ಅವನತಿಯ ಹಾದಿಯಲ್ಲಿ ಪ್ರಜಾಸತ್ತೆ

Update: 2017-01-28 18:38 GMT

ಭಾಗ-1

ರಾಷ್ಟ್ರೀಯ ಸ್ವಯಂಸೇವಕ ಸಂಘ ಅದೇಕೆ ಸ್ವಪ್ರತಿಷ್ಠೆಯ ಗೀಳು ಮತ್ತು ಕೀಳರಿಮೆಗಳಿಂದ ಬಳಲುತ್ತಿರುವ ವ್ಯಕ್ತಿಯನ್ನೆ ರಾಷ್ಟ್ರದ ಪ್ರಧಾನಿ ಸ್ಥಾನದಲ್ಲಿ ಕೂರಿಸಿತು? ಬಹುಶಃ ಇದಕ್ಕೆ ಪ್ರಧಾನ ಕಾರಣ ಆರೆಸ್ಸೆಸ್‌ನ ಸಿದ್ಧಾಂತ ಹಾಗೂ ಧ್ಯೇಯಗಳಲ್ಲಿ ಇಟ್ಟಿರುವ ಅಚಲ ನಿಷ್ಠೆಯೆ ಇರಬೇಕು. ಆತನ ಸರ್ವಾಧಿಕಾರಿ ಶೈಲಿ (ಸಂಘ ಪರಿವಾರ ಆರಂಭದಿಂದಲೂ ರಾಜನ ಆಳ್ವಿಕೆಯ ಸಮರ್ಥಕ), ಅಲ್ಪಸಂಖ್ಯಾತರ ದ್ವೇಷ, ಜಾತಿವ್ಯವಸ್ಥೆಯ ಸಮರ್ಥನೆ, ಬಂಡವಾಳಶಾಹಿಗಳಿಗೆ ಮಣೆ ಇತ್ಯಾದಿಗಳಿಗೆ ಹೋಲಿಸಿದರೆ ಮೇಲಿನ ಎರಡೂ ಗುಣಗಳು ಗೌಣವೆಂದು ಅದು ಭಾವಿಸಿರಬೇಕು. ಹೀಗಿರುವುದರಿಂದಲೆ ಮೋದಿ ತಾನು ಅಧಿಕಾರಕ್ಕೆ ಬಂದ ದಿನದಿಂದ ಆರೆಸ್ಸೆಸ್‌ನ ಸಿದ್ಧಾಂತವನ್ನು ಚಾಚೂತಪ್ಪದೆ ಅನುಸರಿಸುತ್ತಾ ಅದರ ಗುರಿಸಾಧನೆಗಾಗಿ ಶ್ರಮಿಸುತ್ತಲೇ ತನ್ನ ವೈಯಕ್ತಿಕ ತೀಟೆಗಳನ್ನೂ ತೀರಿಸಿಕೊಳ್ಳುತ್ತಿದ್ದಾರೆೆ. ಆದುದರಿಂದಲೇ ಅವರು ವಿದೇಶೀ ನಾಯಕರೊಂದಿಗೆ ವಿಪರೀತ ಸಲುಗೆ ಬೆಳೆಸುತ್ತಾರೆ. ಮಿರಿಮಿರಿ ಮಿಂಚುವ ಪೋಷಾಕುಗಳನ್ನೆ ಧರಿಸುತ್ತಾರೆ. ಫೋಟೊಗಳಲ್ಲಿ ಎದ್ದುಕಾಣುವ ರೀತಿ ಪೋಸ್ ಕೊಡುತ್ತಾರೆ. ರೇಡಿಯೊ, ಟಿವಿಗಳಲ್ಲಿ ಏಕಮುಖಿಯಾಗಿ ಮಾತಾಡುತ್ತಾರೆ. ಖಾದಿ ಗ್ರಾಮೋದ್ಯೋಗದ ಕ್ಯಾಲೆಂಡರ್‌ನಲ್ಲಿ ಗಾಂಧಿಯ ಜಾಗವನ್ನು ಆಕ್ರಮಿಸುತ್ತಾರೆ. ಪ್ರಜಾತಾಂತ್ರಿಕ ಸಂಸ್ಥೆಗಳಲ್ಲೆಲ್ಲಾ ಪ್ರತಿಗಾಮಿಗಳದೇ ಮೇಲುಗೈ ಆಗುವಂತೆ ನೋಡಿಕೊಳ್ಳುತ್ತಾರೆ. ಸಂಘಿಗಳ ಅಲ್ಪಸಂಖ್ಯಾತ ವಿರೋಧಿ ಅಭಿಯಾನಗಳಿಗೆ ಮೌನಸಮ್ಮತಿ ನೀಡುತ್ತಾರೆ. ದಲಿತರನ್ನು ಮುಂದಿನಿಂದ ಓಲೈಸುತ್ತಾ ಹಿಂದಿನಿಂದ ಮನುವಾದವನ್ನು ಪ್ರೋತ್ಸಾಹಿಸಿ ಡಿಜಿಟಲ್ ವ್ಯವಹಾರದ ಕಾರ್ಪೊರೇಟುಗಳಿಗೆ ಭಾರತವನ್ನು ಮುಕ್ತ ಮಾರುಕಟ್ಟೆಯಾಗಿಸಲು ನೋಟು ರದ್ದತಿ ನಿರ್ಧಾರ ಕೈಗೊಳ್ಳುತ್ತಾರೆ. ಕಾರ್ಪೊರೇಟುಗಳ ಸರಕಿನ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ರೈತರಿಗೆ, ಬಡವರಿಗೆ ಸಬ್ಸಿಡಿ ಕಡಿತ ಮಾಡುತ್ತಾರೆ............. ಪಟ್ಟಿ ಬೆಳೆಯುತ್ತಾ ಇದೆ. ಈಗ ಕೆಲವೊಂದು ನಿರ್ದಿಷ್ಟ ವಿದ್ಯಮಾನಗಳನ್ನು ನೋಡೋಣ.

