ದಿಲ್ಲಿ ದರ್ಬಾರ್

Update: 2017-03-04 18:55 GMT

ಮಾಯಾ ಮೆಮ್‌ಸಾಬ್?
ಉತ್ತರ ಪ್ರದೇಶದ ಚುನಾವಣಾ ಭವಿಷ್ಯ ಇನ್ನು ಮೇಲೆ ಗೊಂದಲಕಾರಿಯಲ್ಲ. ಲಕ್ನೋ ವರದಿಗಳ ಪ್ರಕಾರ, ಮಾಯಾವತಿಯವರ ಬಹುಜನ ಸಮಾಜ ಪಕ್ಷ ನಿರೀಕ್ಷೆಗೂ ಮೀರಿದ ಅಚ್ಚರಿಯ ಸಾಧನೆ ಮಾಡಲಿದೆ. ಮೋದಿ- ಶಾ ಹಾಗೂ ರಾಹುಲ್- ಅಖಿಲೇಶ್ ಕೂಟಗಳಿಗೆ ಇದು ಆಘಾತಕಾರಿ ಸುದ್ದಿ. ಬಿಜೆಪಿ ಹಾಗೂ ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟ ನಿರೀಕ್ಷಿತ ಸಾಧನೆ ಮಾಡಿದರೂ, ಸರಕಾರ ರಚನೆಗೆ ಬೆಹನ್‌ಜಿ ಅವರನ್ನು ಅವಲಂಬಿಸಲೇಬೇಕು. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಗದ್ದುಗೆ ಒಂದೇ ದಿಕ್ಕಿನತ್ತ ಮುಖ ಮಾಡುತ್ತದೆ. ಮಾಯಾವತಿಯವರಿಗೆ ಆಪ್ತವಾಗಿರುವ ಮೂಲಗಳ ಪ್ರಕಾರ, ಚುನಾವಣೋತ್ತರ ಮೈತ್ರಿಗೆ ಮಾಯಾವತಿ ಮುಂದಿಟ್ಟಿರುವ ಏಕೈಕ ಬೇಡಿಕೆ ಎಂದರೆ, ಸಿಎಂ ಗಾದಿ. ಆದರೆ ಸದ್ಯಕ್ಕಂತೂ ಇವೆಲ್ಲ ವದಂತಿ. ಏಕೆಂದರೆ, ಅಷ್ಟು ಆಳಕ್ಕಿಳಿದು ಪಕ್ಷಗಳ ಅಂತರಾಳ ತಿಳಿದುಕೊಳ್ಳುವ ಜಾಣ್ಮೆ ಬೆರಳೆಣಿಕೆಯ ಮಂದಿಗಷ್ಟೇ ಇದೆ. ಬೆಹನ್‌ಜಿ ಮಾತ್ರ ಮಾಧ್ಯಮದ ಜತೆ ಎಲ್ಲೂ ತುಟಿ ಬಿಚ್ಚಿಲ್ಲ.


ಸರ್ವೇ ಬ್ಲೂಸ್...!
ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಬಹುಮತ ಸಾಧಿಸುತ್ತದೆ ಎನ್ನುವುದು ಪಕ್ಷದ ಆಂತರಿಕ ಸಮೀಕ್ಷೆ ನಡೆಸಿದ ಅಧ್ಯಕ್ಷ ಅಮಿತ್ ಶಾ ಅಂದಾಜಿಸಿದ್ದಾರೆ. ಆದರೆ ಪೂರ್ವ ಉತ್ತರ ಪ್ರದೇಶದಲ್ಲಿ ನಡೆಯುವ ಕೊನೆಯ ಹಂತದ ಮತದಾನಕ್ಕಾಗಿ ಪ್ರಧಾನಿ ಆ ಭಾಗಕ್ಕೆ ಹೆಚ್ಚಿನ ಸಮಯ ಮೀಸಲಿಡಬೇಕು ಎಂದು ಶಾ ಒತ್ತಡ ತಂದಿದ್ದಾರೆ. ಏಕೆಂದರೆ ಅಖಿಲೇಶ್- ರಾಹುಲ್ ಕೂಟದಿಂದಾಗಿ ಮೊದಲ ಎರಡು ಹಂತಗಳಲ್ಲಿ ಬಿಜೆಪಿಯಿಂದ ನಿರೀಕ್ಷಿತ ಸಾಧನೆ ಸಾಧ್ಯವಾಗಿಲ್ಲ. ಆದರೆ ವಾರಣಾಸಿಯಲ್ಲಿ ಮೂರು ದಿನಗಳ ಕಾಲ ಪ್ರಚಾರ ಕೈಗೊಂಡಿರುವುದು ಹಾಗೂ ಭರ್ಜರಿ ರೋಡ್‌ಶೋ ನಡೆಸಿರುವುದರಿಂದ, ಅಮಿತ್ ಶಾ ಅವರ ಲೆಕ್ಕಾಚಾರ ಫಲಿಸಿದಂತಿದೆ. ಕೊನೆಯ ಮೂರು ಹಂತಗಳ ಮತದಾನದಲ್ಲಿ ಎಸ್ಪಿ-ಕಾಂಗ್ರೆಸ್ ಕೂಟ ಸ್ಪರ್ಧೆಯಲ್ಲಿ ತೀರಾ ಹಿಂದೆ ಬಿದ್ದಿದೆಯಂತೆ. ಬಿಜೆಪಿಗೇ ಅಚ್ಚರಿ ತರುವಷ್ಟರ ಮಟ್ಟಿಗೆ ಬಿಜೆಪಿ ಅಭ್ಯರ್ಥಿಗಳಿಗೆ ಸಹಾಯಹಸ್ತ ಚಾಚಲು ಆರೆಸ್ಸೆಸ್ ಕಣಕ್ಕೆ ಧುಮುಕಿದೆ. ಬಿಜೆಪಿ ಗೆದ್ದರೆ ಅದರ ಎಲ್ಲ ಯಶಸ್ಸೂ ಪಕ್ಷದ ಮುಖಂಡರಿಂದ ‘ಚಾಣಕ್ಯ’ ಎಂದು ಕರೆಸಿಕೊಂಡಿರುವ ಅಮಿತ್ ಶಾಗೆ ಸಲ್ಲಬೇಕು.

ಉಮಾ ಡಾರ್ಕ್‌ಹಾಸ್?
ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತ ಗಳಿಸಿದರೆ ಸಿಎಂ ಕಿರೀಟ ಉಮಾಭಾರತಿಯವರಿಗೆ ದಕ್ಕುತ್ತದೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಯಾದವ್ ಸಮುದಾಯ ಹೊರತುಪಡಿಸಿದಂತೆ ಇತರ ಹಿಂದುಳಿದ ವರ್ಗಗಳ ವೋಟ್‌ಬ್ಯಾಂಕ್‌ಗೆ ಲಗ್ಗೆ ಹಾಕಲು ಪ್ರಧಾನಿ ತಂತ್ರ ಹೂಡಿದ್ದಾರೆ ಎನ್ನಲಾಗಿದ್ದು, ಬುಂಡೇಲ್‌ಖಂಡ ಮೂಲದ ಉಮಾಭಾರತಿಯವರಿಗೆ ಈ ಕಾರಣದಿಂದ ಅದೃಷ್ಟ ಖುಲಾಯಿಸಿದೆ. ಆದರೆ ಉಮಾಭಾರತಿ ಉದಯವಾಗುವುದು ಯೋಗಿ ಆದಿತ್ಯನಾಥ್ ಅವರಂಥ ಮುಖಂಡರಿಗೆ ಅರಗಿಸಿಕೊಳ್ಳುವುದು ಕಷ್ಟ. ಈ ಮಧ್ಯೆ ಉಮಾಭಾರತಿ ಮಾತ್ರ ಪ್ರಧಾನಿ ಗಮನ ಸೆಳೆಯಲು ಸಾಧ್ಯವಿರುವ ಎಲ್ಲ ತಂತ್ರಗಳನ್ನೂ ಅನುಸರಿಸುತ್ತಿದ್ದಾರೆ. ಮಾರ್ಕ್ಸ್ ಹಾಗೂ ಲೆನಿನ್ ಅವರಂಥ ಕ್ರಾಂತಿಕಾರಿಗಳನ್ನು ಜಪಿಸಿದ ಅವರು, ಪ್ರಧಾನಿ ಮೋದಿಯವರ ಕನಸಿನ ಕೂಸಾದ ನೋಟು ರದ್ದತಿಯನ್ನು ಆರ್ಥಿಕ ಕ್ರಾಂತಿ ಎಂದು ಬಣ್ಣಿಸಿದ್ದಾರೆ. ಆದರೆ ಬಿಜೆಪಿ ಕೈಯಿಂದ ಉತ್ತರ ಪ್ರದೇಶ ಜಾರಿಹೋಗಲು ಕೂಡಾ ಇದೇ ನೋಟು ರದ್ದತಿ ಕಾರಣವಾಗುತ್ತದೆಯೇ? ಎಂಬ ಭೀತಿ ಬಿಜೆಪಿಯಲ್ಲಿ ಆವರಿಸಿದೆ.


