ಹತ್ತಿರವಾಗುತ್ತಿರುವ ನಿತೀಶ್ ಕುಮಾರ್ ಮತ್ತು ನರೇಂದ್ರಮೋದಿ
ರಾಜಕೀಯದಲ್ಲಿ ಇವತ್ತಿನ ಮಿತ್ರರು ನಾಳಿನ ಶತ್ರುಗಳಾಗುವಂತೆ, ಇವತ್ತಿನ ಶತ್ರುಗಳೂ ನಾಳೆ ಮಿತ್ರರಾಗಬಹುದಾದ ಸಾಧ್ಯತೆಯೂ ಇದೆ. ಇಂಡಿಯಾದ ರಾಜಕಾರಣದ ವೈಶಿಷ್ಟ್ಯತೆ ಇರುವುದೇ ಇಂತಹ ಅಸಾಧ್ಯಗಳನ್ನು ಸಾಧ್ಯವಾಗಿಸುವಲ್ಲಿ. ಇದಕ್ಕೆ ತಾಜಾ ಉದಾಹರಣೆ ನಮ್ಮ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಮತ್ತು ಬಿಹಾರದ ಮುಖ್ಯಮಂತ್ರಿಗಳೂ ಆದ ನಿತೀಶ್ ಕುಮಾರ್ ಅವರು. ಕೆಲವೇ ತಿಂಗಳುಗಳ ಹಿಂದೆ ಹಾವು ಮುಂಗುಸಿಗಳಂತೆ ಇದ್ದ ಮೋದಿಯವರು ಮತ್ತು ನಿತೀಶ್ ಇದೀಗ ತಮ್ಮ ವೈಮನಸ್ಸುಗಳನ್ನು ಮರೆತು ಬಿಟ್ಟವರಂತೆ ಪರಸ್ಪರರನ್ನು ಹೊಗಳುತ್ತ ತಮ್ಮ ರಾಜಕೀಯದ ದಾಳಗಳನ್ನು ಉರುಳಿಸುತ್ತಿದ್ದಾರೆ.
ಬಹುಶ: ಶಕ್ತಿರಾಜಕಾರಣದಲ್ಲಿ ಅಧಿಕಾರದ ಕುರ್ಚಿಗೆ ಮಾತ್ರ ಅಂತಹ ಅದ್ಭುತ ಶಕ್ತಿ ಇರುವಂತೆ ಕಾಣುತ್ತದೆ. ವಿರೋಧಪಕ್ಷ ದಲ್ಲಿದ್ದಾಗ ಬೆಂಕಿ ಉಗುಳುತ್ತಿದ್ದ ನಾಯಕರು ಅಧಿಕಾರದ ಗದ್ದುಗೆ ಏರುತ್ತಿದ್ದಂತೆ ಪಡೆದ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ನಿರಂತರವಾಗಿ ಅದು ತಮ್ಮ ಕೈತಪ್ಪಿಹೋಗದಂತೆ ನೋಡಿಕೊಳ್ಳಲು ರಾಜಕೀಯವಾಗಿ ರಾಜಿಯಾಗುತ್ತಾ ಹೋಗುತ್ತಾರೆ. ಅದನ್ನು ರಾಜಕೀಯ ಪಂಡಿತರು ರಾಜಕಾರಣಿಯೊಬ್ಬನ ‘ವ್ಯಕ್ತಿತ್ವದ ಮಾಗುವಿಕೆ’ ಎನ್ನುತ್ತಾರೆ. ಆದರೆ ಸಾಮಾನ್ಯರ ಮಟ್ಟಿಗೆ ಅದು ಅವಕಾಶವಾದಿತನ ಮಾತ್ರ. ಇಂಡಿಯಾದಂತಹ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವೇ ಅಂತಿಮವಾದ ಗುರಿಯಾಗಿರುವುದರಿಂದ ಇಂತಹ ಮಾಗುವಿಕೆಗಳಿಗೆ ಅಚ್ಚರಿ ಪಡುವಂತದ್ದೇನಿಲ್ಲ. ರಾಜಕೀಯದಲ್ಲಿ ಇವತ್ತಿನ ಮಿತ್ರರು ನಾಳಿನ ಶತ್ರುಗಳಾಗುವಂತೆ, ಇವತ್ತಿನ ಶತ್ರುಗಳೂ ನಾಳೆ ಮಿತ್ರರಾಗಬಹುದಾದ ಸಾಧ್ಯತೆಯೂ ಇದೆ. ಇಂಡಿಯಾದ ರಾಜಕಾರಣದ ವೈಶಿಷ್ಟ್ಯತೆ ಇರುವುದೇ ಇಂತಹ ಅಸಾಧ್ಯಗಳನ್ನು ಸಾಧ್ಯವಾಗಿಸುವಲ್ಲಿ. ಇದಕ್ಕೆ ತಾಜಾ ಉದಾಹರಣೆ ನಮ್ಮ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಮತ್ತು ಬಿಹಾರದ ಮುಖ್ಯಮಂತ್ರಿಗಳೂ ಆದ ನಿತೀಶ್ ಕುಮಾರ್ ಅವರು. ಕೆಲವೇ ತಿಂಗಳುಗಳ ಹಿಂದೆ ಹಾವು ಮುಂಗುಸಿಗಳಂತೆ ಇದ್ದ ಮೋದಿಯವರು ಮತ್ತು ನಿತೀಶ್ ಇದೀಗ ತಮ್ಮ ವೈಮನಸ್ಸುಗಳನ್ನು ಮರೆತು ಬಿಟ್ಟವರಂತೆ ಪರಸ್ಪರರನ್ನು ಹೊಗಳುತ್ತ ತಮ್ಮ ರಾಜಕೀಯದ ದಾಳಗಳನ್ನು ಉರುಳಿಸುತ್ತಿದ್ದಾರೆ.
ನಿಮಗೆ ನೆನಪಿರಬಹುದು, 2010ರ ಬಿಹಾರದ ವಿಧಾನಸಭಾ ಚುನಾವಣೆಯ ವೇಳೆ ಭಾಜಪ ಮತ್ತು ಸಂಯುಕ್ತ ಜನತಾದಳ ಮೈತ್ರಿ ಪಕ್ಷಗಳಾಗಿದ್ದು ಅಂದಿನ ಚುನಾವಣಾ ಪ್ರಚಾರಕ್ಕೆ ಭಾಜಪದ ನಾಯಕರಾಗಿದ್ದ ಮತ್ತು ಅಂದಿನ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿಯವರು ಬಿಹಾರಕ್ಕೆ ಕಾಲಿಡಬಾರದೆಂಬ ಷರತ್ತನ್ನು ನಿತೀಶ್ ಭಾಜಪಕ್ಕೆ ವಿಧಿಸಿದ್ದರು. ಹೀಗೆ ಷರತ್ತು ವಿಧಿಸುವಾಗ ನಿತೀಶ್ ಅವರ ಮನಸಲ್ಲಿ ಇದ್ದುದು ಗುಜರಾತಿನ ಕೋಮುಗಲಭೆಗಳು ಮತ್ತು ಅದರಿಂದ ಕಳಂಕಿತರಾಗಿದ್ದ ಮೋದಿಯವರು. ಮೋದಿಯವರನ್ನು ವಿರೋಧಿಸುವುದರಿಂದ ಜಾತ್ಯತೀತ ಹಣೆಪಟ್ಟಿ ತಮಗೆ ಅಂಟಿಕೊಳ್ಳಬಹುದು ಮತ್ತು ಅದರಿಂದ ಚುನಾವಣೆಯಲ್ಲಿ ಅನುಕೂಲವಾಗುತ್ತದೆ ಎಂಬ ಭಾವನೆ ಮಾತ್ರ. ಒಂದು ಹಂತದಲ್ಲಿ ಅವರ ಆ ಆಲೋಚನೆ ಯಶಸ್ವಿಯೂ ಆಯಿತು. ಆ ಚುನಾವಣಾ ಪ್ರಚಾರಕ್ಕೆ ಮೋದಿಯವರು ಬಿಹಾರದತ್ತ ಸುಳಿಯಲಿಲ್ಲ. ಆದರೂ ನಿತೀಶರ ಸಂಯುಕ್ತ ಜನತಾದಳ ಮತ್ತು ಭಾಜಪದ ಮೈತ್ರಿಕೂಟ ಬಹುಮತ ಪಡೆಯಲು ಯಶಸ್ವಿಯಾಯಿತು. ಅಷ್ಟಲ್ಲದೆ 2008ರ ಬಿಹಾರದ ಪ್ರವಾಹ ಪೀಡಿತರ ಪರಿಹಾರ ನಿಧಿಗೆ ಗುಜರಾತ್ ಸರಕಾರ ನೀಡಿದ್ದ ದೇಣಿಗೆಯನ್ನು ನಿತೀಶ್ ಮುಲಾಜಿಲ್ಲದೆ ಹಿಂದಿರುಗಿಸಿದ್ದರು. ನಂತರವೂ ನಿತೀಶ್ ಮೋದಿಯವರನ್ನು ಸತತವಾಗಿ ಟೀಕೆಗೊಳಪಡಿಸುತ್ತಲೇ ಬಂದಿದ್ದರು. ನಂತರ ಎನ್‌ಡಿಎ ನರೇಂದ್ರಮೋದಿಯವರನ್ನು ತನ್ನ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗ ಇದೇ ನಿತೀಶ್ ಜಾತ್ಯತೀತ ಶಕ್ತಿಗಳ ಮೈತ್ರಿಯ ಬಗ್ಗೆ ಮಾತಾಡುತ್ತಾ ಮೋದಿಯವರನ್ನು ವಿರೋಧಿಸಿದ್ದರು. ತದನಂತರ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಭಾಜಪ ಮೈತ್ರಿಕೂಟ ನರೇಂದ್ರಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಿತ್ತು. ಈ ವೇಳೆಗಾಗಲೆ ಬಿರುಕು ಬಿಟ್ಟ ಜನತಾದಳ ಮತ್ತು ಭಾಜಪದ ಮೈತ್ರಿಕೂಟ ಬಿಹಾರದಲ್ಲಿ ತಿಂಗಳುಗಳ ಕಾಲ ರಾಜಕೀಯ ಅನಿಶ್ಚಿತತೆಯನ್ನು ಉಂಟು ಮಾಡಿತ್ತು. ನಂತರ ನಡೆದ 2015ರ ವಿಧಾನಸಭಾ ಚುನಾವಣೆಯಲ್ಲಿ ನಿತೀಶರ ಸಂಯುಕ್ತ ಜನತಾದಳ, ಲಾಲೂ ಪ್ರಸಾದ್ ಯಾದವರ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ಒಟ್ಟಾಗಿ ಸೇರಿಕೊಂಡು ಮಹಾಮೈತ್ರಿ ಒಂದನ್ನು ರಚಿಸಿಕೊಂಡು ಚುನಾವಣೆ ಎದುರಿಸಿದ್ದವು. ಆಗ ಬಿಹಾರದಲ್ಲಿ ಭಾಜಪ ಹೀನಾಯವಾಗಿ ಸೋಲನ್ನಪ್ಪಿಕೊಳ್ಳಬೇಕಾಯಿತು. ಅದುವರೆಗೂ ಬಿಹಾರಕ್ಕೆ ಸೀಮಿತವಾಗಿದ್ದ ನಿತೀಶರ ಹೆಸರು ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡತೊಡಗಿತ್ತು. ಭಾಜಪವನ್ನು ಎದುರಿಸಲು ಕಾಂಗ್ರೆಸ್ ಸೇರಿದಂತೆ ಉಳಿದೆಲ್ಲ ವಿರೋಧಪಕ್ಷಗಳು ಮಹಾಮೈತ್ರಿಯೊಂದನ್ನು ಮಾಡಿಕೊಂಡು ನಿತೀಶರನ್ನು ಅದರ ನಾಯಕರನ್ನಾಗಿ ಬಿಂಬಿಸಬೇಕೆಂಬ ಕೂಗು ಎಲ್ಲಕಡೆಗಳಿಂದಲೂ ಕೇಳಿ ಬರತೊಡಗಿತ್ತು. ಇಂತಹದೊಂದು ಮೈತ್ರಿಕೂಟ ಸಾಧ್ಯವಾಗುವುದೇ ಆದಲ್ಲಿ ಅದನ್ನು ಮುನ್ನಡೆಸಲು ನಿತೀಶ್ ಕುಮಾರ್ ಅವರೇ ಸರಿಯಾದ ವ್ಯಕ್ತಿ ಎಂಬುದನ್ನು ಈ ಲೇಖಕನೂ ಹಿಂದಿನ ಲೇಖನಗಳಲ್ಲಿ ಬರೆದದ್ದು ಉಂಟು. ನಿತೀಶರೂ ಇದಕ್ಕೆ ಪೂರಕ ಎಂಬಂತೆ ನರೇಂದ್ರ ಮೋದಿಯವರ ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸಿ ಸುದ್ದಿಯಾಗುತ್ತಲೆ ಹೋದರು. ಕಳೆದ ಎರಡೂವರೆ ವರ್ಷಗಳಲ್ಲಿ ಸಮಯ ಸಿಕ್ಕಾಗಲೆಲ್ಲ ಮೋದಿಯವರು ನಿತೀಶ್ ಅವರನ್ನು, ನಿತೀಶ್ ಮೋದಿಯವರನ್ನು ವಿರೋಧಿಸುವ ಯಾವ ಅವಕಾಶವನ್ನೂ ಕಳೆದುಕೊಳ್ಳಲಿಲ್ಲ.