ರೈತ ವಿರೋಧಿ

ಪ್ರಧಾನಮಂತ್ರಿ ಫಸಲು ವಿಮಾ ಯೋಜನೆ ಎಂಬುದು ಮೋದಿ ಸರಕಾರದ ಹೃದಯ ರೈತರಿಗಾಗಿ ಮಿಡಿಯುತ್ತಿರುವುದಕ್ಕೆ ಅತ್ಯುತ್ತಮ ಸಾಕ್ಷಿ ಎಂದು ಪ್ರಚಾರ ಮಾಡಲಾಗುತ್ತಿದೆ. ಅತ್ಯದ್ಭುತ ಎನ್ನಲಾಗಿರುವ ಈ ಯೋಜನೆಯಿಂದ ಅಸಲಿಗೆ ಅಭಿವೃದ್ಧಿ ಆಗಲಿರುವುದು ರೈತರಲ್ಲ, ವಿಮಾ ಕಂಪೆನಿಗಳು! ಯೋಜನೆಯ ನಿಯಮಗಳ ಕಡೆಗೆ ದೃಷ್ಟಿ ಹಾಯಿಸಿದರೆ ಸಾಕು, ಅದರ ನಿಜ ಬಣ್ಣ ಬಯಲಾಗುತ್ತದೆ.

