ಮಿಡತೆಗಳಿಗೆ ಕಿವಿಯೊಡ್ಡಿ: ಅರುಂಧತಿ ರಾಯ್ ಅವರ ಅಪರೂಪದ ಬರಹಗಳು....
ಅರುಂಧತಿ ರಾಯ್ ಅವರು ಭಾರತದ ಆತ್ಮಸಾಕ್ಷಿಯಂತೆ ಬದುಕುತ್ತಿರುವವರು. ಭಾರತದ ಪ್ರಮುಖ ಚಿಂತಕರಲ್ಲಿ ಒಬ್ಬರಾಗಿರುವ ರಾಯ್, ಅಧಿಕಾರ ಕೇಂದ್ರಗಳನ್ನು ಸದಾ ಪ್ರಶ್ನಿಸುವ, ಆ ಕೇಂದ್ರಗಳ ನೈತಿಕ ಬುಡಕಟ್ಟುಗಳು ಖಿಲಗೊಂಡಿರುವ ಬಗೆಯನ್ನು ಬಯಲಿಗೆಳೆಯುವ ಹಾದಿಯನ್ನು ಆಯ್ದುಕೊಂಡಿರುವವರು. ಅವರ ವಿಚಾರಗಳಿಗೆ, ಆ ವಿಚಾರಗಳನ್ನು ಮಂಡಿಸುವ ಕ್ರಮದ ಬಗೆಗೆ ಅಪಾರವಾದ ಮೆಚ್ಚುಗೆಯನ್ನು ಗಳಿಸಿರುವಂತೆಯೇ ಅಷ್ಟೇ ಪ್ರಮಾಣದ ವಿರೋಧವನ್ನೂ ಎದುರಿಸುತ್ತಿರುವವರು. ರಾಯ್ ಅವರ ಚಿಂತನೆಗಳನ್ನು ಹಲವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಲ್ಲಿ ಖ್ಯಾತ ಲೇಖಕಿ ಡಾ. ಎಚ್. ಎಸ್. ಅನುಪಮಾ ಸಂಪಾದಕತ್ವದಲ್ಲಿ ಮತ್ತೊಮ್ಮೆ ಅವರ ಆಲೋಚನೆಗಳನ್ನು ಕನ್ನಡಕ್ಕೆ ತರಲಾಗಿದೆ. ಕೃತಿಯ ಹೆಸರು ‘ಮಿಡತೆಗಳಿಗೆ ಕಿವಿಯೊಡ್ಡಿ’. ಈಗಾಗಲೇ ಕನ್ನಡದಲ್ಲಿ ತಮ್ಮ ವೈಚಾರಿಕ ಲೇಖನಗಳ ಮೂಲಕ ಗುರುತಿಸಲ್ಪಟ್ಟಿರುವ ಡಾ. ಕೆ. ಆರ್. ಅಶೋಕ್, ಸುರೇಶ್ ಭಟ್ ಬಾಕ್ರಬೈಲ್, ದು. ಸರಸ್ವತಿ, ಬಿ. ಶ್ರೀಪಾದ ಮೊದಲಾದ ಸೂಕ್ಷ್ಮ ಮನಸಿಗರು ರಾಯ್ ಚಿಂತನೆಗಳನ್ನು ಕನ್ನಡಕ್ಕಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅರುಂಧತಿ ರಾಯ್ ಅವರ ಬರಹಗಳೆಲ್ಲ ವರ್ತಮಾನದ ರಾಜಕಾರಣದ ಜೊತೆಗೆ ಸಂಘರ್ಷಕ್ಕಿಳಿಯುವುದರಿಂದ ಅವು ಸದಾ ವಿವಾದಕ್ಕೊಳಗಾಗುತ್ತಲೇ ಇವೆ. ವ್ಯವಸ್ಥೆಯ ಕೆಂಗಣ್ಣಿಗೆ ಪದೇ ಪದೇ ಬಲಿಯಾಗುತ್ತಿವೆ. ಭಯೋತ್ಪಾದನೆ, ಬೃಹತ್ ಅಣೆಕಟ್ಟುಗಳು, ಅಣುಬಾಂಬ್, ಯುದ್ಧ, ಕಾಶ್ಮೀರ, ಮಾವೋವಾದ, ಜಾತಿ ವ್ಯವಸ್ಥೆ... ಹೀಗೆ ರಾಯ್ ಮುಟ್ಟುವುದೆಲ್ಲವೂ ಬೆಂಕಿಯ ಕೆಂಡ. ಅದು ಸುಡುವುದು ಸಹಜವೇ ಆಗಿದೆ. ಅವೆಲ್ಲವುಗಳಿಗೆ ಇಂದು ಪ್ರಧಾನ ಧಾರೆಯೊಂದು ನೀಡುತ್ತಾ ಬಂದಿರುವ ಜನಪ್ರಿಯ ವ್ಯಾಖ್ಯೆಗಳನ್ನು ಅಲ್ಲಗಳೆದು, ಸಮಸ್ಯೆಯ ಮೂಲವನ್ನು ಅವರು ತಡವಲು ಯತ್ನಿಸುವುದೇ ಸದ್ಯದ ಸಂದರ್ಭದಲ್ಲಿ ಅವರಿಗೆ ಮುಳುವಾಗಿದೆ. ಪ್ರಗತಿಪರ ಲೇಖಕರೂ ಅವರನ್ನು ಟೀಕಿಸುವಷ್ಟರ ಮಟ್ಟಿಗೆ ಅವರು ಮುಕ್ತವಾಗಿ, ತೆರೆದ ಕಣ್ಣಿನಿಂದ ಬರೆಯುತ್ತಾರೆ. ‘ಕಲ್ಪನೆಯ ಕೊನೆ’ ಲೇಖನದಲ್ಲಿ ಅಣ್ವಸ್ತ್ರ ರಾಜಕಾರಣದ ದುರಂತವನ್ನು ತೆರೆದಿಡು ತ್ತಾರೆ. ಭಾರತದ ಅಣುಬಾಂಬ್ ನಮ್ಮನ್ನಾಳುವ ವರ್ಗಗಳು ಮಾಡಿದ ಕೊನೆಯ ಮರೆ ಮೋಸದ ಕೆಲಸ ಎಂದು ಬರೆಯುವುದಕ್ಕೆ ಎಂಟೆದೆ ಬೇಕು. ರಾಯ್ ಅದನ್ನಿಲ್ಲಿ ಯಾವ ಅಂಜಿಕೆಯೂ ಇಲ್ಲದೆ ಬರೆಯುತ್ತಾರೆ. ಅಣುಬಾಂಬ್ ಎಂಬುದು ಮನುಷ್ಯ ಇಲ್ಲಿಯವರೆಗೆ ಸೃಷ್ಟಿಸಿರುವ ವಸ್ತುಗಳಲ್ಲೇ ಅತ್ಯಂತ ಪ್ರಜಾಪ್ರಭುತ್ವ ವಿರೋಧಿ, ದೇಶದ್ರೋಹಿ, ಅಮಾನವೀಯವಾದುದು ಎಂದು ಅವರು ಅಭಿಪ್ರಾಯ ಪಡುತ್ತಾರೆ. ‘ಸರ್ವರ ಒಳಿತಿಗಾಗಿ’ ಲೇಖನದಲ್ಲಿ ನರ್ಮದಾ ಯೋಜನೆಯನ್ನು ಮುಂದಿಟ್ಟುಕೊಂಡು, ಹೇಗೆ ಅಭಿವೃದ್ಧಿ ರಾಜಕಾರಣ ಈ ದೇಶದ ಬುಡಕಟ್ಟು ಜನರನ್ನು, ಬಡವರನ್ನು ನಾಶ ಮಾಡುತ್ತಿವೆ ಎನ್ನುವುದನ್ನು ಹೇಳುತ್ತಾರೆ. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಬಿಕ್ಕಟ್ಟುಗಳನ್ನು ಅವರು ಮನಮುಟ್ಟುವಂತೆ ಕಟ್ಟಿ ಕೊಡುತ್ತಾರೆ.