ವಿವೇಕವನ್ನು ಎಚ್ಚರಿಸುವ ‘ವಿವೇಕದ ನುಡಿ-ಸಮತೆಯ ಮುಡಿ’

Update: 2017-03-23 18:16 GMT


ಈ ನೆಲದ ಸಾಂಸ್ಕೃತಿಕ ರಾಜಕಾರಣವನ್ನು ರವಿ. ರಾ. ಅಂಚನ್ ಸದಾ ಎಚ್ಚರದ ಕಣ್ಣುಗಳಿಂದ ನೋಡುತ್ತಾ ಬಂದವರು ಮತ್ತು ಅದನ್ನು ಬಯಲಿಗೆಳೆಯುತ್ತಾ ಬಂದವರು. ಅವರು ಬರೆದಿರುವ ಬಹುತೇಕ ಕೃತಿಗಳಲ್ಲೂ ನಾವಿದನ್ನು ಕಾಣಬಹುದಾಗಿದೆ. ಬುದ್ಧ, ಅಂಬೇಡ್ಕರ್, ಫುಲೆ ಚಿಂತನೆಗಳ ಪ್ರಭಾವದಿಂದ ಬರಹಗಳು ಚಿಮ್ಮಿ ಬಂದಿವೆ. ‘ವಿವೇಕದ ನುಡಿ-ಸಮತೆಯ ಮುಡಿ’ ಕೃತಿಯೂ ಇದರ ಮುಂದುವರಿದ ಭಾಗವೇ ಆಗಿದೆ. ಸುಮಾರು 28 ಲೇಖನಗಳುಳ್ಳ ಈ ಕೃತಿ, ವಿವಿಧ ವ್ಯಕ್ತಿಗಳು, ಪುಸ್ತಕಗಳು ಮತ್ತು ಕೆಲವು ಘಟನೆಗಳನ್ನು ಮುಂದಿಟ್ಟುಕೊಂಡು ವರ್ತಮಾನವನ್ನು ಅವರು ಚರ್ಚಿಸುತ್ತಾರೆ. ‘ನಾವೇ ನಮಗೆ ಯಜಮಾನರು’ ಲೇಖನದಲ್ಲಿ ಶುದ್ಧೋಧನನ ಪರಿವಾರವನ್ನು ಉಲ್ಲೇಖಿಸಿ ಅವರು ವಂಶವಾದ ಪ್ರಭುತ್ವವನ್ನು ಚರ್ಚಿಸುತ್ತಾರೆ. ನಾರಾಯಣಗುರುಗಳು ಮತ್ತು ಅಂಬೇಡ್ಕರ್ ಅವರ ಚಳವಳಿಯನ್ನು ಅದರ ಏಳು ಬೀಳುಗಳನ್ನು ಚರ್ಚಿಸುತ್ತಾ ಮಾನವೀಯತೆಯನ್ನು ಬಿತ್ತುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳ ಕಡೆಗೆ ಬೆಳಕು ಚೆಲ್ಲುತ್ತಾರೆ. ಹಾಗೆಯೇ ಮಾನವೀಯತೆಗೆ ಸ್ಪಂದಿಸುವ ವಿವಿಧ ಪುಸ್ತಕಗಳನ್ನು ಪರಿಚಯಿಸುವ ಕೆಲಸವೂ ಇಲ್ಲಿ ನಡೆಯುತ್ತದೆ. ದೇವನೂರ ಮಹಾದೇವ, ಡಾ. ಆಶಾಬೆನಕಪ್ಪ, ಡಾ. ನರೇಂದ್ರ ಕುಮಾರ್, ಬಿ. ಎಂ. ಬಶೀರ್ ಸೇರಿದಂತೆ ವಿವಿಧ ಲೇಖಕರ ಪುಸ್ತಕಗಳನ್ನು ವಿಶ್ಲೇಷಿಸುವ ಕೆಲಸಗಳನ್ನು ಮಾಡಿದ್ದಾರೆ. ಜೊತೆಗೆ ಯಾಕೆ ಇವರ ಕೃತಿಗಳು ಮುಖ್ಯವಾಗುತ್ತದೆ ಎಂದೂ ತಿಳಿಸುತ್ತಾರೆ. ಯಕ್ಷಗಾನ ಕಲೆಯನ್ನು ವಿಶ್ಲೇಷಿಸುವ ಅವರು, ಯಕ್ಷಗಾನ ಗದ್ದುಗೆಯ ಧ್ವನಿಯಿಂದ ಗದ್ದೆಯ ಧ್ವನಿಗೆ ಬದಲಾಗಬೇಕು ಎನ್ನುವ ಅಭಿಪ್ರಾಯವನ್ನು ತಾಳುತ್ತಾರೆ. ಬಸವಣ್ಣನನ್ನು ಹೇಗೆ ಮಠಗಳಲ್ಲಿ ಬಂಧಿಸಿಟ್ಟಿದ್ದಾರೆ ಎನ್ನುವುದನ್ನು ವಿಷಾದದಿಂದ ನೆನೆದು, ಆತ ಶ್ರಮಜೀವಿಗಳ ಬೆವರಿನಲ್ಲಿದ್ದಾನೆಯೇ ಹೊರತು, ಮಠಗಳಲ್ಲಿ ಇಲ್ಲ ಎಂದು ನಿರ್ಭಯದಿಂದ ಹೇಳುತ್ತಾರೆ. ನಮಗೆ ಬೇಕಾಗಿರುವುದು ಪೇಜಾವರರನ್ನು ಕನಕನಿಗೆ ಮುಖಾಮುಖಿ ಯಾಗಿಸಿ, ನಮಗೆ ಬೇಕಾಗಿರುವುದು ಯಾರ ಮಾನವೀಯತೆ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ.

ಸ್ವರ ಪ್ರಿಂಟ್ ಆ್ಯಂಡ್ ಪಬ್ಲಿಕೇಶನ್ ಬೆಂಗಳೂರು ಹೊರ ತಂದಿರುವ ಈ ಕೃತಿಯ ಒಟ್ಟು ಪುಟಗಳು 192. ಮುಖಬೆಲೆ 155 ರೂಪಾಯಿ. ಆಸಕ್ತರು 09323290500 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News