ದೈನಿಕ್ ಜಾಗರಣ್ ಬಿಜೆಪಿ ಪರ ಸಮೀಕ್ಷೆಗೆ ಹಣ ನೀಡಿದವರ‍್ಯಾರು?
ದೈನಿಕ್ ಜಾಗರಣ್ ವೆಬ್‌ಸೈಟ್‌ನಲ್ಲಿ 2017ರ ಫೆಬ್ರವರಿ 21ರಂದು ಮತಗಟ್ಟೆ ನಿರ್ಗಮನ ಸಮೀಕ್ಷೆ ಫಲಿತಾಂಶವನ್ನು ಪ್ರಕಟಿಸುವ ಮುನ್ನ ಹಲವು ಲೋಪಗಳನ್ನು ಎಸಗಿದೆ.
ಬಹುಹಂತದ ಚುನಾವಣೆಯ ಮಧ್ಯದಲ್ಲಿ ಚುನಾವಣಾ ಸಮೀಕ್ಷೆ ಫಲಿತಾಂಶಗಳನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು, ಭಾರತದ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳ ಅನ್ವಯ ನಿಷಿದ್ಧ. ಮತದಾನ ಆರಂಭವಾಗುವ 48 ಗಂಟೆಗಳ ಮೊದಲು ಇದು ಜಾರಿಗೆ ಬರಲಿದೆ. ಕೊನೆಯ ಹಂತದ ಮತದಾನ ಪೂರ್ಣಗೊಳ್ಳುವವರೆಗೆ ಇದು ಜಾರಿಯಲ್ಲಿರುತ್ತದೆ.
ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣೆ ನಡೆದ ತಕ್ಷಣ, ಮತಗಟ್ಟೆ ನಿರ್ಗಮನ ಸಮೀಕ್ಷೆಯನ್ನು ಪ್ರಕಟಿಸುವ ಮೂಲಕ ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ದೈನಿಕ್ ಜಾಗರಣ್ ಸ್ಪಷ್ಟವಾಗಿ ಉಲ್ಲಂಘಿಸಿದೆ.
ಎರಡನೆಯದಾಗಿ ಚುನಾವಣಾ ಆಯೋಗ 2017ರ ಚುನಾವಣೆಗಾಗಿ ಹೊರಡಿಸಿರುವ ಮಾರ್ಗಸೂಚಿ ಅನ್ವಯವೂ ಅಂಥ ಸಮೀಕ್ಷೆ ನಿಷೇಧಿಸಲಾಗಿದೆ. ಈ ನಿಯಮಾವಳಿಗೆ ತಡೆಯಾಜ್ಞೆ ಪಡೆಯಲು ಗೋವಾದ ಮಾಧ್ಯಮಸಂಸ್ಥೆಯೊಂದು ಸಲ್ಲಿಸಿದ ಅರ್ಜಿಯನ್ನು ಮುಂಬೈ ಹೈಕೋರ್ಟ್ ತಿರಸ್ಕರಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.
ಪಶ್ಚಿಮ ಉತ್ತರ ಪ್ರದೇಶದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಮಾಡಿ ಹೊರಬಂದ ಮತದಾರರನ್ನು ಸಮೀಕ್ಷೆಗೆ ಒಳಪಡಿಸಿರುವುದು ಕೂಡಾ ಚುನಾವಣೆ ನಿರ್ವಹಿಸುವ ಚುನಾವಣಾ ಆಯೋಗ ನೀಡಿದ ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆ.
ಮತಗಟ್ಟೆ ನಿರ್ಗಮನ ಸಮೀಕ್ಷೆಯನ್ನು ಪ್ರಕಟಿಸಿರುವ ಸಂಬಂಧ ಸಂಪಾದಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ್ ಗುಪ್ತಾ ಹೇಳುವಂತೆ, ಈ ಸಮೀಕ್ಷೆಯನ್ನು ಜಾಹೀರಾತು ವಿಭಾಗ ಪ್ರಕಟಿಸಿದೆ. ಇದು ಕಾಸು ಪಡೆದು ಪ್ರಕಟಿಸಿದ ಸುದ್ದಿ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
ಹೀಗೆ ಕಾಸು ಕೊಟ್ಟು ಪ್ರಕಟಿಸುವ ಸುದ್ದಿಯು, ಉದ್ದೇಶಪೂರ್ವಕವಾಗಿ ತಿರುಚಿದ ಜಾಹೀರಾತು ಆಗಿದ್ದು, ಸುದ್ದಿಯಂತೆ ಇದನ್ನು ಪ್ರಕಟಿಸಿ, ಓದುಗರನ್ನು ಮೂರ್ಖರನ್ನಾಗಿಸುವ ಒಂದು ಬಗೆ. ಇದು ಸಂಪಾದಕೀಯ ವಿಷಯವಾಗಿದ್ದು, ಯಾವುದೇ ಹಿತಾಸಕ್ತಿ ಇದರ ಹಿಂದೆ ಇಲ್ಲ ಎಂದು ನಂಬುವಂತೆ ಮಾಡುತ್ತದೆ.
