ಬೆಳಕಿಗಾಗಿ ಕಾದಿರುವ ಕಂಬಿಗಳ ಹಿಂದಿನ ಕೈಗಳು...

Update: 2017-02-04 18:37 GMT

ಉಭಯದೇಶಗಳ ನಡುವಿನ ಬಾಂಧವ್ಯವು ಅತ್ಯಂತ ಕೆಳಮಟ್ಟಕ್ಕೆ ಕುಸಿದಿರುವ ಈ ಸನ್ನಿವೇಶದಲ್ಲಿ, ಪಾಕಿಸ್ತಾನದ ಜೈಲುಗಳಲ್ಲಿರುವ ಭಾರತೀಯ ಕೈದಿಗಳು ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ ಹಾಗೂ ವಿಚಾರಣೆಯನ್ನು ಎದುರಿಸುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಜೈಲು ಶಿಕ್ಷೆಯ ಅವಧಿಯನ್ನು ಪೂರ್ತಿಗೊಳಿಸಿದ ಕೆಲವು ಭಾರತೀಯ ಕೈದಿಗಳಿಗೆ ಇನ್ನೂ ಬಿಡುಗಡೆಯ ಭಾಗ್ಯ ದೊರೆತಿಲ್ಲ.

ಪಾಕಿಸ್ತಾನವು ಕಳೆದ ವರ್ಷದ ಕ್ರಿಸ್‌ಮಸ್‌ನಲ್ಲಿ 447 ಭಾರತೀಯ ಕೈದಿಗಳನ್ನು ಬಿಡುಗಡೆಗೊಳಿಸಿದಾಗ, ತಾಯಿಯೊಬ್ಬರು ವಾಘಾ-ಅಟ್ಟಾರಿ ಗಡಿಯಲ್ಲಿ ತನ್ನ ಮಗ ಹಿಂತಿರುಗಿ ಬರುವನೆಂಬ ಭರವಸೆಯೊಂದಿಗೆ ಚಾತಕಪಕ್ಷಿಯಂತೆ ಕಾದು ನಿಂತಿದ್ದರು. ಫೌಝಿಯಾ ಅನ್ಸಾರಿಯವರ ಪುತ್ರ ಹಾಮೀದ್ ನೆಹಾಲ್ ಅನ್ಸಾರಿ ಕಳೆದ ನಾಲ್ಕು ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅವರಂತೆ ಇತರ ನೂರಾರು ಮಂದಿ ಭಾರತೀಯರು ನೆರೆಯ ರಾಷ್ಟ್ರದಲ್ಲಿ ಜೈಲುಕಂಬಿಗಳನ್ನು ಎಣಿಸುತ್ತಿದ್ದಾರೆ.

ಆದರೆ ಆಗಿದ್ದ ಹಾಮೀದ್ ನೆಹಾಲ್ ಅನ್ಸಾರಿಯ ಬಿಡುಗಡೆಯ ಬಗ್ಗೆ ಒಂದೇ ಒಂದು ಮಾತು ಕೂಡಾ ಕೇಳಿಬರುತ್ತಿಲ್ಲ. ಬಡಪಾಯಿ ಮಹಿಳೆ ಫೌಝಿಯಾ ಅನ್ಸಾರಿಗೆ ಈ ಅಗ್ನಿ ಪರೀಕ್ಷೆಯು ನಾಲ್ಕು ವರ್ಷಗಳ ಹಿಂದೆಯೇ ಆರಂಭಗೊಂಡಿತ್ತು. ಮುಂಬೈನಲ್ಲಿ ಇಂಜಿನಿಯರ್ ವೃತ್ತಿಯಲ್ಲಿದ್ದ 32 ವರ್ಷದ ಹಾಮೀದ್, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ತನ್ನ ರೋಟರಿ ಗೆಳೆಯರೊಂದಿಗೆ ಶಿಕ್ಷಣಕ್ಕೆ ಉತ್ತೇಜನ ನೀಡಲು ತುಂಬಾ ಆಸಕ್ತರಾಗಿದ್ದರು. 2012ರ ನವೆಂಬರ್ 4ರಂದು ಅವರು ಉದ್ಯೋಗದ ಸಂದರ್ಶನಕ್ಕಾಗಿ ಪ್ರವಾಸಿ ವೀಸಾದೊಂದಿಗೆ ಕಾಬೂಲ್‌ಗೆ ಆಗಮಿಸಿದ್ದರು. ಎಂಟು ದಿನಗಳ ಆನಂತರ ನವೆಂಬರ್ 12ರಂದು ಅವರು ಸಕ್ರಮ ವೀಸಾ ಇಲ್ಲದೆಯೇ ತೊರ್ಖಾಮ್ ಕಣಿವೆಯ ಮೂಲಕ ಅಫ್ಘಾನಿಸ್ತಾನದಿಂದ ಪಾಕ್ ಗಡಿಯನ್ನು ದಾಟಿದ್ದರು. ನವೆಂಬರ್ 14ರಂದು ಅವರನ್ನು ಕೋಹಟ್‌ನಲ್ಲಿರುವ ಹೊಟೇಲ್‌ನಿಂದ ಪೊಲೀಸರು ವಶಕ್ಕೆ ತೆಗೆದುಕೊಂಡರು. (ಕೋಹಟ್ ಪಾಕಿಸ್ತಾನದ ಪಖ್ತೂನ್‌ಖ್ವಾ ಪ್ರಾಂತ್ಯದಲ್ಲಿರುವ ನಗರವಾಗಿದೆ. ಜಿಲ್ಲಾಕೇಂದ್ರವಾದ ಈ ನಗರವು ಬ್ರಿಟಿಷ್ ಕಾಲದ ಕೋಟೆ, ವಿವಿಧ ಬಜಾರುಗಳು ಹಾಗೂ ಸೇನಾ ಕಂಟೊನ್ಮೆಂಟನ್ನು ಹೊಂದಿದೆ).

