ಬೆಳಕಿಗೆ ಬಂತು ಕ್ಷೀರ ಉದ್ಯಮದ ಬಿಳಿಸುಳ್ಳು

Update: 2017-03-11 15:56 GMT

ಪ್ರಾಣಿಹಿಂಸೆ , ರಕ್ತಪಾತ ಹಾಗೂ ಕಸಾಯಿಖಾನೆಯನ್ನು ಸಾಮಾನ್ಯವಾಗಿ ಮಾಂಸಾಹಾರ, ಮಾಂಸ ಭಕ್ಷಣೆ ಹಾಗೂ ಚರ್ಮೋದ್ಯಮದ ಜತೆ ಗುರುತಿಸಲಾಗುತ್ತದೆ. ಆದರೆ ಭಾರತದಲ್ಲಿ ವಿಪುಲವಾಗಿ ಬೆಳೆಯುತ್ತಿರುವ ಹೈನು ಉದ್ಯಮದಲ್ಲಿ ಹಸುಗಳನ್ನು ಶೋಷಿಸುವುದು ಮಾತ್ರವಲ್ಲದೇ ಅಮಾನವೀಯ ಸ್ಥಿತಿಯಲ್ಲಿ ಜೀವಿಸುವುದು ಅನಿವಾರ್ಯ ಎಂಬ ಸ್ಥಿತಿಯನ್ನು ನಿರ್ಮಿಸುವುದರ ವಿರುದ್ಧ ಧ್ವನಿ ಕೇಳಿಬರುತ್ತಿರುವುದು ಅಪರೂಪ.

ಇಂಥ ಸಾಂಸ್ಥಿಕ ಕ್ರೌರ್ಯವನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ದ ಫೆಡರೇಶನ್ ಆಫ್ ಇಂಡಿಯನ್ ಅನಿಮಲ್ ಪ್ರೊಟೆಕ್ಷನ್ ಆರ್ಗನೈಸೇಷನ್ (ಎಫ್‌ಐಎಪಿಒ) ಅಲ್ವಾರ್, ಬಿಕನೇರ್, ಜೈಪುರ ಹಾಗೂ ಜೋಧಪುರದ 49 ಹೈನುಗಾರಿಕಾ ಕೇಂದ್ರಗಳಲ್ಲಿ 2016ರ ಜೂನ್‌ನಲ್ಲಿ ರಹಸ್ಯ ಅಧ್ಯಯನ ಕೈಗೊಂಡಿತು. ಹಾಲು ನೀಡುವ ಹಸುಗಳ ವಿರುದ್ಧದ ಕ್ರೌರ್ಯ ಹಾಗೂ ದಯನೀಯ ಸ್ಥಿತಿಯಲ್ಲಿ ಅವು ಬದುಕುತ್ತಿರುವ ಅಂಶವನ್ನು ಈ ಅಧ್ಯಯನ ಬೆಳಕಿಗೆ ತಂದಿದೆ.

ಹಸುಗಳು ಕೂಡಾ ನಮ್ಮ ತಾಯಂದಿರಂತೆ ತಮ್ಮ ಕರುಗಳಿಗೆ ಮೊಲೆಹಾಲುಣಿಸುವುದು ಎಲ್ಲರಿಗೂ ತಿಳಿದ ವಿಚಾರ. ದೊಡ್ಡ ಪ್ರಮಾಣದ ಹಾಲು ಉತ್ಪಾದನೆ ಡೇರಿಗಳಲ್ಲಿ ಹಾಲು ನೀಡುವ ಹಸುಗಳು ಪದೇ ಪದೇ ಗರ್ಭ ಧರಿಸುವಂತೆ ಮಾಡಲಾಗುತ್ತದೆ. ಸಾಮಾನ್ಯ ವಾಗಿ ಕೃತಕ ಗರ್ಭಧಾರಣೆ ವಿಧಾನವನ್ನು ಅನುಸರಿಸಲಾಗುತ್ತದೆ.

