ತಮಿಳುನಾಡಿನ ಉಚಿತ ಪಡಿತರ ರಾಜ್ಯದಲ್ಲಿ ಅಕ್ರಮವಾಗಿ ಮಾರಾಟ

Update: 2017-03-07 13:31 GMT

ಚಾಮರಾಜನಗರ. ಮಾ.7: : ತಮಿಳುನಾಡು ಸರಕಾರ ಅಲ್ಲಿನ ಬಡಜನರಿಗೆ ಉಚಿತವಾಗಿ ನೀಡುತ್ತಿರುವ ಪಡಿತರ ಅಕ್ಕಿ ರಾಜ್ಯದ ಹನೂರು ಭಾಗದಲ್ಲಿ ಕಳೆದ ಒಂದು ವಾರದಿಂದ ಅಕ್ರಮವಾಗಿ ಮಾರಾಟವಾಗುತ್ತಿದೆ.

ತಮಿಳುನಾಡು ಸರಕಾರ ಅಲ್ಲಿನ ಬಡ ಕುಟುಂಬಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಗೃಹೋಪಯೋಗಿ ವಸ್ತುಗಳಾದ ಟಿ.ವಿ, ಫ್ಯಾನ್, ಮಿಕ್ಸಿ ಹಾಗೂ ಗ್ರೈಂಡರ್‌ಗಳನ್ನು ಉಚಿತವಾಗಿ ನೀಡಿದೆಯಲ್ಲದೇ ಪಡಿತರವನ್ನು ನೀಡುತ್ತಿದೆ. ಆದರೆ ತಮಿಳುನಾಡಿನ ಗಡಿಯಂಚಿನ ಕೊಳತ್ತೂರು, ಮೇಟೂರು, ಕಾವೇರಿಪುರಂ, ಭವಾನಿಸಾಗರ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳ ಕುಟುಂಬಗಳಿಂದ ದಲ್ಲಾಳಿಗಳು ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ರಾಜ್ಯದ ಹನೂರು ಭಾಗದಲ್ಲಿ ಕಳೆದ ಒಂದು ವಾರದಿಂದ ಮಾರಾಟಮಾಡುತ್ತಿರುವುದು ಕಂಡು ಬರುತ್ತಿದೆ.

ಸರಕಾರದ ಸೌಲಭ್ಯ ದುರ್ಬಳಕೆ:

ತಮಿಳುನಾಡು ಸರಕಾರ ಅಲ್ಲಿನ ಜನತೆಗೆ ನಿತ್ಯ ಜೀವನಕ್ಕೆ ಅಗತ್ಯವಾದ ಪಡಿತರವನ್ನು ಉಚಿತವಾಗಿ ವಿತರಿಸುತ್ತಿದೆ. ಆದರೆ ಅಲ್ಲಿನ ಕೆಲವರು ಈ ಅಕ್ಕಿಯನ್ನು ಉಪಯೋಗಿಸುತ್ತಿಲ್ಲ. ಬದಲಾಗಿ ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅಕ್ಕಿಯನ್ನು ಖರೀದಿಸಿದವರು ತಮಿಳುನಾಡಿನಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಅಲ್ಲಿನ ಜನರು ಕೊಂಡುಕೊಳ್ಳಲು ತಯಾರಿಲ್ಲ. ಹೀಗಿರುವಾಗ ಇದರ ಪ್ರಯೋಜನವನ್ನು ಪಡೆದ ಕೆಲವರು ಗಡಿಯಂಚಿನ ಕೊಳತ್ತೂರು, ಮೇಟೂರು, ಭವಾನಿಸಾಗರ, ಕಾವೇರಿಪುರಂ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಿಂದ ಅಕ್ಕಿಯನ್ನು ಖರೀದಿಸಿ ರಾಜ್ಯದ ಹನೂರು ಭಾಗದ ಮಾರ್ಟಳ್ಳಿ, ರಾಮಾಪುರ, ಲೊಕ್ಕನಹಳ್ಳಿ, ಹನೂರು, ಮಂಗಲ, ಕಾಮಗೆರೆ, ಶಾಗ್ಯ, ಕೊಳ್ಳೇಗಾಲ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಮಾರಾಟ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ.

ಒಂದು ಕೆಜಿ ಅಕ್ಕಿಗೆ 20-25ರೂ. ಗೆ ಮಾರಾಟ ಮಾಡಲಾಗುತ್ತಿರುವುದು ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕಂಡು ಬರುತ್ತಿದೆ.

