗೆಯ ಬದುಕಿದೆ, ಅದನ್ನು ಪಡೆಯುವುದು ತಮ್ಮ ಹಕ್ಕು ಎಂದೂ ತಿಳಿದಿರುವುದಿಲ್ಲ. ಹಾಗಾಗಿ, ತಮ್ಮ ಹಾಗೆಯೇ ತಮ್ಮ ಮಕ್ಕಳು ಇರುವುದರಲ್ಲಿ ತೃಪ್ತಿಯನ್ನು ಹೊಂದಿಬಿಡುತ್ತಾರೆ. ಇನ್ನೂ ಕೆಲವೊಮ್ಮೆ ತಮ್ಮಷ್ಟಾದರೆ ಸಾಕು. ತಮ್ಮ ಬದುಕೇ ಸಂಪೂರ್ಣವಾದದ್ದು ಎಂಬ ಭ್ರಮೆಯಲ್ಲೂ ಇರುತ್ತಾರೆ. ಹಾಗಾಗಿ ತಾವು ತಮ್ಮ ಹಿರಿಯರಿಂದ ಕಲಿತುಕೊಂಡು ಬಂದಿರುವುದನ್ನೇ ಅವರಿಗೂ ದಾಟಿಸಲು ಇಚ್ಛಿಸುತ್ತಾರೆ. ಎಷ್ಟೋ ಬಾರಿ ತಮ್ಮ ಬದುಕಿನ ರೀತಿಯಿಂದಾಗಿ ಇತರ ಸಹಜೀವಿಗಳ ಜೊತೆ ಸಮಾಜದಲ್ಲಿ ಸಂಘರ್ಷಗಳೇ ಆದರೂ ತಮ್ಮದನ್ನು ಬಿಟ್ಟುಕೊಡುವಂತಹ ಅಥವಾ ಹೊಸತಿಗೆ ತೆರೆದುಕೊಳ್ಳುವಂತಹ ಮನಸ್ಥಿತಿಯನ್ನು ಹೊಂದಿರುವುದಿಲ್ಲ. ಇಂತಹ ಮನಸ್ಥಿತಿಯ ಅಲೆಮಾರಿ ಸಮುದಾಯದ ಮಕ್ಕಳು ಶಾಲೆಗೆ ಹೋಗುವಲ್ಲಿ ಕೊಂಚ ಆಚೀಚೆ ಆದರೂ ಮುಲಾಜಿಲ್ಲದೇ ಶಾಲೆಗೆ ಹೋಗುವುದನ್ನು ನಿಲ್ಲಿಸಿಬಿಡುತ್ತಾರೆ.
2. ಕೊಳೆಗೇರಿಯ ಮಕ್ಕಳು.
ಬೆಂಗಳೂರು, ಮುಂಬೈ, ಕೊಲ್ಕತ್ತಾ, ಚೆನ್ನೈ, ಹೈದರಾಬಾದ್, ಭುವನೇಶ್ವರ್; ಹೀಗೆ ಮುಖ್ಯ ಪಟ್ಟಣಗಳೆನಿಸಿಕೊಂಡಿರುವಂತಹ ಜಾಗಗಳಲ್ಲಿಯೇ ಕೊಳೆಗೇರಿಗಳು ಇರುವುದು. ಇಂದಿನ ಕೊಳೆಗೇರಿಗಳು ಹಿಂದಿನ ಕೊಳೆಗೇರಿಗಳಂತೆ ದೀನಾವಸ್ಥೆಯಲ್ಲಿ ಇರದಿದ್ದರೂ ಕೂಡ ಅಲ್ಲಿನ ಜನರನ್ನು ಆಗಿನ ಮನಸ್ಥಿತಿಯಲ್ಲಿಯೇ ಉಳಿಸಿರುವಂತಹ ವ್ಯವಸ್ಥೆಯು ಅತ್ಯಂತ ಯಶಸ್ವಿಯಾಗಿದೆ. ಕೊಳೆಗೇರಿ ಅಥವಾ ಸ್ಲಂನ ಜನರನ್ನು ಭೂಗತ ಜನರು ಮತ್ತು ರಾಜಕೀಯ ರೌಡಿಗಳೇ ಹೆಚ್ಚು ಬಳಸಿಕೊಳ್ಳಲು ಯತ್ನಿಸುವುದು. ಹಾಗಾಗಿ ಅವರು ಆ ಕೊಳೆಗೇರಿಯ ಜನರಿಗೆ ತಿನ್ನಲು, ಕುಡಿಯಲು, ಓಡಾಡಲು ಸವಲತ್ತುಗಳನ್ನು ಒದಗಿಸಿದಂತೆ, ಅವರ ಮಕ್ಕಳಿಗೆ ಶಿಕ್ಷಣ ಅಥವಾ ಉನ್ನತ ಶೈಕ್ಷಣಿಕ ತರಬೇತಿಗಳನ್ನು ನೀಡಲು ಯತ್ನಿಸುವುದಿಲ್ಲ. ಹಾಗೆಯೇ ಇತರ ಸರಕಾರೇತರ ಸ್ವಯಂ ಸೇವಕ ಸಂಸ್ಥೆಗಳು ಯತ್ನಿಸಿದರೂ ಅದನ್ನು ಫಲಪ್ರದವಾಗಿ ಆಗಲು ಬಿಡುವುದೂ ಇಲ್ಲ. ಏಕೆಂದರೆ, ಅಲ್ಲಿನ ಇಂದಿನ ಮಕ್ಕಳೇ ಮುಂದಿನ ರೌಡಿಗಳು. ಅವರು ಇಂದು ಶಿಕ್ಷಣವನ್ನು ಪಡೆದು ಉನ್ನತ ವ್ಯಾಸಂಗ ಪಡೆದು, ತಿಳುವಳಿಕೆ ಬಂದವರಾಗಿ ತಮ್ಮ ವಿರುದ್ಧವೇ ನಿಲ್ಲುವಂತಹ ಅಥವಾ ತಮ್ಮನ್ನು ಪ್ರಶ್ನಿಸುವಂತಹ ಪರಿಸ್ಥಿತಿಯನ್ನು ತಾವೇ ಒಡ್ಡಿಕೊಳ್ಳಬಾರದು ಎಂಬ ದಿವ್ಯ ಜ್ಞಾನ ರಾಜಕಾರಣಿಗಳಿಗಿದೆ. ಇನ್ನು ಭೂಗತ ಪಾತಕಿಗಳ ಬಗ್ಗೆಯಂತೂ ಹೇಳುವಷ್ಟೇ ಇಲ್ಲ. ಹಾಗಾಗಿ ಅಲ್ಲಿನ ಹುಡುಗರಿಗೆ ಈಗಲೂ ಕೂಡ ಬಹು ಬೇಗ ಕ್ರೈಂ ಕ್ಷೇತ್ರಕ್ಕೆ ಕೈಂಕರ್ಯ ಮಾಡಲು ಸೇರ್ಪಡೆ ಮಾಡಿಕೊಂಡು ಬಿಡುತ್ತಾರೆ. ಅವರಿಗೆ ಸದ್ಯಕ್ಕೆ ಅಗತ್ಯವಿರುವಂತಹ ಸವಲತ್ತುಗಳನ್ನು ಖಂಡಿತ ಪೂರೈಸಲಾಗುತ್ತದೆ. ಹಾಗಾಗಿ ಅಲ್ಲಿನ ಜನರೂ ಮಕ್ಕಳು ಶಾಲೆಗೆ ಹೋಗದಿದ್ದರೆ ಪ್ರಾಣವೇನೂ ಹೋಗಿಬಿಡುವುದಿಲ್ಲ ಎಂಬ ಧೋರಣೆಯಲ್ಲಿರುತ್ತಾರೆ.
