ಮೋದಿಯ ಪ್ರಧಾನ ಗುರಿ ನಗದುರಹಿತ ಆರ್ಥಿಕತೆಯೇ?

Update: 2017-01-16 05:48 GMT

ಹೊಸ ನೋಟುಗಳಲ್ಲಿ ಯಾವುದೇ ಹೊಸ ಭದ್ರತಾ ಅಂಶಗಳು ಇಲ್ಲ. ಅವುಗಳನ್ನು ನಕಲಿ ಮಾಡುವ ಕೆಲಸ ಈಗಾಗಲೇ ದೇಶದೊಳಗೆ ಶುರುವಾಗಿರುವಾಗ ಇನ್ನು ವಿದೇಶಗಳಿಂದ ಬರಲು ಕಷ್ಟವೇನಿದೆ? ಅಸಲಿಗೆ ನಕಲಿ ನೋಟುಗಳನ್ನು ನಾಶಪಡಿಸಲು ಈಗಿನ ಈ ಉಗ್ರ ವಿಧಾನದ ಬದಲು ಸೌಮ್ಯ ವಿಧಾನಗಳನ್ನು ಬಳಸಬಹುದಿತ್ತು. 

2016ರ ನವೆಂಬರ್ 8ಕ್ಕೆ ಮುನ್ನ ಆಗಿರುವ ಕೆಲವೊಂದು ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡಿದಾಗ ಮೋದಿಯ ನೋಟು ರದ್ದತಿ ಕಾರ್ಯಾಚರಣೆಯ ಮೂಲ ಉದ್ದೇಶ ಅವರು ಹೇಳಿದಂತಿರದೆ, ದೇಶದಾದ್ಯಂತ ನಗದುರಹಿತ ವಹಿವಾಟನ್ನು ಜಾರಿಗೆ ತರುವುದಾಗಿದೆ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಹಾಗಾದರೆ ಆ ಬೆಳವಣಿಗೆಗಳು ಯಾವುವೆಂದು ಮುಂದೆ ನೋಡೋಣ. ನವೆಂಬರ್ 8ರ ರಾತ್ರಿ ಹಠಾತ್ತಾಗಿ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ 500 ಮತ್ತು 1000ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರವನ್ನು ಪ್ರಕಟಿಸುತ್ತಾ ಆ ಮೂಲಕ ಭ್ರಷ್ಟಾಚಾರ, ಕಪ್ಪುಹಣ, ಖೋಟಾ ನೋಟು, ಭಯೋತ್ಪಾದನೆಗಳ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಘೋಷಿಸಿದ. ಷ್ಟಾಚಾರದ ಪಿಡುಗಿನ ಭೂತೋಚ್ಚಾಟನೆ, ನಕಲಿ ನೋಟುಗಳ ಹಾವಳಿಗೆ ತಡೆ, ಭಯೋತ್ಪಾದನೆಯ ಜಾಡ್ಯದ ಅಂತ್ಯ ಇವೆಲ್ಲವೂ ಜನಸಾಮಾನ್ಯರ ಹೃದಯಕ್ಕೆ ಸಮೀಪವಾದ ವಿಷಯಗಳು. ಆದುದರಿಂದಲೇ ನೋಟು ರದ್ದತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅನೇಕರು ಹೌದು ಕಷ್ಟ ಆಗಿದೆ. ಆದರೆ ಇಂತಹ ಪವಿತ್ರ ಉದ್ದೇಶಕ್ಕೋಸ್ಕರ ಕೊಂಚ ತ್ಯಾಗ ಮಾಡಲು ಸಿದ್ಧ ಎಂಬರ್ಥದ ಮಾತುಗಳನ್ನಾಡಿರುವುದರಲ್ಲಿ ಸೋಜಿಗವಿಲ್ಲ. ಆದರೆ ಅದೇ ಮೋದಿ ಮುಂದಿನ ಕೆಲವೆ ದಿನಗಳಲ್ಲಿ ವರಸೆ ಬದಲಾಯಿಸಿ ಭಾರತವನ್ನು ತುರ್ತಾಗಿ ನಗದುರಹಿತ ಆರ್ಥಿಕತೆಯ ದೇಶವಾಗಿ ಪರಿವರ್ತಿಸಬೇಕಾಗಿದೆ ಎನ್ನಲಾರಂಭಿಸಿದರು. ಆದರೆ ವಾಸ್ತವವಾಗಿ ಪ್ರಾರಂಭದಿಂದಲೂ ಮೋದಿಯ ಪ್ರಧಾನ ಗುರಿ ನಗದುರಹಿತ ಆರ್ಥಿಕತೆಯೆ ಆಗಿತ್ತು ಎನ್ನುತ್ತಿವೆ ಇತ್ತೀಚೆಗೆ ಬಯಲಾಗಿರುವ ಮಾಹಿತಿಗಳು. ನೋಟು ರದ್ದತಿ ಮಾರ್ಗವನ್ನು ಅನುಸರಿಸಿರುವುದು ನಗದು ಹಣದ ಕೃತಕ ಅಭಾವ ಸೃಷ್ಟಿಸಿ ಆ ಮೂಲಕ ಜನ ಬೇರೆ ಆಯ್ಕೆ ಇಲ್ಲದೆ ನಗದುರಹಿತ ಆರ್ಥಿಕತೆಯನ್ನು ಒಪ್ಪಿಕೊಳ್ಳುವ ವಾತಾವರಣವನ್ನು ನಿರ್ಮಿಸುವುದಕ್ಕೋಸ್ಕರ ಎಂದು ತಿಳಿದುಬಂದಿದೆ.

ಕಾಳಧನ, ಖೋಟಾ ನೋಟು, ಭಯೋತ್ಪಾದನೆ ನಿರ್ಮೂಲನದ ಮಾತುಗಳೆಲ್ಲ ದಿಕ್ಕು ತಪ್ಪಿಸುವ ತಂತ್ರವಾಗಿತ್ತೆ ಹೊರತು ಇನ್ನೇನೂ ಅಲ್ಲ ಎಂದು ನಂಬಲು ಬಲವತ್ತರ ಕಾರಣಗಳಿವೆ: ಮೊತ್ತ ಮೊದಲಾಗಿ ಮೋದಿ ಸರಕಾರ ಎಂದೂ ಕಪ್ಪುಹಣ ಎಷ್ಟಿದೆ ಮತ್ತು ಎಷ್ಟು ಸಿಗಲಿದೆ ಎಂದು ತಿಳಿಸಿಲ್ಲ. ಇತ್ತೀಚೆಗೆ ಲಭ್ಯವಾಗಿರುವ ನಂಬಲರ್ಹ ಮಾಹಿತಿಗಳ ಪ್ರಕಾರ ನೋಟುಗಳನ್ನು ರದ್ದುಗೊಳಿಸಿದಾಗ ಚಲಾವಣೆಯಲ್ಲಿದ್ದ ಹಣದ ಶೇ.97ರಷ್ಟು (ರೂ.15.44 ಲಕ್ಷ ಕೋಟಿಯಲ್ಲಿ ಸುಮಾರು ರೂ.14.97 ಲಕ್ಷ ಕೋಟಿ) ಬ್ಯಾಂಕುಗಳಿಗೆ ಮರಳಿ ಬಂದಾಗಿದೆ. ಇದರರ್ಥ ನಗದು ರೂಪದಲ್ಲಿದ್ದ ಹೆಚ್ಚುಕಮ್ಮಿ ಎಲ್ಲಾ ಕಪ್ಪುಹಣ ಬಿಳಿಯಾಗಿದೆ! ವಾಸ್ತವದಲ್ಲಿ ಮೋದಿಯ ನೋಟು ರದ್ದತಿ ಕಾರ್ಯಾಚರಣೆ ಕಪ್ಪುಹಣವನ್ನು ಹೊರತೆಗೆಯುವ ಬದಲು ಕಪ್ಪುಹಣ ಮಾಡುವ ಹೊಸ ಮಾರ್ಗಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಹೊಸ ನೋಟುಗಳಲ್ಲೇ ಕಾಳದಂಧೆ ನಡೆದಿರುವುದು ಭ್ರಷ್ಟಾಚಾರ ಎಲ್ಲೂ ಹೋಗಿಲ್ಲ, ಅದಿನ್ನೂ ಜೀವಂತವಾಗಿದೆಯಲ್ಲದೆ ಚಟುವಟಿಕೆಯಿಂದ ಇದೆ ಎಂಬುದನ್ನು ಸೂಚಿಸುವುದಿಲ್ಲವೆ!? ಹಾಗಾದರೆ ಇಷ್ಟೊಂದು ಐಟಿ ದಾಳಿಗಳಾಗುತ್ತಿಲ್ಲವೆ, ಸುಮಾರು ರೂ.4800 ಕೋಟಿಗೂ ಅಧಿಕ ಕಪ್ಪುಹಣವನ್ನು ವಶಪಡಿಸಿಕೊಳ್ಳಲಾಗಿಲ್ಲವೆ ಎಂಬ ಪ್ರಶ್ನೆಗಳು ಬರಬಹುದು. ಆದರೆ ಸುಮಾರು ರೂ.4-5 ಲಕ್ಷ ಕೋಟಿಯಷ್ಟಿದೆ ಎಂದು ಅಂದಾಜಿಸಲಾದ ಕಪ್ಪುಹಣಕ್ಕೆ ಹೋಲಿಸಿದರೆ ಇದು ಏನೇನೂ ಅಲ್ಲ. ಅಸಲಿಗೆೆ ಹೆಚ್ಚಿನ ಐಟಿ ದಾಳಿಗಳು ಕೇವಲ ಬೆರಳೆಣಿಕೆಯಷ್ಟು ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು, ಕಂಟ್ರಾಕ್ಟರ್‌ಗಳಿಗೆ ಸೀಮಿತವಾಗಿರುವುದನ್ನು ಮತ್ತು ಬಿಜೆಪಿಯೇತರ ಸರಕಾರಗಳನ್ನು ಗುರಿಯಾಗಿಸಿರುವುದನ್ನು ಕಾಣಬಹುದು. ಆದರೆ ಭ್ರಷ್ಟಾತಿಭ್ರಷ್ಟ ಕಾರ್ಪೊರೇಟು ಕುಳಗಳ, ಭ್ರಷ್ಟ ಬಿಜೆಪಿ ಸರಕಾರಗಳ, ಭ್ರಷ್ಟ ಸಂಘ ಪರಿವಾರಿಗರ ಕೂದಲು ಕೂಡಾ ಕೊಂಕಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಜನಾರ್ದನ ರೆಡ್ಡಿ, ನಿತಿನ್ ಗಡ್ಕರಿಗಳಂಥವರ ಅದ್ದೂರಿ ಸಮಾರಂಭಗಳಿಗೆ ಖರ್ಚಾದ ದುಡ್ಡಿನ ಮೂಲ ತನಿಖೆಗೊಳಪಟ್ಟಿದೆಯೇ? ಅದಾನಿಯಂಥವರು ಕಲೆಹಾಕಿದ್ದಾರೆನ್ನಲಾದ ಸಾವಿರಾರು ಕೋಟಿ ಕಪ್ಪುಹಣದ ಮೇಲೆ ಯಾಕೆ ದಾಳಿಗಳಿಲ್ಲ? ಅಮಿತ್ ಶಾ ನಿರ್ದೇಶಕರಾಗಿರುವ ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕಿನ ಅವ್ಯವಹಾರಗಳ ತನಿಖೆ ನಡೆದಿದೆಯೇ?

