ಯುಎಇ ಮೃತದೇಹಗಳ ಸಾಗಣೆಗೆ ಸರಕಾರದಿಂದ ಸ್ಪಂದನೆ ಸಿಗಲಿ

Update: 2017-02-11 18:28 GMT

ಕುಟುಂಬವನ್ನು ಸಾಕುವ ಹೊಣೆ ಹೊತ್ತುಕೊಂಡು ತಾಯ್ನಡನ್ನು ತೊರೆದು ಯುಎಇಗೆ ಆಗಮಿಸುವವರ ಸಂಖ್ಯೆಯು ಪ್ರತಿದಿನ ಹೆಚ್ಚುತ್ತಲೇ ಇದೆ. ಈ ಪೈಕಿ ಕೆಲವರು ಇಲ್ಲಿಯೇ ಪ್ರಾಣತ್ಯಾಗ ಮಾಡುತ್ತಾರೆ. ವಾರಸುದಾರರು ಇಲ್ಲದ ಕಾರಣ ಹಾಗೂ ಕಾನೂನಿನ ತೊಡಕಿನ ಹಿನ್ನೆಲೆಯಲ್ಲಿ ಹಲವು ಪ್ರವಾಸಿಗರ ಮೃತದೇಹಗಳು ಇತ್ತೀಚಿನವರೆಗೂ ಇಲ್ಲಿಯ ಶವಾಗಾರದಲ್ಲಿ ಹಾಗೆಯೇ ಉಳಿದು ಕೊಂಡಿದ್ದವು. ಯುಎಇ ಅಧಿಕಾರಿಗಳಿಗೆ ಇದು ತೀವ್ರ ತಲೆನೋವಾಗಿ ಪರಿಣಮಿಸಿದ್ದವು. ಕೊನೆಗೆ ಕೆಲವು ಮೃತದೇಹಗಳನ್ನು ಸಂಬಂಧಪಟ್ಟ ಊರುಗಳಿಗೆ ಕಳುಹಿಸಿಕೊಡುವ ಹಾಗೂ ಕೆಲವು ಮೃತದೇಹಗಳನ್ನು ಇಲ್ಲಿಯೇ ಸಂಸ್ಕರಿಸುವಂತಹ ವ್ಯವಸ್ಥೆಗಳನ್ನು ಮಾಡಲಾಗಿದೆ.

ಕೋಲ್ಕತಾದ ಬಿಸ್ಲಾನ್(30) ಎಂಬ ವ್ಯಕ್ತಿ ಎರಡು ವಾರಗಳ ಹಿಂದೆ ಶಾರ್ಜಾದ ಕುವೈತ್ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಅವರು ಸಂದರ್ಶನ (ವಿಸಿಟ್) ವೀಸಾದಲ್ಲಿ ಯುಎಇಗೆ ಆಗಮಿಸಿದ್ದರು. ವಿಸಿಟ್ ವೀಸಾದಲ್ಲಿದ್ದ ಕಾರಣ ಮರಣದ ನಂತರ ಕೈಗೊಳ್ಳಬೇಕಾದ ಕೆಲವೊಂದು ಕಾನೂನು ಪ್ರಕ್ರಿಯೆಗಳಲ್ಲಿ ವಿಳಂಬವಾಯಿತು. ಸರಿಸುಮಾರು ಒಂದೂವರೆ ತಿಂಗಳ ಕಾಲ ಈ ಮೃತದೇಹ ಶವಾಗಾರದಲ್ಲಿಯೇ ಉಳಿಯಬೇಕಾಗಿ ಬಂತು. ಆ ನಂತರ ಅಶ್ರಫ್ ತಾಮರಶ್ಯೇರಿಯವರ ನೇತೃತ್ವದಲ್ಲಿ ಕೆಲವು ಸಾಮಾಜಿಕ ಸಂಘಟನೆಗಳು ಮಧ್ಯೆ ಪ್ರವೇಶಿಸಿ ಮೃತದೇಹವನ್ನು ಊರಿಗೆ ಕಳುಹಿಸಿಕೊಟ್ಟಿತು. ಭಾರತೀಯ ರಾಯಭಾರಿ ಕಚೇರಿಯೂ ಇದಕ್ಕೆ ಸಹಕರಿಸಿತು. ಆದರೆ ಒಂದು ಮೃತದೇಹ ಒಂದೂವರೆ ತಿಂಗಳ ಕಾಲ ಶವಾಗಾರದಲ್ಲಿ ಉಳಿಯುವಂತಹ ಘಟನೆ ಕಲ್ಪನಾತೀತ.