 ಮೊದಲನೆ ನಿಯಮವೆಂದರೆ ವಿಮಾ ಕಂಪೆನಿಗಳು ಕಂದಾಯ ಗ್ರಾಮವೊಂದರಲ್ಲಿ ಆಗಿರುವ ಬೆಳೆ ವೈಫಲ್ಯಕ್ಕೆ ಪರಿಹಾರ ನೀಡುವಿಕೆಯನ್ನು ಪರಿಗಣಿಸಬೇಕಿದ್ದರೆ ಅಲ್ಲಿನ ರೈತರಲ್ಲಿ ಶೇ. 70ರಷ್ಟು ಮಂದಿ ಪ್ರೀಮಿಯಂ ಕಟ್ಟಿರಬೇಕು! ಎರಡನೆಯ ನಿಯಮದ ಪ್ರಕಾರ ವೈಯಕ್ತಿಕ ನಷ್ಟಗಳನ್ನು ಪರಿಗಣಿಸಲಾಗುವುದಿಲ್ಲ! ಇದೇ ತೆರನಾದ ನಿಬಂಧನೆಗಳನ್ನು ನಗರವಾಸಿಗಳಿಗೆ ವಿಧಿಸಿದಲ್ಲಿ ಹೇಗಾಗಬಹುದು? ವಾಸ್ತವದಲ್ಲಿ ಭೂಸ್ವಾಧೀನ ಮತ್ತು ಕನಿಷ್ಠ ಬೆಂಬಲ ಬೆಲೆಗಳ ವಿಷಯದಲ್ಲಿ ರೈತರಿಗೆ ದ್ರೋಹ ಬಗೆದಿರುವ ಮೋದಿ ಸರಕಾರ ಅದನ್ನು ಮುಚ್ಚಿಹಾಕುವುದಕ್ಕೋಸ್ಕರ ತನ್ನ ಈ ಫಸಲು ವಿಮಾ ಯೋಜನೆ ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ತುತ್ತೂರಿ ಊದುತ್ತಿದೆ.

ಪ್ರಜಾತಾಂತ್ರಿಕ

ಸಂಘಪರಿವಾರಕ್ಕೆ ಸಂವಿಧಾನದಲ್ಲಿ, ಸಂಸದೀಯ ಪ್ರಕ್ರಿಯೆಯಲ್ಲಿ ನಂಬಿಕೆ ಇಲ್ಲ ಎನ್ನುವುದನ್ನು ಮೋದಿ ಸರಕಾರ ಸಾಬೀತು ಮಾಡುತ್ತಿದೆ. ಸಂಸತ್ತಿನ ಕಲಾಪಗಳ ಅವಧಿ ಹಿಂದಿಗಿಂತಲೂ ಹೆಚ್ಚು ಮೊಟಕಾಗಿದೆ. ಕೆಲವು ಬಿಜೆಪಿ ಸಂಸದರ ಮಾತುಗಳು ಅವರ ಬೀದಿಬದಿಯ ಹಿನ್ನೆಲೆಗಳನ್ನು ಪ್ರತಿಬಿಂಬಿಸುವಂತಿವೆ. ಪ್ರಧಾನಮಂತ್ರಿ ಕಲಾಪಗಳಲ್ಲಿ ಭಾಗವಹಿಸುವುದೇ ಕಮ್ಮಿ ಅಥವಾ ಉಪಸ್ಥಿತರಿದ್ದರೂ ಚರ್ಚೆಗೆ ಸಿದ್ಧರಿಲ್ಲ. ಮೋದಿ ಸರಕಾರ ಎಂದರೆ ಸುಗ್ರೀವಾಜ್ಞೆಗಳ ಸರಕಾರ ಎಂದಾಗಿದೆ. ಬಂಡವಾಳವಾದಿ, ಕಾರ್ಪೊರೇಟ್‌ಪ್ರೇಮಿ ಮೋದಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಎನ್‌ಜಿಒಗಳ ಮೇಲೆ ಚಾಟಿ ಬೀಸತೊಡಗಿದೆ. ಗುಜರಾತ್ 2002ಕ್ಕಾಗಿ ಮೋದಿಯನ್ನು ಕಟಕಟೆಗೆ ಎಳೆಯಲಿರುವ; ಭ್ರಷ್ಟಾಚಾರ ವಿರುದ್ಧ ಅಭಿಯಾನ ನಡೆಸುತ್ತಿರುವ; ಬಡವರ, ದಲಿತರ, ದಮನಿತರ ಏಳಿಗೆಗಾಗಿ ಶ್ರಮಿಸುತ್ತಿರುವ ಕೆಲವು ಎನ್‌ಜಿಒಗಳನ್ನು ಹತ್ತಿಕ್ಕುವುದೆ ಇದರ ಮುಖ್ಯ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸುಮಾರು 20000 ಎನ್‌ಜಿಒಗಳ ಲೈಸೆನ್ಸ್ ಅನ್ನು ಸಾರಾಸಗಟಾಗಿ ರದ್ದುಗೊಳಿಸಲಾಗಿದೆ.