ಎರಡನೆಯದಾಗಿ, ಹೊಸ ನೋಟುಗಳಲ್ಲಿ ಯಾವುದೇ ಹೊಸ ಭದ್ರತಾ ಅಂಶಗಳು ಇಲ್ಲ. ಅವುಗಳನ್ನು ನಕಲಿ ಮಾಡುವ ಕೆಲಸ ಈಗಾಗಲೇ ದೇಶದೊಳಗೆ ಶುರುವಾಗಿರುವಾಗ ಇನ್ನು ವಿದೇಶಗಳಿಂದ ಬರಲು ಕಷ್ಟವೇನಿದೆ? ಅಸಲಿಗೆ ನಕಲಿ ನೋಟುಗಳನ್ನು ನಾಶಪಡಿಸಲು ಈಗಿನ ಈ ಉಗ್ರ ವಿಧಾನದ ಬದಲು ಸೌಮ್ಯ ವಿಧಾನಗಳನ್ನು ಬಳಸಬಹುದಿತ್ತು. ಮೂರನೆಯದಾಗಿ ನೋಟು ರದ್ದತಿ ನಂತರ ಉಗ್ರರ ಅಟ್ಟಹಾಸ ನಿಂತಿಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ನಮ್ಮ ಮುಂದಿವೆ 2016ರ ನವೆಂಬರ್ 29ರಂದು ಜಮ್ಮುವಿನ ನಾಗ್ರೋತಾದಲ್ಲಿ ಭೂಸೇನೆಯ ನೆಲೆಯೊಂದರ ಮೇಲೆ ಮತ್ತು 2017ರ ಜನವರಿ 9ರ ಮುಂಜಾವ ಬತ್ತೋರ್‌ನಲ್ಲಿ ಭೂಸೇನೆಯ ಸಾಮಾನ್ಯ ರಿಸರ್ವ್ ಇಂಜಿನಿಯರ್ ಪಡೆಯ ಶಿಬಿರದ ಮೇಲೆ ನಡೆದ ದಾಳಿಗಳು.

ಹಾಗಾದರೆ ಮೋದಿ ಸರಕಾರ ಯಾತಕ್ಕೋಸ್ಕರ ಭಾರತವನ್ನು ನಗದುರಹಿತ ಆರ್ಥಿಕತೆಯ ದೇಶವಾಗಿಸಲು ತವಕಿಸುತ್ತಿದೆೆ? ಇದರ ಉತ್ತರ ಮೋದಿ ಸರಕಾರ ಅಮೆರಿಕದ ಜತೆ ಮಾಡಿಕೊಂಡಂಥ ವ್ಯೆಹಾತ್ಮಕ ಸಹಭಾಗಿತ್ವದ ಒಪ್ಪಂದದಲ್ಲಿ ಅಡಗಿದೆ. ಚೀನಾದ ನಾಗಾಲೋಟಕ್ಕೆ ಕಡಿವಾಣ ಹಾಕುವ ಸಮಾನ ಉದ್ದೇಶದೊಂದಿಗೆ ಸದರಿ ಒಪ್ಪಂದಕ್ಕೆ ಸಹಿ ಹಾಕಿದ ತರುವಾಯದಲ್ಲಿ ಒಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಈ ಹೊತ್ತಿನ ಸನ್ನಿವೇಶದ ಬೆಳಕಿನಲ್ಲಿ ನೋಡಿದಾಗ ಅದರ ನಿಜವಾದ ಅರ್ಥ ಸ್ಪಷ್ಟವಾಗುತ್ತದೆ. ವಿಷಯ ಏನೆಂದರೆ ಅಕ್ಟೋಬರ್ 2016ರ ಸುಮಾರಿಗೆ ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (United States Agency for International Development; USAID)

