ಮಹಿಳಾ ಚಳವಳಿಯ ಸುತ್ತ ಮುತ್ತ
ಮಹಿಳಾ ಚಳವಳಿಯ ಮೂಲದಲ್ಲಿರುವ ಪ್ರಶ್ನೆಗಳು ಮಹಿಳೆಯರು ಪುರುಷರಿಗಿಂತ ಯಾವ ರೀತಿಯಲ್ಲೂ ಭಿನ್ನರಲ್ಲ ಎಂದು ಸಮಾನತೆಗಾಗಿ ಹೋರಾಡಬೇಕೆ? ಅಥವಾ ಪುರುಷರಿಗಿಂತ ಪ್ರಜ್ಞೆಯಲ್ಲಿ ಸ್ಪಂದನೆಯಲ್ಲಿ ಮಹಿಳೆಯು ಭಿನ್ನಳು ಮತ್ತು ಈ ವಿಶಿಷ್ಟ ಶಕ್ತಿಗಾಗಿ ಹೋರಾಡಬೇಕೆ? ಎಂಬುದು. ಮುಖ್ಯವಾಗಿ ಸ್ತ್ರೀ ವ್ಯಕ್ತಿತ್ವದ ಸಹಜ ವಿಕಾಸಕ್ಕಾಗಿ ಒತ್ತಾಯಿಸುವತ್ತ ಚಳವಳಿ ಮುಂದುವರಿಯಿತು.
ಮೊನ್ನೆಯಷ್ಟೇ (ಮಾರ್ಚ್ 8) ಜಗತ್ತಿನೆಲ್ಲೆಡೆ ಅಂತಾರಾಷ್ಟ್ರೀಯ ‘ಮಹಿಳಾ ದಿನ’ವೆಂದು ಆಚರಿಸಲಾಯಿತು. ಯಾಕೆಂದರೆ ಆ ದಿನ ವಿಶ್ವದಾದ್ಯಂತ ಮಹಿಳಾ ಚಳವಳಿಗೊಂದು ನೆಲೆಗಟ್ಟು ನೀಡಿದ ದಿನ. ಇಂದು ಮಹಿಳೆ ಎಲ್ಲ ರಂಗಗಳಲ್ಲೂ ಪುರುಷನಿಗೆ ಸಮನಾಗಿ ಪಾಲ್ಗೊಳ್ಳುತ್ತಿದ್ದಾಳೆ. ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚೆಚ್ಚು ಮಹಿಳೆಯರು ದುಡಿಯುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಭರ್ತಿಯಾಗುತ್ತಿದ್ದಾರೆ. ಹಿಂದೆಲ್ಲ ಇಂತಹ ಕ್ಷೇತ್ರಗಳಲ್ಲಿ ಉದ್ಯೋಗವೆನ್ನುವುದೇ ಮಹಿಳೆಯರಿಗೆ ದುಸ್ತರವಾಗಿತ್ತು. ಇಂದು ಪರಿಸ್ಥಿತಿ ಬದಲಾಗಿದೆ, ಶೇ.40ರಷ್ಟು ಹುಡುಗಿಯರೇ ಇದರಲ್ಲಿ ಸೇರ್ಪಡೆಯಾಗುತ್ತಿದ್ದಾರೆ. ಐಟಿ ಉದ್ಯಮ ಆರ್ಥಿಕವಾಗಿ ಸಬಲರಾಗಲು ಒಳ್ಳೆಯ ಅವಕಾಶ ಎಂಬ ಅಭಿಪ್ರಾಯ ಮಹಿಳೆಯರಲ್ಲೂ ಮೂಡಿದೆ. ಅಲ್ಲದೆ ಮಹಿಳಾ ಅಗತ್ಯಗಳಿಗೂ ಈ ಉದ್ಯಮಗಳು ಹೆಚ್ಚು ಪುರಸ್ಕಾರ ಕೊಡುತ್ತಿವೆ. ಕುಟುಂಬದ ನಿರ್ವಹಣೆಗೆ ಅಗತ್ಯ ಬಿದ್ದಾಗ ಕೆರಿಯರ್ ಬ್ರೇಕ್‌ಗೂ ಇಲ್ಲಿ ಉತ್ತೇಜನ ಇದೆ. ಇನ್ನು ಇಲ್ಲಿ ಆಡಳಿತ ವರ್ಗಗಳಲ್ಲಿ ಮಹಿಳೆಯರ ಸೇರ್ಪಡೆ ನಾಯಕತ್ವಕ್ಕೂ ಅವಕಾಶ ಅನುವು ಮಾಡಿದೆ. ಹಲವು ಕಂಪೆನಿಗಳಲ್ಲಿ ಪ್ಲೆಕ್ಸಿಬಲ್ ದುಡಿಯುವ ಅವಧಿಯೂ ಇದೆ. ಅಲ್ಲದೆ ಮನೆಯಿಂದಲೇ ಕೆಲಸಮಾಡುವ ಹಾಗೂ ಪಾರ್ಟೈಮ್ ಕೆಲಸಗಳಿಗೂ ಅವಕಾಶವಿದೆ. ಇಂದು ಅನೇಕ ವೈರುಧ್ಯಗಳ ನಡುವೆಯೂ ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿದ್ದಾಳೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಬದಲಾಗುತ್ತಿರುವ ಮಹಿಳೆಯರ ಆಶೋತ್ತರಗಳಿಗೆ ಪೂರಕವಾದಂತಹ ಕೌಟುಂಬಿಕ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವತ್ತ ಸಮಗ್ರ ಕಾಳಜಿಯನ್ನೂ ನೀಡಲಾಗಿದೆ. ಇನ್ನು ಪಂಚಾಯತ್ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಪ್ರವೇಶದಿಂದ ಸದ್ದಿಲ್ಲದ ಕ್ರಾಂತಿ ಎಲ್ಲ ಅಡೆ ತಡೆಗಳ ನಡುವೆಯೂ ನಿಧಾನಕ್ಕೆ ಮುಂದೆ ಸಾಗುತ್ತಿದೆ.
ಆದರೆ ಈ ಪರಿಸ್ಥಿತಿ ಒಮ್ಮೆಗೇ ಬಂದುದಲ್ಲ. ಇದಕ್ಕಾಗಿ ಮಹಿಳೆಯರು ದೊಡ್ಡ ಹೋರಾಟವನ್ನೇ ಮಾಡಿದ್ದಾರೆ. ಹಿಂದೆ ಶತಮಾನದುದ್ದಕ್ಕೂ ಮಹಿಳೆಯರು ಅನೇಕ ದೌರ್ಜನ್ಯಗಳನ್ನು ಸಹಿಸುತ್ತಾ ಬಂದಿದ್ದಾರೆ. ಮಹಿಳೆಯರ ಸ್ಥಿತಿ ಎಂತಹ ಕೆಟ್ಟದ್ದಾಗಿತ್ತು ಅಂದರೆ ಹೆಣ್ಣು ಹೆರುವುದೇ ದೊಡ್ಡ ಅಪರಾಧ ಎನ್ನುವ ಪರಿಸ್ಥಿತಿ ಇತ್ತು. ಅವರ ಪರಿಸ್ಥಿತಿ ಎಷ್ಟು ದಾರುಣವಾಗಿತ್ತು ಅಂದರೆ ಕೇರಳದಲ್ಲಿ ತಿರುವಾಂಕೂರು ರಾಜ್ಯದಲ್ಲಿ ಕೆಳವರ್ಗದ ಸ್ತ್ರೀಯರು ಎದೆಯ ಮೇಲೆ ಬಟ್ಟೆ ಹಾಕಿಕೊಂಡರೆ ತೆರಿಗೆ ನೀಡಬೇಕಿತ್ತು. ಬಡತನ ಹಾಗೂ ಈ ತೆರಿಗೆ ಕಾರಣದಿಂದ ಸ್ತ್ರೀಯರು ಮನೆ ಬಿಟ್ಟು ಎಲ್ಲೂ ಹೋಗುತ್ತಲೇ ಇರಲಿಲ್ಲ. ಇದು ಸುಮಾರು 1803ರಲ್ಲಿ ನಡೆದ ಘಟನೆ. ನಂಗೆಲಿ ಎಂಬ ಹೆಣ್ಣು ಮಗಳ ಮನೆಯಲ್ಲಿ ತೆರಿಗೆ ವಸೂಲಿ ಅಧಿಕಾರಿ ಬಂದಾಗ ಎದೆಯ ಮೇಲೆ ಒಂದು ಬಟ್ಟೆ ಹಾಕಿಕೊಂಡ ತಪ್ಪಿಗೆ ಎದೆಯ ಮೇಲೆ ವಸ್ತ್ರ ಹೊದ್ದುಕೊಂಡ ತೆರಿಗೆಯನ್ನೂ ಕೇಳುತ್ತಾನೆ, ಆಗ ಅವಳು ತನ್ನೆರಡೂ ಸ್ತನಗಳನ್ನೂ ಕತ್ತರಿಸಿ ಬಾಳೆಎಲೆಯಲ್ಲಿ ತೆರಿಗೆ ಎಂದು ಕೊಟ್ಟು ರಕ್ತ ಸೋರಿ ಅಲ್ಲೇ ಸಾವನ್ನಪ್ಪುತ್ತಾಳೆ. ಆ ಅಧಿಕಾರಿ ಬೆಚ್ಚಿ ಹೌಹಾರಿ ಓಡಿ ಹೋಗುತ್ತಾನೆ. ಈ ಘಟನೆಯಿಂದಾಗಿ ಆ ತೆರಿಗೆ ತೆಗೆದು ಹಾಕಲಾಯಿತು. ಈ ತೆರಿಗೆ ತೆಗೆದು ಹಾಕಲು ಅವಳು ದೊಡ್ಡ ಆತ್ಮ ಸಮರ್ಪಣೆ ಮಾಡಿದಳು. ಹೇಳಲು ಹೋದರೆ ಮಹಿಳೆಯರ ಮೇಲೆ ಇಂತಹ ಅದೆಷ್ಟೋ ಎಗ್ಗಿಲ್ಲದ ದೌರ್ಜನ್ಯಗಳು ಅನಾಚಾರದ ಕತೆಗಳು ಜಗತ್ತಿನೆಲ್ಲೆಡೆ ನಡೆದಿವೆ. ಯಾಕೆಂದರೆ ಹೆಣ್ಣು ಹುಟ್ಟುವುದೇ ಪಾಪ ಮಾಡಿದ ಕಾರಣದಿಂದ ಎಂಬ ನಂಬಿಕೆ ಹರಳುಗಟ್ಟಿ ಯಾವ ಅತ್ಯಾಚಾರ ಮಾಡಿದರೂ ಅದನ್ನು ಕೇಳುವವರೇ ಇರಲಿಲ್ಲ. ಸ್ತ್ರೀ ಬುದ್ಧಿ ಪ್ರಳಯಾಂತಕ ಎಂಬ ನಂಬಿಕೆ ಸ್ತ್ರೀಯರನ್ನೇ ತುಚ್ಛೀಕರಿಸುವಂತೆ ಮಾಡಿತ್ತು. ಮಹಿಳಾ ಚಳವಳಿಯು ಮೂಲ ಫ್ರೆಂಚ್ ಕ್ರಾಂತಿಯಿಂದ ಪ್ರೇರಣೆ ಪಡೆಯಿತು. ವಾಲ್ಟೇರ್ ಮತ್ತು ರೂಸೋರಂತಹ ಬರಹಗಾರರು ಕ್ರಾಂತಿಯ ಹರಿಕಾರರು ಕೂಡ. ಹೆಣ್ಣು ಇರುವುದು ಗಂಡಸರ ಸುಖ, ಸಂತೋಷಕ್ಕಾಗಿ. ಈ ದೃಷ್ಟಿಯಿಂದ ಮಾತ್ರ ಅವರಿಗೆ ಶಿಕ್ಷಣ ದೊರೆಯಬೇಕು ಎಂಬ ಭಾವನೆ ಹೊಂದಿದ್ದರು.