ಸೌಲಭ್ಯದ ಬಗ್ಗೆ ತಿಳಿವಳಿಕೆ:

ತಮಿಳುನಾಡಿನ ಮಧ್ಯವರ್ತಿಗಳು ಕಳೆದ ಒಂದು ವಾರದಿಂದ ಹನೂರು ಭಾಗದ ವಿವಿಧ ಗ್ರಾಮಗಳಲ್ಲಿ ಪಡಿತರ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾರೆ. ಈ ಭಾಗದಲ್ಲಿನ ಕೆಲವರು ಕಡಿಮೆ ಬೆಲೆಗೆ ಸಿಕ್ಕಿತ್ತೆಂದು ಅಕ್ಕಿಯನ್ನು ಖರೀದಿಸಿದರೆ, ಪ್ರಜ್ಞಾವಂತ ನಾಗರಿಕರು ಅಕ್ಕಿಯನ್ನು ಕೊಂಡುಕೊಳ್ಳಲು ಮುಂದಾಗುತ್ತಿಲ್ಲ. ಬದಲಾಗಿ ತಮಿಳುನಾಡು ಸರಕಾರ ನೀಡುತ್ತಿರುವ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ತಿಳಿವಳಿಕೆ ನೀಡುತ್ತಿದ್ದು, ಮಾರಾಟ ಮಾಡದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಇದಕ್ಕೆ ಕಿವಿಗೊಡದ ಮಧ್ಯವರ್ತಿಗಳು ಮಾರಾಟದಲ್ಲಿ ತಲ್ಲೀನರಾಗಿದ್ದಾರೆ.

ಹಿಂದಿನ ಅನುಭವದ ರುಚಿ:

ತಮಿಳುನಾಡು ಸರಕಾರ ಅಲ್ಲಿನ ಬಡ ಜನರಿಗೆ ಉಚಿತವಾಗಿ ಟಿವಿ. ಫ್ಯಾನ್, ಮಿಕ್ಸಿ, ಗ್ರೈಂಡರ್ ಹಾಗೂ ಇನ್ನಿತರ ಗೃಹಪಯೋಗಿ ವಸ್ತುಗಳನ್ನು ನೀಡಿದೆ. ಮಧ್ಯವರ್ತಿಗಳು ಅವುಗಳನ್ನು ಕಡಿಮೆ ಬೆಲೆಗೆ ಖರೀದಿಸಿದ್ದು, ಕಳೆದ 2 ವರ್ಷದ ಹಿಂದೆ ಟಿವಿ, ಕಳೆದ ಆರು ತಿಂಗಳ ಹಿಂದೆ ಫ್ಯಾನ್, ಮಿಕ್ಸಿ ಹಾಗೂ ಗ್ರೈಂಡರ್ ಅನ್ನು ಹನೂರು ಭಾಗದಲ್ಲಿ ಮಾರಾಟ ಮಾಡಿದ್ದಾರೆ.

ಹನೂರು ಭಾಗದಲ್ಲಿ ಈ ವಸ್ತುಗಳು ಉತ್ತಮವಾಗಿ ಮಾರಾಟವಾಗಿವೆ. ಇದರ ಲಾಭದ ರುಚಿಯನ್ನು ಅರಿತ ತಮಿಳುನಾಡಿನ ಮದ್ಯವರ್ತಿಗಳು ಇದೀಗ ಪಡಿತರ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾರೆ. ಈಹಿಂದೆ ಹನೂರು ಸುತ್ತಮುತ್ತಲ ಗ್ರಾಮಗಳಲ್ಲಿ ಟಿ.ವಿಯನ್ನು1,200-1,500ರೂ, ಫ್ಯಾನ್ ಅನ್ನು 600-800ರೂ, ಮಿಕ್ಸಿಗೆ 500-800ರೂ, ಗ್ರೈಂಡರ್ ಅನ್ನು1,200-1,600ರೂಗೆ ಮಾರಾಟ ಮಾಡಿದ್ದರು. ಇದೀಗ ಅಕ್ಕಿಯನ್ನು ಕೆಜಿಗೆ 20-25ರೂನಂತೆ ಮಾರಾಟ ಮಾಡುತ್ತಿದ್ದಾರೆ.

ಚೆಕ್ ಪೋಸ್ಟ್‌ಗಳಲ್ಲಿ ಸಮರ್ಪಕ ತಪಾಸಣೆ ಇಲ್ಲ:

ದಲ್ಲಾಳಿಗಳು ಅಕ್ಕಿಯ ಮೂಟೆಗಳನ್ನು ತಮಿಳುನಾಡಿನಿಂದ ಟಾಟಾಏಸ್ ಹಾಗೂ ಬಸ್ಸಿನ ಮೂಲಕ ನಿರಾಳವಾಗಿ ತರುತ್ತಿದ್ದಾರೆ. ಆದರೆ ಚೆಕ್‌ಪೋಸ್ಟ್‌ಗಳಲ್ಲಿ ಸರಿಯಾದ ತಪಾಸಣೆ ನಡೆಯುತ್ತಿಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Writer - ನಾ.ಅಶ್ವಥ್ ಕುಮಾರ್

contributor

Editor - ನಾ.ಅಶ್ವಥ್ ಕುಮಾರ್

contributor

Similar News