ಪರೀಕ್ಷೆಗಾಗಿ ಪೂರ್ವ ಸಿದ್ಧತೆ ಹೇಗೆ ಮತ್ತು ಯಾಕೆ?

Update: 2017-02-02 18:38 GMT

ಮಕ್ಕಳ ವಿದ್ಯಾಭ್ಯಾಸ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ಪೋಷಕರೂ ಪಾಲುಗೊಳ್ಳಲೇಬೇಕು. ಈಗ ಮಕ್ಕಳನ್ನು ಓದಿಸುವುದು ಮತ್ತು ಉತ್ತಮ ಶಿಕ್ಷಣಕೊಟ್ಟು ಮಾರ್ಗದರ್ಶನ ನೀಡುವುದು ಒಂದು ಕಲೆ. ಈ ಕಲೆಯನ್ನು ಪ್ರತಿಯೊಬ್ಬ ಪೋಷಕರು ಶ್ರಮಪಟ್ಟು ಕರಗತ ಮಾಡಿಕೊಳ್ಳಲೇಬೇಕು. ಹಾಗಾದಲ್ಲಿ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬಹುದು.

ಪರೀಕ್ಷೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನ ಘಟ್ಟದಲ್ಲಿ ಮಹತ್ತರವಾದ ಮೈಲುಗಲ್ಲು. ಪ್ರತಿಯೊಬ್ಬ ಹೆತ್ತವರೂ ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಲಿ ಎಂದು ಆಶಿಸುವುದು ಸಹಜ. ಜೀವನದ ಪರೀಕ್ಷೆಯಲ್ಲಿ ಈಜಾಡಿ ಜಯಿಸಬೇಕಾದರೆ, ವಿದ್ಯಾಭ್ಯಾಸದ ಹಂತದ ಎಸ್ಸೆಸೆಲ್ಸಿ ಮತ್ತು ಪಿ.ಯು.ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಚೆನ್ನಾಗಿ ಮಾಡಲೇಬೇಕಾದ ಅನಿವಾರ್ಯತೆ ಇದೆ. ಚೆನ್ನಾಗಿ ಮಾಡುವುದು ಎಂದರೆ ಬರೀ ಹೆಚ್ಚು ಮಾರ್ಕ್ ತೆಗೆದುಕೊಳ್ಳುವುದು ಎಂದಲ್ಲ. ಯಾವ ರೀತಿ ತನ್ನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಪರೀಕ್ಷೆಯ ಸಮಯದಲ್ಲಿ ತೊಡಗಿಸಿಕೊಳ್ಳುತ್ತಾನೆ ಮತ್ತು ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಿ ಏಕಾಗ್ರತೆಯನ್ನು ನಿಟ್ಟಿಸುತ್ತಾರೆ ಎಂಬುದರ ಮೇಲೆ ವಿದ್ಯಾರ್ಥಿಯ ಭವಿಷ್ಯ ಅಡಗಿರುತ್ತದೆ. ಯಾವುದೇ ಮಕ್ಕಳಿಗೆ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯ ಕೊರತೆ ಖಂಡಿತಾ ಇರುವುದಿಲ್ಲ. ಆದರೆ ಮನಸ್ಸು ಮಾತ್ರ ಹದಿಹರೆಯದಲ್ಲಿ ಚಂಚಲತೆಯಿಂದ ಕೂಡಿದ್ದು ಬೇಗನೆ ಹೊರ ಜಗತ್ತಿನ ಕ್ಷಣಿಕ ಸುಖಕ್ಕೆ ಮಾರು ಹೋಗುವ ಸಾಧ್ಯತೆ ಮಾತ್ರ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಹೆತ್ತವರೂ ಮಾಡಲೇಬೇಕಾದ ಆದ್ಯ ಕರ್ತವ್ಯವೇನೆಂದರೆ, ಮಕ್ಕಳಿಗೆ ಓದಿನ ಮೇಲೆ ಆಸಕ್ತಿ ಹುಟ್ಟಿಸುವ ಕೆಲಸ ಮಾಡಬೇಕು. ಮಕ್ಕಳ ಏಕಾಗ್ರತೆಗೆ ಭಂಗ ಬರದಂತಹಾ ವಾತಾವರಣವನ್ನು ಮನೆಯಲ್ಲಿ ಕಲ್ಪಿಸಬೇಕು. ಓದಿನಲ್ಲಿ ಆಸಕ್ತಿ ಹುಟ್ಟಿಸುವ ಸನ್ನಿವೇಶ ಮತ್ತು ವಾತಾವರಣವನ್ನು ಮನೆಯಲ್ಲಿ ನಿರ್ಮಿಸಬೇಕು. ಬರೀ ಟ್ಯೂಷನ್‌ಗೆ ಕಳುಹಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಎಲ್ಲವನ್ನೂ ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುತ್ತಾರೆ ಎಂದು ನಿರ್ಲಕ್ಷ ಮಾಡಬಾರದು. ಮಕ್ಕಳ ವಿದ್ಯಾಭ್ಯಾಸ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ಪೋಷಕರೂ ಪಾಲುಗೊಳ್ಳಲೇಬೇಕು. ಈಗ ಮಕ್ಕಳನ್ನು ಓದಿಸುವುದು ಮತ್ತು ಉತ್ತಮ ಶಿಕ್ಷಣಕೊಟ್ಟು ಮಾರ್ಗದರ್ಶನ ನೀಡುವುದು ಒಂದು ಕಲೆ. ಈ ಕಲೆಯನ್ನು ಪ್ರತಿಯೊಬ್ಬ ಪೋಷಕರು ಶ್ರಮಪಟ್ಟು ಕರಗತ ಮಾಡಿಕೊಳ್ಳಲೇಬೇಕು. ಹಾಗಾದಲ್ಲಿ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬಹುದು.

