ಚೆನ್ನೈ ತೈಲ ಸೋರಿಕೆ ಪ್ರಕರಣ ಕಲಿಸಿದ ಪಾಠ!

Update: 2017-02-11 16:44 GMT

ಬಂಗಾಳಕೊಲ್ಲಿಯಲ್ಲಿ ಹಲವಾರು ಟನ್‌ಗಳಷ್ಟು ತೈಲ ಸೋರಿಕೆಯಾದ ವಾರದ ಆನಂತರವೂ, ಬಂಡೆಗಲ್ಲುಗಳಿಂದಾವೃತವಾದ ಈ ಕಡಲಕಿನಾರೆಯಲ್ಲಿ ತೈಲದ ರಾಶಿ ತೇಲುತ್ತಿದ್ದು, ಇಡೀ ಪ್ರದೇಶ ಕಪ್ಪು ಕೊಳದಂತೆ ಕಾಣುತ್ತಿತ್ತು. ಮಲಿನಗೊಂಡ ನೀರನ್ನು ಸ್ವಚ್ಛಗೊಳಿಸಲು ಭಾರೀ ದೊಡ್ಡ ಹೋರಾಟವೇ ಮುಂದುವರಿದಿತ್ತು. ವಿವಿಧ ಸರಕಾರಿ ಇಲಾಖೆಗಳ ಸಿಬ್ಬಂದಿ, ಮೀನುಗಾರರು, ಸರಕಾರೇತರ ಸಂಘಟನೆಗಳ ಕಾರ್ಯಕರ್ತರು ಹಾಗೂ ಇತರ ಸ್ವಯಂಸೇವಕರು, ಬಕೆಟ್‌ಗಳನ್ನು ಹಿಡಿದುಕೊಂಡು, ತೈಲದ ಮಡ್ಡಿಯನ್ನು ತೆರವುಗೊಳಿಸಲು ಹರಸಾಹಸ ನಡೆಸುತ್ತಿದ್ದರು.

ಯಂತ್ರಗಳ ಕೊರತೆಯಿಂದ ಬಸವಳಿದ ಸ್ವಚ್ಛತಾ ಕಾರ್ಯ

ಅಂದು ಶುಕ್ರವಾರ ಮಧ್ಯಾಹ್ನ ಸುಮಾರು 3:00 ಗಂಟೆಯ ಸಮಯ. ಉತ್ತರ ಚೆನ್ನೈನ ತಿರುವೊಟ್ರಿಯೂರ್ ಬೀಚ್‌ನ ಜಾರುಬಂಡೆಗಳ ಸಮೀಪ ಯುವಕನೊಬ್ಬ ಮೊಣಕಾಲವರೆಗೆ ತೇಲುತ್ತಿದ್ದ ಕಪ್ಪಾದ ಹಾಗೂ ಸ್ನಿಗ್ಧವಾದ ದ್ರಾವಣದಿಂದ ಮಿಶ್ರಿತವಾದ ಕಡಲನೀರಿನಲ್ಲಿ ನಿಂತುಕೊಂಡಿದ್ದ. ಆತನ ಬರಿಗಾಲುಗಳು ಹಾಗೂ ಅಂಗೈಗಳಿಗೆ ಕಪ್ಪಾದ ಹಾಗೂ ಸ್ನಿಗ್ಧವಾದ ವಸ್ತುವೊಂದು ಅಂಟಿಕೊಂಡಿತ್ತು. ಆತ ಸಣ್ಣ ಬಕೆಟೊಂದನ್ನು ಹಿಡಿದುಕೊಂಡು, ಎಣ್ಣೆಯ ಮಡ್ಡಿಯನ್ನು ಸಂಗ್ರಹಿಸುತ್ತಿದ್ದ. ಆನಂತರ ಅದನ್ನು ಅಲ್ಲಿ ಉದ್ದವಾಗಿ ಸಾಲುಗಟ್ಟಿ ನಿಂತಿದ್ದ ಸ್ವಯಂಸೇವಕರ ಸರಪಳಿಗೆ ಹಸ್ತಾಂತರಿಸಿದ. ಕಡಲ ತೀರದಲ್ಲಿ ಸಾಲುಸಾಲಾಗಿ ನಿಲ್ಲಿಸಿದ್ದ ನೀರಿನ ಡ್ರಮ್‌ಗಳಲ್ಲಿ ಅದನ್ನು ತುಂಬಿ ಸಲಾಯಿತು.

