ರ‍್ಯಾಗಿಂಗ್

Update: 2017-02-18 16:40 GMT

ತಮ್ಮನ್ನು ತಾವು ಮರೆಮಾಚಿಕೊಂಡು ಹಿರಿಯರನ್ನು ಮತ್ತು ಶಿಕ್ಷಕರನ್ನು ಮೋಸಗೊಳಿಸುವಷ್ಟು ಮಕ್ಕಳು ನಿಷ್ಣಾತರೇನಾಗಿರುವುದಿಲ್ಲ. ಜೊತೆಗೆ ಅವರಿಗೆ ಇದರೆಲ್ಲದರಲ್ಲಿ ದೀರ್ಘಕಾಲದ ಅನುಭವವೇನಾಗಿರುವುದಿಲ್ಲ. ನಮಗೆ ಗೊತ್ತೇ ಆಗಲಿಲ್ಲ ಎಂದು ಎಷ್ಟೋ ಪೋಷಕರು ಮತ್ತು ಶಿಕ್ಷಕರು ಪ್ರಕರಣಗಳ ನಂತರ ಹೇಳುತ್ತಾರೆ. ಅದಕ್ಕೆ ನಿಜವಾಗಿಯೂ ಕಾರಣ ಮಕ್ಕಳೇನಲ್ಲ. ಅವುಗಳನ್ನು ಗಮನಿಸಿರದೇ ಹೋದ ಪೋಷಕರು ಮತ್ತು ಶಿಕ್ಷಕರೇ ತಮ್ಮ ತಿಳಿಗೇಡಿತನದ ಹೊಣೆಗಾರರಾಗಬೇಕಾಗುತ್ತದೆ.

ರ‍್ಯಾಗಿಂಗ್ ಬಲಿಪಶುಗಳು:  ತಿಳಿಗೇಡಿತನ ಮತ್ತು ಕಿಡಿಗೇಡಿತನಗಳ ನಡುವೆ

ಅನೇಕ ಬಾರಿ ಬರಿಯ ದೋಷಪೂರ್ವಕ ಮಾನಸಿಕ ಸ್ಥಿತಿಯಿಂದಾಗಿ ಮಾತ್ರವೇ ರ್ಯಾಗಿಂಗ್‌ಗಳು ನಡೆಯುವುದಿಲ್ಲ. ತಮಗಾಗುವ ಅಪಮಾನ, ಅವಹೇಳನ, ಅವರಿವರು ಮಾಡುವ ತುಲನೆಯಿಂದ ತಮ್ಮನ್ನು ಕಡೆಗಣಿಸುವಿಕೆ, ಅಸೂಯೆಯಿಂದ ಉಂಟಾಗುವ ಅಸಹನೆಗಳಿಂದಲೂ ರ್ಯಾಗಿಂಗ್‌ಗಳು ನಡೆಯುತ್ತವೆ.

