ಭಾರತದಲ್ಲಿ ಹಜ್‌ಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿದೆಯೇ?
ಹಜ್ ಯಾತ್ರೆಗೆ ತೆರಳುವ ಮುಸ್ಲಿಮರಿಗೆ ಸರಕಾರಿ ಸ್ವಾಮ್ಯದ ಏರ್ ಇಂಡಿಯಾದಲ್ಲಿ ಸಬ್ಸಿಡಿ ನೀಡುವ ಕ್ರಮ ಕಳೆದ ಕೆಲ ವರ್ಷಗಳಿಂದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಮುಂದುವರಿಯಬೇಕೇ? ಇದು ವಿತ್ತೀಯವಾಗಿ ಇದು ಕಾರ್ಯಸಾಧುವೇ? ಇದು ದೇಶದ ಜಾತ್ಯತೀತ ತತ್ವಗಳೊಂದಿಗೆ ರಾಜಿ ಮಾಡಿಕೊಂಡಂತಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಎದ್ದಿವೆ. ಹಜ್‌ಯಾತ್ರೆಯನ್ನು ಪ್ರತಿ ಮುಸ್ಲಿಮರೂ ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಮಾಡಲೇಬೇಕು. ಸೌದಿ ಅರೇಬಿಯಾದ ಮೆಕ್ಕಾಗೆ ಭೇಟಿ ನೀಡುವುದು ಅತ್ಯಂತ ಪವಿತ್ರ ಎಂಬ ನಂಬಿಕೆ ಇಸ್ಲಾಂನಲ್ಲಿದೆ.
ಇದೀಗ ಮೂರು ದಶಕಗಳಲ್ಲಿ ಮೊದಲ ಬಾರಿಗೆ ಭಾರತೀಯ ಹಜ್‌ಯಾತ್ರಿಗಳ ಕೋಟಾವನ್ನು ಸೌದಿ ಅರೇಬಿಯಾ ಹೆಚ್ಚಿಸಿದ ಬಳಿಕ, ಸಬ್ಸಿಡಿ ಮರುಪರಿಶೀಲನೆಗೆ ಅಲ್ಪಸಂಖ್ಯಾತರ ಸಚಿವಾಲಯ ಸಮಿತಿಯೊಂದನ್ನು ನೇಮಕ ಮಾಡಿದೆ. ಸುಪ್ರೀಂಕೋರ್ಟ್ 2012ರಲ್ಲಿ ನೀಡಿದ ತೀರ್ಪಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುವುದು ಸರಕಾರದ ಸಮರ್ಥನೆ. 10 ವರ್ಷಗಳಲ್ಲಿ ಹಂತಹಂತವಾಗಿ ಸಬ್ಸಿಡಿ ಸ್ಥಗಿತಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.
ಸಬ್ಸಿಡಿ ನೀಡುವ ವಿಧಾನದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಹಜ್ ಕಮಿಟಿಗಳ ಮೂಲಕ ವಿತರಿಸಲಾಗುತ್ತಿರುವ ಅನುದಾನ ವಿವಿಧ ಸಮುದಾಯ ಮುಖಂಡರಿಗೆ ರಾಜಕೀಯ ಇನಾಮು ಎಂಬ ರೀತಿಯಲ್ಲಿ ನೀಡಲಾಗುತ್ತಿದೆ. ಈ ನಗದು ಹರಿವಿನಲ್ಲಿ ಸಾಕಷ್ಟು ಅವ್ಯವಹಾರಗಳೂ ನಡೆಯುತ್ತಿವೆ ಎಂಬ ಆರೋಪವೂ ಕೆಲವರಿಂದ ಕೇಳಿ ಬರುತ್ತಿದೆ. ಇದು ವಾಸ್ತವವಾಗಿ ಸಬ್ಸಿಡಿಯೇ ಅಲ್ಲ; ಸರಕಾರಿ ವ್ಯವಸ್ಥೆಯ ಒಂದು ಕಡೆಯಿಂದ ಮತ್ತೊಂದು ವಿಭಾಗಕ್ಕೆ ಹಣದ ವರ್ಗಾವಣೆಯಷ್ಟೆ ಎಂಬ ವಿಶ್ಲೇಷಣೆಯೂ ಇದೆ. ಸರಕಾರಿ ಸ್ವಾಮ್ಯದ ಏರ್ ಇಂಡಿಯಾದಲ್ಲಿ ಸೌದಿ ಅರೇಬಿಯಾಗೆ ಪ್ರಯಾಣಿಸುವ ಮೂಲಕ ಜನ ಈ ಸೌಲಭ್ಯ ಪಡೆಯುತ್ತಿದ್ದಾರೆ. ಮುಂಬೈನಿಂದ ಕಳೆದ ವರ್ಷ ಯಾತ್ರೆ ಕೈಗೊಂಡ ಮುಸ್ಲಿಮರಿಗೆ ಟಿಕೆಟ್ ಶುಲ್ಕದಲ್ಲಿ 45 ಸಾವಿರ ರೂಪಾಯಿ ರಿಯಾಯಿತಿ ನೀಡಲಾಗಿತ್ತು.
