ದ ಬಾಕ್ಸಿಂಗ್ ಗರ್ಲ್ಸ್

Update: 2017-03-18 18:40 GMT

ನಿಸರ್ಗ ನಿಯಮ, ಪುರುಷ ಕೇಂದ್ರಿತ ವ್ಯವಸ್ಥೆ ಹಾಗೂ ವ್ಯಾಪಾರಿ ಹಿತಾಸಕ್ತಿಗಳ ಸಂಘರ್ಷದಲ್ಲಿ ಈ ಮೂವರ ವಿರುದ್ಧ ಏಕಕಾಲದಲ್ಲಿ ಸೆಣೆಸಾಡಬೇಕಾಗಿರುವ ಮಹಿಳೆಯರು ಕ್ರೀಡೆಗಳಲ್ಲಿ ಪುರುಷರಿಗಿಂತ ಹಿಂದಿರುವುದು ಕೇವಲ ಒಂದು ಸೆಕೆಂಡ್‌ನಷ್ಟು ಕಾಲಾವಧಿ ಎನ್ನುವುದನ್ನು ನೋಡಿದರೆ... ಅದೇ ಮೂರು ಅಂಶಗಳ ನೆರವಿದ್ದಾಗಲೂ ಪುರುಷನ ಮುನ್ನಡೆ ಕೇವಲ ಒಂದೇ ಸೆಕೆಂಡ್ ಎನ್ನುವುದೇ ಸರಿ ಅನಿಸುತ್ತದೆ.

ಇಂದಿಗೆ ಸರಿಯಾಗಿ ಒಂದು ನೂರಾ ನಲವತ್ತೊಂದು ವರ್ಷಗಳ ಹಿಂದೆ ಅಮೆರಿಕದಲ್ಲಿ ಸಂಚಲನ ಮೂಡಿಸಿದ ಬಾಕ್ಸಿಂಗ್ ಪಂದ್ಯವೊಂದು ನಡೆಯಿತು.

ಆವತ್ತು ಬಾಕ್ಸಿಂಗ್ ರಿಂಗ್‌ನೊಳಗಿದ್ದವರು ಇಬ್ಬರು ಮಹಿಳೆಯರು. ಒಬ್ಬಾಕೆ ನೆಲ್ಸಿ ಸ್ಯಾಂಡರ್ಸ್, ಇನ್ನೊಬ್ಬಳು ರೋಸ್ ಹಾರ್ಲೆಂಡ್.

ಆವತ್ತಿನ ಹೋರಾಟ ಡ್ರಾ ಆಯಿತಾದರೂ ಇನ್ನಿತರ ಹಲವು ಮಾನದಂಡಗಳಲ್ಲಿ ನೆಲ್ಸಿ ಗೆದ್ದಳೆಂತಲೂ ರೋಸ್ ರನ್ನರ್ ಅಪ್ ಎಂದು ತೀರ್ಮಾನವಾಯಿತು. ರೋಸ್‌ಗೆ ಹತ್ತು ಡಾಲರ್‌ಗಳ ಸಮಾಧಾನಕರ ಬಹುಮಾನವೂ ದೊರೆಯಿತು. ಪುರುಷರೇ ಕಿಕ್ಕಿರಿದು ತುಂಬಿರುತ್ತಿದ್ದ ಆಧುನಿಕ ವಿಶ್ವಬಾಕ್ಸಿಂಗ್ ರಿಂಗ್‌ನಲ್ಲಿ ಮಹಿಳೆಯರು ದಾರಿ ಮಾಡಿಕೊಂಡು ಬಂದ ದಿನ ಅದು.

ಹಾಗೆ ಹೇಳಬೇಕೆಂದರೆ ಕೇವಲ ಬಾಕ್ಸಿಂಗ್ ಮಾತ್ರವಲ್ಲ ಆಧುನಿಕ ಮೊದಲ ಒಲಿಂಪಿಕ್ಸ್‌ನಲ್ಲೂ (1896) ಮಹಿಳಾ ಕ್ರೀಡಾಳುಗಳಿರಲಿಲ್ಲ. 1900ರ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ 22 ಮಹಿಳೆಯರು ಭಾಗವಹಿಸಿದ್ದರು.

1877ರಲ್ಲಿ ವಿಂಬಲ್ಡನ್ ಟೆನಿಸ್ ಟೂರ್ನಿ ಶುರುವಾದಾಗಲೂ ಮಹಿಳಾ ಆಟಗಾರ್ತಿಯರಿಗೆ ಅವಕಾಶವಿರಲಿಲ್ಲ. ಏಳು ವರ್ಷಗಳ ನಂತರ 1884ರಲ್ಲಿ ಮಹಿಳಾ ಟೆನಿಸ್ ಚಾಂಪಿಯನ್‌ಶಿಪ್‌ಗೆ ಅವಕಾಶ ಮಾಡಿಕೊಡಲಾಯಿತು.