ಪುಸ್ತಕಗಳನ್ನು ಸುಟ್ಟ ಬಾಲಕ

ಆ ಹುಡುಗ ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದ. ಆಟೋಟಗಳಲ್ಲಿ ಬಹಳ ಚುರುಕು. ಸದಾ ಚಟುವಟಿಕೆಗಳಿಂದ ಕೂಡಿರುವ ಆತನಿಗೆ ಪಠ್ಯ ಕೈಗೆ ಬಂತೆಂದರೆ ಜಡ, ಮಂಕು. ಅವನನ್ನು ಇತರ ಸಮಯಗಳಲ್ಲಿ ನೋಡಿರುವವರು ಅವನಿಗೆ ಏನೋ ಹುಷಾರಿಲ್ಲ ಎಂದುಕೊಳ್ಳುವಷ್ಟು ಕಳಾಹೀನನಾಗಿಬಿಡುತ್ತಾನೆ. ಅವನಿಗೊಬ್ಬಳು ಅಕ್ಕ. ಮಹಾ ಮೇಧಾವಿ. ಆಟಗಳಲ್ಲಿ ನಿರಾಸಕ್ತಿ, ಪಾಠಗಳಲ್ಲೇ ಅತ್ಯಾಸಕ್ತಿ. ಮನೆಗೆ ಬಂದವರೊಡನೆ ನಗುನಗುತ್ತಾ ಮಾತಾಡುವುದರಲ್ಲೂ, ಆದರಿಸಿ ಬಾಯುಪಚಾರ ಮಾಡುವುದರಲ್ಲೂ ಪ್ರವೀಣೆ. ಅದಕ್ಕೇ ತಂದೆ ತಾಯಿಗಳಿಗೋ ಅವರ ಎಂಟನೆ ತರಗತಿ ಓದುತ್ತಿರುವ ಈ ಮಗಳೆಂದರೆ ಪಂಚಪ್ರಾಣ. ಬಂದವರ ಮುಂದೆಲ್ಲಾ ಅವಳನ್ನು ಹೊಗಳಿ ಅಟ್ಟಕ್ಕೇರಿಸುವರು. ಅವಳೆಂತಹ ಬುದ್ಧಿವಂತೆ ಎಂದು ಅನೇಕ ಉದಾಹರಣೆಗಳ ಸಮೇತ ವಿವರಿಸದಿದ್ದರೆ ಅವರಿಗೆ ಸಮಾಧಾನವೇ ಆಗದು. ಹಾಗೆಯೇ ಅವರ ಕಿರಿಮಗನ ಕಾಟ, ರಾವಡಿಗಳನ್ನು ವಿವರಿಸಿ ಅವನೆಷ್ಟು ಒರಟ, ಹೇಳಿದ ಮಾತು ಕೇಳದ ಹುಂಬ ಎಂದೆಲ್ಲಾ ಬಣ್ಣಿಸಿ, ದಾರಿಗೆಟ್ಟು ಕುಲಗೆಟ್ಟ ಕುಲಪುತ್ರನ ರಿಪೇರಿ ಮಾಡುವುದಕ್ಕೆ ದಾರಿ ತಿಳಿಸಿರಿ ಎಂದು ತಾಯಿ ಸೆರಗೊಡ್ಡಿ ಬಂದವರ ಮುಂದೆಲ್ಲಾ ಅಂಗಲಾಚುತ್ತಾಳೆ, ತಂದೆ ಇನ್ನು ಮುಂದೆ ತಾನೇನು ಮಾಡಿ ಅವನ ಅಂಕೆಯಲ್ಲಿಡುವೆ ಎಂಬ ಕಠೋರ ನಿರ್ಣಯಗಳನ್ನು ‘ಭೀಷ್ಮ ಪ್ರತಿಜ್ಞೆ’ ಮಾಡಿ ಗರ್ಜಿಸುತ್ತಾರೆ. ಎಲ್ಲದರ ಫಲವಾಗಿ ಅಕ್ಕ ಮೇಲರಿಮೆಯಿಂದ ಮೆರೆಯುತ್ತಾಳೆ. ತನ್ನ ತಮ್ಮನಿಗೆ ಬುದ್ಧಿ ಹೇಳಿ ಸರಿದಾರಿಗೆ ತರಲು ಕೊರೆಯುತ್ತಾಳೆ. ಅವನು ಕೀಳರಿಮೆಯಿಂದ ನರಳುತ್ತಾನೆ. ಅವಳನ್ನು ಅದೆಷ್ಟು ಕಾಡಿಸಲು ಸಾಧ್ಯವೋ ನೋಡುತ್ತಾನೆ.

ತಂದೆ ತಾಯಿಯರು ತಮ್ಮ ಮನೆಯಲ್ಲಿಯೇ ತಮ್ಮ ಮಗಳಿಗೆ ತಮ್ಮ ಮಗನಿಂದಲೇ ರ್ಯಾಗಿಂಗ್ ನಡೆಯುತ್ತಿದೆ ಎಂದು ಸಮಾಲೆಚನೆಗಾಗಿ ನನ್ನ ಬಳಿಗೆ ಬಂದಿದ್ದರು.

ಅವಳು ಶಾಲೆಗೆ ಹೋಗುವ ಅತ್ಯಂತ ನೀಟಾದ ಸಮವಸ್ತ್ರದ ಮೇಲೆ ಸಾಂಬಾರ್ ಚೆಲ್ಲುತ್ತಾನೆ. ಅವಳ ಪುಸ್ತಕಗಳನ್ನು ಅಡಗಿಸಿಡುತ್ತಾನೆ. ಅವಳ ಕಂಪ್ಯೂಟರ್‌ನ ಕೀ ಪ್ಯಾಡ್ ಮೇಲೆ ನೀರು ಸುರಿದಿರುತ್ತಾನೆ. ಅವಳ ಪೆನ್ನಿಂದ ಮರದ ಮೇಲೆ ಅಥವಾ ಸಿಮೆಂಟಿನ ಗೋಡೆಯ ಮೇಲೆ ಗೀಚಿ ನಿಬ್ ಹಾಳು ಮಾಡುತ್ತಾನೆ. ಒಮ್ಮೆಯಂತೂ ಅವಳ ಪರೀಕ್ಷಾವಧಿಯಲ್ಲಿ ಅವಳೆಲ್ಲಾ ಪುಸ್ತಕಗಳನ್ನೂ ಬೆಂಕಿ ಹಾಕಿ ಸುಟ್ಟುಬಿಟ್ಟ. ಈ ಘೋರ ಘಟನೆಯ ನಂತವೇ ಅವರು ನನ್ನ ಬಳಿಗೆ ಬಂದಿದ್ದು.