ನನ್ನ ಸೋದರ ಸಂಬಂಧಿಯೊಬ್ಬ ಸರಕಾರದ ಉನ್ನತ ಪದವಿಯಲ್ಲಿದ್ದ. ಈಗ ನಿವೃತ್ತ. ಅವನು ಯಾವುದೋ ಕಾರಣಕ್ಕೆ ಸ್ಲಂ ಕಡೆಯಿಂದಲೇ ಹೋಗಬೇಕಾಗಿತ್ತು ಮತ್ತು ಅಲ್ಲಿನ ಪುಡಿ ರೌಡಿಗಳನ್ನು ಮಾತಾಡಿಸಬೇಕಿತ್ತು. ಅಂದು ನಮ್ಮ ಮನೆಯಿಂದ ಅವನ ಮನೆಗೆ ಅವನ ಜೊತೆಯಲ್ಲಿ ಆಕಸ್ಮಿಕವಾಗಿ ನಾನೂ ಕೂಡ ಹೋಗುತ್ತಲಿದ್ದು ದಾರಿ ಮಧ್ಯೆ ಸ್ಲಂ ಬಳಿ ನಾನೂ ನಿಲ್ಲಬೇಕಾಯಿತು. ಅವನು ಬೇರೊಬ್ಬರ ಜೊತೆ ಮಾತಾಡುವಾಗ ನಾನು ಮಕ್ಕಳ ಕೂಡ ಮಾತಾಡಿದೆ. ಅವರಲ್ಲಿ ಬಹಳಷ್ಟು ಜನರು ಸರಕಾರಿ ಶಾಲೆಗೆ ದಾಖಲಾಗಿದ್ದಾರೆ. ಆದರೆ ಹೋಗುತ್ತಿಲ್ಲ. ಯಾವಾಗಲೋ ಒಮ್ಮೆ ಶಾಲೆಯ ಟೀಚರ್ ಅಲ್ಲಿಗೆ ಬಂದು ಅವರನ್ನು ಬೇಳಾಡಿ ಕಾಡಿ, ಶಿಕ್ಷಣಾಧಿಕಾರಿಗಳು ಬರುವಾಗ ಕರೆದೊಯ್ಯುತ್ತಾರಂತೆ. ಮಕ್ಕಳನ್ನು ಬಿಡದೇ ಶಾಲೆಗೆ ಕಳುಹಿಸಿ ಎಂದು ಒತ್ತಾಯ ಹೇರಲು ಅವರಿಗೂ ಭಯವಂತೆ. ಮುಖ್ಯೋಪಾಧ್ಯಾಯರಿಗಾಗಿ, ಶಿಕ್ಷಕರ ಸಲುವಾಗಿ ಮರುಕದಿಂದ ತಮ್ಮ ಮಕ್ಕಳನ್ನು ಆಗಾಗ ಶಾಲೆಗೆ ಕಳುಹಿಸುತ್ತೇವೆ ಎಂಬಂತಹ ಧೋರಣೆಯಲ್ಲಿ ಒಂದಿಬ್ಬರು ಅಲ್ಲಿ ಮಾತಾಡಿದರು. ಇನ್ನು ಪರೀಕ್ಷೆ ಎಂದು ಮಾಡುವಾಗ ಶಿಕ್ಷಕರೇ ಎಲ್ಲವನ್ನೂ ನಕಲು ಮಾಡಲು ಮುಂದಿಟ್ಟರೂ ಅದನ್ನು ನೋಡಿಕೊಂಡು ಬರೆಯುವಷ್ಟೂ ಸಾಮರ್ಥ್ಯ ಈ ಮಕ್ಕಳಲ್ಲಿ ಇಲ್ಲವಂತೆ. ಅದನ್ನು ದೊಡ್ಡ ಹಾಸ್ಯವೆಂಬಂತೆ ಅಲ್ಲಿನ ಹೆಂಗಸರು ನಗುತ್ತಾ ಹೇಳಿದರು. ಹಾಗಾಗಿ ಶಿಕ್ಷಕರೇ ಮುಂದಿನ ತರಗತಿಗಳಿಗೆ ದೂಡಿದರೂ ಮಕ್ಕಳಿಗೆ ಓದುವ ಸಾಮರ್ಥ್ಯವಿಲ್ಲದೇ ಹಿಂದುಳಿಯುತ್ತಾರೆ. ಶಿಕ್ಷಣ ಒಂದು ರೇಜಿಗೆಯ ಮತ್ತು ಅನಗತ್ಯವಾಗಿರುವಂತಹ ವಿಷಯವಾಗಿ ಅವರಿಗೆ ಕಾಣುತ್ತದೆ. ಹಾಗಾಗಿ ಅವರು ಸಹಜವಾಗಿ ಶಾಲೆಗೆ ಹೋಗುವುದನ್ನೇ ನಿಲ್ಲಿಸಿಬಿಡುತ್ತಾರೆ.