ಇದೀಗ ತಾನೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಿ ಮುಂದೆ ಸಾಗುತ್ತಿರುವಾಗ ಕ್ರೀಡಾಸ್ಪರ್ಧೆಗಳಲ್ಲಿ ಮಹಿಳೆಯರಿಗೆ ಎದುರಾಗುತ್ತಿರುವ ತಾರತಮ್ಯಗಳು ಬೇರೆ ಬೇರೆ ರೂಪಗಳಲ್ಲಿ ಈಗಲೂ ಮುಂದುವರಿದಿರುವುದನ್ನು ನೋಡುತ್ತಿದ್ದೇವೆ. ಆದರೆ ಕ್ರೀಡೆಗಳಲ್ಲಿ ಮಹಿಳೆಯರಿಗೆ ಅವಕಾಶಗಳೇ ಇರದಿದ್ದಾಗ ಪುರುಷ ಕೇಂದ್ರಿತ ಕ್ರೀಡಾಕ್ಷೇತ್ರಕ್ಕೆ ನೆಲ್ಸಿ ಹಾಗೂ ರೋಸ್ ಎಂಬ ಬಾಕ್ಸಿಂಗ್ ಹುಡುಗಿಯರು ಒಂದು ಬಲವಾದ ಪಂಚ್ ನೀಡಬೇಕಾಯಿತು ಎಂಬುದು ಚರಿತ್ರಾರ್ಹ ವಾಸ್ತವ ಸಂಗತಿಯಾಗಿದೆ.

ಇದೆಲ್ಲಾ ಆಗಿ ಈಗ ಒಂದು ಶತಮಾನವಾಗಿದೆ. ಅಥ್ಲೆಟಿಕ್ಸ್ ಸೇರಿದಂತೆ ಬಾಕ್ಸಿಂಗ್, ಈಜು, ಕ್ರಿಕೆಟ್, ಫುಟ್‌ಬಾಲ್-ಹೀಗೆ ಎಲ್ಲಾ ಇವೆಂಟ್‌ಗಳಲ್ಲೂ ಮಹಿಳೆಯರು ಭಾಗವಹಿಸುತ್ತಾ ಕ್ರೀಡಾ ಕ್ಷೇತ್ರವನ್ನು ತುರುಸಿನ ಸ್ಪರ್ಧೆಯ ಕಣವಾಗಿಸುತ್ತಿದ್ದಾರೆ. ಈ ಪೈಪೋಟಿಯು ಅದೆಷ್ಟು ತುರುಸಿನಿಂದ ಕೂಡಿದೆ ಎಂಬುದಕ್ಕೆ ಪುರುಷ ಹಾಗೂ ಮಹಿಳೆಯರ ನಡುವಿನ ಕ್ರೀಡಾ ಸಾಧನೆಗಳ ವಿಶ್ವದಾಖಲೆಗಳ ಅಂಕಿ-ಅಂಶಗಳನ್ನು ಗಮನಿಸೋಣ.

      

ಈ ಅಂಕಿ-ಅಂಶಗಳು ಏನು ಹೇಳುತ್ತಿವೆಯೆಂದರೆ ಓಟದ ಸ್ಪರ್ಧೆಗಳಲ್ಲಿ ಪ್ರತಿನೂರು ಮೀ.ಗೆ ಮಹಿಳೆಯರು ಹಾಗೂ ಪುರುಷರಿಗೆ ಇರುವ ಸಾಧನೆಯ ಅಂತರ ಕೇವಲ ಒಂದೇ ಸೆಕೆಂಡ್, ಹಾಗೆಯೇ ಈಜು, ಶಾಟ್‌ಪುಟ್ ಇನ್ನಿತರ ಇವೆಂಟ್‌ಗಳಲ್ಲೂ ಸ್ತ್ರೀ-ಪುರುಷರ ನಡುವಿನ ಅಂತರ ಕಿರಿದಾಗುತ್ತಿದೆ. ಆ ಅಂತರವೂ ಅಳಿಸಿಹೋಗುವ ಕಾಲ ಬೇಗನೆ ಬರಲಿ ಎಂದು ಆಶಿಸೋಣ.