ಕಳೆದೊಂದು ದಶಕದಿಂದ ಹಜ್ ಸಬ್ಸಿಡಿಯನ್ನು ಯುಪಿಎ ಸರಕಾರಕ್ಕೆ ಮುಸ್ಲಿಮರನ್ನು ಓಲೈಸಲು ಇರುವ ತಂತ್ರ ಎಂದು ಹೇಳಲಾಗುತ್ತಿತ್ತು. ಸಮುದಾಯದ ಒಳಗೂ ಈ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಇದಕ್ಕೆ ನೀಡುವ ಸುಮಾರು 450 ಕೋಟಿ ರೂ. ಸಬ್ಸಿಡಿಯನ್ನು ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೀಡಬಹುದು ಎಂದು ಈ ವರ್ಷ ‘ಅಖಿಲ ಭಾರತ ಮಜ್ಲೀಸ್-ಇ-ಇತ್ತೆಹಾದಲ್ ಮುಸ್ಲ್ಲಿಮೀನ್’ ಅಧ್ಯಕ್ಷ ಅಸದುದ್ದೀನ್ ಉವೈಸಿ ಅಭಿಪ್ರಾಯಪಟ್ಟಿದ್ದರು.
ಹಜ್‌ಗೆ ಮಾತ್ರವಲ್ಲ
ಈ ಹಜ್ ಸಬ್ಸಿಡಿ ಬಗೆಗಿನ ಆಕ್ಷೇಪಗಳನ್ನು ಪರಿಗಣಿಸ ಬೇಕಾಗಿದ್ದರೂ, ಭಾರತ ಹಲವು ಯಾತ್ರಿಗಳ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಣವನ್ನು ವೆಚ್ಚ ಮಾಡುತ್ತಿದೆ ಎನ್ನುವುದನ್ನೂ ಮರೆಯಬಾರದು.
ಇದರಲ್ಲಿ ನಾಲ್ಕು ಕುಂಭಮೇಳಗಳಿಗೆ ಮಾಡುವ ವೆಚ್ಚ ಪ್ರಮುಖ. ಹರಿದ್ವಾರ, ಅಲಹಾಬಾದ್, ನಾಸಿಕ್ ಹಾಗೂ ಉಜ್ಜಯಿನಿಯಲ್ಲಿ ನಡೆಯುವ ಕುಂಭಮೇಳಗಳಲ್ಲಿ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಇದು ಸುಲಲಿತವಾಗಿ ನಡೆಯಲು, ಕೇಂದ್ರದ ಅನುದಾನ ರಾಜ್ಯಗಳ ಮೂಲಕ ಬಳಕೆಯಾಗುತ್ತದೆ. ಮೇಳ ಮೈದಾನದಲ್ಲಿ ನಿರ್ಮಾಣ ಕಾರ್ಯಗಳು, ಯಾತ್ರಿಗಳಿಗೆ ಸೌಲಭ್ಯಗಳು ಹಾಗೂ ಭದ್ರತೆಗಾಗಿ ಭಾರಿ ಮೊತ್ತದ ಹಣ ವೆಚ್ಚ ಮಾಡಲಾಗುತ್ತದೆ.
ಉದಾಹರಣೆಗೆ 2014ರಲ್ಲಿ, ಕೇಂದ್ರ ಸರಕಾರ 1,150 ಕೋಟಿ ರೂಪಾಯಿಗಳನ್ನು ಮತ್ತು ಉತ್ತರ ಪ್ರದೇಶ ಸರಕಾರ 11 ಕೋಟಿ ರೂಪಾಯಿಗಳನ್ನು ಅಲಹಾಬಾದ್ ಕುಂಭಮೇಳಕ್ಕೆ ವೆಚ್ಚ ಮಾಡಿದೆ. ಈ ಪೈಕಿ 800 ಕೋಟಿ ರೂಪಾಯಿ ದುರ್ಬಳಕೆಯಾಗಿದೆ ಎನ್ನುವುದು ವಿರೋಧ ಪಕ್ಷಗಳ ಆರೋಪ.