ಜೀಹುಜೂರ್ ಅಧಿಕಾರಿಗಳು

ಮೋದಿ ಅಧಿಕಾರಕ್ಕೆ ಬಂದ ನಂತರ ಮಾಡಿರುವ ಮೊದಲ ಕೆಲಸವೆಂದರೆ ತನ್ನ ಫೇವರಿಟ್ ಬಾಲಂಗೋಚಿ, ಜೀಹುಜೂರ್ ಅಧಿಕಾರಿಗಳನ್ನು ಬ್ಯೂರಾಕ್ರಸಿಯಲ್ಲಿ ನಿಯೋಜಿಸಿರುವುದು. ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದ ಕೆಲವೊಂದು ಕಡತಗಳು ಗೃಹ ಸಚಿವಾಲಯದ ಕಚೇರಿಯಿಂದ ನಾಪತ್ತೆಯಾಗಿದ್ದ ವಿಚಾರ ನೆನಪಿಸಿಕೊಳ್ಳಿ. ವಿಚಾರಣೆಯನ್ನು ವಿಳಂಬಿಸುವ ಏಕೈಕ ಉದ್ದೇಶದಿಂದ ‘ಟೈಮ್ಸ್ ನೌ’ ಸಹಯೋಗದೊಂದಿಗೆ ‘ಕಾಣೆಯಾದ ಕಡತಗಳು’ ಎಂಬ ನಾಟಕವನ್ನು ಆಯೋಜಿಸಲಾಯಿತು. ತದನಂತರ ಹೆಚ್ಚುವರಿ ಗೃಹ ಕಾರ್ಯದರ್ಶಿ ನೇತೃತ್ವದ ಏಕಸದಸ್ಯ ಆಯೋಗದಿಂದ ತನಿಖೆ ಎಂಬುದೊಂದು ಪ್ರಹಸನ ನಡೆಯಿತು. ಮೋದಿ ಸರಕಾರದ ಅಧಿಕಾರಿಗಳು ಪ್ರಕರಣದ ಸಾಕ್ಷಿಗಳನ್ನು ಸಂಪರ್ಕಿಸಿ ಅವರ ಹೇಳಿಕೆಗಳು ಹೇಗಿರಬೇಕು ಎಂದು ಹೇಳಿಕೊಟ್ಟರು.

ಇನ್ನೊಂದು ಕಡೆ ಹಿಂದೆ ಗುಜರಾತಿನಲ್ಲಿ ‘ಹಿಂದೂ ಹೃದಯ ಸಾಮ್ರಾಟ’ರ ಕೊಲೆಗೆ ಸಂಚು ಹೂಡಿದ್ದರೆನ್ನಲಾದ ಭಯೋತ್ಪಾದಕರನ್ನು ನಕಲಿ ಎನ್‌ಕೌಂಟರ್‌ಗಳ ಮೂಲಕ ನಿರ್ನಾಮಗೊಳಿಸಿದ್ದ ಹಲವಾರು ಪೊಲೀಸರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಡಿ.ಜಿ. ವಂಝಾರ, ರಾಜ್‌ಕುಮಾರ್ ಪಾಂಡ್ಯನ್, ಅಭಯ್ ಚೂಡಾಸಮಾ ಮುಂತಾದವರಿಗೆಲ್ಲ ಮುಂಭಡ್ತಿ ನೀಡಲಾಗಿದೆ ಅಥವಾ ಒಳ್ಳೊಳ್ಳೆ ಹುದ್ದೆಗಳನ್ನು ಒದಗಿಸಲಾಗಿದೆ.