ಅವರಿಗೆ ಒಂದು ಸಮಾಧಾನದ ಸಂಗತಿಯನ್ನು ಗುರುತಿಸಲು ಹೇಳಿದೆ. ಆ ಹುಡುಗ ಅವಳ ಮೇಲೆ ಬಿಸಿ ಸಾಂಬಾರ್ ಎರಚಿಲ್ಲ. ಮೊನಚಾಗಿರುವ ವಸ್ತುಗಳಿಂದ ಅವಳ ಮೇಲೆ ಗೀಚಿಲ್ಲ. ಅವಳಿಗೆ ಬೆಂಕಿ ಹಚ್ಚಿಲ್ಲ. ಇದಾಗುವ ಮುನ್ನ ತಂದೆ ತಾಯಿಗಳು ಎಚ್ಚೆತ್ತುಕೊಳ್ಳಬೇಕು. ಆ ಹುಡುಗಿಗೆ ಹತ್ತಿರುವ ಮೇಲರಿಮೆಯ ಪೊರೆಯನ್ನು ಕಳಚಬೇಕು. ಈ ಹುಡುಗನಿಗೆ ಹಚ್ಚಿರುವ ಕೀಳರಿಮೆಯನ್ನು ಹೋಗಲಾಡಿಸಬೇಕು. ಅವನು ಆಸಕ್ತನಾಗಿರುವ ಪ್ರತಿಭಾಕ್ಷೇತ್ರವನ್ನು ಗುರುತಿಸಬೇಕು. ಈ ಪರಿಹಾರವೇನೋ ಕಣ್ಣೆದುರಿಗೇ ಇದೆ. ಆದರೆ ಪೋಷಕರ, ಶಿಕ್ಷಕರ ಅಭ್ಯಾಸದ ಬಲದಿಂದ, ಸದಾ ಬೇರೆಯವರನ್ನು ರಿಪೇರಿ ಮಾಡಲು ಉದ್ಯುಕ್ತರಾಗಿರುವ ಅವರಲ್ಲಿ ಸ್ವ-ರಿಪೇರಿ ಪ್ರಕ್ರಿಯೆ ಇನ್ನೂ ಆರಂಭವೇ ಆಗಿಲ್ಲ. ಹಾಗಾಗಿ ಸಮಸ್ಯೆ ದಿನದಿನಕ್ಕೆ ಉಲ್ಬಣಗೊಳ್ಳುತ್ತಿದೆ. ತಮ್ಮ ಗುಣದೋಷಗಳನ್ನು ಸರಿಪಡಿಸಿಕೊಳ್ಳುವ ವ್ಯವಧಾನವಿರದಿದ್ದರೆ ಸಮಾಲೋಚನೆಯಿಂದ ಆ ಹುಡುಗನ ಉಗ್ರ ಚಟುವಟಿಕೆ ಗಳನ್ನು ಒಂದು ಹಂತಕ್ಕೇನೋ ತಹಬಂದಿಗೆ ತರಬಹುದು. ಆದರೆ ಅವರ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸಲು ಮತ್ತು ಆಪ್ತಗೊಳಿಸಲು ಸಾಧ್ಯವಿಲ್ಲ.