ಸ್ವಾತಂತ್ರ, ಸಮಾನತೆ, ಸಹೋದರತೆಗಳ ಆದರ್ಶವನ್ನು ಪ್ರತಿಪಾದಿಸಿದ ಫ್ರೆಂಚ್ ಕ್ರಾಂತಿಯಿಂದ ಪ್ರೇರಣೆ ಪಡೆದ ಮಹಿಳೆಯರು ‘‘ಇಫ್ ಆಲ್ ಮೆನ್ ಆರ್ ಬಾರ್ನ್ ಫ್ರಿ, ಹೌ ಈಸ್ ಇಟ್ ದೆಟ್ ಆಲ್ ವುಮೆನ್ ಆರ್ ಬಾರ್ನ್ ಸ್ಲೇವ್ಸ್?’’ಎಂಬ ಮೂಲಭೂತವಾದ ಜಿಜ್ಞಾಸೆ ಮುಂದಿಟ್ಟರು. ‘‘ರೈಟ್ಸ್ ಆಫ್ ವುಮೆನ್’’ ಬರೆದ ಮೇರಿ ವುಲ್ಸ್‌ನ್ ಕ್ರಾಪ್ಟ್ (1791) ಮಹಿಳಾ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದ ಮಹಿಳಾ ಸ್ವಾತಂತ್ರ ಚಳವಳಿಯ ಮೂಲ ಕಾರಣಗಳು. ನಂತರ ಪ್ಯಾರಿಸ್‌ನಲ್ಲಿ ಜರಗಿದ ಅಂತಾರಾಷ್ಟ್ರೀಯ ಕಾರ್ಮಿಕ ಸಮಾವೇಶದಲ್ಲಿ ಮಹಿಳಾ ಚಳವಳಿಯ ನಾಯಕತ್ವದಲ್ಲಿ ಕ್ಲಾರಾ ಜೆಟಕಿನ್ ಪುರುಷರಿಗಿರುವಂತೆ ಮಹಿಳೆಯರಿಗೂ ಸಮಾನ ಹಕ್ಕುಗಳನ್ನು ನೀಡ ಬೇಕೆಂಬ ಬೇಡಿಕೆಯನ್ನು ಮಂಡಿಸಿದರು. ನಂತರವೆಲ್ಲಾ ಮಹಿಳೆಯರು ತಮ್ಮದೇ ಈ ಹೀನ ಸ್ಥಿತಿಯ ಬಗ್ಗೆ ಯಾಕೆ ಹೀಗೆ ಎಂದು ಆಲೋಚಿಸಲು ಪ್ರಾರಂಭಿಸಿದರು. ಮಹಿಳಾ ಚಳವಳಿಯ ಮೂಲದಲ್ಲಿರುವ ಪ್ರಶ್ನೆಗಳು ಮಹಿಳೆಯರು ಪುರುಷರಿಗಿಂತ ಯಾವ ರೀತಿಯಲ್ಲೂ ಭಿನ್ನರಲ್ಲ ಎಂದು ಸಮಾನತೆಗಾಗಿ ಹೋರಾಡಬೇಕೆ? ಅಥವಾ ಪುರುಷರಿಗಿಂತ ಪ್ರಜ್ಞೆಯಲ್ಲಿ ಸ್ಪಂದನೆಯಲ್ಲಿ ಮಹಿಳೆಯು ಭಿನ್ನಳು ಮತ್ತು ಈ ವಿಶಿಷ್ಟ ಶಕ್ತಿಗಾಗಿ ಹೋರಾಡಬೇಕೆ? ಎಂಬುದು. ಮುಖ್ಯವಾಗಿ ಸ್ತ್ರೀ ವ್ಯಕ್ತಿತ್ವದ ಸಹಜ ವಿಕಾಸಕ್ಕಾಗಿ ಒತ್ತಾಯಿಸುವತ್ತ ಚಳವಳಿ ಮುಂದುವರಿಯಿತು. 1908 ಮಾರ್ಚ್ 8ರಂದು ಅಮೆರಿಕದ ನ್ಯೂಯಾರ್ಕ್ ಗಿರಣಿಯಲ್ಲಿ ದುಡಿಯುತ್ತಿದ್ದ 15,000 ಮಹಿಳೆಯರು ಬೀದಿಗಿಳಿದು ತಮಗಾದ ಅನ್ಯಾಯದ ಬಗ್ಗೆ- ಕಡಿಮೆ ವೇತನ ಮತ್ತು ಹೆಚ್ಚಿನ ಅವಧಿಯ ಕೆಲಸದ ಬಗ್ಗೆ ಜಾಗೃತಿ ಮೂಡಿಸಲು ದೊಡ್ಡ ಚಳವಳಿಯನ್ನೇ ಪ್ರಾರಂಭಿಸಿದರು.