ಬಂಗಾಳಕೊಲ್ಲಿಯಲ್ಲಿ ಹಲವಾರು ಟನ್‌ಗಳಷ್ಟು ತೈಲ ಸೋರಿಕೆಯಾದ ವಾರದ ಆನಂತರವೂ, ಬಂಡೆಗಲ್ಲುಗಳಿಂದಾವೃತವಾದ ಈ ಕಡಲಕಿನಾರೆಯಲ್ಲಿ ತೈಲದ ರಾಶಿ ತೇಲುತ್ತಿದ್ದು, ಇಡೀ ಪ್ರದೇಶ ಕಪ್ಪು ಕೊಳದಂತೆ ಕಾಣುತ್ತಿತ್ತು. ಮಲಿನಗೊಂಡ ನೀರನ್ನು ಸ್ವಚ್ಛಗೊಳಿಸಲು ಭಾರೀ ದೊಡ್ಡ ಹೋರಾಟವೇ ಮುಂದುವರಿದಿತ್ತು. ವಿವಿಧ ಸರಕಾರಿ ಇಲಾಖೆಗಳ ಸಿಬ್ಬಂದಿ, ಮೀನುಗಾರರು, ಸರಕಾರೇತರ ಸಂಘಟನೆಗಳ ಕಾರ್ಯಕರ್ತರು ಹಾಗೂ ಇತರ ಸ್ವಯಂಸೇವಕರು, ಬಕೆಟ್‌ಗಳನ್ನು ಹಿಡಿದುಕೊಂಡು, ತೈಲದ ಮಡ್ಡಿಯನ್ನು ತೆರವುಗೊಳಿಸಲು ಹರಸಾಹಸ ನಡೆಸುತ್ತಿದ್ದರು.

ಶ್ರಮದಾನದಿಂದಲೇ ನಾವು 70 ಟನ್‌ಗೂ ಅಧಿಕ ತೈಲವನ್ನು ತೆರವುಗೊಳಿಸಿದ್ದೇವೆ ಎಂದು ತಿರುವೊಟ್ರಿಯೂರ್ ಬೀಚ್‌ನಲ್ಲಿ ನಡೆಯುವ ಸ್ವಚ್ಛತಾ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿರುವ ತಟರಕ್ಷಣಾ ದಳದ ಕಮಾಂಡಿಂಗ್ ಅಧಿಕಾರಿ ಪ್ರದೀಪ್ ಬಿ. ಮಂಡಲ್ ತಿಳಿಸಿದ್ದಾರೆ.

ಜನವರಿ 28ರ ಬೆಳ್ಳಂಬೆಳ್ಳಗೆ ಈ ಇಡೀ ಪ್ರಹಸನ ಆರಂಭಗೊಂಡಿದೆ. ಉತ್ತರ ಚೆನ್ನೈಯಲ್ಲಿರುವ ಕಾಮರಾಜಾರ್ ಬಂದರಿನ ಸಮೀಪ ಎರಡು ಹಡಗುಗಳು ಪರಸ್ಪರ ಡಿಕ್ಕಿ ಹೊಡೆದಿದ್ದವು. ಈ ಪೈಕಿ, ‘ಎಂಟಿ ಬಿಡಬ್ಲು ಮ್ಯಾಪಲ್’ ಎಂಬ ಹೆಸರಿನ ಹಡಗು, ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಸಾಗಿಸುತ್ತಿತ್ತು. ಇನ್ನೊಂದು ಹಡಗು ‘ಎಂಟಿ ಡಾನ್ ಕಾಂಚಿಪುರಂ’ನಲ್ಲಿದ್ದ ಹಲವಾರು ಟನ್‌ಗಳಷ್ಟು ತೈಲ ಲ್ಯುಬ್ರಿಕೆಂಟ್‌ಗಳು ಸಮುದ್ರಕ್ಕೆ ಚೆಲ್ಲಲ್ಪಟ್ಟವು. ಎಷ್ಟು ಪ್ರಮಾಣದಲ್ಲಿ ತೈಲ ಸೋರಿಕೆಯಾಗಿದೆಯೆಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ಶನಿವಾರ ಸಂಜೆಯ ಹೊತ್ತಿಗೆ ಸಮುದ್ರದ ಅಲೆಗಳು ಕಪ್ಪುಬಣ್ಣದ ತೈಲವನ್ನು ಕಲ್ಲುಬಂಡೆಗಳಿಂದಾವೃತವಾದ ಸಮುದ್ರ ಕಿನಾರೆಗೆ ತರುತ್ತಿದ್ದಂತೆಯೇ ಬಂದರಿನ ದಕ್ಷಿಣ ಭಾಗದ ವಸತಿಪ್ರದೇಶಗಳ ನಿವಾಸಿಗಳಿಗೆ ಬಲವಾದ ಹಾಗೂ ಉಸಿರುಗಟ್ಟಿಸುವಂತಹ ಎಣ್ಣೆಯ ಕಮಟುವಾಸನೆಯ ಅನುಭವವಾಯಿತು.

