ನೀರು... ನೀ ಇರು

ನೀರಿನ ಬರಗಾಲವು ಪಾಕೃತಿಕ ವಿಕೋಪವೆಂಬ ಕಲ್ಪನೆ ಬಹಳಷ್ಟು ಜನರಲ್ಲಿದೆ. ಹಾಗೆಂದು ನಂಬಿಸಲಾಗುತ್ತಿದೆ ಕೂಡ. ಆದರೆ ಸದ್ಯದ ಪರಿಸರದ ಸಮಸ್ಯೆಗಳು ಭಾಗಶಃ ಮಾತ್ರ ಪ್ರಾಕೃತಿಕ. ಉಳಿದಂತೆ ಅದು ಮನುಷ್ಯ ನಿರ್ಮಿತ. ಮನುಷ್ಯ ನಿರ್ಮಿತವೆಂದಾದರೆ ಅದಕ್ಕೆ ಸಾಮೂಹಿಕವಾಗಿ ಎಲ್ಲರೂ ಹೊಣೆಗಾರರೇ ಅಥವಾ ಕೆಲವರು ಮಾತ್ರ ಹೊಣೆಗಾರರೇ ಮತ್ತು ಈಗ ಇದನ್ನು ಸರಿಪಡಿಸಬೇಕಾದವರು ಯಾರು ಎಂಬ ಜಿಜ್ಞಾಸೆಯನ್ನು ಮಾಡಲೇಬೇಕಿದೆ. ಯಾಕೆಂದರೆ ಈ ಜಿಜ್ಞಾಸೆ ಮಾಡದ ಹೊರತು ನಾವು ಸಮಸ್ಯೆಯನ್ನು ಬಗೆಹರಿಸಲು ಅಸಾಧ್ಯ.
ವಿಶ್ವ ಜಲ ದಿನಾಚರಣೆ ಆಚರಿಸುವ ಈ ಹೊತ್ತಿಗೆ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣವಾಗಿದೆ. ಕರ್ನಾಟಕದಲ್ಲಿ ಸದ್ಯದ ನೀರಿನ ಬವಣೆಗೆ ಮುಖ್ಯ ಕಾರಣ ಕಳೆದ ವರ್ಷದಲ್ಲಿ ಕಡಿಮೆ ಮಳೆಯಾಗಿರುವುದಾಗಿದೆ. ಆದರೆ ಇತ್ತೀಚೆಗೆ ವಾರ್ಷಿಕ ಮಳೆ ಚೆನ್ನಾಗಿ ಬಂದರೂ ಮಳೆಯ ಅಕಾಲಿಕತೆಯ ಕಾರಣದಿಂದ ತೊಂದರೆಯಾಗುತ್ತಿದೆ. ಮಳೆಯ ಅಕಾಲಿಕತೆಗೆ ಮತ್ತು ನೀರಿನ ಅಭಾವಕ್ಕೆ ಹವಾಮಾನ ಬದಲಾವಣೆ ಕಾರಣವೆನ್ನುತ್ತಾರೆ. ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ಆಗುತ್ತಿರುವುದು ಮತ್ತು ಅದರ ಪ್ರಭಾವವಿರುವುದು ನಿಜವಾಗಿದ್ದರೂ ಸ್ಥಳೀಯ ಮಟ್ಟದಲ್ಲಿ ಹವಾಮಾನ ಬದಲಾವಣೆಯು ಮುಖ್ಯ ಆರೋಪಿಯಲ್ಲ. ಇತರ ಅನೇಕ ಕಾರಣಗಳ ಜೊತೆಗೆ ಹವಾಮಾನ ಬದಲಾವಣೆಯ ಕೊಡುಗೆಯೂ ಸೇರಿ ಸಮಸ್ಯೆಯ ಪ್ರಮಾಣ ಹೆಚ್ಚುತ್ತದೆ ಎಂದು ತಜ್ಞರು ಹೇಳುತ್ತಾರೆ. ಆ ಇತರ ಕಾರಣಗಳು ಯಾವುವೆಂದರೆ ಮಾರುಕಟ್ಟೆ ಪ್ರೇರಿತ ಭೋಗ ಸಂಸ್ಕೃತಿ, ‘ಅಭಿವೃದ್ಧಿ’ಯ ತಪ್ಪುಗ್ರಹಿಕೆ, ನೀರಿನ ತಪ್ಪುಬಳಕೆ ಮತ್ತು ಹಂಚಿಕೆಯ ಅಸಮಾನತೆಗಳಾಗಿವೆ. ನೀರಿನ ಕ್ಷಾಮ ಮಾತ್ರವಲ್ಲ ಒಟ್ಟಾರೆಯಾಗಿ ಜಗತ್ತಿನ ಜನರನ್ನು ಕಾಡುತ್ತಿರುವ ನೈಸರ್ಗಿಕ ಸಂಪನ್ಮೂಲದ ನಾಶಕ್ಕೂ ಇವುಗಳೇ ಕಾರಣ.