ಮೃತದೇಹವನ್ನು ಊರಿಗೆ ಸಾಗಿಸುವ ವೇಳೆ ಅದರ ಜೊತೆಗೊಬ್ಬರು ಇರಬೇಕಾಗಿರುವುದು ಕಡ್ಡಾಯವಾಗಿದೆ. ಹಾಗೂ ಸಾಗಣೆಯ ಖರ್ಚು-ವೆಚ್ಚಗಳನ್ನು ಮೃತದೇಹದ ಜೊತೆಗೆ ಪ್ರಯಾಣಿಸುವವರು ಅಥವಾ ಸಾಮಾಜಿಕ ಸಂಘಟನೆಗಳೇ ಭರಿಸಬೇಕಾಗುತ್ತದೆ. ಹೀಗಾಗಿ ಮೃತದೇಹಗಳನ್ನು ಊರಿಗೆ ಸಾಗಿಸುವುದು ಪ್ರಯಾಸದ ಕೆಲಸವಾಗಿದೆ.

ಕಳೆದ ತಿಂಗಳು ಆರು ಮೃತದೇಹಗಳನ್ನು ಊರಿಗೆ ಸಾಗಿಸಲಾಗಿದೆ ಎಂದು ಅಬುಧಾಬಿಯಲ್ಲಿ ಸಕ್ರಿಯವಾಗಿರುವ ಸಾಮಾಜಿಕ ಸಂಘಟನೆಯೊಂದರ ಪ್ರತಿನಿಧಿ ಹೇಳಿದ್ದಾರೆ. ಕಳೆದ ವರ್ಷ ತಿಂಗಳೊಂದಕ್ಕೆ ಸರಾಸರಿ ಆರರಂತೆ ಮೃತದೇಹಗಳನ್ನು ಸಾಗಿಸಲಾಗಿದೆ ಎಂದು ಅವರು ತಿಳಿಸುತ್ತಾರೆ. ಈ ಪೈಕಿ ಹೆಚ್ಚಿನ ಮೃತದೇಹಗಳು 30ರಿಂದ 40 ವರ್ಷದೊಳಗಿನ ಯುವಕರದ್ದು ಎನ್ನುವುದು ವಿಶೇಷ. ಹೃದಯಾಘಾತದಿಂದಾಗಿ ಇಲ್ಲಿ ಸಾವಿಗೀಡಾಗುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಮಾನಸಿಕ ಒತ್ತಡಗಳೇ ಇದಕ್ಕೆ ಕಾರಣ ಎಂಬುದು ತಜ್ಞರ ಅಭಿಪ್ರಾಯ. ಸಹಜ ಸಾವು ಸಂಭವಿಸಿದರೆ ಒಂದು ದಿನದೊಳಗಾಗಿ ಮೃತದೇಹವನ್ನು ಊರಿಗೆ ಸಾಗಿಸಬಹುದು. ಅಪಘಾತ ಅಥವಾ ಅಸಹಜ ಸಾವು ಸಂಭವಿಸಿದರೆ ಮರಣೋತ್ತರ ಪರೀಕ್ಷೆಗೆ ಒಡ್ಡಬೇಕಾಗಿ ಬರುವುದರಿಂದ ಮೃತದೇಹವನ್ನು ಸಾಗಿಸಲು ಕೆಲವು ದಿನಗಳು ಬೇಕಾಗಬಹುದು. ಮೃತದೇಹವನ್ನು ಸಾಗಿಸಲು ವಿಮಾನ ಕಂಪೆನಿಗಳು ವಿಭಿನ್ನವಾದ ಸಾಗಣೆ ದರಗಳನ್ನು ಮುಂದಿಡುತ್ತವೆ. ಖಾಸಗಿ ವಿಮಾನ ಕಂಪೆನಿಗಳಿಗಿಂತ ಏರ್‌ಇಂಡಿಯಾ ವಿಮಾನವು ಮೃತದೇಹಗಳನ್ನು ಸಾಗಿಸಲು ತೆಗದುಕೊಳ್ಳುವ ದರ ಕಡಿಮೆಯೇ.