ಮಧ್ಯಪ್ರದೇಶವೂ ಒಡೆದ ಮನೆ?
ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ರಾಹುಲ್ ಗಾಂಧಿ ಪದೇ ಪದೇ ಒತ್ತಡ ಹಾಕುತ್ತಿದ್ದಾರೆ. ಏಕೆಂದರೆ ಬಿಜೆಪಿ ಜತೆ ನೇರ ಹಣಾಹಣಿ ಸಾಧಿಸಿ ಕಾಂಗ್ರೆಸ್ ಗೆಲ್ಲಬಹುದಾದ ರಾಜ್ಯಗಳು ಇವು ಮಾತ್ರ. ಬಹುಶಃ ರಾಹುಲ್ ರಾಜಸ್ಥಾನ ಬಗ್ಗೆ ಖುಷಿಯಿಂದಿದ್ದಾರೆ. ಆದರೆ ಮಧ್ಯಪ್ರದೇಶ ಅವರಿಗೆ ಕಬ್ಬಿಣದ ಕಡಲೆಯಾಗಿದೆ. ಉದಾಹರಣೆಗೆ ಜ್ಯೋತಿರಾದಿತ್ಯ ಸಿಂಧಿಯಾ, ದಿಗ್ವಿಜಯ್ ಸಿಂಗ್, ಕಮಲನಾಥ್ ಹಾಗೂ ಇತರ ಕಾಂಗ್ರೆಸ್ ಮುಖಂಡರು ಕಳೆದ ಎರಡೂವರೆ ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಭೋಪಾಲ್‌ನಲ್ಲಿ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ರೋಡ್‌ಶೋ ನಡೆಸಿದ್ದಾರೆ. ಆದರೆ ಈ ಪ್ರಾದೇಶಿಕ ರಾಜರ ಬೆಂಬಲಿಗರ ಯೋಚನೆ ಮಾತ್ರ ಭಿನ್ನ. ಎಲ್ಲರೂ ಪ್ರತ್ಯೇಕವಾಗಿಯೇ ಉಳಿಯುವ ನಿರ್ಧಾರಕ್ಕೆ ಇವರು ಬಂದಿದ್ದಾರೆ. ತಮ್ಮ ನಾಯಕರ ಭಾಷಣಕ್ಕೆ ಮಾತ್ರ ಅವರು ಚಪ್ಪಾಳೆ ತಟ್ಟಿದ್ದಾರೆ; ಕೇಕೆ ಹಾಕಿದ್ದಾರೆ ಮತ್ತು ಘೋಷಣೆಗಳನ್ನು ಕೂಗಿದ್ದಾರೆ. ಹೆಚ್ಚುಕಡಿಮೆ ಏಕತೆಯ ಸಮಾವೇಶದ ಬದಲು ಇದು ವಿಘಟನೆಯ ಸಮಾವೇಶವೇ ಆಯಿತು. ಮಧ್ಯಪ್ರದೇಶದ ರಾಜಧಾನಿಯನ್ನು ಬ್ಯಾನರ್, ಪೋಸ್ಟರ್, ಕಟೌಟ್ ಹಾಗೂ ಹೋರ್ಡಿಂಗ್‌ಗಳಿಂದ ಮುಚ್ಚುವಲ್ಲೂ ಈ ಬೆಂಬಲಿಗರ ಗುಂಪುಗಳ ನಡುವೆ ತುರುಸಿನ ಪೈಪೋಟಿ ಇತ್ತು. ರಾಹುಲ್ ಅವರ ಪಾಲಿಗೆ ಮಾತ್ರ ಮಧ್ಯಪ್ರದೇಶ ಇತರ ಎಲ್ಲ ರಾಜ್ಯಗಳಂತೆ ಒಡೆದ ಮನೆಯಾಗಿಯೇ ಉಳಿದಿದೆ.