ಮಳೆರಾಯನೇಕೆ ಕ್ರಮಪ್ರಕಾರ ಸುರಿಯುತ್ತಿಲ್ಲವೆಂದು ಕೇಳುವಾಗ ಊರಲ್ಲಿ ಅನ್ಯಾಯ, ಶೋಷಣೆ ಹೆಚ್ಚಾಗಿರು ವುದಕ್ಕೇ ಸುರಿಯುತ್ತಿಲ್ಲವೆಂದು ಮಳೆರಾಯನು ಸಮಜಾಯಿಷಿ ನೀಡುವಂತಹ ಹೊಸ ಜನಪದ ಹಾಡೊಂದು ಚಾಲ್ತಿಯಲ್ಲಿದೆ. ನೀರಿನ ಬಳಕೆ ಮತ್ತು ಹಂಚಿಕೆಯ ವಿಚಾರಕ್ಕೆ ಬಂದರೆ ಅನ್ಯಾಯ, ಅಧರ್ಮಗಳಿರುವುದು ನಿಜ. ನೀರಿನ ಬರಗಾಲವು ಪ್ರಾಕೃತಿಕ ವಿಕೋಪವೆಂಬ ಕಲ್ಪನೆ ಬಹಳಷ್ಟು ಜನರಲ್ಲಿದೆ. ಹಾಗೆಂದು ನಂಬಿಸಲಾಗುತ್ತಿದೆ ಕೂಡ. ಆದರೆ ಸದ್ಯದ ಪರಿಸರದ ಸಮಸ್ಯೆಗಳು ಭಾಗಶಃ ಮಾತ್ರ ಪ್ರಾಕೃತಿಕ. ಉಳಿದಂತೆ ಅದು ಮನುಷ್ಯ ನಿರ್ಮಿತ. ಮನುಷ್ಯ ನಿರ್ಮಿತವೆಂದಾದರೆ ಅದಕ್ಕೆ ಸಾಮೂಹಿಕವಾಗಿ ಎಲ್ಲರೂ ಹೊಣೆಗಾರರೇ ಅಥವಾ ಕೆಲವರು ಮಾತ್ರ ಹೊಣೆಗಾರರೇ ಮತ್ತು ಈಗ ಇದನ್ನು ಸರಿಪಡಿಸಬೇಕಾದವರು ಯಾರು ಎಂಬ ಜಿಜ್ಞಾಸೆಯನ್ನು ಮಾಡಲೇಬೇಕಿದೆ. ಯಾಕೆಂದರೆ ಈ ಜಿಜ್ಞಾಸೆ ಮಾಡದ ಹೊರತು ನಾವು ಸಮಸ್ಯೆಯನ್ನು ಬಗೆಹರಿಸಲು ಅಸಾಧ್ಯ. ನೈಸರ್ಗಿಕ ಸಂಪನ್ಮೂಲದ ನಾಶಕ್ಕೆ ಜನಸಂಖ್ಯೆಯ ಮೇಲೆ ಆರೋಪ ಮಾಡಲಾಗುತ್ತಿದೆ. ಅದರಲ್ಲೂ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಯನ್ನು ಹೊರತಂದ ವಿಶ್ವ ಸಂಸ್ಥೆಯ ‘ಬ್ರಂಡ್ ಲ್ಯಾಂಡ್ ಕಮಿಷನ್’ ನೈಸರ್ಗಿಕ ಸಂಪನ್ಮೂಲದ ನಾಶಕ್ಕೆ ಬಡವರ ಹಸಿವೇ ಕಾರಣವೆಂದು ಹೇಳಿದೆ. ಅಂದರೆ ದೊಡ್ಡ ಸಂಖ್ಯೆಯಲ್ಲಿರುವ ಜಗತ್ತಿನ ಬಡವರಿಗೆ ಅನ್ನ ನೀರು ದೊರಕಿಸುವುದಕ್ಕಾಗಿ ಮಾಡುವ ಚಟುವಟಿಕೆಗಳಿಂದಲೇ ಸಂಪನ್ಮೂಲಗಳ ಅವನತಿ ಆಗಿದೆ ಎಂದು ಈ ಮಾತಿನ ಅರ್ಥ.

ಕೈಗಾರಿಕಾ ಕ್ರಾಂತಿ, ಹಸಿರು ಕ್ರಾಂತಿ ಅಥವಾ ಎರಡನೆ ಮಹಾಯುದ್ಧದ ನಂತರ ರೂಪುಗೊಂಡ ಅಭಿವೃದ್ಧಿ ಪರಿಕಲ್ಪನೆಗಳು ಮೇಲ್ನೋಟಕ್ಕೆ ಸಾಮೂಹಿಕ ಹಿತಕ್ಕಾಗಿ ಎಂದು ಕಂಡುಬಂದರೂ ಅವುಗಳು ವ್ಯಾಪಾರಿ ಹಿತಾಸಕ್ತಿಯಿಂದಲೇ ಹುಟ್ಟಿಕೊಂಡವು ಆಗಿವೆ. ಕೃಷಿಯಲ್ಲಿ ನೀರಿನ ಅತಿಬಳಕೆಗೆ ಕಾರಣವಾದ ಹಸಿರುಕ್ರಾಂತಿಯು ಬೆಳೆಯುತ್ತಿರುವ ಜನಸಂಖ್ಯೆಯ ಹಸಿವು ನೀಗಿಸಲಿಕ್ಕಾಗಿ ಆರಂಭವಾದಂತೆ ಕಂಡರೂ ಮೆಕ್ಸಿಕೋ, ಫಿಲಿಫೈನ್ಸ್, ಭಾರತಗಳಲ್ಲಿ ಹಸಿರು ಕ್ರಾಂತಿಯನ್ನು ಹುಟ್ಟುಹಾಕಿದ ವಾಹನ ಮತ್ತು ಯುದ್ಧಸಾಮಗ್ರಿಗಳನ್ನು ತಯಾರಿಸುವ ಫೋರ್ಡ್ ಫೌಂಡೇಶನ್, ರಾಕ್ ಫೆಲ್ಲರ್ ಫೌಂಡೇಶನ್‌ಗಳ ಹಿತಾಸಕ್ತಿಯನ್ನು ಮರೆಯುವಂತಿಲ್ಲ. ಹಸಿರು ಕ್ರಾಂತಿಯ ಪರಿಣಾಮದಿಂದಲೇ ಇಂದು ರೈತರು ಬೀಜ, ಗೊಬ್ಬರ, ಕೀಟನಾಶಕ, ಕಳೆನಾಶಕ, ಮಾರುಕಟ್ಟೆಗೂ ಕಂಪೆನಿಗಳ ಅಡಿಯಾಳಾಗಿದ್ದಾರೆ. ಅವರು ತಮ್ಮ ಜಮೀನಿನಲ್ಲಿ ತಮ್ಮ ಶ್ರಮ, ಬಂಡವಾಳ ಹಾಕಿ ಕಂಪೆನಿ ಕೃಷಿ ಮಾಡುತ್ತಿದ್ದಾರೆ. ಎಲ್ಲರೂ ಸಾಲಗಾರರಾಗಿದ್ದಾರೆ. ಕೃಷಿಯಿಂದಾಗಿ ಮಣ್ಣು ನಾಶವಾಗಿದೆ, ಆಹಾರ ವಿಷವಾಗಿದೆ, ನೀರೂ ಬರಿದಾಗಿದೆ.
ಸರಕು ಸಂಸ್ಕೃತಿಯನ್ನು ಹುಟ್ಟು ಹಾಕಿದ ಮೊದಲ ಕೀರ್ತಿ ಕೈಗಾರಿಕೀಕರಣದ ವಿದ್ಯಮಾನಕ್ಕೆ ಸಲ್ಲುತ್ತದೆ. ಜಗತ್ತಿನಲ್ಲಿ ಕೈಗಾರಿಕೀ ಕರಣ ಮತ್ತು ಹಸಿರು ಕ್ರಾಂತಿಯು ಮಾಡಿರುವ ನಿಸರ್ಗವಿನಾಶದ ಬಗ್ಗೆ ಎಚ್ಚರ ಮೂಡಿದ್ದು 1960ರ ದಶಕದ ನಂತರವೇ. ಭಾರತದಲ್ಲಿ ಆಗ ತಾನೆ ಹಸಿರು ಕ್ರಾಂತಿ ಆರಂಭವಾಗಿತ್ತು. ‘ಸೈಲೆಂಟ್ ಸ್ಪ್ರಿಂಗ್ಸ್’ (1962), ‘ಲಿಮಿಟ್ ಟು ಗ್ರೋಥ್’(1972), ‘ಸ್ಮಾಲ್ ಈಸ್ ಬ್ಯೂಟಿಫುಲ್’(1973) ಮುಂತಾದವು ಈ ಎಚ್ಚರಕ್ಕೆ ಕಾರಣವಾದ ಪ್ರಮುಖ ಕೃತಿಗಳು ಎನ್ನಬಹುದು. ಬಹಳ ಸಮಯದವರೆಗೂ ಪರಿಸರ-ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಚಳವಳಿಯು ಮಧ್ಯಮ ವರ್ಗದ ‘ಕಾಳಜಿ’ ಅಷ್ಟೇ ಆಗಿ ಪರಿಗಣಿಸಲ್ಪಟ್ಟಿತ್ತು. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಪ್ರಶ್ನೆಗಳನ್ನು ಪ್ರಧಾನವಾಗಿ ಇಟ್ಟುಕೊಂಡ ಹೋರಾಟಗಳು ಪರಿಸರದ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನೀರು ಮುಂತಾದ ನೈಸರ್ಗಿಕ ಸಂಪನ್ಮೂಲಗಳ ನಾಶದ ಸಮಸ್ಯೆಯು ಅಂತಿಮವಾಗಿ, ಜೀವನೋಪಾಯ ನಾಶ, ನಿರ್ವಸತೀಕರಣ, ಅಪೌಷ್ಟಿಕತೆ ಅಥವಾ ಕಾಯಿಲೆಗಳ ರೂಪದಲ್ಲಿ ತಳ ಸ್ಥರದ ಸಮುದಾಯಗಳನ್ನೇ ಹೆಚ್ಚು ಬಾಧಿಸುತ್ತದೆ.
ಜೋನ್ ಮಾರ್ಟಿನೆಜ್ ಅಲೈರ್ ಅವರು ತಮ್ಮ ‘ಎನ್ವಿರಾನ್‌ಮೆಂಟಲಿಸಮ್ ಆಫ್ ದ ಪೂರ್’’ ಎನ್ನುವ ಪುಸ್ತಕದಲ್ಲಿ ತಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದು ತಮ್ಮ ಜೀವನೋಪಾಯವನ್ನು ನಾಶ ಮಾಡುವ ನೀತಿ, ಶಕ್ತಿಗಳನ್ನು ಮತ್ತು ಯೋಜನೆಗಳನ್ನು ವಿರೋಧಿಸುವ ಹೋರಾಟಗಳನ್ನು ಪರಿಸರದ ಹೋರಾಟಗಳೆಂದೇ ಕರೆದಿದ್ದಾರೆ. ಮುಖ್ಯವಾಹಿನಿಯ ಅಭಿವೃದ್ಧಿ ಪರಿಕಲ್ಪನೆಯು ನೈಸರ್ಗಿಕ ಸಂಪನ್ಮೂಲದ ನಾಶಕ್ಕೆ ಕಾರಣವಾಗುತ್ತದೆ ಮತ್ತು ತಳಸ್ತರದ ಸಮುದಾಯಗಳು ನೈಸರ್ಗಿಕ ಸಂಪತ್ತಿನ ಮೇಲಿನ ಹಕ್ಕನ್ನು ಕಳೆದುಕೊಳ್ಳವ ಸ್ಥಿತಿಯನ್ನು ನಿರ್ಮಿಸುತ್ತವೆ. ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆಯು ನೈಸರ್ಗಿಕ ಸುಸ್ಥಿರತೆಗೆ ಒತ್ತು ಕೊಟ್ಟರೂ ಸಮುದಾಯದ ಹಕ್ಕುಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಳಕೆಯ ಹಂಚಿಕೆಯ ಬಗ್ಗೆ ಹರಿತವಾಗಿಲ್ಲ. ಆದುದರಿಂದ ಅಭಿವೃದ್ಧಿಗೆ ಪರ್ಯಾಯವಾಗಿ ಹುಟ್ಟಿಕೊಂಡ ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆಯಲ್ಲಿ ಸಾಮಾಜಿಕ ಆರ್ಥಿಕ ನ್ಯಾಯದ ಅಂಶವಿಲ್ಲ. ಮತ್ತೆ ಭೋಗ ಸಂಸ್ಕೃತಿಯ ವಿಚಾರಕ್ಕೆ ಬರೋಣ. ಬದುಕಿ ಉಳಿಯಲು ಪ್ರಯತ್ನಿಸುವುದು ಎಲ್ಲ ಜೀವಿಗಳ ಸಹಜ ಗುಣ. ಶ್ರಮ ಪಡುವುದನ್ನು ಕಡಿಮೆ ಮಾಡಿಕೊಳ್ಳಬೇಕು ಹೆಚ್ಚು ಸುಖಪಡಬೇಕು ಎಂಬುದು ಮನುಷ್ಯರೊಳಗಿನ ಆಸೆ. ಈ ಆಸೆಯೇ ಮಾರುಕಟ್ಟೆ ಶಕ್ತಿಗಳ ಬಂಡವಾಳ. ಮಾರುಕಟ್ಟೆಯ ಶಕ್ತಿಗಳು ಭೋಗದಾಸೆಯನ್ನು ಪೋಷಿಸಿ, ಉತ್ತೇಜಿಸಿ ಬೆಳೆಸುತ್ತವೆ. ನಾವು ಉಪಭೋಗ ಸಂಸ್ಕೃತಿಗೆ ದಾಸರಾಗಿರುವುದರಿಂದಲೇ ಇವತ್ತು ನಮಗೆ ನೀರು ಇಲ್ಲದಿರುವುದು ಮತ್ತು ‘ನೀರು ಇಲ್ಲ’ ಎಂಬ ಚಿಂತೆ ಕಾಡುತ್ತಿರುವುದು. ನೀರು ಎಷ್ಟು ಇರಬೇಕಿತ್ತು ಎಂದಾದರೂ ನಾವು ಯೋಚನೆ ಮಾಡಿದ್ದೇವೆಯೇ? ಮೂವತ್ತು ನಲವತ್ತು ವರ್ಷಗಳ ಹಿಂದೆ ಕೊಳವೆ ಬಾವಿ, ನಲ್ಲಿಗಳ ವ್ಯವಸ್ಥೆ ಇಲ್ಲದೆ ಇದ್ದಾಗ ಬಾವಿಯಿಂದ ನೀರು ಸೇದಿ ತರುತ್ತಿದ್ದೆವು. ಮನೆಯಲ್ಲಿ ಮೂರು ನಾಲ್ಕು ಬಿಂದಿಗೆ ನೀರಿದ್ದರೆ, ಸೇದಲು ಬಾವಿಯಲ್ಲಿ ನೀರಿದ್ದರೆ ‘ನೀರಿಲ್ಲ’ ಎಂಬ ಚಿಂತೆ ಇರುತ್ತಿರಲಿಲ್ಲ. ಈಗ ಎರಡು ಮೂರು ದಿನಕ್ಕೊಮ್ಮೆ ನಲ್ಲಿಯಲ್ಲಿ ನೀರು ಬಿಡುತ್ತಾರೆ ದಿನಾಲೂ ಬಿಡುವುದಿಲ್ಲ ಎಂಬುದು ನಮ್ಮ ಚಿಂತೆ. ಕೆಲವು ಊರುಗಳಲ್ಲಿ, ನಗರದಲ್ಲಿ ಬಡಜನರು ವಾಸಿಸುವ ಸ್ಥಳಗಳಲ್ಲಿ ಮೂಲ ಅಗತ್ಯಕ್ಕೆ ತಕ್ಕಷ್ಟೂ ನೀರು ಇಲ್ಲದಿರುವುದೂ ಕೂಡ ಒಂದು ವಾಸ್ತವವೇ. ಕುಡಿಯುವ ನೀರಿನ ಪ್ರಶ್ನೆ ಬಂದಾಗ ನಗರಗಳು ನಮ್ಮ ಮೊದಲ ಆದ್ಯತೆ. ಆದರೆ ನಗರಗಳಿಗೆ ಕುಡಿಯವ ನೀರು ಎಂದು ಸರಬರಾಜು ಆಗುವ ನೀರು ಕೇವಲ ಕುಡಿಯಲು ಮಾತ್ರ ಬಳಕೆ ಆಗುತ್ತಿಲ್ಲ. ನಗರದೊಳಗಿನ ಉದ್ಯಮಗಳೂ ಆ ನೀರನ್ನು ಬಳಸಿಕೊಳ್ಳುತ್ತವೆ. ಅಲ್ಲೂ ಸ್ಲಂ ಗಳಿಗೆ ನೀರೇ ಸಿಗುವುದಿಲ್ಲ, ನೀರು ಬಂದ ತಕ್ಷಣ ತಮ್ಮ ಸಂಪಿನಲ್ಲಿ ನೀರು ತುಂಬಿಸಿಕೊಳ್ಳಲು ಅನುಕೂಲಸ್ಥ ಜನ ತಮ್ಮ ಕಾರು ತೊಳೆಯಲೂ, ನಾಯಿ ತೊಳೆಯಲೂ, ಲಾನ್‌ಗಳಿಗೆ ನೀರು ಹಾಕಲೂ ಬಳಸಿಕೊಳ್ಳುತ್ತಾರೆ. ಕೃಷಿ ವಿಚಾರಕ್ಕೆ ಬಂದರೆ ಹಿಂದೆ ಮಳೆಗಾಲದಲ್ಲಿ ಒಂದು ಪೂರ್ಣ ಬೆಳೆ, ಕೆರೆ ಖಾನೆಯಲ್ಲಿ ಮಾತ್ರ ಎರಡನೆಯ ಬೆಳೆ, ಸಣ್ಣ ಬಾವಿ ತೋಡಿ ಏತಗಳಿಂದ ನೀರು ಎತ್ತಿ ಒಂದಷ್ಟು ಅಗಲ ಬೇಸಿಗೆ ತರಕಾರಿ ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದರು. ಆಗ ಕೃಷಿಗೆ ನೀರಿಲ್ಲ ಎಂಬ ಕೂಗು ಇರಲಿಲ್ಲ.