ಈ ಮತಗಟ್ಟೆ ಸಮೀಕ್ಷೆಯು ಒಂದು ಬಗೆಯ ಹಣ ಪಡೆದು ಪ್ರಕಟಿಸಿದ ಸುದ್ದಿಯಾಗಿದ್ದು, ಇದಕ್ಕೆ ನಿಗದಿತ ವ್ಯಕ್ತಿ ಅಥವಾ ಪಕ್ಷ ಎಷ್ಟು ಹಣ ನೀಡಿದೆ ಹಾಗೂ ಯಾವ ರೂಪದಲ್ಲಿ ಪಾವತಿ ನೀಡಲಾಗಿದೆ, ಇದರ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಬೇಕಾಗಿದೆ.
ಹಾಗೆ ಮಾಡಲು ವಿಫಲವಾದಲ್ಲಿ, ಇದು ಚುನಾವಣಾ ಆಯೋಗದ ನಿರ್ದೇಶನದ ಸ್ಪಷ್ಟ ಉಲ್ಲಂಘನೆ. ಆದರೆ ಹೀಗೆ ಘೋಷಿಸಿಕೊಳ್ಳುವುದು, ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆ ಎಂದು ಒಪ್ಪಿಕೊಂಡಂತಾಗುತ್ತದೆ ಮತ್ತು ಅದು ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಯ ಗಂಭೀರ ಲೋಪವಾಗುತ್ತದೆ.
ಸಂಪಾದಕ ಬಲಿಪಶು
ಚುನಾವಣಾ ಆಯೋಗದ ದೂರಿನ ಮೇರೆಗೆ ಉತ್ತರ ಪ್ರದೇಶ ಪೊಲೀಸರು ಮಂಗಳವಾರ ದೈನಿಕ್ ಜಾಗರಣ್ ವೆಬ್‌ಸೈಟ್ ಸಂಪಾದಕನನ್ನು ಬಂಧಿಸಿ, ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 126ಎ ಹಾಗೂ 126ಬಿ ಉಲ್ಲಂಘಿಸಿದ ಆರೋಪ ಹೊರಿಸಿದೆ.
ಇದರ ಜತೆಗೆ ಭಾರತೀಯ ದಂಡಸಂಹಿತೆಯ ಸೆಕ್ಷನ್ 188ರ ಅನ್ವಯವೂ ಪ್ರಕರಣ ದಾಖಲಿಸಲಾಗಿದೆ. ಆದರೆ ಪತ್ರಿಕೆಯ ಮಾಲಕ ಹಾಗೂ ವ್ಯವಸ್ಥಾಪಕರ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಅವರ ಹಸ್ತಕ್ಷೇಪ ಇಲ್ಲದೇ ಇಂಥ ಜಾಹೀರಾತನ್ನು ಯಾರೂ ಪ್ರಕಟಿಸಲಾರರು.
ವಿಚಿತ್ರವೆಂದರೆ, ಭಾರತೀಯ ಮಾಧ್ಯಮ ಸಂಸ್ಥೆಗಳು ಕಾರ್ಯನಿರ್ವಹಿಸುವ ವಿಧಾನವನ್ನು ಗಮನಿಸಿದರೆ, ಜಾಹೀರಾತನ್ನು ಪ್ರಕಟಿಸುವ ವಿಚಾರದಲ್ಲಿ ಸಂಪಾದಕರ ಸಲಹೆಯನ್ನು ಪಡೆಯುವ ರೂಢಿ ಇಲ್ಲ. ಪತ್ರಿಕೆ ಮತ್ತು ಪುಸ್ತಕ ನೋಂದಣಿ ಕಾಯ್ದೆಯಡಿ, ಒಂದು ಪತ್ರಿಕೆಯಲ್ಲಿ ಪ್ರಕಟವಾಗುವ ಎಲ್ಲ ಅಂಶಗಳಿಗೆ ಸಂಪಾದಕ ತಾಂತ್ರಿಕವಾಗಿ ನೇರ ಹೊಣೆಯಾಗಿರುತ್ತಾನೆ.