ಭಾರತದ ವಿತ್ತ ಸಚಿವಾಲಯವನ್ನು ಸಂಪರ್ಕಿಸಿ ಅದರೊಂದಿಗೆ ಕೆಲವು ಪರಸ್ಪರ ಸಹಕಾರದ ಒಡಂಬಡಿಕೆಗಳನ್ನು ಮಾಡಿಕೊಂಡಿದೆ. ಇವುಗಳ ಪೈಕಿ ಒಂದು ಒಡಂಬಡಿಕೆ ನಗದುರಹಿತ ಆರ್ಥಿಕತೆಗೆ ಸಂಬಂಧಪಟ್ಟದ್ದಾಗಿದ್ದು ಅದರ ಮುಖ್ಯ ಉದ್ದೇಶ ಭಾರತದಲ್ಲಿ ಹಾಗೂ ವಿಶ್ವದಲ್ಲಿ ನಗದುರಹಿತ ಆರ್ಥಿಕತೆಯನ್ನು ಜಾರಿಗೆ ತರುವುದಾಗಿದೆ! ನಗದುರಹಿತ ಆರ್ಥಿಕತೆಯನ್ನು ವ್ಯಾಪಕವಾಗಿ ಅನುಷ್ಠಾನಗೊಳಿಸುವ ಸಲುವಾಗಿರುವ ಈ ಒಡಂಬಡಿಕೆಯನ್ನು ಕ್ಯಾಟಲಿಸ್ಟ್: ಸರ್ವರನ್ನು ಒಳಗೊಳ್ಳುವ ನಗದುರಹಿತ ಪಾವತಿಯಲ್ಲಿ ಸಹಭಾಗಿತ್ವ (Catalyst: : Inclusive Cashless Payment Partnership) USAID ಎಂದು ಕರೆಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 14ರಂದು ನೀಡಲಾದ ಪತ್ರಿಕಾ ಹೇಳಿಕೆಯಲ್ಲಿಯೂ ಈ ಒಪ್ಪಂದವನ್ನು ಮಾಡಿಕೊಂಡಿರುವುದು ಸರ್ವರನ್ನು ಆರ್ಥಿಕವಾಗಿ ಒಳಗೊಳ್ಳುವುದಕ್ಕಾಗಿ... ಎನ್ನಲಾಗಿದೆ. ಸಂಸ್ಥೆಯ ಭಾರತೀಯ ನಿರ್ದೇಶಕರಾಗಿರುವ ರಾಯಭಾರಿ ಜೊನಾತನ್ ಆಡಲ್‌ಟನ್, ಕ್ಯಾಟಲಿಸ್ಟ್ ಯೋಜನೆ ದೈನಂದಿನ ಖರೀದಿಗಳನ್ನು ನಗದುರಹಿತವಾಗಿಸುವ ಸವಾಲಿನ ಮೇಲೆ ಕೇಂದ್ರೀಕರಿಸಲಿದೆ ಎಂದಿದ್ದ.

USAID (World Resources Institute) (Chief Operating Officer) USAID USAID (Chief Executive Officerವರದಿಗಳ ಪ್ರಕಾರ ಸಂಸ್ಥೆ ಕ್ಯಾಟಲಿಸ್ಟ್ ಯೋಜನೆಗೆ ಮೂರು ವರ್ಷಗಳ ಕಾಲ ಆರ್ಥಿಕ ನೆರವನ್ನೂ ಒದಗಿಸಲು ಒಪ್ಪಿಕೊಂಡಿದೆ. ಆದರೆ ಅದರ ಪ್ರಮಾಣವನ್ನು ಹೊರಗೆಡವಲಾಗಿಲ್ಲ. ಆ ಮಾಹಿತಿಯನ್ನು ರಹಸ್ಯವಾಗಿಡಲಾಗಿದೆ. ಈ ಹಿಂದೆ ವಾಷಿಂಗ್ಟನ್ ಮೂಲದ ವಿಶ್ವ ಸಂಪನ್ಮೂಲ ಸಂಸ್ಥೆಯಲ್ಲಿ ಪ್ರಧಾನ ಕಾರ್ಯಾಚರಣಾ ಅಧಿಕಾರಿ ಆಗಿದ್ದ ಅಲೋಕ್ ಗುಪ್ತಾ ಎಂಬಾತನನ್ನು ಕ್ಯಾಟಲಿಸ್ಟ್ ಯೋಜನೆಗೆ ನಿರ್ದೇಶಕರಾಗಿ ನೇಮಿಸಲಾಗಿದೆ. ಇದರ ಹಿಂದೆ ಸಂಸ್ಥೆಯ ಕೈವಾಡವಿರುವುದು ಸ್ಪಷ್ಟ ಏಕೆಂದರೆ, ವಿಶ್ವ ಸಂಪನ್ಮೂಲ ಸಂಸ್ಥೆಯ ಪ್ರಧಾನ ಪ್ರಾಯೋಜಕರಲ್ಲಿ ಸಂಸ್ಥೆಯೂ ಒಂದು. ಮತ್ತೊಂದು ಪ್ರಮುಖ ವಿಚಾರ ಏನೆಂದರೆ ಅಲೋಕ್ ಗುಪ್ತಾ ಆಧಾರ್‌ಅನ್ನು ರೂಪಿಸಿದ ತಂಡದಲ್ಲಿ ಇದ್ದವರು! ನಗದುರಹಿತ ವಹಿವಾಟಿಗೆ ಆಧಾರ್ ಬಯೊಮೆಟ್ರಿಕ್ಸ್ ಬಳಸಲಾಗುವುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಇದು ಮುಖ್ಯವಾಗುತ್ತದೆ. ಕ್ಯಾಟಲಿಸ್ಟ್‌ನ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ) (Snapdeal) USAID Gates Foundation (Microsoft), Omidyar Network (eBay), Dell Foundation, Mastercard, Visa, Metlife Foundation, The Better Than Cash Alliance. (Beyond Cash) USAID 