ದಾರಿಯಲ್ಲಿ ವಾಪಸು ಬರುತ್ತಾ ಶಾಲೆಗೆ ಹೋಗದಿದ್ದರೂ ಅವರು ಶಿಕ್ಷಣ ಪಡೆಯಲೇ ಬೇಕು. ಅದಕ್ಕೆ ನಾನು ಅವರಿಗೆ ಅವರಿರುವ ಜಾಗದಲ್ಲೇ ಅನೌಪಚಾರಿಕ ಪಾಠಶಾಲೆ ತೆರೆಯುವ ಯೋಚನೆ ಮಾಡುತ್ತಿದ್ದೇನೆ ಎಂದೆ. ಅದಕ್ಕೆ ನನಗೆ ಸ್ಪಂದಿಸಿದ ಮಹಾಶಯರ ಮಾತು ಹೀಗಿದೆ. ‘‘ಅವರ ಹುಡುಗರನ್ನ ನೀನು ತಹಶೀಲ್ದಾರ್ ಮಾಡಿ ನಿನ್ನ ಮಗಳನ್ನ ಮದುವೆ ಮಾಡಿಕೊಡಬೇಕೆಂದು ಕೊಂಡಿದ್ದೀಯಾ? ಮನೆಯಲ್ಲಿ ನಾಯಿಯನ್ನು ಎಷ್ಟೇ ಚೆನ್ನಾಗಿ ಸಾಕಿದರೂ ಮನೆ ಅಳಿಯನಾಗಿ ಮಾಡಿಕೊಳ್ಳುವುದಿಲ್ಲ. ಸಮಾಜದಲ್ಲಿ ಕೆಲವು ಬಗೆಯ ಜನರು ಹೀಗೇ ಇರಬೇಕು. ಕೆಲವು ಬಗೆಯ ಕೆಲಸಗಳನ್ನು ಮಾಡಲು ಇಂತವರು ಇರಬೇಕು. ಎಲ್ಲರೂ ದಿವಾನರು, ಅಮಲ್ದಾರು, ತಹಶೀಲ್ದಾರ್ ಆಗಿಬಿಟ್ಟರೆ, ಇವರು ಮಾಡೋಂತ ಕೆಲಸಗಳನ್ನು ಯಾರು ಮಾಡುತ್ತಾರೆ? ಇವತ್ತು ಅಲ್ಲಿನ ಒಬ್ಬ ಅಪ್ಪ ನನಗೆ ಮಾಡಿಕೊಡೋ ಕೆಲಸವನ್ನು ನಾಳೆ ಅವನ ಮಗ ನನ್ನ ಮಗನಿಗೆ ಮಾಡಿಕೊಡಬಾರದೇನೋ?’’ ಈ ಬಗೆಯಲ್ಲಿ ವ್ಯವಸ್ಥೆಯ ಯಥಾಸ್ಥಿತಿಯನ್ನು ಕಾಪಾಡುವಂತಹ ರಾಜಕಾರಣಿಗಳು, ಅಧಿಕಾರಿಗಳು, ಭೂಗತ ಪಾತಕಿಗಳು ಕೆಲವು ವರ್ಗದ ಮಕ್ಕಳು ಶಿಕ್ಷಣವನ್ನು ಪಡೆಯಲು ಬಿಡುವುದಿಲ್ಲ. ಅದರ ಕಡೆಗೆ ಅವರ ಆಸಕ್ತಿ ಉದ್ದೇಶ ಪೂರ್ವಕವಾಗಿಯೇ ಇರುವುದಿಲ್ಲ.
3. ಆರ್ಥಿಕ ಮುಗ್ಗಟ್ಟಿನ ಅನಿವಾರ್ಯತೆ.