‘‘ಕ್ಷೀರೋದ್ಯಮದ ಪ್ರವರ್ತಕರು ಸಾಮಾನ್ಯವಾಗಿ ಹಸುಗಳನ್ನು ನಿರಂತರವಾಗಿ ಪ್ರತೀ ಹಂತದಲ್ಲೂ ಶೋಷಿಸುತ್ತಾ ಬರುತ್ತಾರೆ. ಯಾವ ಹಸು ಕೂಡಾ ಸಂತೋಷದಿಂದ ಮಾನವ ಬಳಕೆಗಾಗಿ ಹಾಲನ್ನು ಧಾರಾಳವಾಗಿ ನೀಡುವುದಿಲ್ಲ. ಹಾಗೆ ನಾವು ನಂಬುವಂತೆ ಮಾಡುತ್ತಾರೆ’’ ಎಂದು ಎಫ್‌ಐಎಪಿಒ ನಿರ್ದೇಶಕರಾದ ವರದಾ ಮೆಹ್ರೋತ್ರಾ (33) ಅಭಿಪ್ರಾಯಪಡುತ್ತಾರೆ.

ಅಧಿಕ ಹಾಲು ಪಡೆಯುವ ಭರಾಟೆ ಯಲ್ಲಿ ಪ್ರತಿ ಹಸು ಕನಿಷ್ಠ ವರ್ಷಕ್ಕೊಂದು ಕರು ಹಾಕುವಂತೆ ಮಾಡಲಾಗುತ್ತದೆ. ಇದಕ್ಕಾಗಿ ಹಸುಗಳಿಗೆ ನಿರಂತರವಾಗಿ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. ಇಂಥ ಕೃತಕ ಗರ್ಭಧಾರಣೆಯಿಂದ ಹಾಗೂ ಅವುಗಳನ್ನು ನಡೆಸಿಕೊಳ್ಳುವ ರೀತಿಯಿಂದಾಗಿ ಹಸುಗಳ ಜೀವಿತಾವಧಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಹಸು ಸುಮಾರು 25 ವರ್ಷ ಬದುಕುತ್ತದೆ. ಆದರೆ ಹಾಲಿಗಾಗಿ ಶೋಷಣೆಗೆ ಒಳಗಾಗುವ ಇಂಥ ಹಸುಗಳ ಆಯುಷ್ಯ 10 ವರ್ಷಕ್ಕೇ ಸೀಮಿತವಾಗುತ್ತದೆ. ಇಂಥ ಮಾಹಿತಿ ಕೆಲವೊಮ್ಮೆ ಸುದ್ದಿಯಾಗಿದ್ದರೂ, ಈ ಮೂಕಪ್ರಾಣಿಗಳ ಮೇಲಿನ ಕ್ರೌರ್ಯದ ಕರಾಳ ಮುಖಗಳು ಎಫ್‌ಐಎಪಿಒ ಅಧ್ಯಯನದಿಂದ ಬೆಳಕಿಗೆ ಬಂದಿವೆ.

ಗಂಡುಕರುವನ್ನು ಸಾಮಾನ್ಯವಾಗಿ ಹೈನು ಉದ್ಯಮ ಹೊರೆ ಎಂದು ಪರಿಗಣಿಸುತ್ತದೆ. ಏಕೆಂದರೆ ಇದು ಹಾಲು ಉತ್ಪತ್ತಿಗೆ ಸಹಕಾರಿಯಾಗುವುದಿಲ್ಲ. ಇದರಿಂದ ಸಾಕುವವರಿಗೆ ಆಗುವ ಏಕೈಕ ಪ್ರಯೋಜನವೆಂದರೆ ಕರುಗಳ ಮಾಂಸ ಹಾಗೂ ಚರ್ಮವನ್ನು ಮಾರಾಟ ಮಾಡುವುದರಿಂದ ಬರುವ ಆದಾಯ. ನೇರವಾಗಿ ಹೇಳಬೇಕೆಂದರೆ ಗಂಡುಕರುಗಳಿಗೆ ಇರುವ ಏಕೈಕ ಆಯ್ಕೆಯೆಂದರೆ ವಧಾಲಯ ಸೇರುವುದು.