ಆದರೆ, ಈ ಮೊದಲು ಪಾಕಿಸ್ತಾನದಲ್ಲಿದ್ದು ಮತ್ತು ಭಾರತೀಯನಾಗಿ ಮತ್ತೊಮ್ಮೆ ಪಾಕಿಸ್ತಾನದ ಗಡಿಯೊಳಗೆ ಪ್ರವೇಶಿಸುವಂತಹ ಇಷ್ಟೊಂದು ದೊಡ್ಡ ಅಪಾಯವನ್ನು ಆತ ಯಾಕೆ ಎದುರುಹಾಕಿಕೊಂಡರೆಂಬ ಪ್ರಶ್ನೆಗಳು ಇಲ್ಲಿ ಉದ್ಭವಿಸುತ್ತವೆ.

ಇದಕ್ಕೆ ಕಾರಣವೂ ಇದೆ. ಹಾಮೀದ್ ಕೋಹಟ್‌ನ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಬುಡಕಟ್ಟು ಕಲಹವನ್ನು ಇತ್ಯರ್ಥಗೊಳಿಸುವುದಕ್ಕಾಗಿ ಜಿರ್ಗಾ (ಪಂಚಾಯತ್) ನೀಡಿದ ತೀರ್ಪಿನಂತೆ ಆಕೆಯನ್ನು ಬೇರೊಬ್ಬನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಹಾಮೀದ್ ಆಕೆಗೆ ನೆರವಾಗಲು ನಿರ್ಧರಿಸಿದ್ದರು ಹಾಗೂ ಪಾಕಿಸ್ತಾನಿ ಆನ್‌ಲೈನ್ ಸಂಪರ್ಕದ ಮೂಲಕ ಆತ ಆಕೆನ್ನು ಪಾರು ಮಾಡಲು ಯೋಜನೆಯೊಂದನ್ನು ರೂಪಿಸಿದ್ದರು. ‘‘ಈ ಹುಡುಗಿ ಹಾಮೀದ್‌ನ ನೆರವನ್ನು ಕೋರಿದ್ದಳು. ಪಾಕಿಸ್ತಾನದಲ್ಲಿರುವ ತನ್ನ ಸ್ನೇಹಿತರ ನೆರವನ್ನು ಪಡೆದುಕೊಂಡು ಆಕೆಯನ್ನು ಕಾಪಾಡಲು ನನ್ನ ಮಗ ಬಯಸಿದ್ದ’’ ಎಂದು ಫೌಝಿಯಾ ದುಃಖತಪ್ತರಾಗಿ ಹೇಳುತ್ತಾರೆ.

ಹಾಮೀದ್ ಬಂಧನಕ್ಕೆ ಸಂಬಂಧಿಸಿದ ಎಫ್‌ಐಆರ್ ಇನ್ನೂ ಕೂಡಾ ಸಲ್ಲಿಕೆಯಾಗಿಲ್ಲ. ಇದೇ ವೇಳೆ ಪೇಶಾವರದ ಹೈಕೋರ್ಟ್‌ಗೆ ಹಾಮೀದ್ ಬಂಧನವನ್ನು ಪ್ರಶ್ನಿಸಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ.

‘‘ಹಾಮೀದ್ ಬಂಧನದ ಸಮಯದಲ್ಲಿ, ಅವರ ವಿರುದ್ಧ ಇದ್ದ ಏಕೈಕ ಆರೋಪವೆಂದರೆ, ಆತ ಅಕ್ರಮವಾಗಿ ಪಾಕಿಸ್ತಾನ ಪ್ರವೇಶಿಸಿದ್ದ್ದನೆಂಬುದಾಗಿತ್ತು. ಈ ಅಪರಾಧಕ್ಕೆ ಗರಿಷ್ಠವೆಂದರೆ ಆರು ವಾರಗಳ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಆದರೆ ಹಾಮೀದ್‌ರ ಬಂಧನವಾಗಿ ಈಗಾಗಲೇ ನಾಲ್ಕು ವರ್ಷಗಳು ಕಳೆದುಹೋಗಿವೆ. ಒಂದು ವೇಳೆ ಹಾಮೀದ್‌ರ ಪ್ರವಾಸಿ ಬ್ಯಾಗ್‌ನಲ್ಲಿ ಕ್ಷಿಪಣಿ ಅಥವಾ ಒಂದೆರಡು ಐಇಡಿ(ಸುಧಾರಿತ ಸ್ಫೋಟಕ ಸಾಧನ) ಪತ್ತೆಯಾಗಿದ್ದಿದ್ದರೆ ಅತನ ವಿರುದ್ಧ ಗೂಢಚರ್ಯೆ, ವಿಧ್ವಂಸಕೃತ್ಯಕ್ಕೆ ಸಂಚು ಹಾಗೂ ಭಯೋತ್ಪಾದನೆಯ ಆರೋಪವನ್ನು ಹೊರಿಸಬಹುದಿತ್ತು. ಆದರೆ ಹಾಮೀದ್ ಅಂತಹ ಯಾವುದೇ ರೀತಿಯ ಅಪರಾಧವನ್ನು ಎಸಗಿರುವುದಕ್ಕೆ ಪುರಾವೆಗಳಿಲ್ಲವೆಂದು ಪಾಕಿಸ್ತಾನದ ಮಾನವಹಕ್ಕು ಆಯೋಗದ ಪ್ರಧಾನ ಕಾರ್ಯದರ್ಶಿ ಐ.ಎ.ರಹ್ಮಾನ್ (ಎಚ್‌ಆರ್‌ಸಿಪಿ) ಹೇಳುತ್ತಾರೆ.

 ‘‘ಹಾಮಿದ್ ಬಗ್ಗೆೆ ಅಂತಹ ಯಾವುದೇ ಮಾಹಿತಿಯಿರುವುದನ್ನು ಅಧಿಕಾರಿಗಳು ಹಲವು ವರ್ಷಗಳಿಂದ ತಿರಸ್ಕರಿಸುತ್ತಲೇ ಬಂದಿದ್ದರು. ಅಂತಿಮವಾಗಿ, ಆತ ಸೇನಾ ನ್ಯಾಯಾಲಯದಲ್ಲಿ ವಿಚಾರಣೆಯನ್ನೆದುರಿಸುತ್ತಿರುವುದಾಗಿ ತಿಳಿಸಿದ್ದರು ಹಾಗೂ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ’’ ಎಂದು ರಹ್ಮಾನ್ ಹೇಳುತ್ತಾರೆ.

ಹಾಮಿದ್ ಅವರ ತಾಯಿ ಪಾಕ್ ಪ್ರಧಾನಿ ನವಾಝ್ ಶರೀಫ್ ಅವರಿಗೆ ಕ್ಷಮಾದಾನ ಕೋರಿಕೆಯ ಅರ್ಜಿಯೊಂದನ್ನು ಸಲ್ಲಿಸಿ, ಸೂಕ್ತ ದಾಖಲೆಗಳಿಲ್ಲದೆ ಪಾಕಿಸ್ತಾನ ಪ್ರವೇಶಿಸಿದ ತನ್ನ ಮಗನನ್ನು ಕ್ಷಮಿಸುವಂತೆ ಕೋರಿದ್ದರು. ಹಾಮಿದ್‌ಗೆ ಈವರೆಗೂ ಭಾರತೀಯ ದೂತಾವಾಸದ ಜೊತೆ ಸಂಪರ್ಕವನ್ನು ಒದಗಿಸಲಾಗಿಲ್ಲ ಹಾಗೂ ಮುಂಬೈಯಲ್ಲಿರುವ ಅವರ ಕುಟುಂಬ ಸದಸ್ಯರ ಜೊತೆ ದೂರವಾಣಿಯಲ್ಲಿ ಮಾತನಾಡಲು ಅವಕಾಶ ನೀಡಿಲ್ಲ. ಜೈಲಿನಲ್ಲಿ ಹಾಮಿದ್ ಸಹಕೈದಿಗಳಿಂದ ಮೂರು ಬಾರಿ ಹಲ್ಲೆಗೊಳಗಾಗಿದ್ದು, ಅವರಿಗೆ ಜೀವಬೆದರಿಕೆಯಿರುವ ಬಗ್ಗೆ ಆತಂಕಗಳು ವ್ಯಕ್ತವಾಗಿವೆ.

ಭಾರತದ ವಿದೇಶಾಂಗ ಸಚಿವಾಲಯವು ಪತ್ರಿಕಾ ಹೇಳಿಕೆಯೊಂದನ್ನು ನೀಡಿ ಹಾಮಿದ್ ಹಾಗೂ ಇನ್ನೋರ್ವ ಭಾರತೀಯ ಕೈದಿ ಕುಲಭೂಷಣ್ ಯಾದವ್‌ಗೆ ತನ್ನ ರಾಯಭಾರಿ ಕಚೇರಿಯ ಜೊತೆ ಸಂಪರ್ಕ ಸಾಧಿಸಲು ಅವಕಾಶ ನೀಡುವಂತೆ ಪಾಕಿಸ್ತಾನವನ್ನು ಕೋರಿತ್ತು. 2016ರ ಮಾರ್ಚ್‌ನಲ್ಲಿ ಪಾಕಿಸ್ತಾನವು ಕುಲಭೂಷಣ್ ಯಾದವ್‌ರನ್ನು ಬಲೂಚಿಸ್ತಾನದಲ್ಲಿ ಬಂಧಿಸಿತ್ತು ಹಾಗೂ ಆತನೊಬ್ಬ ಭಾರತದ ಬೇಹುಗಾರಿಕಾ ಸಂಸ್ಥೆ ‘ರಾ’ದಿಂದ ಗೂಡಚರ್ಯೆಗಾಗಿ ನಿಯೋಜಿತನಾದ ನೌಕಾಪಡೆ ಅಧಿಕಾರಿ ಎಂದು ಆರೋಪಿಸಿತ್ತು.

ಯಾದವ್ ಅವರು ಪಾಕಿಸ್ತಾನದಲ್ಲಿ ವಿಭಜನವಾದಿ ಚಟುವಟಿಕೆಗಳನ್ನು ನಡೆಸಲು ಸಂಚು ಹೂಡಿದ್ದರೆಂದು ಇಸ್ಲಾಮಾಬಾದ್ ಆರೋಪಿಸಿತ್ತು. ಆದರೆ ಭಾರತ, ಯಾದವ್ ಈ ಮೊದಲು ನೌಕಾಪಡೆಯಲ್ಲಿ ಸೇವೆ ಸಲ್ಲಿಸಿರುವುದು ಹೌದಾದರೂ, ಅವರಿಗೆ ಈಗ ಸರಕಾರದ ಜೊತೆ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿತ್ತು. ಪಾಕಿಸ್ತಾನವು ಈವರೆಗೂ ಕೂಡಾ ಯಾದವ್‌ಗೆ ರಾಯಭಾರಿ ಕಚೇರಿಯ ಜೊತೆ ಸಂಪರ್ಕವನ್ನು ಒದಗಿಸಬೇಕೆಂಬ ಭಾರತ ಬೇಡಿಕೆಯನ್ನು ತಿರಸ್ಕರಿಸುತ್ತಲೇ ಬಂದಿದೆ.