‘‘ಎಣ್ಣೆಯ ವಾಸನೆ ಎಷ್ಟು ಗಾಢವಾಗಿತ್ತೆಂದರೆ, ಕೆಲವು ದಿನಗಳವರೆಗೆ ನಮಗೆ ಉಸಿರಾಡುವುದೇ ಕಷ್ಟಕರವಾಗಿತ್ತು. ಕಾಮರಾಜಾರ್ ಬಂದರು ಇರುವ ಉತ್ತರ ಚೆನ್ನೈನ ಎನ್ನೋರ್‌ನಿಂದ, ದಕ್ಷಿಣದ ಮಹಾಬಲಿಪುರಂವರೆಗಿನ ಕರಾವಳಿಯಲ್ಲಿ ತೈಲವು ಕರಾವಳಿಯಲ್ಲಿ 72 ಕಿ.ಮೀ. ಉದ್ದಕ್ಕೂ ಹರಡಿರುವುದನ್ನು ಇತ್ತೀಚಿನ ವರದಿಗಳು ದೃಢಪಡಿಸಿವೆ.

 ಸಮುದ್ರದಲ್ಲಿ ತೈಲ ಸೋರಿಕೆಯಿಂದಾಗಿ ಕಳೆದ ಒಂದು ವಾರದಿಂದ ಮೀನುಗಾರಿಕಾ ಕುಟುಂಬಗಳ ಜೀವನೋಪಾಯ ಚಟುವಟಿಕೆಗಳು ಬಾಧಿತವಾಗಿವೆ. ಸೋರಿಕೆಯಾಗಿರುವ ಕಚ್ಚಾತೈಲದಿಂದಾಗಿ ತಮ್ಮ ದೋಣಿಗೆ ಹಾನಿಯಾಗಬಹುದೆಂಬ ಭೀತಿಯಿಂದ ಅವರು ತಮ್ಮ ನಾವೆಗಳನ್ನು ಕಡಲಿಗಿಳಿಸಲೂ ಅಂಜುತ್ತಿದ್ದಾರೆ. ಸಮುದ್ರಕ್ಕೆ ತೆರಳುವ ಧೈರ್ಯ ಮಾಡಿರುವ ಮೀನುಗಾರರಿಗೆ ತಾವು ಹಿಡಿದ ಮೀನುಗಳು ಮಾರಾಟವಾಗುವುದೇ ಕಷ್ಟಕರವಾಗಿದೆ. ‘‘ತೈಲ ಸೋರಿಕೆಗೂ, ನಮ್ಮ ಮೀನಿನ ಗುಣಮಟ್ಟಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಮೀನಿಗೆ ಗಿರಾಕಿಗಳು ದೊರೆಯುವುದೇ ದುಸ್ತರವಾಗಿದೆ. ಮೀನು ಮಾರಾಟವಾಗಬೇಕಾದರೆ, ಮೀನಿನ ಬೆಲೆಯನ್ನು ಗಣನೀಯವಾಗಿ ಇಳಿಸಬೇಕಾದ ಪರಿಸ್ಥಿತಿಯಿದೆ’’ ಎಂದು ಸ್ಥಳೀಯ ಮೀನುಗಾರರೊಬ್ಬರು ವಿಷಾದದಿಂದ ಹೇಳುತ್ತಾರೆ.

 ತೈಲ ಸೋರಿಕೆಯು, ಕರಾವಳಿಯುದ್ದಕ್ಕೂ ಇರುವ ಜಲಜೀವಿಗಳನ್ನು ಅಪಾಯದಂಚಿಗೆ ತಳ್ಳಿದೆ. ಮೀನಿನ ಗುಣಮಟ್ಟದ ಮೇಲೆ ತಕ್ಷಣಕ್ಕೆ ಯಾವುದೇ ದುಷ್ಪರಿಣಾಮವಾಗಿಲ್ಲವಾದರೂ, ದೀರ್ಘಾವಧಿಗೆ ಭಾರೀ ದೊಡ್ಡ ವಿಪತ್ತು ಎದುರಾಗುವ ಭೀತಿಯಿದೆ.

ಮೀನುಗಳು ಮರಿಯಿಡುವ ಸಂದರ್ಭದಲ್ಲಿ ಅವು ನದಿಯು ಸಮುದ್ರವನ್ನು ಸೇರುವ ಸ್ಥಳಕ್ಕೆ ಧಾವಿಸಿಬರುತ್ತವೆ. ಈಗ ಈ ಪ್ರದೇಶವನ್ನು ತೈಲವು ದೊಡ್ಡ ಪ್ರಮಾಣದಲ್ಲಿ ಆವರಿಸಿರುವುದರಿಂದ, ಮೀನುಗಳ ಸಂತಾನೋತ್ಪತ್ತಿಯ ಮೇಲೆ ತೀವ್ರ ಪರಿಣಾಮ ಬಾಧಿಸುವ ಸಾಧ್ಯತೆಯಿದೆ.

