ರಿಯಾಲಿಟಿ ಶೋ ಮತ್ತು ‘ಬಿಗ್‌ಬಾಸ್’

Update: 2017-02-04 17:19 GMT

ಮೇಲ್ನೋಟಕ್ಕೆ ಇದು ಖ್ಯಾತಿ ಗಳಿಸಲು ಒಂದು ವೇದಿಕೆ ಎನಿಸುತ್ತದೆ. ಜಯಗಳಿಸಲು ಅಲ್ಲಿದ್ದವರು ಕೆಲವೊಮ್ಮೆ ತಮ್ಮ ತಮ್ಮೆಳಗೇ ಪರಸ್ಪರ ಮಾತುಕತೆ ಆಡುತ್ತಾ ಬೇರೆಯವರ ಬಗ್ಗೆ ದೂಷಿಸುವುದು, ಕಿರಿಕಿರಿ ಮಾಡುವುದು, ವಾಗ್ವಾದ ಮಾಡುತ್ತಾ ಅವಮಾನ ಮಾಡುವುದು ವೀಕ್ಷಕರಲ್ಲಿ ಕೇವಲ ಕುತೂಹಲ ಮೂಡಿಸಲಿಕ್ಕಾಗಿ ಮಾತ್ರವೇ ಎನ್ನುವುದು ಇನ್ನೂ ಸಂಶಯವೇ.

ಯಾವುದೇ ಮಾಹಿತಿ ಇರಲಿ ದೃಶ್ಯ ಮಾಧ್ಯಮದಲ್ಲಿ ಇದ್ದರೆ ಮಾತ್ರ ಅದಕ್ಕೊಂದು ಮಹತ್ವ ಬರುತ್ತದೆ. ಹೆಚ್ಚೆಚ್ಚು ಟಿ.ವಿ. ವಾಹಿನಿಗಳು ಹುಟ್ಟಿದಂತೆ ಸೆನ್ಶೇಶನ್ ತಯಾರಿ ಮಾಡುವುದೇ ವಾಹಿನಿಗಳ ಪ್ರಮುಖ ಲಕ್ಷವಾಯಿತು. ತಮಿಳುನಾಡಿನಲ್ಲಿ ಎಂ.ಜಿ.ಆರ್. ಅವರ ಪಾರ್ಥಿವ ಶರೀರ ಹೊತ್ತೊಯ್ಯುತ್ತಿದ್ದ ವಾಹನದಿಂದ ಎಐಎಡಿಎಂಕೆ ಪಕ್ಷದ ನೇತೃತ್ವ ವಹಿಸಿದ್ದ ಜಯಲಲಿತಾ ಅವರನ್ನು ವಾಹನದಿಂದ ಕೆಳಗೆ ತಳ್ಳಿದ ಹಾಗೂ ಅವರ ಸೀರೆ ಎಳೆದಾಡಿ ಚೆಲ್ಲಾಡಿದ ದೃಶ್ಯವನ್ನು ಟಿ.ವಿ. ವಾಹಿನಿಗಳು ಚಿತ್ರೀಕರಿಸಿ ಮತ್ತೆ ಮತ್ತೆ ಪ್ರಸರಣ ಮಾಡಿದ್ದರಿಂದ 1989ರಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತ ಹಿಡಿದ ಡಿಎಂಕೆ ಪಕ್ಷಕ್ಕಿಂತ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ ಗೆದ್ದು ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಟಿ.ವಿ. ವಾಹಿನಿ ಮೂಲಕ ಊಹಿಸಲು ಸಾಧ್ಯವಾಗದಂತಹ ಬದಲಾವಣೆ ತಂದಿತು.

ಒಟ್ಟಿನಲ್ಲಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಏನೇನು ಬೇಕೋ ಅದನ್ನು ತೋರಿಸುವ ಸಂಪ್ರದಾಯ ಟಿ.ವಿ. ವಾಹಿನಿಗಳ ಮುಖ್ಯ ಗುರಿಯಾಯಿತು.