ಖಾಸಗಿ ವಿಮಾನಗಳು 2,700(48,600 ರೂ.)ದಿರ್ಹಂನಿಂದ ಹಿಡಿದು 3,500(63,000 ರೂ.)ದಿರ್ಹಂವರೆಗೆ ವಸೂಲಿ ಮಾಡುತ್ತದೆ. ಇದು ಅಲ್ಲದೆ ಎಂಬಾಮಿಂಗ್‌ಗಾಗಿ(ಮೃತದೇಹವನ್ನು ಕೊಳೆಯದ ಹಾಗೆ ಸುರಕ್ಷಿತವಾಗಿ ದ್ರಾವಣದಲ್ಲಿ ಇಡುವುದು) 1,100 ದಿರ್ಹಂ ಪಾವತಿಸಬೇಕಾಗುತ್ತದೆ. ಮರಣ ಪ್ರಮಾಣಪತ್ರಕ್ಕಾಗಿ 100 ದಿರ್ಹಂನ್ನು ಇತರ ರೂಪದಲ್ಲಿ ಕೊಡಬೇಕಾಗುತ್ತದೆ. ಮೃತದೇಹದ ಜೊತೆಗೆ ಊರಿಗೆ ತೆರಳುವವರ ಟಿಕೆಟ್ ಬೇರೆ. ಇದುವರೆಗೆ ಸುಮಾರು 500ರಷ್ಟು ಮೃತದೇಹಗಳನ್ನು ಊರಿಗೆ ಸಾಗಿಸಲಾಗಿದೆ. ‘‘ದಕ್ಷಿಣ ಭಾರತದವರ ಮೃತದೇಹವಾದರೆ ಸಾಮಾನ್ಯವಾಗಿ ಅದರ ಜೊತೆಗೆ ಕುಟುಂಬ ಸದಸ್ಯರು ಇರುತ್ತಾರೆ. ಆದರೆ ಉತ್ತರ ಭಾರತದ ಮೃತದೇಹಗಳ ಜೊತೆ ತೆರಳಲು ಜನ ಸಿಗುತ್ತಿಲ್ಲ’’ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ದುಃಖ ತೋಡಿಕೊಂಡಿದ್ದಾರೆ. ತನ್ಮಧ್ಯೆ ಹೊಸದಿಲ್ಲಿ ವಿಮಾನ ನಿಲ್ದಾಣಕ್ಕೆ ತಲುಪಿದ ಬಳಿಕ ಮೃತದೇಹವನ್ನು ಸಂಬಂಧಪಟ್ಟಜನರಿಗೆ ಹಸ್ತಾಂತರಿಸುವ ವೇಳೆ ಕಾನೂನು ಪ್ರಕ್ರಿಯೆಗಳಲ್ಲಿಯೂ ಭಾರೀ ಪ್ರಯಾಸಪಡಬೇಕಾಗುತ್ತದೆ. ಈ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಮುಂದೆ ಬರಬೇಕಾಗಿರುವುದು ಅತಿ ಅನಿವಾರ್ಯ ಎಂಬುದು ಪ್ರವಾಸಿಗರ ಆಗ್ರಹ.