ಫೆಬ್ರವರಿ ತಿಂಗಳಲ್ಲಿ ಚೆನ್ನೈ ಕರಾವಳಿಯ ಸುತ್ತಲೂ ಅಲಿವ್ ರಿಡ್ಲೆ ತಳಿಯ ಆಮೆಗಳು ಗೂಡುಕಟ್ಟಲು ಆಗಮಿಸುತ್ತವೆ. ಈಗಾಗಲೇ ವಿನಾಶದ ಭೀತಿಯನ್ನೆದುರಿಸುತ್ತಿರುವ ಈ ವಿಶಿಷ್ಟವಾದ ಆಮೆ ತಳಿಗೆ, ತೈಲ ಸೋರಿಕೆಯು ಅಪಾಯಕಾರಿಯಾಗಲಿದೆ ಎಂದು ವಿದ್ಯಾರ್ಥಿಗಳ ಕಡಲಾಮೆ ಸಂರಕ್ಷಣೆ ಜಾಲದ ಸಮನ್ವಯಕಾರಿಣಿಯಾಗಿರುವ ಅಖಿಲಾ ಬಾಲು ಹೇಳುತ್ತಾರೆ.

ಆದಾಗ್ಯೂ, ಸದ್ಯಕ್ಕೆ ತೈಲ ಸೋರಿಕೆಯಿಂದ ಕಡಲಾಮೆಗಳ ಮೇಲೆ ಯಾವುದೇ ಪರಿಣಾಮವಾಗಿಲ್ಲ. ಆದರೆ ದೀರ್ಘಾವಧಿಗೆ ತೈಲ ಸೋರಿಕೆಯು ಅವುಗಳಿಗೆ ಮಾರಣಾಂತಿಕವಾಗಲಿದೆ. ತೈಲವು ದಡದಲ್ಲಿರುವ ಸಮುದ್ರಹುಲ್ಲು ಹಾಗೂ ತೇಲುವ ಸಮುದ್ರಕಳೆಗಳಲ್ಲಿ ಸಂಗ್ರಹಗೊಳ್ಳಲಿದ್ದು, ಇಲ್ಲಿ ಮೊಟ್ಟೆಗಳಿಗೆ ಕಾವುಣಿಸುವ ಹೆಣ್ಣಾಮೆಗಳು ಹಾಗೂ ಮರಿಯಾಮೆಗಳನ್ನು ಉಸಿರುಗಟ್ಟಿಸುವಂತೆ ಮಾಡುತ್ತವೆಂದು ಆಕೆ ಹೇಳುತ್ತಾರೆ. ಜನವರಿ ತಿಂಗಳಲ್ಲಿ ಸುಮಾರು 160 ಸತ್ತ ಕಡಲಾಮೆಗಳ ಕಳೇಬರಗಳು ತೀರಕ್ಕೆ ಬಂದು ಬಿದ್ದಿದ್ದವು ಎಂದವರು ಹೇಳುತ್ತಾರೆ.

  ತೈಲ ಸೋರಿಕೆಯಿಂದಾಗಿ ಕಡಲಾಮೆಗಳು ಹಾಗೂ ಮೀನು ಮಾತ್ರವಲ್ಲ ಕರಾವಳಿಯ ಇತರ ಜೀವಜಾಲಗಳು ಕೂಡ ಬಾಧಿತವಾಗಿವೆ ಎಂದಾಕೆ ಹೇಳುತ್ತಾರೆ. ತೈಲದಿಂದ ಆವೃತವಾದ ಹಲವಾರು ಏಡಿಗಳ ಕಳೇಬರಗಳು ಕರಾವಳಿಗೆ ಬಂದು ಬಿದ್ದಿವೆ ಎಂದು ಬಾಲು ಹೇಳುತ್ತಾರೆ. ‘‘ಕಳೆದ ಕೆಲವು ದಿನಗಳಿಂದ ನಾವು ಹಲವಾರು ಏಡಿಗಳ ಕಳೇಬರಗಳನ್ನು ನಾವು ಕಂಡಿದ್ದೇವೆ. ತೈಲ ಹರಡುವಿಕೆಯು ಅಳಿವೆ ಪ್ರದೇಶದಲ್ಲಿ ಕಾಣಸಿಗುವ ಕಡಲಹಕ್ಕಿಗಳಿಗೂ ಹಾನಿಯುಂಟು ಮಾಡಲಿದೆ. ಒಂದು ವೇಳೆ ತೈಲವು ರೆಕ್ಕೆಗಳಿಗೆ ಅಂಟಿಕೊಂಡಿದ್ದರೆ, ಅವುಗಳ ಹಾರಾಟಕ್ಕೆ ತುಂಬಾ ಅಡ್ಡಿಯಾಗಲಿದೆಂದು ಬಾಲು ಆತಂಕ ವ್ಯಕ್ತಪಡಿಸಿದ್ದಾರೆ.

ಪರಿಸರ ಸಚಿವಾಲಯದ ಸೂಚನೆಯಂತೆ, ಕಳೆದ ಶುಕ್ರವಾರದಂದು ಧಾರಣಾಶೀಲ ಕರಾವಳಿ ನಿರ್ವಹಣೆಗಾಗಿನ ರಾಷ್ಟ್ರೀಯ ಕೇಂದ್ರದ ವಿಜ್ಞಾನಿಗಳ ತಂಡವೊಂದು ತೈಲ ಸೋರಿಕೆಯಿಂದಾದ ಹಾನಿಯ ಸಮೀಕ್ಷೆಗಾಗಿ ಭಾರತಿಯಾರ್ ನಗರಕ್ಕೆ ಭೇಟಿ ನೀಡಿತ್ತು ಹಾಗೂ ಸಾಮಾಜಿಕ, ಜೈವಿಕ ಹಾಗೂ ಭೌತಿಕ ಹಾನಿಯ ಕುರಿತು ವರದಿಯೊಂದನ್ನು ತಯಾರಿಸಿತ್ತು.

