ಅಂಬೇಡ್ಕರ್ ಚಿಂತನೆಗಳು

Update: 2017-01-26 04:48 GMT

ಭಾರತ ಗಣರಾಜ್ಯೋತ್ಸವ ದಿನದ ಸಂಭ್ರಮ ಆಚರಿಸುವ ಈ ಸಂದರ್ಭದಲ್ಲಿ ದೇಶಕ್ಕೆ ಸಂವಿಧಾನವನ್ನು ಕೊಟ್ಟ
ಡಾ. ಬಿ. ಆರ್. ಅಂಬೇಡ್ಕರ್‌ರವರ ಕೊಡುಗೆ ಮರೆಯಲಾಗದು. ಪ್ರಜಾಪ್ರಭುತ್ವದ ಸಫಲತೆಯ ಬಗ್ಗೆ ಅವರು ನೀಡಿದ ಕೆಲವು ಸಲಹೆಗಳು ಇಲ್ಲಿವೆ.

 ....ಸಂವಿಧಾನ ಎಷ್ಟೇ ಒಳ್ಳೆಯದಾಗಿರಲಿ ಅದನ್ನು ಪಾಲಿಸುವ ಜನ ಕೆಟ್ಟವರಾದರೆ ಸಂವಿಧಾನ ಅಪ್ರಯೋಜಕವಾಗುತ್ತದೆ. ಆದರೆ ಅದರ ನಿಭಾವಣೆ ಒಳ್ಳೆಯವರ ಪಾಲಾದರೆ ಸಾಮಾನ್ಯ ಸಂವಿಧಾನವೂ ಪ್ರಬಲವಾಗುತ್ತದೆ. ಸಂವಿಧಾನದ ಕಾರ್ಯಕ್ಷಮತೆ ಸಂಪೂರ್ಣವಾಗಿ ಅದರ ಸ್ವಭಾವ ಮತ್ತು ಅಂಗರಚನೆಯನ್ನಾಧರಿಸಿರುವುದಿಲ್ಲ. ರಾಜ್ಯದ ಅಂಗಾಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಳನ್ನು ಸಂವಿಧಾನ ಒದಗಿಸುತ್ತದೆ. ಈ ಅಂಗಾಂಗಳು ಹೇಗೆ ಕೆಲಸ ಮಾಡುತ್ತವೆಂಬುದು ರಾಜ್ಯದ ಜನರ ಮತ್ತು ರಾಜಕೀಯ ಪಕ್ಷಗಳ ಧ್ಯೇಯೋದ್ದೇಶ, ಒಲವು ಮತ್ತು ಧೋರಣೆಗಳಿಗೆ ಅನುಗುಣವಾಗಿರುತ್ತದೆ. ಆದ್ದರಿಂದ ಜನರ ಮತ್ತು ಅವರ ರಾಜಕೀಯ ಪಕ್ಷಗಳ ಪಾತ್ರ ಹೊರತುಪಡಿಸಿ ಸಂವಿಧಾನದ ಯೋಗ್ಯತೆ ಅಳೆಯುವುದು ಮತ್ತು ವೌಲ್ಯಮಾಪನ ಮಾಡುವುದು ವ್ಯರ್ಥ ಕಸರತ್ತಾಗುತ್ತದೆ.’’