ಹಾಗಾಗಿ ಬಹಳಷ್ಟು ಸಮಾಲೋಚನೆಗಳು ಬಹಳ ಚರ್ಮದ ಹಂತದಲ್ಲಷ್ಟೇ ರಿಪೇರಿಗೊಳ್ಳುವುದು. ಈ ವಿಷಯ ಮಕ್ಕಳ ಸಮಾಲೋಚನೆಗಳಲ್ಲೂ ಹೊರತೇನಾಗಿಲ್ಲ. ಕಥೆ ಬರಿಯ ಯಾವುದೋ ಒಂದು ಮನೆಯಲ್ಲಿ ಮಾತ್ರವಲ್ಲ. ಶಾಲೆಗಳಲ್ಲೂ, ಕಾಲೇಜು ಹಾಸ್ಟೆಲ್‌ಗಳಲ್ಲೂ ಆಗುತ್ತಿರುತ್ತವೆ. ಹಾಗೆಯೇ ತಮ್ಮ ಕೀಳರಿಮೆಗಳನ್ನು ದಾಟಲು ಕಿಡಿಗೇಡಿಗಳಾಗಿರುವ ಒರಟರ ಒಕ್ಕೂಟಗಳು ನಿರ್ಮಾಣವಾಗಿ ಮೇಲರಿಮೆಯವರ ಮೆರೆತವನ್ನು ಮಟ್ಟ ಹಾಕಲು ಯೋಜಿತವಾಗಿ ವ್ಯವಸ್ಥೆ ಮಾಡುತ್ತಾರೆ. ಹಾಗೆಯೇ ಇವರಿಂದ ಬಲಿಪಶುಗಳಾಗುವವರೂ ಕೂಡ ಎಷ್ಟೋಬಾರಿ ತಮ್ಮದಲ್ಲದ ತಪ್ಪಿಗಾಗಿಯೇ ನೋವನ್ನು ಅನುಭವಿಸುತ್ತಾರೆ. ರ್ಯಾಗಿಂಗ್ ಪ್ರಕರಣಗಳಲ್ಲಿ ಅಪರಾಧಿ ಮತ್ತು ಬಲಿಪಶು ಮಾತ್ರವೇ ಕಾಣುತ್ತಾರೆಯೇ ಹೊರತು ಅಪರಾಧಿಗಳನ್ನು ನಿರ್ಮಿಸಿದ ಮತ್ತು ಬಲಿಪಶುಗಳಾಗುವಂತೆ ಮಾಡಿದ ಪೋಷಕರ, ಶಿಕ್ಷಕರ ಮತ್ತು ಇತರ ಸಾಂಸ್ಥಿಕ ವ್ಯವಸ್ಥೆಯ ಸ್ಥಿತಿಗಳ್ಯಾವುವೂ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಿಲ್ಲ ಮತ್ತು ತಾವು ಇಂತವಕ್ಕೆ ಕಾರಣವಾಗಿದ್ದೇವೆ ಎಂದು ಅಪ್ಪಿತಪ್ಪಿಯೂ ಅಂದುಕೊಳ್ಳುವುದಿಲ್ಲ.

ರ‍್ಯಾಗಿಂಗ್ ಗುರುತಿಸಲು ಹಲವು ಅವಕಾಶಗಳು

ತಮ್ಮನ್ನು ತಾವು ಮರೆಮಾಚಿಕೊಂಡು ಹಿರಿಯರನ್ನು ಮತ್ತು ಶಿಕ್ಷಕರನ್ನು ಮೋಸಗೊಳಿಸುವಷ್ಟು ಮಕ್ಕಳು ನಿಷ್ಣಾತರೇನಾಗಿರುವುದಿಲ್ಲ. ಜೊತೆಗೆ ಅವರಿಗೆ ಇದರೆಲ್ಲದರಲ್ಲಿ ದೀರ್ಘಕಾಲದ ಅನುಭವವೇನಾಗಿರುವುದಿಲ್ಲ. ನಮಗೆ ಗೊತ್ತೇ ಆಗಲಿಲ್ಲ ಎಂದು ಎಷ್ಟೋ ಪೋಷಕರು ಮತ್ತು ಶಿಕ್ಷಕರು ಪ್ರಕರಣಗಳ ನಂತರ ಹೇಳುತ್ತಾರೆ. ಅದಕ್ಕೆ ನಿಜವಾಗಿಯೂ ಕಾರಣ ಮಕ್ಕಳೇನಲ್ಲ. ಅವುಗಳನ್ನು ಗಮನಿಸಿರದೇ ಹೋದ ಪೋಷಕರು ಮತ್ತು ಶಿಕ್ಷಕರೇ ತಮ್ಮ ತಿಳಿಗೇಡಿತದ ಹೊಣೆಗಾರರಾಗಬೇಕಾಗುತ್ತದೆ.

ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಗಿಂಗ್ ಮಾಡುತ್ತಿರುವವರನ್ನು ಮತ್ತು ಅದಕ್ಕೆ ಗುರಿಯಾಗಿರುವವರನ್ನು ಗುರುತಿಸುವುದು ಕಷ್ಟವೇನಲ್ಲ. ಅದಕ್ಕೆ ಅನೇಕ ಲಕ್ಷಣಗಳಿವೆ. ಅುಗಳಲ್ಲಿ ಕೆಲವನ್ನು ಗಮನಿಸೋಣ.