ತಮ್ಮ ಎಲ್ಲಾ ಕೆಲಸದಂತೆ ಮಕ್ಕಳ ಶಿಕ್ಷಣವೂ ತಮ್ಮ ಒಂದು ಆದ್ಯ ಕರ್ತವ್ಯ ಎಂದು ಪರಿಗಣಿಸಬೇಕು. ತಮ್ಮ ಮಕ್ಕಳು ಡಾಕ್ಟರು, ಇಂಜಿನಿಯರ್, ಐಎಎಸ್, ಐಪಿಎಸ್ ಅಧಿಕಾರಿ ಆಗಬೇಕು ಎಂದು ಹಗಲು ಕನಸು ಕಂಡರೆ ಸಾಲದು. ಪೋಷಕರಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಲೇಬೇಕು. ಪರೀಕ್ಷಾ ಸಮಯದಲ್ಲಂತೂ ಮಕ್ಕಳ ಕಡೆಗೆ ಹೆಚ್ಚಿನ ಗಮನ ಕೊಡಲೇಬೇಕು. ಹಾಗಾದಲ್ಲಿ ಮಾತ್ರ ತಮ್ಮ ಮಕ್ಕಳ ಭವಿಷ್ಯವನ್ನು ನಿಮ್ಮಿಚ್ಛೆಯಂತೆ ಅಧ್ಭ್ಬುತವಾಗಿ ನಿರ್ಮಿಸಬಹುದು. ಪರೀಕ್ಷೆಯ ಸಮಯದಲ್ಲಿ ಹೆತ್ತವರ ಜವಾಬ್ದಾರಿಗಳು

1 .ಪರೀಕ್ಷೆ ಸಮಯದಲ್ಲಿ ಮಕ್ಕಳಿಗೆ ಓದಲು ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡುವ ಗುರುತರವಾದ ಜವಾಬ್ದಾರಿ ಹೆತ್ತವರ ಮೇಲಿದೆ. ಹೆತ್ತವರು ತಮ್ಮ ಕೆಲಸದ ಒತ್ತಡ, ಮಾನಸಿಕ ದುಗುಡವನ್ನು ಮಕ್ಕಳ ಮೇಲೆ ಪ್ರದರ್ಶಿಸಬಾರದು. ಅನಗತ್ಯವಾದ ಮಾತುಕತೆ, ಜಗಳ, ಕೋಪತಾಪಗಳನ್ನು ತಡೆಹಿಡಿಯಲೇಬೇಕು. ಮನೆಯ ಎಲ್ಲಾ ಮಂದಿಯ ಸುಖ ಜೀವನಕ್ಕೆ ಇದು ಅತೀ ಆವಶ್ಯಕ. ಪರೀಕ್ಷೆ ಸಮಯದಲ್ಲಂತೂ ಅತೀವ ಕಾಳಜಿ ವಹಿಸಿ ಮಕ್ಕಳ ಓದಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದಂತೆ ಅತೀವ ಕಾಳಜಿ ವಹಿಸಬೇಕು.

2.ಮಕ್ಕಳನ್ನು ಅವರ ಪಾಡಿಗೆ ಓದಲು ಬಿಡಬೇಕು. ಅತಿಯಾದ ಒತ್ತಡ, ಮಾನಸಿಕ ಕಿರುಕುಳ ನೀಡಬಾರದು. ದಿನಕ್ಕೆ 20 ಗಂಟೆ ಓದಲೇಬೇಕು ಎಂದು ಹಠ ಹಿಡಿಯಬೇಡಿ. ನಿಮ್ಮ ಸಮಯದ ಅನುಕೂಲಕ್ಕೆ ತಕ್ಕಂತೆ ಮಕ್ಕಳು ಓದಬೇಕು. ಎಂದು ತಾಕೀತು ಮಾಡಬೇಡಿ. ನಿಮ್ಮ ಮಕ್ಕಳು ಎಷ್ಟು ಗಂಟೆ ಓದಿದ್ದಾರೆ ಎನ್ನುವುದಕ್ಕಿಂತಲೂ ಎಷ್ಟು ಏಕಾಗ್ರತೆಯಿಂದ ಓದಿದ್ದಾರೆ ಎಂಬುದು ಬಹಳ ಮುಖ್ಯ.