ಪಶುಸಂಗೋಪನಾ ತಜ್ಞರ ಪ್ರಕಾರ, ಗಂಡುಕರುಗಳು ನಾಲ್ಕರಿಂದ ಐದು ತಿಂಗಳಲ್ಲಿ ಕಸಾಯಿಖಾನೆಗಳ ಪಾಲಾಗುತ್ತವೆ. ದುರದೃಷ್ಟವೆಂದರೆ ಹೈನು ಉದ್ಯಮ ಇಂಥ ಗಂಡುಕರುಗಳ ಅಲ್ಪಾಯುಷ್ಯದ ಅವಧಿಯನ್ನು ಕೂಡಾ ನರಕಸದೃಶ ವಾಗಿಸುತ್ತದೆ.

ಹಲವು ಕ್ಷೀರೋತ್ಪಾದನಾ ಕೇಂದ್ರಗಳು ನಾಲ್ಕು- ಐದು ದಿನಗಳ ಪುಟ್ಟ ಕರುಗಳನ್ನೇ ಕಸಾಯಿಖಾನೆ ಸೇರಿಸುವ ಮೂಲಕ ಪ್ರಾಣಿಹಿಂಸೆ (ವಧಾಲಯ) ತಡೆ ನಿಯಮಾವಳಿ- 2001ನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿವೆ.

‘‘ಹೈನೋದ್ಯಮ ಎನ್ನುವುದೇ ಹಿಂಸೆಯ ಪ್ರತಿರೂಪ. ಈ ಉದ್ಯಮದ ವಾಸ್ತವ ಮತ್ತು ಇಲ್ಲಿನ ದಬ್ಬಾಳಿಕೆ ಹಾಗೂ ಶೋಷಣೆ ನಮ್ಮ ಅರಿವಿಗೇ ಬರುವುದಿಲ್ಲ. ಸಾಮಾನ್ಯವಾಗಿ ಇಂಥ ಕರುಗಳನ್ನು ನಿರುಪಯುಕ್ತ ಹಾಗೂ ಹಾಲು ಉತ್ಪಾದನೆಗೆ ಯೋಗ್ಯವಲ್ಲ ಎಂದು ನಿರ್ಧರಿಸಿ, ಇವುಗಳ ಮಾರಣಹೋಮಕ್ಕೆ ಇಂಥ ದುರಾಸೆಯ ಹಾಲು ಉತ್ಪಾದನಾ ಕೇಂದ್ರಗಳು ಮುಂದಾಗಿವೆ’’ ಎಂದು ವರದಾ ವಿವರಿಸುತ್ತಾರೆ.

ಹುಟ್ಟಿದ ತಕ್ಷಣ ಪುಟ್ಟಕರುವನ್ನು ತಾಯಿಯಿಂದ ಬೇರ್ಪಡಿಸಿ, ಕರು, ತನ್ನ ತಾಯಿಯ ಬಳಿ ಇರುವ ಅವಕಾಶದಿಂದ ವಂಚಿಸಲಾಗುತ್ತದೆ. ಇದು ಹಸು ಹಾಗೂ ಕರು ಎರಡಕ್ಕೂ ಆಘಾತಕಾರಿ. ಹಸುವಿನ ಹಾಲನ್ನು ಮಾನವ ಸೇವನೆಗೆ ಬಳಕೆ ಮಾಡುವುದರಿಂದ, ಕರುಗಳು ಅಮ್ಮನ ಹಾಲಿನಿಂದ ವಂಚಿತವಾಗುತ್ತವೆ. ಬದಲಾಗಿ ಅವುಗಳಿಗೆ ಪೂರಕ ಆಹಾರ ನೀಡಲಾಗುತ್ತದೆ. ಅನುತ್ಪಾದಕ ಹಾಗೂ ಗಂಡುಕರುಗಳು, ಬರಡುಹಸುಗಳನ್ನು ನಿರುಪಯುಕ್ತ ಎಂಬ ಹಣೆಪಟ್ಟಿ ಕಟ್ಟಿ ಬೀದಿಗೆ ತಳ್ಳಲಾಗುತ್ತದೆ ಇಲ್ಲವೇ ಕಸಾಯಿಖಾನೆಗೆ ಸೇರಿಸಲಾಗುತ್ತದೆ.