ಈ ಟ್ರೆಂಡಿನಿಂದ ಪ್ರತಿಯೊಂದು ಟಿ.ವಿ. ವಾಹಿನಿಗಳಲ್ಲಿ ಹೊಸ ಸೂತ್ರ ಹೊಸ ಪ್ರಯೋಗಶೀಲತೆ ಪ್ರಾರಂಭವಾದವು. ನಾನಾ ರೀತಿಯ ಸ್ಪರ್ಧಾತ್ಮಕ ರಿಯಾಲಿಟಿ ಶೋಗಳಿಗೆ ಪ್ರಾಶಸ್ತ್ಯ ಜಾಸ್ತಿ ಆಯಿತು. ಈ ರಿಯಾಲಿಟಿ ಶೋಗಳ ಸ್ಪರ್ಧೆ ನಾನಾ ರೂಪದಲ್ಲಿ ಜನಪ್ರಿಯವಾಗಿ ವಾಹಿನಿಗಳ ಟಿಆರ್‌ಪಿ ರೇಟ್ ಹೆಚ್ಚಾಗಲೂ ಕಾರಣವಾಯಿತು.

ಎಲ್ಲಕ್ಕಿಂತ ಹೆಚ್ಚು ‘ಬಿಗ್‌ಬಾಸ್’ ಹವಾ ಹೆಚ್ಚು ಮೋಡಿ ಮಾಡಿತು. ಈ ‘ಬಿಗ್‌ಬಾಸ್’ ಪರಿಕಲ್ಪನೆ ಮೊಟ್ಟ ಮೊದಲು ನೆದರ್‌ಲ್ಯಾಂಡಿನ ‘ಬಿಗ್‌ಬ್ರದರ್’ ಎಂಬ ರಿಯಾಲಿಟಿ ಶೋನ ಪ್ರಯೋಗಶೀಲತೆಯಿಂದ ‘ವೆರೋನಿಕಾ’ ವಾಹಿನಿಯಲ್ಲಿ ಪ್ರಸಾರವಾಗಿ ಅತ್ಯಂತ ಜನಪ್ರಿಯತೆ ಗಳಿಸಿತು. ಹಾಗೇನೇ ಅಪಾರ ಹಣವೂ ಬಂತು.

ಹೊರ ಜಗತ್ತಿನ ಯಾವುದೇ ಸಂಪರ್ಕವಿಲ್ಲದೇ ಟೆಲಿಫೋನ್, ಟೆಲಿವಿಷನ್, ರೇಡಿಯೋ, ವಾರ್ತಾಪತ್ರಿಕೆ, ಲೇಖನ, ಸಾಮಗ್ರಿಗಳೂ ಯಾವುದೂ ಇಲ್ಲದ ದೊಡ್ಡ ಬಂಗಲೆಯಲ್ಲಿ ಆಧುನಿಕ ಪೀಠೋಪಕರಣ ಒಳಗೊಂಡ ಪರಿಸರದಲ್ಲಿ ‘ಬಿಗ್‌ಬ್ರದರ್’ ಆಯ್ಕೆ ಮಾಡಿದ ವಿಭಿನ್ನ ನೆಲೆಯ ಸೆಲೆಬ್ರಿಟಿಗಳು ಸುಮಾರು ಮೂರು ತಿಂಗಳಿನಷ್ಟು ದಿನ ಒಂದೇ ಕುಟುಂಬದ ಸದಸ್ಯರಂತೆ ವಾಸಿಸುವುದು ಮತ್ತು ಅವರು ಕೊಟ್ಟ ಟಾಸ್ಕ್‌ಗಳನ್ನು ನಿಭಾಯಿಸುವುದು. ಕನ್‌ಫೆಶನ್ ರೂಮ್‌ನಲ್ಲಿ ಕರೆದಾಗ ಹೋಗಿ ತಾವು ಯಾರನ್ನು ‘ಎಲಿಮಿನೇಟ್’ ಮಾಡಲು ಸಲಹೆ ಮಾಡುತ್ತೇವೆ ಮತ್ತು ಯಾಕಾಗಿ ಎನ್ನುವುದನ್ನು ‘ಬಿಗ್‌ಬ್ರದರ್’ಗೆ ಹೇಳುವುದು, ಅಂತ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರಿಗೆ ಒಂದಷ್ಟು ಮೊತ್ತ ಹಣದ ಖ್ಯಾತಿ. ಇಲ್ಲಿ ಪ್ರತ್ಯೇಕ ಸ್ಕ್ರಿಪ್ಟ್ ಇಲ್ಲ. ಸ್ಪರ್ಧಿಗಳ ಪ್ರತಿಯೊಂದು ಚಲನವಲನಗಳನ್ನು ಕ್ಯಾಮರಾಗಳು ಸೆರೆಹಿಡಿಯುತ್ತವೆ. ಸ್ಪರ್ಧಿಗಳು ಮಲಗಿದ್ದಾಗಲೂ ಶೂಟಿಂಗ್ ನಡೆಯುತ್ತದೆ.