***

 1950ನೆ ಜನವರಿ 26ರಂದು ನಾವು ಪರಸ್ಪರ ವೈರುಧ್ಯಗಳಿರುವ ಸಮಾಜ ವ್ಯವಸ್ಥೆಯನ್ನು ಪ್ರವೇಶಿಸಲಿದ್ದೇವೆ. ರಾಜಕೀಯ ಜೀವನದಲ್ಲಿ ನಾವು ಸಮಾನತೆಯನ್ನು ಪಡೆದಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ನಾವು ಅಸಮಾನತೆಯನ್ನು ಉಳಿಸಿಕೊಂಡಿದ್ದೇವೆ. ರಾಜಕೀಯದಲ್ಲಿ ‘ಒಬ್ಬ ವ್ಯಕ್ತಿಗೆ ಒಂದು ಮತ ಮತ್ತು ಒಂದು ಮತಕ್ಕೆ ಒಂದು ವೌಲ್ಯ’ ಎಂಬ ತತ್ವವನ್ನು ಸ್ವೀಕರಿಸಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ನಮ್ಮ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ನಿಮಿತ್ತ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಮತ ಒಂದು ವೌಲ್ಯ ಎಂಬ ತತ್ವವನ್ನು ನಿರಾಕರಿಸಿದ್ದೇವೆ. ನಮ್ಮ ಸಮಾಜದಲ್ಲಿ ಇಂಥ ವೈರುಧ್ಯಮಯವಾದ ಜೀವನವನ್ನು ಎಲ್ಲಿಯವರೆಗೆ ಮುಂದುವರಿಸಿಕೊಂಡು ಹೋಗಲು ಸಾಧ್ಯ? ನಮ್ಮನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಮಾನತೆಯಿಂದ ವಂಚಿತರನ್ನಾಗಿ ಮಾಡಿರುವುದನ್ನು ಇನ್ನೆಷ್ಟು ದಿನ ಸಹಿಸುವುದು? ನಾವು ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋದರೆ ನಮ್ಮ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಒಡ್ಡುವ ಸಂಭವವುಂಟು. ಈ ವೈರುಧ್ಯವನ್ನು ಸಾಧ್ಯವಾದಷ್ಟು ತ್ವರಿತವಾಗಿ ತೊಡೆದು ಹಾಕಬೇಕು. ಇಲ್ಲದಿದ್ದರೆ ಅಸಮಾನತೆಗೆ ತುತ್ತಾದ ಜನರು, ನಾವು ಕಷ್ಟಪಟ್ಟು ರೂಪಿಸಿರುವ ನಮ್ಮ ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧ್ವಂಸಗೊಳಿಸುತ್ತಾರೆ.

***

 ಸಾಂವಿಧಾನಿಕ ನೈತಿಕತೆ ಸಹಜ ಭಾವನೆಯಲ್ಲ. ಅದನ್ನು ರೂಢಿಸಿಕೊಳ್ಳಬೇಕಾಗುತ್ತದೆ. ನಮ್ಮ ಜನಗಳು ಅದನ್ನು ಇನ್ನೂ ಕಲಿತುಕೊಳ್ಳಬೇಕಾಗಿದೆ ಎಂಬುದನ್ನು ನಾವು ಅರಿಯಬೇಕು. ಭಾರತದ ಜಾಯಮಾನ ಮೂಲತಃ ಪ್ರಜಾತಂತ್ರ ವಿರೋಧಿ; ಇಲ್ಲಿ ಪ್ರಜಾಪ್ರಭುತ್ವ ಕೇವಲ ತೋರಿಕೆಯ ಪ್ರದರ್ಶನವಾಗಿದೆ.