‘‘ಸೋರಿಕೆಯಾಗಿರುವ ತೈಲವು 25ಕಿ.ಮೀ.ವರೆಗೂ ಹರಡಿದೆಯೆಂದು ರಾಷ್ಟ್ರೀಯ ಧಾರಣಾಶೀಲ ಕರಾವಳಿ ನಿರ್ವಹಣಾ ಕೇಂದ್ರದ ವಿಜ್ಞಾನಿಯಾಗಿರುವ ಆಸಿರ್ ರಮೇಶ್ ತಿಳಿಸಿದ್ದಾರೆ. ‘‘ಪ್ರಸ್ತುತ ಈ ಪ್ರದೇಶದಲ್ಲಿನ ಮೀನನ್ನು ಸೇವಿಸುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ ತೈಲ ಸೋರಿಕೆಯಿಂದ ಪರಿಸರಕ್ಕೆ ದೊಡ್ಡ ಮಟ್ಟದ ಹಾನಿಯಾಗಿದೆ. ಪಾಚಿಯ ಹಾಸುಗಳು ಅಥವಾ ಅಳಿವೆ ಪ್ರದೇಶದ ಜೈವಿಕ ಪರಿಸ್ಥಿತಿಯಲ್ಲಿ ಭಾರೀ ಬದಲಾವಣೆಯಾಗಲಿದೆ. ಈ ಪ್ರದೇಶಗಳ ಪಾರಿಸಾರಿಕ ಹಾಗೂ ಆರ್ಥಿಕ ವೌಲ್ಯವು ಕುಸಿಯಲಿದೆಯೆಂದವರು ಹೇಳಿದ್ದಾರೆ.

ತೈಲ ಸೋರಿಕೆಯ ಮೊದಲ ದಿನದಂದು, ಕಾಮರಾಜಾರ್ ಬಂದರಿನ ಆಡಳಿತ ಮಂಡಳಿಯು ಹೇಳಿಕೆಯೊಂದನ್ನು ನೀಡಿ, ತೈಲ ಸೋರಿಕೆಯಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲವೆಂದು ತಿಳಿಸಿತ್ತು. ಆನಂತರ ಎರಡು ದಿನಗಳವರೆಗೆ ತೈಲ ಸೋರಿಕೆ ಹಾಗೂ ಉಂಟಾಗಿರುವ ಹಾನಿಯ ವ್ಯಾಪ್ತಿಯ ಬಗ್ಗೆ ಯಾವುದೇ ಮಾಹಿತಿಯಿರಲಿಲ್ಲ. ಮಂಗಳವಾರದಂದು, ಬಂದರು ಅಧಿಕಾರಿಗಳು ಹೇಳಿಕೆಯೊಂದನ್ನು ನೀಡಿ, ಹಡಗಿನಿಂದ ಒಂದು ಟನ್ ತೈಲ, ಕಡಲಿಗೆ ಚೆಲ್ಲಲ್ಪ್ಟಟ್ಟಿದೆಯೆಂದು ತಿಳಿಸಿದರು. ಆ ದಿನವೇ, ತಟರಕ್ಷಣಾ ದಳವು ಮತ್ತೊಂದು ಹೇಳಿಕೆ ನೀಡಿ, ಹಡಗಿನಿಂದ 20 ಟನ್ ತೈಲ ಸೋರಿರುವುದಾಗಿ ಹೇಳಿತು. ಹಡಗಿನಿಂದ ಕನಿಷ್ಠ 70 ಟನ್ ತೈಲ ಸೋರಿಕೆಯಾಗಿದೆಯೆಂದು ಇತ್ತೀಚಿನ ವರದಿಗಳು ತಿಳಿಸಿವೆ.

ಜನವರಿ 28ರಂದು ಎಂಟಿಡಾನ್ ಕಾಂಚಿಪುರಂ ಹಡಗು, ತನ್ನಲ್ಲಿರುವ ತೈಲ ಸಂಗ್ರಹವನ್ನು ಬಂದರಿನೊಳಗೆ ತ್ಯಜಿಸಲು ಅನುಮತಿಯನ್ನು ಕೋರಿತ್ತು. ಆದರೆ ಎರಡು ದಿನಗಳ ಕಾಲ ಅದಕ್ಕೆ ಅನುಮತಿ ನೀಡದಿದ್ದುದರಿಂದ ತೈಲ ಹರಡಿಬಿಟ್ಟಿತು.