ಕನ್ನಡದಲ್ಲೂ ಈ ‘ಬಿಗ್‌ಬಾಸ್’ ಕನ್ನಡ ವಾಹಿನಿಯೊಂದರಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರಸಾರವಾಗುತ್ತಿದೆ. ಅತ್ಯಂತ ಜನಪ್ರಿಯತೆಯನ್ನೂ ಗಳಿಸಿದೆ.

ಈ ಬಿಗ್‌ಬಾಸ್ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಲು ಎಲ್ಲರೂ ಯಾಕೆ ಮುಗಿ ಬೀಳುತ್ತಾರೆ? ಸ್ಪರ್ಧೆಯಲ್ಲಿ ರೂ. 50 ಲಕ್ಷ ಗೆಲ್ಲುವುದು ಮಾತ್ರ ಗುರಿಯೇ? ಸುಮಾರು 3 ತಿಂಗಳು ತಮ್ಮ ಸ್ವಂತ ಬಂಧು-ಬಾಂಧವ, ಸ್ನೇಹಿತರನ್ನೂ ಬಿಟ್ಟು ಬಂಧಿಯಂತೆ ಬಂದಂತಹ ಸ್ಪರ್ಧೆಯ ಬೇರೆ ಬೇರೆ ಅಭ್ಯರ್ಥಿಗಳ ಜೊತೆ ಒಂದೇ ಕುಟುಂಬದವರಂತೆ ಬಾಳುವುದು, ಅಡಿಗೆ ಮಾಡುವುದು, ಕಸ ತೆಗೆದು ಚೊಕ್ಕಟ ಮಾಡುವುದು, ಎಲ್ಲ ಕೆಲಸದ ನಂತರ ಬಿಗ್‌ಬಾಸ್ ಹೇಳಿದ ಟಾಸ್ಕ್‌ಗಳನ್ನು ನಿಭಾಯಿಸುವುದು. ಮುಂತಾದ ಚಟುವಟಿಕೆ ಸ್ವರೂಪ ಕೇವಲ ವೀಕ್ಷಕರನ್ನು ರಂಜಿಸುವುದೇ? ಅಥವಾ ಅಲ್ಲಿದ್ದ ಸೆಲೆಬ್ರಿಟಿಗಳ ಸಾಮರ್ಥ್ಯ ಅಳೆಯುವುದೇ ಪ್ರಶ್ನೆಯಾಗಿಯೇ ಉಳಿಯುತ್ತದೆ. ಮೇಲ್ನೋಟಕ್ಕೆ ಇದು ಖ್ಯಾತಿ ಗಳಿಸಲು ಒಂದು ವೇದಿಕೆ ಎನಿಸುತ್ತದೆ. ಜಯಗಳಿಸಲು ಅಲ್ಲಿದ್ದವರು ಕೆಲವೊಮ್ಮೆ ತಮ್ಮ ತಮ್ಮೆಳಗೇ ಪರಸ್ಪರ ಮಾತುಕತೆ ಆಡುತ್ತಾ ಬೇರೆಯವರ ಬಗ್ಗೆ ದೂಷಿಸುವುದು, ಕಿರಿಕಿರಿ ಮಾಡುವುದು, ವಾಗ್ವಾದ ಮಾಡುತ್ತಾ ಅವಮಾನ ಮಾಡುವುದು ವೀಕ್ಷಕರಲ್ಲಿ ಕೇವಲ ಕುತೂಹಲ ಮೂಡಿಸಲಿಕ್ಕಾಗಿ ಮಾತ್ರವೇ ಎನ್ನುವುದು ಇನ್ನೂ ಸಂಶಯವೇ.