ರ‍್ಯಾಗಿಂಗ್ಗೆ ಒಳಗಾದವರು:

1. ಸಾಮಾನ್ಯವಾಗಿರುವುದಕ್ಕಿಂತ ಅಂತರ್ಮುಖಿಗಳಾಗಿ ಮೌನಿಗಳಾಗುವುದು. ಅದರಲ್ಲೂ ಶಾಲಾ ಅವಧಿ ಮುಗಿದ ಮೇಲೆ.

2. ಹರಿದ ಪುಸ್ತಕಗಳು, ಮುರಿದ ಪೆನ್ ಪೆನ್ಸಿಲ್‌ಗಳು, ಹರಿದ ಬಟ್ಟೆಗಳೊಂದಿಗೆ ಮನೆಗೆ ಬರುವುದು ಅಥವಾ ಹಾಸ್ಟೆಲ್‌ನ ರೂಂಗಳಿಗೆ ಮರಳುವುದು. 3. ಹಿಂದೆಂದಿಗಿಂತ ಸ್ನೇಹಿತರ ಜೊತೆ ಬೆರೆಯುವುದು, ಆಡುವುದು, ಅವರೊಟ್ಟಿಗೆ ೂಡುವುದು ಕಡಿಮೆಯಾಗಿರಬಹುದು.

4. ಬೆಸ್ಟ್ ಫ್ರೆಂಡ್ ಅಥವಾ ಆತ್ಮೀಯ ಸ್ನೇಹಿತ ಇಲ್ಲದೇ ಹೋಗುವುದು ಅಥವಾ ಇದ್ದರೂ ಅವರೊಡನೆಯೂ ಸಂಪರ್ಕ ಇಟ್ಟುಕೊಂಡಿಲ್ಲದೇ ಇರುವುದು ಅಥವಾ ಸಾಂಗತ್ಯ ಕಡಿಮೆ ಮಾಡಿಕೊಳ್ಳುವುದು.

5. ಯಾರನ್ನಾದರೂ ಅವಾಯ್ಡಾ ಮಾಡಲು ಶಾಲೆಗೆ ನಿಧಾನವಾಗಿ ಹೋಗುವುದು ಅಥವಾ ಶಾಲೆ ಬಿಡುವ ಮುನ್ನವೇ ತಲೆನೋವು, ಹೊಟ್ಟೆನೋವು ಇತ್ಯಾದಿಗಳ ನೆಪವೊಡ್ಡಿ ಶಾಲೆ ಬಿಡುವುದಕ್ಕಿಂತ ಬೇಗನೆ ಮನೆ ಸೇರಲು ತವಕಿಸುವುದು. ಒಟ್ಟಾರೆ ಯಾರಾದರೂ ಸುಪರ್ದಿನಲ್ಲಿರುವಾಗ ಮಾತ್ರವೇ ಶಾಲೆಯಲ್ಲಿರುವಂತೆ ತಮ್ಮನ್ನು ನೋಡಿಕೊಳ್ಳುವುದು.

6. ಶಾಲೆಯ ಮನೆಕೆಲಸಗಳಲ್ಲಿನ ಮತ್ತು ಅಧ್ಯಯನಗಳಲ್ಲಿನ ಕಾರ್ಯಕ್ಷಮತೆ ಇದ್ದಕ್ಕಿದ್ದಂತೆ ಕ್ಷೀಣಿಸುವುದು.

7. ಮಗುವು ಮನೆಯಲ್ಲಿ ಎಂದಿಗಿಂತ ಹೆಚ್ಚು ಹಣಕ್ಕಾಗಿ ಕಾಡುವುದು ಅಥವಾ ಹಣ ಕದಿಯುವುದು. ಚಾಕಲೆಟ್ ಅಥವಾ ಇನ್ನಾವುದೋ ವಸ್ತುಗಳನ್ನು ಕೊಳ್ಳಲು ಮತ್ತು ಅವುಗಳನ್ನೋ ಯಾರಿಗೋ ಕೊಡಲು ಹಾತೊರೆಯುತ್ತಿರುವುದು. ಅದು ಅವರನ್ನು ಕಾಡದಿರಲು ಕೇಳುತ್ತಿರುವ ಲಂಚವಾಗಿರಬಹುದು. ಅಥವಾ ಕಪ್ಪಕಾಣಿಕೆಯಾಗಿರಬಹುದು.

ಇಷ್ಟು ಲಕ್ಷಣಗಳಿಂದಲೇ ರ್ಯಾಗಿಂಗ್‌ಗೆ ಒಳಗಾಗಿದ್ದಾರೆ ಎಂದು ಸಾಕಷ್ಟು ತಿಳಿಯಬಹುದಾದರೂ ಇನ್ನೂ ಕೆಲವು ಲಕ್ಷಣಗಳು ಅವನ್ನು ಗಾಢಗೊಳಿಸುತ್ತವೆ.