ಚುನಾವಣೆಗಳ ಸಂದರ್ಭದಲ್ಲಿ ಅಥವಾ/ಮತ್ತು ದೇಶದ ಜನತೆಯಲ್ಲಿ ಅತೃಪ್ತಿ, ಅಸಮಾಧಾನ ಹೊಗೆಯಾಡುತ್ತಿರುವ ಸಂದರ್ಭದಲ್ಲಿ ಪ್ರಯೋಗಿಸಲಾಗುವ ಈ ವಿಶಿಷ್ಟ ಗುಜರಾತ್ ಮಾದರಿ ಈಗ ‘ಹಿಂದೂ ಹೃದಯ ಸಾಮ್ರಾಟ’ರೊಂದಿಗೆ ದಿಲ್ಲಿಗೆ ಆಮದಾಗಿದೆ. ಪರಿಣಾಮವಾಗಿ ಏನೇ ದುರ್ಘಟನೆ ನಡೆದರೂ ಯಾವುದೇ ತನಿಖೆಗೂ ಮೊದಲೇ ಪಾಕ್ ಉಗ್ರರ ಹೆಸರು ಕೇಳಿಬರಲಾರಂಭಿಸಿದೆ. ಇದಕ್ಕೆ ಇತ್ತೀಚಿನ ದೃಷ್ಟಾಂತವಾಗಿ ಉತ್ತರ ಪ್ರದೇಶ, ಆಂಧ್ರಗಳಲ್ಲಿ ಸಂಭವಿಸಿದಂತಹ ಕೆಲವು ರೈಲು ಅಪಘಾತಗಳನ್ನು ಉಲ್ಲೇಖಿಸಬಹುದು. ಅಪಘಾತ ನಡೆದ ಬೆನ್ನಲ್ಲೆ ಈ ದುರಂತಗಳಿಗೆ ಪಾಕಿಸ್ತಾನದ ಐಎಸ್‌ಐ ಹೊಣೆಯೆಂದು ಆರೋಪಿಸಲಾಯಿತು. ಆದರೆ ಈಗ ಖುದ್ದು ಉತ್ತರ ಪ್ರದೇಶದ ಡಿ.ಜಿ.ಪಿ. ಹೇಳಿರುವಂತೆ ತನಿಖೆಯ ನಂತರ ಈ ಆರೋಪದಲ್ಲಿ ಯಾವುದೆ ಹುರುಳಿಲ್ಲವೆಂದು ತಿಳಿದುಬಂದಿದೆೆ.

ವಿದ್ಯಾರ್ಹತೆ ವಿಷಯದಲ್ಲಿ ಅಲರ್ಜಿ!

ವಿದ್ಯಾರ್ಹತೆಯ ವಿಷಯ ಎತ್ತಿದಾಗ ಹೆಚ್ಚುಕಡಿಮೆ ಇಡೀ ಸಂಘ ಪರಿವಾರಕ್ಕೆ ಒಂದು ಬಗೆಯ ಅಲರ್ಜಿ ಕಾಡುತ್ತಿರುವಂತಿದೆ. ಆದರೆ ಬೆಂಕಿ ಉಗುಳುವ ಭಾಷಣದ ವಿಷಯಕ್ಕೆ ಬಂದಾಗ ಪಿಎಚ್‌ಡಿಗಿಂತಲೂ ಮೇಲಿನ ಡಿಗ್ರಿ ಏನಾದರೂ ಇದ್ದಲ್ಲಿ ಅದಕ್ಕೆ ಅರ್ಹರಾದವರ ಸಂಖ್ಯೆ ಸಾಕಷ್ಟು ದೊಡ್ಡದಿದೆ! ಈಗ ಮೋದಿಯವರ ತಥಾಕಥಿತ ಸಂಪೂರ್ಣ ಸಮಾಜ ವಿಜ್ಞಾನ ಡಿಗ್ರಿಯನ್ನೇ ತೆಗೆದುಕೊಳ್ಳಿ. ಇದಕ್ಕೆ ಸಂಬಂಧಿಸಿದಂತೆ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿರುವ ದಾಖಲೆಗಳನ್ನು ಸಾರ್ವಜನಿಕರಿಗೆ ಒದಗಿಸುವಂತೆ ಆದೇಶ ನೀಡಿದಂತಹ ಮಾಹಿತಿ ಹಕ್ಕು ಆಯುಕ್ತ ಎಂ.ಎಸ್.ಆಚಾರ್ಯುಲುರನ್ನು ಹಠಾತ್ತಾಗಿ ಬೇರೊಂದು ಕೆಲಸಕ್ಕೆ ನಿಯುಕ್ತಿಗೊಳಿಸಲಾಗಿದೆ. ಮೋದಿ ಸರಕಾರದ ಈ ನಡೆ ಆ ದಾಖಲೆಗಳಲ್ಲೇನೋ ರಹಸ್ಯ ಅಡಗಿರಬೇಕು ಎಂಬ ಅನುಮಾನವನ್ನು ದೃಢಪಡಿಸುವಂತಿದೆ. ಒಂದು ರೀತಿಯಲ್ಲಿ ಇದು ಕ್ಲಾಸಿಗೆ ಹೋಗದೆ ಪರೀಕ್ಷೆ ಬರೆಯದೆ ಡಿಗ್ರಿ ಸರ್ಟಿಫಿಕೇಟ್ ದೊರೆತಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಲ್ಲವೆ?