ಇಲ್ಲಿ ಕಿರುತೆರೆಯ ನಟಿಯರಿಂದ ಹಿಡಿದು, ಸಿನೆಮಾ ನಿರ್ದೇಶಕರು, ಕ್ರೀಡಾಪಟುಗಳು, ಸಾಮಾಜಿಕ ಕಾರ್ಯಕರ್ತರು, ಮಾಧ್ಯಮದವರು ಎಲ್ಲರೂ ಕಲರ್‌ಫುಲ್ ಕನಸು ಕಟ್ಟಿಕೊಂಡವರು ಎಷ್ಟು ಜನರು ಯಶಸ್ಸಿನ ಗೆರೆ ದಾಟುತ್ತಾರೆ? ಯಾರು ನಿರೀಕ್ಷೆ ಉಳಿಸಿಕೊಳ್ಳುತ್ತಾರೆ? ನಡೆಯುತ್ತಿರುವ ಆಟದಲ್ಲಿ ಬೌಂಡರಿ ಹೊಡೆಯುವವರು ಯಾರು? ಹೊರ ಹೋಗುವವರು ಯಾರು/ ಹೇಗೆ ಮತ್ತು ಯಾಕೆ? ಪ್ರಶ್ನೆ ಮಾತ್ರ ಪ್ರಶ್ನೆಯಾಗಿಯೇ ಉಳಿಯುತ್ತದೆ. ಆದರೆ ಇದು ಒಂದು ಪ್ರಯೋಗ. ಪ್ರೇಕ್ಷಕರು ಕಾತರಿಸಿ ನೋಡುತ್ತಾರೆ. ಇದು ‘ಬಿಗ್‌ಬಾಸ್’ ಹಿರಿಮೆ.

ಸಣ್ಣ ಕಿಡಿಯಾಗಿ ಶುರುವಾದ ಈ ರಿಯಾಲಿಟಿ ಶೋ ಕಿರುತೆರೆಯನ್ನೇ ಧಿಕ್ಕರಿಸುವ ಶಕ್ತಿಯಾಗಿ ಬೆಳೆದಿದೆ. ಕಿರುತೆರೆಯಲ್ಲಿ ಖ್ಯಾತರಾದವರನ್ನು ಈ ‘ಬಿಗ್‌ಬಾಸ್’ ರಿಯಾಲಿಟಿ ಶೋ ಅವರನ್ನು ಯಾಕೆ ಸೆಳೆಯುತ್ತದೆ? ಇಲ್ಲಿ ಬಂದರೆ ಜನಪ್ರಿಯತೆ ಖಂಡಿತ ಎಂಬ ನಂಬಿಕೆ. ಈ ಆಕರ್ಷಣೆ ಈಗ ಹೆಚ್ಚಾಗುತ್ತಲೇ ಇದೆ ಮತ್ತು ಶೋ ವಿನ ಒಟ್ಟಾರೆ ಸ್ವರೂಪವೂ ಬದಲಾಗುತ್ತಾ ಹೋಗಿದೆ. ಯಾವ ಕಿರುತೆರೆಗೂ ಕಡಿಮೆ ಇಲ್ಲದಂತೆ ಇದು ಚಿತ್ರಿತವಾಗುತ್ತಿದೆ. ಕೆಲಸ ಜಾಸ್ತಿ ಇದ್ದರೂ ಖುಷಿ ಇದೆ. ಎಲ್ಲಿ ಅವಕಾಶ ಸಿಗುತ್ತೋ ಅದನ್ನು ಬಳಸಿಕೊಳ್ಳಲೇ ಬೇಕು. ಸರಿಯಾದ ಚೆಕ್ ಹಾಗೂ ಪಾಪ್ಯುಲಾರಿಟಿ’’ ಇದು ಬಿಗ್‌ಬಾಸ್ ಭಾಗವಹಿಸಿದವರ ಅನಿಸಿಕೆ.