1950-60ರ ದಶಕದಲ್ಲಿ ಬಾವಿಗಳಿಗಳಿಗೆ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಆರಂಭಿಸಿದ ಮೇಲೆ ಪರಿಸ್ಥಿತಿ ಬದಲಾಯಿತು. ಅದಾಗಿ ಒಂದೆರಡು ದಶಕಗಳ ನಂತರ ಕೊಳವೆ ಬಾವಿಗಳು ಬಂದವು. ಹತ್ತಿಪ್ಪತ್ತು ವರ್ಷಗಳ ಕಾಲ ಬೇಸಿಗೆ ಮಳೆಗಾಲ ಎನ್ನದೆ ಊರು ತುಂಬಾ ಎರಡು-ಮೂರು ಮೂರು ಬೆಳೆ ಬೆಳೆದಿದ್ದಾಯಿತು. ಈಗ ಅಂತರ್ಜಲ ಬರಿದಾಗಿದೆ. ಎಲ್ಲೋ ಕೆಲವು ಕೊಳವೆ ಬಾವಿಗಳಲ್ಲಿ ನೀರು ಇನ್ನೂ ಸಲ್ಪಉಳಿದಿರುವಲ್ಲಿ ವಾರ್ಷಿಕ ನೀರಾವರಿ ಬೆಳೆ ಬೆಳೆಯುತ್ತಿದ್ದಾರೆ. ಹಿಂದೆ ಅಂದರೆ ಒಂದೆರಡು ದಶಕಗಳ ಹಿಂದೆ ಬೆಳೆಯುತ್ತಿದ್ದಂತೆ ವರ್ಷ ಪೂರ್ತಿ ಬೆಳೆ ಬೆಳೆಯುವಂತೆ ನೀರಾವರಿ ವ್ಯವಸ್ಥೆ ಮಾಡಿ ಎನ್ನುವುದು ಇಂತಹ ಪ್ರದೇಶಗಳ ರೈತರ ಬೇಡಿಕೆಯಾಗಿದೆ. ಕೊಳವೆಬಾವಿ ನೀರಾವರಿ ಇದ್ದು ಈಗ ಬರಡಾಗಿರುವ ಪ್ರದೇಶಗಳಲ್ಲಿ ಒಂದೆರಡು ದಶಕಗಳ ಕಾಲ ಯತೇಚ್ಛ ಅಂತರ್ಜಲ ಬಳಸಿರುವುದೇ ಸಮಸ್ಯೆಗೆ ಕಾರಣವೆಂದು ಯಾರೂ ಹೇಳುವುದೂ ಇಲ್ಲ. ಒಪ್ಪಿಕೊಳ್ಳುವುದೂ ಇಲ್ಲ. ಮಳೆ ಕಡಿಮೆ ಎಂದಷ್ಟೇ ಮಳೆಯನ್ನು ದೂರಲಾಗುತ್ತಿದೆ. ಕರ್ನಾಟಕದ ಬಯಲುಸೀಮೆಯ ಅರ್ಕಾವತಿ ನದಿ ಜಲಾನಯನದಲ್ಲಿ ಅಧ್ಯಯನ ಮಾಡಿರುವ ಅಶೋಕ ಪರಿಸರ ಮತ್ತು ಪರಿಸರ ವಿಜ್ಞಾನ ಸಂಶೋಧನ ಸಂಸ್ಥೆಯ ಅಧ್ಯಯನ ವರದಿಯ ಪ್ರಕಾರ ಆ ಭಾಗದಲ್ಲಿ ನೀರಿಲ್ಲದಿರುವುದಕ್ಕೆ ಹವಾಮಾನ ಬದಲಾವಣೆ ಕಾರಣವಲ್ಲ. ನದಿಯ ಜಲಾನಯನದ ಕೆರೆ ಬಾವಿಗಳು ಬತ್ತಿ ಹೋಗಲು ಮುಖ್ಯ ಕಾರಣ ಕೃಷಿಗೆ ಅಂತರ್ಜಲದ ಅತೀ ಬಳಕೆ ಮಾಡಿರುವುದು ಮತ್ತು ನೆದ ತೇವಾಂಶವನ್ನು ಅಧಿಕವಾಗಿ ಹೀರುತ್ತಿರುವ ನೀಲಗಿರಿ ಮರಗಳನ್ನು ಬೆಳೆಸಿರುವುದು. ಅಧ್ಯಯನದ ಪ್ರಕಾರ ಅಂತಿಮವಾಗಿ ಮರಗಿಡ - ಬೆಳೆಗಿಡಗಳ ಮೂಲಕ ಆಗುವ ಬಾಷ್ಪೀಕರಣವೇ ನೀರಿನ ಕೊರತೆಗೆ ಮುಖ್ಯ ಕಾರಣ. ಉಳಿದಂತೆ ಸ್ವಲ್ಪ ಪ್ರಮಾಣದ ನೀರು ಆವಿಯಾಗಿ ಹೋಗುತ್ತದೆ. ಅಂತರ್ಜಲದ ಮರುಪೂರಣ ಮಾಡುವುದರಿಂದ ಮತ್ತು ಹನಿ ನೀರಾವರಿ ಪದ್ಧತಿಗಳನ್ನು ಅಳವಡಿಸುವುದರಿಂದ ನೀರು ಆವಿಯಾಗುವುದನ್ನು ಕಡಿತಗೊಳಿಸಬಹುದು. ಆದರೆ ಬಾಷ್ಪೀಕರಣದ ಮೂಲಕ ನೀರು ಖಾಲಿಯಾಗುವುದನ್ನು ತಡೆಯಬೇಕೆಂದರೆ ಬೆಳೆಗಳ ಆಯ್ಕೆ ಬದಲಾಗಬೇಕು, ಬೆಳೆಗಳನ್ನು ಬೆಳೆಯುವ ಪ್ರದೇಶ ಕಡಿಮೆ ಆಗಬೇಕು. ಬಯಲುಸೀಮೆಯಲ್ಲಿ ಕಳೆದ ಮೂವತ್ತು ನಲವತ್ತು ವರ್ಷಗಳಲ್ಲಿ ಕೊಳವೆ ಬಾವಿ ಕೊರೆಯಲು ಸಾಧ್ಯವಿಲ್ಲದಿರುವ ರೈತರಿಗಿಂತ ಕೊಳವೆ ಬಾವಿಗಳನ್ನು ಕೊರೆಸಿರುವ ರೈತರು ಅದರಲ್ಲೂ ಹೆಚ್ಚು ಜಮೀನು ಇದ್ದು ಹೆಚ್ಚು ಸಂಖ್ಯೆಯ ಕೊಳವೆಬಾವಿಗಳನ್ನು ಕೊರೆಸಿರುವವರೇ ವಾಣಿಜ್ಯ-ತೋಟಗಾರಿಕಾ ಬೆಳೆಗಳನ್ನು ಬೆಳೆಸಿ ನೀರನ್ನು ಅತೀ ಹೆಚ್ಚು ಬಳಸಿದ್ದಾರೆ. ಹಾಗೆಂದು ಅವರು ಲಾಭ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಅಷ್ಟು ನೀರು ಬಳಸಿ ಬೆಳೆಗಳನ್ನು ಬೆಳೆದರೂ ಮಾರುಕಟ್ಟೆ ಮತ್ತು ಬೆಲೆ ಅತಂತ್ರವಾಗಿರುವುದರಿಂದ ಅವರ ಆದಾಯವೂ, ಲಾಭವೂ ಅತಂತ್ರವೇ.