2008ರ ದೂತಾವಾಸ ಸಂಪರ್ಕ ಒಪ್ಪಂದದ ನಿಯಾವಳಿಗಳ ಪ್ರಕಾರ ಪ್ರತಿ ವರ್ಷ ಜನವರಿ 1ರಿಂದ ಜುಲೈ 1ರವರೆಗೆ ಉಭಯದೇಶಗಳು ಪರಸ್ಪರರ ಕಸ್ಟಡಿಯಲ್ಲಿರುವ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ. ಪಾಕಿಸ್ತಾನವು ಜನವರಿ 1ರಂದು ವಿನಿಮಯ ಮಾಡಿದ ಕೈದಿಗಳ ಪಟ್ಟಿಯ ಪ್ರಕಾರ ಪಾಕಿಸ್ತಾನದ ಜೈಲಿನಲ್ಲಿ ಸುಮಾರು 43 ಭಾರತೀಯ ಕೈದಿಗಳಿದ್ದಾರೆ ಹಾಗೂ ಭಾರತದಲ್ಲಿ 25 ಪಾಕ್ ಕೈದಿಗಳಿದ್ದಾರೆ. ಈ ಮೊದಲಿನ ಪಟ್ಟಿ (ಜುಲೈ 2016)ಯು 463 ಮೀನುಗಾರರು ಸೇರಿದಂತೆ 518 ಭಾರತೀಯ ಕೈದಿಗಳು ಪಾಕ್ ಜೈಲುಗಳಲ್ಲಿರುವುದಾಗಿ ತಿಳಿಸಿತ್ತು.

2016ರಿಂದೀಚೆಗೆ ಭಾರತದಾದ್ಯಂತದ ಎಂಟು ಜೈಲುಗಳಲ್ಲಿ 1,387 ಪಾಕ್ ಕೈದಿಗಳಿದ್ದಾರೆಂದು ಹೊಸದಿಲ್ಲಿಯಲ್ಲಿರುವ ಪಾಕ್ ಹೈಕಮಿಶನ್ ಕಚೇರಿಯ ಮೂಲಕ ಲಭ್ಯವಾದ ಅಂಕಿಅಂಶಗಳು ಬಹಿರಂಗಪಡಿಸಿವೆ. ಆದರೆ ಇತರ ಜೈಲುಗಳಲ್ಲಿ ಪಾಕಿಸ್ತಾನಿ ಕೈದಿಗಳಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

  ಇಂತಹ ಕೈದಿಗಳಲ್ಲಿ ಒಬ್ಬಾಕೆ ರುಬಿನಾ ಅಖ್ತರ್. ಪಾಕಿಸ್ತಾನಿ ಯುವತಿಯಾದ ಈಕೆ 2012ರಿಂದ ಜಮ್ಮುವಿನ ತನ್ನ ನಾಲ್ಕು ವರ್ಷದ ಮಗಳೊಂದಿಗೆ ಜೈಲಿನಲ್ಲಿ ದಿನಗಳೆಯುತ್ತಿದ್ದಾಳೆ.ವೈದ್ಯಕೀಯ ಚಿಕಿತ್ಸೆಗಾಗಿ ಹೊಸದಿಲ್ಲಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಆಕೆಯನ್ನು ಪತಿ ತೊರೆದುಹೋಗಿದ್ದ. ಇದರಿಂದಾಗಿ ಹಣ ಹಾಗೂ ಯಾವುದೇ ದಾಖಲೆಗಳಿಲ್ಲದೆ ಆಕೆ ಸಿಕ್ಕಿಹಾಕಿಕೊಳ್ಳಬೇಕಾಯಿತು. ರುಬಿನಾಳ ಜೈಲು ಶಿಕ್ಷೆಯ ಅವಧಿಯು 2013ರಲ್ಲಿಯೇ ಕೊನೆಗೊಂಡಿತ್ತು. ಆದರೆ ಪಾಕಿಸ್ತಾನದ ಆಂತರಿಕ ಸಚಿವಾಲಯವು ರುಬಿನಾಳ ರಾಷ್ಟ್ರೀಯತೆಯನ್ನು ದೃಢಪಡಿಸದ ಕಾರಣ ಆಕೆಗೆ ತಾಯ್ನಾಡಿಗೆ ಮರಳಲು ಇನ್ನೂ ಸಾಧ್ಯವಾಗಿಲ್ಲ.

ಆದರೆ ತನಿಖಾ ವರದಿಯ ಪ್ರಕಾರ ರುಬಿನಾ 2012ರ ನವೆಂಬರ್6ರಿಂದೀಚೆಗೆ ತನ್ನ ಅಪ್ರಾಪ್ತ ವಯಸ್ಸಿನ ಮಗಳೊಂದಿಗೆ ಜೈಲಿನಲ್ಲಿದ್ದಾರೆ. ಆಕೆ ಪ್ರಮಾದವಶಾತ್ ಗಡಿದಾಟಿದ ಆಕೆಯನ್ನು ಜಮ್ಮುನಿನ ಕಾನಾಚಾಕ್‌ನಲ್ಲಿ ಬಂಧಿಸಲಾಗಿತ್ತು. ಜಮ್ಮುಕಾಶ್ಮೀರ ಹೈಕೋರ್ಟ್ ತನ್ನ ತೀರ್ಪಿನಲ್ಲಿ ರುಬಿನಾಳ ವಾಸ್ತವ್ಯದ ವಿಳಾಸವನ್ನು ಪತ್ತೆಹಚ್ಚುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಆದೇಶಿಸಿತ್ತು.

 ಬಂಧಿತರಾದ ಮೀನುಗಾರರನ್ನು ಉಭಯದೇಶಗಳು ವಿಶೇಷ ದಿನಗಳಲ್ಲಿ ಆಗಾಗ್ಗೆ ಬಿಡುಗಡೆಗೊಳಿಸುತ್ತವೆ. ಆದರೆ ಮೀನುಗಾರರು ಮತ್ತೆ ಮತ್ತೆ ಎರಡೂ ದೇಶಗಳ ಭದ್ರತಾಪಡೆಗಳ ಕೈಗೆ ಸಿಕ್ಕಿಬೀಳುವುದು ಮುಂದುವರಿಯುತ್ತಲೇ ಇದೆ. ಡಿಸೆಂಬರ್ 25, 2016ರಂದು ಪಾಕಿಸ್ತಾನವು 447 ಭಾರತೀಯ ಕೈದಿಗಳನ್ನು ಬಿಡುಗಡೆಗೊಳಿಸಿತ್ತು. ಶಿಕ್ಷೆಯನ್ನು ಪೂರ್ತಿಗೊಳಿಸಿದರೂ ಬಿಡುಗಡೆಯಾಗದೆ ಇರುವ ಇತರ ಕೈದಿಗಳದ್ದೊಂದು ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ.

ಹಾಮಿದ್ ಪ್ರಕರಣದ ಜೊತೆ ಇನ್ನೊಂದು ದುರಂತಮಯ ನಾಪತ್ತೆಯ ಘಟನೆಯು ಥಳಕುಹಾಕಿಕೊಂಡಿದೆ. ಆಗಸ್ಟ್ 19,2015ರಂದು 24 ವರ್ಷ ವಯಸ್ಸಿನ ಪಾಕ್ ಪತ್ರಕರ್ತೆ ಝೀನತ್ ಶಹಝಾದಿ, ಲಾಹೋರ್‌ನಲ್ಲಿ ಆಟೋರಿಕ್ಷಾದಲ್ಲಿ ಕಚೇರಿಗೆ ಹೋಗುತ್ತಿದ್ದಾಗ ಕೆಲವು ಸಶಸ್ತ್ರಧಾರಿಗಳು ಆಕೆಯನ್ನು ಅಪಹರಿಸಿದ್ದರು. ಆಕೆಯನ್ನು ಪಾಕ್ ಭದ್ರತಾಪಡೆಗಳು ಅಪಹರಿಸಿರುವುದಾಗಿ ಪಾಕಿಸ್ತಾನದ ಮಾನವಹಕ್ಕುಗಳ ಸಂಘಟನೆ ‘ಎಚ್‌ಆರ್‌ಸಿಪಿ’ ಆರೋಪಿಸಿದೆ.

ಹಾಮಿದ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಝೀನತ್, 2013ರ ಆಗಸ್ಟ್‌ನಲ್ಲಿ ಫೌಝಿಯಾರಿಂದ ವಿಶೇಷ ಅಟಾರ್ನಿ ಅಧಿಕಾರವನ್ನು ಪಡೆದುಕೊಂಡು, ಪ್ರಕರಣದ ಮೊಕದ್ದಮೆಯನ್ನು ಪೇಶಾವರ್ ಹೈಕೋರ್ಟ್‌ನಲ್ಲಿ ಮುಂದುವರಿಸಿದ್ದರು. 2015ರ ಆಗಸ್ಟ್ 24ರಂದು ಝೀನತ್ ಅವರು ಹಾಮಿದ್ ಪ್ರಕರಣಕ್ಕೆ ಸಂಬಂಧಿಸಿ ಸಿಐಇಡಿ ( ನಾಪತ್ತೆಯಾದ ನಾಗರಿಕರಿಗಾಗಿನ ಆಯೋಗ)ದ ಮುಂದೆ ಹೇಳಿಕೆ ನೀಡಲು ಹಾಜರಾಗಬೇಕಿತ್ತು. ಅದೇ ತಿಂಗಳ ಆರಂಭದಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಆಕೆ ಭಾರತೀಯ ಹೈಕಮಿಶನರ್‌ರನ್ನು ಭೇಟಿಯಾಗಿದ್ದರು.

ಝೀನತ್ ಶಹಝಾದಿಯವರ ಕಣ್ಮರೆ ಪ್ರಕರಣವು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬಲವಂತದ ನಾಪತ್ತೆ ಪ್ರಕರಣಗಳ ಬಗ್ಗೆ ಬೆಳಕು ಚೆಲ್ಲು ತ್ತದೆ. ನಾಗರಿಕರ ನಾಪತ್ತೆಯ ನೂರಾರು ಪ್ರಕರಣಗಳು ಬಗೆಹರಿಯದೆ ಉಳಿದಿವೆ ಹಾಗೂ ಜನತೆಯ ವಿರುದ್ಧ ಯಾವ ರೀತಿಯಲ್ಲಿ ಈ ಕ್ರೂರ ಪದ್ಧತಿಯನ್ನು ನಡೆಸಿಕೊಂಡು ಬರಲಾಗುತ್ತಿದೆಯೆಂಬುದನ್ನು ಸೂಚಿಸುತ್ತದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ದಕ್ಷಿಣ ಏಶ್ಯ ವಿಭಾಗದ ನಿರ್ದೇಶಕ ಚಂಪಾ ಪಟೇಲ್ ಹೇಳುತ್ತಾರೆ.