ಬಿಗ್‌ಬಾಸ್ ಕೊಡುವ ಟಾಸ್ಕ್‌ಗಳಲ್ಲಿ ಸ್ವಾಸ್ಥ ಕೆಡುವ ಸಂದರ್ಭವೂ ಇದೆ. ಪೆಟ್ಟಿಗೆಯಲ್ಲಿ ಅದೆಷ್ಟೋ ಹೊತ್ತು ಕೂರುವುದು ಮೆಣಸಿನ ಹುಡಿಯಲ್ಲಿ ಮುಖ ಅದ್ದಿ ಹುಡುಕಿ ತೆಗೆಯುವುದು ಇದು ಆರೋಗ್ಯಕ್ಕೆ ಹಾನಿಕಾರಕ ಟಾಸ್ಕ್ ಗಳಾದರೆ, ಇಷ್ಟಪಟ್ಟವರನ್ನು ಮಾಲೆ ಹಾಕುವುದು ಮತ್ತು ಇಷ್ಟಪಡದವರ ಮುಖಕ್ಕೆ ಕಪ್ಪು ಹಚ್ಚುವುದು. ಇದೆಲ್ಲ ಅನಾರೋಗ್ಯಕರ ಟಾಸ್ಕ್ ಅನ್ನಬಹುದು. ಸ್ಪರ್ಧಿಗಳನ್ನು ಇದು ಇಕ್ಕಟ್ಟಿಗೆ ಸಿಲುಕಿಸುತ್ತದೆ.

‘‘ನಾವು ಪರಸ್ಪರ ಪ್ರೀತಿಸಬೇಕು’’ ಎನ್ನುವ ನುಡಿಗೆ ಋಣಾತ್ಮಕ ಧ್ವನಿಯನ್ನೂ ಕೊಡುತ್ತದೆ.

ಇನ್ನು ಈ ಸ್ಪರ್ಧೆಯಲ್ಲಿ ಗೆಲುವಾಗುವುದು ಕೇವಲ ಅರ್ಹತೆ ಮಾನದಂಡದಿಂದಲೋ ಅಥವಾ ಅಪಾರ ಸಂಖ್ಯೆಯಲ್ಲಿ ವೀಕ್ಷಕರು ತಮಗಿಷ್ಟವಾದವರ ಪರ ಅವರನ್ನೇ ಗೆಲ್ಲಿಸಬೇಕೆಂದು ಎಸ್ಸೆಮ್ಮೆಸ್ ಕಳುಹಿಸಿದ ಕಾರಣದಿಂದಲೋ ಎಂದು ಹೇಳುವುದು ಕಷ್ಟ. ಯಾಕೆಂದರೆ ಈಗ ಲಾಬಿ ಮಾಡುವುದೇ ಒಂದು ಉದ್ಯಮವಾಗಿದೆ. ಆದ್ದರಿಂದ ಯಶಸ್ಸನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ.