USAID ನೇಮಕಗೊಂಡಿರುವ ಬಾದಲ್ ಮಲ್ಲಿಕ್ ಇದಕ್ಕೆ ಮುಂಚೆ ಭಾರತದ ಆನ್‌ಲೈನ್ ಮಾರುಕಟ್ಟೆ ಸ್ನಾಪ್ ಡೀಲ್‌ನ ಉಪಾಧ್ಯಕ್ಷರಾಗಿದ್ದರು! ಆಘಾತಕಾರಿ ಅಂಶವೆಂದರೆ ಸಂಸ್ಥೆ ಮತ್ತು ಭಾರತದ ವಿತ್ತ ಸಚಿವಾಲಯ ಒಟ್ಟಾಗಿ ನಗದು ಆರ್ಥಿಕತೆಯ ಮೇಲೆ ಹೂಡಿರುವ ಈ ಯುದ್ಧದಲ್ಲಿ ಭಾರತ, ಅಮೆರಿಕ ಮತ್ತು ಇತರ ದೇಶಗಳ 35ಕ್ಕೂ ಅಧಿಕ ಖಾಸಗಿ ಕಂಪೆನಿಗಳು ಭಾಗಿಯಾಗಿರುವುದಾಗಿ ತಿಳಿದುಬರುತ್ತದೆ! ಸಹಜವಾಗಿಯೇ ಅವುಗಳಲ್ಲಿ ಹೆಚ್ಚಿನವು ಐಟಿ ಮತ್ತು ಪಾವತಿ ಸೇವಾ ಸಂಸ್ಥೆಗಳು! ಉದಾಹರಣೆಗೆ ವಾಸ್ತವ ಏನೆಂದರೆ ಅಮೆರಿಕದ ಐಟಿ ಮತ್ತು ಡಿಜಿಟಲ್ ಪಾವತಿ ಕ್ಷೇತ್ರದ ಕಾರ್ಪೊರೇಟುಗಳು ತಮ್ಮ ಕ್ಷೇತ್ರವನ್ನು ದೊಡ್ಡ ಮಟ್ಟಿನಲ್ಲಿ ವಿದೇಶಗಳಿಗೆ ವಿಸ್ತರಿಸಿ ಅಪಾರ ಲಾಭ ಗಳಿಸಲು ಹಾತೊರೆಯುತ್ತಿವೆ. ಅಮೆರಿಕ ಸರಕಾರದ ಮೇಲೆ ಬಲವಾದ ಹಿಡಿತ ಹೊಂದಿರುವ ಇವು ಅದನ್ನು ಬಳಸಿಕೊಂಡು ತಮ್ಮ ಅಜೆಂಡಾವನ್ನು ಜಾರಿಗೊಳಿಸುತ್ತಿವೆ. 2015ರ ಡಿಸೆಂಬರ್‌ನಷ್ಟು ಹಿಂದೆಯೆ ಭಾರತದಲ್ಲಿ ನಗದಿನ ಆಚೆ ಹೆಸರಿನ ಅಧ್ಯಯನವೊಂದನ್ನು ನಡೆಸಿರುವ ಸಂಸ್ಥೆ ಅದರ ಅಂತಿಮ ವರದಿಯನ್ನು 2016ರ ಜನವರಿಯಲ್ಲಿ ಸರಕಾರಕ್ಕೆ ಸಲ್ಲಿಸಿತ್ತು. ವ್ಯಾಪಾರಿಗಳು, ಗ್ರಾಹಕರು ಹೆಚ್ಚಾಗಿ ನಗದು ವ್ಯವಹಾರಗಳಲ್ಲೆ ಮುಳುಗಿರುವುದರಿಂದ ನಗದುರಹಿತಕ್ಕೆ ಒಲವು ತೋರುತ್ತಿಲ್ಲ...... ಹೀಗಾಗಿ ಹೊರಗಿನಿಂದ ಶಕ್ತಿಯುತ ಪ್ರಚೋದನೆ ಬೇಕಾಗಿದೆ.... ಎನ್ನುತ್ತದೆ ವರದಿ.

