ರಾಧಿಕಾ ವೇಮುಲಾ, ಮಕ್ಕಳು ದಲಿತರು : ಕಾನೂನಿನಿಂದ ಸ್ಪಷ್ಟ

Update: 2017-02-22 10:21 GMT

ರಾಧಿಕಾ ತಾವು ಹಾಗೂ ಮಕ್ಕಳು ದಲಿತ ಸಮುದಾಯಕ್ಕೆ ಸೇರಿದವರು ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ಇದು ಸರಿಯಾದ ನಿರ್ಧಾರ. ಇದಕ್ಕೆ ವಿರುದ್ಧವಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ನೇಮಕಗೊಂಡ ಆಯೋಗ ಹಾಗೂ ಗುಂಟೂರು ಜಿಲ್ಲಾಧಿಕಾರಿ ಇದನ್ನು ಅಲ್ಲಗಳೆಯುವ ಮೂಲಕ ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಸಾಮಾಜಿಕ ನ್ಯಾಯದ ಅಂಶವನ್ನು ಸೋಲಿಸುತ್ತಿದ್ದಾರೆ.

ಕಳೆದ ವರ್ಷದ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿವಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ತಾಯಿಗೆ ಆಂಧ್ರಪ್ರದೇಶದ ಗುಂಟೂರು ಜಿಲ್ಲಾಧಿಕಾರಿ ಅಂತಿಮ ಶೋಕಾಸ್ ನೋಟಿಸ್ ನೀಡಿದ್ದಾರೆ. ‘‘ನೀವು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಪ್ರತಿಪಾದನೆಗೆ ಸೂಕ್ತ ಪುರಾವೆಗಳನ್ನು 15 ದಿನಗಳ ಒಳಗಾಗಿ ನೀಡಬೇಕು’’ ಎಂದು ಸೂಚಿಸಿದ್ದಾರೆ. ಈ ಪ್ರತಿಪಾದನೆಯನ್ನು ಸಾಬೀತುಪಡಿಸಲು ವಿಫಲರಾದರೆ, ಅವರ ಕುಟುಂಬಕ್ಕೆ ನೀಡಿರುವ ಪರಿಶಿಷ್ಟ ಜಾತಿಯವರು ಎಂಬ ಪ್ರಮಾಣಪತ್ರವನ್ನು ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರೋಹಿತ್ ಪರಿಶಿಷ್ಟ ವರ್ಗದಡಿ ಬರುವ ಮಾಳ ಜಾತಿಗೆ ಸೇರಿದವರಾಗಿದ್ದು, ತಾನು ಕೂಡಾ ಅದೇ ಜಾತಿಗೆ ಸೇರಿದವಳು ಎನ್ನುವುದು ರಾಧಿಕಾ ಪ್ರತಿಪಾದನೆ. ರೋಹಿತ್ ಅವರ ಜಾತಿ ನಿರ್ಧರಿಸಲು ಕೈಗೊಂಡಿರುವ ತನಿಖೆಯ ಅಂಗವಾಗಿ ಈ ನೋಟಿಸ್ ನೀಡಲಾಗಿದೆ. ಅವರ ಜಾತಿ ಬಗ್ಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಈ ತನಿಖೆ ಕೈಗೊಂಡಿದೆ.

2016ರ ಜೂನ್‌ನಲ್ಲಿ ಜಿಲ್ಲಾಧಿಕಾರಿ ಈ ತನಿಖೆಗೆ ಆದೇಶ ನೀಡಿದ್ದರು. ‘‘ತಾವು ವಡ್ಡರ ಜಾತಿಗೆ ಸೇರಿದ ವ್ಯಕ್ತಿಯಾಗಿದ್ದು, ಇದು ಇತರ ಹಿಂದುಳಿದ ವರ್ಗದಡಿ ಬರುತ್ತದೆ. ಆದ್ದರಿಂದ ವೇಮುಲಾ ದಲಿತ ಅಲ್ಲ’’ ಎಂದು ರೋಹಿತ್ ಅವರ ತಂದೆ ಪ್ರಮಾಣಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ. ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ.ರೂಪನ್‌ವಾಲ್ ಅಧ್ಯಕ್ಷತೆಯ ಏಕವ್ಯಕ್ತಿ ನ್ಯಾಯಾಂಗ ಆಯೋಗವನ್ನು ಕೂಡಾ ವೇಮುಲಾ ಅವರ ಜಾತಿ ನಿರ್ಧರಿಸುವ ಸಲುವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೇಮಕ ಮಾಡಿತ್ತು.