3.ಮಕ್ಕಳ ಆಹಾರದ ಬಗ್ಗೆ ಸರಿಯಾದ ಗಮನವಿಡಬೇಕು. ಜಂಕ್‌ಪುಡ್‌ಗಳಾದ ಕುರುಕುರೆ, ಲೇಸ್, ಕರಿದ ಮಸಾಲೆಯುಕ್ತ ಪದಾರ್ಥಗಳನ್ನು ನೀಡಲೇಬೇಡಿ. ಈ ಆಹಾರ ಪದಾರ್ಥಗಳನ್ನು ಇತರ ಸಮಯದಲ್ಲೂ ನೀಡಬಾರದು. ಪ್ರೊಟೀನ್ ಮತ್ತು ಶರ್ಕರ ಪಿಷ್ಟಗಳಿಂದ ಕೂಡಿದ ಹಸಿ ತರಕಾರಿ, ಮೊಳಕೆ ಬರಿಸಿದ ಕಾಳುಗಳು, ತಾಜಾ ಹಣ್ಣುಗಳು, ಹಸಿರು ತರಕಾರಿಗಳನ್ನು ಹೆಚ್ಚು ಹೆಚ್ಚು ನೀಡಬೇಕು. ಪರೀಕ್ಷೆ ಸಮಯದಲ್ಲಿ ಮಕ್ಕಳ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವೃದ್ಧಿಸುವ ಆಹಾರಗಳನ್ನು ಹೆಚ್ಚು ನೀಡಬೇಕು. ಮನೆ ಆಹಾರವನ್ನೇ ಹೆಚ್ಚು ನೀಡಿ. ಹೊಟೆೇಲಿನ ಆಹಾರವನ್ನು ಪರೀಕ್ಷೆ ಸಮಯದಲ್ಲಿ ಕೊಡಲೇಬಾರದು. ಏನಾದರೂ ಹೆಚ್ಚು ಕಮ್ಮಿ ಆದಲ್ಲಿ ಮಗುವಿನ ಭವಿಷ್ಯವೇ ಡೋಲಾಯಮಾನವಾಗಬಹುದು. ಮನೆಯಲ್ಲಿ ಅಮ್ಮ ಮಾಡಿದ ತಿಂಡಿ ಮತ್ತು ಕೈ ತುತ್ತು ಅಮೃತಕ್ಕಿಂತಲೂ ಅಮೂಲ್ಯವಾದದ್ದು.

4. ಸಾಮಾನ್ಯವಾಗಿ ಪರೀಕ್ಷೆ ಕಡು ಬೇಸಿಗೆಯ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಬರುವುದರಿಂದ ದೇಹಕ್ಕೆ ನೀರಿನ ಅಗತ್ಯ ಅತಿಯಾಗಿರುತ್ತದೆ. ತಾಜಾ ಹಣ್ಣಿನ ರಸ (ಕೃತಕ ಹಣ್ಣಿನ ರಸಬೇಡ) ಮತ್ತು ಜ್ಯೂಸ್, ತರಕಾರಿ ಜ್ಯೂಸ್, ಮಜ್ಜಿಗೆ, ಎಳನೀರು ಮುಂತಾದ ಪಾನೀಯಗಳು ಬಹಳ ಉತ್ತಮ. ಇಂಗಾಲಯುಕ್ತ ಪೆಪ್ಸಿ ಕೋಕ್ ಪಾನೀಯಗಳು ಯಾವತ್ತೂ ಉಪಯೋಗಿಸಬೇಡಿ. ಏನಿಲ್ಲವೆಂದರೂ ದಿನಕ್ಕೆ 3ರಿಂದ 4 ಲೀಟರ್ ನೀರು ಕುಡಿದಲ್ಲಿ ಜ್ಞಾಪಕ ಶಕ್ತಿ ಮತ್ತು ಆರೋಗ್ಯ ಚೆನ್ನಾಗಿರುವುದರಲ್ಲಿ ಸಂಶಯವೇ ಇಲ್ಲ.

5. ನಿದ್ದೆ ಬೆಳೆಯುವ ಮಕ್ಕಳಿಗೆ ಅತೀ ಆವಶ್ಯಕ ಪರೀಕ್ಷೆ ಸಮಯದಲ್ಲಿ ಓದುವ ಒತ್ತಡವಿರುವುದರಿಂದ ವಿಶ್ರಾಂತಿ ಪಡೆಯುವುದೂ ಅತೀ ಅಗತ್ಯ. ದಿನಕ್ಕೆ ಕನಿಷ್ಠ 6ರಿಂದ 8 ಗಂಟೆ ನಿದ್ದೆ ಮಾಡಬೇಕು. ದೈಹಿಕ ವಿಶ್ರಾಂತಿಗಿಂತಲೂ ಮಾನಸಿಕ ವಿಶ್ರಾಂತಿ ಅತ್ಯಗತ್ಯ. ನಿದ್ದೆಗೆಡುವುದರಿಂದ ಪರೀಕ್ಷಾ ಕಾಲದಲ್ಲಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಪ್ರತಿದಿನ ಅದೇ ಸಮಯಕ್ಕೆ ಮಲಗುವ ಮತ್ತು ಅದೇ ಸಮಯಕ್ಕೆ ಏಳುವ ಅಭ್ಯಾಸ ಮಾಡಿಸಬೇಕು. ರಾತ್ರಿ ಸುಖವಾಗಿ ನಿದ್ರಿಸಲು ಕೆಫೆನ್‌ಯುಕ್ತ ಕಾಫಿ, ನಿಕೋಟಿನ್ ಅಲ್ಕೋಹಾಲ್ ಮತ್ತು ಇತರ ಮಾದಕ ವಸ್ತುಗಳಿಂದ ದೂರವಿರಬೇಕು.