ಮಹಿಳಾ ಕ್ರೀಡಾಳುಗಳು ನಿಸರ್ಗ ಸಹಜವಾಗಿ ಹಾದು ಬರಬೇಕಾದ ಹಲವು ದೈಹಿಕ ಸ್ಥಿತಿಮಿತಿಗಳ ನಡುವೆಯೂ ಸಾಧನೆಯ ಶಿಖರವೇರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಆದರೆ ಆಧುನಿಕ ಕ್ರೀಡಾ ಜಗತ್ತಿನ ಪುರುಷ ಕೇಂದ್ರಿತ ಹಲವು ನಿಯಮಗಳು, ಆದ್ಯತೆ, ಕುರುಡು ನಂಬಿಕೆಗಳು ಮಹಿಳೆಯರನ್ನು ತಾರತಮ್ಯದತ್ತ ದೂಡುತ್ತಲೇ ಇರುವುದನ್ನು ನಾವು ನೋಡುತ್ತಿದ್ದೇವೆ.

ಉದಾಹರಣೆಗೆ ದಿನಪತ್ರಿಕೆ ಹಾಗೂ ಟೆಲಿವಿಜನ್‌ಗಳಲ್ಲಿ ಬಿತ್ತರವಾಗುವ ಕ್ರೀಡಾ ಸುದ್ದಿಗಳಲ್ಲಿ ಲಿಂಗತಾರತಮ್ಯವೆಷ್ಟಿದೆ ಎಂಬ ಬಗ್ಗೆ ಮೈಕೆಲ್ ಮೆಸೆಕ್ ಎಂಬಾತ ಒಮ್ಮೆ ಒಂದು ಅಧ್ಯಯನ ನಡೆಸಿದ. ಆಗ ಗೋಚರಿಸಿದ ವಿಷಯ ಏನೆಂದರೆ ಶೇ. 92 ರಷ್ಟು ಪುರುಷರ, ಶೇ. 3 ಸ್ತ್ರೀ-ಪುರುಷರಿಗೆ ಸಂಬಂಧಿಸಿದ ಕ್ರೀಡಾ ಸುದ್ದಿಗಳಿದ್ದರೆ, ಮಹಿಳೆಯರ ಕ್ರೀಡಾ ಸುದ್ದಿಗಳ ಪಾಲು ಕೇವಲ ಶೇ. 5 ಮಾತ್ರ ಆಗಿತ್ತೆಂಬುದು! ಅದೇ ರೀತಿ ಒಲಿಂಪಿಕ್ಸ್ ಸ್ಪರ್ಧೆಗಳು ನಡೆಯುವಾಗಲೂ ಶೇ. 80ರಷ್ಟು ಸುದ್ದಿಗಳು ಪುರುಷ ಕೇಂದ್ರಿತವಾಗಿಯೂ ಇನ್ನುಳಿದಿದ್ದರಲ್ಲಿ ಶೇ. 4 ಮಾತ್ರ ಮಹಿಳೆಯರ ಕ್ರೀಡಾ ಸುದ್ದಿಗಳಿರುತ್ತವೆ ಎಂಬುದನ್ನು ಕೆಲವು ಅಧ್ಯಯನಗಳು ಸಾಬೀತು ಮಾಡಿವೆ.

ಈ ತಾರತಮ್ಯಗಳು ಕೇವಲ ಕ್ರೀಡಾ ಸುದ್ದಿಗಳಿಗೆ ಮಾತ್ರವಲ್ಲ, ಬಹುಮಾನದ ಮೊತ್ತ, ಆಟದ ನಿಯಮಗಳ ವಿಚಾರದಲ್ಲಿ ಪಾಲಿಸಲಾಗುತ್ತಿದೆ. ಟೆನಿಸ್‌ನಲ್ಲಿ ಈಗಲೂ ಪುರುಷ ಚಾಂಪಿಯನ್‌ಗಳು ಪಡೆಯುವ ನಗದು ಬಹುಮಾನದ ಅರ್ಧಕ್ಕಿಂತ ಸ್ವಲ್ಪಹೆಚ್ಚು ಭಾಗವಷ್ಟೇ ಮಹಿಳೆಯರ ನಗದು ಬಹುಮಾನವಾಗಿದೆ.

‘‘ಟೆನಿಸ್‌ನಲ್ಲಿ ಮಹಿಳೆಯರು ಆಡುವುದು ಕೇವಲ ಮೂರೇ ಸೆಟ್ ಹಾಗಾಗಿ ಅವರ ಬಹುಮಾನದ ಮೊತ್ತವೂ ಕಡಿಮೆ, ಅಲ್ಲದೆ ಪುರುಷರಷ್ಟು ರಭಸ ವೇಗ, ಸಾಹಸಗಳು ಮಹಿಳಾ ಟೆನಿಸ್‌ನಲ್ಲಿ ಇರಲ್ಲ’’ ಎಂದು ಕೆಲವರು ಗಂಭೀರ ವಿಶ್ಲೇಷಣೆಯನ್ನು ಮಾಡಿದ್ದಾರೆ. ನೆನಪಿಡಿ, ಅಂತಹವರಲ್ಲಿ ಬಹುತೇಕರು ಪುರುಷ ಪಕ್ಷಪಾತಿಗಳಲ್ಲಿ ದುರಭಿಮಾನಿಗಳೂ ಅಲ್ಲ. ಇಂತವರ ವಾದಕ್ಕೆ ಪ್ರತಿವಾದವಾಗಿ ಮಹಿಳಾಪರವಿರುವವರು ‘‘ಐದು ಸೆಟ್ ಆಡಲು ಮಹಿಳೆಯರು ತಯಾರಿದ್ದಾರೆ’’ ಅಂದರಾದರೂ ಅದು ಈಡೇರದಿರಲು ಕಾರಣ ಟಿವಿ ಚಾನೆಲ್‌ಗಳು ಎಂಬ ವಾದವೂ ಇದೆ. ಇನ್ನೂ ಕೆಲವರು ‘‘ಮಹಿಳಾ ಟೆನಿಸ್ ನೋಡಲು ಎಂದೂ ಪ್ರೇಕ್ಷಕರ ಕೊರತೆಯಾಗಿಲ್ಲವಲ್ಲ’’ ಎಂದಾಗ ಕೆಲವು ಕುಹಕಿಗಳು ‘‘ಹೌದೌದು, ಆದರೆ ಜನ ಬರುವುದು ಆಟಗಾರ್ತಿಯರ ಸ್ಕರ್ಟ್‌ನ ಉದ್ದ ನೋಡುವುದಕ್ಕೆ’’ ಎಂದು ವ್ಯಂಗ್ಯ ಮಾಡಿದ್ದೆಲ್ಲ ಆಗಿದೆ.

ಇನ್ನು ಕ್ರಿಕೆಟ್‌ನ ವಿಚಾರಕ್ಕೆ ಬಂದರೆ ಅಲ್ಲಿಯೂ ತಾರತಮ್ಯಗಳಿದ್ದೇ ಇವೆ. ಕ್ರಿಕೆಟ್ ಆಡುವ ಎಲ್ಲಾ ದೇಶಗಳಲ್ಲೂ ಮಹಿಳಾ ಕ್ರಿಕೆಟ್ ಇದೆಯಾದರೂ ಅದು ಪುರುಷರ ಕ್ರಿಕೆಟ್‌ನಷ್ಟು ಪಾಪುಲರ್ ಆಗಿಲ್ಲ.

ಇಂಡಿಯಾದಲ್ಲೊಮ್ಮೆ ಕೃಷ್ಣಮಾಚಾರಿ ಶ್ರೀಕಾಂತ್‌ಗೂ, ಶಾಂತಾ ರಂಗಸ್ವಾಮಿಗೂ (ಈಗಿನ ಬಿಸಿಸಿಐ ಸದಸ್ಯೆ) ಮಹಿಳಾ ಕ್ರಿಕೆಟರ್‌ಗಳ ಸಾಮರ್ಥ್ಯದ ಬಗ್ಗೆ ವಾದ-ಪ್ರತಿವಾದಗಳ ಜಗಳವೇ ನಡೆಯಿತು.

‘‘ಮಹಿಳೆಯರು ಸಿಕ್ಸರ್ ಹೊಡೆಯಲು ಆಗಲ್ಲ’’ ಎಂದು ಶ್ರೀಕಾಂತ್ ಹೀಯಾಳಿಸಿದಾಗ ಶಾಂತಾ ‘‘ನಾನೇ ಸಿಕ್ಸರ್ ಹೊಡೆದಿದ್ದೀನಿ’’ ಅಂತ ಬೌನ್ಸರ್ ಹಾಕಿದ್ದರು. ಕೊನೆಗೆ ಶ್ರೀಕಾಂತ್ ‘‘ಮಹಿಳಾ ಕ್ರಿಕೆಟ್ ನಮ್ಮಷ್ಟು ರಂಜನೀಯ ಅಲ್ಲ’’ ಎಂದು ಗೂಗ್ಲಿ ಹಾಕಿದಾಗ ಶಾಂತಾ ಶ್ರೀಕಾಂತ್, ‘‘ನೀನು ಟಿವಿ ಚಾನೆಲ್‌ನಲ್ಲಿ ಕುಳಿತು ಕಮೆಂಟರಿ ಕೊಡುತ್ತಾ ಗೆದ್ದವರಿಗೆ ಟೋಪಿ ಹಂಚುತ್ತೀಯಲ್ಲ, ನಮ್ಮ ಕ್ರಿಕೆಟ್ ಅದಕ್ಕಿಂತ ಬೆಟರ್’’ ಎಂದು ಮಾತಿನ ಸಿಕ್ಸರ್ ಹೊಡೆದಿದ್ದರು.