ಅದು ಸಂಪಾದಕೀಯವಾಗಿರಲಿ ಅಥವಾ ಜಾಹೀರಾತು ಆಗಿರಲಿ. ಎಲ್ಲ ಅಂಶಗಳಿಗೂ ಸಂಪಾದಕನೇ ಹೊಣೆ. ಆದರೆ ಪಿಆರ್‌ಬಿ ಕಾಯ್ದೆಯಡಿ ವೆಬ್‌ಸೈಟ್‌ಗಳು ಬರುವುದಿಲ್ಲ. ಆದ್ದರಿಂದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆದ ಅಂಶಗಳಿಗೆ ಸಂಪಾದಕರನ್ನು ನೇರ ಹೊಣೆ ಮಾಡುವಂತಿಲ್ಲ. ಈ ಚುನಾವಣಾ ನಿರ್ಗಮನ ಸಮೀಕ್ಷೆಯನ್ನು ಜಾಹೀರಾತು ವಿಭಾಗ ಪ್ರಕಟಿಸಿದೆ ಎಂದು ಮಾಲಕರೇ ಒಪ್ಪಿಕೊಂಡಿದ್ದಾರೆ.
ಇದರಿಂದ ಈ ಸಮೀಕ್ಷೆ ಫಲಿತಾಂಶವನ್ನು ಪ್ರಕಟಿಸಿರುವುದು ವಾಣಿಜ್ಯ ಉದ್ದೇಶದಿಂದಲೇ ವಿನಃ ಇದು ಸಂಪಾದಕೀಯ ವಿಭಾಗದ ಅಂಶವಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇದರಿಂದ ಸಂಪಾದಕರ ಮೇಲೆ ದೂರು ಹೊರಿಸುವುದು ಸಮಂಜಸವಲ್ಲ. ಪೊಲೀಸರು ಹಾಗೂ ಚುನಾವಣಾ ಆಯೋಗದ ಈ ಕ್ರಮದಿಂದ ನಿಜವಾದ ಅಪರಾಧಿಗಳು ತಪ್ಪಿಸಿಕೊಂಡು, ಸಂಪಾದಕ ಬಲಿಪಶುವಾಗುವ ಅಪಾಯ ಇದೆ.
ಆದರೆ ಇಲ್ಲಿ ನಿಜವಾದ ಅಪರಾಧಿಗಳು ಯಾರು? ಚುನಾವಣಾ ಆಯೋಗ ಮತ್ತು ಪೊಲೀಸರು ಕೇಳಬೇಕಾದ ಪ್ರಶ್ನೆ ಎಂದರೆ, ಈ ಮತಗಟ್ಟೆ ನಿರ್ಗಮನ ಸಮೀಕ್ಷೆಯನ್ನು ಪ್ರಕಟಿಸಲು ಹಣ ನೀಡಿದವರು ಯಾರು ಎನ್ನುವುದರಲ್ಲಿ ನಿಜವಾದ ಲೋಪ ಅಡಗಿದೆ,
ದೈನಿಕ್ ಜಾಗರಣ್ ವರದಿ ಚುನಾವಣಾ ಆಯೋಗದ ನಿಯಮಾವಳಿಯನ್ನು ಹೇಗೆ ಉಲ್ಲಂಘಿಸಿದೆ ಎನ್ನುವ ಬಗ್ಗೆ ದ ವೈರ್ ಗಮನ ಸೆಳೆದಿದೆ. ಇದು ಭಾಗಶಃ ಕೆಲ ಸುಳಿವುಗಳನ್ನು ನೀಡಿದೆ. ರಿಸೋರ್ಸ್ ಡೆವಲಪ್‌ಮೆಂಟ್ ಇಂಟರ್‌ನ್ಯಾಷನಲ್ ಈ ಸಮೀಕ್ಷೆ ನಡೆಸಿದೆ ಎನ್ನಲಾಗಿದೆ. ಚುನಾವಣಾ ಆಯೋಗ ಈ ಸಂಸ್ಥೆಯ ವಿರುದ್ಧವೂ ಕ್ರಮಕ್ಕೆ ಸೂಚಿಸಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಈ ಹೆಸರಿನ ಒಂದು ಕಂಪೆನಿ, ಮತಗಟ್ಟೆ ನಿರ್ಗಮನ ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
ವೈರ್‌ಗೆ ಮಾಡಿರುವ ಇ-ಮೇಲ್‌ನಲ್ಲಿ, ಉತ್ತರ ಪ್ರದೇಶದ ಮೊದಲ ಹಂತದ ಮತದಾನದ ವೇಳೆ ಯಾವುದೇ ಬಗೆಯ ಮತಗಟ್ಟೆ ಸಮೀಕ್ಷೆಯಲ್ಲಿ ನಮ್ಮ ಸಂಸ್ಥೆ ಪಾಲ್ಗೊಂಡಿಲ್ಲ ಎಂದು ರಿಸೋರ್ಸ್ ಡೆವಲಪ್‌ಮೆಂಟ್ ಇಂಟರ್‌ನ್ಯಾಷನಲ್ ಇಂಡಿಯಾದ ಆಡಳಿತ ನಿರ್ದೇಶಕ ರಾಜೀವ್ ಗುಪ್ತಾ ಸ್ಪಷ್ಟಪಡಿಸಿದ್ದಾರೆ.
