ಇಬ್ಬಾಯಿ ಖಡ್ಗದಂತಹ ತಾಳೆಗರಿಯ ಜೊತೆಗೆ....
‘‘....ಗರಗಸದಂತಹ ಅಂಚುಗಳುಳ್ಳ ತಾಳೆ ಗರಿಗೂ ನನ್ನ ಬದುಕಿಗೂ ಬಹಳಷ್ಟು ಸಾಮ್ಯತೆಯಿದೆ. ನನ್ನನ್ನು ಸೌದೆ ಒಟ್ಟು ಮಾಡಿ ತರಲು ಕಳುಹಿಸುತ್ತಿದ್ದಾಗ ಚದುರಿ ಬಿದ್ದಿರುತ್ತಿದ್ದ ತಾಳೆಗರಿಯನ್ನು ಹೆಕ್ಕುತ್ತಿದ್ದುದಷ್ಟೇ ಅಲ್ಲ, ಅದರೊಡನೆ ಆಟವಾಡಿದಂತೆಲ್ಲ ನನ್ನ ಚರ್ಮ ತರಚಿ, ಕೀರಿ, ಹರಿದುಹೋಗುತ್ತಿತ್ತು. ಅದು ಈ ಪುಸ್ತಕದಲ್ಲಿ ಬೀಜರೂಪಿಯಾಗಿ ಮತ್ತು ಸಂಕೇತವಾಗಿ ಬೆಳೆದಿದೆ.
ಈ ಪುಸ್ತಕ ಪುಸ್ತಕವಾಗಲು ಕಾರಣವಾದ ಸಂಗತಿಗಳು ಹಲವು. ತಾಳೆಗರಿಯಂತೆಯೇ ನನ್ನ ರಕ್ತ ಹರಿಸಿದ, ನನ್ನ ಬದುಕಿನ ಹಲವು ಸ್ತರಗಳಲ್ಲಿ ಸಂಭವಿಸಿದ ಘಟನೆಗಳು; ನನ್ನನ್ನು ಅಜ್ಞಾನಕ್ಕೆ ದೂಡಿ ಉಸಿರುಕಟ್ಟಿ ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿದ ಅನ್ಯಾಯಯುತ ಸಾಮಾಜಿಕ ರಚನೆಗಳು, ಈ ಬಂಧನಗಳ ಒಡೆದು ಬಿಸಾಕುವ ನನ್ನ ಹತಾಶ ಪ್ರಯತ್ನ, ಕಟ್ಟಿದ ಸರಪಳಿ ತುಂಡುತುಂಡಾಗುವಾಗ ಅದರ ಜೊತೆಗೇ ಹರಿದ ರಕ್ತ ಇವೆಲ್ಲವೂ ಸೇರಿದೆ....’’
ತನ್ನ ‘ತಾಳೆಗರಿ’ ಆತ್ಮ ಕಥನದ ಕುರಿತಂತೆ ತಮಿಳು ಲೇಖಕಿ ಬಾಮಾ ಅವರು ತೋಡಿ ಕೊಳ್ಳುವುದು ಹೀಗೆ. ತಮಿಳಿನಲ್ಲಿ ಈ ಕೃತಿಯ ಹೆಸರು ‘ಕರುಕ್ಕು’. ಇದು ಲೇಖಕಿ ಬಾಮಾ ಅವರ ಆತ್ಮಕತೆ. ಹಲವು ಹೋರಾಟಗಳಲ್ಲಿ ಭಾಗಿಯಾಗಿರುವ ಬಾಮಾ ಅವರ ಈ ಕಥನ ಈಗಾಗಲೇ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನವರು ಪ್ರಕಟಿಸಿರುವ ಕರುಕ್ಕು ಇಂಗ್ಲಿಷ್ ಅನುವಾದವನ್ನು ಇಲ್ಲಿ ಖ್ಯಾತ ಲೇಖಕಿ ಡಾ. ಎಚ್. ಎಸ್. ಅನುಪಮಾ ಅವರು ಕನ್ನಡಕ್ಕಿಳಿಸಿದ್ದಾರೆ.
ಬಾಮಾ ಎಂಬ ಹೆಸರಿನಿಂದ ತಮಿಳಿನಲ್ಲಿ ಬರೆಯುತ್ತಿರುವ ಈ ಲೇಖಕಿಯ ನಿಜವಾದ ಹೆಸರು ಫಾಸ್ಟಿನಾಸೂಸೈರಾಜ್ ಅಥವಾ ಫಾಸ್ಟಿನಾ ಮೇರಿ ಫಾತಿಮಾ ರಾಣಿ. ತಮಿಳಿನಲ್ಲಿ ಫಾತಿಮಾ ಪದ ಬಾತಿಮಾ ಎಂದು ಉಚ್ಚರಿಸಲ್ಪಡುತ್ತದೆ. ಈ ಕಾರಣದಿಂದ ಅವರು ಬಾಮಾ ಎಂಬ ಹೆಸರಿನಲ್ಲಿ ಬರಹಲೋಕದಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಬಾಮಾ ಅವರದು ಕ್ರೈಸ್ತ ಕುಟುಂಬವಾದರೂ, ಅವರ ಅಜ್ಜ ದಲಿತ.
ಓರ್ವ ದಲಿತ ಕ್ರಿಶ್ಚಿಯನ್ನಾಗಿ ಸಮಾಜದಲ್ಲಿ ಅವರು ಎದುರಿಸಿದ ಸವಾಲುಗಳನ್ನು ತಾಳೆಗರಿಯಲ್ಲಿ ಕಟ್ಟಿಕೊಡುತ್ತಾರೆ. ಮರಾಠಿಯಲ್ಲಿ ದಲಿತ ಆತ್ಮಕತೆಗಳು ಬಹಳಷ್ಟು ಬಂದಿವೆ. ಆದರೆ ಈ ಕೃತಿ ಭಿನ್ನವಾಗುವುದು ಮತಾಂತರಗೊಂಡ ಒಬ್ಬ ದಲಿತ ಮಹಿಳೆಯ ಒಳಗುದಿಗಳು ಎನ್ನುವ ಕಾರಣಕ್ಕಾಗಿ. ಶಿಕ್ಷಕಿಯಾಗಿ, ಕ್ರೈಸ್ತ ಸನ್ಯಾಸಿನಿಯಾಗಿ ಆಕೆ ಕಂಡುಂಡ ಸತ್ಯಗಳು ಇಲ್ಲಿ ಕೆಂಡದಂತೆ ನಮ್ಮನ್ನು ಸುಡುತ್ತದೆ.
ಅವರ ಬದುಕಿನ ಬೇರೆ ಬೇರೆ ಮಗ್ಗುಲುಗಳು ಇಲ್ಲಿ ತೆರೆದುಕೊಂಡಿವೆ. ಬಾಮಾ ಅವರು ಈಗ ಸನ್ಯಾಸತ್ವ ತ್ಯಜಿಸಿದ್ದು, ಏಕಾಂಗಿ ದಲಿತ ಮಹಿಳೆಯಾಗಿ ಶಾಲೆಯೊಂದನ್ನು ನಡೆಸುತ್ತಿದ್ದಾರೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈ ಕೃತಿಯನ್ನು ಹೊರತಂದಿದೆ. 120 ಪುಟಗಳ ಈ ಕೃತಿಯ ಮುಖಬೆಲೆ 125 ರೂ.