ಒಂದು ರೀತಿಯಲ್ಲಿ ‘ಬಿಗ್‌ಬಾಸ್’ ಒಳಗಿದ್ದವರು ಅಲ್ಲಿಯ ವ್ಯವಸ್ಥೆಗೆ ಮೂರು ತಿಂಗಳು ಕಳೆದ ಕಾರಣ ಇನ್‌ಸ್ಟಿಟ್ಯೂಶನ್‌ಲಾಸ್ಡ್ ಆದವರು ಮತ್ತು ವ್ಯಾಮೋಹಗೊಂಡವರು. ಆದ್ದರಿಂದ ಅದೊಂದು ರೀತಿಯ ಬಂಧನವೆನ್ನುವುದು ಅನ್ನಿಸುವುದಿಲ್ಲ. ಇದು ಬಿಟ್ಟು ಹೋಗುವುದು ಅವರಿಗೆ ಒದ್ದಾಟವೆನ್ನಿಸುತ್ತದೆ. ಮನುಷ್ಯರ ಈ ಮಾನಸಿಕ ಸ್ಥಿತಿ ನಾನು ನೋಡಿದ ಫ್ರಾಂಕ್ ಡಾರ್‌ಖಾರಿಟಿ ನಿರ್ದೇಶಿಸಿದ ‘ಶಶಾಂಕ್ ರಿಡೆಮೆಸನ್’ ಸಿನೆಮಾ ನೆನಪಿಗೆ ಬರುತ್ತದೆ.

‘ಷಶಂಕ’ ಎನ್ನುವ ಒಂದು ಜೈಲು ಮತ್ತು ಜೈಲಿನ ಕೈದಿಗಳ ಸುತ್ತ ಹೆಣೆದಿರುವ ಸಿನೆಮಾ ಅದು. ಮುಖ್ಯವಾಗಿ ವ್ಯಕ್ತಿ ಸ್ವಾತಂತ್ರವೆಂದರೇನು ಎಂದು ಬಿಡಿಸಿಡುವ ಸಿನೆಮಾ.

‘ಷಶಂಕ’ದಲ್ಲಿರುವ ಕೈದಿಗಳೆಲ್ಲ ಕೊಲೆ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು. ಆ ಬಂದಿಖಾನೆಯೇ ಹೊಸ ಸಂಪರ್ಕವಿಲ್ಲದ ಭೇದಿಸಲಾರದ ಕೋಟೆ. ಅಲ್ಲಿದ್ದ ಕೈದಿಗಳಲ್ಲಿ ಬ್ರೂಕ್ ಅನ್ನುವವನು ತನ್ನ ಹರೆಯದಲ್ಲಿ ಒಂದು ಕೊಲೆ ಮಾಡಿ ತನ್ನೆಲ್ಲ ಅಮೂಲ್ಯ ಆಯುಷ್ಯ 50 ವರ್ಷ ಈ ಸೆರೆಯಲ್ಲೇ ಕಳೆದ ವಿದ್ಯಾವಂತ ಕೈದಿ. ಆದ್ದರಿಂದ ಜೈಲಿನ ಅಧಿಕಾರಿ ಅವನಿಗೆ ಜೈಲಿನಲ್ಲಿದ್ದ ಹಳೇ ಪುಸ್ತಕಗಳನ್ನು ಕೈದಿಗಳಿಗೆ ಓದಿ ಹೇಳುವ ಕೆಲಸ ಕೊಡುತ್ತಾರೆ. ಇದು ಅವನಿಗೆ ಹೆಮ್ಮೆಯ ವಿಚಾರ.

ಆತನ 70ನೆ ವರ್ಷದಲ್ಲಿ ಅವನಿಗೆ ಪೆರೋಲ್ ಮೇಲೆ ತಾನಿನ್ನು ಯಾವುದೇ ಅಪರಾಧ ಮಾಡುವುದಿಲ್ಲ ಎನ್ನುವ ವಾಗ್ದಾನದ ಮೇಲೆ ಅವನಿಗೆ ಬಿಡುಗಡೆಯಾಗುತ್ತದೆ.