ಶುಕ್ರವಾರದಂದು ಕಾಮರಾಜಾರ್ ಬಂದರು(ಕೆಪಿಎಲ್) ಹೇಳಿಕೆಯೊಂದನ್ನು ನೀಡಿ, ಸಮುದ್ರದಲ್ಲಿ ತೈಲ ಹರಡಿರುವುದಕ್ಕೆ ತಾನು ಕಾರಣನಲ್ಲವೆಂದು ಸ್ಪಷ್ಟೀಕರಣ ನೀಡಿತ್ತು. ಈ ಸಮಸ್ಯೆಯನ್ನು ನಿಭಾಯಿಸಲು ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಂಡಿರುವುದಾಗಿ ಅದು ತಿಳಿಸಿತ್ತು.

‘‘ಈ ಬಗ್ಗೆ ಕೆಪಿಎಲ್ ಸಕಾಲದಲ್ಲಿ ತಟರಕ್ಷಣಾ ಪಡೆಗೆ ಮಾಹಿತಿ ನೀಡಿತ್ತು ಹಾಗೂ ಅವರ ಹಡಗುಗಳು ಮತ್ತು ಹೆಲಿಕಾಪ್ಟರ್ ಜನವರಿ 28ರ ಬೆಳಗ್ಗೆ ಆಗಮಿಸಿದ್ದವು ಹಾಗೂ ಪರಿಸ್ಥಿತಿಯ ಮೇಲೆ ನಿರಂತರವಾದ ನಿಗಾವಿರಿಸಿದ್ದವು. ಒಂದೂವರೆ ದಿನದ ಬಳಿಕವಷ್ಟೇ ಕಡಲ ಕಿನಾರೆಯಲ್ಲಿ ತೈಲ ಸೋರಿಕೆ ಗಮನಕ್ಕೆ ಬಂದಿತು ಎಂದವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಆದರೆ ತೈಲ ಹರಡುವಿಕೆಯ ಕಾರಣಗಳನ್ನು ಕಂಡುಹಿಡಿಯಲು ಹಡಗುಗಾರಿಕೆ ಕುರಿತ ಮಹಾನಿರ್ದೇಶನಾಲಯವು ಈಗಾಗಲೇ ತನಿಖೆಯನ್ನು ಆರಂಭಿಸಿದೆಯೆಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ತೈಲ ಹರಡುವಿಕೆಯನ್ನು ನಿಭಾಯಿಸಲು ಬಂದರು ಮಂಡಳಿಯು ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ಮಾಹಿತಿ ಕೋರಿ ಕಾಮರಾಜಾರ್ ಬಂದರು ಮಂಡಳಿಗೆ ಪರಿಸರ ಸಚಿವಾಲಯವು ನೋಟಿಸ್ ಜಾರಿಗೊಳಿಸಿದೆ.

ತೈಲ ಹರಡುವಿಕೆಯನ್ನು ತಡೆಗಟ್ಟುವಲ್ಲಿ ವಿವಿಧ ಏಜೆನ್ಸಿಗಳಿಂದ ಕರ್ತವ್ಯ ಲೋಪವಾಗಿದೆಯಂದು ಸಾಮಾಜಿಕ ಕಾರ್ಯಕರ್ತ, ಪರಿಸರವಾದಿ ನಿತ್ಯಾನಂದ ಜಯರಾಮ್ ಹೇಳಿದ್ದಾರೆ. ಇದಕ್ಕಾಗಿ ಕೇವಲ ಕಾಮಾರಾಜಾರ್ ಬಂದರು ಮಂಡಳಿಯನ್ನಷ್ಟೇ ದೂರುವುದು ಸರಿಯಲ್ಲವೆಂದವರ ಅಭಿಪ್ರಾಯ. ತೈಲ ಸೋರಿಕೆಯಾದ ಬಳಿಕ ಪೊಲೀಸರು ತಕ್ಷಣವೇ ಪ್ರತಿಕ್ರಿಯಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ಹಾಗಾಗಲಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯು ಕಳೆದವಾರವಷ್ಟೇ ಬಾಯಿಬಿಟ್ಟಿತ್ತು. ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವು, ದಾಖಲೆ ಸಮಯದಲ್ಲಿ ಮಾಲಿನ್ಯ ಯೋಜನೆಗಳಿಗೆ ಅನುಮೋದನೆ ನೀಡುತ್ತಲೇ ಬಂದಿದೆ. ಅವರು ಯಾಕೆ ಈ ವಿಷಯದಲ್ಲಿ ಏನೂ ಮಾಡುತ್ತಿಲ್ಲ ಎಂದವರು ಪ್ರಶ್ನಿಸಿದ್ದಾರೆ.