Fair play – The Story of Women  Cricket ಎಂಬ ಪುಸ್ತಕದಲ್ಲಿ ಒಂದು ಘಟನೆಯ ಪ್ರಸ್ತಾಪವಿದೆ. ಇಂಗ್ಲೆಂಡ್‌ನಲ್ಲಿ ಒಮ್ಮೆ ಮಹಿಳೆ ಹಾಗೂ ಪುರುಷರ ಟೀಂಗಳ ಕ್ರಿಕೆಟ್ ಮ್ಯಾಚೊಂದನ್ನು ನಡೆಸಲಾಯಿತು. ಪುರುಷರ ಟೀಂನ ಕ್ಯಾಪ್ಟನ್ ಕಾಲಿನ್ ಕೌಡ್ರಿ

‘‘ಮಹಿಳೆಯರು ಕ್ರಿಕೆಟ್ ಆಡುವ ಬಗ್ಗೆ ನಿನಗೆ ಏನನಿಸುತ್ತೆ?’’ ಅಂತ ಸ್ಲಿಪ್‌ನಲ್ಲಿದ್ದ ಬಿಯಾನ್ ಜಾನ್ಸನ್‌ಗೆ ಕೇಳುತ್ತಾನೆ.

ಆಗ ಜಾನ್ಸನ್ ಕಿತಾಪತಿಯ ದನಿಯಲ್ಲಿ ‘‘ಪುರುಷರು ಸ್ವೆಟರ್ ಹೆಣೆಯಲು ಯತ್ನಿಸಿದಂತಿರುತ್ತೆ’’ ಎಂದನಂತೆ. ಬ್ಯಾಟಿಂಗ್ ಮಾಡುತ್ತಿದ್ದ ಆಟಗಾರ್ತಿಗೆ ಕೇಳಿಸುವಂತೆ!

ಆದರೆ ದಿನದ ಕೊನೆಯಲ್ಲಿ ಆ ಮ್ಯಾಚ್ ಗೆದ್ದವರು ಮಹಿಳಾ ಕ್ರಿಕೆಟ್ ಟೀಂ !

ಬಾಕ್ಸಿಂಗ್ ಗರ್ಲ್ಸ್ ಆರಂಭಿಸಿದ ಮಹಿಳಾ ಕ್ರೀಡಾಳುಗಳ ಕಿಕ್ ಸ್ಟಾರ್ಟ್ ಈ ಒಂದು ಶತಮಾನದಲ್ಲಿ ಅಸಾಧಾರಣ ವೇಗ ಪಡೆದುಕೊಂಡಿದೆ.

ನಿಸರ್ಗ ನಿಯಮ, ಪುರುಷ ಕೇಂದ್ರಿತ ವ್ಯವಸ್ಥೆ ಹಾಗೂ ವ್ಯಾಪಾರಿ ಹಿತಾಸಕ್ತಿಗಳ ಸಂಘರ್ಷದಲ್ಲಿ ಈ ಮೂವರ ವಿರುದ್ಧ ಏಕಕಾಲದಲ್ಲಿ ಸೆಣೆಸಾಡಬೇಕಾಗಿರುವ ಮಹಿಳೆಯರು ಕ್ರೀಡೆಗಳಲ್ಲಿ ಪುರುಷರಿಗಿಂತ ಹಿಂದಿರುವುದು ಕೇವಲ ಒಂದು ಸೆಕೆಂಡ್‌ನಷ್ಟು ಕಾಲಾವಧಿ ಎನ್ನುವುದನ್ನು ನೋಡಿದರೆ... ಅದೇ ಮೂರು ಅಂಶಗಳ ನೆರವಿದ್ದಾಗಲೂ ಪುರುಷನ ಮುನ್ನಡೆ ಕೇವಲ ಒಂದೇ ಸೆಕೆಂಡ್ ಎನ್ನುವುದೇ ಸರಿ ಅನಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