ಆದರೆ ಜೈಲು ಜೀವನಕ್ಕೆ ಹೊಂದಿಕೊಂಡು ಹೋಗಿದ್ದ ಅವನಿಗೆ ಈಗ ಈ ಹೊರಜಗತ್ತು ಭಯಾನಕ ಅನ್ನಿಸುತ್ತದೆ. ಜೈಲಿನಲ್ಲಿದ್ದ ಕೈದಿ ಎಂದು 70 ವರ್ಷಗಳ ಮುದುಕನಿಗೆ ಬೈದು ಅವಮಾನಿಸುವವರೇ ಎಲ್ಲರೂ, ಮಾಲ್ ಒಂದರಲ್ಲಿ 70 ವರ್ಷಗಳ ಮುದುಕನಿಗೆ ಕೂಲಿ ಕೆಲಸ ಸಿಕ್ಕಿದರೂ ಐಶಾರಾಮಿನಿಂದ ಬೀಗಿದ ಜನರು ಹೀನಾಯವಾಗಿ ಅವನನ್ನು ನಡೆಸಿಕೊಳ್ಳುವುದರಿಂದ ತನಗೆ ಈ ಬಿಡುಗಡೆ ಅನ್ನುವುದೇ ಹುಸಿಯಾದುದು ಅನ್ನಿಸುತ್ತದೆ. ಜೈಲಿನಲ್ಲಿ ತನಗೆ ಸಿಗುವ ಖುಷಿ ಈ ಹೊರಪ್ರಪಂಚದಲ್ಲಿ ಇಲ್ಲ ಎಂದು ಜೈಲಿಗೆ ಮರಳಬೇಕೆಂದು ಇಚ್ಛಿಸುತ್ತಾರೆ. ಆದರೆ ಸಾಧ್ಯವಾಗುವುದಿಲ್ಲ.

ಕೊನೆಗೆ ತನ್ನ ಕೋಣೆಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅವನ ಸಾವಿಗೆ ಯಾರೂ ದುಃಖಿಸುವವರು ಇರುವುದಿಲ್ಲ. ಇದು ಒಂದು ರೀತಿಯಲ್ಲಿ ಮನುಷ್ಯರನ್ನು ಅಲ್ಲಾಡಿಸಿ ಮನುಷ್ಯರ ಅಸ್ತಿತ್ವವನ್ನು ಚಿಂತನೆಗೆ ಹಚ್ಚುವ ಚಿತ್ರ. ಮನುಷ್ಯರ ಸ್ವಾತಂತ್ರದ ವೌಲ್ಯವನ್ನು ವಿಡಂಬಿಸುವ, ಅರ್ಥೈಸುವ ಚಿತ್ರ, ಬದುಕಿಗೆ ಜಾಢ್ಯ ಅಂಟಿದಾಗ ಬದುಕೇ ವಂಚಿಸಲ್ಪಡುತ್ತದೆ ಎಂದು ಆಳವಾಗಿ ಕಾಡುತ್ತದೆ. ‘ಬಿಗ್‌ಬಾಸ್’ಕ್ಕಿಂತ ಭಿನ್ನವಾದ ವಾಸ್ತವದ ಇನ್ನೊಂದು ಮಗ್ಗಲನ್ನು ಇದು ತೋರಿಸುತ್ತದೆ.

ಕನ್ನಡದ ಈ ಸಲದ ‘ಬಿಗ್‌ಬಾಸ್’ ಮೊನ್ನೆಯಷ್ಟೇ ಮುಗಿದಿದೆ. ಬಿಗ್‌ಬಾಸ್ ಮನೆಯಿಂದ ಬಿಡುಗಡೆಗೊಂಡ ಸ್ಪರ್ಧಿಗಳು ತಾವು ಅಲ್ಲಿ ಕಲಿತ ಪಾಠ ತಮ್ಮ ಮುಂದಿನ ಜೀವನಕ್ಕೆ ಸೋಪಾನ ಎನ್ನುತ್ತಿದ್ದಾರೆ. ಆದರೆ ಕ್ಯಾಮರಾಗಳ ಮುಂದೆ ಹೇಳಿದ್ದನ್ನು ಜನಪ್ರಿಯತೆಯ ಅಮಲಿನಲ್ಲಿ ಮರೆಯದಿರಲಿ

Writer - ಕೆ. ತಾರಾ ಭಟ್

contributor

Editor - ಕೆ. ತಾರಾ ಭಟ್

contributor

Similar News