***

ಸಂವಿಧಾನವೊಂದು ತುಂಬ ಚೆನ್ನಾಗಿರಬಹುದು. ಆದರೆ ಅದಕ್ಕೆ ಕಾರ್ಯರೂಪ ಕೊಡುವ ಜನರು ಕೆಟ್ಟವರಾದಲ್ಲಿ ಸಂವಿಧಾನವೂ ಕೆಟ್ಟದ್ದೇ ಅಗುವುದು. ತದ್ವಿರುದ್ದವಾಗಿ ಒಂದು ಕೆಟ್ಟ ಸಂವಿಧಾನವೂ ಸಹ ಉತ್ತಮರ ಕೈಗಳಲ್ಲಿ ಜನಹಿತಕಾರಿಯೇ ಆಗಬಹುದು. ಒಂದು ಸಂವಿಧಾನದ ಉಪಯುಕ್ತತೆ ಅದರ ಹೊರ ಸ್ವರೂಪದ ಮೇಲೆ ಪೂರ್ಣವಾಗಿ ಅವಲಂಬಿತವಾಗಿಲ್ಲ. ಸಂವಿಧಾನವು ಹೆಚ್ಚೆಂದರೆ ರಾಜ್ಯವ್ಯವಸ್ಥೆಗೆ ಸಂಬಂಧಿಸಿದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಮಾತ್ರ ಒದಗಿಸಬಲ್ಲದು. ಶಾಸನ ವ್ಯವಸ್ಥೆಯ ಈ ಎಲ್ಲ ಅಂಗಗಳ ಸರಿಯಾದ ಕಾರ್ಯ ನಿರ್ವಹಣೆ ಅವಲಂಬಿತವಾಗಿರುವುದು ಜನರ ಮೇಲೆ ಮತ್ತು ತಮ್ಮ ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಜನರು ಹುಟ್ಟುಹಾಕುವ ರಾಜಕೀಯ ಪಕ್ಷಗಳು ಹಾಗೂ ಆ ಪಕ್ಷಗಳು ನಡೆಸುವ ರಾಜಕೀಯ-ಇವೆಲ್ಲವುಗಳ ಮೆಲೆ ಭಾರತದ ಜನರು, ಇಲ್ಲಿನ ರಾಜಕೀಯ ಪಕ್ಷಗಳು ಹೇಗೆ ನಡೆದುಕೊಳ್ಳುವುವು ಎಂದು ಹೇಳಬಲ್ಲವರಾರು? ಅವರಿಗೆ ಬೇಕಾಗಿರುವುದು ಯಾವುದು, ಸಂವಿಧಾನದ ಮಾರ್ಗಗಳೇ ಅಥವಾ ಕ್ರಾಂತಿಯ ವಿಧಾನಗಳೇ? ಅವರು ಕ್ರಾಂತಿಯ ವಿಧಾನಗಳನ್ನು ಸ್ವೀಕರಿಸಿದ್ದೇ ಆದಲ್ಲಿ, ಸಂವಿಧಾನ ಎಷ್ಟೇ ಚೆನ್ನಾಗಿರಲಿ ಅದು ವಿಫಲಗೊಳ್ಳುವುದು ನಿಶ್ಚಿತ ಎನ್ನಲು ಯಾವ ಪ್ರವಾದಿಯೂ ಬೇಕಾಗಿಲ್ಲ’’

***

ಭಾರತದ ಸಂವಿಧಾನವೇ ನಮಗೆ ಆದರ್ಶವಾಗಬೇಕು. ನಮ್ಮ ಸಂವಿಧಾನದ ಬೇರುಗಳೇ ಸ್ವಾತಂತ್ರ ಸಮಾನತೆ ಮತ್ತು ಸಹೋದರತೆಗಳಾಗಿವೆ. ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಇವು ತತ್ವಗಳಾಗಿ ಅಡಕವಾಗಿವೆ. ಆದುದರಿಂದ ಈ ದೇಶದಲ್ಲಿ ಅಸ್ತಿತ್ವದಲ್ಲಿರುವ ಪ್ರತಿಯೊಂದು ಸಾಮಾಜಿಕ ವ್ಯವಸ್ಥೆಯನ್ನು ಪರೀಕ್ಷಿಸಿ, ಅವು ಸಂವಿಧಾನದಲ್ಲಿ ವಿಧಿಸಿರುವ ತತ್ವಗಳಿಗೆ ಅನುಗುಣವಾಗಿಯೇ ಎಂಬುದನ್ನು ಪರೀಕ್ಷಿಸಿ ನೋಡಬೇಕು.

***

 ಪ್ರಜಾಪ್ರಭುತ್ವಕ್ಕೆ ನಮ್ಮ ನಿಷ್ಠೆಯನ್ನು ತೋರುವುದು ಮಾತ್ರವಲ್ಲದೆ, ಸ್ವಾತಂತ್ರ, ಸಮಾನತೆ ಮತ್ತು ಸಹೋದರತೆಯ ತತ್ವಗಳನ್ನು ಬುಡಮೇಲು ಮಾಡ ಹೊರಟಿರುವ ಪ್ರಜಾಪ್ರಭುತ್ವದ ವಿರೋಧಿಗಳನ್ನು ನಾವು ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಬೆಂಬಲಿಸಬಾರದು.