ಮಹಿಳಾ ಹೋರಾಟದಿಂದ ಹೆಚ್ಚಿನ ಪ್ರಗತಿ ಸಾಧಿಸಲಾಗದಿದ್ದರೂ ಮಹಿಳಾ ಚಳವಳಿ ನಿಲ್ಲಲಿಲ್ಲ ನಂತರ 1910ರಲ್ಲಿ ಡೆನ್‌ಮಾರ್ಕ್‌ನ ಕೊಪನ್ ಹೇಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಮಹಿಳೆಯರ ಕ್ಷೇಮಕ್ಕೆ ಹೆಚ್ಚು ಒತ್ತು ನೀಡುವ ದಿನವನ್ನು ಆಚರಿಸಬೇಕೆಂದು ನಿರ್ಣಯ ತೆಗೆದುಕೊಳ್ಳಲಾಯಿತು.
ಈ ನಿರ್ಣಯ ಆಧರಿಸಿ 1975ರಲ್ಲಿ ವಿಶ್ವದಾದ್ಯಂತ ಮಾರ್ಚ್ 8ನ್ನು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲು ವಿಶ್ವ ಸಂಸ್ಥೆ ಕರೆ ನೀಡಿತು. ಮೇರಿ ವುಲ್ಸ್ಟ್‌ನ್ ಕ್ರಾಪ್ಟರ ಮೊಳಗಿನೊಂದಿಗೆ ಆರಂಭವಾದ ಮಹಿಳಾ ಚಳವಳಿ ಮಹಿಳೆಯರ ಪೂರ್ಣ ವಿಕಾಸವನ್ನು ಪಡೆಯ ಬೇಕಾದ್ದರ ಅಗತ್ಯವನ್ನು ಪ್ರತಿಪಾದಿಸಿದ ವರ್ಜಿನಿಯಾ ವೂಲ್ಫರ ಚಿಂತನೆಯೊಂದಿಗೆ ಅನೇಕ ಪ್ರಭಾವಕ್ಕೆ ಒಳಗಾಗಿ ಆಯಾ ದೇಶದ ಸ್ತ್ರೀಯರ ವಿಶಿಷ್ಟ ಸಮಸ್ಯೆಗಳಿಗನುಗುಣವಾಗಿ ಭಿನ್ನ ಆಯಾಮಗಳನ್ನು ಮಹಿಳಾ ಚಳವಳಿ ಪಡೆದುಕೊಂಡಿತು. 1975ನ್ನು ಮಹಿಳಾ ವರ್ಷವೆಂದು ವಿಶ್ವ ಸಂಸ್ಥೆ ಕರೆ ನೀಡಿದ ಕಾರಣ ಮಹಿಳೆಯರ ಸಮಸ್ಯೆ ವಿಶ್ಲೇಷಿಸಲು ಪ್ರತೀ ವರ್ಷದ ಮಾರ್ಚ್ 8ರಂದು ಮಹಿಳಾ ದಿನವೆಂದು ಆಚರಿಸಲಾಗುತ್ತದೆ.