 ಝೀನತ್ ಅವರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಇಡಿ (ಬಲವಂತದ ನಾಪತ್ತೆಗೊಳಗಾದ ನಾಗರಿಕರಿಗಾಗಿನ ಆಯೋಗ) ಪ್ರಕಾರ ಇಂತಹ 3 ಸಾವಿರ ಪ್ರಕರಣಗಳ ಪೈಕಿ 1401 ಪ್ರಕರಣಗಳು ಇನ್ನೂ ತನಿಖೆಗೆ ಬಾಕಿಯಿವೆ. ಪ್ರತಿ ವರ್ಷವೂ ಇಂತಹ ನಾಪತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ವರ್ಷ ಈ ಪಟ್ಟಿಗೆ ಇನ್ನೂ 728 ಮಂದಿ ಸೇರ್ಪಡೆಗೊಂಡಿದ್ದಾರೆ, ಇದು ಸಿಐಇಡಿ ಅಸ್ತಿತ್ವಕ್ಕೆ ಬಂದ ಆನಂತರದ ವರ್ಷಗಳಲ್ಲೇ ಅತ್ಯಧಿಕವಾದುದಾಗಿದೆ. ಇವರ ಪೈಕಿ ಬಹುತೇಕ ಮಂದಿ ಬಲೂಚಿಸ್ತಾನದಿಂದ ಅಪಹೃತರಾದವರು. 2015ರಲ್ಲಿ ಇಂತಹ 649 ಪ್ರಕರಣಗಳು ವರದಿಯಾಗಿದ್ದವು.

 ಪಾಕಿಸ್ತಾನದಲ್ಲಿ ಪತ್ರಕರ್ತರು ಸಶಸ್ತ್ರ ಪಡೆಗಳಿಂದ ತಮ್ಮ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಹಾಗೂ ದೈಹಿಕ ಸುರಕ್ಷತೆ ಮೇಲೆ ಗಂಭೀರವಾದ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಪತ್ರಕರ್ತರನ್ನು ರಕ್ಷಿಸುವುದು ಹಾಗೂ ಅವರ ಹಕ್ಕುಗಳನ್ನು ಉಲ್ಲಂಘಿಸುವುದಕ್ಕೆ ಕಾರಣರಾಗುವವರನ್ನು ಶಿಕ್ಷಿಸುವುದು ಸರಕಾರದ ಕರ್ತವ್ಯವಾಗಿದೆ ಎಂದು ಪಟೇಲ್ ಹೇಳುತ್ತಾರೆ.

ಝೀನತ್ ಅವರ ನಾಪತ್ತೆ ಪ್ರಕರಣವು ಆಕೆಯ ಕುಟುಂಬಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. 2016ರ ಮಾರ್ಚ್‌ನಲ್ಲಿ ಆಕೆಯ ಹದಿಹರೆಯದ ಸಹೋದರ ಸದ್ದಾಂ, ತನ್ನ ಸೋದರಿಯ ಅಗಲಿಕೆಯ ನೋವನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದ.

ಬಲವಂತದಿಂದ ನಾಪತ್ತೆಯಾದ ಎಲ್ಲಾ ವ್ಯಕ್ತಿಗಳನ್ನು ರಕ್ಷಣೆಗಾಗಿನ ಅಂತಾರಾಷ್ಟ್ರೀಯ ಒಡಂಬಡಿಕೆಗೆ ಪಾಕಿಸ್ತಾನವು ಸಹಿಹಾಕಬೇಕು. ಪಾಕಿಸ್ತಾನವು ತಾನೊಂದು ಆಧುನಿಕ, ಹಕ್ಕುಗಳನ್ನು ಗೌರವಿಸುವ ರಾಷ್ಟ್ರವಾಗಲು ಬಯಸುವುದಾದರೆ, ಅದು ತನ್ನ ಬಲವಂತದ ನಾಪತ್ತೆ ಪ್ರಕರಣಗಳ ಕೊಳಕು ಇತಿಹಾಸದಿಂದ ಹೊರಬರಬೇಕು ಹಾಗೂ ಈಗಲೂ ಕಣ್ಮರೆಯಾಗಿ ಉಳಿದಿರುವ ಸಾವಿರಾರು ಮಂದಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ನೆರವಾಗಬೇಕು ಎಂದು ಪಟೇಲ್ ಆಗ್ರಹಿಸಿದ್ದಾರೆ.

ಪಾಕ್ ಜೈಲುಗಳಲ್ಲಿ ಮೃತಪಟ್ಟ ಭಾರತೀಯರು

ಕೃಪಾಲ್‌ಸಿಂಗ್

 ಗೂಢಚರ್ಯೆ ಆರೋಪದಲ್ಲಿ ಸುಮಾರು 25 ವರ್ಷಗಳಿಂದ ಕೋಟ್ ಜೈಲಿನಲ್ಲಿ ಕೊಳೆಯುತ್ತಿದ್ದರು. 1992ರಲ್ಲಿ ವಾಘಾ ಗಡಿಯ ಮೂಲಕ ಪಂಜಾಬ್‌ನಿಂದ ಪಾಕಿಸ್ತಾನವನ್ನು ದಾಟುತ್ತಿದ್ದಾಗ ಅವರನ್ನು ಬಂಧನವಾಗಿತ್ತೆನ್ನಲಾಗಿದೆ.ತರುವಾಯ ಅವರ ವಿರುದ್ಧ ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಗಲ್ಲುಶಿಕ್ಷೆಯನ್ನು ವಿಧಿಸಲಾಗಿತ್ತು. ಆನಂತರ ಲಾಹೋರ್ ಹೈಕೋರ್ಟ್ ಬಾಂಬ್ ಸ್ಫೋಟದ ಆರೋಪಗಳಿಂದ ಅವರನ್ನು ದೋಷಮುಕ್ತಗೊಳಿಸಿದರೂ ಕೆಲವು ಅಜ್ಞಾತ ಕಾರಣಗಳಿಗಾಗಿ ಅವರ ಮರಣದಂಡನೆಯನ್ನು ರದ್ದುಪಡಿಸಲಾಗಿರಲಿಲ್ಲ. ಎಪ್ರಿಲ್ 2016ರಲ್ಲಿ ಹೃದಯ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಕೃಪಾಲ್ ಅಲ್ಲೇ ಕೊನೆಯುಸಿರೆಳೆದರು.