***

 ಪ್ರಜಾಪ್ರಭುತ್ವ ರೂಪದ ಸರಕಾರ ಇದೆಯೆಂದರೆ ಪ್ರಜಾಪ್ರಭುತ್ವ ವಿಧಾನದ ಸಮಾಜವೂ ಇದೆ ಎಂದು ಸೂಚಿತವಾಗುತ್ತದೆ. ಸಾಮಾಜಿಕ ಪ್ರಜಾಪ್ರಭುತ್ವವಿಲ್ಲದಿದ್ದರೆ, ಪ್ರಜಾರಾಜ್ಯದ ವ್ಯವಸ್ಥಿತ(ಕ್ರಮಬದ್ಧ) ಚೌಕಟ್ಟಿಗೆ ಬೆಲೆ ಇರುವುದಿಲ್ಲ ಹಾಗೂ ಅದು ನಿಜವಾಗಿಯೂ ಅನರ್ಹವಾಗಿರುತ್ತದೆ. ಪ್ರಜಾಪ್ರಭುತ್ವವೆನ್ನುವುದು ಸರಕಾರದ ಒಂದು ರೂಪವಲ್ಲ ಎಂಬುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಲೇ ಇಲ್ಲ; ಅದು ಮೂಲಭೂತವಾಗಿ ಸಮಾಜದ ಒಂದು ರೂಪ. ಪ್ರಜಾತಂತ್ರ ಸಮಾಜಕ್ಕೆ ಸಮಾನ ಉದ್ದೇಶ. ಸಾರ್ವಜನಿಕ ಗುರಿ ಮತ್ತು ಪರಸ್ಪರ ಸಹಾನುಭೂತಿಗಳನ್ನೊಳಗೊಂಡ ಒಂದು ಒಗ್ಗಟ್ಟು ಇರುವುದು ಆವಶ್ಯಕವೇನಲ್ಲದಿರಬಹುದು. ಆದರೆ ಎರಡು ಸಂಗತಿಗಳನ್ನು ಅದು ನಿಚ್ಚಳವಾಗಿ ಒಳಗೊಂಡಿರುತ್ತದೆ. ಮೊದಲನೆಯದು, ಮನೋಧರ್ಮ, ಸಹಮಾನವರೊಂದಿಗೆ ಗೌರವ, ಸಮಾನತಾ ಭಾವನೆಗಳನ್ನು ಹೊಂದಿರುವುದು ಎರಡನೆಯದು, ಕಟ್ಟುನಿಟ್ಟಿನ ಸಾಮಾಜಿಕ ಅಡೆತಡೆಗಳಿಂದ ಮುಕ್ತವಾದ ಸಾಮಾಜಿಕ ಸಂಸ್ಥೆ ಇರುವುದು.

***

 ಪ್ರಜಾಪ್ರಭುತ್ವವು ಸಫಲಗೊಳ್ಳಲು ಈ ಕೆಳಗಿನ ನಿಬಂಧನೆಗಳು ಮುಖ್ಯ:

1. ಸಮಾಜದಲ್ಲಿ ತೀವ್ರತರವಾದ ಅಸಮಾನತೆಗಳಿರಬಾರದು. ಒಂದು ವರ್ಗಕ್ಕೆ ಮಾತ್ರ ವಿಶೇಷಾಧಿಕಾರವಿರಬಾರದು.

2. ವಿರೋಧ ಪಕ್ಷ ಅಸ್ತಿತ್ವದಲ್ಲಿರಬೇಕು.

3. ಕಾನೂನಿನಲ್ಲಿಯೂ, ಆಡಳಿತದಲ್ಲಿಯೂ ಸರ್ವಸಮಾನತೆ ಇರಬೇಕು.

4. ಸಾಂವಿಧಾನಿಕ ನೈತಿಕತೆಯ ಪಾಲನೆ ಮಾಡಬೇಕು.

5. ಬಹುಸಂಖ್ಯಾತರ ದಬ್ಬಾಳಿಕೆ ಇರಬಾರದು.

6. ಸಮಾಜದಲ್ಲಿ ನೀತಿಪ್ರಜ್ಞೆ ಇರಬೇಕು.