ಕಟ್ಟಡದ ಕೆಲಸ ಮತ್ತು ಇತರೇ ಕೂಲಿ ಮಾಡುವವರ ಮಕ್ಕಳು ಹತ್ತು ಹನ್ನೆರಡು ವರ್ಷಕ್ಕೆ ಬರುತ್ತಿದ್ದಂತೆ ಅವರೂ ಕೂಡ ತಮ್ಮ ಹಾಗೆಯೇ ದುಡಿಯುವುದರಿಂದ ಮನೆಗೆ ಒಂದಿಷ್ಟು ಆರ್ಥಿಕವಾಗಿ ನೆರವಾಗುವುದು ಎಂಬ ಧೋರಣೆಯಲ್ಲಿ ಕೆಲವು ಪೋಷಕರು ಶಾಲೆಗೆ ಹೋಗದಿದ್ದರೂ ಪರವಾಗಿಲ್ಲ ಎಂದಿರುತ್ತಾರೆ. ತಮ್ಮ ದುಡಿಮೆಯಿಂದ ಮನೆವಾರ್ತೆಯನ್ನು ಸಂಬಾಳಿಸಲಾಗದಿದ್ದರೆ ಮಕ್ಕಳು ದುಡಿಯುವುದು ಒಂದಿಷ್ಟು ನೆರವಾಗುವುದು ಎಂಬ ಆಸೆ ಅವರದ್ದು. ಬೆಂಗಳೂರಿನಂತಹ ನಗರಗಳಲ್ಲಿ ಟ್ರಾಫಿಕ್ ಸಿಗ್ನಲ್ಲಿನಲ್ಲಿ ಎಳೆಗೂಸನ್ನು ತನ್ನ ಸಣ್ಣ ಸೊಂಟಕ್ಕೇರಿಸಿಕೊಂಡು ಭಿಕ್ಷೆ ಬೇಡುತ್ತಾ ಓಡಾಡುವ ಮಗುವು ಕೂಡ ಶಿಕ್ಷಣದಿಂದ ವಂಚಿತವೇ. ಸ್ಕೂಲ್ ಡ್ರಾಪ್ ಔಟೇ. ಇನ್ನು ಬೊಂಬೆಗಳು, ಸಣ್ಣ ಸಣ್ಣ ಇಲೆಕ್ಟ್ರಾನಿಕ್ ವಸ್ತುಗಳನ್ನು ಮಾರುತ್ತಾ ಓಡಾಡುವ ಮಕ್ಕಳು ಕೂಡ ಶಾಲೆ ಬಿಟ್ಟವರೇ. ಅವರು ಅವರ ಮನೆಯವರಿಗೆ ದುಡಿಮೆಗೆ ನೆರವಾಗುತ್ತಿರುತ್ತಾರೆ. ಯಾವುದೇ ಕಾರಣಕ್ಕೆ ಮನೆಬಿಟ್ಟು ಓಡಿಬಂದಿದ್ದು ಈಗ ಇನ್ಯಾರೋ ಜೊತೆಯಲ್ಲಿ ಸೇರಿಕೊಂಡು ಪರಸ್ಪರ ಹೊಟ್ಟೆ ತುಂಬಿಸಿಕೊಳ್ಳಲು ನೆರವಾಗಿಕೊಳ್ಳುತ್ತಿರುತ್ತಾರೆ.
4. ಕೌಟುಂಬಿಕ ಬಿರುಕು ಮತ್ತು ಸಮಸ್ಯೆಗಳು
ನಾನು ಇತ್ತೀಚೆಗೆ ಪದೇ ಪದೇ ನೋಡುತ್ತಿರುವಂತಹ ಕೇಸ್‌ಗಳಿವು. ಗಂಡ ಮತ್ತು ಹೆಂಡತಿ ಜಗಳವಾಡುತ್ತಿರುತ್ತಾರೆ. ಪರಸ್ಪರ ಮುನಿಸಿನಿಂದ ಬೇರಾಗಿ ಬೇರೆ ಊರಿಗೆ ಹೋಗುವಾಗ ಮಗುವನ್ನೂ ಕರೆದೊಯ್ಯುತ್ತಾರೆ. ಕೋಪ ಬಂದಾಗ, ಕ್ಷುದ್ರರಾದಾಗ ಮಗುವನ್ನೂ ಎಳೆದುಕೊಂಡು ಹೋಗುವ ಇವರು ಮಗುವಿನ ಶಾಲೆ ಮುಗಿಯಲಿ, ರಜೆ ಬರಲಿ, ಆಗ ಮಗುವನ್ನು ಕರೆದುಕೊಂಡು ಹೋಗುವಂತಹ ಸಿದ್ಧತೆಯಲ್ಲೇನೂ ಜಗಳವಾಡುವುದಿಲ್ಲ. ಮಗುವನ್ನು ಅತ್ತಿಂದಿತ್ತಗೆ ಇತ್ತಿಂದತ್ತಗೆ ಎಳೆದಾಡುತ್ತಾ ಮಗುವಿನ ಶಿಕ್ಷಣದ ಕಡೆಗೆ ಪೋಷಕರು ಗಮನ ಕೊಡುವುದಿಲ್ಲ. ಮಗುವಿನ ಶಿಕ್ಷಣ, ಶಾಲೆ, ಅದರ ಬದುಕು, ಭವಿಷ್ಯ ಮತ್ತು ತಿಳುವಳಿಕೆ; ಈ ಎಲ್ಲಕ್ಕಿಂತ ಮುಖ್ಯವಾದಂತಹ ಅವರ ಕೋಪ ಮತ್ತು ಅಹಂಕಾರ ಇರುತ್ತದಲ್ಲಾ!