6. ಮನೆಯಲ್ಲಿ ಮಕ್ಕಳನ್ನು ರೂಮಿನಲ್ಲಿ ಕೂಡಿಹಾಕಿ ತಂದೆ ಕ್ರಿಕೆಟ್ ಮತ್ತು ತಾಯಿ ಟಿವಿ ಧಾರಾವಾಹಿ ನೋಡುವುದು ಬಹು ದೊಡ್ಡ ತಪ್ಪು ತಂದೆ ತಾಯಿಯಂದಿರು ಟಿವಿ ನೋಡುತ್ತಿದ್ದರೆ ಯಾವ ಮಕ್ಕಳು ಓದಲು ಮನಸ್ಸು ಮಾಡಲಿಕ್ಕಿಲ್ಲ. ವಿಶ್ವಕಫ್ ಕ್ರಿಕೆಟ್, ಟಿವಿ ಧಾರಾವಾಹಿ ನೋಡದಿದ್ದಲ್ಲಿ ಯಾರ ಮನೆಯೂ ಮುಳುಗಲಿಕ್ಕಿಲ್ಲ. ಆದರೆ ಮಕ್ಕಳು ದೂರದರ್ಶನ, ಅಂತರ್ಜಾಲ, ಮೊಬೈಲ್, ಫೇಸ್‌ಬುಕ್, ವಾಟ್ಸ್‌ಆಪ್ ಮುಂತಾದವುಗಳಿಗೆ ಜೋತುಬಿದ್ದಲ್ಲಿ ಮಕ್ಕಳ ಭವಿಷ್ಯ ಕಮರಿಹೋಗುವುದಂತೂ ನಿಶ್ಚಿತ. ಇದಕ್ಕಾಗಿಯೇ ಹೆತ್ತವರು ತಮ್ಮ ಕೇಬಲ್ ಸಂಪರ್ಕ ಕಡಿದರೂ ಚಿಂತಿಲ್ಲ. ಮೊಬೈಲ್ ಸ್ವಿಚ್‌ಆಫ್ ಮಾಡಿದರೂ ಪರವಾಗಿಲ್ಲ. ಮಕ್ಕಳ ಭವಿಷ್ಯದ ಮುಂದೆ ಇವೆಲ್ಲಾ ನಗಣ್ಯ. ಒಂದೆರಡು ತಿಂಗಳು ಈ ಬಾಹ್ಯ ಆಕರ್ಷಣೆಗೆೆ ಕಡಿವಾಣ ಹಾಕಿದಲ್ಲಿ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಸಂದೇಹವೇ ಇಲ್ಲ.

7.ನಿರಂತರವಾಗಿ ಓದುತ್ತಿರುವ ಮಕ್ಕಳಿಗೆ ಯಾಂತ್ರಿಕತೆ ಮತ್ತು ಏಕತಾನತೆ ಆಗದಂತೆ ಗಂಟೆಗೊಮ್ಮೆ ಐದು-ಹತ್ತು ನಿಮಿಷಗಳ ವಿರಾಮ ನೀಡಿ. ಸ್ನೇಹಿತರು, ಕುಟುಂಬಸ್ಥರ ಜೊತೆ ಮುಕ್ತ ಮನಸ್ಸಿನಿಂದ ಮಾತನಾಡಿ, ಬೆರೆಯಿರಿ. ಮಕ್ಕಳನ್ನು ಆದಷ್ಟು ನಗುತ್ತಾ, ನಗಿಸುತ್ತಾ ಉಲ್ಲಸಿತರಾಗಿರುವಂತೆ ಮಾಡಿ. ದಿನದಲ್ಲಿ ಅರ್ಧಗಂಟೆಯಾದರೂ ಮಕ್ಕಳ ಜೊತೆ, ಮುದ್ದಿನ ಸಾಕುಪ್ರಾಣಿಗಳ ಜೊತೆ ವಾಯುವಿಹಾರ ಮಾಡಿ ಒಟ್ಟಿನಲ್ಲಿ ಮಕ್ಕಳು ಕ್ರಿಯಾಶೀಲರಾಗಿ ಉಲ್ಲಸಿತರಾಗಿರುವಂತೆ ಮಾಡುವುದು ಅತೀ ಅಗತ್ಯ.

8. ಪರೀಕ್ಷಾ ಸಮಯದಲ್ಲಿ ಹೆಚ್ಚು ಕಾಲ ಮಕ್ಕಳೊಂದಿಗೆ ಇರಿ. ಪ್ರಯಾಣ, ಪ್ರವಾಸಗಳನ್ನು ನಿಲ್ಲಿಸಿ. ಮಕ್ಕಳಿಗೆ ಹಿತವಾಗುವ ರೀತಿಯಲ್ಲಿ, ಅವರಿಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳಿ. ಅವರ ಬೇಕು ಬೇಡಗಳಿಗೆ ತಕ್ಷಣವೇ ಸ್ಪಂದಿಸಬೇಕು. ಪರೀಕ್ಷೆಯಲ್ಲಿ ಚೆನ್ನಾಗಿ ಮಾಡುವಂತೆ ಹುರಿದುಂಬಿಸಿ. ಆದರೆ ಆಮಿಷಗಳನ್ನು ಒಡ್ಡಬೇಡಿ. ಪರೀಕ್ಷೆಯಲ್ಲಿ ಉತ್ತಮವಾಗಿ ನಿರ್ವಹಿಸಲು ಮತ್ತು ಉತ್ತೇಜಿಸಲು ಉಡುಗೊರೆ ಕಾಣಿಕೆಗಳನ್ನು ನೀಡುತ್ತೇನೆಂದು ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ನಿಮ್ಮ ಮಕ್ಕಳ ಸಾಮರ್ಥ್ಯ ಮತ್ತು ಯೋಗ್ಯತೆಗಿಂತ ಮಿಗಿಲಾಗಿ ಮಕ್ಕಳಿಂದ ಹೆಚ್ಚಿನದನ್ನು ನಿರೀಕ್ಷಿಸಬೇಡಿ. ಆದರೆ ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಉತ್ತೇಜಿಸುವ ಎಲ್ಲಾ ಪ್ರಯತ್ನಗಳನ್ನು ಪ್ರಮಾಣಿಕವಾಗಿ ಹೆತ್ತವರು ಮಾಡಲೇಬೇಕು. ವಿದ್ಯಾರ್ಥಿಗಳಿಗೆ ಕಿವಿಮಾತು