1. ಮಗುವು ಪುನರಾವರ್ತಿತವಾಗಿ ತನ್ನನ್ನು ರೇಗಿಸುತ್ತಿದ್ದಾರೆಂದು, ಹಂಗಿಸುತ್ತಿದ್ದಾರೆಂದು, ಕಿರುಕುಳ ಕೊಡುತ್ತಿದ್ದಾರೆಂದು ಮನೆಯಲ್ಲಿ ಹಿರಿಯರೊಡನೆ, ಆಟದ ಮೈದಾನದಲ್ಲಿ ಪಿಟಿ ಮಾಸ್ಟರ್‌ಗೆ ಅಥವಾ ಶಾಲೆುಲ್ಲಿ ಶಿಕ್ಷಕರೊಡನೆ ಹೇಳುವುದು.

2. ಇದ್ದಕ್ಕಿದ್ದಂತೆ ಮಗುವು ತನ್ನನ್ನು ಸಮರ್ಥಿಸಿಕೊಳ್ಳಲು ಒರಟಾಗುವುದು. ಸಣ್ಣ ವಿಷಯಕ್ಕೂ ಕೂಡ ಸ್ವರಕ್ಷಣೆಗೆ ಎಂಬಂತೆ ವರ್ತಿಸತೊಡಗುವುದು. 3. ತರಗತಿಯಲ್ಲಿ, ಮೈದಾನದಲ್ಲಿ ಅಥವಾ ಪಾಠದ ಮನೆಯಲ್ಲಿ ತನ್ನ ಹೆಸರಿನ ಹೊರತಾಗಿ ಬೇರೇನನ್ನೋ ಹೇಳುತ್ತಾ ಕರೆಯುತ್ತಿದ್ದಾರೆಂದು ದೂರುವುದು.

 3. ಮಗುವಿನ ಅತ್ಯಗತ್ಯ ವಸ್ತುಗಳು ಮತ್ತು ಓದಿಗೆ ಸಂಬಂಧಪಟ್ಟ ಪಠ್ಯ ಪರಿಕರಗಳು ಪದೇಪದೇ ಕಳೆದುಹೋುವುದು ಅಥವಾ ನಾಶವಾಗುವುದು.

4. ಮಗುವು ಗುಂಪಿನಾಟಗಳಲ್ಲಿ ಯಾವಾಗಲೂ ಸೋಲುತ್ತಲೇ ಇರುವುದು. ಹಾಗೆಯೇ ಇತರ ಆಟಗಳಲ್ಲಿ ಯಾವಾಗಲೂ ಸೋಲುವುದು ಅಥವಾ ಇವರೇ ಸೋಲುವಂತೆ ಗುರಿ ಮಾಡುತ್ತಿರುವುದು. ಈ ಕಾರಣಗಳಿಂದಾಗಿ ಸಾಮಾನ್ಯವಾಗಿ ಇಷ್ಟವಿರುವ ಆಟೋಟಗಳಲ್ಲಿಯೂ ಕೂಡ ಮಗುವು ಭಾಗವಹಿಸುವುದಿಲ್ಲ. ಯಾವುದೇ ಮಗುವು ಈ ಮೊದಲು ತನಗಿಷ್ಟವಾದಂತಹ ಆಟಗಳಲ್ಲಿ ಅಥವಾ ಇತರೇ ಚಟುವಟಿಕೆಗಳಲ್ಲಿ ಇದ್ದಕ್ಕಿದ್ದಂತೆ ಆಸಕ್ತಿ ಕಳೆದುಕೊಂಡಿತೆಂದರೆ, ಅಥವಾ ಸುತಾರಾಂ ನಿರಾಕರಿಸುತ್ತಿದೆಯೆಂದರೆ ಆ ಮಗುವಿಗೆ ಅಲ್ಲಿ ಏನಾಗುತ್ತಿದೆ ಅಥವಾ ಯಾರಿಂದ ತೊಡಕಾಗುತ್ತಿದೆ ಎಂಬುದನ್ನು ಗುರುತಿಸಬೇಕಾದುದು ಪೋಷಕರ ಮತ್ತು ಶಿಕ್ಷಕರ ಕೆಲಸ.

ರ‍್ಯಾಗಿಂಗ್ ಮಾಡುವವರ ಲಕ್ಷಣಗಳು

ರ್ಯಾಗಿಂಗ್ ಮಾಡುವವರ ಲಕ್ಷಣಗಳನ್ನು ಅಷ್ಟು ಸುಲಭವಾಗಿ ಅಥವಾ ಸಾಮಾನ್ಯ ನೋಟಗಳಲ್ಲಿ ಗುರುತಿಸಲಾಗುವುದಿಲ್ಲ. ಏಕೆಂದರೆ ಅವರು ತಮ್ಮ ಸಹಪಾಠಿಗಳೊಂದಿಗೆ ಮತ್ತು ತಮಗಿಂತ ಚಿಕ್ಕವರೊಂದಿಗೆ ಇರುವ ರೀತಿಯಲ್ಲಿಯೇ ದೊಡ್ಡವರ ಮುಂದೆ ಅಥವಾ ಶಿಕ್ಷಕರ ಮುಂದೆ ಇರುವುದಿಲ್ಲ. ಆದರೆ ಇದನ್ನೂ ಸಾಮಾನ್ಯೀಕರಿಸಲಾಗುವುದಿಲ್ಲ. ಇನ್ನೂ ಕೆಲವು ಸಲ ತಮ್ಮ ತೋರಿಕೆಯ ರೀತಿಯ ಸಾಮಾನ್ಯ ಪ್ರದರ್ಶನದಲ್ಲಿಯೇ ಗುಪ್ತವಾಗಿರುವ ಅಥವಾ ಸುಪ್ತವಾಗಿ ಜೀವಂತವಾಗಿರುವ ಕೆಲವು ವಿಷಯಗಳು, ನಡುವಳಿಕೆಗಳು ಅವರಿಗೇ ಗೊತ್ತಿಲ್ಲದಂತೆ ಜಾರಿ ಪ್ರದರ್ಶಿತವಾಗಿಬಿಡುತ್ತದೆ. ಇಂಥವೆಲ್ಲಾ ಗಮನಕ್ಕೆ ತಂದುಕೊಳ್ಳುವುದರಿಂದ ತಪ್ಪಿತಸ್ಥರನ್ನು ಗುರುತಿಸಬಹುದು.

1. ಕೆಲವು ಮಕ್ಕಳು ಅಥವಾ ಯುವಕರು ಸ್ವಭಾವದಲ್ಲಿಯೇ ತಮ್ಮ ತಿಳಿಗೇಡಿತನ ಮತ್ತು ಕಿಡಿಗೇಡಿತನಗಳನ್ನು ಮುಗ್ಧವಾಗಿಯೋ ಅಥವಾ ಪ್ರಾಮಾಣಿಕವಾಗಿಯೋ ತಮ್ಮ ಒರಟುತನಗ ಮೂಲಕ ಪ್ರದರ್ಶಿಸುತ್ತಿರುತ್ತಾರೆ.

2. ಬೇರೆ ಮಕ್ಕಳನ್ನು ಪ್ರಶಂಸಿಸುವಾಗ ಅಡ್ಡಬಾಯಿ ಹಾಕುವುದು ಅಥವಾ ಬೇರೆಯವರ ಚಟುವಟಿಕೆಗಳಿಗೆ ಅಡ್ಡಗಾಲು ಹಾಕುವುದು ನೇರವಾಗಿರಬಹುದು.

3. ತಮಗೆ ಇಷ್ಟವಿಲ್ಲದ ಅಥವಾ ತಾವು ಒಲ್ಲದವರನ್ನು ಆಟ ಅಥವಾ ಯಾವುದೇ ಇತರ ಚಟುವಟಿಕೆಗಳಿಗೆ ಶಿಕ್ಷಕರು ಅಥವಾ ವ್ಯವಸ್ಥಾಪಕರು ಸೇರಿಸಿಕೊಳ್ಳಲು ಅಥವಾ ನೇಮಿಸಲು ಮುಂದಾದಾಗ ನಿಷ್ಠುರವಾಗಿ ತಮ್ಮ ಅಸಮಾಧಾನವನ್ನು ಮತ್ತು ಅಸಮ್ಮತಿಯನ್ನು ವ್ಯಕ್ತಪಡಿಸುವುದು.

4. ಹೇಗೆ ಮಾಡ್ತಿಯೋ ನೋಡೋಣ ಅಥವಾ ಹೊರಗೆ ಬಾ ನೋಡ್ಕೊಳ್ತೀನಿ ಎಂಬ ಸಾಮಾನ್ಯ ಬೆದರಿಕೆಗಳನ್ನು ಒಡ್ಡುತ್ತಾ ತಮ್ಮ ರೌಡಿತನವನ್ನು ಪ್ರದರ್ಶಿಸುವುದು.