ಕೆಲವು ತಿಂಗಳ ಹಿಂದೆ ಮುಂಬೈಯ ಸರ್ಕಾರ್(37) ವರ್ಷ ಎಂಬ ವ್ಯಕ್ತಿ ಯುಎಇಯಲ್ಲಿ ಮರಣ ಹೊಂದುತ್ತಾರೆ. ವಿಸಿಟಿಂಗ್ ವೀಸಾದಲ್ಲಿದ್ದ ಇವರ ಮೃತದೇಹವನ್ನು ಊರಿಗೆ ಸಾಗಿಸುವಂತಹ ಜವಾಬ್ದಾರಿಯನ್ನು ಅಶ್ರಫ್ ತಾಮರಶ್ಯೇರಿಯವರೇ ವಹಿಸಿಕೊಂಡಿದ್ದರು. ಇದೊಂದು ಬಹುದೊಡ್ಡ ಮಾನವೀಯತೆಯ ಕೆಲಸ ಎಂದು ಸ್ವತಃ ಶಿವಸೇನೆಯ ಕಾರ್ಯಕರ್ತರು ಅಶ್ರಫ್‌ರನ್ನು ಪ್ರಶಂಸಿದ್ದರು.

ಇತ್ತೀಚೆಗೆ ಅಬುಧಾಬಿಯಲ್ಲಿ ಮೃತಪಟ್ಟಿದ್ದ ಚೆನ್ನೈ ನಿವಾಸಿಯ ಮೃತದೇಹವನ್ನು ತಾಯ್ನಿಡಿಗೆ ಸಾಗಿಸಿದ್ದು ಯುಎಇಯ ವಿಮಾನ. ಈ ಮೃತದೇಹದ ಭಾರ 116 ಕೆಜಿಯಾಗಿತ್ತು. ಪ್ರತಿಕೆಜಿಗೆ 18(324 ರೂ.)ದಿರ್ಹಂಗಳನ್ನು ಪಾವತಿಸಲಾಗಿತ್ತು. ಭಾರತಕ್ಕೆ ಸಾಮಗ್ರಿಗಳನ್ನು ಸಾಗಿಸುವಾಗ ಪಾವತಿಸಬೇಕಾದಂತಹ ಕಾರ್ಗೊ ದರವಾಗಿದೆ ಇದು. ಹಣ್ಣು-ಹಂಪಲುಗಳು, ತರಕಾರಿಗಳಿಗೂ ಇದೇ ದರ ಅನ್ವಯವಾಗುತ್ತದೆ. ಖಾಸಗಿ ವಿಮಾನಗಳು ಮುಂದಿಡುವ ದರಗಳಿಗೆ ಸಂಬಂಧಿಸಿದಂತೆ ಆ ವಿಮಾನಗಳನ್ನು ದೂರುವಂತಿಲ್ಲ. ಮೃತದೇಹವನ್ನು ಹೊತ್ತೊಯ್ಯಲು ಸಮ್ಮತಿಸುವುದೇ ದೊಡ್ಡ ವಿಚಾರ.ಆದರೆ ಭಾರತ ಸರಕಾರವು ಭಾರತೀಯರ ಮೃತದೇಹಗಳ ಸಾಗಣೆ ಸಂಬಂಧಕಾನೂನನ್ನು ಜಾರಿಗೊಳಿಸಲೇಬೇಕು. ಪಾಕಿಸ್ತಾನೀಯರು ಮೃತಪಟ್ಟರೆ ಅವರನ್ನು ಸಾಗಿಸುವ ಹಾಗೂ ಸಂಸ್ಕರಿಸುವ ಪೂರ್ಣ ಜವಾಬ್ದಾರಿಯನ್ನು ಅಲ್ಲಿಯ ಸರಕಾರವೇ ವಹಿಸುವ ಮಾದರಿಯಲ್ಲಿಯೇ ಭಾರತ ಸರಕಾರವು ಈ ಕುರಿತು ಚಿಂತಿಸಬೇಕುಎನ್ನುವುದು ಪ್ರವಾಸಿಗರ ಅಂಬೋಣ.

Writer - ಸಿರಾಜ್ ಅರಿಯಡ್ಕ

contributor

Editor - ಸಿರಾಜ್ ಅರಿಯಡ್ಕ

contributor

Similar News

ಜಗದಗಲ
ಜಗ ದಗಲ