1.ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಕ್ರಮಬದ್ಧ ಮತ್ತು ಸೂಕ್ತ ಅಧ್ಯಯನವು ನಿಮಗೆ ನೆರವಾಗಬಲ್ಲದು. ಉತ್ತಮ ರೀತಿಯ ಅಧ್ಯಯನ ಕ್ರಮದಿಂದ, ಪರೀಕ್ಷಾ ಭಯದಿಂದ ಹೊರಬರಲು ಸಹಕಾರಿಯಾಗಬಲ್ಲದು.

2. ಪರೀಕ್ಷೆ ಬಗ್ಗೆ ಭಯ ಬೇಡ. ಕೀಳರಿಮೆ ಸಂಕೀರ್ಣದಿಂದ ಹೊರಬನ್ನಿ. ಚೆನ್ನಾಗಿ ಓದಿ, ಆತ್ಮ ವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ.

3.ನಿಮ್ಮ ಓದಿನ ಸಮಯವನ್ನು ಪರಿಪೂರ್ಣವಾಗಿ ಮತ್ತು ವ್ಯವಸ್ಥಿತವಾಗಿ ವಿಂಗಡಿಸಿ ಬಳಸಿಕೊಳ್ಳಿ. ಅಧ್ಯಯನದ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಅದರಂತೆ ತಯಾರಿ ನಡೆಸಿದಲ್ಲಿ ಪರೀಕ್ಷೆ ಎದುರಿಸುವುದು ಸುಲಭವಾಗಬಹುದು.

4. ಹಿಂದಿನ ಪ್ರಶ್ನೆ ಪತ್ರಿಕೆಯು ಕೆಲವೊಮ್ಮೆ ತುಂಬಾ ಸಹಕಾರಿಯಾಗುತ್ತದೆ. ಹಳೆ ಪ್ರಶ್ನೆ ಪತ್ರಿಕೆಯನ್ನು ಸಂಗ್ರಹಿಸಿ ಕಷ್ಟಕರವಾದ ವಿಷಯಗಳಿಗೆ ಉತ್ತರ ಬರೆದು ಅಭ್ಯಾಸಮಾಡಿ. ಪರೀಕ್ಷೆಯಲ್ಲಿ ನೀವು ನೆನಪಿಸಿ ಕೊಳ್ಳಿರಿಸಬೇಕಾದ ಅಗತ್ಯ ಫಾರ್ಮುಲಗಳು, ಥಿಯರಿಗಳು ಮತ್ತು ಚಿತ್ರಗಳನ್ನು ಟಿಪ್ಪಣಿ ಮಾಡಿ ಪುನಃ ಪುನಃ ಅರ್ಥೈಸಿಕೊಳ್ಳಬೇಕು.
5. ಸಮೂಹ ಚರ್ಚೆ ಕೆಲವರಿಗೆ ನೆರವಾಗಬಹುದು. (ಗ್ರೂಪ್ ಸ್ಟಡಿ) ಸಮಾನ ಮನಸ್ಕರನ್ನು ಓದಲು ಆಹ್ವಾನಿಸಿ. ಕ್ಲಿಷ್ಟಕರವಾದ ಪ್ರಶ್ನೆಗಳನ್ನು ವಿಚಾರ ವಿನಿಮಯದಿಂದ ಸುಲಭಗೊಳಿಸಿ. ಆದರೆ ಅನಗತ್ಯ ಕಾಲಹರಣ ಮಾಡಬೇಡಿ.

6. ಪರೀಕ್ಷೆ ಬರೆಯಲು ತೆಗೆದುಕೊಳ್ಳುವ ಸಮಯವನ್ನು ತಿಳಿಯಲು ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ. ಪ್ರತೀ ಪ್ರಶ್ನೆಯನ್ನು ಪೂರೈಸಲು ತೆಗೆದುಕೊಳ್ಳುವ ಸಮಯವನ್ನು ಅಂದಾಜಿಸಿ. ಈ ರೀತಿ ನೀವು ಬರವಣಿಗೆ ಸಿದ್ಧತೆ ಮಾಡಿದ್ದರೆ, ನಿಗದಿತ ಸಮಯದಲ್ಲಿ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಲು ಸಹಾಯವಾಗುತ್ತದೆ.