ಆದರೆ ಹೊರಗಿನಿಂದ ಪ್ರಚೋದನೆ ನೀಡುವುದು ಹೇಗೆ ಎಂಬುದನ್ನು ಮೊದಲೆ ಬಹಿರಂಗಪಡಿಸುವಂತಿರಲಿಲ್ಲ. ಹೀಗಾಗಿ ಕ್ಯಾಟಲಿಸ್ಟ್ ಒಂದು ಕುಯುಕ್ತಿ ಮಾಡಿ ಸ್ಥಳೀಯವಾಗಿ ಒಂದು ಕ್ಷೇತ್ರೀಯ ಪ್ರಯೋಗ ನಡೆಸುವ ಮಾತುಗಳನ್ನಾಡಿತು. ಕ್ಯಾಟಲಿಸ್ಟ್‌ನ ಸಿಇಒ ಮಲ್ಲಿಕ್ ಮೊನ್ನೆ ಅಕ್ಟೋಬರ್‌ನಲ್ಲಿ ಒಂದು ನಗರವನ್ನು ಆರಿಸಿಕೊಂಡು ಅಲ್ಲಿ 10ರಿಂದ 12 ತಿಂಗಳುಗಳೊಳಗೆ ನಗದುರಹಿತ ಪಾವತಿಯನ್ನು ಹೆಚ್ಚಿಸುವುದು ನಮ್ಮ ಗುರಿ ಎಂದಿದ್ದರು. ಆದರೆ ತದನಂತರದಲ್ಲಿ ಪ್ಲಾನ್ ಪೂರ್ತಿ ಬದಲಾಗಿ ನವೆಂಬರ್ 8ರಂದು ಮೋದಿ ಏಕಾಏಕಿ ನೋಟು ರದ್ದತಿ ಕಾರ್ಯಕ್ರಮವನ್ನು ಜಾರಿಗೊಳಿಸಿದರು. ಚಲಾವಣೆಯಲ್ಲಿರುವ ಶೇ.86ರಷ್ಟು ನಗದನ್ನು ಅಮಾನ್ಯಗೊಳಿಸಿ, ಬ್ಯಾಂಕ್ ಖಾತೆಗಳಿಂದ ಹಣ ತೆಗೆಯಲು ಮಿತಿ ವಿಧಿಸಿರುವ ಈ ನಡೆಯನ್ನು ಬಾಹ್ಯ ಪ್ರಚೋದನೆ ಎನ್ನದೆ ಇನ್ನೇನೆಂದು ಕರೆಯಬೇಕು? ಇದಕ್ಕೆ ಪೂರಕವಾಗಿ ದಿನಾ ಅಪ್ಪಳಿಸುತ್ತಿವೆ ನಗದುರಹಿತ ವಹಿವಾಟಿನ ಲಾಭಗಳನ್ನು ಅರುಹುವ ಸರಕಾರಿ ಹಾಗೂ ಖಾಸಗಿ ಜಾಹೀರಾತುಗಳು. ನೋಟು ರದ್ದತಿಯ ಪ್ರಧಾನ ಉದ್ದೇಶ ಏನೆಂದು ಈಗ ಸ್ಪಷ್ಟವಾಗುತ್ತಿದೆಯೇ? ಮೋದಿಯ ಮಂಕುಬೂದಿಗೆ ಮರುಳಾದ ಕೆಲವು ಶಿಕ್ಷಣಸಂಸ್ಥೆಗಳೂ ಮೋದಿ ಸರಕಾರದ ವಿಭಾಗಗಳಂತಾಗಿ ನಗದುರಹಿತ ಆರ್ಥಿಕತೆ ಪ್ರೋತ್ಸಾಹಿಸಲು ವಿದ್ಯಾರ್ಥಿಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಸ್ವಲ್ಪವೂ ಸಂಶಯಕ್ಕೆ ಎಡೆ ಇರದಂತೆ ನಡೆಸಿದ ಈ ಸರ್ಜಿಕಲ್ ದಾಳಿಯ ಮಹಾಯಜ್ಞದ ಫಲವಾಗಿ ಜನಸಾಮಾನ್ಯರು ಅತೀವ ಸಂಕಷ್ಟಕ್ಕೊಳಗಾಗಲಿರುವ ವಿಚಾರ ಅದರ ಸಿದ್ಧತೆಯಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ತಿಳಿದಿತ್ತು. ಏಕೆಂದರೆ ಸಂಸ್ಥೆಯ ಅಧ್ಯಯನದಲ್ಲಿ ಕಂಡುಬಂದಿರುವಂತೆ ಭಾರತದ ಶೇ.97ರಷ್ಟು ವಹಿವಾಟುಗಳು ನಗದಿನಲ್ಲಿ ನಡೆಯುತ್ತವೆ. ಶೇ.55ರಷ್ಟು ಭಾರತೀಯರು ಬ್ಯಾಂಕ್ ಖಾತೆ ಹೊಂದಿದ್ದಾರಾದರೂ ಹಿಂದಿನ 3 ತಿಂಗಳ ಅವಧಿಯಲ್ಲಿ ಬಳಕೆಯಲ್ಲಿದ್ದ ಖಾತೆಗಳ ಸಂಖ್ಯೆ ಬರೀ ಶೇ.29. ಗ್ರಾಮಗಳ ಸಂಖ್ಯೆ ಸುಮಾರು 6.5 ಲಕ್ಷ ಇದ್ದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಬ್ಯಾಂಕ್ ಶಾಖೆಗಳ ಸಂಖ್ಯೆ ಕೇವಲ 2 ಲಕ್ಷ. ದೇಶದಲ್ಲಿರುವ ಸುಮಾರು 2 ಲಕ್ಷ ಎಟಿಎಂಗಳ ಪೈಕಿ ಅತ್ಯಧಿಕ ನಗರಪ್ರದೇಶಗಳಿಗೆ ಸೀಮಿತವಾಗಿವೆ. ಹೀಗಾಗಿ ಎಣಿಸಿದ ಹಾಗೇ ನೋಟು ರದ್ದತಿ ಆದ ಮರುಗಳಿಗೆಯಿಂದ ನಗದಿನ ತೀವ್ರ ಅಭಾವ ತಲೆದೋರಿದೆ.