ರೋಹಿತ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಅಂಶದ ಬಗ್ಗೆ ತನಿಖೆ ನಡೆಸಿದ ಆಯೋಗ ತನ್ನ ವರದಿಯಲ್ಲಿ ರೋಹಿತ್ ಪರಿಶಿಷ್ಟ ಜಾತಿಗೆ ಸೇರಿದವರಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಮೀಸಲಾತಿಯ ಲಾಭ ಪಡೆಯುವ ಸಲುವಾಗಿ ರಾಧಿಕಾ ದಲಿತೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ನ್ಯಾಯಾಂಗ ಆಯೋಗ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿತ್ತು.

ವೇಮುಲಾ ಕುಟುಂಬ ಈ ಪ್ರಕರಣವನ್ನು ನ್ಯಾಯಾಲಯಕ್ಕೆ ಒಯ್ಯಲು ನಿರ್ಧರಿಸಿದೆ. ಹಾಲಿ ಇರುವ ಕಾನೂನುಗಳು, ರಾಧಿಕಾ ಹಾಗೂ ಅವರ ಕುಟುಂಬದ ಪರವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ರಾಜೇಂದ್ರ ಶ್ರೀನಿವಾಸ ಮತ್ತು ಮಹಾರಾಷ್ಟ್ರ ಸರಕಾರ (2010) ನಡುವಿನ ಪ್ರಕರಣದಲ್ಲಿ, ನಿರ್ಧರಿಸಬೇಕಾದ ಪ್ರಶ್ನೆ ಎಂದರೆ, ಮಹಿಳೆ ಪರಿಶಿಷ್ಟ ಜಾತಿಯ ಅಥವಾ ಪಂಗಡದ ಕುಟುಂಬದಲ್ಲಿ ಹುಟ್ಟಿ ಮೇಲ್ವರ್ಗದ ಒಬ್ಬ ವ್ಯಕ್ತಿಯನ್ನು ವಿವಾಹವಾದರೆ, ಮಹಿಳೆ ವಿವಾಹವಾದ ಬಳಿಕ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವಳಾಗಿ ಉಳಿಯುತ್ತಾಳೆಯೇ ಎನ್ನುವುದು.

ಮುಂಬೈ ಹೈಕೋರ್ಟ್‌ನ ಪೂರ್ಣಪೀಠ ಈ ಬಗ್ಗೆ ತೀರ್ಪು ನೀಡುವಾಗ ಸುಪ್ರೀಂಕೋರ್ಟ್‌ನ ವಿ.ವಿ.ಗಿರಿ ಮತ್ತು ಡಿ.ಸೂರಿ ದೋರಾ (1959) ಪ್ರಕರಣದ ಉಲ್ಲೇಖ ಮಾಡಿದೆ. ಹುಟ್ಟುವಾಗ ಇದ್ದ ಜಾತಿಯು, ಮದುವೆ ವೇಳೆ ಅಥವಾ ದತ್ತು ಪಡೆಯುವ ವೇಳೆ ಬದಲಾಗುವುದಿಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು. ಮುಂಬೈ ಹೈಕೋರ್ಟ್ ತೀರ್ಪು ಈ ಕೆಳಗಿನಂತಿದೆ:

‘‘ಒಬ್ಬ ಮಹಿಳೆ ಹುಟ್ಟಿನಿಂದ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ್ದು, ಮೇಲ್ವರ್ಗದ ವ್ಯಕ್ತಿಯನ್ನು ವಿವಾಹವಾದ ಮಾತ್ರಕ್ಕೆ ಆಕೆಯ ಜಾತಿ ಬದಲಾಗುವುದಿಲ್ಲ. ಪರಿಶಿಷ್ಟ ಜಾತಿ ಅಥವಾ ಪಂಗಡದ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ, ಹುಟ್ಟಿನಿಂದ ಪಡೆಯುವ ಜಾತಿಯ ಕಾರಣದಿಂದಾಗಿ ಹಲವು ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಜಾತಿಯ ಕಾರಣದಿಂದಾಗಿ ಅನುಭವಿಸಿದ ಇಂತಹ ಹಿಂಸೆ, ಆಕೆ ಮೇಲ್ವರ್ಗದ ವ್ಯಕ್ತಿಯನ್ನು ವಿವಾಹವಾದರೆ ಬದಲಾಗುವುದಿಲ್ಲ. ಆಕೆಯ ವಿವಾಹದ ಬಳಿಕವೂ ಹುಟ್ಟಿನಿಂದ ಆಕೆ ಇರುವ ಜಾತಿಯ ಹಣೆಪಟ್ಟಿಯೇ ಆಕೆಗೆ ಮುಂದುವರಿಯುತ್ತದೆ.’’

ರಮೇಶ್‌ಭಾಯ್ ದಭಾಯಿ ನಾಯ್ಕ ಹಾಗೂ ಗುಜರಾತ್ ಸರಕಾರ ವಿರುದ್ಧದ ಪ್ರಕರಣ (2012)ದಲ್ಲಿ ಸುಪ್ರೀಂಕೋರ್ಟ್ ಈ ಕೆಳಗಿನ ಪ್ರಶ್ನೆಯನ್ನು ಇತ್ಯರ್ಥಪಡಿಸಿದೆ: ‘‘ಪತಿ-ಪತ್ನಿಯರ ಪೈಕಿ ಇಬ್ಬರು ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದವರಾಗಿದ್ದು, ಮತ್ತೊಬ್ಬರು ಆಗಿಲ್ಲದಿದ್ದರೆ ಆ ಕುಟುಂಬದ ಸ್ಥಿತಿಗತಿ ಏನಾಗುತ್ತದೆ? ಸಂವಿಧಾನದತ್ತವಾಗಿ ನೀಡಿದ ಪ್ರಯೋಜನವನ್ನು ಪಡೆಯುವಲ್ಲಿ ಇಂಥ ತಂದೆ-ತಾಯಿಯ ಮಕ್ಕಳ ಸ್ಥಿತಿ ಏನು?’’

ಸುಪ್ರೀಂಕೋರ್ಟ್ ಅಭಿಪ್ರಾಯದಂತೆ ಪರಿಶಿಷ್ಟ ಜಾತಿ/ ಪಂಗಡ ಹಾಗೂ ಇತರ ವರ್ಗಗಳ ಮಂದಿಯ ಅಂತರ್ಜಾತಿ ವಿವಾಹದ ಪ್ರಕರಣಗಳಲ್ಲಿ ಮಗು ತಂದೆಯ ಜಾತಿಗೇ ಸೇರುತ್ತದೆ ಎಂದು ನಿರ್ಧರಿಸುವುದು ಸರಿಯಲ್ಲ. ಪರಿಸ್ಥಿತಿ ಹಾಗೂ ವಾಸ್ತವಾಂಶಗಳಿಗೆ ಅನುಗುಣವಾಗಿ ಇದನ್ನು ನಿರ್ಧರಿಸಬೇಕಾಗುತ್ತದೆ. ಸುಪ್ರೀಂಕೋರ್ಟ್ ಈ ಸಂಬಂಧ ನೀಡಿರುವ ಸ್ಪಷ್ಟ ತೀರ್ಪು ಹೀಗಿದೆ:

‘‘ಅಂಥ ವಿವಾಹದಿಂದ ಹುಟ್ಟುವ ಮಕ್ಕಳು ತಂದೆಯ ಜಾತಿಯನ್ನೇ ಪಡೆದಲ್ಲಿ, ಗಂಭೀರ ಸಮಸ್ಯೆಗಳಿಗೆ ಅದು ಕಾರಣವಾಗುತ್ತದೆ. ಉದಾಹರಣೆಗೆ ಪರಿಶಿಷ್ಟ ಪಂಗಡದ ಮಹಿಳೆಯೊಬ್ಬರು ಮೇಲ್ವರ್ಗದ ವ್ಯಕ್ತಿಯನ್ನು ವಿವಾಹವಾಗಿ, ವಿಧವೆಯಾದರೆ ಅಥವಾ ಸ್ವಲ್ಪಸಮಯದ ಬಳಿಕ ಗಂಡನಿಂದ ಪರಿತ್ಯಕ್ತಳಾಗುತ್ತಾಳೆ ಎಂದುಕೊಳ್ಳಿ. ಆಕೆ ತನ್ನ ತವರು ಮನೆಗೆ ಅಥವಾ ಸಮುದಾಯಕ್ಕೆ, ಶಿಶು ಅಥವಾ ಗರ್ಭದೊಂದಿಗೆ ಮರಳಬೇಕಾಗುತ್ತದೆ. ಆಗ ಮಗು ತನ್ನ ತಾಯಿ ಯಾವ ಸಮುದಾಯದಿಂದ ಬಂದಿದ್ದಾರೋ ಅದೇ ಸಮುದಾಯಕ್ಕೆ ಸೇರಿದ್ದು ಎಂದು ಗುರುತಿಸಿಕೊಳ್ಳುತ್ತದೆ.

ಆ ಸಮುದಾಯದ ಸದಸ್ಯನಾಗಿಯೇ ಮಗು ಬೆಳೆಯುತ್ತದೆ ಹಾಗೂ ಆ ಸಮುದಾಯ ಅನುಭವಿಸುವ ಎಲ್ಲ ಸೌಲಭ್ಯವಂಚನೆ, ಅವಮಾನ, ಇತಿಮಿತಿಗಳನ್ನು ಎದುರಿಸಬೇಕಾಗುತ್ತದೆ. ಇಷ್ಟಾಗಿಯೂ ಮಗು ತಂದೆಯ ಜಾತಿಗೇ ಸೇರುತ್ತದೆ ಎಂದು ಹೇಳಿದರೆ ಸಂವಿಧಾನದತ್ತವಾದ ಎಲ್ಲ ಸೌಲಭ್ಯಗಳು, ಪ್ರಯೋಜನಗಳು ಹಾಗೂ ಸಂರಕ್ಷಣೆಗಳಿಂದ ವಂಚಿತವಾಗುವುದಿಲ್ಲವೇ?’’

ಈ ಸಂಬಂಧದ ಹಲವು ಹಿಂದಿನ ಪ್ರಕರಣಗಳನ್ನು ಚರ್ಚಿಸುವ ವೇಳೆ ಸುಪ್ರೀಂಕೋರ್ಟ್, ಅರಬಿಂದ ಕುಮಾರ್ ಸಹಾ ಮತ್ತು ಅಸ್ಸಾಂ ಸರಕಾರದ ನಡುವಿನ ಪ್ರಕರಣ (2002) ದಲ್ಲಿ ಗುವಾಹಟಿ ಹೈಕೋರ್ಟ್‌ನ ತೀರ್ಪಿನ ಅಂಶವನ್ನು ಉಲ್ಲೇಖಿಸಿದೆ. ಈ ಪ್ರಕರಣದಲ್ಲಿ ತಂದೆ ಮೇಲ್ವರ್ಗಕ್ಕೆ ಸೇರಿದವರು ಮತ್ತು ತಾಯಿ ಪರಿಶಿಷ್ಟ ಜಾತಿಗೆ ಸೇರಿದವರು. ಇವರು ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಪ್ರತಿಪಾದಿಸಿದ್ದರು. ಅರ್ಜಿದಾರರ ತಂದೆ ಮೇಲ್ವರ್ಗಕ್ಕೆ ಸೇರಿದವರಾಗಿದ್ದರೂ, ಅರ್ಜಿದಾರರು ಪರಿಶಿಷ್ಟ ಕುಟುಂಬದಲ್ಲಿ ಬೆಳೆದಿದ್ದಾರೆ. ಪರಿಶಿಷ್ಟ ಜಾತಿಯ ಜನ ಹಾಗೂ ಇತರ ವರ್ಗದ ಜನರು ಅರ್ಜಿದಾರರನ್ನು ಪರಿಶಿಷ್ಟ ಜಾತಿಗೇ ಸೇರಿದವರು ಎಂದು ಪರಿಗಣಿಸಿದ್ದನ್ನು ಕೋರ್ಟ್ ಉಲ್ಲೇಖಿಸಿತ್ತು.