ಆದರೆ ಕಳೆದ ಎಂಟು ತಿಂಗಳಲ್ಲಿ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳು ಬದಲಾದಂತೆ ಕಾಣುತ್ತಿದೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಪಾಟ್ನಾದ ಉಚ್ಚ ನ್ಯಾಯಾಲಯದ ಸಮಾರಂಭ ಒಂದಕ್ಕೆ ಬಂದಿದ್ದ ಮೋದಿಯವರು ಸರಕಾರಿ ಶಿಷ್ಟಾಚಾರಗಳನ್ನು ಬದಿಗೆ ತಳ್ಳಿ ನಿತೀಶರಿದ್ದ ಕಡೆ ಹೋಗಿ ಅವರನ್ನು ಮಾತಾಡಿಸಿದ್ದರು. ಇದಕ್ಕೆ ಪೂರಕವಾಗಿ ನಿತೀಶ್ ಅವರು ಅದುವರೆಗೂ ಬಿಹಾರಕ್ಕೆ ಕೇಳುತ್ತಿದ್ದ ವಿಶೇಷ ಅನುದಾನದ ಬಗ್ಗೆ ಮಾತಾಡದೆ ಮೌನವಾಗಿ ಉಳಿದಿದ್ದರು.
ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಅಲ್ಲಿಯವರೆಗೂ ಕೇಂದ್ರ ಸರಕಾರ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆಯೆಂದು ಮೋದಿಯವರನ್ನು ಟೀಕಿಸುತ್ತಿ ದ್ದವರು ಆ ಸಭೆಯಲ್ಲಿ ಅದರ ಬಗ್ಗೆ ಮಾತಾಡದೆ ಮೌನವಾಗಿ ಉಳಿದಿದ್ದು ರಾಷ್ಟ್ರ ರಾಜಕೀಯದಲ್ಲಿ ಮಹತ್ತರ ಸುದ್ದಿಯಾಗಿತ್ತು. ಯಾಕೆಂದರೆ 2015ರ ಚುನಾವಣೆಯ ವೇಳೆಯಲ್ಲಿ ನಿತೀಶರು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಇದೇ ವಿಶೇಷ ಪ್ಯಾಕೇಜನ್ನು ಪ್ರಮುಖ ವಿಷಯವನ್ನಾಗಿ ಪ್ರಸ್ತಾಪಿಸಿದ್ದರು. ಮೋದಿ ಮತ್ತು ನಿತೀಶರ ನಡುವಿನ ಜಟಾಪಟಿಯ ವೇಗ ಕಡಿಮೆಯಾಗುತ್ತಿದೆ ಎಂಬುದಕ್ಕೆ ಅದು ಸಾಕ್ಷಿಯಾಗಿತ್ತು. ಇಷ್ಟಲ್ಲದೆ ಮೋದಿಯವರ ಆಡಳಿತವನ್ನು ನಿತೀಶ್ ಸೂಕ್ಷ್ಮವಾಗಿ ಹೊಗಳಿದ್ದರು.