ಪರಿಣಾಮವಾಗಿ ನಗರ ಪ್ರದೇಶಗಳಲ್ಲಿ ಕಾರ್ಡ್ ಉಜ್ಜುವ ಯಂತ್ರಗಳ ಬಳಕೆ ಅನಿವಾರ್ಯವಾಗಿ ಹೆಚ್ಚಿದೆ. ಇದೇ ವೇಳೆ ಬಡವರು, ರೈತರು, ಕಾರ್ಮಿಕರು, ದುರ್ಬಲರು ದೈನಂದಿನ ವೆಚ್ಚಗಳಿಗೆ ಬೇಕಿದ್ದ ದುಡ್ಡಿಗಾಗಿ ವಿಪರೀತ ಒದ್ದಾಡಬೇಕಾದ ಸ್ಥಿತಿ ನಿರ್ಮಾಣವಾಯಿತು. ನೋಟು ರದ್ದತಿಯಿಂದಾಗಿ 100ಕ್ಕೂ ಅಧಿಕ ಜನ ಸತ್ತಿದ್ದಾರೆ, ಅನೌಪಚಾರಿಕ ವಲಯ (ದೇಶದ ಒಟ್ಟು ದುಡಿಯುವ ವರ್ಗದ ಸುಮಾರು 80ರಿಂದ 90 ಪ್ರತಿಶತದಷ್ಟು ಜನ ಇಲ್ಲಿದ್ದಾರೆ) ತೀವ್ರ ಸಂಕಷ್ಟಕ್ಕೆ ತುತ್ತಾಗಿದೆ, ಗಾರ್ಮೆಂಟ್, ನೇಕಾರಿಕೆ, ಚರ್ಮ, ಸೆಣಬು ಮೊದಲಾದ ಸಣ್ಣಪುಟ್ಟ ಉದ್ದಿಮೆಗಳು ನೆಲಕಚ್ಚಿವೆ, ಸಣ್ಣ ಕಸುಬುದಾರರು, ದಿನಗೂಲಿ ನೌಕರರು ಒಪ್ಪತ್ತು ಉಪವಾಸಕ್ಕೆ ಬಿದ್ದಿದ್ದಾರೆ, ವಲಸೆ ಕಾರ್ಮಿಕರು ಕೆಲಸವಿಲ್ಲದೆ ಊರಿಗೆ ಮರಳಿದ್ದಾರೆ, ಸಮಾರಂಭಗಳು ಮುಂದೂಡಲ್ಪಟ್ಟಿವೆ, ಖರೀದಿ ಇಲ್ಲದೆ ಬೆಲೆಗಳು ಇಳಿದ ಕಾರಣ ಹತಾಶರಾದ ರೈತರು ತರಕಾರಿಗಳನ್ನು ಬೀದಿಗೆ ಎಸೆಯತೊಡಗಿದ್ದಾರೆ, ರೈತರ ಆದಾಯದಲ್ಲಿ 50ರಿಂದ ಶೇ.70 ಇಳಿಕೆಯಾಗಿದೆೆ......... ನೋಟು ರದ್ದತಿ ತಂದಿತ್ತಿರುವ ಅವಾಂತರ ಹಾಗೂ ಅನಾಹುತಗಳನ್ನು ಕಂಡಾಗ ಮಾನವೀಯತೆ ಉಳ್ಳ ಯಾರದೆ ಆದರೂ ಮನ ಕಲಕದೆ ಇರದು. ಆದರೆ ಬಹುಸಂಖ್ಯಾತರ ಉದ್ಧಾರಕ್ಕಾಗಿ ಅಲ್ಪಸಂಖ್ಯಾತರನ್ನು, ಮೇಲ್ವರ್ಗಗಳ ಉದ್ಧಾರಕ್ಕಾಗಿ ಕೆಳವರ್ಗಗಳನ್ನು ಬಲಿಗೊಡಲು ಹೇಸದವರ ಕಣ್ಣಾಲಿಗಳು ಒಂದಿನಿತಾದರೂ ಒದ್ದೆ ಆಗಿಲ್ಲ. ಅತ್ತ ಐಟಿ ವಲಯ ಮತ್ತು ಪಾವತಿ ಸೇವಾ ಕಾರ್ಪೊರೇಟ್ ಕಂಪೆನಿಗಳ ಸಂತಸಕ್ಕಂತೂ ಪಾರವೆ ಇಲ್ಲದಾಗಿದೆ. ಅವುಗಳ ಪಾಲಿಗೆ ಇದೀಗ ಸುಗ್ಗಿಯೊ ಸುಗ್ಗಿ. ನಗದಿನ ಕೊರತೆಯ ಪರಿಣಾಮವಾಗಿ ಕಾರ್ಡ್ ಉಜ್ಜುವ ಪಿಒಎಸ್ ಯಂತ್ರಗಳ ಬಳಕೆ ಹೆಚ್ಚಾಗಿರುವುದರಿಂದ ಅವುಗಳ ವ್ಯವಹಾರದಲ್ಲಿ ಹಲವು ಪಟ್ಟು ಏರಿಕೆಯಾಗಿದೆ. ವರದಿಗಳ ಪ್ರಕಾರ ನೋಟು ರದ್ದತಿ ಬಳಿಕ ಪೇಟಿಎಂ ಆದಾಯದಲ್ಲಿ ದೊಡ್ಡ ಪ್ರಮಾಣದ ಹೆಚ್ಚಳವಾಗಿದ್ದು ಅದಿಂದು ದಿನವೊಂದರ ಸುಮಾರು ರೂ.120 ಕೋಟಿಯಷ್ಟಿದೆ ಎನ್ನಲಾಗಿದೆ.