ಸಂಭ್ರಮಾಚರಣೆಗೆ ಸಜ್ಜು!
ಮೋದಿ ಸರಕಾರ ಇನ್ನೇನು ಮೂರು ತಿಂಗಳ ಒಳಗಾಗಿ ಮೂರನೆ ವಾರ್ಷಿಕೋತ್ಸವದ ಸಂಭ್ರಮಾಚರಣೆಗೆ ಸಜ್ಜಾಗಿದೆ. ಮೋದಿ ಸಹಜವಾಗಿಯೇ ಎಲ್ಲ ಸಚಿವರಿಂದ ಸಾಧನೆಯ ಪಟ್ಟಿ ಪಡೆಯಲು ಮುಂದಾಗಿದ್ದಾರೆ. ಇದನ್ನು ಬಿಂಬಿಸುವ ಮೂಲಕ ಭರ್ಜರಿ ಸಂಭ್ರಮಾಚರಣೆ ಮಾಡುವುದು ಮೋದಿ ಯೋಜನೆ. 2014ರ ಮೇ ತಿಂಗಳಿನಿಂದೀಚೆಗೆ ಅಂದರೆ ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ಪ್ರತೀ ಸಚಿವಾಲಯಗಳು ಅನುಷ್ಠಾನಕ್ಕೆ ತಂದ ಹೊಸ ಯೋಜನೆಗಳನ್ನು ಹಾಗೂ ಆಯಾ ಸಚಿವಾಲಯಗಳ ಸಾಧನೆಗಳನ್ನು ಕ್ರೋಡೀಕರಿಸುವಂತೆ ಈಗಾಗಲೇ ಸಂಪುಟ ಕಾರ್ಯದರ್ಶಿ ಎಲ್ಲ ಸಚಿವಾಲಯಗಳಿಗೆ ಫರ್ಮಾನು ಹೊರಡಿಸಿದ್ದಾರೆ. ಆಯಾ ಸಚಿವಾಲಯ ತಮ್ಮ ಸಾಧನೆಗಳನ್ನು ಬಣ್ಣಿಸುವ ಜತೆಗೆ, ಮೋದಿ ಅಧಿಕಾರಕ್ಕೆ ಬಂದ ಬಳಿಕ ಅನುಷ್ಠಾನಕ್ಕೆ ತಂದ ಪ್ರಮುಖ ಯೋಜನೆಗಳನ್ನು ಕೂಡಾ ದೊಡ್ಡ ಮಟ್ಟದಲ್ಲಿ ಬಿಂಬಿಸಲು ಉದ್ದೇಶಿಸಿದೆ. ಮೋದಿ ಸರಕಾರದ ಅಥವಾ ಇನ್ಯಾವುದೇ ಸರಕಾರದ ನೀತಿಯಂತೆ, ಯಶಸ್ವಿ ಸಚಿವಾಲಯಗಳ ಸಾಧನೆ ಬಗ್ಗೆ ಟಾಂಟಾಂ ಹೊಡೆಸಲಾಗುತ್ತದೆ; ವಿಫಲರಾದವರು ಮತ್ತಷ್ಟು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News