ಆರೋಗ್ಯವಂತ ಹೆಣ್ಣುಕರುಗಳನ್ನಷ್ಟೇ ಪೋಷಿಸಿ ಹಾಲು ನೀಡುವಷ್ಟು ದಿನ ಅವುಗಳನ್ನು ಶೋಷಿಸಿ ಅಂತಿಮವಾಗಿ ವಧಾಲಯ ಸೇರಿಸುವ ಪದ್ಧತಿ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಪ್ರತಿ ಹನಿ ಹಾಲನ್ನೂ ಹಿಂಡಿದ ಬಳಿಕ, ಮುದಿಯಾದ ಬಳಿಕ ಅವು ನಿರುಪಯುಕ್ತ ಎಂದು ನಿರ್ಧರಿಸಿ, ಸಾಯಿಸಲಾಗುತ್ತದೆ.

ಈ ಆಘಾತಕಾರಿ ಶೋಷಣೆ ಇಲ್ಲಿಗೆ ಮುಗಿಯುವುದಿಲ್ಲ.

ಹಸುಗಳನ್ನು ಹಾಲು ನೀಡುವ ಯಂತ್ರವಾಗಿ ಪರಿಗಣಿಸಿ, ನಿರಂತರವಾಗಿ ಹಾಲು ನೀಡುತ್ತಿರಬೇಕು ಎಂಬ ಕಾರಣದಿಂದ ಕರುವಿನ ಪ್ರತಿಕೃತಿಯನ್ನು ಹಸುವಿನ ಪಕ್ಕದಲ್ಲೇ ಇಡಲಾಗುತ್ತದೆ. ಕೆಲವೊಂದು ಕಡೆ ಪುಟ್ಟ ಕರುಗಳ ಶವದ ಬಾಲ ಹಾಗೂ ತಲೆಯನ್ನು ಕತ್ತರಿಸಿ ಒಂದು ಬಡಿಗೆಗೆ ಜೋಡಿಸುವ ಪೈಶಾಚಿಕ ಕೃತ್ಯ ಕೂಡಾ ಈ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಶವದ ದುರ್ವಾಸನೆಯನ್ನು ಒಣಹುಲ್ಲು ಹಾಗೂ ಸುಗಂಧದ್ರವ್ಯದ ಮೂಲಕ ಮರೆಮಾಚಲಾಗುತ್ತದೆ. ಈ ಮೂಲಕ ಹಸುಗಳು ನಿರಂತರವಾಗಿ ಹಾಲು ನೀಡುವಂತೆ ಮಾಡಲಾಗುತ್ತದೆ. ಹೀಗೆ ವಧೆಗೆ ಒಳಗಾಗುವ ಕರುಗಳ ಇತರ ಅವಯವಗಳನ್ನು ಮಾರುಕಟ್ಟೆಯಲ್ಲಿ ಸಿಕ್ಕ ಬೆಲೆಗೆ ಮಾರಾಟ ಮಾಡಲಾಗುತ್ತದೆ.