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿನ ಶೋಷಿತ ಸ್ಥಿತಿ ಭಾರತದಲ್ಲಿ ವಾಸ್ತವವಾಗಿರುವಾಗ ಪಾಶ್ಚಾತ್ಯ ಚಳವಳಿ ಪ್ರೇರಣೆಗೆ ಭಾರತದ ಪ್ರಜ್ಞಾವಂತ ಸಮೂಹ ಸಹಜವಾಗಿ ಸ್ತ್ರೀ ಜಾಗೃತಿ ರೂಪುಗೊಂಡಿತು. 1975 ವಿಶ್ವಸಂಸ್ಥೆ ಮಹಿಳಾ ವರ್ಷವೆಂದು ಕರೆ ನೀಡಿದಾಗ, ಮಾರ್ಚ್ 8ನ್ನು ಮಹಿಳಾ ದಿನ ಘೋಷಿಸಿದಾಗ ಮಹಿಳಾ ಚಳವಳಿ ಸರ್ವವ್ಯಾಪಿಯಾಗಿ ಆಯಾ ದೇಶದ ಸ್ಥಿತಿಗತಿಗನುಸಾರವಾಗಿ ಭಿನ್ನ ಭಿನ್ನ ರೂಪದಲ್ಲಿ ತೆರೆದುಕೊಂಡಿತು. ಹಾಗೆಯೇ ಚಳವಳಿಯ ಪ್ರಮುಖ ಬೆಳವಣಿಗೆಯಾಗಿ ಸ್ತ್ರೀವಾದಿ ಸಾಹಿತ್ಯ ಹಾಗೂ ವಿಮರ್ಶೆ ಹುಟ್ಟಿಕೊಂಡಿತು. ಮುಖ್ಯವಾಗಿ ಸ್ತ್ರೀ ಪ್ರಜ್ಞೆಗೆ ಹೆಚ್ಚಿನ ಪ್ರಾಮುಖ್ಯ ನೀಡಿ ಸ್ತ್ರೀ ಕೇಂದ್ರಿತ ವೈಚಾರಿಕ ನೆಲೆಯಲ್ಲಿ ಸ್ತ್ರೀ ಪ್ರಜ್ಞೆಗೆ ಪ್ರಚಾರ ನೀಡುವುದು ಮತ್ತು ನಿರ್ಲಕ್ಷಕ್ಕೆ ಒಳಗಾದ ಕೃತಿಯನ್ನು ಬೆಳಕಿಗೆ ತರುವುದಾಗಿತ್ತು.
ಇನ್ನು ಕರ್ನಾಟಕದ ಸಂದರ್ಭವನ್ನು ತೆಗೆದುಕೊಂಡರೆ 1984ರಲ್ಲಿ ಮೈಸೂರಿನ ಧ್ವನ್ಯಾಲೋಕದಲ್ಲಿ ನಡೆದ ‘‘ವುಮೆನ್ ರೈಟರ್ಸ್ ಆಫ್ ಫಿಕ್ಷನ್ ಆ್ಯಂಡ್ ವುಮೆನ್ ಇನ್ ಫಿಕ್ಷನ್’’ ಎಂಬ ವಿಚಾರ ಸಂಕಿರಣ ಬಹು ಮುಖ್ಯವಾದ ಘಟನೆಯಾಗಿದೆ. ಅದರಲ್ಲಿ ಅಖಿಲ ಭಾರತ ವ್ಯಾಪ್ತಿಯ ಲೇಖಕಿಯರು ಪಾಲ್ಗೊಂಡು ಪ್ರಬಂಧ ಮಂಡನೆ ಮಾಡಿದ್ದರು. ವಿಚಾರ ಸಂಕಿರಣದಲ್ಲಿ ಪ್ರಮುಖ ಲೇಖಕಿಯರಾದ ಶಶಿದೇಶಪಾಂಡೆ, ನವನೀತ ದೇವಸೇನ್, ಆಶಾಡೇ ಮುಂತಾದ ಸೃಜನಶೀಲ ಬರಹಗಾರ್ತಿಯರು ಮಹಿಳೆಯರ ಬರವಣಿಗೆ ಹಾಗೂ ಕಾದಂಬರಿಗಳಲ್ಲಿ ಮಹಿಳೆಯರ ಪಾತ್ರಗಳ ಬಗ್ಗೆ ನಡೆಸಿದ ಚರ್ಚೆ ಒಂದು ಮಹತ್ವದ ದಾಖಲೆ ಹಾಗೂ ಸ್ತ್ರೀವಾದಿ ವಿಮರ್ಶೆಯ ಹಾದಿಯಲ್ಲಿ ಒಂದು ಮಹತ್ವದ ಹೆಜ್ಜೆ ಗುರುತಾಗಿದೆ.