ಈ ನಡುವೆ ನವೆಂಬರ್ ಎಂಟರಂದು ಪ್ರಧಾನಿಯವರು ನೋಟ್ ಬ್ಯಾನ್ ಘೋಷಿಸಿದ ಕೂಡಲೆ ಅದನ್ನು ವಿರೋಧಿಸಿದ ವಿರೋಧಪಕ್ಷಗಳಿಗೆ ಅಚ್ಚರಿಯಾಗುವಂತೆ ನಿತೀಶ್ ಕುಮಾರ್ ಸದರಿ ನಿರ್ಧಾರವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು. ಅಷ್ಟಲ್ಲದೆ ನಂತರ ದಿಲ್ಲಿಯ ಸಂಸತ್ತಿನ ಒಳಗೆ ಮತ್ತು ಹೊರಗೆ ನೋಟುಬ್ಯಾನ್ ವಿರೋಧಿಸಿ ವಿರೋಧಪಕ್ಷಗಳು ನಡೆಸಿದ ಯಾವ ಪ್ರತಿಭಟನೆಯಲ್ಲೂ ಸಂಯುಕ್ತಜನತಾದಳ ಭಾಗವಹಿಸದೆ ದೂರ ಉಳಿದು ವಿರೋಧಪಕ್ಷಗಳ ಒಳಗಿನ ತಳಮಳಕ್ಕೆ ಕಾರಣವಾಯಿತು. ಕಳೆದ ವಾರವಷ್ಟೆ ಪಟ್ನಾದಲ್ಲ್ಲಿ ನಡೆದ ಗುರುಗೋವಿಂದ್ ಸಿಂಗ್ ಅವರ 350ನೆ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ ಮತ್ತು ನಿತೀಶ್ ಆತ್ಮೀಯ ಸ್ನೇಹಿತರಂತೆ ಪಿಸುಗುಟ್ಟುತ್ತ ಮಾತನಾಡುತ್ತಿದ್ದುದು ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿಯೂ ಸಂಚಲನ ಉಂಟು ಮಾಡಿತ್ತು. ಈ ಸಮಯದಲ್ಲಿ ಮಾತಾಡಿದ ನಿತೀಶ್ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿದ್ದ ಪಾನನಿಷೇಧವನ್ನು ಮನಸಾರೆ ಹೊಗಳಿ, ತಾವು ಬಿಹಾರದಲ್ಲಿ ಪಾನನಿಷೇಧವನ್ನು ಜಾರಿಗೆ ತರುವಲ್ಲಿ ಮೋದಿಯವರೆ ಸ್ಫೂರ್ತಿ ಎನ್ನುವಂತಹ ಮಾತನ್ನಾಡಿದ್ದರು. ಮೋದಿಯವರ ಈ ನಡೆ ಇಡೀ ರಾಷ್ಟ್ರಕ್ಕೆ ಮಾದರಿಯಾಗಬೇಕೆಂದು ಸಹ ಕರೆಕೊಟ್ಟರು. ನಂತರ ಮಾತನಾಡಿದ ಮೋದಿಯವರು ಸಹ ನಿತೀಶ್ ಅವರ ಕಾರ್ಯಕ್ರಮಗಳನ್ನು ಮೆಚ್ಚುತ್ತಾ ಹಿಂದುಳಿದ ವರ್ಗಗಳ ಅವರ ಕಾಳಜಿಯನ್ನು ಕೊಂಡಾಡಿ ಈ ವಿಚಾರದಲ್ಲಿ ಬಿಹಾರದ ಜನತೆ ನಿತೀಶರನ್ನು ಬೆಂಬಲಿಸಬೇಕೆಂದು ಹೇಳಿದ್ದರು. ಈ ಬೆಳವಣಿಗೆಗಳಿಂದ ವಿರೋಧ ಪಕ್ಷಗಳು ಸಹಜವಾಗಿಯೇ ಗೊಂದಲಕ್ಕೆ ಈಡಾಗಿದ್ದಾರೆ.