7. ಗೈಡ್‌ಗಳು ಮಾರ್ಗದರ್ಶಿಗಳನ್ನು ಬಳಸುವಾಗ ಎಚ್ಚರವಿರಲಿ. ಅಸಲಿ ಪಠ್ಯ ಪುಸ್ತಕದೊಂದಿಗೆ ಇಂತಹ ಅಧ್ಯಯನ ಸಾಮಗ್ರಿಗಳಲ್ಲಿನ ಉತ್ತರಗಳನ್ನು ತುಲನೆ ಮಾಡಿ. ಮಾರ್ಗದರ್ಶಿಗಳಲ್ಲಿ ನೀಡಿದ ಉತ್ತರವೆಲ್ಲಾ ಸರಿಯಾಗಿರಲೇ ಬೇಕೆಂದಿಲ್ಲ.

8. ಸಂಭವನೀಯ ಪ್ರಶ್ನೆಗಳ ಬಗ್ಗೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ. ನಿಮ್ಮದೇನಿದ್ದರೂ ಓದುವುದು ಮಾತ್ರ. ಯಾವುದೇ ಗಾಳಿ ಸುದ್ದಿಗಳಿಗೆ ಗಮನಕೊಡಬೇಡಿ. 

9. ಪರೀಕ್ಷೆಯನ್ನು ಯಾವುದೇ ಹೆದರಿಕೆ ಇಲ್ಲದೇ ಎದುರಿಸಿ. ಪ್ರತೀ ಪ್ರಶ್ನೆಯನ್ನು ಎಚ್ಚರಿಕೆಯಿಂದ ಓದಿ ಮನನಮಾಡಿ ಉತ್ತರಬರೆಯಿರಿ. ಬುದ್ಧಿ ಶಕ್ತಿಯ ಜೊತೆಗೆ ನಿಮ್ಮ ಕೌಶಲ್ಯಗಳೂ ಪರೀಕ್ಷೆಗೆ ಸಹಕಾರಿಯಾಗುತ್ತದೆ. ಉತ್ತರವನ್ನು ಹೆಚ್ಚು ಸ್ಪಷ್ಟ
ವಾಗಿ ಮತ್ತು ಆಕರ್ಷಣೀಯವಾಗಿ ವಿವರಿಸಿ.

10. ನಿಮ್ಮ ಉತ್ತರವನ್ನು ಸರಿಯಾದ ಸ್ಥಳದಲ್ಲಿ ಸ್ಪಷ್ಟವಾಗಿ ಬರೆಯಿರಿ. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯಿರಿ. ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರವನ್ನು ಊಹೆಯಾಗಿದ್ದರೂ ಪರವಾಗಿಲ್ಲ, ಉತ್ತರಿಸಲು ಪ್ರಯತ್ನಿಸಿ. ಸುಲಭವಾದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಕಷ್ಟವೆನಿಸಿದ ಪ್ರಶ್ನೆಗಳಿಗೆ ಕೊನೆಯಲ್ಲಿ ಬರೆಯಿರಿ. ಎಲ್ಲಾ ಉತ್ತರವನ್ನು ಅಂತಿಮವಾಗಿ ಮಗದೊಮ್ಮೆ ಸರಿಯಾಗಿ ಪರಾಮರ್ಶಿಸಬೇಕು.

11. ಕಂಠಪಾಠದ ಬದಲು ಟಿಪ್ಪಣಿಗಳನ್ನು ಮಾಡಿಕೊಳ್ಳಿ. ವಿದ್ಯಾರ್ಥಿಗಳು ಕಂಠಪಾಠ ಮಾಡುವುದು ಅಥವಾ ಎಲ್ಲಾ ವಿಷಯಗಳನ್ನು ಒಟ್ಟಿಗೆ ತಲೆಗೆ ತುರುಕಿಸಿಕೊಳ್ಳುವುದು ಅಧ್ಯಯನದ ಉತ್ತಮ ವಿಧಾನ ಅಲ್ಲ. ಓದುವಾಗ ಲಘು ಟಿಪ್ಪಣಿ ಮಾಡಿಕೊಂಡು ಪುನಃ ಪುನಃ ಓದಿ ಪರಾಮರ್ಶಿಸಿದಾಗ ನೆನಪು ಶಕ್ತಿ ವೃದ್ಧಿಸಬಹುದು.

12. ಓದಲು ನಿಮಗೆ ಅನುಕೂಲಕರವಾದ ಅರಾಮದಾಯಕವಾದ ಮತ್ತು ಸೂಕ್ತ ಏಕಾಗ್ರತೆ ನೀಡುವ ಜಾಗದಲ್ಲಿ ಓದಿ. ಮಲಗಿಕೊಂಡು ಓದುವುದು ಸೂಕ್ತವಲ್ಲ. ಮುಂಜಾನೆ ಹೊತ್ತಲ್ಲಿ, ಗ್ರಂಥಾಲಯದಲ್ಲಿ ಅಥವಾ ಇನ್ನಾವುದೇ ಪ್ರಶಾಂತ ಸ್ಥಳದಲ್ಲಿ ಓದಿದಲ್ಲಿ ಉತ್ತಮ. 13.ಚೆನ್ನಾಗಿ ನಿದ್ರಿಸಿ, ಆರೋಗ್ಯಕರವಾದ ಸಮತೋಲಿತ ಅಹಾರ ಸೇವಿಸಿ. ಹೊಟ್ಟೆ ತುಂಬಾ ಭೂರಿ ಭೋಜನ ಮಾಡಬೇಡಿ, ನಿದ್ದೆ ಬರಬಹುದು. ಹಿತಮಿತವಾಗಿ ಹದವಾಗಿ ಆಹಾರ ಸೇವಿಸಿ.