ಒಟ್ಟಿನಲ್ಲಿ ಈ ಕಾಲಘಟ್ಟದಲ್ಲಿ ಹೆಣ್ಣಿನ ಬದುಕಿನಲ್ಲಿ ಗಮನಾರ್ಹವಾದ ಬದಲಾವಣೆಗಳು ಕಾಣಿಸಿಕೊಳ್ಳತೊಡಗಿದವು. ಈ ಶತಮಾನದಲ್ಲಿ ವರ್ಜಿನಿಯಾ ವೂಲ್ಫ ಬರೆದ(ಎ ರೂಮ್ ಆಫ್ ವನ್ಸ್ ಓನ್) ಮತ್ತು ಸಿಮೊನ್ ದಿ ಬುವಾ ಬರೆದ (ದಿ ಸೆಕೆಂಡ್ ಸೆಕ್ಸ್) ಇದರಲ್ಲಿ ಮಹಿಳಾ ಲೇಖಕಿಯರು ಎದುರಿಸುವ ಅನೇಕ ಸಮಸ್ಯೆಗಳನ್ನು ಚರ್ಚಿಸಿದವರಲ್ಲಿ ಮೊದಲಿಗರಾಗಿ ಪ್ರಮುಖರಾಗಿದ್ದಾರೆ. ಶತಮಾನಗಳಿಂದ ಎಲ್ಲ ಉನ್ನತ ವಿದ್ಯಾಸಂಸ್ಥೆಗಳು ಪುರುಷರಿಂದ ನಿಯಂತ್ರಿಸಲ್ಪಟ್ಟು ಅವರ ಲಾಭಕ್ಕಾಗಿಯೇ ನಡೆಯುತ್ತಾ ಬಂದಿವೆ. ಸರಿಯಾದ ವಿದ್ಯಾಭ್ಯಾಸದ ಕೊರತೆ ಮತ್ತು ಬಡತನಗಳ ಅಡಚಣೆಯನ್ನು ಹೆಜ್ಜೆ ಹೆಜ್ಜೆಗೂ ಎದುರಿಸಬೇಕಾದ ಮಹಿಳೆಯರ ಸ್ಥಿತಿಯನ್ನು ವರ್ಜಿನಿಯಾ ವೂಲ್ಫ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಇನ್ನು ಸಿಮೋನ್ ದಿ ಬುವಾ ಮಹಿಳಾ ಪರಿಸ್ಥಿತಿಯನ್ನು ಕುರಿತು ಅವರ ಮುನ್ನರಿವು, ಮುನ್ನೋಟಗಳು ಮುಂದಿನ ಸ್ತ್ರೀವಾದಿ ಸಾಹಿತ್ಯ ವಿಮರ್ಶಕಿಯರ ಒಳನೋಟಗಳನ್ನು ಗಾಢವಾಗಿ ಪ್ರಭಾವಿಸಿದವು.
ವಾಸ್ತವಾಂಶ ಏನೆಂದರೆ ಸರಿಯಾದ ಶಿಕ್ಷಣ ದೊರೆತರೆ ಅದಕ್ಕೆ ತಕ್ಕಂತೆ ಅವಕಾಶ ಸಿಕ್ಕರೆ ಮಹಿಳೆಯರು ಏನೆಲ್ಲಾ ಮಾಡಲು ಸಾಧ್ಯ ಎಂದು ಬೇಕಾದಷ್ಟು ಉದಾಹರಣೆ ಕೊಡಬಹುದು. ಕಲ್ಪನಾ ಚಾವ್ಲಾ ಚಂದ್ರಲೋಕಕ್ಕೆ ಹೋಗಿ ಬಂದರು. ಇನ್ನು ಮಾದ್ಯಮಗಳಲ್ಲಿ ಮಹಿಳೆಯರೇ ಹೆಚ್ಚು ತಮ್ಮ ವಿದ್ವತ್ ತೋರಿಸಿದ್ದಾರೆ. ಹಿಂದೊಮ್ಮೆ ಯುದ್ಧರಂಗದಲ್ಲಿ ವರದಿ ಮಾಡಲು ಮಹಿಳೆಯರು ಹೋಗುತ್ತಿರಲಿಲ್ಲ. 1965ರಲ್ಲಿ ಭಾರತ-ಪಾಕಿಸ್ತಾನ ನಡುವಿನ ಯುದ್ಧದಲ್ಲಿ ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿದ್ದ ಪ್ರಭಾ ಬೆಹ್ಲ್ಲಾ ಸಂಪಾದಕರೊಡನೆ ಯುದ್ಧ ವರದಿ ಮಾಡಲು ತಾನು ಹೋಗುತ್ತೇನೆ ಎಂದಾಗ ಸಂಪಾದಕರು ಸುತಾರಾಂ ಒಪ್ಪಲಿಲ್ಲ. ‘‘ನಿನಗೆ ಮಾಡಲು ಸಾಧ್ಯವೇ ಇಲ್ಲ’’ ಎಂದರು. ನಂತರ ಪ್ರಭಾ ರಜೆ ಹಾಕಿ ಯುದ್ಧ ರಂಗಪ್ರದೇಶದಲ್ಲಿ ವರದಿ ಮಾಡಲು ಸ್ವಂತ ಹಣ ಸಂಗ್ರಹಿಸಿ ಅಲ್ಲಿ ಹೋಗಿ ಪತ್ರಿಕೆಗೆ ವರದಿ ಕಳುಹಿಸಲು ಪ್ರಾರಂಭಿಸಿದರು. ಈ ವರದಿಗಳು ಖಚಿತ ವರದಿಗಳಾಗಿದ್ದವು. ನಂತರ 34 ವರ್ಷಗಳ ಬಳಿಕ 1999ರ ಕಾರ್ಗಿಲ್‌ನಲ್ಲಿ ಪಾಕಿಸ್ತಾನ-ಭಾರತ ಯುದ್ಧ ನಡೆದಾಗ ಸ್ಟಾರ್‌ನ್ಯೂಸ್‌ನಲ್ಲಿ ಬಹುಮುಖ್ಯವಾದ ಅಂತಿಮ ಮಿಲಿಟರಿ ದಾಳಿ ನಡೆಯುವ ಸಂಭವನೀಯತೆ ಬಗ್ಗೆ ಭಾರತೀಯರ ಗಮನಕ್ಕೆ ಮೊದಲು ತಂದವರು ಬರ್ಖಾದತ್ತ ಎನ್‌ಡಿ ಟಿವಿಯ ಹಿರಿಯ ಸಂಪಾದಕಿ. ಅವರು ಹಿಂದೆ ಯುದ್ಧ ವರದಿ ನೀಡಿದ ಪ್ರಭಾಬೆಹ್ಲಾರ ಮಗಳು. ದಿಲ್ಲಿಯ ‘ಜಾಮಿಯ ಮಿಲಿಯಾದಲ್ಲಿ ಮಾಸ್ ಕಮ್ಯುನಿಕೇಶನ್’ ವಿಷಯದಲ್ಲಿ ಪದವಿ ಪಡೆದು ನಂತರ ನ್ಯೂಯಾರ್ಕ್‌ನ ಕೊಲಂಬಿಯಾ ವಿವಿಯಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಇನ್ನೊಂದು ಪದವಿ ಪಡೆದು ಧೈರ್ಯವಾಗಿ ಕಾಶ್ಮೀರ ಸಮಸ್ಯೆಗಳ ಕುರಿತು ವರದಿ ಮಾಡುತ್ತಿದ್ದವರು. ಇವೆಲ್ಲಾ ಮಹಿಳೆಯರನ್ನು ಅಡಿಗೆ ಮನೆಗೆ ಮಾತ್ರ ಎಂದು ಸೀಮಿತಗೊಳಿಸಿದ್ದರೆ ಅವರ ಸಾಮರ್ಥ್ಯ ಅಲ್ಲೇ ಹುದುಗಿ ಹೋಗುತ್ತಿತ್ತು. ಅವಕಾಶ ಸಿಕ್ಕಿದರೆ ಏನೂ ಮಾಡಲು ಸಾಧ್ಯ ಎನ್ನುವ ಇತ್ಯಾತ್ಮಕ ದಿಕ್ಸೂಚಿಗಳಾಗುತ್ತವೆ.