ಕರ್ನಾಟಕದ ‘ಹಿಂದುಳಿದ’ ಮತ್ತು ಈಗ ‘ಅಭಿವೃದ್ಧಿ’ ಆಗುತ್ತಾ ಇರುವ ಕೆಲವು ಜಿಲ್ಲೆಗಳಲ್ಲಿ, ಮುಖ್ಯವಾಗಿ ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಈಗ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದಾರೆ. ಅಲ್ಲಿ ಇನ್ನೂರು ಮುನ್ನೂರು ಅಡಿ ಆಳದಲ್ಲಿ ನೀರು ಸಿಗುತ್ತಿದೆ. ಅಲ್ಲೂ ಬೇಸಿಗೆಯಲ್ಲಿ ನೀರಾವರಿ ಬೆಳೆಗಳನ್ನು ಬೆಳೆಯಲಾರಂಭಿಸಿದ್ದಾರೆ. ಐದು ಹತ್ತು ವರ್ಷಗಳಲ್ಲಿ ಅಲ್ಲಿನ ಅಂತರ್ಜಲವೂ ಬರಿದಾಗಲಿದೆ. ಯಾವುದೇ ಒಂದು ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣಕ್ಕಿಂತ ಬಳಸುವ ನೀರು ಹೆಚ್ಚಾದರೆ ವರ್ಷದಿಂದ ವರ್ಷಕ್ಕೆ ಬರಡಾಗಿಯೇ ಆಗುತ್ತದೆ. ಚಾಮರಾಜನಗರ ಜಿಲ್ಲೆಯ ಬಹಳ ಕಡೆ ಕೊಳವೆ ಬಾವಿ ನೀರಾವರಿಯಲ್ಲಿ ಬಾಳೆಯ ತೋಟಗಳು ವಿಜೃಂಭಿಸುತ್ತಿವೆ. ಇಲ್ಲಿ ಬೇರೆ ರಾಜ್ಯದಿಂದ ಬಂದು ಜಮೀನು ಗುತ್ತಿಗೆ ಪಡೆದು ಬಾಳೆ ಬೆಳೆಯುತ್ತಿದ್ದಾರೆ. ಈ ವಿಜೃಂಭಣೆ ಬಹಳ ಕಾಲ ಉಳಿಯಲು ಸಾಧ್ಯವಿಲ್ಲ. ಅಲ್ಲೂ ಅಂತರ್ಜಲ ಬರಿದಾಗಲಿದೆ. ವಿಪರೀತ ರಾಸಾಯನಿಕಗಳನ್ನು ಬಳಸುವುದರಿಂದ ಭೂಮಿಯೂ ಫಲವತ್ತೆಯನ್ನು ಕಳೆದುಕೊಳ್ಳಲಿದೆ. ಕೊಳವೆ ಬಾವಿ ಬಳಸುವಲ್ಲಿ ಜಲಮರುಪೂರಣ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ. ವಾರ್ಷಿಕ 800 ಮಿಲಿ ಮೀಟರ್ ಮಳೆ ಬೀಳುವಲ್ಲಿ 1200 ಮಿ.ಮೀ ನೀರನ್ನು ಬೆಳೆಗಳಿಗೆ ಬಳಸುತ್ತಿದ್ದರೆ ಬೀಳುವ ಮಳೆಯನ್ನು ಸಂಪೂರ್ಣ ಮರು ಪೂರಣ ಮಾಡಿದರೂ ಪ್ರತಿ ವರ್ಷ ಕೊರತೆಯೇ ತಾನೆ?
ಆದುದರಿಂದ ಕೃಷಿ ಮತ್ತು ನೀರಾವರಿ ಪದ್ಧತಿ ಬದಲಾಯಿಸದ ಹೊರತು ಸಮಸ್ಯೆ ಪರಿಹಾರವಾಗಲಾರದು.