ಈ ಕಂಪೆನಿ ಮಾನವಶಕ್ತಿ ಪೂರೈಕೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಚುನಾವಣಾ ಸಮೀಕ್ಷೆ ನಡೆಸುವ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ರಾಜೀವ್ ಗುಪ್ತಾ ಸತ್ಯವನ್ನೇ ಹೇಳುತ್ತಿದ್ದಾರೆ ಎನಿಸುತ್ತದೆ. ಹಾಗಿದ್ದ ಮೇಲೆ ರಿಸೋರ್ಸ್ ಡೆವಲಪ್‌ಮೆಂಟ್ ಇಂಟರ್‌ನ್ಯಾಷನಲ್ ಸಂಸ್ಥೆ ಸಮೀಕ್ಷೆ ನಡೆಸಿದೆ ಎಂದು ದೈನಿಕ್ ಜಾಗರಣ್ ಏಕೆ ಹೇಳಿಕೊಂಡಿದೆ? ಈ ಪ್ರಶ್ನೆಯನ್ನು ಪತ್ರಿಕೆಯ ಮಾಲಕರಿಗೆ ಪೊಲೀಸರು ಹಾಗೂ ಚುನಾವಣಾ ಆಯೋಗ ಕೇಳಬೇಕಿದೆ.
ಕುತೂಹಲಕರ ಅಂಶವೆಂದರೆ, ಇದೇ ಸಂಕ್ಷಿಪ್ತ ರೂಪವನ್ನು ಹೊಂದಿರುವ ಆರ್‌ಡಿಐ ಎಂಬ ಕಂಪೆನಿ (ರೀಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಇನೀಶಿಯೇಟಿವ್) ಕೂಡಾ ಚುನಾವಣಾ ಸಮೀಕ್ಷೆಗಳನ್ನು ನಡೆಸಿದ ಇತಿಹಾಸ ಹೊಂದಿರುವುದು ಮಾತ್ರವಲ್ಲದೇ ಬಿಜೆಪಿ ಜತೆ ಸಂಪರ್ಕವನ್ನೂ ಹೊಂದಿದೆ. ಇದನ್ನು ಚುನಾವಣಾ ತಜ್ಞ ದೇವೇಂದ್ರ ಕುಮಾರ್ ನಡೆಸುತ್ತಾರೆ.
2013ರಲ್ಲಿ ಇಂಡಿಯಾ ಟುಡೇಯಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಬಿಜೆಪಿ ಹಲವು ಮುಖಂಡರನ್ನು ಹೊಂದಿರುವಂತೆ ಹಲವು ಸಮೀಕ್ಷೆ ಏಜೆನ್ಸಿಗಳನ್ನೂ ಹೊಂದಿದೆ. ರೀಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಇನೀಶಿಯೇಟಿವ್‌ನ ದೇವೇಂದ್ರ ಕುಮಾರ್ ಅವರು ವಸುಂಧರ ರಾಜೇ ಮತ್ತು ಅರುಣ್ ಜೇಟ್ಲಿ ಪರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕುಮಾರ್ ಅವರು ಉತ್ತಮ ವಿಶ್ಲೇಷಕ ಮತ್ತು ಅಂಕಣಕಾರ. ಅವರ ವೆಬ್‌ಸೈಟ್ ಡೈಲಿ ಓದುವ ಪುಟದಲ್ಲಿ ಅವರು ಬರೆದ ಕೆಲ ಲೇಖನಗಳನ್ನು ಉಲ್ಲೇಖಿಸಲಾಗಿದೆ. ಈ ಕೆಳಗಿನ ಶೀರ್ಷಿಕೆ ಅವರ ನಿರ್ದಿಷ್ಟ ಒಲವನ್ನು ಸಮರ್ಪಕವಾಗಿ ಬಿಂಬಿಸುತ್ತದೆ. ನೋಟು ರದ್ದತಿಯು ಭಾರತದ ಮೇಲಿನ ವಿಶ್ವಾಸವನ್ನು ಮರುಸ್ಥಾಪನೆ ಮಾಡಿದೆ. ಮೋದಿ ಸರಕಾರವುವು ದಲಿತರ ಕಲ್ಯಾಣಕ್ಕಾಗಿ ಗಂಭೀರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಕಾಂಗ್ರೆಸ್ ಪಕ್ಷ ಹಾವುಗಳ ಬುಟ್ಟಿಯಾಗಿದ್ದು ಎನ್‌ಡಿಎ ಅದರ ಗುರಿ. ಇಶ್ರತ್ ಜಹಾನ್ ಬಗೆಗಿನ ಹೇಳಿಕೆ, ಜಾತ್ಯತೀತರ ಬಣ್ಣ ಬಯಲುಗೊಳಿಸಿದೆ ಎಂಬ ಶೀರ್ಷಿಕೆಯ ಲೇಖನಗಳಿವೆ.