ಆದ್ದರಿಂದ ಸುಪ್ರೀಂಕೋರ್ಟ್ ಈ ಜಾತಿ ನಿರ್ಧರಣೆಯ ಬಗ್ಗೆ ಅಂತಿಮವಾಗಿ ಈ ಕೆಳಗಿನ ಅಭಿಪ್ರಾಯಕ್ಕೆ ಬಂದಿತ್ತು: ‘‘ಅಂತರ್ಜಾತಿ ವಿವಾಹದ ಪ್ರಕರಣದಲ್ಲಿ ಅಥವಾ ಪರಿಶಿಷ್ಟ ಜಾತಿ/ ಪಂಗಡದ ಹಾಗೂ ಇತರ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಪರಸ್ಪರ ವಿವಾಹ ಸಂದರ್ಭದಲ್ಲಿ, ಹುಟ್ಟುವ ಮಕ್ಕಳ ಜಾತಿಯನ್ನು ನಿರ್ಧರಿಸುವ ಅಂಶವು, ಆಯಾ ಪ್ರಕರಣದ ವಾಸ್ತವಾಂಶಗಳನ್ನು ಒಳಗೊಂಡಿರಬೇಕಾಗುತ್ತದೆ. ಅಂಥ ವಿವಾಹ ಸಂಬಂಧದಿಂದ ಹುಟ್ಟುವ ಮಗುವಿನ ಜಾತಿಯನ್ನು ಆಯಾ ಪರಿಸ್ಥಿತಿಯ ವಾಸ್ತವಾಂಶಗಳನ್ನು ಅರಿಯದೇ ನಿರ್ಧರಿಸಲು ಸಾಧ್ಯವಿಲ್ಲ. ಅಂಥ ವಿವಾಹ ಸಂದರ್ಭದಲ್ಲಿ, ಮಗುವಿಗೆ ತಂದೆಯ ಜಾತಿಯೇ ಬರುತ್ತದೆ ಎಂಬ ಕಲ್ಪನೆ ಇದೆ.

ಇಂಥ ಅಂತರ್ಜಾತಿ ವಿವಾಹದಲ್ಲಿ ತಂದೆ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದ್ದರೆ ಅಂಥ ನಂಬಿಕೆ ಮತ್ತಷ್ಟು ಪ್ರಬಲವಾಗುತ್ತದೆ. ಆದರೆ ಇಂಥ ನಂಬಿಕೆಯಿಂದ ಅಂತಿಮ ನಿರ್ಧಾರಕ್ಕೆ ಬರುವಂತಿಲ್ಲ ಹಾಗೂ ಅಂಥ ಮಕ್ಕಳು ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದ ಕುಟುಂಬದಲ್ಲಿ ತನ್ನ ತಾಯಿ ಬೆಳೆಸಿದ್ದಾರೆ ಎನ್ನುವುದನ್ನು ಸಾಬೀತುಪಡಿಸಬೇಕಾಗುತ್ತದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ರಾಧಿಕಾ ವೇಮುಲಾ ಹಾಗೂ ಅವರ ಮಕ್ಕಳ ಬಗೆಗಿನ ಪ್ರಕರಣವನ್ನು ಈ ಕೆಳಗಿನಂತೆ ಸಾರಾಂಶ ರೂಪದಲ್ಲಿ ನೀಡಬಹುದಾಗಿದೆ:

ರಾಧಿಕಾ ಹುಟ್ಟಿದ್ದು ದಲಿತ ವಲಸೆ ಕಟ್ಟಡ ನಿರ್ಮಾಣ ಕಾರ್ಮಿಕರ ಕುಟುಂಬದಲ್ಲಿ. ಅಂದರೆ ಮಾಳ (ಪರಿಶಿಷ್ಟ ಜಾತಿ) ಸಮುದಾಯದಲ್ಲಿ. ಬಳಿಕ ಆಕೆಯನ್ನು ಗುಂಟೂರಿನ ವಡ್ಡರ ಜನಾಂಗದ ಮಹಿಳೆ ಅಂಜನಿ (ದೇವಿ) ಎಂಬವರು ದತ್ತುಪಡೆದು ಬೆಳೆಸಿದರು. ಶ್ರೀಮಂತ ಹಾಗೂ ಸುಶಿಕ್ಷಿತ ಕುಟುಂಬದವರು ರಾಧಿಕಾ ಅವರನ್ನು ದತ್ತು ಪಡೆದರೂ, ದತ್ತು ಪಡೆದ ತಾಯಿಯ ವಂಶದ ಕುಡಿ ಪಡೆಯುವ ಎಲ್ಲ ಸೌಲಭ್ಯಗಳೂ ಅವರಿಗೆ ಲಭಿಸಲಿಲ್ಲ. ಆಕೆ ದತ್ತು ಪಡೆದ ಮನೆಯಲ್ಲಿ ಮನೆಗೆಲಸದವಳಾಗಿಯೇ ಕೆಲಸ ಮಾಡಬೇಕಾಯಿತು.

ಜತೆಗೆ ಒಳ್ಳೆಯ ಶಿಕ್ಷಣ ಕೂಡಾ ಅವರಿಗೆ ಲಭ್ಯವಾಗಲಿಲ್ಲ. ವಡ್ಡರ ಸಮುದಾಯಕ್ಕೆ ಸೇರಿದ ವೇಮುಲಾ ಮಣಿಕುಮಾರ್ ಎಂಬಾತನನ್ನು ವಿವಾಹವಾದಾಗ ಆಕೆಗೆ ಇನ್ನೂ 14 ವರ್ಷ. ಹೀಗೆ ಬಾಲ್ಯವಿವಾಹ ಸಂತ್ರಸ್ತೆಯಾದರು. ಆಕೆ ದಲಿತ ಕುಟುಂಬದಲ್ಲಿ ಹುಟ್ಟಿದವರು ಎನ್ನುವುದನ್ನು ವಿವಾಹದ ಬಳಿಕವೂ ಗೌಪ್ಯವಾಗಿಯೇ ಇಡಲಾಗಿತ್ತು. ಆದರೆ ಕಾಲಕ್ರಮೇಣ ರಾಧಿಕಾ ಮೂಲತಃ ಮಾಳ ಸಮುದಾಯಕ್ಕೆ ಸೇರಿದವರು. ಅವರನ್ನು ದತ್ತು ಪಡೆಯಲಾಗಿದೆ ಎನ್ನುವ ವಿಚಾರ ಪತಿಗೆ ತಿಳಿಯಿತು. ತಾನು ಯೋಚಿಸಿದಂತೆ ರಾಧಿಕಾ ವಾಸ್ತವವಾಗಿ ವಡ್ಡರ ಸಮುದಾಯಕ್ಕೆ ಸೇರಿದವರಲ್ಲ ಎನ್ನುವ ಅಂಶ ಬಹಿರಂಗವಾದ ಬಳಿಕ ಪತಿ ಕಿರುಕುಳ ನೀಡಲಾರಂಭಿ ಸಿದ ಹಾಗೂ ಆಕೆಯನ್ನು ಅವಮಾನಿಸಲು ತೊಡಗಿದ. ಅಂತಿಮವಾಗಿ ಆಕೆ ದಲಿತ ಜನಾಂಗಕ್ಕೆ ಸೇರಿದವಳು ಎಂಬ ಕಾರಣಕ್ಕೆ 1990ರಲ್ಲಿ ಪತ್ನಿಯನ್ನು ಹೊರಹಾಕಿದ.

ರೋಹಿತ್ ಹಾಗೂ ಇತರ ಇಬ್ಬರು ಮಕ್ಕಳ ಜತೆಗೆ ರಾಧಿಕಾ, ಒಂದು ಕೊಠಡಿಯ ಮನೆಯನ್ನು ಬಾಡಿಗೆಗೆ ಪಡೆದು, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪ್ರಕಾಶ್ ನಗರ ಎಂಬಲ್ಲಿ ಎರಡು ದಶಕಗಳನ್ನು ಕಳೆದರು. ಹೊಲಿಗೆ ಯಂತ್ರದಲ್ಲಿ ದಿನವಿಡೀ ಶ್ರಮವಹಿಸಿ ದುಡಿದು, ಮಕ್ಕಳನ್ನು ಬೆಳೆಸಿದರು.