7. ಸಾರ್ವಜನಿಕ ಪ್ರಾಮಾಣಿಕತೆ ಇರಬೇಕು.

***

 ಭಾರತದಲ್ಲಿ ಪ್ರಜಾಪ್ರಭುತ್ವ ಯಾಕೆ ಬೆಳವಣಿಗೆ ಹೊಂದಲಿಲ್ಲ? ಇದೊಂದು ಮುಖ್ಯ ಪ್ರಶ್ನೆ: ಉತ್ತರವಂತೂ ಬಹಳ ಸರಳ.ಹಿಂದೂ ಧರ್ಮ ಭ್ರಾತೃತ್ವ ಬೋಧಿಸುವುದಿಲ್ಲ. ಅದಕ್ಕೆ ಬದಲಾಗಿ ವರ್ಣಗಳಾಗಿ, ವರ್ಗಗಳಾಗಿ ಪ್ರತ್ಯೇಕ ಜಾತಿಗಳಾಗಿ ವಿಂಗಡಿಸಿದ ಸಮಾಜದ ವಿಭಜನೆ ಬೋಧಿಸುತ್ತದೆ. ಇಂತಹ ಪ್ರತ್ಯೇಕತೆ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವಕ್ಕೆ ಅವಕಾಶವಾದರೂ ಹೇಗೆ?

***

 ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವಿಲ್ಲದೆ ರಾಜಕೀಯ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ. ಪ್ರಜಾಪ್ರಭುತ್ವದ ಶರೀರಕ್ಕೆ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಅಂಗಾಂಗ. ಮಾಂಸಖಂಡಗಳಿದ್ದ ಹಾಗೆ. ದೇಹದಲ್ಲಿ ಇವು ಗಟ್ಟಿಯಾದಷ್ಟು ದೇಹ ಗಟ್ಟಿಮುಟ್ಟಾಗಿರುತ್ತದೆ. ಪ್ರಜಾಪ್ರಭುತ್ವವು ಸಮಾನತೆಗೆ ಇನ್ನೊಂದು ಹೆಸರು. ಆದರೆ ಪ್ರಜಾಪ್ರಭುತ್ವವು ಸಮಾನತೆಯನ್ನು ಕಡೆಗಣಿಸಿ ಕೇವಲ ಸ್ವಾತಂತ್ರದ ಗೀಳನ್ನು ಬೆಳೆಸಿಕೊಂಡರೆ ಅಂತಹ ಪ್ರಜಾಪ್ರಭುತ್ವ ಬರೀ ಹೆಸರಿಗಷ್ಟೆ ಹಾಗೂ ನಗೆಪಾಟಲಾಗಿ ಬಿಡುತ್ತದೆ.

***

ಪ್ರಜಾಪ್ರಭುತ್ವ ಹಾಗೂ ಸ್ವರಾಜ್ಯಗಳು ಬರೀ ಹೆಸರಿಗಷ್ಟೇ ಆಗದೆ ತಮ್ಮ ನೈಜ ಸ್ವಭಾವದೊಂದಿಗೆ ಮೂಡಬೇಕು. ಇವು ಸಮಾನತೆಯ ಅಡಿಪಾಯದ ಮೇಲೆ ನಿಂತಿರಬೇಕು. ಶಾಶ್ವತವಾಗಿ ಸ್ಥಿರಗೊಂಡ ಒಂದು ಆಳುವ ವರ್ಗದ ಅಸ್ತಿತ್ವವೂ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ. ಸ್ವತಂತ್ರ ದೇಶದಲ್ಲಿ ಸ್ವಾತಂತ್ರವೆಂದರೆ ಆಳುವ ವರ್ಗದ ವಿಶೇಷ ಸವಲತ್ತು ಅಥವಾ ಸರ್ವರ ಸ್ವತ್ತೋ ಎಂದು ನಿರ್ಧರಿಸದೆ ಇರುವುದು ನೈಜ ಪ್ರಜಾಪ್ರಭುತ್ವಕ್ಕೆ ಅಪಕಾರಿಯಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