ನಿತೀಶರ ಈ ಬದಲಾವಣೆಗೆ ಮೂಲಕಾರಣ ಮೈತ್ರಿಕೂಟದ ಅವರ ಸರಕಾರದ ಪಾಲುದಾರ ಪಕ್ಷಗಳು. ನಿತೀಶರ ಸರಕಾರದಲ್ಲಿ ಮಂತ್ರಿಗಳಾಗಿರುವ ಲಾಲೂ ಪ್ರಸಾದ್ ಅವರ ಪುತ್ರರು ಸರಕಾರದ ಪ್ರತಿವಿಚಾರದಲ್ಲಿಯೂ ಮೂಗು ತೋರಿಸುತ್ತಾ ನಿತೀಶರ ಆತಂಕಕ್ಕೆ ಕಾರಣವಾಗುತ್ತಿದ್ದಾರೆ. ಜೊತೆಗೆ ಲಾಲೂ ಪ್ರಸಾದ್ ಯಾದವರನ್ನು ಸಮಾಧಾನ ಪಡಿಸಲು ನಿತೀಶರು ಕೆಲವು ಅಪ್ರಿಯ ನಿರ್ಣಯಗಳನ್ನೂ ತೆಗೆದುಕೊಳ್ಳುವ ಅನಿವಾರ್ಯತೆಯೂ ಬಂದಿದೆ. ರಾಷ್ಟ್ರೀಯ ಜನತಾದಳದ ನಾಯಕರು ಮತ್ತು ಕಾರ್ಯಕರ್ತರ ಅಕ್ರಮ ಚಟುವಟಿಕೆಗಳು ಮತ್ತು ಅವರ ವಿರುದ್ದ ಆಪಾದನೆಗಳಿಗೆ ನಿತೀಶರೇ ಉತ್ತರ ಕೊಡಬೇಕಾಗಿದ್ದು, ಕ್ರಮೇಣ ಇದು ಬಿಹಾರದ ಜನತೆಯಲ್ಲಿ ತನ್ನ ಮೇಲಿರಬಹುದಾದ ವಿಶ್ವಾಸವನ್ನು ಕಡಿಮೆಗೊಳಿಸಬಹುದೆಂಬ ಭಯ ನಿತೀಶರಿಗಿದೆ. ಅದೂ ಅಲ್ಲದೆ ಮುಂದಿನ ಚುನಾವಣೆಯ ಹೊತ್ತಿಗೆ ಇದೇ ಮೈತ್ರಿಕೂಟವನ್ನು ಮುಂದಿಟ್ಟುಕೊಂಡು ಅಧಿಕಾರ ಹಿಡಿಯುವುದು ಕಷ್ಟವೆಂಬುದು ನಿತೀಶರಿಗೆ ಅರ್ಥವಾಗಿದೆ. ಹೀಗಾಗಿ ಅವರು ತಮ್ಮದೇ ಆದ ಹೊಸದೊಂದು ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದಂತೆ ಕಾಣುತ್ತಿದೆ. ಹೀಗಾಗಿಯೇ ಅವರು ಈ ವರ್ಷ ನಡೆಯಲಿರುವ ಪಂಚ ರಾಜ್ಯ ಚುನಾವಣೆಗಳ ಬಗ್ಗೆ ವಿರೋಧಪಕ್ಷಗಳ ಜೊತೆ ಯಾವುದೇ ಗಂಭೀರ ಮಾತುಕತೆ ನಡೆಸುತ್ತಿಲ್ಲ. ಬಿಹಾರಿ ವಲಸಿಗರು ಹೆಚ್ಚಿರುವ ಪಂಜಾಬಿನ ಕಡೆಗೂ ಅವರು ಗಮನ ಹರಿಸುತ್ತಿಲ್ಲ. ಮುಂದಿನ ಚುನಾವಣೆ ವೇಳೆಗೆ ತಮಗೆ ಈಗಿರುವ ಮತಬ್ಯಾಂಕಿನ ಜೊತೆಗೆ ಹೊಸದೊಂದು ನವಸಾಕ್ಷರಸ್ಥರ ಮತಬ್ಯಾಂಕನ್ನು ಗಟ್ಟಿ ಮಾಡಿಕೊಳ್ಳುವ ದಿಕ್ಕಿನಲ್ಲಿ ನಿತೀಶ್ ಯೋಚಿಸುತ್ತಿದ್ದಾರೆ. ಹೀಗಾಗಿಯೇ ಪಕ್ಕದ ಉತ್ತರಪ್ರದೇಶದ ಚುನಾವಣೆಗಳ ಕುರಿತಂತೆಯೂ ಅವರು ತೀರಾ ಆಸಕ್ತಿಯನ್ನೇನು ತೋರಿಸುತ್ತಿಲ್ಲ. ಅದೇ ರೀತಿ ಮೋದಿಯವರಿಗೂ 2019ರ ವೇಳೆಗೆ ತಮಗಿರುವ ಬೆಂಬಲವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಇಚ್ಛೆಯಿದ್ದಂತೆ ನಿತೀಶರಂತಹ ಜನಪರವಾದ, ಜನಪ್ರಿಯ ಮುಖ್ಯಮಂತ್ರಿಯ ಬೆಂಬಲವನ್ನು ಗಳಿಸಿಕೊಂಡಲ್ಲಿ ಬಿಹಾರವನ್ನು ಗೆಲ್ಲುವುದರ ಜೊತೆಗೆ ಇತರ ಸಣ್ಣಪುಟ್ಟ ರಾಜ್ಯಗಳನ್ನೂ ವಶಪಡಿಸಿಕೊಂಡು ಕಾಂಗ್ರೆಸ್‌ನ ಪುನಶ್ಚೇತನದ ಆಸೆಗೆ ತಣ್ಣೀರೆರಚಲು ಮೋದಿಯವರು ಬಯಸುತ್ತಿದ್ದಾರೆ. ಹೀಗಾಗಿಯೇ ಅವರು ದೇಶದ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳನ್ನು ಓಲೈಸುವತ್ತ ಹೆಜ್ಜೆ ಇಡುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮಿಳುನಾಡು, ಒರಿಸ್ಸಾ ಮತ್ತು ಈಶಾನ್ಯಭಾಗದ ಪುಟ್ಟ ರಾಜ್ಯಗಳಲ್ಲಿ ಹೆಚ್ಚಿನ ಬೆಂಬಲ ಗಳಿಸಲು ಪ್ರಯತ್ನ ನಡೆಸಿದ್ದಾರೆ. ಈಗ ಕೋಮುವಾದದ ವಿರೋಧಿ ನೀತಿಯೊಂದನ್ನೇ ಇಟ್ಟುಕೊಂಡು ಮುಂದಿನ ಚುನಾವಣೆಗಳನ್ನು ಎದುರಿಸಿ ಗೆಲ್ಲುವುದು ಕಷ್ಟವೆಂಬುದು ನಿತೀಶರಿಗೆ ಮನವರಿಕೆಯಾಗಿರುವಂತೆ, ತಮ್ಮ ಮತಾಂಧ ಮತ್ತು ಅಭಿವೃದ್ಧ್ದಿಯ ಹಳೆಯ ಘೋಷಣೆಗಳನ್ನು ಹೊತ್ತು 2019ಕ್ಕೆ ಮತ್ತೆ ಅಧಿಕಾರ ಹಿಡಿಯುವುದು ಕಷ್ಟಸಾಧ್ಯವೆಂದು ಮೋದಿಯವರಿಗೂ ಅನಿಸಿದಂತಿದೆ. ಭಾಜಪದ ಸಾಂಪ್ರದಾಯಿಕ ಮತಬ್ಯಾಂಕಿನ ಬಲ ಒಂದರಿಂದಲೇ ಗೆಲುವು ಅಸಾಧ್ಯವೆಂಬುದೂ ಅವರಿಗೆ ಅರಿವಾದಂತಿದೆ. ಭವಿಷ್ಯದ ರಾಜಕೀಯ ಚದುರಂಗದಾಟದ ನಡೆಗಳನ್ನು ಮೊದಲಿಗೇ ಊಹಿಸಿ, ಇಬ್ಬರೂ ನಾಯಕರು ತಮ್ಮ ಕಾಯಿಗಳನ್ನು ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಪರಸ್ಪರ ಪೂರಕವಾಗಿ ಕೆಲಸ ಮಾಡಲು ಇಬ್ಬರೂ ನಾಯಕರು ನಿರ್ಧರಿಸಿದಂತಿದೆ. ಹೀಗಾಗಿ ಸದ್ಯಕ್ಕೆ ಭಾಜಪೇತರ ವಿರೋಧ ಪಕ್ಷಗಳ ಮೈತ್ರಿಕೂಟದ ರಚನೆ ಎನ್ನುವುದು ದೂರದ ಮಾತಾಗುವಂತೆ ಕಾಣುತ್ತಿದೆ.