ಆಕೆ ವಾಸವಾಗಿದ್ದ ಸ್ಥಳ 40 ದಲಿತ ಕುಟುಂಬಗಳ ಕೇರಿಯಾಗಿದ್ದು, ಬಹುತೇಕ ಮಂದಿ ದಿನಗೂಲಿ ಕಾರ್ಮಿಕರು ಹಾಗೂ ಹಣಕಾಸು ಸ್ಥಿತಿಯೂ ಕೆಳಮಟ್ಟದಲ್ಲಿದ್ದ ಕಾರಣ ಆ ಸಮುದಾಯಗಳ ಜತೆ ನಿಕಟವಾದ ಬಾಂಧವ್ಯ ಬೆಳೆಯಿತು. ವಿಚ್ಛೇದನದ ಬಳಿಕವೂ, ರಾಧಿಕಾ ಅವರ ಪತಿ ಪ್ರಕಾಶನಗರಕ್ಕೆ ಭೇಟಿ ನೀಡಿ, ಕಿರುಕುಳ ನೀಡಿದ್ದ. ಆಗ ಆಕೆಯನ್ನು ಸ್ಥಳೀಯರು ರಕ್ಷಿಸಿದ್ದರು.

ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯರು ಹಾಗೂ ಅಂಜನಿದೇವಿಯವರ ನೆರೆಹೊರೆಯವರು ರಾಧಿಕಾಳನ್ನು ಮನೆಗೆಲಸದ ಹುಡುಗಿ ಎಂದೇ ಗುರುತಿಸಿದ್ದರು. ಮಗ ರೋಹಿತ್‌ಗೆ ಆರಂಭದಲ್ಲಿ ಜನ್ಮದತ್ತವಾದ ಯಾವ ಸೌಲಭ್ಯವೂ ಸಿಗಲಿಲ್ಲ. ಬದಲಾಗಿ, ಸೌಲಭ್ಯವಂಚನೆ, ಅಗೌರವ, ಅವಮಾನ ಹಾಗೂ ಪರಿಶಿಷ್ಟ ಸಮುದಾಯದವರು ಅನುಭವಿಸುವ ಎಲ್ಲ ಸಂಕಷ್ಟಗಳನ್ನು ರೋಹಿತ್ ಕೂಡಾ ಅನುಭವಿಸಬೇಕಾಯಿತು. ರೋಹಿತ್ ಮೀಸಲಾತಿಗೆ ಅರ್ಹನಾಗಿದ್ದರೂ, ಯಾವುದೇ ಮೀಸಲಾತಿಯನ್ನು ಪಡೆಯಲಿಲ್ಲ.

ಇದರಿಂದ ರಾಧಿಕಾ ತಾವು ಹಾಗೂ ಮಕ್ಕಳು ದಲಿತ ಸಮುದಾಯಕ್ಕೆ ಸೇರಿದವರು ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ಇದು ಸರಿಯಾದ ನಿರ್ಧಾರ. ಇದಕ್ಕೆ ವಿರುದ್ಧವಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ನೇಮಕಗೊಂಡ ಆಯೋಗ ಹಾಗೂ ಗುಂಟೂರು ಜಿಲ್ಲಾಧಿಕಾರಿ ಇದನ್ನು ಅಲ್ಲಗಳೆಯುವ ಮೂಲಕ ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಸಾಮಾಜಿಕ ನ್ಯಾಯದ ಅಂಶವನ್ನು ಸೋಲಿಸುತ್ತಿದ್ದಾರೆ.

ಕೃಪೆ : thewire.in

Writer - ಅನುರಾಗ್ ಭಾಸ್ಕರ್

contributor

Editor - ಅನುರಾಗ್ ಭಾಸ್ಕರ್

contributor

Similar News

ಜಗದಗಲ
ಜಗ ದಗಲ