ಮನೆಯಲ್ಲಿ ಸತತವಾಗಿ ಆಗುತ್ತಿರುವ ಜಗಳದಿಂದ ಮಕ್ಕಳು ತಾವಾಗಿಯೇ ಶಿಕ್ಷಣದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಅವರಿಗೆ ಗಮನ ಕೊಡಬೇಕಾದ ಅಂಶವೇ ಬೇರೆಯದು ಎಂಬ ಮನಸ್ಥಿತಿ ಬಾಲ್ಯದಲ್ಲಿ ಉಂಟಾಗುತ್ತದೆ. ಹಾಗಾಗಿ ಅವರ ಶಿಕ್ಷಣ ಮೊಟುಕುಗೊಳ್ಳುವುದು. ನನ್ನ ಬಳಿ ಸಹಾಯಕರಾಗಿ ಕೆಲಸ ಮಾಡಲು ಬಂದಿರುವ ಎಷ್ಟೋ ಯುವಜನರು ಶಿಕ್ಷಣದ ಯಾವುದೇ ಒಂದು ಹಂತವನ್ನು ವ್ಯವಸ್ಥಿತವಾಗಿ ಪೂರೈಸದವರೇ. ಏಕೆ ಮತ್ತು ಹೇಗೆಂದು ನೋಡಲು ಅವರ ಆತ್ಮಚರಿತ್ರೆಯಲ್ಲಿ ತಂದೆತಾಯಿಗಳ ಜಗಳ ಇಣುಕುತ್ತಿರುತ್ತದೆ. ಕೌಟುಂಬಿಕ ಬಿರುಕು, ಆರ್ಥಿಕ ಸಮಸ್ಯೆ, ಕುಟುಂಬದಲ್ಲಿ ಸರಿಯಾದ ಮಾರ್ಗದರ್ಶನ ನೀಡುವಂತವರ ಕೊರತೆ ಕಾಣುತ್ತಿರುತ್ತದೆ.
5. ಮಿತಿಯಿಲ್ಲದ ಸೌಲಭ್ಯಗಳು.
ಮನೆಯಲ್ಲಿ ಕೊರತೆಯುಳ್ಳವರು ಶಾಲೆಯನ್ನು ಬಿಡುವ ಒಂದು ವರ್ಗವಾದರೆ ಮಿತಿ ಮೀರಿದ ಸೌಲಭ್ಯಗಳಿಂದಾಗಿ ಶಾಲೆಯನ್ನು ಬಿಡುವ ಒಂದು ವರ್ಗವೂ ಇದೆ. ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಗಳನ್ನು ಈಗಿನ ಅಗಾಧವಾದ ಬೆಲೆಗಳಲ್ಲಿ ತೂಕ ಮಾಡುತ್ತಾ ಒಂದಷ್ಟು ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ, ಬಾಡಿಗೆಗೆ ಬಿಟ್ಟು ಸ್ಥಿರಾಸ್ತಿಗಳನ್ನು ಮಾಡಿಕೊಂಡಿರುವ ಶ್ರೀಮಂತರ ಒಂದು ದೊಡ್ಡ ವರ್ಗವೇ ಇದೆ. ಅವರ ಮಕ್ಕಳು ಶಾಲೆಗೆ ಹೋಗಿ ಚೆನ್ನಾಗಿ ಕಲಿತು ಏನೋ ಸಾಧಿಸಬೇಕೆಂಬ ಬಯಕೆ ಅವರ ಮನೆಯವರ್ಯಾರಿಗೂ ಇರುವುದಿಲ್ಲ. ಬದಲಾಗಿ ಇರುವುದನ್ನು ಉಳಿಸಿಕೊಂಡು ಹೋದರೆ ಸಾಕು ಎಂಬ ಮನೋಧರ್ಮದಲ್ಲಿರುತ್ತಾರೆ. ಹಾಗಾಗಿ ಅವರ ಮಕ್ಕಳು