ಕಳೆದ ವರ್ಷ ಕೇಂದ್ರದ ಸಂಸ್ಕೃತಿ ಸಚಿವಾಲಯ, ಸಿಂಹಾಷ್ಟ ಮಹಾಕುಂಭಕ್ಕಾಗಿ 100 ಕೋಟಿ ರೂಪಾಯಿಗಳನ್ನು ಮಧ್ಯಪ್ರದೇಶಕ್ಕೆ ಮಂಜೂರು ಮಾಡಿದೆ. ಇದು ಹನ್ನೆರಡು ವರ್ಷಗಳಿಗೊಮ್ಮೆ ಉಜ್ಜಯಿನಿಯಲ್ಲಿ ನಡೆಯುತ್ತದೆ. ಈ ಮೇಳಕ್ಕೆ ರಾಜ್ಯ ಸರಕಾರ ಈಗಾಗಲೇ 3,400 ಕೋಟಿ ರೂಪಾಯಿ ವೆಚ್ಚ ಮಾಡಿದೆ.
ಕೇಂದ್ರ ಸರಕಾರದಿಂದ ಅನುದಾನ ಪಡೆಯುವ ಇತರ ಯಾತ್ರೆಗಳೆಂದರೆ, ಕೈಲಾಸ ಮಾನಸ ಸರೋವರ ಯಾತ್ರೆ. ಉತ್ತರ ಭಾರತದಿಂದ ಟಿಬೆಟ್‌ನ ಪರ್ವತ ಪ್ರದೇಶವರೆಗೆ ಚಾರಣವನ್ನೂ ಈ ಯಾತ್ರೆ ಒಳಗೊಂಡಿದೆ. ಸರಕಾರ ಈ ಯಾತ್ರೆಯನ್ನು ಆಯೋಜಿಸುತ್ತದೆ. ಇಲ್ಲಿ ಯಾತ್ರಿಗಳ ಭದ್ರತೆ ಹಾಗೂ ಆರೋಗ್ಯ ಸೌಲಭ್ಯಗಳಿಗೆ ಸರಕಾರ ವೆಚ್ಚ ಮಾಡುತ್ತದೆ.
ಇದೇ ವೇಳೆ ಇತರ ಹಲವು ರಾಜ್ಯಗಳು ತೀರ್ಥಯಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ದೊಡ್ಡ ಪ್ರಮಾಣದ ಸಬ್ಸಿಡಿ ನೀಡುತ್ತವೆ. ಛತ್ತೀಸ್‌ಗಡ, ದಿಲ್ಲಿ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳು, ಮಾನಸ ಸರೋವರ ಯಾತ್ರೆಗೆ ತಗುಲುವ ಸುಮಾರು 1.5 ಲಕ್ಷ ರೂಪಾಯಿ ಪೈಕಿ ವೆಚ್ಚದ ಒಂದು ಭಾಗವನ್ನು ನೀಡುತ್ತವೆ. ಮಧ್ಯಪ್ರದೇಶ ಸರಕಾರ, ಹಿರಿಯ ನಾಗರಿಕರಿಗೆ ಮತ್ತು ಅವರ ಜತೆ ಯಾತ್ರೆ ತೆರಳುವವರಿಗೆ, ಮುಖ್ಯಮಂತ್ರಿ ತೀರ್ಥದರ್ಶನ ಯೋಜನೆಯಡಿ ನೆರವು ನೀಡುತ್ತದೆ. ಇದರಲ್ಲಿ ಅಯೋಧ್ಯಾ, ಮಥುರಾ, ಸಂತ ಕಬೀರನ ಜನ್ಮಸ್ಥಾನ ಹಾಗೂ ಕೇರಳದ ಸಂತ ಥಾಮಸ್ ಚರ್ಚ್ ಯಾತ್ರೆಗೆ ನೆರವು ಸಿಗುತ್ತದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ, 2000ನೆ ಇಸವಿಯಲ್ಲಿ ಕಾಯ್ದೆಯ ಅನ್ವಯ ಅಮರನಾಥ ಮಂದಿರ ಮಂಡಳಿಯನ್ನು ರಚಿಸಲಾಗಿದೆ. ರಾಜ್ಯಪಾಲರು ಇದರ ಮುಖ್ಯಸ್ಥರಾಗಿದ್ದು, ಕೇಂದ್ರ ಹಾಗೂ ರಾಜ್ಯಸೇವೆಯ ಹಿರಿಯ ನಾಗರಿಕ ಸೇವಾ ಅಧಿಕಾರಿಗಳು ಇದರಲ್ಲಿ ಇರುತ್ತಾರೆ. ಮಂದಿರದಲ್ಲಿ ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವುದು ಇದರ ಮುಖ್ಯ ಕಾರ್ಯ. ಇಲ್ಲಿನ ಸಿಬ್ಬಂದಿಗೆ ಸೂಕ್ತ ವೇತನ ನೀಡುವುದು, ಯಾತ್ರಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು ಮತ್ತಿತರ ಚಟುವಟಿಕೆಗಳು ಇದರಲ್ಲಿ ಸೇರುತ್ತವೆ.