ದೈನಿಕ್ ಜಾಗರಣ್‌ನಲ್ಲಿ ಪ್ರಕಟವಾಗಿರುವ ಸಮೀಕ್ಷಾ ವರದಿಯನ್ನು ತಾನು ನೀಡಿಲ್ಲ ಎಂದು ಕುಮಾರ್ ಅವರ ಸಂಘಟನೆ ಹೇಳಿಕೊಂಡರೂ, ಉತ್ತರ ಪ್ರದೇಶದ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎಕನಾಮಿಕ್ ಟೈಮ್ಸ್‌ನ ಹಿರಿಯ ಸಂಪಾದಕಿ ರೋಹಿಣಿ ಸಿಂಗ್, ಮಂಗಳವಾರ ಕುಮಾರ್ ಅವರನ್ನು ಲಕ್ನೋದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುತಿಸಿದ್ದಾರೆ.
ಕುಮಾರ್ ನಿಜವಾಗಿ ಸತ್ಯ ಹೇಳುತ್ತಿರಬಹುದು. ಆದರೆ ಚುನಾವಣಾ ಆಯೋಗ, ಯಾವ ಆರ್‌ಡಿಐ, ಕಾನೂನುಬಾಹಿರ ಸಮೀಕ್ಷೆ ನಡೆಸಿದೆ ಎನ್ನುವುದನ್ನು ಪತ್ತೆ ಮಾಡಬೇಕಿದೆ. ಜತೆಗೆ ಯಾವುದಾದರೂ ಪಕ್ಷ ಆರ್‌ಡಿಐಗೆ ಇಂಥ ಸಮೀಕ್ಷೆ ನಡೆಸುವಂತೆ ಪ್ರೇರೇಪಿಸಿದೆಯೇ ಎನ್ನುವ ಬಗ್ಗೆಯೂ ತನಿಖೆ ಕೈಗೊಳ್ಳಬೇಕು.
ಬಿಜೆಪಿ ಸಿದ್ಧಾಂತಕ್ಕೆ ವಿರೋಧವಾಗಿರುವ ಪಕ್ಷಗಳು ಬಿಜೆಪಿಯ ಹೆಸರುಗೆಡಿಸಲು ಈ ಪಿತೂರಿಯಲ್ಲಿ ಶಾಮೀಲಾಗಿವೆ ಎಂದೂ ಹೇಳಲಾಗುತ್ತಿದೆ. ಅಥವಾ ಬಿಜೆಪಿ ಈ ಸಮೀಕ್ಷೆ ನಡೆಸುವಂತೆ ಉತ್ತೇಜಿಸಿರುವ ಸಾಧ್ಯತೆಯೂ ಇದೆ. ಮೊದಲ ಸುತ್ತಿನಲ್ಲಿ ತೀರಾ ಕಳಪೆ ಸಾಧನೆ ಮಾಡಿದ್ದನ್ನು ಮುಚ್ಚಿಹಾಕುವ ಪ್ರಯತ್ನ ಇದು ಎಂದೂ ಹೇಳಲಾಗುತ್ತಿದೆ. ವಿಶ್ವಾಸಾರ್ಹ ತನಿಖೆಯಷ್ಟೇ ಈ ಪ್ರಕರಣದ ಸತ್ಯಾಂಶವನ್ನು ಬಯಲುಗೊಳಿಸಬಲ್ಲದು.