ಕಿಶೋರ್ ಭಗವಾನ್

 ಪಾಕ್‌ಗೆ ಸೇರಿದ ಸಾಗರಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಇತರ ಮೀನುಗಾರರ ಜೊತೆ ಬಂಧಿತನಾಗಿದ್ದ ಭಾರತೀಯ ಮೀನುಗಾರ ಕಿಶೋರ್ ಭಗವಾನ್, 2014ರ ಫೆಬ್ರವರಿಯಲ್ಲಿ ಕರಾಚಿಯ ಲಾಂಢಿ ಜೈಲಿನಲ್ಲಿ ಸಾವನ್ನಪ್ಪಿದ್ದ. ಆತನ ಸಾವಿಗೆ ಕಾರಣ ಈವರೆಗೆ ದೃಢಪಟ್ಟಿಲ್ಲ. 2013ರ ಫೆಬ್ರವರಿಯಲ್ಲಿ ಕಿಶೋರ್ ಪಾಕ್ ಜೈಲಿನಿಂದ ತಪ್ಪಿಸಿಕೊಂಡಿದ್ದ. 10 ತಿಂಗಳುಗಳ ಶೋಧ ಕಾರ್ಯಾಚರಣೆಯ ಆನಂತರ ಆತನನ್ನು ಡಿಸೆಂಬರ್‌ನಲ್ಲಿ ಕರಾಚಿಯ ಪಿಐಬಿ ಕಾಲನಿಯಿಂದ ಪೊಲೀಸರು ಬಂಧಿಸಿದ್ದರು.

ಸರಬ್‌ಜಿತ್‌ಸಿಂಗ್

ಮೂಲತಃ ಪಂಜಾಬ್‌ನ ತರಣ್‌ತರಣ್ ಜಿಲ್ಲೆಯ ಬಿಖ್‌ವಿಂಡ್ ಗ್ರಾಮದ ನಿವಾಸಿಯಾದ ಸರಬ್‌ಜಿತ್ 1990ರಲ್ಲಿ 14 ಮಂದಿಯನ್ನು ಬಲಿತೆಗೆದುಕೊಂಡ ಸರಣಿ ಬಾಂಬ್‌ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿದ್ದ ಆರೋಪದಲ್ಲಿ ಜೈಲು ಶಿಕ್ಷೆಗೊಳಗಾಗಿದ್ದರು. 2013ರಲ್ಲಿ ಸಾವನ್ನಪ್ಪಿದ ಅವರು ಪಾಕ್ ಜೈಲುಗಳಲ್ಲಿ ಒಟ್ಟು 22 ವರ್ಷಗಳನ್ನು ಕಳೆದಿದ್ದರು. ಕೋಟ್ ಲಾಖ್‌ಪತ್ ಜೈಲಿನಲ್ಲಿ ಇರಿಸಲಾಗಿದ್ದ ಸರಬ್‌ಜಿತ್‌ರನ್ನು 2013ರ ಎಪ್ರಿಲ್ 26ರಂದು ಸಹಕೈದಿಗಳು ಬರ್ಬರವಾಗಿ ಥಳಿಸಿದ್ದರು. ಗಂಭೀರ ಗಾಯಗಳೊಂದಿಗೆ ಲಾಹೋರ್‌ನ ಅವರು ಒಂದು ವಾರದ ಬಳಿಕ ಕೊನೆಯುಸಿರೆಳೆದಿದ್ದರು. ಆನಂತರ ಅವರ ಮೃತದೇಹವನ್ನು ಭಾರತಕ್ಕೆ ತರಲಾಗಿತ್ತು.

ಝಾಕಿರ್ ಮುಮ್ತಾಝ್

ಲಾಹೋರ್ ಜೈಲಿನಲ್ಲಿ ಇರಿಸಲಾಗಿದ್ದ ಝಕೀರ್ ಹೃದಯದ ವೈಫಲ್ಯದಿಂದಾಗಿ ಕೊನೆಯುಸಿರೆಳೆದಿದ್ದರು. 2011ರ ಆಗಸ್ಟ್ 3ರಂದು ಅಕ್ರಮವಾಗಿ ಗಡಿದಾಟಿದ್ದಕ್ಕಾಗಿ ಅವರು ಬಂಧಿಸಲ್ಪಟ್ಟಿದ್ದರು. ಲಾಹೋರ್ ಜೈಲಿಗೆ ಕಳುಹಿಸುವ ಮುನ್ನ ಅವರನ್ನು ಶೇಖಾಪುರದ ಕಾರಾಗೃಹದಲ್ಲಿರಿಸಲಾಗಿತ್ತು.