ಗೋಮಾಂಸ ಚರ್ಚೆಯಲ್ಲಿ ಮರೆಯಾದ ಅಂಶ

ಒಂದೇ ನಾಣ್ಯದ ಎರಡು ಮುಖಗಳಂತಿರುವ ಹಾಲು ಮತ್ತು ಗೋಮಾಂಸದ ವಿಚಾರಕ್ಕೆ ಬಂದಾಗ ಹಸುವನ್ನು ಹೇಗೆ ಭಿನ್ನ ಮಸೂರ ದಿಂದ ನೋಡಲಾಗುತ್ತದೆ ಎನ್ನುವುದು ನಿಜಕ್ಕೂ ಸೋಜಿಗದ ಸಂಗತಿ. 2004-05ರಿಂದ 2011-12ರ ಅವಧಿಯಲ್ಲಿ ದೇಶದಲ್ಲಿ ಹಾಲು ಉತ್ಪಾದನೆಯ ಒಟ್ಟು ವೌಲ್ಯ ಮೂರು ಪಟ್ಟು ಹೆಚ್ಚಿದೆ ಎಂದು ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ವರದಿ ಹೇಳುತ್ತದೆ.

ಈ ಅವಧಿಯಲ್ಲಿ ಹಾಲು ಹಾಗೂ ಗೋಮಾಂಸ ಬೆಳವಣಿಗೆ ದರ ದಲ್ಲಿ ಶೇ.98.6ರಷ್ಟು ಸಾಮ್ಯತೆ ಇದೆ. ‘‘ವಿಶ್ವದಲ್ಲೇ ಅತೀ ಹೆಚ್ಚು ಹಾಲು ಹಾಗೂ ಅತೀ ಹೆಚ್ಚು ಗೋಮಾಂಸ ವನ್ನು ಉತ್ಪಾದಿಸುತ್ತಿರುವ ದೇಶ ವಾಗಿ ಭಾರತ ಹೊರಹೊಮ್ಮಿ ರುವುದು ವೈರುದ್ಧ್ಯ ವೇ ಸರಿ’’ ಎನ್ನುವುದು ವರದಾ ಅವರ ಸ್ಪಷ್ಟ ಅಭಿಪ್ರಾಯ.

ಅಮೆರಿಕದ ಕೃಷಿ ಇಲಾಖೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಭಾರತ 2015ರಲ್ಲಿ 24 ಲಕ್ಷ ಟನ್ ಗೋಮಾಂಸ ಹಾಗೂ ಕರುವಿನ ಮಾಂಸ ರಫ್ತು ಮಾಡಿದೆ.ಈ ಪ್ರಮಾಣ ಹೆಚ್ಚಳಕ್ಕೆ ಕಾರಣವಾದ ಅಂಶಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದರೂ, ಇದಕ್ಕೆ ದೇಶದಲ್ಲಿ ಹೈನೋದ್ಯಮ ಗಣನೀಯವಾಗಿ ಬೆಳೆದಿರುವುದೇ ಮೂಲಕಾರಣ ಎಂಬ ಅಂಶವನ್ನು ಹುಡುಕುವ ಪ್ರಯತ್ನ ಇದುವರೆಗೂ ನಡೆದಿಲ್ಲ.

ಅಧಿಕ ಹಾಲು ಪಡೆಯುವ ಭರಾಟೆಯಲ್ಲಿ ಪ್ರತೀ ಹಸು ಕನಿಷ್ಠ ವರ್ಷಕ್ಕೊಂದು ಕರು ಹಾಕುವಂತೆ ಮಾಡಲಾಗುತ್ತದೆ. ಇದಕ್ಕಾಗಿ ಹಸುಗಳಿಗೆ ನಿರಂತರವಾಗಿ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. ಇಂಥ ಕೃತಕ ಗರ್ಭಧಾರಣೆಯಿಂದಾಗಿ 25 ವರ್ಷ ಬದುಕುವ ಹಸುಗಳ ಆಯುಷ್ಯ 10 ವರ್ಷಕ್ಕೆ ಇಳಿಕೆಯಾಗುತ್ತದೆ

Writer - ಶ್ರುತಿ ಕೆದಿಯಾ

contributor

Editor - ಶ್ರುತಿ ಕೆದಿಯಾ

contributor

Similar News