ಈಗ ಫೇಸ್‌ಬುಕ್ ಮೂಲಕವೂ ಹಣ ಪಾವತಿಸಿ
ನ್ಯೂಯಾರ್ಕ್, ಫೆ.22: ಫೇಸ್‌ಬುಕ್ ನ ಚ್ಯಾಟ್ ಅಪ್ಲಿಕೇಶನ್ ಮೂಲಕ ಅಂತಾರಾಷ್ಟ್ರೀಯವಾಗಿ ಹಣ ಪಾವತಿಗೆ ಅನುಕೂಲ ಕಲ್ಪಿಸುವ ಹೊಸ ಸೇವೆಯನ್ನು ಟ್ರಾನ್ಸ್‌ಫರ್ ವೈಸ್ ಎಂಬ ಹಣ ವರ್ಗಾವಣೆ ಕಂಪೆನಿ ಆರಂಭಿಸಿದೆ.
ಈ ಲಂಡನ್ ಮೂಲದ ಸ್ಟಾರ್ಟ್ ಅಪ್ ಸಂಸ್ಥೆಯು ತಾನು ಫೇಸ್‌ಬುಕ್ ಮೆಸೆಂಜರ್ ‘ಚ್ಯಾಟ್ ಬಾಟ್’ ಅಭಿವೃದ್ಧಿ ಪಡಿಸಿದ್ದಾಗಿ ಘೋಷಿಸಿದೆ. ಇದೊಂದು ಸ್ವಯಂಚಾಲಿತ ಪ್ರೋಗ್ರಾಂ ಆಗಿದ್ದು, ಇದರ ಮೂಲಕ ಬಳಕೆದಾರರು ವಿವಿಧ ಸಂಸ್ಥೆಗಳನ್ನು ಸಂಪರ್ಕಿಸಬಹುದು ಹಾಗೂ ಆನ್‌ಲೈನ್ ಮೂಲಕ ಖರೀದಿ ಮಾಡಬಹುದಾಗಿದೆ.
ಈ ಚ್ಯಾಟ್ ಬಾಟ್ ಮೂಲಕ ಬಳಕೆದಾರರು ತಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ಅಮೆರಿಕದಿಂದ ಹಣ ಕಳುಹಿಸಬಹುದು, ಇಲ್ಲವೇ ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಹಾಗೂ ಯುರೋಪ್ ದೇಶಗಳಿಂದಲೂ ಫೇಸ್‌ಬುಕ್ ಮೆಸೆಂಜರ್ ಮುಖಾಂತರ ಕಳುಹಿಸಬಹುದಾಗಿದೆ. ಹಣ ವಿನಿಮಯ ದರಗಳ ಅಲರ್ಟ್ ಗಳನ್ನೂ ಪಡೆಯಬಹುದಾಗಿದೆ.
ಫೇಸ್‌ಬುಕ್ ಈಗಾಗಲೇ ತನ್ನ ಮೆಸೆಂಜರ್ ಆ್ಯಪ್ ಮೂಲಕ ಅಮೆರಿಕದೊಳಗೆ ಹಣ ವರ್ಗಾವಣೆ ಮಾಡುವ ಸೌಲಭ್ಯ ಹೊಂದಿದ್ದರೂ ಸದ್ಯ ಈ ಸೌಲಭ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಭ್ಯವಿಲ್ಲ.
ತನ್ನ ಮೆಸೆಂಜರ್ ಆ್ಯಪ್ ಅನ್ನು ಫೇಸ್ ಬುಕ್ ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ಡೆವಲಪರ್ ಗಳಿಗೆ ತೆರದಿದ್ದು, ಇದರ ಮುಖಾಂತರ ತನ್ನ ಗ್ರಾಹಕ ಸೇವೆಗಳನ್ನು ವಿಸ್ತರಿಸುವ ಯೋಜನೆ ಹೊಂದಿದೆ.
ಚ್ಯಾಟ್ ಬಾಟ್ ಸೌಕರ್ಯ ಒದಗಿಸಿರುವ ಟ್ರಾನ್ಸ್‌ಫರ್ ವೈಸ್ ಕಂಪೆನಿಯನ್ನು 2011ರಲ್ಲಿ ಆರಂಭಿಸಲಾಗಿದ್ದು, ಎಸ್ಟೋನಿಯಾದ ಟಾವೆಟ್ ಹಿನ್ರಿಕಸ್ ಹಾಗೂ ಕ್ರಿಸ್ಟೊ ಕಾರ್ಮನ್ನ್ ಇದರ ಸ್ಥಾಪಕರಾಗಿದ್ದಾರೆ. ಬ್ಯಾಂಕುಗಳು ಅಂತಾರಾಷ್ಟ್ರೀಯ ಹಣ ವರ್ಗಾವಣೆಗೆ ವಿಧಿಸುತ್ತಿದ್ದ ಹೆಚ್ಚು ಶುಲ್ಕದಿಂದ ಬೇಸತ್ತು ಅವರು ಈ ಕಂಪೆನಿ ಆರಂಭಿಸಿದ್ದರು.