5. ಆಕಸ್ಮಿಕವಾಗಿ ಅಥವಾ ಅಪಘಾತದಂತೆ ತೋರುವ ಘಟನೆಯಲ್ಲಿ ತೊಂದರೆಗೀಡಾದವರ ಬಗ್ಗೆ ತಮ್ಮ ಕಾಳಜಿ ಅಥವಾ ಅನುಕಂಪ ತೋರದೇ ಇರುವುದು ಹಾಗೂ ನೆರವಿಗೆ ಧಾವಿಸದೇ ಅಲ್ಲಿಂದ ಕಾಲ್ಕೀಳುವುದು. ಇನ್ನೂ ಕೆಲವು ಸಲ ವ್ಯಂಗ್ಯವಾಗಿ ಅಥವಾ ಉತ್ಪ್ರೇಕ್ಷೆಯ ಸಹಾನುಭೂತಿ ವ್ಯಕ್ತಪಡಿಸುವುದು. ತೊಂದರೆಗೊಳಗಾದವರನ್ನು ಆಡಿಕೊಳ್ಳುವುದು, ನಗುವುದು ಅಥವಾ ಈಗ ಹೇಗಿದೆ ಎಂದು ಛೇಡಿಸುವುದು ಇತಾ್ಯದಿಗಳೂ ಕೂಡ ಅವರ ಲಕ್ಷಣಗಳೇ.

6. ಇನ್ನೂ ಕೆಲವು ಸಲ ಪರೋಕ್ಷವಾದ ರ್ಯಾಗಿಂಗ್‌ಗಳು ನಡೆಯುವಾಗ ಅವರ ಜೊತೆಯಲ್ಲಿರುವವರಿಗೇ ತಮ್ಮ ಗೆಳೆಯರು ರ್ಯಾಗಿಂಗ್ ಮಾಡುತ್ತಿದ್ದಾರೆಂದು ತಿಳಿಯುವುದಿಲ್ಲ. ಜೊತೆಗೆ ಇದೊಂದು ಅಪರಾಧವೆಂದೂ ತಿಳಿಯುವುದಿಲ್ಲ. ಅದು ಅವರ ನಿಯಂತ್ರಣಕ್ಕೆ ಸಿಗದೇ ಮುಂದುವರಿದು ಪ್ರಕರಣ ಗಂಭೀರ ಸ್ವರೂಪಕ್ಕೆ ತಿರುಗುವಾಗ ಶಿಕ್ಷಕರಲ್ಲಿ ಅಥವಾ ಪೋಷಕರಲ್ಲಿ ತಮ್ಮ ತಟಸ್ಥ ಭಾಗವಹಿಸುವಿಕೆಯನ್ನು ಒಪ್ಪಿಕೊಂಡುಬಿಡುತ್ತಾರೆ. ಸಾಮಾನ್ಯವಾಗಿ ರ್ಯಾಗಿಂಗ್‌ಗಳು ನಡೆಯುವಾಗ ತಪ್ಪಿತಸ್ಥರ ಜೊತೆ ತಟಸ್ಥವಾಗಿ ಸಾಕ್ಷಿಯಾಗಿದ್ದವರು, ತಾವು ಅಪರಾಧಿಗಳಾಗಿ ಬಿಡುವೆವು ಎಂಬ ಭಯದಲ್ಲಿ ತಾವೇನು ಮಾಡಿಲ್ಲ, ಯಾರೆಲ್ಲಾ ಏನು ಮಾಡಿದರು, ಇದು ಹೇಗೆ ಮತ್ತು ಯಾರಿಂದ ಯೋಜಿತವಾಯ್ತು ಎಂದು ಒಪ್ಪಿಕೊಳ್ಳುವುದರಿಂದಲೇ ಬಹಳಷ್ಟು ರ್ಯಾಗಿಂಗ್ ಕೇಸುಗಳು ಬಯಲಿಗೆ ಬರುವುದು.

7. ರ‍್ಯಾಗಿಂಗ್ ರಹಿತ ಶಾಲಾವಲಯವನ್ನು ಅಥವಾ ಕ್ಯಾಂಪಸನ್ನು ಸೃಷ್ಟಿಸಲು ಖಂಡಿತ ಸಾಧ್ಯವಿದೆ. ಅದಕ್ಕೆ ಆಡಳಿತ ಮಂಡಳಿ ಮಾತ್ರವಲ್ಲ, ಶಿಕ್ಷಕರ ಸಮೂಹವೂ ಅತೀವ ಆಸಕ್ತಿವಹಿಸಬೇಕಾಗುತ್ತದೆ.  ಹೇಗೆಂದು ಮುಂದೆ ನೋಡೋಣ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News