ಸ್ವಚ್ಛತಾ ಸಮರ

ಕಲ್ಲುಬಂಡೆಗಳಿಂದಾವೃತವಾದ ತಿರುವೊಟ್ರಿಯೂರ್ ಬೀಚ್‌ನಲ್ಲಿ ಕಮಾಂಡರ್ ಮಂಡಲ್ ಅವರು ಚಾಕಚಕ್ಯತೆಯಿಂದ ಬಂಡೆಗಲ್ಲುಗಳನ್ನು ಏರುತ್ತಾ, ಇಳಿಯುತ್ತಾ ಸಮುದ್ರಕಿನಾರೆಯಲ್ಲಿ ಹರಡಿರುವ ತೈಲದ ಶುದ್ಧೀಕರಣ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಕಚ್ಚಾತೈಲವನ್ನು ತೆರವುಗೊಳಿಸುವ ಕಾರ್ಯಾಚರಣೆಯ ಗುತ್ತಿಗೆ ವಹಿಸಿರುವ ಖಾಸಗಿ ಕಂಟ್ರಾಕ್ಟರ್‌ಗಳಿಗೆ ಈಗಲೂ, ತಮ್ಮ ಕೆಲಸಕ್ಕೆ ಬೇಕಾದ ಸಮರ್ಪಕ ಉಪಕರಣಗಳಿಲ್ಲದೆ ಪರದಾಡುತ್ತಿರುವುದು ಅವರಿಗೆ ಅಸಮಾಧಾನವುಂಟು ಮಾಡಿದೆ. ಆರಂಭದಲ್ಲಿ, ಚದುರಿರುವ ತೈಲವನ್ನು ಹೀರಲು ದೊಡ್ಡ ಪಂಪೊಂದನ್ನು ಬಳಸಲಾಗಿತ್ತು. ಆದರೆ ಪೈಪ್ ಮೂಲಕ ಸರಾಗವಾಗಿ ಸಾಗುವುದಕ್ಕೆ ಆಗದಷ್ಟು ತೈಲವು ದಪ್ಪವಾಗಿತ್ತು. ಶುಕ್ರವಾರದಂದು ಖಾಸಗಿ ಕಂಪೆನಿಯೊಂದು ಸಮುದ್ರ ನೀರಿನ ಮೇಲ್ಮೈಗೆ ಮೋಟಾರ್‌ಯಂತ್ರವೊಂದನ್ನು ಬಳಸಿ, ತೈಲವನ್ನು ಸಂಗ್ರಹಿಸಲು ಪ್ರಯತ್ನಿಸಿತ್ತು. ಆದರೆ ಯಂತ್ರದ ಭಾಗವೊಂದು ಕೆಟ್ಟಿದ್ದರಿಂದ ಅದು ಕೂಡಾ ವಿಫಲವಾಯಿತು.

ಇಡೀ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನಾವು ವಿಭಿನ್ನ ಸಲಕರಣಗಳನ್ನು ಬಳಸಲು ಪ್ರಯತ್ನಿಸಿದೆವು. ಆದರೆ ಅವೆಲ್ಲವೂ ವಿಫಲಗೊಂಡವೆಂದು ಮಂಡಲ್ ಹೇಳುತ್ತಾರೆ. ‘‘ವಿಳಂಬ ಹೆಚ್ಚಾದಷ್ಟೂ, ತೈಲವು ಹೆಪ್ಪುಗಟ್ಟಿ, ಅದು ತಣ್ಣನೆಯ ಟಾರ್ ಆಗಿಬಿಡುವುದರಿಂದ, ಅದನ್ನು ತೆರವುಗೊಳಿಸುವುದು ತುಂಬಾ ಕಠಿಣವಾಗಲಿದೆ’’ ಎಂದವರು ಹೇಳುತ್ತಾರೆ.

ಭಾರತದಲ್ಲಿ ತೈಲ ಸೋರಿಕೆಯಾದ ಸಮುದ್ರಪ್ರದೇಶವನ್ನು ಸ್ವಚ್ಛಗೊಳಿಸಲು ಬಳಕೆಯಾಗುವ ಯಂತ್ರಗಳು, ಅಳವಿಲ್ಲದ ಜಲಪ್ರದೇಶಗಳಲ್ಲಿ ಬಳಸಲು ಯೋಗ್ಯವಾಗಿಲ್ಲ. ಹರಡಿರುವ ತೈಲ ದಪ್ಪಗಾಗುತ್ತಿರುವಂತೆಯೇ, ಹೆಚ್ಚಿನ ಸಂಖ್ಯೆಯ ಖಾಸಗಿ ಕಂಟ್ರಾಕ್ಟರರು, ಸ್ವಚ್ಛತೆಯ ಗುತ್ತಿಗೆ ತಮಗೆ ದೊರೆಯುವುದೆಂಬ ಆಶಾವಾದದೊಂದಿಗೆ, ತಮ್ಮ ಉಪಕರಣವನ್ನು ಪರೀಕ್ಷಿಸಲು ಮಂಡಲ್‌ರ ಅನುಮತಿಗಾಗಿ ಕಾಯುತ್ತಿದಾದರೆ. ‘ಎನ್‌ವಿರೊಫ್ಲುಯಿಡ್’ ಕಂಪೆನಿಯ ಮಾಲಕ ಚಂದ್ರಕಾಂತ್ ತಿವಾರಿ ಅವರಲ್ಲೊಬ್ಬರು.