ನಾವು ಕಳೆದ ನೂರು ವರ್ಷಗಳ ಮಳೆಯ ಪ್ರಮಾಣವನ್ನು ಗಮನಿಸಿದರೆ ವರ್ಷದಿಂದ ವರ್ಷಕ್ಕೆ ಮಳೆಯಲ್ಲಿ ಏರುಪೇರು ಆದರೂ ಐದಾರು ವರ್ಷಗಳ ಸರಾಸರಿ ಮಳೆಯಲ್ಲಿ ವ್ಯತಾಸವಿಲ್ಲ. ಹಿಂದೆ ಒಂದೆರಡು ವರ್ಷ ಮಳೆ ಕಡಿಮೆಯಾದರೂ ಭೂಮಿಯಲ್ಲಿರುವ ತೇವಾಂಶ ಕೊರತೆ ಆಗುತ್ತಿರಲಿಲ್ಲ. ಅಂತರ್ಜಲ ಮೇಲಿತ್ತು. ನಾಲ್ಕೈದು ಶತಮಾನಗಳ ಹಿಂದೆ ಕಟ್ಟಿದ್ದ ಕೆರೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಒಂದು ವರ್ಷ ಮಳೆ ಬಂದಿಲ್ಲವಾದರೆ ಕಳೆದ ವರ್ಷದ ನೀರು ಕೆರೆಯಲ್ಲಿ ಇರುತ್ತಿತ್ತು. ಇನ್ನೊಂದು ವರ್ಷವೂ ಮಳೆ ಬಂದಿಲ್ಲವಾದರೆ ಕೆರೆ ಒಣಗಿದರೂ ಕೆಳಗೆ ಭೂಮಿಯೊಳಗೆ ನೀರು ಇರುತ್ತಿತ್ತು. ಮಗದೊಂದು ವರ್ಷ ಮಳೆ ಬಂದಿಲ್ಲವಾದರೆ ಊರಿನ ಯಾವುದೋ ಒಂದು ಆಳದ ಬಾವಿಯಲ್ಲಿ (ಸಾಮಾನ್ಯವಾಗಿ ಊರಿನ ಹೊರಗೆ ಕೆರೆಯ ಸಮೀಪದ) ಕುಡಿಯಲು ನೀರು ಸಿಗುತ್ತಿತ್ತು. ಕೊಳವೆ ಬಾವಿ ಬಂದ ಮೇಲೆ ಎಷ್ಟು ಮಳೆ ಬಂದರೂ ಕೆರೆಗೆ ನೀರು ಹರಿದು ಬರುತ್ತಿಲ್ಲ, ಬಂದರೆ ನಿಲ್ಲುತ್ತಿಲ್ಲ. ಅಂತರ್ಜಲ ಮಟ್ಟ ಕೆಳಗಿಳಿದಿರುವುದರಿಂದ ಒರೆತದ ನೀರು ಉಂಟಾಗುತ್ತಿಲ್ಲ. ನದಿ ತೊರೆಗಳೂ ಹರಿಯುತ್ತಿಲ್ಲ.
ದೀರ್ಘಕಾಲಿಕವಾಗಿ ನೋಡಿದರೆ ಅಣೆಕಟ್ಟುಗಳನ್ನು ಕಟ್ಟುವುದೂ ಹಿತಕಾರಿಯಲ್ಲ. ಅಮೆರಿಕದಲ್ಲಿ ಸಾವಿರಾರು ಅಣೆಕಟ್ಟುಗಳನ್ನು ಒಡೆದು ಹಾಕುತ್ತಿದ್ದಾರೆ. ಅಣೆಕಟ್ಟೆಗಳಿಂದ ದೀರ್ಘಕಾಲಿಕವಾಗಿ ಆಗುವ ಅಡ್ಡ ಪರಿಣಾಮಗಳನ್ನು ಅವರು ಈಗ ಅರಿತಿದ್ದಾರೆ. ಅಣೆಕಟ್ಟುಗಳು ಇರುವಲ್ಲಿ ಕಡಿಮೆ ನೀರು ಬೇಡುವ ಬೆಳೆಗಳನ್ನು ಬೆಳೆದರೆ ಹಾಗೂ ನೀರಾವರಿ ಪದ್ಧತಿ ಬದಲಾಯಿಸಿಕೊಂಡರೆ ಮಿಕ್ಕುವ ನೀರನ್ನು ಇನ್ನಷ್ಟು ಪ್ರದೇಶಗಳೊಂದಿಗೆ ಹಂಚಿಕೊಳ್ಳಬಹುದು. ಹಂಚಿಕೊಂಡಿಲ್ಲವಾದರೂ ಪರವಾಗಿಲ್ಲ ವರ್ಷದಿಂದ ವರ್ಷಕ್ಕೆ ಮಳೆಯು ಏರು ಪೇರು ಆಗುವುದರಿಂದ ಎರಡು ಮೂರು ವರ್ಷಗಳ ನಡುವೆ ಹಂಚಿ ಬಳಸಿಕೊಳ್ಳಬಹುದು. ನೀರಾವರಿ ಪದ್ಧತಿ ಬದಲಾವಣೆಯಿಂದ ಇಳುವರಿ ಕಡಿಮೆ ಏನೂ ಆಗುವುದಿಲ್ಲ. ಕಬ್ಬು ಆಗಲಿ ಅಥವಾ ಭತ್ತವಾಗಲಿ ತೇವವನ್ನಷ್ಟೇ ಕೊಟ್ಟರೆ ಸಾಕು ಉತ್ತಮ ಇಳುವರಿ ಬರುತ್ತದೆ ಎಂದು ಸಾಬೀತಾಗಿದೆ. ಕಡಿಮೆ ನೀರು ಬಳಸಿ ಶ್ರೀ ಪದ್ಧತಿಯಲ್ಲಿ ಭತ್ತ ಬೆಳೆದರೆ ಎರಡರಿಂದ ಮೂರು ಪಟ್ಟು ಇಳುವರಿ ಬರುತ್ತದೆ. ಹಸಿರು ಕ್ರಾಂತಿಯ ನಂತರ ಮಳೆ ಆಶ್ರಿತ ಭತ್ತದ ತಳಿಗಳು ಮತ್ತು ಬೆಳೆಯುವ ಪದ್ಧತಿ ಮಾಯವಾಗಿದೆ. ಸಜ್ಜೆ, ಸಾಮೆ, ನವಣೆ, ಆರಕ, ಊದಲು, ಕೊರ್ಲೆ ಮುಂತಾದ ಸಿರಿ ಧಾನ್ಯಗಳು ಬಹಳಷ್ಟು ಪೋಷಕಾಂಶ ಉಳ್ಳವಾಗಿದ್ದು ಅವುಗಳನ್ನು ಮಳೆ ಆಶ್ರಿತವಾಗಿ ಅಥವಾ ಕಡಿಮೆ ನೀರು ಇರುವಲ್ಲಿ ಬೆಳೆಯಹುದು. ಈ ಧಾನ್ಯಗಳಿಗೆ ತುಂಬಾ ಬೇಡಿಕೆ ಇದೆ. ರಾಸಾಯನಿಕ ಕೃಷಿಗೆ ನೀರು ಹೆಚ್ಚು ಬೇಕು. ಸಾವಯವ-ಸಹಜ ಕೃಷಿಯ ತತ್ವಗಳನ್ನು ಅಳವಡಿಸಿಕೊಂಡರೆ ಕಡಿಮೆ ನೀರಲ್ಲಿ ಉತ್ತಮ ಬೆಳೆ ಬೆಳೆಯಬಹುದು. ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚು ಇದ್ದಷ್ಟೂ ತೇವಾಂಶ ಹೆಚ್ಚು ಉಳಿಯುತ್ತದೆ. ತೋಟಗಾರಿಕೆಯಲ್ಲಿ ಸಹಜ ಕೃಷಿಯ ಮಲ್ಚಿಂಗ್ ಅಥವಾ ಹೊದಿಕೆ ತಂತ್ರ ಬಳಿದರೆ ಮಣ್ಣಿನ ತೇವಾಂಶ ಕಾಪಾಡಬಹುದು. ಇರುವ ಕಸ ಕಡ್ಡಿಗಳನ್ನೆಲ್ಲಾ ತೋಟದ ಗಿಡಗಳ ನಡುವೆ ತುಂಬುವುದು ಅಷ್ಟು ಕಷ್ಟದ ಕೆಲಸವೇನಲ್ಲ. ಬಂದ ಮಳೆ ನೀರು ನಷ್ಟವಾಗುವುದು ಆವಿಯಾಗುವುದರಿಂದ ಮತ್ತು ಬೆಳೆಗಿಡಗಳ ಮೂಲಕ ಬಾಷ್ಪೀಕರಣದಿಂದ. ನೀರು ಹರಿದು ಹೋದರೆ ನಷ್ಟವೇನಲ್ಲ. ಮುಂದಿನ ಜಲಾನಯನಕ್ಕೆ ಸೇರುತ್ತದೆ. ಅಲ್ಲಿನವರು ಅದನ್ನು ಬಳಸಿಕೊಳ್ಳುತ್ತಾರೆ. ಸ್ವಲ್ಪ ಭಾಗ ಹರಿಯಬೇಕಾಗಿರುವುದೂ ಧರ್ಮ. ಅಲ್ಲೇ ಆವಿಯಾದರೆ ನಷ್ಟವಾಗುತ್ತದೆ. ಸಮುದ್ರ ಸೇರಿದರೆ ನಷ್ಟ ನಿಜ. ಆದರೆ ಕನಿಷ್ಠ ನೀರು ಸಮುದ್ರವನ್ನೂ ಸೇರಲೇಬೇಕು. ಇಲ್ಲವಾದರೆ ಸಮುದ್ರದ ನೀರಿನ ರಾಸಾಯನಿಕ ಗುಣಗಳು ಕ್ರಮೇಣ ಬದಲಾಗುತ್ತಾ ಅಲ್ಲಿನ ಜೀವ ವೈವಿಧ್ಯ ನಾಶವಾಗಿ ಅದು ಮೀನುಗಾರಿಕೆ, ಜನರ ಆಹಾರದ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನೀರು ಸಮುದ್ರವನ್ನು ಸೇರಲೇಬಾರದು, ಎಲ್ಲವನ್ನು ನಾವು ಬಳಸಿಕೊಳ್ಳಬೇಕು ಎನ್ನುವುದು ಅತಿರೇಕದ ಮನೋಭಾವ ಮತ್ತು ಅವೈಜ್ಞಾನಿಕ.
ಅತೀ ಹೆಚ್ಚು ಮಳೆ ಬೀಳುವ ಪಶ್ಚಿಮ ಘಟ್ಟದಿಂದ ಕರಾವಳಿಗೆ ಹೋಗುವ ನೀರನ್ನು ಬಯಲು ಸೀಮೆಗೆ ತರುವುದು, ಕರಾವಳಿಗೆ ದುಬಾರಿ ವೆಚ್ಚದಲ್ಲಿ ಸಮುದ್ರದ ಉಪ್ಪುನೀರನ್ನು ಸಿಹಿ ಮಾಡಿಕೊಡುವುದು-ಇದು ಜಾಣತನದ ಕೆಲಸವಲ್ಲ. ನಿಸರ್ಗದಲ್ಲಿ ಮನುಷ್ಯರು ದೊಡ್ಡಮಟ್ಟದ ಹಸ್ತಕ್ಷೇಪ ಮಾಡಿದಷ್ಟೂ ಅಡ್ಡಪರಿಣಾಮಗಳೂ ಹೆಚ್ಚು. ನಮ್ಮ ಗ್ರಹಿಕೆ ಮತ್ತು ಅಭ್ಯಾಸಗಳಲ್ಲಿ ದೊಡ್ಡ ಬದಲಾವಣೆ ಯಾಗಬೇಕು. ಬಳಕೆಯ ಕ್ರಮದಲ್ಲಿ ವ್ಯತ್ಯಾಸ ಮಾಡಿಕೊಳ್ಳಬೇಕು. ಇಂತಹ ಬದಲಾವಣೆಗಳು ಸಾಧ್ಯವಾಗುವಂತೆ ಸರಕಾರಗಳು ಅರಿವು, ಮಾಹಿತಿ, ತರಬೇತಿ ನೀಡಿ ಆ ನಂತರದಕ್ಕೆ ಪೂರಕವಾದ ಆರ್ಥಿಕ ನೆರವಿನ ಕೆಲಸ ಮಾಡಬೇಕು. ಆದರೆ ಸರಕಾರಗಳು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸುತ್ತವೆ. ಜನರಲ್ಲಿ ಬದಲಾವಣೆ ತರುವ ಅರಿವು ಮೂಡಿಸುವ ಕೆಲಸಕ್ಕೆ ಸರಕಾರಗಳು ಮುಂದಾಗುವುದಿಲ್ಲ. ಹೆಚ್ಚಿನ ಸರಕಾರಿ ಕಾರ್ಯ ಯೋಜನೆಗಳು ಕಟ್ಟಡ ನಿರ್ಮಾಣ ಆಧಾರಿತ ಕೆಲಸಗಳನ್ನಷ್