ಮುಸಾಫಿರ್- ಅಲೆಮಾರಿಯ ಕಣ್ಣಲ್ಲಿ ಅಸಾಮಾನ್ಯ ವ್ಯಕ್ತಿತ್ವಗಳು...

Update: 2017-03-17 18:29 GMT

ಪ್ರವಾಸ ಕೇವಲ ಸ್ಥಳಗಳನ್ನಷ್ಟೇ ಅಲ್ಲ, ಹೊಸ ಮನುಷ್ಯರನ್ನು, ಹೊಸ ಮನಸ್ಸುಗಳನ್ನು ಪರಿಚಯಿಸುತ್ತಾ ಹೋಗುತ್ತದೆ. ಖ್ಯಾತನಾಮರನ್ನು ಅರಸಿ ಹೋಗಿ ಅವರ ಬಗ್ಗೆ ಬರೆಯುವುದು ಸುಲಭ. ಆದರೆ ಸಾಮಾನ್ಯ ಮನುಷ್ಯನೊಳಗಿನ ಅಸಾಮಾನ್ಯರನ್ನು ಭೇಟಿ ಮಾಡುವುದಕ್ಕೆ ಲೇಖಕ ಹೆಚ್ಚು ಸೂಕ್ಷ್ಮತೆಯನ್ನು ಹೊಂದಿರಬೇಕು. ಕ್ರಿಯಾಶೀಲ ಮನಸ್ಸನ್ನು ಹೊಂದಿರಬೇಕು. ಅಂತಹ ಸೂಕ್ಷ್ಮ ಕ್ರಿಯಾಶೀಲ ಮನಸ್ಸಿನ ಲೇಖಕರಿಂದ ಹೊರಬಂದಿರುವ ಕೃತಿಯೇ ‘ಮುಸಾಫಿರ್’. ತನ್ನ ಅಲೆಮಾರಿ ಬದುಕಿನಲ್ಲಿ ಕಂಡುಂಡ ಮನುಷ್ಯರನ್ನು ಲೇಖಕ ಸತೀಶ್ ಚಪ್ಪರಿಗೆ ಅವರು ಮುಸಾಫಿರ್ ಕೃತಿಗಳಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯರು ಎಂದು ಭಾವಿಸುವ ಜನರೊಳಗಿರುವ ಅಸಾಮಾನ್ಯತೆಯನ್ನು ಮುಖ್ಯವಾಹಿನಿಗೆ ಪರಿಚಯಿಸಿದ್ದಾರೆ. ಇವು ಬರೇ ವ್ಯಕ್ತಿ ಚಿತ್ರಗಳಲ್ಲ. ಅದರಾಚೆಗಿನ ಕಥನ ಗುಣವನ್ನು, ಜೀವಪರ ಧ್ವನಿಯನ್ನು ಹೊಂದಿರುವ ಕೃತಿ ಇದಾಗಿದೆ. ಮೊತ್ತ ಮೊದಲ ಲೇಖನ ‘ಕಲ್ಲುಕುಟಿಗರ ಸೀತು’ ಕುರಿತಂತೆ ಇದೆ. ನಾಲ್ಕಡಿ ಎತ್ತರದ ಗುಡಿಸಲಲ್ಲಿ ಬದುಕುತ್ತಿದ್ದ ಕಲ್ಲುಕುಟಿಗರ ಸೀತುವಿನ ಒಳಗಿದ್ದ ಅಸಾಮಾನ್ಯವಾದ ಸೃಜನಶೀಲ ವ್ಯಕ್ತಿತ್ವವನ್ನು ಅತ್ಯಂತ ಆಪ್ತವಾಗಿ ಲೇಖಕರು ಕಟ್ಟಿಕೊಡುತ್ತಾರೆ. ಯಕ್ಷಗಾನದ ಕುರಿತಂತೆ ಆಕೆಗಿದ್ದ ಅಪಾರ ಆಸಕ್ತಿ, ಕಲಾವಿದರ ಜೊತೆಗೆ ಆಕೆಗಿದ್ದ ನೇರ ಸಂಬಂಧಗಳು, ಇಡೀ ಊರನ್ನು ಆವಾಹಿಸಿದ್ದ ಆಕೆಯ ವ್ಯಕ್ತಿತ್ವ ನಮ್ಮನ್ನು ತೀವ್ರವಾಗಿ ತಟ್ಟುತ್ತದೆ. ನಕ್ಸಲರನ್ನು ಹುಡುಕುತ್ತಾ ಹೋದಾಗ ಎದುರಾದ ವಿಶಿಷ್ಟ ವ್ಯಕ್ತಿತ್ವದ ಮಾಖಿ ರೆಡ್ಡಿ, ಜಾಹೀರಾತುಗಳಲ್ಲೂ ಕ್ರಿಯಾಶೀಲತೆಯನ್ನು ಮೆರೆದು ಅದನ್ನು ಗ್ರಾಹಕರ ಮನಸೂರೆಗೊಳ್ಳುವಂತೆ ರೂಪಿಸಿದ ಜಾಹೀರಾತು ಜಗತ್ತಿನ ಮಹಾಗುರು ಪಿಯೂಶು ಪಾಂಡೆಯ ಒಳ ಮಾತುಗಳು, ಬದುಕು ಬರಕ್ಕೆ ಸಡ್ಡು ಹೊಡೆದ ಮರಾಠಾವಾಡದ ಮಹಾಮಾತೆ ಗೋದಾವರಿ, ಮಕ್ಕಳನ್ನು ಇಂಜಿನಿಯರ್, ಪ್ರೊಫೆಸರ್ ಆಗಿ ಮಾಡಿಯೂ, ಆಟೋದಲ್ಲಿ ದುಡಿಯುವ ರಾಮಯ್ಯನ ಸ್ವಾಭಿಮಾನಿ ಬದುಕು, ಪ್ರೇಮ ಮತ್ತು ವಂಚನೆಯ ಫಲವಾಗಿ ದೊರಕಿದ ತನ್ನ ಮಗುವನ್ನು ಉಳಿಸಿಕೊಳ್ಳಲು ಹವಣಿಸುವ ಮಾನಸಿ ಎನ್ನುವ ತರುಣಿ...ಹೀಗೆ ಸಮಾಜದ ಬೇರೆ ಬೇರೆ ಮಗ್ಗುಲುಗಳಿಗೆ ಸಂಬಂಧಿಸಿದ ಪಾತ್ರಗಳು ನಮ್ಮವೇ ಆಗಿ ಇಲ್ಲಿ ಕಾಡುತ್ತವೆ. ಪತ್ರಕರ್ತನೊಬ್ಬ ಬರೇ ಡೆಸ್ಕುಗಳ ನಾಲ್ಕು ಗೋಡೆಗಳ ನಡುವೆ ಉಳಿಯದೇ ಹೊರ ಜಗತ್ತಿಗೆ ಸ್ಪಂದಿಸತೊಡಗಿದಾಗ ಎದುರಾಗುವ ವೈವಿಧ್ಯಲೋಕಗಳ ಸಾರ ಸಂಗ್ರಹ ‘ಮುಸಾಫಿರ್’ ಕೃತಿಯಾಗಿದೆ. 25ಕ್ಕೂ ಅಧಿಕ ವ್ಯಕ್ತಿತ್ವಗಳ ಕಥನವನ್ನು ಲವಲವಿಕೆಯಿಂದ ಸತೀಶ್ ನಿರೂಪಿಸಿದ್ದಾರೆ. ವಸಂತ ಪ್ರಕಾಶನ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 240. ಕೃತಿಯ ಮುಖಬೆಲೆ 180. ಆಸಕ್ತರು 080-22443996 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News