ಅತ್ತ ಮಾಜಿ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿಯ ಡಿಗ್ರಿ ಕಥೆಯೂ ಹೆಚ್ಚುಕಡಿಮೆ ಹೀಗೇ ಇದೆ. ಈಕೆ ಕೂಡಾ ತನ್ನ ಶೈಕ್ಷಣಿಕ ಅರ್ಹತೆಗೆ ಸಂಬಂಧಪಟ್ಟ ದಾಖಲೆಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಕೂಡದೆಂದು ಸಿಬಿಎಸ್‌ಇಗೆ ತಾಕೀತು ಮಾಡಿದ್ದ ವಿಚಾರ ಇದೀಗ ತಿಳಿದುಬಂದಿದೆ. ಅಲ್ಲಿಗೆ ಆಕೆಯೂ ತನಗೆ ಯಾವ ವಿದ್ಯಾರ್ಹತೆಯೂ ಇಲ್ಲವೆಂದು ಪರೋಕ್ಷವಾಗಿ ಒಪ್ಪಿಕೊಂಡಂತಾಯಿತು.

ವ್ಯಾಪಕ ಕೇಸರೀಕರಣ

ಹಿಂದೂ ರಾಷ್ಟ್ರ ಸ್ಥಾಪನೆಗೆ ಪಣತೊಟ್ಟಿರುವ ಆರೆಸ್ಸೆಸ್ ಸ್ವಾತಂತ್ರ್ಯಾನಂತರದಲ್ಲಿ ಮಾಧ್ಯಮರಂಗವನ್ನೂ ಒಳಗೊಂಡಂತೆ ದೇಶದ ವಿವಿಧ ಪ್ರಜಾತಾಂತ್ರಿಕ ಸಂಸ್ಥೆಗಳೊಳಗೆ ತನ್ನ ನಿಷ್ಠಾವಂತರನ್ನು ತೂರಿಸುತ್ತಾ ಬಂದಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಆದರೆ 2014ರ ಮೇ ನಂತರ ಈ ಪ್ರಕ್ರಿಯೆ ಎಲ್ಲಿಲ್ಲದ ವೇಗವನ್ನು ಪಡೆದುಕೊಂಡಿದೆ. ಇಂದು ಹೆಚ್ಚುಕಡಿಮೆ ಎಲ್ಲಾ ಸಂಸ್ಥೆಗಳನ್ನು ಆರೆಸ್ಸೆಸ್ ತನ್ನ ಕೈವಶ ಮಾಡಿಕೊಂಡಿದೆ. ಅದೇ ರೀತಿ ಸಾಹಿತ್ಯ, ಕಲೆ, ಜನಪದ ಮೊದಲಾದ ಸಾಂಸ್ಕೃತಿಕ ಕ್ಷೇತ್ರಗಳ ಮೇಲೂ ಆರೆಸ್ಸೆಸ್‌ನ ಹಿಡಿತ ಬಿಗಿಯಾಗುತ್ತಿದೆ. ಹಿಂದಿನ ಸಂಚಿಕೆಯೊಂದರಲ್ಲಿ ವಿವರಿಸಿರುವಂತೆ ಸಂಘಪರಿವಾರ ಈಗ ಸಾಹಿತ್ಯೋತ್ಸವಗಳಿಗೂ ಲಗ್ಗೆ ಇಡತೊಡಗಿದೆ.

(ಮುಂದುವರಿಯುವುದು)...

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News

ಜಗದಗಲ
ಜಗ ದಗಲ