ಶಾಲೆಗೆ ಹೋಗುವುದನ್ನು ಅಷ್ಟೇನೂ ಗಮನಿಸುವುದೂ ಇಲ್ಲ. ಬೇಕಾಗೂ ಇರುವುದಿಲ್ಲ. ಇಂಥವರ ವರ್ಗದ ಮಕ್ಕಳು ಬೆಳೆಬೆಳೆಯುತ್ತಾ ಅತ್ಯುತ್ತಮವಾದ ಬ್ರಾಂಡ್‌ನ ಬಟ್ಟೆಗಳನ್ನು ಹೊಂದುತ್ತಾರೆ. ವಾಹನಗಳನ್ನು ಹೊಂದುತ್ತಾರೆ. ಫೋನ್ ಇತ್ಯಾದಿ ಇಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ವೌಖಿಕವಾದಂತಹ ಜ್ಞಾನವನ್ನು ಪಡೆದಿರುತ್ತಾರೆ. ಆದರೆ ಅದರಿಂದಾಚೆಗೆ ಏನೂ ತಿಳಿದಿರುವುದಿಲ್ಲ. ವಾಟ್ಸ್ ಆ್ಯಪ್‌ಗಳಲ್ಲಿ ಬರುವುದೇ ಇತಿಹಾಸ, ಫೇಸ್‌ಬುಕ್‌ನಲ್ಲಿ ಬರುವುದೇ ಸುದ್ಧಿ ಎಂಬಂತಿರುತ್ತಾರೆ. ನನ್ನ ಆಘಾತಕ್ಕೆ ಅವರಿಗೆ ಐದಾರನೆಯ ತರಗತಿಯ ಮಕ್ಕಳ ಪುಸ್ತಕದಲ್ಲಿರುವ ಇತಿಹಾಸದ ಜ್ಞಾನವೂ ಇಲ್ಲದವರನ್ನು ನೋಡಿದ್ದೇನೆ. ಇಂತಹ ಅತ್ಯಂತ ಶ್ರೀಮಂತ ಯುವಕರು ಕಾಲೇಜು ಮೆಟ್ಟಿಲು ಹತ್ತದವರೆಂದು ಕೇಳಿದ್ದೆ. ಹಿನ್ನೆಲೆಯನ್ನು ನೋಡಲಾಗಿ ಅವರು ಆರು, ಏಳನೆಯ ತರಗತಿಗಳಿಗೇ ಶಾಲೆಗೆ ವಿದಾಯ ಹೇಳಿದ್ದರು. ತಮ್ಮ ಕಾರಿಗೆ ಎಕ್ಸ್ಟ್ರಾ ಡೆಕೋರೇಶನ್ ಏನು ಮಾಡಿಸಿಕೊಳ್ಳಬೇಕು? ಇಂತಹ ಬ್ರ್ಯಾಂಡ್ ಬಟ್ಟೆ, ಶೂ, ಫೋನ್‌ಗಳು ಎಲ್ಲಿ ಸಿಗುತ್ತವೆ? ಎಲ್ಲಿ, ಯಾವ ಹೊಟೇಲ್ಲಿನಲ್ಲಿ ಯಾವ ಯಾವ ತಿನಿಸು ಪದಾರ್ಥಗಳು ಚೆನ್ನಾಗಿರುತ್ತವೆ? ಹೀಗೆಲ್ಲಾ ತಿಳಿದುಕೊಂಡಿರುವ ಇವರು ಪ್ರತಿದಿನವೂ ನಾಳೆಯದಿನ ಎಲ್ಲಿ ಪಾರ್ಟಿ ಮಾಡಬೇಕು ಎಂದೇ ಇಂದಿನ ಕಾರ್ಯಕ್ರಮ ಮಾಡಿಕೊಂಡಿರುತ್ತಾರೆ. ಈ ಸ್ಕೂಲ್ ಡ್ರಾಪ್ ಔಟ್‌ಗಳಂತೂ ತೀರಾ ವಿಶಿಷ್ಟವಾದವು. ಯಾವುದೇ ಬಗೆಯಲ್ಲಿ ಶಾಲೆಯನ್ನು ಬಿಟ್ಟಿದ್ದರೂ ಅವರಿಗೆ ಶಿಕ್ಷಣವಂತೂ ಬೇಕೇ ಬೇಕು. ಹೇಗೆ ಏನು ಎಂದು ಮುಂದೆ ನೋಡೋಣ.