14. ಪರೀಕ್ಷಾ ಕೊಠಡಿಯಲ್ಲಿ ಯಾವುದೇ ರೀತಿಯ ನಕಲು ಮತ್ತು ಅಕ್ರಮ ಚಟುವಟಿಕೆಗಳಲ್ಲಿ ತೊಡಗಬೇಡಿ. ಈ ರೀತಿ ನೀವು ನಿಮ್ಮನ್ನೇ ಮೋಸ ಮಾಡಿಕೊಂಡಲ್ಲಿ ನಿಮ್ಮ ಭವಿಷ್ಯವನ್ನು ನೀವೇ ಹೊಸಕಿ ಹಾಕಿದಂತೆ. ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದಲ್ಲಿ ನಿಮಗೆ ತಿಳಿದಷ್ಟನ್ನು ಪ್ರಾಮಾಣಿಕವಾಗಿ ಬರೆಯಿರಿ. ಬರೆದ ಉತ್ತರವನ್ನು ಸೂಕ್ತವಾಗಿ ಸ್ಪಷ್ಟವಾಗಿ ಬರೆಯಿರಿ. ಎಷ್ಟೋ ಬಾರಿ ಉತ್ತರ ಸರಿಯಾಗಿದ್ದರೂ ಸ್ಪಷ್ಟವಾಗಿಲ್ಲದ ಕಾರಣ ಅಂಕಗಳನ್ನು ಕಳೆದುಕೊಂಡ ಉದಾಹರಣೆ ನಮ್ಮ ಮುಂದೆ ಇದೆ.

ಕೊನೆಮಾತು

ಮಕ್ಕಳು ಮತ್ತು ಹೆತ್ತವರು ಪರೀಕ್ಷೆಯನ್ನು ಯುದ್ಧದ ರೀತಿಯಲ್ಲಿ ಎದುರಿಸುವುದು ಬಹುದೊಡ್ಡ ತಪ್ಪು. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಕೊನೆಗಳಿಗೆಯಲ್ಲಿ ಉಸಿರುಗಟ್ಟಿ ನಿದ್ದೆ, ಅನ್ನ ಆಹಾರ ಬಿಟ್ಟು ಓದುವುದು ಸರ್ವತಾ ಸಮ್ಮತವಲ್ಲ. ಪಾಸು ಫೇಲುಗಳಾಚೆಯೂ ಬದುಕು ಇದೆ. ಭವಿಷ್ಯವೂ ಇದೆ. ಎಷ್ಟೋ ಭಾರೀ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿ ಜೀವನದ ಪರೀಕ್ಷೆಯಲ್ಲಿ ಗೆದ್ದ ಉದಾಹರಣೆ ಉಂಟು. ಅದೇ ರೀತಿ ಪರೀಕ್ಷೆಯಲ್ಲಿ ರ್ಯಾಂಕುಗಳಿಸಿದ ವಿದ್ಯಾರ್ಥಿ ನಿಜ ಜೀವನದ ಪರೀಕ್ಷೆಯಲ್ಲಿ ಮುಗ್ಗರಿಸಿದ್ದುಂಟು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಂಕಗಳೇ ಮಾನದಂಡ ಎಂಬುದೇನೋ ನಿಜ. ಆದರೆ ಅದೊಂದರಿಂದಲೇ ಬದುಕು ನಿರ್ಣಯವಾಗುವುದಿಲ್ಲ ಎನ್ನುವುದು ಅಷ್ಟೇ ಸತ್ಯ. ಪಾಸು ಫೇಲು ಪರೀಕ್ಷೆಯಲ್ಲಿ ಸಾಮಾನ್ಯ. ಅದ್ದರಿಂದಲೇ ಪೋಷಕರು ತಮ್ಮ ಮಕ್ಕಳು ತಮ್ಮ ನಿರೀಕ್ಷೆಯಂತೆ ಪರೀಕ್ಷೆಯಲ್ಲಿ ಅಂಕಗಳಿಸದಿದ್ದಾಗ ಆಕಾಶವೇ ಕಳಚಿ ಬಿದ್ದಂತೆ ವರ್ತಿಸಬಾರದು. ಅವರ ಬದುಕು ಮುಗಿದೇ ಹೋಯಿತೆಂದು ಗೋಳಿಡಬೇಡಿ. ಮಕ್ಕಳಿಗೆ ಮಾನಸಿಕ ಧೈರ್ಯ, ಸ್ಥೈರ್ಯ ತುಂಬಿ ಸಮಾಧಾನ ಮಾಡಿ ಅವರ ಮನ ಒಲಿಸಿ ಭವಿಷ್ಯದ ಕುರಿತು ತಿಳಿ ಹೇಳಬೇಕು. ಮಕ್ಕಳ ಆಸಕ್ತಿ ಅಭಿರುಚಿಗೆ ತಕ್ಕಂತೆ ಪ್ರೋನೀಡಬೇಕು. ಹಾಗೇ ಮಾಡಿದ್ದಲ್ಲಿ ನಿಮ್ಮ ಮಕ್ಕಳ ಬದುಕು ಬಂಗಾರವಾಗುವುದರಲ್ಲಿ ಎಳ್ಳಷ್ಟು ಸಂಶಯವೇ ಇಲ್ಲ. ಅದರಲ್ಲಿಯೇ ನಮ್ಮ ಸಮಾಜದ ನಿಮ್ಮ ಕುಟುಂಬದ ಮತ್ತು ನಿಮ್ಮ ವೈಯುಕ್ತಿಕ ಹಿತಾಸಕ್ತಿಯೂ ಅಡಗಿದೆ ಮತ್ತು ಅದುವೇ ಮಕ್ಕಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯಾಗಬಹುದು.