‘‘ತೈಲ ಸೋರಿಕೆಯಿಂದ ಮಲಿನಗೊಂಡ ಪ್ರದೇಶವನ್ನು ಸ್ವಚ್ಛಗೊಳಿಸಲು ನಾವು ತೈಲರಾಶಿಯ ಮೇಲೆ ನಾವು ತಯಾರಿಸುವ ಜೈವಿಕ ಉತ್ಪನ್ನವೊಂದನ್ನು ಹರಡುತ್ತಿವೆ. ಈ ಉತ್ಪನ್ನವು ದಪ್ಪವಾದ ತೈಲ ಪದಾರ್ಥವನ್ನು ಒಡೆದುಹಾಕಿ, ಅದನ್ನು ತನ್ನಲ್ಲಿ ಹೀರಿಕೊಳ್ಳಲಿದೆ. ಇದನ್ನೀಗ ಪ್ರಯೋಗಿಸಲು ನಾವು ಕಾಯುತ್ತಿದ್ದೇವೆ’’ ಎಂದು ತಿವಾರಿ ಹೇಳುತ್ತಾರೆ.

ಈ ನಡುವೆ, ಕಚ್ಚಾ ತೈಲದ ಹರಡುವಿಕೆಯನ್ನು ನಿಯಂತ್ರಿಸಲು ಅಗಾಧವಾಗಿ ಶ್ರಮಿಸುತ್ತಿರುವ 1 ಸಾವಿರಕ್ಕೂ ಅಧಿಕ ಸ್ವಯಂಸೇವಕರ ಆರೋಗ್ಯಕ್ಕೂ ಅಪಾಯದ ಭೀತಿಯಿದೆ. ಕಚ್ಚಾ ತೈಲದ ಸಂಪರ್ಕದಿಂದ, ಚರ್ಮರೋಗ ಬರುವ ಸಾಧ್ಯತೆಯಿದೆ ಹಾಗೂ ಅದು ಕ್ಯಾನ್ಸರ್‌ಕಾರಕವೆಂದು ವರದಿಗಳು ಹೇಳಿವೆ.

ತೈಲ ತೆರವು ಕಾರ್ಯಾಚರಣೆಯಲ್ಲಿ ತೊಡಗಿರುವ ಸ್ವಯಂಸೇವಕರು ತಾಂತ್ರಿಕ ಅಡಚಣೆಗಳನ್ನು ಕೂಡಾ ಎದುರಿಸಿದ್ದಾರೆ. ತೆರವುಗೊಳಿಸಿದ ತೈಲವನ್ನು ತುಂಬಲಾದ ಕಂಟೈನರ್‌ಗಳು, ತೀವ್ರ ತಾಪಮಾನದಿಂದಾಗಿ ಒಡೆದುಹೋಗುತ್ತಿವೆಯೆಂದು ಈ ಸ್ವಚ್ಛತಾ ಕಾರ್ಯಾಚರಣೆಯಲ್ಲಿ ಸಕ್ರಿಯರಾಗಿರುವ ಪರಿಸರವಾದಿ ಎನ್‌ಜಿಓ ಸಂಘಟನೆ ‘ಗ್ರೀನ್‌ವಾರಿಯರ್ಸ್‌’ನ ಎಸ್.ನವನೀತನ್ ಹೇಳುತ್ತಾರೆ. ‘‘ಇಂತಹ ಕಂಟೈನರ್‌ಗಳು ನೀರನ್ನು ಸಾಗಿಸುವುದಕ್ಕೆ ಇವೆಯೇ ಹೊರತು, ದಪ್ಪವಾದ ಕಚ್ಚಾ ತೈಲಕ್ಕಲ್ಲ’’ ಎಂದವರು ಅಭಿಪ್ರಾಯಿಸುತ್ತಾರೆ.

ತೈಲವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಸಮನ್ವಯಗೊಳಿಸುವ ಜಿಲ್ಲಾಡಳಿತದ ನಿಯಂತ್ರಣದಲ್ಲಿ ಅಗತ್ಯವಿರುವ ಸಾಧನಗಳಿರುವ ಮಾದರಿ ವಿಪತ್ತು ಪ್ರಕ್ರಿಯಾ ತಂಡವಿರಬೇಕು. ‘‘ಆದರೆ ಇಲ್ಲೀಗ ಪ್ರತಿಯೊಬ್ಬರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಅತ್ಯಂತ ಕಡಿಮೆ ಮಟ್ಟದ ಸಮನ್ವಯತೆ ಕಂಡುಬರುತ್ತಿದೆ’’ ಎಂದವರು ಹೇಳುತ್ತಾರೆ.

Writer - ವಿನೀತಾ ಗೋವಿಂದ ರಾಜನ್

contributor

Editor - ವಿನೀತಾ ಗೋವಿಂದ ರಾಜನ್

contributor

Similar News