ಚಮೇಲ್ ಸಿಂಗ್

ಕೋಟ್ ಲಾಖ್‌ಪತ್ ಜೈಲಿನಲ್ಲಿ ಜೈಲು ಸಿಬ್ಬಂದಿಯಿಂದ ಚಿತ್ರಹಿಂಸೆಗೊಳಗಾದ ಅವರು 2013ರಲ್ಲಿ ಸಾವನ್ನಪ್ಪಿದ್ದರು. ಮೂಳೆ ಮುರಿತ ಸೇರಿದಂತೆ ಅವರ ದೇಹದ ಮೇಲೆ ನಾಲ್ಕು ಗುರುತರವಾದ ಗಾಯಗಳಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿತ್ತು. 60 ವರ್ಷ ವಯಸ್ಸಿನ ಚಮೇಲ್‌ಸಿಂಗ್ ಜಮ್ಮು ಜಿಲ್ಲೆಯವರು. ಪಾಕಿಸ್ತಾನದಲ್ಲಿ ಗೂಢಚರ್ಯೆ ನಡೆಸಿದ ಆರೋಪದಲ್ಲಿ ಚಮೇಲ್‌ಸಿಂಗ್ 2008ರಲ್ಲಿ ಬಂಧಿಸಲ್ಪಟ್ಟು, ದೋಷಿಯೆಂದು ತೀರ್ಮಾನಿಸಲ್ಪಟ್ಟಿದ್ದರು.

1971ರ ಯುದ್ಧದಲ್ಲಿ ಕಣ್ಮರೆಯಾದ ಭಾರತೀಯ ಯೋಧರು ಎಲ್ಲಿ?

  1971ರ ಭಾರತ-ಪಾಕ್ ಯುದ್ಧದಲ್ಲಿ ಭಾರತ ಸೇನೆ ಹಾಗೂ ವಾಯುಪಡೆಗೆ ಸೇರಿದ ಕನಿಷ್ಠ 54 ಸೈನಿಕರು ಕಾರ್ಯಾಚರಣೆಯ ವೇಳೆ ನಾಪತ್ತೆಯಾಗಿದ್ದಾರೆಂದು ಪಟ್ಟಿ ಮಾಡಲಾಗಿದೆ. ಆದರೆ ಅವರು ಜೀವಂತವಾಗಿದ್ದು, ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ ಬಂಧಿತರಾಗಿದ್ದಾರೆಂದು ಹಲವರು ನಂಬಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಯುದ್ಧದ ಕೊನೆಯಲ್ಲಿ ಸೆರೆಸಿಕ್ಕ 90 ಸಾವಿರ ಪಾಕ್ ಯೋಧರನ್ನು ಸಿಮ್ಲಾ ಒಪ್ಪಂದದ ಅಂಗವಾಗಿ ಬಂಧಮುಕ್ತಗೊಳಿಸಲಾಗಿದೆ.

  1989ರವರೆಗೂ ಪಾಕಿಸ್ತಾನವು ಭಾರತೀಯ ಸೇನಾಕೈದಿಗಳು ತನ್ನ ಜೈಲಿನಲ್ಲಿರುವುದನ್ನು ನಿರಾಕರಿಸುತ್ತಲೇ ಬಂದಿತ್ತು. ಬೆನಝೀರ್ ಭುಟ್ಟೊ ಪ್ರಧಾನಿಯಾಗಿದ್ದಾಗ, ಪಾಕ್‌ಗೆ ಭೇಟಿ ನೀಡಿದ ಹೊಸದಿಲ್ಲಿಯ ಅಧಿಕಾರಿಗಳ ಜೊತೆ, ಭಾರತೀಯ ಸೇನಾಕೈದಿಗಳು ಜೈಲಿನಲ್ಲಿರುವುದನ್ನು ತಿಳಿಸಿದ್ದರು. ಅಧ್ಯಕ್ಷ ಮುಶರ್ರಫ್‌ರ ಆಡಳಿತದ ವೇಳೆ ಇದನ್ನು ನಿರಾಕರಿಸಲಾಗಿತ್ತು.ಯುದ್ಧ ಕೈದಿಗಳ ಬಂಧುಗಳನ್ನು ಒಳಗೊಂಡ ನಿಯೋಗವೊಂದು ಮುಲ್ತಾನ್, ಲಾಹೋರ್, ಸುಕ್ಕೂರ್, ಸಾಹಿವಾಲ್, ಫೈಸಲಾಬಾದ್, ಮಿಯಾನ್‌ವಾಲಿ, ರಾವಲ್ಪಿಂಡಿ, ಸ್ವಾಬಿ ಹಾಗೂ ದರ್ಗಾಯಿಗಳಲ್ಲಿರುವ ಜೈಲುಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗಿತ್ತು. ಆದರೆ ಇದೊಂದು ಪೂರ್ವಯೋಜಿತ ಪ್ರವಾಸವಾದ ಕಾರಣ, ಒಬ್ಬನೇ ಒಬ್ಬ ಭಾರತೀಯ ಯುದ್ಧ ಕೈದಿ ಪತ್ತೆಯಾಗಲಿಲ್ಲ. ಆದರೆ ಕೆಲವು ಜೈಲುಗಳ ಕಾವಲುಗಾರರು ಕೆಲವು ಭಾರತೀಯ ಯೋಧರು ಜೀವಂತವಿರುವುದನ್ನು ಖಾಸಗಿಯಾಗಿ ಒಪ್ಪಿಕೊಂಡಿದ್ದಾರೆಂದು ಪಾಕಿಸ್ತಾನದ ಕಾರಾಗೃಹಗಳಿಗೆ ಭೇಟಿ ನೀಡುವ ಅವಕಾಶ ದೊರೆತ ಭಾರತೀಯ ಕುಟುಂಬಗಳು ಹೇಳಿಕೊಂಡಿವೆ.

Writer - ನೈಲಾ ಇನಾಯತ್

contributor

Editor - ನೈಲಾ ಇನಾಯತ್

contributor

Similar News