ಪರೀಕ್ಷೆ ಎಂಬ ಪೆಡಂಭೂತ

ಪರೀಕ್ಷಾ ಸಮಯ ನಿಜಕ್ಕೂ ವರ್ಷದಲ್ಲಿ ಎದುರಾಗುವ ಒತ್ತಡದ ಸಮಯ. ಈ ಸಮಯದಲ್ಲಿ ಮಕ್ಕಳ ಜೊತೆಗೆ ಹೆತ್ತವರೂ ಒತ್ತಡಕ್ಕೆ ಒಳಗಾಗುವುದು ಸಹಜ. ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಿ, ಚೆನ್ನಾಗಿ ಅಭ್ಯಾಸ ಮಾಡಿದ್ದರೆ ಪರೀಕ್ಷೆಗೆ ಹೆದರಬೇಕಿಲ್ಲ. ಪರೀಕ್ಷೆ ನಿಮ್ಮನ್ನು ಹೆದರಿಸಲು ಬರುವುದಿಲ್ಲ. ಬದಲಿಗೆ ನಿಮ್ಮ ಪ್ರತಿಭೆ, ಸಾಮರ್ಥ್ಯವನ್ನು ಪ್ರದರ್ಶಿಸಲು ಒಂದು ಸದವಕಾಶವಾಗಿರುತ್ತದೆ. ನಿಮ್ಮ ಸುಪ್ತ ಮನಸ್ಸು ನಿಮ್ಮಲ್ಲಿ ಅನುಮಾನ ಮತ್ತು ಗೊಂದಲವನ್ನು ಉಂಟು ಮಾಡಿದರೆ ಧೃತಿಗೆಡಬೇಡಿ. ಸಹನೆಯಿಂದ ಇದ್ದು ನಿಮ್ಮ ಮನಸ್ಸನ್ನು ಹತೋಟಿಗೆ ತಂದುಕೊಳ್ಳಿ. ನಿಮ್ಮ ಮನಸ್ಸಿಗೆ ನೀವೆೇ ಸಂತೈಸಿಕೊಳ್ಳಿ. ಋಣಾತ್ಮಕ ಭಾವನೆಗಳನ್ನು ಮನಸ್ಸಿನಿಂದ ಕಿತ್ತೊಗೆಯಿರಿ. ಪ್ರಶಾಂತವಾಗಿ ಸಹನೆ -ಸಂಯಮದಿಂದ ಪರೀಕ್ಷೆಯನ್ನು ಎದುರಿಸಿ. ಯಾವತ್ತೂ ಆಶಾವಾದದ ಅಲೋಚನೆಗಳಿರಲಿ. ನೀವು ಸದಾ ಧನಾತ್ಮಕವಾಗಿ ಆಲೋಚಿಸಬೇಕು. ನಮ್ಮ ಮನಸ್ಸು ಕೆಲವೊಮ್ಮೆ ಕೆಟ್ಟ ವಿಚಾರಗಳನ್ನು ವೈಭವೀಕರಿಸುವುದರಿಂದ, ಅವು ಭಯದ ಸನ್ನಿವೇಶಗಳಾಗಿ ಪರಿವರ್ತನೆಯಾಗುವುದು ಮತ್ತು ಪರೀಕ್ಷೆಯ ಭಯ ಕಾಡುತ್ತದೆ. ಪರೀಕ್ಷೆ ಎದುರಿಸುವುದು ಕಷ್ಟವಾಗುತ್ತದೆ. ನಾನು ಉತ್ತಮ ಅಂಕ ಗಳಿಸದಿದ್ದರೆ, ನಾನು ಪರೀಕ್ಷೆಯಲ್ಲಿ ಅನುತೀರ್ಣವಾದರೆ ಎಂದೆಲ್ಲಾ ಋಣಾತ್ಮಕ ಯೋಚನೆಗಳು ಬರುವುದು ಸಹಜ. ಈ ಕ್ಷಣದಲ್ಲಿ ಧೃತಿಗೆಡದೆ ನಿಮ್ಮನ್ನು ನೀವು ಸಂತೈಸಿಕೊಳ್ಳಿ. ನಿಮ್ಮ ಸಾಮರ್ಥ್ಯ ಮತ್ತು ಜ್ಞಾನದ ಮೇಲೆ ನಂಬಿಕೆ ಇಡಿ. ಯಾವತ್ತೂ ನಿಮ್ಮನ್ನೂ ನೀವೇ ಕೀಳಾಗಿ ಅಂದಾಜಿಸಿ, ಋಣಾತ್ಮಕ ಭಾವನೆ ಬೆಳಸಿಕೊಳ್ಳಬೇಡಿ. ಯಾವತ್ತೂ ಆಶಾವಾದಿಯಾಗಿ ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು.

Writer - ಡಾ. ಮುರಲೀ ಮೋಹನ್ ಚೂಂತಾರು

contributor

Editor - ಡಾ. ಮುರಲೀ ಮೋಹನ್ ಚೂಂತಾರು

contributor

Similar News

ಜಗದಗಲ
ಜಗ ದಗಲ