ಆದರೆ ಎಟಿಎಂ, ಕಾರ್ಡ್ ಇತ್ಯಾದಿಗಳು ಡಿಜಿಟಲ್ ಆರ್ಥಿಕತೆ ಎಡೆಗಿನ ಪಯಣದಲ್ಲಿ ಒಂದು ತಾತ್ಕಾಲಿಕ ಮಜಲು ಎನ್ನಲಾಗುತ್ತದೆ. ನೀತಿ ಆಯೋಗದ ಅಧ್ಯಕ್ಷ ಅಮಿತಾಭ್ ಕಾಂತ್ ಇದೇ ಜನವರಿ 7ರಂದು ಬೆಂಗಳೂರಿನಲ್ಲಿ ಪ್ರವಾಸಿ ಭಾರತೀಯ ದಿವಸ್ ಸಂದಭರ್ದಲ್ಲಿ ಆಡಿರುವ ಮಾತುಗಳು ಇದನ್ನು ಪುಷ್ಟೀಕರಿಸುತ್ತವೆ. ಕಾಂತ್ ಪ್ರಕಾರ ನಗದುರಹಿತ ವಹಿವಾಟಿನ ತಂತ್ರಜ್ಞಾನದಲ್ಲಿ ಆಗಲಿರುವ ಆವಿಷ್ಕಾರಗಳ ಫಲವಾಗಿ 2020ರೊಳಗೆ ಈಗಿನ ಎಟಿಎಂ, ಪಿಒಎಸ್ ಮುಂತಾದುವು ಮೂಲೆಗುಂಪಾಗಲಿವೆ. ಅಂದರೆ ಡಿಜಿಟಲ್ ಆರ್ಥಿಕತೆ ಬರಲಿದೆ ಎಂದರ್ಥ. ಆ ಮೂಲಕ ಒಂದು ಕಡೆ ಕಾರ್ಪೊರೇಟುಗಳಿಗೆ ಲಾಭದ ಸುರಿಮಳೆ; ಇನ್ನೊಂದು ಕಡೆ ಕಾರ್ಪೊರೇಟು ಸ್ನೇಹಿ ಪ್ರಭುತ್ವಕ್ಕೂ ಬೇರೊಂದು ವಿಧದಲ್ಲಿ ಲಾಭ. ಭಾರತದಲ್ಲಿ ನಗದಿನ ಬಳಕೆ ಕಮ್ಮಿಯಾಗಿ ಡಿಜಿಟಲ್ ಪಾವತಿ ಹೆಚ್ಚಾದಂತೆ ಸರಕಾರಕ್ಕೆ ಜನರ ಮೇಲೆ, ಅವರ ಆರ್ಥಿಕ ವಹಿವಾಟುಗಳ ಮೇಲೆ ಕಣ್ಣಿಡುವುದು ಸುಲಭವಾಗಲಿದೆ. ಮೋದಿ ಸರಕಾರವಂತೂ ವೈಯಕ್ತಿಕ ಮಾಹಿತಿಗಳನ್ನು ಬಳಸಿಕೊಂಡು ಏನೂ ಮಾಡಬಹುದು. ವ್ಯಕ್ತಿಗಳನ್ನು, ಸಂಸ್ಥೆಗಳನ್ನು ಬ್ಲಾಕ್‌ಮೇಲ್ ಮಾಡಬಹುದು; ತನಗಾಗದವರಿಗೆ ಕಿರುಕುಳ ನೀಡಬಹುದು; ನಿರ್ನಾಮಗೊಳಿಸಬಹುದು...... ಹೀಗೆ ದೇಶದ ಆಗಸದ ಮೇಲೆ ಸರ್ವಾಧಿಕಾರ ಆವರಿಸುತ್ತಿರುವಾಗ ಅಸಹಾಯಕರಾಗಿ ಒಪ್ಪಿಕೊಳ್ಳಬೇಕೆ ಅಥವಾ ಛಲದಿಂದ ಹಿಮ್ಮೆಟ್ಟಿಸಬೇಕೆ? ದೇಶದ ಜನರು ತೀರ್ಮಾನಿಸಬೇಕು. ****

(ಆಧಾರ: 4.1.2017ರ NewsClick.inನಲ್ಲಿ ನಾರ್ಬರ್ಟ್ ಹೇರಿಂಗ್ ಲೇಖನ: Is Washington Behind India’s Brutal Experiment of Abolishing Cash? ಮತ್ತು ಇನ್ನಿತರ ಮೂಲಗಳು)

ಮೋದಿ ಸರಕಾರ ಎಂದೂ ಕಪ್ಪುಹಣ ಎಷ್ಟಿದೆ ಮತ್ತು ಎಷ್ಟು ಸಿಗಲಿದೆ ಎಂದು ತಿಳಿಸಿಲ್ಲ. ಇತ್ತೀಚೆಗೆ ಲಭ್ಯವಾಗಿರುವ ನಂಬಲರ್ಹ ಮಾಹಿತಿಗಳ ಪ್ರಕಾರ ನೋಟುಗಳನ್ನು ರದ್ದುಗೊಳಿಸಿದಾಗ ಚಲಾವಣೆಯಲ್ಲಿದ್ದ ಹಣದ ಶೇ.97ರಷ್ಟು (ರೂ. 15.44 ಲಕ್ಷ ಕೋಟಿಯಲ್ಲಿ ಸುಮಾರು ರೂ.14.97 ಲಕ್ಷ ಕೋಟಿ) ಬ್ಯಾಂಕುಗಳಿಗೆ ಮರಳಿ ಬಂದಾಗಿದೆ. ಇದರರ್ಥ ನಗದು ರೂಪದಲ್ಲಿದ್ದ ಹೆಚ್ಚುಕಮ್ಮಿ ಎಲ್ಲಾ ಕಪ್ಪುಹಣ ಬಿಳಿಯಾಗಿದೆ!

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News

ಜಗದಗಲ
ಜಗ ದಗಲ