ಸಂವಿಧಾನದ 27ನೆ ವಿಧಿ ಏನು ಹೇಳುತ್ತದೆ?
ಭಾರತದ ಯಾತ್ರೆಗಳಲ್ಲಿ ದೊಡ್ಡ ಪ್ರಮಾಣದ ಜನ ಯಾತ್ರಿ ಗಳು ಇರುವುದರಿಂದ ಇಂಥ ತೀರ್ಥಕ್ಷೇತ್ರಗಳ ಮೇಲೆ ದೊಡ್ಡ ಪ್ರಮಾಣದ ಒತ್ತಡ ಇರುತ್ತದೆ. ಸಾಕಷ್ಟು ಭದ್ರತಾ ಸೌಲಭ್ಯವನ್ನೂ ಕಲ್ಪಿಸಬೇಕಾಗುತ್ತದೆ. ಪೂಜೆಯ ವಿಧಿವಿಧಾನಗಳ ಜತೆಜತೆಗೇ ಕಾಲ್ತುಳಿತ ಮತ್ತು ಸಾವುನೋವಿನ ಘಟನೆಗಳೂ ಸುದ್ದಿಯಾಗುತ್ತಲೇ ಇರುತ್ತವೆ. ಇಂಥ ಘಟನಾವಳಿಗಳ ಹಿನ್ನೆಲೆಯಲ್ಲಿ ಸರಕಾರದ ವ್ಯವಸ್ಥೆಗಳು ಅನಿವಾರ್ಯ. ಇನ್ನೊಂದೆಡೆ ವೈಯಕ್ತಿಕವಾಗಿ ಯಾತ್ರಿಗಳಿಗೆ ನೀಡುವ ಸಬ್ಸಿಡಿ, ಆಯಾ ಸರಕಾರಗಳ ಆದ್ಯತೆಯನ್ನು ಆಧರಿಸಿರುತ್ತದೆ. ಎಲ್ಲ ಸಾರ್ವಜನಿಕ ವೆಚ್ಚ, ಸಂವಿಧಾನದ 27ನೆ ವಿಧಿಗೆ ತದ್ವಿರುದ್ಧವಾಗಿದೆ. 27ನೆ ವಿಧಿಯ ಪ್ರಕಾರ, ‘‘ಒಂದು ಧರ್ಮ ಅಥವಾ ಧಾರ್ಮಿಕ ಸ್ಥಳವನ್ನು ಉತ್ತೇಜಿಸಲು ಅಥವಾ ನಿರ್ವಹಿಸಲು ಮಾಡುವ ವೆಚ್ಚವನ್ನು ಹೊಂದಾಣಿಕೆ ಮಾಡಿಕೊಂಡರೆ ಯಾರು ಕೂಡಾ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗುವುದಿಲ್ಲ’’ ಎಂದು ಹೇಳಲಾಗಿದೆ.
ಸುಪ್ರೀಂಕೋರ್ಟ್ ಕೂಡಾ 2012ರ ತೀರ್ಪಿನಲ್ಲಿ ‘‘ಇತರ ಹಲವು ನಿರ್ದಿಷ್ಟ ಧಾರ್ಮಿಕ ಸಮಾರಂಭಗಳಲ್ಲಿ, ಸರಕಾರದ ಹಣವನ್ನು ನೇರವಾಗಿ ಅಥವಾ ಪರೋಕ್ಷವಾಗಿ ವೆಚ್ಚ ಮಾಡಲಾಗು ತ್ತಿದೆ ಎನ್ನುವುದನ್ನೂ ಮರೆಯುವಂತಿಲ್ಲ’’ ಎಂದು ಹೇಳಿದೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಹಜ್‌ಯಾತ್ರೆ ಸಬ್ಸಿಡಿ ಹೊರತುಪಡಿಸಿ ಇತರ ಯಾವುದೇ ಇಂಥ ವೆಚ್ಚವನ್ನು ವಿನಿಯೋಗ ಅಥವಾ ಜಾತ್ಯತೀತ ದೃಷ್ಟಿಯಿಂದ ನೋಡುವುದಿಲ್ಲ.