ಕಾಡೊಳಗಿನ ಜೀವನ ಸೆಲೆಯನ್ನು ಕಟ್ಟಿಕೊಡುವ ‘ಕಾಡಿನ ಚಿತ್ರಗಳು’

Update: 2017-03-02 18:33 GMT

ಒಬ್ಬ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೆಲಸ ಮಾಡುವ ವ್ಯಕ್ತಿ ಎರಡು ರೀತಿಯಲ್ಲಿ ಕಾಡುಗಳನ್ನು ನೋಡಬಲ್ಲ. ಅಧಿಕಾರಿಯಾಗಿ ಕಾಯ್ದೆ ಕಾನೂನಿನ ಮೂಲಕ ಕಾಡನ್ನು ನೋಡುವುದು. ಇನ್ನೊಂದು, ಸಂವೇದನಾ ಶೀಲ ಮನುಷ್ಯನಾಗಿ ಕಾಡನ್ನು ನೋಡುತ್ತಾ, ಬದುಕುತ್ತಾ ಅದನ್ನು ಆಸ್ವಾದಿಸುವುದು. ಅಧಿಕಾರಿಯಾಗಿ ಕಾಡಿನ ಮೇಲೆ ಹಕ್ಕು ಸಾಧಿಸುವುದಕ್ಕೂ, ಸಂವೇದನಾಶೀಲ ಮನುಷ್ಯನಾಗಿ ಕಾಡನ್ನು ಆಸ್ವಾದಿಸುವುದಕ್ಕೂ ವ್ಯತ್ಯಾಸವಿದೆ. ಅಧಿಕಾರಿಯೊಬ್ಬ ಸಂವೇದನಾಶೀಲ ಮನುಷ್ಯನೂ ಆದರೆ ಅದರಿಂದ ಕಾಡಿಗೂ, ಸಮಾಜಕ್ಕೂ ಸಾಕಷ್ಟು ಲಾಭಗಳಿವೆ. ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಡಾ. ಸಿ. ಎಚ್. ಬಸಪ್ಪನವರು ಸೃಜನಶೀಲ ಮನಸ್ಸಿನಿಂದ ಕಾಡನ್ನು ನೋಡಿ, ಅನುಭವಿಸಿ ಅದನ್ನು ಪುಸ್ತಕ ರೂಪದಲ್ಲಿ ತಂದಿದ್ದಾರೆ. 1997ರಲ್ಲಿ ಅವರ ‘ಕಾಡಿನ ಚಿತ್ರಗಳು’ ಕೃತಿ ಹೊರಬಂತು. ಇದು ಎಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಪಡೆಯಿತು ಎಂದರೆ ಒಂದೇ ವರ್ಷದಲ್ಲಿ 5,000 ಪ್ರತಿಗಳು ಮಾರಾಟವಾದವು. ಇದೀಗ ಆ ಕೃತಿಯನ್ನು ಮತ್ತೆ ನವಕರ್ನಾಟಕ ಪ್ರಕಾಶನ ಪುನರ್ ಮುದ್ರಿಸಿದೆ. ಇಲ್ಲಿ ಕ್ಯಾಮರಾ ಕಣ್ಣು ಮತ್ತು ಸೃಜನಶೀಲ ಮನುಷ್ಯನ ಒಳಗಣ್ಣು ಜೊತೆ ಜೊತೆಯಾಗಿ ಕೆಲಸ ಮಾಡಿದೆ. ಹೆಸರೇ ಸೂಚಿಸುವಂತೆ ಈ ಕೃತಿಯಲ್ಲಿ ವರ್ಣಮಯ ಚಿತ್ರಗಳಿವೆ. ಅದರ ಜೊತೆಗೆ ಅವರ ಕಾಡಿನ ನಡುವೆ ಕಳೆದ ಅನುಭವಗಳ ಚಿತ್ರಣವೂ ಇದೆ. ಚಿತ್ರ ಮತ್ತು ಚಿತ್ರಣಗಳ ಜುಗಲ್ ಬಂದಿ ಈ ಪುಸ್ತಕ. ಈ ಥರದ ಪುಸ್ತಕಗಳನ್ನು ಈಗಾಗಲೇ ಕೆಲವು ಖ್ಯಾತ ಲೇಖಕರು ಬರೆದಿದ್ದಾರಾದರೂ, ಕಾಡನ್ನು ಇವರಷ್ಟು ಹತ್ತಿರದಲ್ಲಿ ತಮ್ಮದಾಗಿಸಿಕೊಳ್ಳುವುದು ಅವರಿಗೆ ಅಷ್ಟು ಸುಲಭವಿರಲಿಲ್ಲ. ಇಲ್ಲಿ ಇವರ ವೃತ್ತಿ, ಪ್ರವೃತ್ತಿ ಒಂದೇ ಆಗಿದ್ದು ದರಿಂದ ಕಾಡಿನ ಬಗ್ಗೆ ಅಪಾರ ಮಾಹಿತಿಗಳನ್ನು ಸಂಗ್ರಹಿಸುವುದು, ಕಾಡಿನ ವೈವಿಧ್ಯಮಯ ಕತೆಗಳನ್ನು ಒಟ್ಟು ಗೂಡಿಸುವುದು ಅವರಿಗೆ ಸುಲಭವಾಗಿದೆ. ನಾಡಿನ ವಿಶಾಲ ಕಗ್ಗಾಡು ಪ್ರದೇಶಗಳಲ್ಲಿ ಗ್ರಂಥಕರ್ತರು ನುಸುಳಿ ಎಚ್ಚೆತ್ತು ಅಲೆದಾಡುವಾಗ ಹೆಜ್ಜೆ ಹೆಜ್ಜೆಗೂ ಪ್ರಕಟಗೊಂಡ ನಾದ-ನಿನಾದಗಳೊಂದಿಗೆ, ವಿವಿಧ ವನ್ಯಮೃಗ-ಪಕ್ಷಿಗಳ ಜಂಗಲ್ ಭಾಷೆಯಿಂದ ಮೈನವಿರೇಳಿಸುವ ರೋಮಾಂಚಕ ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷ ದೃಶ್ಯಗಳನ್ನು ಅನುಭವಿಸಿ, ಅಲ್ಲಿ ಸೆರೆಹಿಡಿದ ಚಿತ್ರಗಳೊಂದಿಗೆ ಈ ಕೃತಿಯನ್ನು ರಚಿಸಿದ್ದಾರೆ. ಕೃತಿಯೊಳಗೆ ಪ್ರವೇಶಿಸಿದರೆ ಸಾಕು, ನಿಧಾನಕ್ಕೆ ಕಾಡಿನ ರೋಮಾಂಚನ ನಮ್ಮದಾಗುತ್ತಾ ಹೋಗುತ್ತದೆ. ಕಾಡಿನೊಳಗೆ ಪ್ರಾಣಿಗಳ ನಡುವಿನ ಸಂಘರ್ಷಗಳನ್ನು, ಅದರ ವೈವಿಧ್ಯಮಯ ಬದುಕನ್ನೂ ಕೃತಿಯಲ್ಲಿ ಅತ್ಯಂತ ಆಕರ್ಷಕವಾಗಿ ಲೇಖಕರು ಕಟ್ಟಿ ಕೊಡುತ್ತಾರೆ. ಗಜಪಡೆಗಳು, ಚುಕ್ಕೆ ಬದಲಾಯಿಸಿಕೊಂಡ ಚಿರತೆ, ಮೃಗರಾಜ-ಗಜರಾಜ ಮುಖಾಮುಖಿ, ನಿಸರ್ಗದ ಅವಿವೇಕದಂತೆ ಭಾಸವಾಗುವ ಬಿಳಿ ಹುಲಿ, ಕಾಳಿಂಗ ಸರ್ಪಗಳು ಇವುಗಳ ಜೊತೆ ಜೊತೆಗೆ ಈ ಕಾಡು ಸದ್ಯ ಹೇಗೆ ರಾಜಕೀಯ ಬಲೆಯೊಳಗೆ ಸಿಲುಕಿ ಕೊಂಡಿದೆ, ಸಂರಕ್ಷಕರೇ ಹೇಗೆ ಭಕ್ಷಕರಾಗುತ್ತಿದ್ದಾರೆ ಎನ್ನುವ ಕಡೆಗೂ ಬರವಣಿಗೆ ಹೊರಳುತ್ತದೆ. 240 ಪುಟಗಳಿರುವ ಈ ಕೃತಿಯ ಮುಖಬೆಲೆ 250 ರೂ. ಆಸಕ್ತರು 080-22392460 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News